ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಮುಸ್ಲಿಮರಿಗೆ ಇವರೇಕೆ ಮಾದರಿ ವ್ಯಕ್ತಿಗಳಾಗಲ್ಲ?

By Staff
|
Google Oneindia Kannada News

ಧಾರ್ಮಿಕ ಹಕ್ಕುಗಳನ್ನು ಚಲಾಯಿಸುವುದರಲ್ಲಿ ಅವರಿಗಿರುವ ಆಸಕ್ತಿ ಮತ್ತು ಶ್ರದ್ಧೆ ಭಾರತೀಯ ಸಮಾಜಧರ್ಮವನ್ನು ಗೌರವಿಸುವುದರಲ್ಲಿ ಕಾಣುವುದಿಲ್ಲ. ಯಾಕೆ ಹೀಗೆ? ಭಾರತೀಯ ಜನಸಂಖ್ಯೆಯ ಶೇ. 11ರಷ್ಟು ಮಂದಿಯನ್ನು ಉಳಿದ 89 ಮಂದಿ ಕೇಳಬೇಕು, ಕೇಳುತ್ತಾರೆ, ಕೇಳುತ್ತಲೇ ಇರುತ್ತಾರೆ.

  • ಪ್ರತಾಪ್ ಸಿಂಹ
ಭಾರತೀಯ ಮುಸ್ಲಿಮರಿಗೆ ಇವರೇಕೆ ಮಾದರಿ ವ್ಯಕ್ತಿಗಳಾಗಲ್ಲ?ಅಖಂಡ ಭಾರತ ಇಬ್ಭಾಗವಾಗಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ನಿರ್ಮಾಣವಾದಾಗಲೂ ಭಾರತದಲ್ಲೇ ಉಳಿದು ಕೊಂಡ ಮೌಲಾನಾ ಅಬುಲ್ ಕಲಾಂ ಆಜಾದ್, ಸಂಗೀತದ ರಸದೌತಣ ಉಣಬಡಿಸಿದ ಬಿಸ್ಮಿಲ್ಲಾ ಖಾನ್, ಅಲ್ಲಾರಖಾ, ಅಮ್ಜದ್ ಅಲಿ ಖಾನ್, ಜಾಕೀರ್ ಹುಸೇನ್, ಖ್ಯಾತ ಪತ್ರಕರ್ತರಾಗಿದ್ದ ರಫೀಕ್ ಝಕಾರಿಯಾ, ಅವರ ಪುತ್ರ ಫರೀದ್ ಝಕಾರಿಯಾ, ಎಂ.ಜೆ. ಅಕ್ಬರ್, ಸಯೀದ್ ನಕ್ವಿ, ಬುದ್ಧಿಜೀವಿಗಳೆನಿಸಿರುವ ಇರ್ಫಾನ್ ಹಬೀಬ್, ಮುಷಿರುಲ್ ಹಸನ್, ಶಾಹಿದ್ ಅಮೀನ್, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಫೈಜ್ ಅಹ್ಮದ್ ಫೈಜ್, ಅಲಿ ಸರ್ದಾರ್ ಜಫ್ರಿ, ಕೈಫಿ ಆಜ್ಮಿ...

..ಕ್ರಿಕೆಟ್ ಕಲಿಗಳಾದ ಪಟೌಡಿ, ಅಬ್ಬಾಸ್ ಅಲಿ ಬೇಗ್, ಕೀರ್ಮಾನಿ, ಅಜರುದ್ದೀನ್, ಜಾಹೀರಾತು ಕ್ಷೇತ್ರದ ದಿಗ್ಗಜರಾದ ಅಲೈಕ್ ಪದಮ್‌ಸೀ, ಮೊಹಮದ್ ಖಾನ್, ಮುಝಫರ್ ಅಲಿ, ಅದ್ಭುತ ನಟನೆ ಹಾಗೂ ಸ್ನಿಗ್ಧ ಸೌಂದರ್ಯದಿಂದ ಮನಸೂರೆ ಮಾಡಿದ ಮೀನಾ ಕುಮಾರಿ, ಮಧುಬಾಲಾ, ದಿಲೀಪ್ ಕುಮಾರ್, ಶಾರುಖ್, ಆಮೀರ್ ಖಾನ್, ರಂಗಭೂಮಿಯ ಧೀಮಂತ ವ್ಯಕ್ತಿಗಳಾದ ಹಬೀಬ್ ತನ್ವೀರ್, ಜಬ್ಬಾರ್ ಪಟೇಲ್, ಇಬ್ರಾಹಿಂ ಅಲ್ಕಾಝಿ, ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಅಜೀಂ ಪ್ರೇಮ್‌ಜಿ, ನಿತ್ಯ ಬಳಕೆಗೆ ಬರುವ ಸಾಮಾನ್ಯ ಔಷಧಗಳನ್ನು ವಿಶ್ವದಲ್ಲಿಯೇ ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಪಾದಿಸಿ ಜನರಿಗೆ ನೀಡುತ್ತಿರುವ ಸಿಪ್ಲಾ ಕಂಪನಿ ಮಾಲೀಕರಾದ ಡಾ. ಯೂಸುಫ್ ಹಮೀದ್, ಭಾರತವೇ ಮೆಚ್ಚಿಕೊಂಡ ಅಬ್ದುಲ್ ಕಲಾಂ, ಯುವಜನರ ಮನಗೆದ್ದಿರುವ ಸಾನಿಯಾ ಮಿರ್ಜಾ.... ಬಹುಶಃ ಆ ಪಟ್ಟಿಗೆ ಕೊನೆಯೇ ಇರುವುದಿಲ್ಲ.

ಕಲೆ, ಕ್ರೀಡೆ, ನಟನೆ, ನಾಟಕ, ವಿಜ್ಞಾನ, ವೈದ್ಯಕೀಯ ಅಥವಾ ಅದು ಯಾವುದೇ ಕ್ಷೇತ್ರವಿರಬಹುದು. ಭಾರತೀಯ ಮುಸ್ಲಿಮರ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ದೇಶದ ಒಟ್ಟಾರೆ ಪ್ರಗತಿ, ಅಭಿವೃದ್ಧಿಯಲ್ಲಿ ಮುಸ್ಲಿಮರು ಬಹುಮುಖ್ಯ ಪಾತ್ರ ವಹಿಸಿದ್ದಾರೆ ಹಾಗೂ ವಹಿಸುತ್ತಾ ಇದ್ದಾರೆ. ಅದರಲ್ಲೂ ಡಾ. ಯೂಸುಫ್ ಹಮೀದ್, ಅಬ್ದುಲ್ ಕಲಾಂ, ಅಜೀಂ ಪ್ರೇಮ್‌ಜಿ, ಎ.ಆರ್. ರೆಹಮಾನ್ ಮುಂತಾದವರು ಇಡೀ ದೇಶವೇ ಹೆಮ್ಮೆ ಪಡುವಂತಹ, ದೇಶಕ್ಕೇ ಮಾದರಿಯಾದಂತಹ ವ್ಯಕ್ತಿಗಳು.

ಆದರೆ ಬೇಸರದ ಸಂಗತಿಯೆಂದರೆ, ನಮ್ಮ ಭಾರತೀಯ ಮುಸ್ಲಿಮರಿಗೆ ಇವರೇಕೆ ಮಾದರಿ ವ್ಯಕ್ತಿಗಳಾಗಲ್ಲ? ಅಷ್ಟಕ್ಕೂ ಇವರಲ್ಲೂ ಹೆಚ್ಚಿನವರು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾರೆ, ಹಜ್ ಯಾತ್ರೆ ಮಾಡಿ ಬಂದಿರುವವರೂ ಇದ್ದಾರೆ, ತಾವು ಮುಸ್ಲಿಮರೆಂದು ಹೆಮ್ಮೆಯಿಂದಲೂ ಹೇಳಿಕೊಳ್ಳುತ್ತಾರೆ. ಆದರೂ ಮದನಿ, ಮಸೂದ್, ಮಲ್ಲಿಕ್, ಮಸ್ತಾನ್‌ಗಳನ್ನೇ ಏಕೆ ಮುಸ್ಲಿಮರು ಮಾದರಿ ವ್ಯಕ್ತಿಗಳನ್ನಾಗಿ ತೆಗೆದುಕೊಳ್ಳುತ್ತಾರೆ? ಎಲ್ಲರಂತೆಯೇ ನಾವೂ ಅಕ್ಷರ ಕಲಿಯಬೇಕು, ಪ್ರಗತಿ ಹೊಂದಬೇಕು, ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂಬ ಆಸೆಯೇ ಇಲ್ಲವೆ? ಅಧುನಿಕ ಶಿಕ್ಷಣ ಪಡೆದ ಕಲಾಂ, ಜಾವೇದ್ ಅಖ್ತರ್, ಹಮೀದ್ ಅವರಿಗಿಂತ ಧರ್ಮದ ಅಮಲಿನಲ್ಲಿ ಅಂಧರಾಗಿರುವವರ ಮಾತುಗಳೇ ಏಕೆ ಇವರಿಗೆ ವೇದವಾಕ್ಯ ವಾಗುತ್ತವೆ?

ಏಕೆ ಈ ಪ್ರಶ್ನೆಯನ್ನು ಕೇಳಬೇಕಾಗಿದೆಯೆಂದರೆ, ಕಳೆದ ಆಗಸ್ಟ್ 9ರಂದು ಹೈದರಾಬಾದ್‌ನ ಪ್ರೆಸ್ ಕ್ಲಬ್‌ನೊಳಕ್ಕೆ ನುಗ್ಗಿದ ಆಲ್ ಇಂಡಿಯಾ ಮಜ್ಲೀಸ್ ಇತ್ತೆಹಾದುಲ್ ಮುಸಲ್ಮೀನ್(ಎಂಐಎಂ)ನ ಶಾಸಕರಾದ ಅಫ್ಸರ್ ಖಾನ್, ಅಹ್ಮದ್ ಪಾಶಾ ಹಾಗೂ ಮೋಜುಮ್ ಖಾನ್ ಅವರು ಕೈಗೆ ಸಿಕ್ಕಿದ ಕುರ್ಚಿ, ಹೂಗುಚ್ಛ, ಮೈಕ್‌ಗಳಿಂದ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಅವರ ಮೇಲೆ ಹಲ್ಲೆ ಮಾಡುವುದಕ್ಕೂ ಹೇಸಲಿಲ್ಲ. ಅಂತಹ ಹೀನ ಕೃತ್ಯವನ್ನು ಎಸಗಿದ ಮೇಲೂ ಧರ್ಮೋದ್ಧಾರಕ್ಕಾಗಿ ಮಾಡಿದ ಕಾರ್ಯವೆಂಬಂತೆ ಬೀಗಿದರು. ಸಾಲದೆಂಬಂತೆ ಕಳೆದ ಬುಧವಾರ ಕೋಲ್ಕತಾದಲ್ಲಿ ಬೀದಿಗಿಳಿದ 'ಆಲ್ ಇಂಡಿಯಾ ಮೈನಾರಿಟಿ ಫ್ರಂಟ್" ಎಂಬ ಸಂಘಟನೆಯ ಕಾರ್ಯಕರ್ತರು ತಸ್ಲಿಮಾ ನಸ್ರೀನ್ ಅವರನ್ನು ದೇಶದಿಂದ ಹೊರಹಾಕಬೇಕೆಂದು ಒತ್ತಾಯಿಸಿ ದಾಂಧಲೆ ನಡೆಸಿದ್ದಾರೆ. ಜೀವಾಪಾಯದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಬಂದಿಳಿದ ತಸ್ಲಿಮಾ ಅವರನ್ನು ಕೂಡಲೇ ರಾಜ್ಯದಿಂದ ಹೊರಹಾಕದಿದ್ದರೆ ಪ್ರತಿಭಟನೆ ಮಾಡುವುದಾಗಿ “ಅಲ್ ಇಂಡಿಯಾ ಮಿಲ್ಲಿ ಕೌನ್ಸಿಲ್" ಎಂಬ ಮತ್ತೊಂದು ಸಂಘಟನೆ ಬೆದರಿಕೆ ಹಾಕಿದ ಕಾರಣ ದಿಲ್ಲಿಗೆ ವರ್ಗಾಯಿಸಲಾಗಿದೆ!

ಏನಾಗಿದೆ ಇವರಿಗೆ? ಒಂದು ಹೆಣ್ಣಿನ ಮೇಲೆ ಆಕ್ರಮಣ ಮಾಡುವಂತೆ ಯಾವ ಧರ್ಮಗ್ರಂಥದಲ್ಲಿ ಹೇಳಿದೆ? ತಸ್ಲಿಮಾ ಅವರ 'ಲಜ್ಜಾ" ಅಥವಾ 'ದ್ವಿಖೋಂದಿತೋ"ಗಳಲ್ಲಿ ಇಸ್ಲಾಮ್‌ಗೆ ಅವಮಾನ ಮಾಡುವಂತಹದ್ದೇನಿದೆ? ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಬರೆದ ಮಾತ್ರಕ್ಕೆ ತಸ್ಲಿಮಾ ಅವರು ಇಸ್ಲಾಂ ವಿರೋಧಿಯಾಗುತ್ತಾರಾ? ಹಾಗಾದರೆ ಎಂ.ಎಫ್. ಹುಸೇನ್ ಅವರು ದುರ್ಗಾ ಮಾತೆ ಹುಲಿಯ ಜತೆ ಸಂಭೋಗದಲ್ಲಿ, ಗಣಪತಿಯ ನೆತ್ತಿಯ ಮೇಲೆ ಲಕ್ಷ್ಮಿ ನಗ್ನವಾಗಿ ನಿಂತಿರುವ ಹಾಗೆ, ಸೀತೆ ನಗ್ನವಾಗಿ ಹನುಮಂತನ ಬಾಲವನ್ನು ಅಪ್ಪಿಕೊಂಡಿರುವ, ಸರಸ್ವತಿ, ಪಾರ್ವತಿ ನಗ್ನವಾಗಿ ನಿಂತಿರುವ, ಗಂಗೆ ಮತ್ತು ಯಮುನೆ ನಗ್ನವಾಗಿ ನೀರಿನಲ್ಲಿ ವಿಶ್ರಮಿಸಿಕೊಳ್ಳುತ್ತಿರುವಂತೆ ಹಾಗೂ ಭಾರತ ಮಾತೆಯನ್ನು ಬೆತ್ತಲಾಗಿ ಚಿತ್ರಿಸಿದಾಗ ಹಿಂದೂಗಳ ಮನಸ್ಸಿಗೂ ಘಾಸಿಯಾಗಿರಲಿಲ್ಲವೆ?

ಡ್ಯಾನಿಶ್ ವ್ಯಂಗ್ಯಚಿತ್ರಕಾರಮಾಡಿದ್ದು ಧರ್ಮನಿಂದನೆಯಾಗುವುದಾದರೆ, ಎಂ.ಎಫ್.ಹುಸೇನ್ ಮಾಡಿದ್ದೂ ಹಿಂದೂ ಧರ್ಮದ ಅವಮಾನವನ್ನೇ ಅಲ್ಲವೆ? ಆರ್ಟ್‌ಗೂ, ಪೋರ್ನೋಗ್ರಫಿಗೂ ವ್ಯತ್ಯಾ ಸವೇ ಇಲ್ಲವೆ? ಎಂ.ಎಫ್. ಹುಸೇನ್ ವಿರುದ್ಧ ದೇಶಾದ್ಯಂತ 1250 ಪೊಲೀಸ್ ದೂರುಗಳನ್ನು ನೀಡಲಾಗಿದೆ, 7 ಕೋರ್ಟ್ ಮೊಕದ್ದಮೆಗಳನ್ನು ಹೂಡಲಾಗಿದೆ. ಇಷ್ಟಾಗಿಯೂ ಕೇರಳ ಸರಕಾರ ಕಳೆದ ಜೂನ್‌ನಲ್ಲಿ ಎಂ.ಎಫ್.ಹುಸೇನ್‌ಗೆ 'ರಾಜಾ ರವಿ ವರ್ಮ" ಪ್ರಶಸ್ತಿಯನ್ನು ಘೋಷಣೆ ಮಾಡಿದೆ! ಇದರ ವಿರುದ್ಧ ಯಾರೂ ಏಕೆ ಸೊಲ್ಲೆತ್ತುವುದಿಲ್ಲ? ಪರಧರ್ಮ ನಿಂದನೆ ಮಾಡಿದ ಎಂ.ಎಫ್. ಹುಸೇನ್ ವಿರುದ್ಧವೂ ಒಂದು ಫತ್ವಾ ಹೊರಡಿಸಬಹುದಲ್ಲವೆ? ಆದರೆ ಅಂತಹ ವ್ಯಕ್ತಿಯನ್ನೂ ಮುಸ್ಲಿಮರು ownಮಾಡಿಕೊಳ್ಳುತ್ತಿರುವುದೇಕೆ?

ಇಂತಹ Ghetto mentalityನ್ನು ಬಿಡುವುದು ಯಾವಾಗ?ಇಷ್ಟೆಲ್ಲಾ ಪ್ರಶ್ನೆ ಏಕೆಂದರೆ 2006, ಫೆಬ್ರವರಿ 14ರಂದು ನೀಡಿದ ತೀರ್ಪಿನಲ್ಲಿ ಕಡ್ಡಾಯವಾಗಿ ವಿವಾಹ ನೋಂದಣಿಯನ್ನು ಮಾಡಲೇಬೇಕು ಎಂದು ಸುಪ್ರಿಂ ಕೋರ್ಟ್ ಸೂಚಿಸಿರುವುದು ನಿಮಗೆ ತಿಳಿದಿರಬಹುದು. ಆದರೆ ತೀರ್ಪು ಹೊರಬಿದ್ದು 20 ತಿಂಗಳು ಕಳೆದರೂ ಹೆಚ್ಚಿನ ರಾಜ್ಯಗಳು ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಿಲ್ಲ. ಐದು ರಾಜ್ಯಗಳು ಕಡ್ಡಾಯಗೊಳಿಸಿದರೂ ಮುಸ್ಲಿಮರಿಗೆ ಮಾತ್ರ ಅವರ ಇಚ್ಛೆಗೆ ಬಿಟ್ಟಿವೆ! ಇದರಿಂದ ಕುಪಿತಗೊಂಡಿರುವ ಸುಪ್ರೀಂಕೋರ್ಟ್ ಇನ್ನು ಮೂರು ತಿಂಗಳೊಳಗೆ ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಬೇಕೆಂದು ಅಕ್ಟೋಬರ್ 26ರಂದು ಸೂಚನೆ ನೀಡಿದೆ.

ಆದರೆ 'ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್" ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ವಿರೋಧ ಯಾಕಾಗಿ? “ಮುಸ್ಲಿಮರಲ್ಲಿ ಬಂಧು-ಬಳಗದವರ ಸಮ್ಮುಖದಲ್ಲಿ ವಿವಾಹ ಕಾರ್ಯ ನಡೆಯುತ್ತದೆ. ಖಾಝಿಗಳು ವಿವಾಹ ಗಳನ್ನು ದಾಖಲಿಸಿಕೊಳ್ಳುತ್ತಾರೆ. ಹಾಗಾಗಿ ಕಾನೂನಿನಡಿ ನೋಂದಣಿ ಮಾಡಿಸುವ ಅಗತ್ಯವಿಲ್ಲ" ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಮಜಾಯಿಷಿ ಕೊಡುತ್ತಿದೆ. ಅಂದರೆ ಮುಸ್ಲಿಮರಲ್ಲಿ ಮಾತ್ರ ಜನರ ಸಮ್ಮುಖದಲ್ಲಿ ವಿವಾಹ ನಡೆಯುತ್ತದೆಯೆ? ಹಿಂದೂ ಮತ್ತು ಕ್ರಿಶ್ಚಿಯನ್ನರಲ್ಲಿ ವಿವಾಹ ಸಮಾರಂಭಗಳಿಗೆ ಜನರೇ ಬರುವುದಿಲ್ಲವೆ? ಖಾಝಿಗಳಂತೆ ದೇವಸ್ಥಾನ ಹಾಗೂ ಚರ್ಚ್‌ಗಳಲ್ಲಿ ನಡೆ ಯುವ ವಿವಾಹಗಳನ್ನೂ ದಾಖಲಿಸಿಕೊಳ್ಳಲಾಗುತ್ತದೆ. ಆದರೆ ಆಸ್ತಿಯಲ್ಲಿ ಸಮಪಾಲು, ವಿಚ್ಛೇದನೆ ನೀಡಿದರೆ ಜೀವನಾಂಶ ಮುಂತಾದ ಮಹಿಳಾ ಹಕ್ಕುಗಳನ್ನು ರಕ್ಷಿಸಲು, ವಂಚನೆ, ಬಾಲ್ಯವಿವಾಹಗಳನ್ನು ತಪ್ಪಿಸುವ ಸಲುವಾಗಿ ಸುಪ್ರೀಂಕೋರ್ಟ್ ಇಂತಹ ತೀರ್ಪು ನೀಡಿದೆ. ಹಾಗಿದ್ದರೂ ವಿರೋಧಿಸುತ್ತಿರುವುದೇಕೆ?

ಇಂತಹ ಸಂಕುಚಿತ ಮನಸ್ಥಿತಿಯಿಂದಾಗಿಯೇ 1972ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಸರಕಾರ ಏಕರೂಪದ ದತ್ತು ಸ್ವೀಕಾರ ಕಾಯಿದೆಯನ್ನು ಜಾರಿಗೆ ತರುವ ಸಲುವಾಗಿ ಸಂಸತ್ತಿನ ಮುಂದಿಟ್ಟಿದ್ದ ವಿಧೇಯಕವನ್ನು ಮುಸ್ಲಿಮರು ವಿರೋಧಿಸಿದ್ದರು! ದತ್ತು ತೆಗೆದುಕೊಳ್ಳುವುದು ಇಸ್ಲಾಮ್‌ನಲ್ಲಿ ನಿಷಿದ್ಧ. ಹಾಗಾಗಿ ಎಲ್ಲರಿಗೂ ಅನ್ವಯವಾಗುವಂತಹ ಕಾಯಿದೆಯನ್ನು ಜಾರಿಗೆ ತರಬಾರದು ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಾದಿಸಿತ್ತು. ಅಷ್ಟೇ ಅಲ್ಲ, ಸರಕಾರ ವಿಧೇಯಕವನ್ನೇ ಕೈಬಿಡುವಂತೆ ಮಾಡಿದ್ದರು. ಒಂದು ವೇಳೆ, ದತ್ತು ಸ್ವೀಕಾರ ಮಾಡುವುದು ಇಸ್ಲಾಂನಲ್ಲಿ ನಿಷಿದ್ಧ ಎನ್ನುವುದಾದರೆ ಮುಸ್ಲಿಮರು ದತ್ತು ತೆಗೆದು ಕೊಳ್ಳುವುದು ಬೇಡ. ದತ್ತು ತೆಗೆದುಕೊಳ್ಳಿ ಅಂತ ಯಾರೂ ಅವರ ಮೇಲೆ ಒತ್ತಡ ಹೇರುತ್ತಲೂ ಇಲ್ಲ. ಆದರೆ ದತ್ತು ಸ್ವೀಕಾರಕ್ಕೂ ಒಂದು ನೀತಿ-ನಿಯಮ ಹಾಕಿಕೊಡುವ ಕಾಯಿದೆಯೇ ಬೇಡ ಎಂದರೆ ಏನರ್ಥ? ಶಾಬಾನು ಪ್ರಕರಣದಲ್ಲೂ ಹೀಗೇ ಆಯಿತು. ಷರಿಯತ್ತನ್ನು ಅಡ್ಡತಂದು ಸುಪ್ರೀಂಕೋರ್ಟ್ ಆದೇಶವನ್ನೇ ಧಿಕ್ಕರಿಸಿದರು. ಆದರೆ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವುದೂ ತಪ್ಪು ಅಂತ ಯಾವ ಧರ್ಮವಾದರೂ ಹೇಳಲು ಸಾಧ್ಯವೆ?

ಆದರೆ ಹಕ್ಕು ಮತ್ತು ಸೌಲಭ್ಯಗಳ ವಿಷಯ ಬಂದಾಗ ಮಾತ್ರ ಸಂವಿಧಾನ ಬೇಕು ಎನ್ನುತ್ತಾರೆ! ಬಹುಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಇವರಿಗೆ ಮೀಸಲು ಬೇಕು. ಆದರೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೂ ಮೀಸಲು ನೀಡುವುದಿಲ್ಲ ಎನ್ನುತ್ತಾರೆ. ತೆರಿಗೆದಾರರ ಹಣದಲ್ಲಿ ಹಜ್ ಯಾತ್ರೆ ಮಾಡುವಾಗ ಇವರಿಗೆ ಧರ್ಮ ಅಡ್ಡಿಯಾಗುವುದಿಲ್ಲ, ಆದರೆ ಕರ್ತವ್ಯ ಪಾಲಿಸುವ ವಿಷಯ ಬಂದಾಗ ಧರ್ಮದತ್ತ ಬೊಟ್ಟು ಮಾಡುತ್ತಾರೆ. ಇಂತಹ ಸಂಕುಚಿತ ಮನಸ್ಥಿತಿಯನ್ನು ಬಿಡುವವರೆಗೂ ಮುಸ್ಲಿಮರ ಪ್ರಗತಿ ಸಾಧ್ಯವಿಲ್ಲ. ಅಷ್ಟಕ್ಕೂ ಮುಸ್ಲಿಮರಿಗಾಗಿಯೇ ಸೃಷ್ಟಿಯಾದ ಪಾಕಿಸ್ತಾನ ಅತ್ಯಂತ ಫಲವತ್ತಾದ ಭೂಭಾಗವನ್ನು ಹೊಂದಿದ್ದರೂ ಧರ್ಮಾಂಧತೆಯಿಂದಾಗಿ ಪ್ರಗತಿಯ ಹಾದಿಯನ್ನು ಹಿಡಿಯಲಿಲ್ಲ. ಪ್ರತಾತಂತ್ರ ವ್ಯವಸ್ಥೆಯೂ ಗಟ್ಟಿಯಾಗಿ ಬೇರೂರಲಿಲ್ಲ.

ಇಂತಹ ಉದಾಹರಣೆ ಕಣ್ಣಮುಂದೆ ಇದ್ದರೂ ಬುದ್ಧಿ ಕಲಿಯದೇ ಇದ್ದರೆ ಅದು ಆತ್ಮಘಾತಕ ಕೃತ್ಯವೇ ಸರಿ. ಅಂದಮಾತ್ರಕ್ಕೆ,ಯಾರೂ ಧರ್ಮಪಾಠ ಕಲಿಯಬೇಡಿ ಅಂತ ಹೇಳುತ್ತಿಲ್ಲ. ಆದರೆ ಧರ್ಮ ಅನ್ನುವುದು ನಂಬಿಕೆ, ವಿಶ್ವಾಸಕ್ಕೆ ಸೀಮಿತವಾಗಿರಬೇಕೇ ಹೊರತು ಪ್ರಗತಿಗೆ ಅಡ್ಡಿಯಾಗ ಬಾರದು. ಇವತ್ತು ಇಮ್ರಾನ್ ಖಾನ್ ಅವರಂತಹವರು ಆಕ್ಸ್‌ಫರ್ಡ್‌ನಂತಹ ವಿಶ್ವವಿದ್ಯಾಲಯದಲ್ಲಿ ಆಧುನಿಕ ಶಿಕ್ಷಣವನ್ನು ಪಡೆದಿದ್ದರಿಂದಲೇ ಅವರಲ್ಲಿ ಉದಾರತೆ, ಸಹಿಷ್ಣುತೆ ಮೈಗೂಡಿಕೊಂಡವು. ಅಂತಹ ಶಿಕ್ಷಣವನ್ನು ಪಡೆದಿದ್ದರಿಂದಲೇ ನಮ್ಮ ಕಲಾಂ, ಜಾವೇದ್ ಅಖ್ತರ್, ಶಬನಾ ಆಜ್ಮಿ, ಅಜೀಂ ಪ್ರೇಮ್‌ಜಿ, ಡಾ. ಯೂಸುಫ್ ಹಮೀದ್ ಮುಂತಾದವರು ಕಟ್ಟಾ ಮುಸ್ಲಿಮರಾದರೂ ಧರ್ಮಾಂಧರಾಗಲಿಲ್ಲ. ಇಂತಹವರು ಮದ್ರಾಸಾಗಳಿಗೆ ಹೋಗುವ ಮುಸ್ಲಿಮರಿಗೂ ಮಾದರಿಯಾಗಬೇಕು. ಇಲ್ಲದಿದ್ದರೆ ತಸ್ಲಿಮಾ ನಸ್ರೀನ್ ಅವರಂತಹ ಅಬಲೆ ಹೆಣ್ಣಿನ ಮೇಲೆಯೂ ಆಕ್ರಮಣ ಮಾಡುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X