ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ತಾಯಿಯನ್ನು ಬೆತ್ತಲಾಗಿ ಚಿತ್ರಿಸಿದರೆ ಸುಮ್ಮನಿರುತ್ತೀರಾ?

By Staff
|
Google Oneindia Kannada News

Mother India in the eye of M.F. Hussainಹುಸೇನ್ ಅವರಂಥವರಿಗೆ ಮಾತ್ರ ತಾಯಿಗೂ ಹೆಂಡತಿಗೂ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಅಕಸ್ಮಾತ್ ಗೊತ್ತಿದ್ದರೂ ತನ್ನ ತಾಯಿಯ ಮೈಯನ್ನು ಬಟ್ಟೆಯಿಂದ ಮುಚ್ಚಿ, ಪರರ ತಾಯಿಯನ್ನು ನಗ್ನವಾಗಿ ಚಿತ್ರಿಸುತ್ತಾರೆ. ಅಂತಹ ವ್ಯಕ್ತಿಯನ್ನೂ ಪ್ರೋತ್ಸಾಹಿಸುವುದು, 'ಫ್ರೀಡಂ ಆಫ್ ಎಕ್ಸ್‌ಪ್ರೆಶನ್" ಎನ್ನುತ್ತಾ ಆತ ಮಾಡಿದ ಧಾರ್ಮಿಕ ಅವಹೇಳನವನ್ನೂ ಸಮರ್ಥಿಸುವುದನ್ನು ಹೇಗೆತಾನೇ ಒಪ್ಪಿಕೊಳ್ಳಲು ಸಾಧ್ಯ?

ಪ್ರತಾಪ್ ಸಿಂಹ

ಅಷ್ಟೊಂದು ಅನುಮಾನವಿದ್ದರೆ ಸ್ವತಃ ನೀವೇ ಪರೀಕ್ಷೆ ಮಾಡಿಕೊಂಡು ನೋಡಿ. ಅದು ಒಬ್ಬ ಪುಟ್ಟ ಬಾಲಕನಿರಬಹುದು ಅಥವಾ ಹಣ್ಣು ಹಣ್ಣು ಮುದುಕನಿರಬಹುದು. ಆತನಿಗೆ ಸೂ...ಮಗ, ಬೋ...ಮಗ ಅಂತ ಬೈದು ನೋಡಿ. ಆತನ ರಕ್ತ ಕುದಿಯುತ್ತದೆಯೋ ಇಲ್ಲವೋ ನಿಮಗೇ ಗೊತ್ತಾಗುತ್ತದೆ. ಕೈಯಲ್ಲಿ ತ್ರಾಣವಿಲ್ಲದಿದ್ದರೂ ನಿಮ್ಮ ಕಪಾಳಕ್ಕೆ ತಟ್ಟಲು ಮುಂದಾಗುತ್ತಾನೆ. ಏಕೆ? ನೀವು ನಿಂದಿಸಿದ್ದು ಆತನನ್ನಲ್ಲ, ಆತನ ತಾಯಿಯನ್ನು. ಹಾಗಿದ್ದರೂ ಆತ ಏಕೆ ರೊಚ್ಚಿಗೇಳುತ್ತಾನೆ? ನಮ್ಮೆಲ್ಲರಿಗೂ ತಾಯಿ ಜತೆ ಅಂತಹ ಭಾವನಾತ್ಮಕ ಸಂಬಂಧವಿರುತ್ತದೆ. ನಮಗೆ ಜನ್ಮ ನೀಡಿದ ತಾಯಿ ಬಗ್ಗೆ ಅಂತಹ ಗೌರವ, ಪ್ರೀತಿ ಇರುತ್ತದೆ. ಹಾಗಾಗಿಯೇ ತಾಯಿಯ ವಿಷಯದಲ್ಲಿ ಯಾರಾದರೂ ಕೀಳಾಗಿ ಮಾತನಾಡಿದರೆ ಮನಸ್ಸು ಘಾಸಿಗೊಳ್ಳುತ್ತದೆ.

ಇದನ್ನು ಎನ್‌ಡಿಟೀವಿಯ ಮುಖ್ಯಸ್ಥ ಪ್ರಣಯ್ ರಾಯ್ ಅರ್ಥಮಾಡಿಕೊಂಡಿದ್ದಿದ್ದರೆ ಚೆನ್ನಾಗಿರುತ್ತಿತ್ತು.ಆದರೆ ಗಣರಾಜ್ಯೋತ್ಸವಕ್ಕೂ ಮುನ್ನ “ಭಾರತ್ ರತ್ನ ಪೋಲ್" ಎಂಬ ಹೆಸರಿನಡಿ ಎಸ್‌ಎಂಎಸ್ ಸಮೀಕ್ಷೆಯೊಂದನ್ನು ನಡೆಸಲು ಮುಂದಾದ ಎನ್‌ಡಿಟೀವಿ, ತನ್ನ ಪ್ರಕಾರ 'ಭಾರತ ರತ್ನ"ಕ್ಕೆ ಅರ್ಹರಾದ ಐವರ ಹೆಸರನ್ನು ಸೂಚಿಸಿ ನಿಮ್ಮ ಆಯ್ಕೆಯ ವ್ಯಕ್ತಿ ಯಾರೆಂದು ಎಸ್‌ಎಂಎಸ್ ಮಾಡುವಂತೆ ಕರೆ ನೀಡಿತು. ಆ ಪಟ್ಟಿಯಲ್ಲಿ ಎಂ.ಎಫ್. ಹುಸೇನ್ ಹೆಸರೂ ಇತ್ತು! ಹಾಗಾಗಿ ರೊಚ್ಚಿಗೆದ್ದ 'ಹಿಂದೂ ಸಾಮ್ರಾಜ್ಯ ಸೇನಾ" ಎಂಬ ಸಂಘಟನೆಯ ಕಾರ್ಯಕರ್ತರು ಜನವರಿ 19ರಂದು ರಾತ್ರಿ ಅಹಮದಾಬಾದ್‌ನಲ್ಲಿರುವ ಎನ್‌ಡಿಟೀವಿ ಕಚೇರಿ ಮೇಲೆ ದಾಳಿ ಮಾಡಿ ಕಿಟಕಿ, ಬಾಗಿಲು, ಕಂಪ್ಯೂಟರ್‌ಗಳನ್ನು ಧ್ವಂಸಗೊಳಿಸಿ ಹೋಗಿದ್ದಾರೆ.

ಈ ಘಟನೆ ನಡೆದಿದ್ದೇ ತಡ, 'ಪತ್ರಿಕಾ ಸ್ವಾತಂತ್ರ್ಯದ ಹರಣ", “ರೈಟ್‌ವಿಂಗ್ ಗೂಂಡಾಗಳಿಂದ ಮಾಧ್ಯಮ ಸ್ವಾತಂತ್ರ್ಯದ ಮೇಲೆ ದಾಳಿ" ಮುಂತಾದ ಬೊಬ್ಬೆ ಕೇಳಿಬರಲಾರಂಭಿಸಿದೆ. ಅದರಲ್ಲೂ 'ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ"(ಐಎನ್‌ಎಸ್)ಯ ಅಧ್ಯಕ್ಷ ಬಾಹುಬಲಿ ಎಸ್. ಶಾ ಅವರಂತೂ “ಅಪ್ರಿಯ ಸತ್ಯವನ್ನು ಬಯಲು ಮಾಡುತ್ತಿರುವ ಮಾಧ್ಯಮಗಳನ್ನು ಬಲಪ್ರಯೋಗದ ಮೂಲಕ ಬೆದರಿಸುವ ಯತ್ನ ಇದಾಗಿದೆ" ಎಂದಿದ್ದಾರೆ. “ಇದೊಂದು ಘೋರ ಅಪರಾಧ"ವೆಂದು ಖ್ಯಾತ ಶಾಯರಿ ಕವಿಗಳಾದ ಮುನಾವರ್ ರಾಣಾ ಹಾಗೂ ನಿದಾ ಫಝ್ಲಿ ಬಣ್ಣಿಸಿದ್ದಾರೆ. ಯಾವುದು ಸ್ವಾಮಿ ಘೋರ ಅಪರಾಧ?

ಎನ್‌ಡಿಟೀವಿಯ ಕಚೇರಿ ಮೇಲೆ ದಾಳಿ ಮಾಡಿದ್ದಾ ಅಥವಾ ಭಾರತ ಮಾತೆಯನ್ನು ಬೆತ್ತಲಾಗಿ ಚಿತ್ರಿಸಿದ ವ್ಯಕ್ತಿಗೆ 'ಭಾರತ ರತ್ನ" ನೀಡಿ ಅಂತ ಹೇಳಿದ್ದಾ? ಯಾರಾದರೂ ನಿಮ್ಮ ತಾಯಿಯನ್ನೋ, ಹೆಂಡತಿಯನ್ನೋ, ತಂಗಿಯನ್ನೋ ಬೆತ್ತಲಾಗಿ ಚಿತ್ರಿಸಿದರೆ ಸುಮ್ಮನಾಗುತ್ತೀರಾ? ಅದು ಕಲಾವಿದನಿಗಿರುವ “ಅಭಿವ್ಯಕ್ತಿ ಸ್ವಾತಂತ್ರ್ಯ" ಅಂತ ತೆಪ್ಪಗಾಗುತ್ತೀರಾ? ಅಥವಾ ನಿಮ್ಮ ಮನಸ್ಸು ರೊಚ್ಚಿಗೇಳುತ್ತದೆಯೋ?ಎಂ.ಎಫ್. ಹುಸೇನ್ ಅವರ ದೃಷ್ಟಿಯಲ್ಲಿ ಹೆಣ್ಣು ಅಂದರೆ ಮಕ್ಕಳನ್ನು ಹಡೆಯುವ, ಹಾಸಿಗೆ ಮೇಲೆ ಮಜಾ ಕೊಡುವ ಮಷೀನ್ ಆಗಿರಬಹುದು. ಆದರೆ ನಾವು ಹೆಣ್ಣಿನಲ್ಲಿ ಹೆಂಡತಿಯನ್ನು ಮಾತ್ರವಲ್ಲ ತಾಯಿ, ತಂಗಿಯನ್ನೂ ಕಾಣುತ್ತೇವೆ, ಮಗಳನ್ನೂ ನೋಡುತ್ತೇವೆ, ದೈವತ್ವವನ್ನೂ ಕಂಡುಕೊಳ್ಳುತ್ತೇವೆ. ಅದಕ್ಕೇ ಭೂಮಿಯನ್ನು ಭೂತಾಯಿ ಅಂತ, ಜನ್ಮಕೊಟ್ಟ ನಾಡು ಅಂತ ಪೂಜಿಸುತ್ತೇವೆ. ಅಂಥ ತಾಯಿಯನ್ನು ಬೆತ್ತಲಾಗಿ ಚಿತ್ರಿಸಿದ ವ್ಯಕ್ತಿಗೆ 'ಭಾರತ ರತ್ನ" ಕೊಡಬೇಕೆಂದು ಯಾರಾದರೂ ಹೇಳಿದರೆ ಜನ್ಮ ನೀಡಿದ ನೆಲದ ಬಗ್ಗೆ ಗೌರವ, ಪ್ರೀತಿ ಹೊಂದಿರುವ ಯಾವ ವ್ಯಕ್ತಿ ತಾನೇ ಸುಮ್ಮನಿರುತ್ತಾನೆ? ಹಾಗೆ ರೊಚ್ಚಿಗೆದ್ದ ದೇಶಪ್ರೇಮಿಗಳನ್ನು ರೈಟ್‌ವಿಂಗ್ ಗೂಂಡಾಗಳು, ಬಲಪಂಥೀಯ ಉಗ್ರರು ಅಂತ ಕರೆಯುವುದು ಎಷ್ಟರಮಟ್ಟಿಗೆ ಸರಿ? ಒಂದು ವೇಳೆ ಸ್ವಾಮಿ ವಿವೇಕಾನಂದ, ಗಾಂಧೀಜಿ ಅಥವಾ ನೇತಾಜಿ ಬದುಕಿದ್ದಿದ್ದರೆ ಸುಮ್ಮನಿರುತ್ತಿದ್ದರೆ? ಈ ದೇಶವನ್ನು ದಾಸ್ಯದ ಸಂಕೋಲೆಯಿಂದ ಮುಕ್ತಗೊಳಿಸುವ ಸಲುವಾಗಿ ಬ್ರಿಟಿಷರ ಜತೆ ಕೈಜೋಡಿಸಿದ್ದ ದೇಶದ್ರೋಹಿ ಭಾರತೀಯರನ್ನೇ ಮಟ್ಟಹಾಕಿದ ಕ್ರಾಂತಿಕಾರಿಗಳು, ಭಾರತ ಮಾತೆಯನ್ನೇ ಬೆತ್ತಲಾಗಿ ಚಿತ್ರಿಸಿದ ಹುಸೇನ್ ಅವರನ್ನು ಸುಮ್ಮನೆ ಬಿಡುತ್ತಿದ್ದರೆ?

ಅದಿರಲಿ, ಆರ್ಟ್‌ಗೂ ಪೋರ್ನೋಗ್ರಫಿಗೂ ವ್ಯತ್ಯಾಸವೇ ಇಲ್ಲವೆ? ಎಂ.ಎಫ್. ಹುಸೇನ್ ಅವರ ವಿರುದ್ಧ ದೇಶಾದ್ಯಂತ ಸುಮಾರು 1250 ಪೊಲೀಸ್ ದೂರುಗಳು ದಾಖಲಾಗಿವೆ. ನ್ಯಾಯಾಲಯಗಳಲ್ಲಿ 7 ಮೊಕದ್ದಮೆಗಳನ್ನು ಹೂಡಲಾಗಿದೆ. ಭಾರತೀಯ ದಂಡ ಸಂಹಿತೆ(IPC)ಯ 153(A), 295,295(A) ಪ್ರಕಾರ ಧಾರ್ಮಿಕ ಭಾವಗಳಿಗೆ ನೋವುಂಟು ಮಾಡಿರುವ ಹುಸೇನ್ ಅವರ ಕೃತ್ಯ ಶಿಕ್ಷಾರ್ಹ ಮಾತ್ರವಲ್ಲ ಕ್ರಿಮಿನಲ್ ಅಪರಾಧ. ಹಾಗಾಗಿಯೇ ಹರಿದ್ವಾರದ ನ್ಯಾಯಾಲಯ ಹುಸೇನ್ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಈ ವಾರಂಟ್ ನಂತರ ಭಯಭೀತಿಗೊಂಡ ಹುಸೇನ್ ದೇಶದಿಂದಲೇ ಪಲಾಯನ ಮಾಡಿ ದುಬೈನಲ್ಲಿ ನೆಲೆಸಿದ್ದಾರೆ. ಹೀಗೆ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿರುವ, ಕಾನೂನಿನಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿರುವ ಅಪರಾಧಿಗೆ 'ಭಾರತ ರತ್ನ" ಕೊಡಬೇಕೆನ್ನುವುದು ಸರಿಯೇ? ಈ ದೇಶದ ಅತ್ಯುನ್ನತ ವ್ಯವಸ್ಥೆಯಾದ ನ್ಯಾಯಾಂಗಕ್ಕೇ ಅಗೌರವ ತೋರುತ್ತಿರುವ ವ್ಯಕ್ತಿಗೆ ಅತ್ಯುನ್ನತ ಪುರಸ್ಕಾರವನ್ನು ನೀಡಬೇಕೆನ್ನುವುದು ಅಕ್ಷಮ್ಯವಲ್ಲವೆ?

ಅಷ್ಟಕ್ಕೂ “ಫ್ರೀಡಂ ಆಫ್ ಎಕ್ಸ್‌ಪ್ರೆಶನ್" ಅಂದರೆ ಏನು? ಯಾರು ಯಾರನ್ನ ಬೇಕಾದರೂ ಬೆತ್ತಲಾಗಿ ಚಿತ್ರಿಸುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೇ? ಒಂದು ವೇಳೆ ಎನ್‌ಡಿಟೀವಿ ಮಾಲೀಕ ಪ್ರಣಯ್ ರಾಯ್ ಪತ್ನಿ ರಾಧಿಕಾ ಅವರನ್ನು ಅಶ್ಲೀಲವಾಗಿ ಚಿತ್ರಿಸಿದ್ದರೆ ಅವರ ಮನಸ್ಸಿಗೆ ನೋವಾಗುತ್ತಿರಲಿಲ್ಲವೆ? ಅದಿರಲಿ, ಈ ಹುಸೇನ್ ಅವರ ಕಣ್ಣಿಗೆ ಬರೀ ಹಿಂದೂ ದೇವ-ದೇವತೆಗಳೇ ಏಕೆ ನಗ್ನವಾಗಿ ಕಾಣುತ್ತಾರೆ? ಒಂದೆಡೆ ದುರ್ಗೆ ಹುಲಿಯೊಂದಿಗೆ ಸಂಭೋಗದಲ್ಲಿ ತೊಡಗಿರುವಂತೆ ಚಿತ್ರಿಸುವ ಹುಸೇನ್, ತಮ್ಮ ಪುತ್ರಿಯನ್ನು ಮಾತ್ರ ಮೈತುಂಬ ಬಟ್ಟೆಯೊಂದಿಗೆ ಚಿತ್ರಿಸಿದ್ದಾರೆ. ಭಾರತ ಮಾತೆಯನ್ನು ನಗ್ನವಾಗಿಸಿರುವ ಅವರು, ತಮ್ಮ ತಾಯಿ ಜುನೈಬ್ ಮೈಯನ್ನು ಬಟ್ಟೆಯಿಂದ ಮುಚ್ಚಿದ್ದಾರೆ! ವೇಷ-ಭೂಷಣಗಳಿಂದ ಅಲಕೃಂತನಾಗಿರುವ ಮುಸ್ಲಿಮ್ ರಾಜನ ಪಕ್ಕದಲ್ಲಿ ನಗ್ನ ಬ್ರಾಹ್ಮಣನ ಚಿತ್ರವಿದೆ. ದ್ರೌಪದಿ, ಸರಸ್ವತಿ, ಪಾರ್ವತಿ, ಸೀತೆಯನ್ನು ನಗ್ನಗೊಳಿಸಿರುವ ಹುಸೇನ್, ಮುಸ್ಲಿಂ ಮಹಿಳೆ ಹಾಗೂ ಮದರ್ ಥೆರೇಸಾ ಅವರ ಮೈಮುಚ್ಚಿದ್ದಾರೆ!! ಇಂತಹ ಇಬ್ಬಂದಿತನವೇಕೆ?

ಒಂದು ವೇಳೆ, ಬೆತ್ತಲೆ ಚಿತ್ರ ಬರೆಯುವುದೇ ಕಲೆ ಅನ್ನುವುದಾದರೆ, “ಫ್ರೀಡಂ ಆಫ್ ಎಕ್ಸ್‌ಪ್ರೆಶನ್"ನಡಿ ಅಂತಹ ಪರಧರ್ಮ ಅವಹೇಳನವನ್ನೂ ಸಮರ್ಥಿಸಿಕೊಳ್ಳಬಹುದೇ ಆಗಿದ್ದರೆ ಹುಸೇನ್ ಅವರು ತಮ್ಮ ತಾಯಿ, ಮಗಳನ್ನೂ ಬೆತ್ತಲಾಗಿ ಕಲ್ಪಿಸಿಕೊಂಡು ಚಿತ್ರ ಬರೆಯಬಹುದಿತ್ತಲ್ಲವೆ? “ಫ್ರೀಡಂ ಆಫ್ ಎಕ್ಸ್‌ಪ್ರೆಶನ್" ಸೂತ್ರವನ್ನು ತಮ್ಮ ಕುಟುಂಬ ಹಾಗೂ ಸ್ವಧರ್ಮಕ್ಕೂ ಏಕೆ ಅನ್ವಯ ಮಾಡಿಕೊಳ್ಳಲಿಲ್ಲ? ಇಂತಹ ದ್ವಂದ್ವ ನಿಲುವಿನ ಹುಸೇನ್ ಅವರನ್ನು ಸಮರ್ಥಿಸಿಕೊಂಡಿರುವ ಲೇಖಕ ಶಶಿ ತರೂರ್, 'ಖಜುರಾಹೋದಲ್ಲಿರುವುದು ಕಾಮಕ್ರೀಡೆಯ ಅಭಿವ್ಯಕ್ತಿಯೇ ಅಲ್ಲವೆ?" ಎಂದಿದ್ದಾರೆ! ಹೌದು, ಕಾಮಸೂತ್ರವನ್ನು ಜಗತ್ತಿಗೆ ಕೊಟ್ಟವರು ನಾವೇ. ಖಝುರಾಹೋದಲ್ಲಿ ಇರುವ ಶಿಲ್ಪಕಲೆಗಳಲ್ಲಿ ಲೈಂಗಿಕ ಕ್ರಿಯೆಗಳ ಚಿತ್ರಣ ಇರುವುದೂ ದಿಟವೇ. ಆದರೆ ಈಗಿನ ವಿಜ್ಞಾನದಂತೆಯೇ ಆಗ ಶಿಲ್ಪಚಿತ್ರಗಳ ಮೂಲಕ ಲೈಂಗಿಕಕ್ರಿಯೆಯನ್ನು ತೋರಿಸಿದ್ದಾರಷ್ಟೇ. ಹಾಗೆ ತೋರಿಸುವುದಕ್ಕೂ ಅವುಗಳಿಗೆ ಸೀತೆ, ಸರಸ್ವತಿಯರ ಹೆಸರು ಕೊಟ್ಟು ವಿವರಿಸುವುದಕ್ಕೂ ವ್ಯತ್ಯಾಸವಿದೆ. ಅಷ್ಟಕ್ಕೂ ಒಂದು ಹುಡುಗಿಯನ್ನು ನಗ್ನವಾಗಿ ಕಲ್ಪಿಸಿಕೊಳ್ಳುವುದಕ್ಕೂ ಅದೇ ಸ್ಥಾನದಲ್ಲಿ ಸ್ವಂತ ತಾಯಿ, ತಂಗಿ, ಮಗಳನ್ನು ಕಲ್ಪಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆಯಲ್ಲವೆ?

ಇಷ್ಟಾಗಿಯೂ ಎನ್‌ಡಿಟೀವಿ ಕಚೇರಿ ಮೇಲೆ ದಾಳಿ ಮಾಡಿದವರನ್ನು ಟೀಕಿಸಿರುವ ಮುನಾವರ್ ರಾಣಾ ಹಾಗೂ ನಿದಾ ಫಝ್ಲಿ, “ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದಿದ್ದಾರೆ. ಆದರೆ ಹಿಂದೂಗಳ ಭಾವನೆಗಳಿಗೆ ನೋವುಂಟುಮಾಡಿರುವ ಎಂ.ಎಫ್. ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇವರು ಎಂದಾದರೂ ಒತ್ತಾಯಿಸಿದ್ದಾರೆಯೇ? ಎಂ.ಎಫ್. ಹುಸೇನ್ ಅವರು ಒಬ್ಬ ಒಳ್ಳೆಯ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಸಲ್ಮಾನ್ ರಶ್ದಿಯವರೂ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಎಂ.ಎಫ್. ಹುಸೇನ್‌ಗಿಂತಲೂ ಹೆಸರು ಮಾಡಿದ ಒಳ್ಳೆಯ ಸಾಹಿತಿ. ಒಂದು ವೇಳೆ, ಎನ್‌ಡಿಟೀವಿಯವರು ಸಲ್ಮಾನ್ ರಶ್ದಿಯವರಿಗೆ 'ಭಾರತ ರತ್ನ" ಪುರಸ್ಕಾರ ನೀಡಬೇಕೇ ಎಂಬ ಪ್ರಶ್ನೆ ಕೇಳಿ ಸಮೀಕ್ಷೆ ನಡೆಸಿದ್ದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿರುತ್ತಿತ್ತು ಯೋಚಿಸಿ? ಇಷ್ಟಾಗಿಯೂ ಹಿಂಸೆಗೆ ಇಳಿಯದಿರುವ ಹಿಂದೂಗಳ ತಾಳ್ಮೆಯನ್ನು ಮೆಚ್ಚಲೇಬೇಕು. ಎಂ.ಎಫ್. ಹುಸೇನ್ ಇಂದಿಗೂ ಜೀವಂತವಾಗಿ ಉಳಿದಿದ್ದರೆ ಅದಕ್ಕೆ ಹಿಂದೂಗಳ ಸಹನೆಯೇ ಕಾರಣ. ಕೆಲವರು ಹುಸೇನರ ಕಲಾಚಿತ್ರ ಗ್ಯಾಲರಿ ಮೇಲೆ ದಾಳಿ ಮಾಡಿರುವರೇ ಹೊರತು ತಸ್ಲಿಮಾ ನಸ್ರೀನ್‌ಗಾದಂತೆ ಹುಸೇನ್ ಜೀವದ ಮೇಲೆ ಎಂದೂ ಆಕ್ರಮಣ ಮಾಡಿಲ್ಲ. ಇಂದು ಹುಸೇನ್ ಅವರು ಯಾರಿಗಾದರೂ ಹೆದರಿ ದೇಶದಿಂದ ಪಲಾಯನ ಮಾಡಿದ್ದರೆ ಅದು ನ್ಯಾಯಾಲಯಕ್ಕೇ ಹೊರತು ಹಿಂದೂ ಪರ ಹೋರಾಟಗಾರರಿಗೆ ಅಂಜಿಯಲ್ಲ. ಭಾರತ ಮಾತೆಯನ್ನು ನಗ್ನವಾಗಿಸಿರುವ ಚಿತ್ರದಲ್ಲಿ ಅಶೋಕಚಕ್ರ ಹಾಗೂ ತ್ರಿ'ವರ್ಣ"ವನ್ನು ಬಳಸುವ ಮೂಲಕ ಕಾನೂನನ್ನು ಉಲ್ಲಂಘಿಸಿರುವ ಹಾಗೂ ದೇಶಾಭಿಮಾನಿಗಳ ಭಾವನೆಗಳಿಗೆ ನೋವುಂಟು ಮಾಡಿರುವ ಅವರು ಬಂಧಿತರಾಗುವ ಅಪಾಯ ಎದುರಾಗಿದೆ.

ಈ ವಿಷಯವನ್ನು ಏಕೆ ಮತ್ತೆ ಮತ್ತೆ ಪ್ರಸ್ತಾಪಿಸಬೇಕಾಗಿದೆಯೆಂದರೆ ಧರ್ಮ, ದೇಶಾಭಿಮಾನದ ವಿಷಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಡ್ಡತರಲು ಸಾಧ್ಯವಿಲ್ಲ. ನೀವೇ ಹೇಳಿ, ಯಾರಾದರೂ ತ್ರಿವರ್ಣ ಧ್ವಜವನ್ನು ಸುಡುತ್ತಿರುವುದನ್ನು ಕಂಡರೆ ನಿಮ್ಮ ಮನಸ್ಸಿಗೆ ನೋವಾಗಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಸಿಡಿದೇಳುತ್ತೀರೋ ಅಥವಾ ಸುಟ್ಟಿದ್ದು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯನ್ನಷ್ಟೇ ಅಂತ ಸುಮ್ಮನಾಗುತ್ತೀರೋ? “ರಾಷ್ಟ್ರಗೀತೆಯನ್ನು ಹಾಡುವ ಬದಲು ವಾದ್ಯ ಸಂಗೀತವನ್ನು ಆಲಿಸೋಣ" ಎಂದ ನಾರಾಯಣಮೂರ್ತಿಯವರ ವಿರುದ್ಧವೇ ಕೇಸು ಹಾಕಿದವರು ನಾವು. ಏಕೆಂದರೆ ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಯಾರಾದರೂ ಅಗೌರವ, ಅಸಡ್ಡೆ ತೋರಿದರೆ ನಮ್ಮ ಮನಸ್ಸಿಗೆ ನೋವಾಗುವುದು ಮಾತ್ರವಲ್ಲ, ರೋಷ ಉಕ್ಕಿ ಬರುತ್ತದೆ. ನಮ್ಮ ಪಾಲಿಗೆ ತ್ರಿವರ್ಣ ಧ್ವಜವೆಂದರೆ ಸಾಂಕೇತಿಕ ಮಹತ್ವ ಹೊಂದಿರುವ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲ. ಅದರಲ್ಲಿ ಭಾವನಾತ್ಮಕ ಸಂಬಂಧವಿದೆ. ತಾಯಿ ಜತೆಯೂ ಅಂತಹದ್ದೇ ಸಂಬಂಧವಿರುತ್ತದೆ. ಹಾಗಾಗಿಯೇ ತಾಯಿಗೆ ಅವಮಾನ ಮಾಡಿದರೆ ಅದನ್ನು ಸಹಿಸಲು ನಮ್ಮಿಂದಾಗುವುದಿಲ್ಲ. ಆದರೆ ಹುಸೇನ್ ಅವರಂಥವರಿಗೆ ಮಾತ್ರ ತಾಯಿಗೂ ಹೆಂಡತಿಗೂ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಅಕಸ್ಮಾತ್ ಗೊತ್ತಿದ್ದರೂ ತನ್ನ ತಾಯಿಯ ಮೈಯನ್ನು ಬಟ್ಟೆಯಿಂದ ಮುಚ್ಚಿ, ಪರರ ತಾಯಿಯನ್ನು ನಗ್ನವಾಗಿ ಚಿತ್ರಿಸುತ್ತಾರೆ. ಅಂತಹ ವ್ಯಕ್ತಿಯನ್ನೂ ಪ್ರೋತ್ಸಾಹಿಸುವುದು, 'ಫ್ರೀಡಂ ಆಫ್ ಎಕ್ಸ್‌ಪ್ರೆಶನ್" ಎನ್ನುತ್ತಾ ಆತ ಮಾಡಿದ ಧಾರ್ಮಿಕ ಅವಹೇಳನವನ್ನೂ ಸಮರ್ಥಿಸುವುದನ್ನು ಹೇಗೆತಾನೇ ಒಪ್ಪಿಕೊಳ್ಳಲು ಸಾಧ್ಯ?

ಒಂದು ಸಾವಿರ ವರ್ಷಗಳ ಕಾಲ ಭಾರತವನ್ನಾಳಿದ ಮುಸ್ಲಿಂ ಆಡಳಿತಗಾರರು ನಮ್ಮ ಮಠ-ಮಂದಿರಗಳನ್ನೇ ತಮ್ಮ ದಾಳಿಯ ಗುರಿಯಾಗಿಸಿಕೊಂಡು ವಿಗ್ರಹಗಳನ್ನು ತುಂಡರಿಸಿದರು. ನಾವು ತಾಯಿಯ ನಂತರದ ಸ್ಥಾನವನ್ನು ನೀಡಿರುವ ಗೋವುಗಳನ್ನು ದೇವಸ್ಥಾನಗಳ ಮುಂದೆ ಕತ್ತರಿಸುವ ಮೂಲಕ ನಮ್ಮ ನಂಬಿಕೆಯನ್ನೇ ಕತ್ತು ಹಿಸುಕಿ ಸಾಯಿಸಲು ಯತ್ನಿಸಿದರು. ಆನಂತರ ಬಂದ ಬ್ರಿಟಿಷರು 'ಆರ್ಯನ್ ಥಿಯರಿ"ಯನ್ನು ಸೃಷ್ಟಿಸಿ ಹಿಂದೂಗಳನ್ನು ಒಡೆಯಲು ನೋಡಿದರು. ಈಗ ಎಂ.ಎಫ್. ಹುಸೇನ್ ಅವರಂತಹವರು ಹಿಂದೂ ದೇವ-ದೇವತೆಗಳನ್ನು ನಗ್ನವಾಗಿ ಚಿತ್ರಿಸುವ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟುಮಾಡಲು ಯತ್ನಿಸುತ್ತಿದ್ದರೆ ಇನ್ನೊಂದೆಡೆ ಟಾಯ್ಲೆಟ್ ವಸ್ತುಗಳ ಮೇಲೆ ನಮ್ಮ ಆರಾಧ್ಯ ದೈವಗಳ ಚಿತ್ರಗಳನ್ನು ಮುದ್ರಿಸುವ ಮೂಲಕ ಅಪಮಾನವೆಸಗುವ ಪ್ರಯತ್ನವೂ ನಡೆಯುತ್ತಿದೆ. ಇಂತಹ ಪ್ರಯತ್ನಗಳಿಗೂ ಪ್ರೋತ್ಸಾಹ ನೀಡುವವರು ನಮ್ಮಲ್ಲೇ ಇದ್ದಾರೆ. ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿರಲು ಹೇಗೆ ಸಾಧ್ಯ?ಅಷ್ಟಕ್ಕೂ, “ಹಿಂದೂ ಸಾಮ್ರಾಜ್ಯ ಸೇನೆ" ದಾಳಿ ಮಾಡಿದ್ದು ಎನ್‌ಡಿಟೀವಿ ಕಚೇರಿ ಮೇಲೆ, ಆದರೆ ಎನ್‌ಡಿಟೀವಿ ಆಕ್ರಮಣ ಮಾಡಿದ್ದು ಹಿಂದೂಗಳ ಭಾವನೆಯ ಮೇಲೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X