ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿಗೆ ಸಡ್ಡು ಹೊಡೆಯಲು ಒಬ್ಬ ಸಿದ್ದು ಬೇಕಿತ್ತು!

By Staff
|
Google Oneindia Kannada News

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಸರಣಿ ಮುಂದುವರೆದಿದೆ. ಮತಗಟ್ಟೆಯಲ್ಲಿ ಹಿಮ್ಮೆಟ್ಟಿದ ಪಕ್ಷ ವಿಧಾನಸಭೆಯಲ್ಲಾದರೂ ಮಿಂಚಬಹುದು ಎಂಬ ನಿರೀಕ್ಷೆ ಹುಸಿಯಾಗುತ್ತಿದೆ. ಯಾಕೆಂದರೆ, ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ವಿರೋಧಪಕ್ಷ ನಾಯಕರ ಆಸೀನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅವರೇ ಯಾಕೆ ಬೇಕಿತ್ತು? ಯಾಕೆ ಸಿದ್ದು ಇರಲಿಲ್ಲವಾ?

ಅಂಕಣಕಾರ : ಪ್ರತಾಪ್ ಸಿಂಹ

Siddaramaiah, caricature by B.G. Gujjarappaದೊಡ್ಡ ಪರೀಕ್ಷೆ ಬಂದಿತ್ತು.ಮೊದಲೇ ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ತಿಂಮ ಸರ್ವಸಿದ್ಧತೆ ಮಾಡಿ ಕೊಂಡಿದ್ದ. ಪರೀಕ್ಷೆಯ ದಿನ ಬೆಳಗ್ಗೆ ಎಂಟು ಗಂಟೆಗೆ ಸ್ನಾನ ಮುಗಿಸಿ, ತಿಂಡಿ ತಿಂದು ಶಾಲೆಗೆ ಅಣಿಯಾದ. ಆದರೆ ಆತನ ಕೋಟೇ ಕಾಣುತ್ತಿಲ್ಲ!

“ಅಮ್ಮಾ"
“ಏನೋ ತಿಂಮಾ?"
“ನನ್ನ ಕೋಟು ಎಲ್ಲಿ?"

“ಅದು ತುಂಬಾ ಹೊಲಸಾಗಿತ್ತು. ತೊಳೆಯಲು ಆಗಸ ನಿಗೆ ಕೊಟ್ಟಿದ್ದೇನೆ" ಎಂದಳು ಅಮ್ಮ. ಆದರೆ ಅದನ್ನ್ನು ಕೇಳಿದ್ದೇ ತಡ ತಿಂಮ ಗಳಗಳನೆ ಅಳುತ್ತಾ ಕುಸಿದು ಕುಳಿತು ಬಿಟ್ಟ. “ಬೇರೆ ಇನ್ನೊಂದಿದೆಯಲ್ಲವೋ? ಆ ಕೋಟು ಹಾಕಿಕೊಂಡು ಹೋಗು. ಅದಕ್ಕೇಕೆ ಅಳುತ್ತಿದ್ದೀಯಾ? ಆ ಹೊಲಸು ಕೋಟೇ ಆಗಬೇಕೇನೂ ನಿನಗೆ?" ಎಂದು ಅಮ್ಮ ಅಬ್ಬರಿಸಿದಳು. ಆದರೆ ತಿಂಮನ ಸಂಕಟ ಅಮ್ಮನಿಗೆ ಅರ್ಥವಾಗಲಿಲ್ಲ. ಅಷ್ಟಕ್ಕೂ ಹೊಲಸು ಕೋಟೊಳಗೆ ತಿಂಮ ಕಾಪಿ ಚೀಟಿ ಬರೆದಿಟ್ಟುಕೊಂಡಿದ್ದ!

ಕಳೆದ ಬುಧವಾರ ನಡೆದ ಬೆಳವಣಿಗೆಗಳನ್ನು ಕಂಡಾಗ ಬೀಅhiಯವರು ನಮ್ಮ ರಾಜ್ಯ ಕಾಂಗ್ರೆಸ್ ನೋಡಿಯೇ ಈ ಕಥೆಯನ್ನು ಬರೆದಿದ್ದರೇನೋ ಎಂದನಿಸಿ ಬಿಡುತ್ತದೆ. ಅಷ್ಟಕ್ಕೂ ಚುನಾವಣೆಯಲ್ಲಿ ನಿರಾಸೆ ಅನುಭವಿಸಿದ ನಂತರ ವಾದರೂ ಕಾಂಗ್ರೆಸ್ ಒಂದಿಷ್ಟು ಪಾಠ ಕಲಿಯುತ್ತದೆ, ಎಚ್ಚೆತ್ತುಕೊಳ್ಳುತ್ತದೆ ಎಂದು ಭಾವಿಸಿದ್ದರೆ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಣೆ ಹಾಕುವ ಮೂಲಕ ಅದೇ ಹಳೆ ಕೋಟು, ಅದೇ ಸಿದ್ಧಸೂತ್ರಕ್ಕೆ ಜೋತುಬಿದ್ದಿದೆ! ಒಂದು ವೇಳೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಯಾರು ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುತ್ತಾರೋ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದು ಹಾಗೂ ಸೋತರೆ ಶಾಸಕಾಂಗ ಪಕ್ಷದ ನಾಯಕನನ್ನಾಗಿ ನೇಮಿಸುವುದು ಕಾಂಗ್ರೆಸ್‌ನಲ್ಲಿ ಇದುವರೆಗೂ ಮುಂದುವರಿದುಕೊಂಡು ಬಂದಿರುವ ಸಂಪ್ರದಾಯ. ಆದರೆ ಕೇಂದ್ರದಲ್ಲಿ ರಾಹುಲ್‌ಗಾಂಧಿಯವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಪ್ರಯತ್ನಿಸುತ್ತಿರುವುದರಿಂದ ಹಾಗೂ ರಾಜ್ಯ ಕಾಂಗ್ರೆಸ್ ಯುವಮೋರ್ಚಾದ ಅಧ್ಯಕ್ಷ ಸ್ಥಾನವನ್ನು ಯುವ ನಾಯಕ ಕೃಷ್ಣಭೈರೇಗೌಡ ಅವರಿಗೆ ನೀಡಿರುವುದರಿಂದ ಈ ಬಾರಿ ಕಾಂಗ್ರೆಸ್‌ನ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ.

ಅಷ್ಟಕ್ಕೂ ಗುರುಮಠಕಲ್‌ನಿಂದ ಪರಾರಿಯಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿದ್ದಾದರೂ ಏಕೆ? ಒಂದು ಆಡಳಿತ ಪಕ್ಷ ಸಮರ್ಥವಾಗಿ ಕಾರ್ಯನಿರ್ವಹಿಸ ಬೇಕಾದರೆ, ಸದಾ ಎಚ್ಚರಿಕೆಯಿಂದಿರಬೇಕಾದರೆ ಪ್ರತಿಪಕ್ಷ ಯಾವತ್ತೂ ಬಲಿಷ್ಠವಾಗಿರಬೇಕು. ಪ್ರತಿಪಕ್ಷ ಬಲಿಷ್ಠವಾಗಬೇಕಾ ದರೆ ಅದಕ್ಕೊಬ್ಬ ಸಮರ್ಥ ನಾಯಕ ಬೇಕು. ಆ ನಾಯಕನಿಗೆ 'ಕನ್ವಿಕ್ಷನ್" ಇರಬೇಕು. ಆಗುಹೋಗುಗಳ ಬಗ್ಗೆ ಮುಂದಾಗಿ ಅರಿತುಕೊಳ್ಳುವ, ವಿಶ್ಲೇಷಣೆ ಮಾಡುವ, ಆಡಳಿತ ಪಕ್ಷವನ್ನು ಹಣಿಯುವ, ಆಕರ್ಷಕವಾಗಿ ಮಾತನಾಡುವ ತಾಕತ್ತು ಇರಬೇಕು. ಆಗ ಪ್ರತಿಪಕ್ಷದ ಉಳಿದ ಸದಸ್ಯರು ಬೆಂಚುತಟ್ಟಿ,ಟೊಂಕಕಟ್ಟಿ ತಮ್ಮ ನಾಯಕನ ಬೆಂಬಲಕ್ಕೆ ನಿಲ್ಲಲು ಸಾಧ್ಯ. ಅಂದರೆ ಪ್ರತಿಪಕ್ಷದ ನಾಯಕನ ಧ್ವನಿ, ಆಡಳಿತ ಪಕ್ಷದ ಸೊಲ್ಲಡಗಿಸುವಂತಿರಬೇಕು. ಆದರೆ ಮಲ್ಲಿಕಾರ್ಜುನ ಖರ್ಗೆಯವರ ಕರ್ಕಶ ಧ್ವನಿಯಲ್ಲಿ ಪದಗಳೇ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಹಾಗಿರುವಾಗ ಪ್ರತಿಪಕ್ಷದ ನಾಯಕನಾಗಿ ಏನುತಾನೇ ಮಾಡಿಯಾರು?

ಇಂತಹ ಕನಿಷ್ಠ ಜ್ಞಾನವೂ ಕಾಂಗ್ರೆಸ್‌ಗಿರಲಿಲ್ಲವೆ? ಕಳೆದ ವಿಧಾನಸಭೆಯಲ್ಲಿ ಕದಲದೇ ಅಚಲರಾಗಿ ಕುಳಿತಿದ್ದ ಧರ್ಮಸಿಂಗ್‌ಗೆ ಪ್ರತಿಪಕ್ಷದ ನಾಯಕನ ಸ್ಥಾನಕೊಟ್ಟು ನೋಡಿದ್ದಾಗಿದೆ. ಹಳೇ ರೇಡಿಯೋ ಪೆಟ್ಟಿಗೆಯಂತಿದ್ದ ಅವರ ಗಂಟಲಿನಿಂದ ಮಾತೇ ಹೊರಡುತ್ತಿರಲಿಲ್ಲ. ಗಣಿ ಹಗರಣ, ಲಾಟರಿಯಿಂದ ಬೀದಿಗೆ ಬಂದವರ ಪುನರ್ವಸತಿ, ಶ್ರೀಮಂತ ಮಠಗಳಿಗೆ ಅನವಶ್ಯಕ ದೇಣಿಗೆ ನೀಡಿದ್ದು ಮುಂತಾದ ವಿಷಯಗಳನ್ನೆತ್ತಿ ಜೆಡಿಎಸ್-ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು, ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು. ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತಿದ್ದ ಜೆಡಿಎಸ್-ಬಿಜೆಪಿ ಸರಕಾರದ ನೀತಿಗಳ ದೂರಗಾಮಿ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬಹುದಿತ್ತು. ಅಷ್ಟಕ್ಕೂ ಹಿಂದಿನ ಸರಕಾರದ ಹಲವಾರು ಯೋಜನೆ, ನೀತಿಗಳು ಜನರ ಕಣ್ಣಿಗೆ ಚೆನ್ನಾಗಿ ಕಾಣುತ್ತಿದ್ದರೂ ರಾಜ್ಯದ ಅರ್ಥವ್ಯವಸ್ಥೆಯ ದೃಷ್ಟಿಯಿಂದ ಯೋಗ್ಯ ಕ್ರಮಗಳಾಗಿರಲಿಲ್ಲ.

ಸಾರಾಯಿ ನಿಷೇಧವನ್ನು ಎಲ್ಲರೂ ಹೊಗಳಿದರು, ಸರಕಾರವೂ ತಾನು ಜನಾನುರಾಗಿ ಎಂದು ಪೋಸು ಕೊಟ್ಟಿತು. ಅಂದಮಾತ್ರಕ್ಕೆ ಕುಡಿಯುವವರ ಪ್ರಮಾಣ ಕಡಿಮೆಯಾಯಿತೆ? ಇಪ್ಪತ್ತು ರೂಪಾಯಿ ಕೊಟ್ಟು ಪ್ಯಾಕೆಟ್ ಕುಡಿಯುತ್ತಿದ್ದವನು, ಎಪ್ಪತ್ತು ರೂಪಾಯಿ ಕೊಟ್ಟು ಕ್ವಾರ್ಟರ್ ಕುಡಿಯಬೇಕಾಗಿ ಬಂತು. ಕ್ವಾರ್ಟರ್ ಕುಡಿಯಲು ತಾಕತ್ತಿಲ್ಲದವರು ಕಳ್ಳಬಟ್ಟಿಗೆ ಶರಣಾದರು. ಇದರಿಂದ ಲಾಭವಾಗಿದ್ದು ಯಾರಿಗೆ? ಸರಕಾರದ ಬೊಕ್ಕಸ ಸೇರಬೇಕಾಗಿದ್ದ 2 ಸಾವಿರ ಕೋಟಿ ರೂ. ಹಣ ಕಳ್ಳಬಟ್ಟಿ ತಯಾರಕರು ಹಾಗೂ ಮದ್ಯ ದೊರೆಗಳ ಪಾಲಾಯಿತು. ಒಂದು ವೇಳೆ, ಸಾರಾಯಿ ನಿಷೇಧ ಮಾಡದೆ ೨ ಸಾವಿರ ಕೋಟಿ ರೂ. ಹಣವನ್ನು ೨ ಸಾವಿರ ಹಳ್ಳಿಗಳಿಗೆ ತಲಾ ಒಂದು ಕೋಟಿಯಂತೆ ನೀಡಿ ಅಭಿವೃದ್ಧಿ ಕಾರ್ಯಕೈಗೊಂಡಿದ್ದರೆ ಕರ್ನಾಟಕದ ಒಟ್ಟು 36 ಸಾವಿರ ಹಳ್ಳಿಗಳಲ್ಲಿ 2 ಸಾವಿರ ಹಳ್ಳಿಗಳು ವರ್ಷಂಪ್ರತಿ ಉದ್ಧಾರವಾಗುತ್ತಿದ್ದವು. ಸರಕಾರಕ್ಕೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಮದ್ಯ ಸೇವನೆ ಹಾಗೂ ವ್ಯಸನದ ಬಗ್ಗೆ ಅರಿವು ಮೂಡಿಸಲು, ಮನಃಪರಿವರ್ತನೆ ಮಾಡಲು ಪ್ರಯತ್ನಿಸಬಹುದಿತ್ತು. ಇಲ್ಲವೆ ಗುಜರಾತ್‌ನಂತೆ ಸಾರಾಯಿ ಜತೆಗೆ ಮದ್ಯವನ್ನೂ ಸಂಪೂರ್ಣವಾಗಿ ನಿಷೇಧ ಮಾಡಿ, ಕಳ್ಳಬಟ್ಟಿ ತಯಾರಿಸಿ ಸಿಕ್ಕಿಬಿದ್ದವರನ್ನು ಜೈಲಿಗೆ ತಳ್ಳಬಹುದಿತ್ತು.

ಇನ್ನು ಸರಕಾರಕ್ಕೆ 250 ಕೋಟಿ ನಷ್ಟವಾದರೂ ಲಾಟರಿ ನಿಷೇಧ ಒಳ್ಳೆಯ ಕ್ರಮವೇ. ಒಂದಂಕಿ, ಆನ್‌ಲೈನ್ ಲಾಟರಿ ಎಷ್ಟೋ ಸಂಸಾರಗಳನ್ನು ನಾಶಮಾಡುತ್ತಿದ್ದವು. ಆದರೆ ಏಕಾಏಕಿ ಲಾಟರಿ ನಿಷೇಧ ಮಾಡಿದ ನಂತರ ಅದನ್ನೇ ನಂಬಿ ಕುಳಿತಿದ್ದವರಿಗೆ ಬದಲಿ ಜೀವನಮಾರ್ಗವನ್ನು ತೋರಿಸದೇ ಇದ್ದಿದ್ದು ತಪ್ಪಲ್ಲವೆ? ಹೆಣ್ಣುಮಕ್ಕಳಿಗೆ ಸೈಕಲ್ ಕೊಟ್ಟಿದ್ದು ಮೆಚ್ಚುವಂಥ ಯೋಜನೆಯೇ ಆಗಿದ್ದರೂ ಮೊದಲೇ ಶ್ರೀಮಂತವಾಗಿರುವ ಮಠಮಾನ್ಯಗಳಿಗೆ ಸಾಮಾನ್ಯ ಜನರ ತೆರಿಗೆ ಹಣವನ್ನು ದೇಣಿಗೆಯಾಗಿ ನೀಡಿದ್ದನ್ನು ಒಪ್ಪಲಾದೀತೆ? ಸಾರಾಯಿ ನಿಷೇಧ, ಮಠಗಳಿಗೆ ದೇಣಿಗೆ ರೂಪದಲ್ಲಿ ಪೋಲಾದ ಹಣವನ್ನು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ವಿನಿಯೋಗಿಸಬಹುದಿತ್ತಲ್ಲವೆ?

ಇಂತಹ ಅತಿರೇಕಗಳು ಮುಂದೆಯೂ ನಡೆಯಬಹುದು. ಹಾಗೆ ನಡೆದಾಗ ಆಡಳಿತ ಪಕ್ಷವನ್ನು ಪ್ರಶ್ನಿಸುವ, ಕಟಕಟೆಗೆ ತಂದು ನಿಲ್ಲಿಸುವ ತಾಕತ್ತಿರುವುದು ಸಿದ್ದರಾಮಯ್ಯನವರಿಗೇ ಹೊರತು ಗೆಸ್ಟ್‌ಹೌಸ್‌ಗಳಲ್ಲೇ ಕಾಲಕಳೆಯುವ ಹುಟ್ಟು ಸೋಮಾರಿಗಳಾದ ಖರ್ಗೆ, ಧರ್ಮಸಿಂಗ್‌ಗಳಿಗಲ್ಲ. ಧೃತರಾಷ್ಟ್ರನಂತೆ ಕ್ಷೇತ್ರದ ಅಭಿವೃದ್ಧಿಯನ್ನೇ ಕಡೆಗಣಿಸಿದ್ದ ಧರ್ಮಸಿಂಗ್‌ಗೆ ಜನರೇ ಬುದ್ಧಿ ಕಲಿಸಿದ್ದರೆ, ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರೂ ಖರ್ಗೆಯವರೆಂದೂ ಮೀಸಲು ಕ್ಷೇತ್ರವನ್ನು ಮೀರಿ ಬೆಳೆದವರಲ್ಲ! ಗುರುಮಠಕಲ್ಲನ್ನೇ ಮಠ ಮಾಡಿಕೊಂಡು ಕುಳಿತಿದ್ದ ಅವರು ಮೀಸಲು ತೆಗೆದ ಕೂಡಲೇ ಬೇರೊಂದು ಕ್ಷೇತ್ರಕ್ಕೆ ಪರಾರಿಯಾದರು. ಸಾಮಾನ್ಯ ಅಭ್ಯರ್ಥಿಗೆ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕಾಗಿ ಕ್ಷೇತ್ರ ಬದಲಾಯಿಸಿದೆ ಎಂದು ಸಬೂಬು ಕೊಟ್ಟರು. ಆದರೆ ವಾಸ್ತವದಲ್ಲಿ ಸಾಮಾನ್ಯ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ಖರ್ಗೆಯವರಿಗೇ ಇರಲಿಲ್ಲ. ಒಂದು ಕ್ಷೇತ್ರದ ಜನರ ವಿಶ್ವಾಸವನ್ನೇ ಗಳಿಸಲಾರದ ಇಂತಹ ವ್ಯಕ್ತಿ ಒಂದು ರಾಜ್ಯದಾದ್ಯಂತ ಪಕ್ಷವನ್ನು ಕಟ್ಟಿ ಬೆಳೆಸಬಲ್ಲನೆ?

ಅದು ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ. ಅಧಿಕಾರಕ್ಕೇರಿದ ಕೂಡಲೇ ಆಡಳಿತ ಪಕ್ಷ ಸಹಜವಾಗಿಯೇ ದುರ್ಬಲವಾಗುತ್ತದೆ, ಪ್ರತಿಪಕ್ಷ ಬಲಿಷ್ಠವಾಗುತ್ತದೆ. ಆದರೆ ಕಾಂಗ್ರೆಸ್‌ಗೆ ಆಡಳಿತ ನಡೆಸಿ, ಅಧಿಕಾರ ಚಲಾಯಿಸಿ ಗೊತ್ತೇ ಹೊರತು, ಪ್ರತಿಪಕ್ಷವಾಗಿ ತಾಳ್ಮೆಯಿಂದ ಕುಳಿತು, ಜವಾಬ್ದಾರಿಯುತವಾಗಿ ವರ್ತಿಸಿ ಗೊತ್ತಿಲ್ಲ. ಇತ್ತ ಈಗ ಕಾಂಗ್ರೆಸ್ ಸೇರಿರುವ ಸಿದ್ದುಗೆ ಆಡಳಿತ ನಡೆಸಿಯೂ ಗೊತ್ತು, ಪ್ರತಿಪಕ್ಷದಲ್ಲಿ ಕುಳಿತ ಅನುಭವ ಇನ್ನೂ ಶ್ರೀಮಂತವಾಗಿದೆ. ಅವರಿಗೆ ಜೆಡಿಎಸ್‌ನ ಕುತಂತ್ರವೂ ಗೊತ್ತು, ಕಳೆದ ಇಪ್ಪತ್ತು ವರ್ಷಗಳಿಂದ ಅಧಿಕಾರ ಹಿಡಿಯಲು ಕಾದು ಕುಳಿತಿದ್ದ ಬಿಜೆಪಿಯ 'ಹಸಿವಿ"ನ ಅರಿವೂ ಇದೆ! ಯಾವ ಖಾತೆಯಲ್ಲಿ ಎಷ್ಟು ದುಡ್ಡು ಇರುತ್ತದೆ, ಯಾವ ಯೋಜನೆಯಿಂದ ಯಾರ್‍ಯಾರಿಗೆ, ಯಾವ ಅಧಿಕಾರಿಗೆ ಎಷ್ಟೆಷ್ಟು ಕಪ್ಪಕಾಣಿಕೆ ದೊರೆಯುತ್ತದೆ ಎಂಬುದೂ ಸ್ವಂತ 'ಅನುಭವ"ದಿಂದ ತಿಳಿದಿದೆ. ಅವರು ಶಾಸಕಾಂಗ ಪಕ್ಷದ ನಾಯಕನಾಗಬೇಕಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯುಂಟಾಗಿರಬಹುದು. ಆದರೆ ಆ ಸೋಲಿನಲ್ಲೂ ಆಶಾಕಿರಣವೊಂದು ಕಾಣಿಸಿತ್ತು. ಹಳೇ ಗಡ್ಡೆಗಳಾದ ದೇಶಪಾಂಡೆ, ಧರ್ಮಸಿಂಗ್, ಎಚ್ಕೆ ಪಾಟೀಲ್ ಮುಂತಾದವರನ್ನು ಜನರೇ ಸೋಲಿಸಿದ್ದಾರೆ. ಹೊಸ ಹಾಗೂ ಎರಡನೇ ಹಂತದ ಯುವ ನಾಯಕತ್ವ ಬರಲು ಇದೇ ಸಕಾಲವಾಗಿತ್ತು.

ಎಸ್.ಎಂ. ಕೃಷ್ಣ ಅವರು ರಾಜಕೀಯವಾಗಿಯೂ ಸಂಧ್ಯಾಕಾಲದಲ್ಲಿದ್ದಾರೆ. ಹಾಗಾಗಿ ಇರುವ ಏಕೈಕ ಹಾಗೂ ಭರವಸೆಯ ಆಶಾಕಿರಣವೆಂದರೆ ಸಿದ್ದರಾಮಯ್ಯ. ಕೆಲವರು ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದರೂ ಕುರುಬರು ಕಾಂಗ್ರೆಸ್‌ಗೆ ಸಾರಾಸಗಟಾಗಿ ವೋಟು ನೀಡಲಿಲ್ಲ ಎಂದು ಕಾರಣ ಹೇಳಬಹುದು. ಆದರೆ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ಮೈಸೂರಿನ ೧೧ ಸ್ಥಾನಗಳಲ್ಲಿ ೮ ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದರು. ಈ ಬಾರಿ ಕಾಂಗ್ರೆಸ್‌ಗೆ ೮ ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಚಾಮರಾಜನಗರದಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲು ಸಿದ್ದು ಕಾರಣ. ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಊರು ಸುತ್ತುತ್ತಿದ್ದರೂ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಖರ್ಗೆಯವರು ತಮ್ಮ ಗುಲ್ಬರ್ಗ ಜಿಲ್ಲೆಯಲ್ಲಿ ಗೆಲ್ಲಿಸಿಕೊಟ್ಟಿರುವ ಸ್ಥಾನಗಳೆಷ್ಟು?

ಇವತ್ತು ಸಿದ್ದರಾಮಯ್ಯನವರಾಗಲಿ, ಎಸ್.ಎಂ. ಕೃಷ್ಣ ಅವರಾಗಲಿ ಒಂದು ಜಾತಿಯ ನೇತಾರರಾಗಿ ಕಂಡು ಬಂದರೂ ಅವರು ಅಧಿಕಾರದಲ್ಲಿದ್ದಾಗ ಕೈಗೊಂಡ ಕ್ರಮಗಳು ಕರ್ನಾಟಕವನ್ನು ಹೆಚ್ಚೂಕಡಿಮೆ ಸಾಲಮುಕ್ತ ರಾಜ್ಯವನ್ನಾಗಿಸಿದೆ. ಹಣಕಾಸು ಖಾತೆಯನ್ನೂ ತಮ್ಮ ಬಳಿ ಇಟ್ಟುಕೊಂಡಿದ್ದ ಎಸ್.ಎಂ. ಕೃಷ್ಣ ಅವರು ಜಾರಿಗೆ ತಂದ 'ವಿತ್ತೀಯ ಜವಾಬ್ದಾರಿ ಕಾಯಿದೆ" ಶಕ್ತಿಮೀರಿ ಸಾಲ ಮಾಡುವುದಕ್ಕೆ ಕಡಿವಾಣ ಹಾಕಿತು, ಹಣ ವಿನಿಯೋಗಕ್ಕೆ ಹೊಣೆಗಾರಿಕೆಯ ಬೇಲಿಯನ್ನೂ ಹಾಕಿತು. ಅಲ್ಲದೆ ಐಟಿ, ಬಿಟಿಗೆ ಅವರು ನೀಡಿದ ಪ್ರೋತ್ಸಾಹ ಹಾಗೂ ಭೂಮಿ, ನಿವೇಶನ ನೋಂದಣಿಗೆ ವಿಧಿಸಿದ ತೆರಿಗೆ, ಸ್ಟಾಂಪ್ ಪೇಪರ್‌ನಿಂದಾಗಿ ಇಂದು ರಾಜ್ಯದ ಒಟ್ಟಾರೆ ಆದಾಯದಲ್ಲಿ ಶೇ. 70ರಷ್ಟು ಬೆಂಗಳೂರಿನಿಂದಲೇ ಬರುತ್ತಿದೆ! ಅವರ ಮೊದಲು ಹಾಗೂ ನಂತರ ಹಣಕಾಸು ಸಚಿವರಾಗಿದ್ದ ಸಿದ್ದು, ಜಾತಿಯಿಂದ ಕುರುಬರಾದರೂ ದಿನಸಿ ಅಂಗಡಿಯ ಶೆಟ್ಟಿಯಂತೆ ಪೈಸೆ ಪೈಸೆ ಲೆಕ್ಕಹಾಕಿ ಹಣ ಕೂಡಿಟ್ಟರು. ಅವರು ಧೈರ್ಯದಿಂದ ವ್ಯಾಟ್ ಜಾರಿ ಮಾಡಿದ್ದರಿಂದ ರಶೀದಿ ರಹಿತ ವ್ಯವಹಾರಕ್ಕೆ ಕಡಿವಾಣ ಬಿದ್ದು ಸರಕಾರಕ್ಕೆ ಬರುವ ಆದಾಯ ಹೆಚ್ಚಾಯಿತು.

ವ್ಯಾಟನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದಕ್ಕಾಗಿ ಕೇಂದ್ರ ಸರಕಾರದಿಂದ ಶಹಬ್ಬಾಸ್ ಎನಿಸಿಕೊಂಡಿದ್ದಲ್ಲದೆ ಉಡುಗೊರೆಯ ರೂಪದಲ್ಲಿ ಬಂದ 250 ಕೋಟಿ ರೂ.ಗಳನ್ನೂ ಬೊಕ್ಕಸದಲ್ಲಿ ಭದ್ರವಾಗಿಟ್ಟರು. ಅಲ್ಲದೆ ಬಜೆಟ್‌ನಲ್ಲಿ ತೆಗೆದಿಟ್ಟಿರುವುದಕ್ಕಿಂತ ಹೆಚ್ಚಾಗಿ ಒಂದು ರೂಪಾಯಿಯನ್ನೂ ಕೊಡುತ್ತಿರಲಿಲ್ಲ. ನಮ್ಮ ರಾಜ್ಯ ಇವತ್ತು ಮಿಗತೆ(ಸರ್‌ಪ್ಲಸ್) ಬಜೆಟ್ ಮಂಡಿಸುತ್ತಿದ್ದರೆ, ಬೆಂಗಳೂರು ಕರ್ನಾಟಕದ 'ಕಾಮಧೇನು" ಆಗಿದ್ದರೆ ಅದಕ್ಕೆ ಎಸ್.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯನವರು ಕಾರಣ. ಹಾಗೆ ಕೃಷ್ಣ ಸರಿಪಡಿಸಿದ ಹಾಗೂ ಸಿದ್ದು ಕೂಡಿಟ್ಟ ಹಣವನ್ನೇ ಮುಂದೆ ವಿತ್ತ ಸಚಿವರಾಗಿ ಬಂದ ಯಡಿಯೂರಪ್ಪನವರು ಸೈಕಲ್ ಕೊಟ್ಟು, ಮಾಸಾಶನ ಏರಿಸಿ, ಮಠಗಳಿಗೂ ಹಂಚಿ ಬೆನ್ನುತಟ್ಟಿಸಿಕೊಂಡಿದ್ದು! ಹಣವೇ ಇಲ್ಲದಿದ್ದರೆ ಮಾಸಾಶನ ವನ್ನು ಹೇಗೆ ಹೆಚ್ಚಿಸುತ್ತಿದ್ದರು? ಸೈಕಲ್ ಕೊಡಲು ಹಣ ಎಲ್ಲಿಂದ ಬರುತ್ತಿತ್ತು? ಈಗ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಲಂಗುಲಗಾಮಿಲ್ಲದೆ ಹಣವನ್ನು ಪೋಲು ಮಾಡಿ, ರೈತರಿಗೆ ಉಚಿತ ವಿದ್ಯುತ್ ಎನ್ನುತ್ತಾ ರಾಜ್ಯವನ್ನು ವಿತ್ತೀಯವಾಗಿ ಅಧಃಪತನದತ್ತ ಕೊಂಡೊಯ್ಯಲು ಆರಂಭಿ ಸಿದರೆ ಪತ್ತೆ ಹಚ್ಚಿ ಕೇಳುವ, ಪ್ರಶ್ನಿಸುವ ಎದೆಗಾರಿಕೆ ಪ್ರತಿಪಕ್ಷದ ನಾಯಕನಿರಬೇಕಾಗುತ್ತದೆ.

ಅಂತಹ ಪ್ರತಿಪಕ್ಷದ ನಾಯಕನ ಸ್ಥಾನವನ್ನು ತುಂಬುವ ಸಾಮರ್ಥ್ಯ ಸಿದ್ದು ಬಿಟ್ಟರೆ ಬೇರಾರಿಗಿದೆ? ಈ ದೃಷ್ಟಿಯಲ್ಲಿ ನೋಡಿದಾಗ, ಮುಂದಿನ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ತಾನು ದಲಿತರ ಪರ ಎಂದು ಬಿಂಬಿಸಿಕೊಳ್ಳಲು ಖರ್ಗೆಯವರನ್ನು ಆಯ್ಕೆ ಮಾಡಿದೆಯೇ ಹೊರತು, ಅದರಿಂದ ಪಕ್ಷಕ್ಕೆ ಯಾವ ಲಾಭವೂ ಆಗದು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಕೊಂಡೇ ಖರ್ಗೆಯವರಿಂದ ಏನೂ ಮಾಡಲಾಗಲಿಲ್ಲ. ಅಂತಹ ವ್ಯಕ್ತಿಯಿಂದ ಲೋಕಸಭೆ ಚುನಾವಣೆಯಲ್ಲಿ ಯಾವ ಮ್ಯಾಜಿಕ್ಕನ್ನು ನಿರೀಕ್ಷಿಸಲಾದೀತು? ಇತ್ತ ಸಿದ್ದರಾಮಯ್ಯನವರನ್ನು ದ್ವೇಷಿಸುವವರೂ ಕೂಡ ಅವರಿಗೆ ಹೆದರುತ್ತಾರೆ. ಅಂತಹ ಹೆದರಿಕೆಯೇ ಅವರನ್ನು ಗೌರವ ದಿಂದ ನೋಡುವಂತೆ ಮಾಡಿದೆ. ಅವರೊಬ್ಬ ಉತ್ತಮ ಆಡಳಿತಗಾರರೂ ಹೌದು, ಹೋರಾಟವೂ ಅವರಿಗೆ ಹೊಸದಲ್ಲ. ಈ ಬಾರಿ ತಮ್ಮೆಲ್ಲ ಸೋಮಾರಿತನವನ್ನು ಬಿಟ್ಟು ಕೃಷ್ಣ ಅವರಿಗೆ ಸರಿಸಮನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡಿದರು. ಅದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರದಿದ್ದರೂ ಪಕ್ಷದ ಬಲ ಹೆಚ್ಚಾಗಿದ್ದಂತೂ ನಿಜ.

ಮುಂದಿನ ಬಾರಿ ಅದರ ಫಲ ದೊರೆಯುವುದರ ಬಗ್ಗೆಯೂ ಅನುಮಾನ ಬೇಡ. ಅವರ ಸಿಟ್ಟು, ಸೆಡವಿನ ಬಗ್ಗೆ ಕೆಲವರು ಬೊಟ್ಟು ಮಾಡಬಹುದು. ಆದರೆ ಅದು ಪುಕ್ಕಟೆಯಾಗಿ ಬರುವುದಿಲ್ಲ. ಯಡಿಯೂರಪ್ಪನವರಿಗೆ ಇರಲಿಲ್ಲವೆ? ಪ್ರತಿಪಕ್ಷ ನಾಯಕನ ಧ್ವನಿ ಯಾವತ್ತೂ ಗಟ್ಟಿಯಾಗಿರಬೇಕು. ಆಡಳಿತದ ಯಾವ ಅನುಭವವೂ ಇಲ್ಲದೆ ಪ್ರತಿಪಕ್ಷದ ನಾಯಕನಾಗಿದ್ದುಕೊಂಡೇ ಯಡಿಯೂರಪ್ಪನವರು ಪಕ್ಷವನ್ನು ಆಧಿಕಾರಕ್ಕೆ ತರಲಿಲ್ಲವೆ? ಹಾಗಿರುವಾಗ ಯಡ್ಡಿಗೆ ಸಡ್ಡು ಹೊಡೆಯಲು ಒಬ್ಬ ಸಿದ್ದು ಬೇಕಿತ್ತು ಎಂದನಿಸುವುದಿಲ್ಲವೆ?

(ಸ್ನೇಹಸೇತು : ವಿಜಯಕರ್ನಾಟಕ)

ಪೂರಕ ಓದಿಗೆ

ಹರಕೆ ಕುರಿಯಾಗಿಯೇ ಅವತರಿಸಿರುವ ಸಿದ್ದರಾಮಯ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X