ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆರಳಿಸುವುದಕ್ಕೆ ಇನ್ನೊಂದು ಹೆಸರೇ ಆಸ್ಟ್ರೇಲಿಯ

By Staff
|
Google Oneindia Kannada News

Sledging is also an art! ಆಸ್ಟ್ರೇಲಿಯ ಕ್ರಿಕೆಟ್ಟಿಗರು ಎದುರಾಳಿ ತಂಡದವರ ಮನೋಸ್ಥೈರ್ಯ ಹಾಳುಗೆಡಹುದಕ್ಕೆ ಯಾವ ಮಟ್ಟಕ್ಕಾದರೂ ಹೋಗಬಲ್ಲರು. ಕೆಣಕುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅವರ ಕುಯುಕ್ತಿಗಳಿಗೆ ದೀರ್ಘ ಇತಿಹಾಸವಿದೆ. ಇದನ್ನೆಲ್ಲ ನಮ್ಮ ಆಟಗಾರರು, ವಿಶೇಷವಾಗಿ ಗವಾಸ್ಕರ್ ತುಂಬ ಅನುಭವಿಸಿದ್ದಾರೆ. ಇತ್ತಿತ್ತಲಾಗಿ ಬಿಸಿರಕ್ತದ ಹುಡುಗರು ತಿರುಗಿ ಮಾತನಾಡುವ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ಈ ರಂಪಾಟಕ್ಕೆ ಕಡಿವಾಣ ಬೀಳಬೇಕಾದರೆ ಐಸಿಸಿ ಆಡಳಿತದ ಚುಕ್ಕಾಣಿ ಏಷಿಯಾದವರಿಗೆ ಸಿಗಬೇಕು..

ಪ್ರತಾಪ್ ಸಿಂಹ
[email protected]

ಅದು ಆಂಟಿಗುವಾದಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ 4ನೇ ಟೆಸ್ಟ್ ಪಂದ್ಯ. 2002ರ ಆ ಟೆಸ್ಟ್ ಸರಣಿಯ ಮೊದಲು ಮೂರು ಪಂದ್ಯಗಳನ್ನು ಗೆದ್ದಿದ್ದ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ತಂಡ ನಾಲ್ಕನೇ ಟೆಸ್ಟ್ ಗೆಲ್ಲುವ ಮೂಲಕ ಸರಣಿಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳುವ ತವಕದಲ್ಲಿತ್ತು. ಆದರೆ ನಾಲ್ಕನೇ ಟೆಸ್ಟ್‌ನ ಮೂರನೇ ಇನಿಂಗ್ಸ್ ಆಡಲು ಮೈದಾನಕ್ಕಿಳಿದ ವೆಸ್ಟ್ ಇಂಡೀಸ್ 73 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ಉಪನಾಯಕ ರಾಮನರೇಶ್ ಸರವಣ್ ಸೊಗಸಾದ ಆಟದ ಮೂಲಕ ಪ್ರತಿರೋಧ ಒಡ್ಡಲು ಆರಂಭಿಸಿದರು. ವೆಸ್ಟ್ ಇಂಡೀಸ್‌ನ ಸ್ಕೋರ್ 250 ದಾಟಿದರೂ ವಿಕೆಟ್ ಬೀಳಲಿಲ್ಲ. ಒಟ್ಟು ಮುನ್ನಡೆ 400 ರನ್‌ಗಳ ಗಡಿಯತ್ತ ಸಾಗತೊಡಗಿತು. ಆದರೆ ನಾಲ್ಕನೇ ಇನಿಂಗ್ಸ್‌ನಲ್ಲಿ 400ಕ್ಕೂ ಹೆಚ್ಚು ರನ್‌ಗಳನ್ನು ಬೆನ್ನಟ್ಟುವುದು ಸಾಮಾನ್ಯ ವಿಷಯವಲ್ಲ. ಆಸ್ಟ್ರೇಲಿಯಾಕ್ಕೇ ಸೋಲುವ ಭೀತಿ ಕಾಡತೊಡಗಿತು. ಅಂತಹ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಖ್ಯಾತ ವೇಗದ ಬೌಲರ್ ಮೆಗ್ರಾಥ್ ಅವರ ಎರಡು ಓವರ್‌ಗಳಲ್ಲಿ 21 ರನ್ ಚಚ್ಚಿದ ಸರವಣ್, ಮತ್ತೊಂದು ಬಾಲನ್ನೂ ಬೌಂಡರಿಗಟ್ಟಿದರು. ಇದರಿಂದ ಕುಪಿತಗೊಂಡ ಮೆಗ್ರಾಥ್: what does Brian laras...?......? ಎಂದು ಅಶ್ಲೀಲವಾಗಿ (ಇಲ್ಲಿ ಬರೆಯಲಾಗದಷ್ಟು) ಕಿಚಾಯಿಸುವ ಮೂಲಕ ಸರವಣ್ ಅವರ ಏಕಾಗ್ರತೆ ಯನ್ನೇ ಹಾಳುಗೆಡವಲು ಯತ್ನಿಸಿದರು.

ಆದರೆ 24 ವರ್ಷದ ಸರವಣ್ ಹೆದರಲೂ ಇಲ್ಲ, ಕಕ್ಕಾಬಿಕ್ಕಿಯೂ ಆಗಲಿಲ್ಲ. “ಬ್ರಯಾನ್ ಲಾರಾನ ........ ರುಚಿ ಹೇಗಿರುತ್ತೋ ನನಗೆ ಗೊತ್ತಿಲ್ಲ, ನಿನ್ನ ಹೆಂಡತಿಯನ್ನು ಕೇಳು?!" ಎಂದರು.

ಬಹುಶಃ ಅದುವರೆಗೂ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರನೊಬ್ಬನಿಗೆ ಅಂತಹ ಉತ್ತರವನ್ನು ಯಾರೂ ನೀಡಿರಲಿಲ್ಲ. ಹಾಗಾಗಿ ಕೆಂಡಾಮಂಡಲವಾದ ಮೆಗ್ರಾಥ್, ಸರವಣ್ ಅವರ ಮುಖಕ್ಕೆ ಬೆರಳು ತೋರುತ್ತಾ, “If you ever mention my wife again, Ill rip your troat out" ಎಂದು ಚೀರಾಡಿದರು, ಅಂಪೈರ್ ಡೇವಿಡ್ ಶೆಫರ್ಡ್ ಅವರಿಗೆ ದೂರನ್ನೂ ನೀಡಿದರು! ಅಷ್ಟಕ್ಕೂ ಈ 'ಅಗ್ಲಿ ಆಸ್ಟ್ರೇಲಿಯಾ"ದ ಆಟಗಾರರಿಗೆ ಬೇರೆಯವರನ್ನು ಬೈದು, ಹೀಯಾಳಿಸಿ ಗೊತ್ತೇ ಹೊರತು ನಿಂದನೆಗೆ ಎಂದೂ ಗುರಿಯಾದವರಲ್ಲ. ಅವರು ಸ್ಲೆಡ್ಜಿಂಗ್ ಅನ್ನೂ ಒಂದು ಕಲ್ಚರ್ ಎಂಬಂತೆ ಮೈಗೂಡಿಸಿಕೊಳ್ಳುತ್ತಾ, ಮುಂದುವರಿಸುತ್ತಾ ಬಂದಿದ್ದಾರೆ.

ಆದರೆ ನಾವೇನಾದರೂ ಆಸ್ಟ್ರೇಲಿಯಾದವರಿಗೆ 'ಮಂಗ" ಅಂದರೆ “ಜನಾಂಗೀಯ ನಿಂದನೆ" ಅಂತ ದೂರು ಕೊಡುತ್ತಾರೆ, ಬೊಬ್ಬೆ ಹಾಕುತ್ತಾರೆ, ಆಸ್ಟ್ರೇಲಿಯಾದ ಮಾಧ್ಯಮಗಳೂ ಅಲ್ಲಿನ ಆಟಗಾರರಂತೆಯೇ ವರ್ತಿಸುತ್ತವೆ. ಅವರು “ಬ್ಯಾಸ್ಟರ್ಡ್" ಅಂದರೂ ನಾವು ತೆಪ್ಪಗಿರಬೇಕು. ಒಂದು ವೇಳೆ, ಪ್ರತ್ಯುತ್ತರ ನೀಡಲು ಮುಂದಾದರೆ “ಸೂಳೆ ಮಗ" ಅಂತ ನಾವು ಕರೆದಿದ್ದು ಪ್ರೀತಿಯಿಂದ, “Bastard" ಅನ್ನುವುದಕ್ಕೆ ನಮ್ಮಲ್ಲಿ “Mating"(ಗಂಡು-ಹೆಣ್ಣಿನ ಸಾಂಗತ್ಯ) ಅನ್ನುವ ಅರ್ಥವೂ ಇದೆ ಎಂದು ಸಮಜಾಯಿಷಿ ಕೊಡುತ್ತಾರೆ. ಹಾಗಂತ ನಾವು ಸೈಮಂಡ್ಸ್‌ನನ್ನು “ಮಂಗ" ಅಂತ ಕರೆದಿದ್ದೂ ಪ್ರೀತಿಯಿಂದಲೇ, ಅಷ್ಟಕ್ಕೂ ನಾವು “Monkey God"(ಹನುಮಂತ) ಅನ್ನು ಆರಾಧಿಸುತ್ತೇವೆ. ಮಂಗ ನಮಗೆ ದೈವ ಸಮಾನ ಎಂದು ಭಾರತೀಯರೂ ಹೇಳಿದರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಶಿಕ್ಷೆ ಹಾಗೂ ದಂಡದಿಂದ ಮಾಫಿ ನೀಡು ತ್ತದೆಯೇ?

ಆಸ್ಟ್ರೇಲಿಯಾದವರು ಒಳ್ಳೆಯ ಆಟಗಾರರು ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಅವರ ನಡತೆ ಮಾತ್ರ ಅವರಿಗಾಗಲಿ, ಅವರು ಆಡುವ ಕ್ರೀಡೆಗಾಗಲಿ ಗೌರವ ತರುವ ಹಾಗಿಲ್ಲ. ಒಮ್ಮೆ ಫೋರ್, ಸಿಕ್ಸ್ ಹೊಡೆಯುತ್ತಿದ್ದ ಜಿಂಬಾಬ್ವೆಯ ದಢೂತಿ ಬ್ಯಾಟ್ಸ್‌ಮನ್ ಎಡ್ಡೋ ಬ್ರಾಂಡಿಸ್ ಬಳಿಗೆ ಬಂದ ಮೆಗ್ರಾಥ್, “why are you so fat??" ಎಂದು ಚುಚ್ಚು ಮಾತನಾಡಿದ್ದರು. ಆದರೆ ಬ್ರಾಂಡಿಸ್ ಸುಮ್ಮನಾಗಲಿಲ್ಲ. “ನಿನ್ನ ಹೆಂಡತಿ ಕೊಡುವ ಬಿಸ್ಕತ್ ತಿಂದು ದಪ್ಪ ಆಗಿದ್ದೇನೆ" ಎಂದು ಮಾರುತ್ತರ ನೀಡಿದಾಗ ಸಿಟ್ಟಿಗೆದ್ದ ಮೆಗ್ರಾಥ್ ದೊಡ್ಡ ರಂಪವನ್ನೇ ಮಾಡಿದ್ದರು. ಪ್ರಚೋದಿಸುವವರೂ ಅವರೇ, ಮಾರುತ್ತರ ನೀಡಿದಾಗ ದೂರು ನೀಡುವವರೂ ಅವರೇ. ಅಲ್ಲಿನ ಪ್ರೇಕ್ಷಕರೂ ಕೆಲವೊಮ್ಮೆ ಆಟಗಾರರಂತೆಯೇ ವರ್ತಿಸುತ್ತಾರೆ. 1995ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ಪಾಕ್-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವೊಂದರಲ್ಲಿ ವಿಕೆಟ್ ಕಳೆದುಕೊಂಡು ಪೆವಿಲಿಯನ್‌ಗೆ ಮರಳುತ್ತಿದ್ದ ಸಲೀಂ ಮಲಿಕ್ ಅವರಿಗೆ “the cheques in the mail" (ಮ್ಯಾಚ್ ಫಿಕ್ಸಿಂಗ್ ಆರೋಪ) ಎಂಬ ಫಲಕಗಳನ್ನು ತೋರಿಸಿದ್ದರು!

ಈ ಆಸ್ಟ್ರೇಲಿಯಾದವರಿಗೆ ಅವರ ಭಾಷೆಯಲ್ಲೇ ಉತ್ತರ ಕೊಡಬೇಕು!ಅಷ್ಟಕ್ಕೂ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಹೇಳಿದಂತೆ “ಸ್ಲೆಡ್ಜಿಂಗ್ ಕೂಡ ಒಂದು ಕಲೆ. ಅದನ್ನು ಆಸ್ಟ್ರೇಲಿಯಾದವರು ಕರಗತ ಮಾಡಿಕೊಂಡಿದ್ದಾರೆ. ಭಾರತೀಯರಾದ ನಾವು ಆದಷ್ಟು ಬೇಗ ಕಲಿತುಕೊಳ್ಳಬೇಕಿದೆ"! ಅದಿರಲಿ, ಆರ್ಟ್ ಆಫ್ ಸ್ಲೆಡ್ಜಿಂಗ್ ಅಂದರೆ ಏನು? ಕ್ಯಾಮೆರಾಗಳಿಗೆ ಸಿಕ್ಕಿ ಹಾಕಿಕೊಳ್ಳದಂತೆ ನಿಂದಿಸುವುದೆ? ಆಸ್ಟ್ರೇಲಿಯಾದವರು ಮಾಡುತ್ತಿರುವುದು ಅದನ್ನೇ. ಅತ್ಯಂತ ಯೋಜಿತವಾಗಿ ಪ್ರಚೋದಿಸುವ ಅವರು ಯಾವುದೇ ಕೈಸನ್ನೆ ಮಾಡುವುದಿಲ್ಲ, ಹಾವಭಾವಗಳಲ್ಲೂ ವ್ಯಕ್ತಪಡಿಸುವುದಿಲ್ಲ. ಎಲ್ಲೋ ನೋಡು ವಂತೆ ನಟಿಸುತ್ತಾ ಹತ್ತಿರದಲ್ಲಿರುವ ಬ್ಯಾಟ್ಸ್‌ಮನ್‌ನನ್ನು ಅಶ್ಲೀಲವಾಗಿ ನಿಂದಿಸಿ ಉದ್ರೇಕಿಸುತ್ತಾರೆ. ಆದರೆ ಬೈಸಿಕೊ ಳ್ಳುವ ಭಾರತೀಯ ಹಾಗೂ ಇತರ ರಾಷ್ಟ್ರಗಳ ಆಟಗಾರರರು ಪ್ರಚೋದಿತರಾಗಿ ಕೈ ತೋರಿಸುತ್ತಾರೆ, ಇಲ್ಲವೇ ಹತ್ತಿರ ಹೋಗಿ ಜಗಳಕ್ಕೆ ಮುಂದಾಗುತ್ತಾರೆ. ಹಾಗಾಗಿ ನೋಡು ವವರ ಕಣ್ಣಿಗೆ ಖಳರಾಗಿ ಕಾಣುತ್ತಾರೆ.

ನೀವೇ ನೋಡಿ, ಇಶಾಂತ್ ಶರ್ಮಾ ಅವರು ಪೆವಿಲಿಯನ್‌ನತ್ತ ಕೈತೋರಿ ಸಲು ಪ್ರಚೋದನೆ ನೀಡಿದ್ದೇ ಸೈಮಂಡ್ಸ್. ಆದರೆ ದಂಡ ಹಾಕಿದ್ದು ಮಾತ್ರ ಇಶಾಂತ್‌ಗೆ! “ಒಳ್ಳೆಯ ಬಾಲು ಹಾಕಿದೆ" ಅಂತ ನಾನು ಅಭಿನಂದಿಸಿದೆ ಎಂದು ಸೈಮಂಡ್ಸ್ ಹೇಳಿದ ಹಸಿ ಸುಳ್ಳನ್ನು ಒಪ್ಪಿಕೊಂಡ ರೆಫರಿ ಜೆಫ್ ಕ್ರೋವ್ ಇಶಾಂತ್‌ಗೆ ದಂಡಹಾಕಿದರು. ಆದರೆ ಸಿಡ್ನಿ ಟೆಸ್ಟ್‌ನಲ್ಲಿ ಕೀಪರ್ ಧೋನಿಗೆ ಕ್ಯಾಚ್ ನೀಡಿ ಔಟಾಗಿದ್ದರೂ ಕ್ರೀಸ್‌ನಲ್ಲೇ ನಿಂತುಕೊಂಡಿದ್ದ ಸೈಮಂಡ್ಸ್, ಮೈಕ್ ಹಸಿ, ಮೈಕೆಲ್ ಕ್ಲಾರ್ಕ್, ರಿಕಿ ಪಾಟಿಂಗ್ ಅವರಂತಹ ಕ್ರೀಡಾಸ್ಫೂರ್ತಿಯೇ ಇಲ್ಲದ ವ್ಯಕ್ತಿಗಳ ಬಾಯಿಯಿಂದ “ಒಳ್ಳೆಯ ಬಾಲು ಹಾಕಿದೆ" ಎನ್ನುವ ಒಳ್ಳೆಯ ಮಾತುಗಳು ಬರಲು ಸಾಧ್ಯವೆ? ಇತ್ತೀಚೆಗೆ ನಡೆದ ಏಕದಿನ ಪಂದ್ಯದಲ್ಲಿ ಹರ್‌ಭಜನ್ ಸಿಂಗ್ ಔಟಾಗಿ ಹೋಗುತ್ತಿದ್ದ ಸಂದರ್ಭದಲ್ಲೂ ಸಮೀಪಕ್ಕೆ ಬಂದು 'F... oಜಿff' ಎಂದ ಪಾಂಟಿಂಗ್ ಅವರದ್ದು ಎಂತಹ ವಿಕೃತ ಮನಸ್ಸು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ?

ಇಂದು ಹರಭಜನ್ ಭಾರತೀಯರ ಕಣ್ಣಿಗೇ ಖಳನಾಗಿ ಕಾಣುತ್ತಿರುವುದರ ಹಾಗೂ ಸಾಕಷ್ಟು ಬಾರಿ ದಂಡನೆಗೆ ಒಳಗಾಗಿರುವುದರ ಹಿಂದೆ ಆಸ್ಟ್ರೇಲಿಯಾದವರ ಇಂತಹ ವ್ಯವಸ್ಥಿತ ಷಡ್ಯಂತ್ರವಿದೆ. ಆದರೆ “obnoxious little weed" ಎಂದು ಹರಭ್‌ಜನ್ ಸಿಂಗ್ ಅವರ ವಿರುದ್ಧ ಬಹಿರಂಗ ಟೀಕೆ ಮಾಡಿದ್ದರೂ ಆಸ್ಟ್ರೇಲಿಯಾದ ಕ್ರಿಕೆಟ್ ಬೋರ್ಡ್ ಮ್ಯಾಥ್ಯೂ ಹೇಡನ್ ವಿರುದ್ಧ ಯಾವುದೇ ಶಿಸ್ತು ಕ್ರಮಕೈಗೊಂಡಿಲ್ಲ. ಇತ್ತ ನಮ್ಮ ಕ್ರಿಕೆಟ್ ಮಂಡಳಿ ಮಾತ್ರ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಹರ್‌ಭಜನ್ ಅವರ ಬಾಯಿಗೇ ಬೀಗ ಹಾಕಿದೆ.

ಇದೇನೇ ಇರಲಿ, ನಾಯಕ ಧೋನಿ ಹೇಳಿದಂತೆ ನಾವೂ ಕೂಡ ಆದಷ್ಟು ಬೇಗೆ ಸ್ಲೆಡ್ಜಿಂಗ್ ಕಲೆಯನ್ನು ಕಲಿತುಕೊಳ್ಳಬೇಕು. ಆದರೆ ಕೈ ಸನ್ನೆ ಮಾಡಬಾರದು. ಸಿಟ್ಟು ಮಾಡಿಕೊಂಡು ಜಗಳಕ್ಕೂ ಇಳಿಯಬಾರದು. ಶ್ರೀಶಾಂತ್‌ನಂತೆ ಕೋತಿ ಕುಣಿತವೂ ಬೇಡ. ಆಸ್ಟ್ರೇಲಿಯಾದ ಆಟಗಾರರು ಬ್ಯಾಟಿಂಗ್‌ಗೆ ಬಂದಾಗ ಸ್ಟಂಪ್ ಕ್ಯಾಮೆರಾಕ್ಕೆ ಸಿಲುಕದಂತೆ ನಮ್ಮವರೂ ಕಿಚಾಯಿಸಬೇಕು. ಇಶಾಂತ್ ಶರ್ಮಾನಂತಹ ಯುವ ಆಟಗಾರನಿಗೆ “ಬಾಕ್ಸಿಂಗ್ ರಿಂಗ್‌ಗೆ ಬಾ" ಎನ್ನುವ ಹೇಡನ್ ಅವರ ಉದ್ಧಟತನವನ್ನು ನಾವೇಕೆ ಸಹಿಸಬೇಕು? ಇಷ್ಟಾಗಿಯೂ ಆತ ತಪ್ಪು ಒಪ್ಪಿಕೊಳ್ಳುವ ಬದಲು, “ನಿನಗಿನ್ನೂ 19 ವರ್ಷ. ಬೌಲಿಂಗ್ ಬಗ್ಗೆ ಮಾತ್ರ ತಲೆಕೆಡಿಸಿಕೋ" ಅಂತ ಹೇಳಿದೆನಷ್ಟೆ ಎಂದು ಸುಳ್ಳು ಹೇಳುತ್ತಿದ್ದಾರೆ. ವಿಶ್ವದ ಹಾಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ರಿಕಿ ಪಾಂಟಿಂಗ್ ಅವರನ್ನು ೫ ಬಾರಿ, ಹೇಡನ್ ಅವರನ್ನು 2 ಬಾರಿ, ಗಿಲ್‌ಕ್ರಿಸ್ಟ್ ಅವರನ್ನು ಒಮ್ಮೆ ಔಟ್ ಮಾಡಿರುವ ಇಶಾಂತ್ ಶರ್ಮಾ ಅವರು ೩೭ ವರ್ಷದ ಮುದುಕ ಹೇಡನ್ ಅವರಿಂದ ಬೌಲಿಂಗ್ ಪಾಠ ಕಲಿಯುವ ಅಗತ್ಯ ಖಂಡಿತ ಇಲ್ಲ.

ಇವತ್ತು ಆಸ್ಟ್ರೇಲಿಯಾದವರು ಯಾರನ್ನಾದರು ಹೊಗಳಿ ದರೂ ಅದನ್ನು ನಂಬುವ ಹಾಗಿಲ್ಲ!ಅದೂ ಕೂಡ ಒಂದು ರೀತಿಯ "mind game"! ಮೂರನೇ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ನಂತರ “ಭಾರತ ದ್ರಾವಿಡ್, ಗಂಗೂಲಿ ಅವರಂತಹ ಯೋಗ್ಯ ಆಟಗಾರರ ಕೊರತೆ ಅನುಭವಿಸುತ್ತಿದೆ" ಎಂದು ಗಿಲ್‌ಕ್ರಿಸ್ಟ್ ಹೇಳಿದ್ದರು. ಹಾಗಂತ ಅವರಿಗೆ ಭಾರತದ ಬಗ್ಗೆ ಕಾಳಜಿ ಇದೆ ಎಂದು ಭಾವಿಸಬೇಡಿ. 'ಭಾರತದ ಯುವ ಆಟಗಾರರು ಪ್ರಯೋಜನಕ್ಕೆ ಬಾರದವರು" ಎಂಬುದೇ 'ಗಂಗೂಲಿ, ದ್ರಾವಿಡ್ ಅವರ ಕೊರತೆ ಕಾಣುತ್ತಿದೆ" ಎಂಬ ಅವರ ಮಾತಿನ ಹಿಂದಿರುವ ಧೂರ್ತ ಅರ್ಥ. ಆದರೆ ಗಂಗೂಲಿ, ದ್ರಾವಿಡ್, ತೆಂಡೂಲ್ಕರ್, ಲಕ್ಷ್ಮಣ್‌ಗಳಿದ್ದ ಭಾರತೀಯ ತಂಡ 2003-04ರ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿ ಒಳ್ಳೆಯ ಸಾಧನೆ ಮಾಡಿದರೂ ಏಕದಿನ ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಬಂದಿದ್ದು ನಮಗೆಲ್ಲ ತಿಳಿದೇ ಇದೆ. ಹಾಗಿದ್ದರೂ ಗಂಗೂಲಿ, ದ್ರಾವಿಡ್ ಹೆಸರು ಹೇಳುತ್ತಾ ಪರೋಕ್ಷವಾಗಿ ಚುಚ್ಚು ಮಾತನಾಡುವ ಮೂಲಕ ಆಸ್ಟ್ರೇಲಿಯಾದವರಿಗೆ ಸವಾಲು ಎಸೆಯುತ್ತಿರುವ ನಮ್ಮ ಯುವ ಆಟಗಾರರ ಸ್ಥೈರ್ಯ ಉಡುಗಿಸುವುದೇ ಗಿಲ್‌ಕ್ರಿಸ್ಟ್ ಉದ್ದೇಶ. ಆದರೆ ಭಾರತದ ವಿರುದ್ಧ ಆಡಿದ ಎಲ್ಲ ಪಂದ್ಯಗಳಲ್ಲೂ ಫ್ಲಾಪ್ ಆಗಿರುವ ಆತ ಮೊದಲು ತನ್ನ ಬ್ಯಾಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳುವುದೊಳಿತು.

ಅದಕ್ಕೂ ಮಿಗಿಲಾಗಿ, ಸೌರವ್ ಗಂಗೂಲಿ ಅವರೇ ನಾಯಕನಾಗಿದ್ದಾಗ ಟಾಸ್‌ಗೆ ವಿಳಂಬವಾಗಿ ಬಂದರೆಂದು ಇದೇ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ವಾ ರೆಫರಿಗೆ ದೂರು ನೀಡಿದ್ದರು! ಸೌರವ್ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳೂ ದೊಡ್ಡ ಪ್ರಚಾರಾಂದೋಲನವನ್ನು ಮಾಡಿ ದ್ದವು. ಆತನನ್ನು ದರ್ಪದ ವ್ಯಕ್ತಿ ಎಂದು ಜರಿದಿದ್ದವು. ಏಕೆಂ ದರೆ ಮೈದಾನದಲ್ಲೇ ತಕ್ಕ ಪ್ರತ್ಯುತ್ತರ ನೀಡುತ್ತಿದ್ದ ಸೌರವ್ ಅವರ ಗಟ್ಟಿತನ ಆಸ್ಟ್ರೇಲಿಯಾದವರಿಗೆ ಹಿಡಿಸುತ್ತಿರಲಿಲ್ಲ. ಆಸ್ಟ್ರೇಲಿಯಾದವರ ನಡತೆಯ ಬಗ್ಗೆ ಇಂಗ್ಲೆಂಡ್‌ನ ಆಗಿನ ನಾಯಕ ನಾಸಿರ್ ಹುಸೇನ್ ಅವರು ನೊಂದುಕೊಂಡು ಹೇಳಿದ್ದ ಮಾತನ್ನು ನೆನಪಿಸಿಕೊಳ್ಳಿ. ಇದುವರೆಗೂ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ತಂಡಗಳೆಲ್ಲವೂ ಕಹಿ ಅನುಭವದೊಂದಿಗೇ ಹಿಂದಿರುಗಿವೆ.

ಆಸ್ಟ್ರೇಲಿಯಾದವರ ಕೆಟ್ಟ ನಡತೆಗೆ ದೊಡ್ಡ ಇತಿಹಾಸವೇ ಇದೆ :

ಸೋಲುವ ಭೀತಿಯಿಂದ ಅಂಡರ್ ಆರ್ಮ್ ಬೌಲಿಂಗ್ ಮಾಡಿಸಿದ್ದ ಗ್ರೆಗ್ ಚಾಪೆಲ್ ಕಾಲದಲ್ಲೇ ಇಂತಹ ಕೆಟ್ಟ ಚಾಳಿ ಆರಂಭವಾದರೂ ಅದು ವಿಕೃತ ರೂಪ ಪಡೆದುಕೊಂಡಿದ್ದು ಸ್ಟೀವ್ ವಾ ಕಾಲದಲ್ಲಿ. ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ನೆಲಕ್ಕೆ ಬಿದ್ದ ಬಾಲನ್ನು ಎತ್ತಿಕೊಂಡು ಕ್ಯಾಚ್ ಹಿಡಿದಿದ್ದೇನೆಂದು ಪ್ರತಿಪಾದಿಸಿದ್ದ ಹಾಗೂ ಬ್ಯಾಟಿಂಗ್ ಮಾಡುತ್ತಿದ್ದ ದ್ರಾವಿಡ್ ಅವರನ್ನೂ ನಿಂದಿಸಿದ್ದ ಸ್ಲೇಟರ್, ಮೆಗ್ರಾಥ್, ಪಾಂಟಿಂಗ್ ಅವರ ಕಿವಿ ಹಿಂಡದೆ ಪ್ರೋತ್ಸಾಹಿಸಿದ್ದೇ ಗ್ರೆಟೆಸ್ಟ್ ಕ್ಯಾಪ್ಟನ್‌ಗಳ ಸಾಲಿನಲ್ಲಿ ತಂದು ನಿಲ್ಲಿಸಲಾಗುವ ಈ ಸ್ಟೀವ್ ವಾ. 1999ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ತಾವು ನೀಡಿದ ಕ್ಯಾಚೊಂದನ್ನು ಕೈಚೆಲ್ಲಿದ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ಅವರನ್ನುದ್ದೇಶಿಸಿ “Thanks, mate. Youve just dropped the world cup" ಎಂದಿದ್ದರು ಸ್ಟೀವ್ ವಾ. 1998ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಕೋಲ್ಕತಾದ ನೈಟ್ ಕ್ಲಬ್‌ವೊಂದರಲ್ಲಿ ಅಸಭ್ಯವಾಗಿ ವರ್ತಿಸಿ ಪೆಟ್ಟು ತಿಂದಿದ್ದ ರಿಕಿ ಪಾಂಟಿಂಗ್ ನಾಯಕನಾದ ನಂತರವಂತೂ ಕ್ರಿಕೆಟ್ ಆಟಕ್ಕೇ ಕಳಂಕ ಅಂಟಲಾರಂಭಿಸಿದೆ.

ಒಬ್ಬ ರಾಜ ರಣಭೂಮಿಯಲ್ಲಿ ಎಷ್ಟೇ ಶೌರ್ಯವನ್ನು ಪ್ರದರ್ಶಿಸಬಹುದು. ಆದರೆ ರಾಜ ರಾಜನಂತೆ ವರ್ತಿಸದಿದ್ದರೆ ಕೂಲಿ ಆಳಿಗಿಂತಲೂ ಕಡೆಯಾಗುತ್ತಾನೆ. ಹಾಗಾಗಿಯೇ ದಾಖಲೆಗಳು ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರು ನಾಯಕರಾಗಿ ಮಾಡಿರುವ ಸಾಧನೆಯನ್ನು ವೈಭವೀಕರಿಸಿದರೂ ಕ್ರಿಕೆಟ್‌ನ ರಾಯಭಾರಿಗಳಾಗಿ ಅವರು ನಡೆದುಕೊಂಡಿರುವ ರೀತಿ ಅವರಿಗೇ ಘನತೆ ತಂದುಕೊಡುವುದಿಲ್ಲ. ಇವತ್ತು ಸ್ಯಾಂಪ್ರಾಸ್, ಅಗಾಸಿ, ಫೆಡರರ್, ನಡಾಲ್, ಟೈಗರ್ ವುಡ್ಸ್ ಏಕೆ ನಮ್ಮ ಹೃದಯಕ್ಕೆ ಆಪ್ತರಾಗುತ್ತಾರೆಂದರೆ ಅವರು ತಮ್ಮ ಕೈಚಳಕದ ಮೂಲಕ ಟೆನಿಸ್, ಗಾಲ್ಫ್ ನಂತಹ ಕ್ರೀಡೆಗಳನ್ನೇ ಮೇಲಕ್ಕೇರಿಸಿರುವುದು ಮಾತ್ರವಲ್ಲ, ನಡತೆಯಲ್ಲೂ ದೊಡ್ಡ ವ್ಯಕ್ತಿಗಳೆನಿಸಿದ್ದಾರೆ. ಒಮ್ಮೆ “ನೀನು ಸಾರ್ವಕಾಲಿಕ ಶ್ರೇಷ್ಠರೆಂದು ಪರಿಗಣಿಸುವ ಐವರು ಟೆನಿಸ್ ಆಟಗಾರರನ್ನು ಹೆಸರಿಸು?" ಎಂದು ಕೇಳಿದಾಗ “ಸ್ಯಾಂಪ್ರಾಸ್, ಸ್ಯಾಂಪ್ರಾಸ್, ಸ್ಯಾಂಪ್ರಾಸ್, ಸ್ಯಾಂಪ್ರಾಸ್, ಸ್ಯಾಂಪ್ರಾಸ್" ಎಂದಿದ್ದರು ಆಂಡ್ರೆ ಅಗಾಸಿ!!

ಅಗಾಸಿಯವರನ್ನು ಅತಿ ಹೆಚ್ಚು ಬಾರಿ ಸೋಲಿಸಿದ್ದು ಹಾಗೂ ಕನಿಷ್ಠ ನಾಲ್ಕು ಗ್ರ್ಯಾನ್ ಸ್ಲ್ಯಾಂ ಪ್ರಶಸ್ತಿಗಳು ಅಗಾಸಿಯವರ ಕೈತಪ್ಪಲು(ಸೋಲಿಸಿದ) ಕಾರಣರಾಗಿದ್ದ ವ್ಯಕ್ತಿಯೇ ಸ್ಯಾಂಪ್ರಾಸ್. ಅಂತಹ ಸ್ಯಾಂಪ್ರಾಸ್ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡಲು ತಮ್ಮ ಎದುರಾಳಿಯ ಬಗ್ಗೆ ಅಗಾಸಿಯವರಿಗಿದ್ದ ಗೌರವವೇ ಕಾರಣ. ಅಂತಹ ಗುಣವನ್ನು ಆಸ್ಟ್ರೇಲಿಯಾದ ಆಟಗಾರರಲ್ಲಿ ಕಾಣಲು ಸಾಧ್ಯವಿಲ್ಲ. ಪಾಂಟಿಂಗ್, ಹೇಡನ್, ಸೈಮಂಡ್ಸ್, ಕ್ಲಾರ್ಕ್‌ಗಳ ಸಾಂಘಿಕ ಹಾಗೂ ವೈಯಕ್ತಿಕ ಸಾಧನೆ ಹುಬ್ಬೇರಿಸುವಂತಿದ್ದರೂ ಅವರ ನಡತೆ ಅಷ್ಟೇ ಕೀಳುಮಟ್ಟದ್ದು. ನಮ್ಮ ಆಟಗಾರರು ಆಸ್ಟ್ರೇಲಿಯಾದವರಂತೆ ಸದಾ ಗೆಲ್ಲದೇ ಇರಬಹುದು. ಆದರೆ ನಡತೆಯ ಬಗ್ಗೆ ಪ್ರಶ್ನಿಸಲು ಸಾಧ್ಯವಿಲ್ಲ. ಹಾಗಾಗಿ ಆಟವನ್ನು ಪರಿಗಣಿಸಿ ನಡತೆಯಲ್ಲಿನ ದೋಷವನ್ನು ಮರೆಯುವುದು ಬೇಡ.

ಒಮ್ಮೆ ಬ್ಯಾಟಿಂಗ್ ಮಾಡುತ್ತಿರುವಾಗ ಸ್ಲೆಡ್ಜ್ ಮಾಡಲು ಮುಂದಾದ ಸೈಮನ್ ಓ"ಡೊನೆಲ್‌ಗೆ “ನೀನು ನಿನ್ನ ಜೀವಮಾನವಿಡೀ ಮೂತ್ರ ವಿರ್ಸಜನೆ ಮಾಡಿರುವುದಕ್ಕಿಂತ ಹೆಚ್ಚು ಬಾರಿ ನನಗೆ ಸ್ಲೆಡ್ಜ್ ಮಾಡಿದ್ದಾರೆ. ಸಾಕು ಹೋಗು.." ಎಂದಿದ್ದರು ಖ್ಯಾತ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್! ಹಾಗೆಯೇ ನಮ್ಮ ಯುವ ಆಟಗಾರರೂ ಬ್ಯಾಟ್ ಮತ್ತು ಬಾಯಿ ಎರಡರಿಂದಲೂ ಪ್ರತ್ಯುತ್ತರ ನೀಡುತ್ತಿದ್ದಾರೆ. Lets Support!

( ಸ್ನೇಹ ಸೇತು : ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X