ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಣ್ಣ, ತಾಕತ್ತಿದ್ದರೆ ಈಗ ಗ್ರಾಮವಾಸ್ತವ್ಯ ಮಾಡಣ್ಣ!

By Staff
|
Google Oneindia Kannada News


'ನಾನು ಯಾರೆಂದು ತೋರಿಸುತ್ತೇನೆ" ಅಂತ ನಿಮ್ಮ ತಂದೆಯವರು ಗುಡುಗಿದ್ದಾರಲ್ಲ, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಸಿಂಧ್ಯಾ, ಸಿದ್ದರಾಮಯ್ಯ, ಬೈರೇಗೌಡ, ನಂಜೇಗೌಡ, ಡಿ.ಬಿ. ಚಂದ್ರೇಗೌಡ. ಬಿ.ಎಲ್. ಶಂಕರ್ ಮುಂತಾದ ನಾಯಕರನ್ನೇ ಮಟ್ಟಹಾಕಿದ ದೇವೇಗೌಡರು ದಯಾನಾಯಕ್‌ಗಿಂತ ಒಳ್ಳೆಯ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂಬುದು ಜನರಿಗೆ ಯಾವತ್ತೋ ಗೊತ್ತಾಗಿದೆ ಸ್ವಾಮಿ! ಆದರೆ ಕರ್ನಾಟಕದ ಜನ ದಡ್ಡರಲ್ಲ. 1999ರಲ್ಲಿ ಜನ ನಿಮ್ಮ ಸಮಸ್ತ ಕುಟುಂಬದವರಿಗೆ ಯಾವ ಶಾಸ್ತಿ ಮಾಡಿದ್ದರು ಎಂಬುದು ಅಷ್ಟು ಬೇಗ ಮರೆತು ಹೋಯಿತಾ? ಅಪ್ಪ ಮತ್ತು ನೀವಿಬ್ಬರೂ ಮಕ್ಕಳು ಸೋತಿದ್ದು ಯಾರಿಗೂ ಗೊತ್ತಿಲ್ಲ ಅಂತ ಭಾವಿಸಿದ್ದೀರಾ?


ಕುಮಾರಸ್ವಾಮಿ ಅವರಿಗೆ ಕೆಲವು ಪ್ರಶ್ನೆಗಳು.. ಇಂಥದ್ದೊಂದು ಸವಾಲನ್ನು ಹಾಕಲೇಬೇಕಾಗಿದೆ. ಅಷ್ಟಕ್ಕೂ, ಅಧಿಕಾರ ಹಸ್ತಾಂತರದ ನಂತರವೂ ಗ್ರಾಮ ವಾಸ್ತವ್ಯವನ್ನು ಮುಂದುವರಿಸುತ್ತೇನೆ, ಸರಕಾರಕ್ಕೆ ವರದಿ ನೀಡುತ್ತೇನೆ ಅಂತ ಸ್ವತಃ ಕುಮಾರಸ್ವಾಮಿಯವರೇ ಹೇಳಿದ್ದರು. ಆದರೆ ಕುಮಾರಸ್ವಾಮಿಯವರಿಗೆ ಅವರು ಆಡಿದ್ದ ಮಾತುಗಳೇ ಮರೆತು ಹೋದಂತಿದೆ. ಅಷ್ಟು ಮಾತ್ರವಲ್ಲ, ಈ ಅಪ್ಪ-ಮಕ್ಕಳು ನಡೆದುಕೊಳ್ಳುತ್ತಿರುವ ರೀತಿ, ಆಡುತ್ತಿರುವ ಮಾತುಗಳು, ಹೇಳುತ್ತಿರುವ ಸುಳ್ಳುಗಳು ಇಡೀ ರಾಜ್ಯವೇ ತಲೆತಗ್ಗಿಸುವಂತೆ ಮಾಡಿವೆ. ಒಂದು ವೇಳೆ, ಕುಮಾರಸ್ವಾಮಿಯವರೇನಾದರೂ ಗ್ರಾಮವಾಸ್ತವ್ಯವನ್ನು ಮುಂದುವರಿಸಿದ್ದರೆ ತಮ್ಮ ಬಗ್ಗೆ ಜನ ಹೇಗೆ ಹೇಸಿಗೆ ಪಟ್ಟುಕೊಳ್ಳುತ್ತಿದ್ದಾರೆ ಎಂಬುದರ ನೇರ ಅರಿವು ಆಗುತ್ತಿತ್ತು.

ಆದರೆ ಅವರು ಕಳೆದ ಒಂದು ತಿಂಗಳಿನಿಂದ ಸದಾಶಿವನಗರದಲ್ಲಿರುವ ತಮ್ಮ ಸ್ನೇಹಿತರೊಬ್ಬರ ಗೆಸ್ಟ್ ಹೌಸ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಹಾಗಾಗಿ ಜನರ ಮನಸ್ಸಿನಲ್ಲಿ ಮೂಡಿರುವ ಕೆಲವು ಪ್ರಶ್ನೆಗಳನ್ನು ಅವರ ಮುಂದಿಡಬೇಕಾಗಿದೆ. ಕುಮಾರಸ್ವಾಮಿಯವರೇ, ಸತ್ಯ ನಗ್ನವಾಗಿ ಕಣ್ಣಮುಂದೆ ನಿಂತಿದ್ದರೂ ಸಾರ್ವಜನಿಕವಾಗಿ ಸುಳ್ಳು ಹೇಳುತ್ತಿದ್ದೀರಲ್ಲಾ ನಿಮಗೆ ಏನೂ ಅನಿಸುವುದಿಲ್ಲವೆ?

ಕಳೆದ 60ವರ್ಷಗಳ ಇತಿಹಾಸದಲ್ಲಿ ಕರ್ನಾಟಕಕ್ಕೆ ಅಪಖ್ಯಾತಿ ಬಂದಿದ್ದು ಎರಡೇ ಸಂದರ್ಭಗಳಲ್ಲಿ. ಒಂದು ಕರೀಂ ಲಾಲ ತೆಲಗಿಯ ಸ್ಟಾಂಪ್ ಪೇಪರ್ ಹಗರಣ ಬೆಳಕಿಗೆ ಬಂದಾಗ. ಆಗ ರಾಜ್ಯದ ಹಲವಾರು ರಾಜಕೀಯ ನಾಯಕರು, ಖ್ಯಾತನಾಮ ಪೊಲೀಸ್ ಅಧಿಕಾರಿಗಳು, ಕೆಲವು ಪತ್ರಕರ್ತರ ಹೆಸರೂ ಕೇಳಿಬರುವ ಮೂಲಕ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿತ್ತು. ಇಂದು ಅದೇ ನಕಲಿ ಸ್ಟಾಂಪ್ ಪೇಪರ್ ಮೇಲೆ 12 ಸೂತ್ರಗಳನ್ನಿಟ್ಟು ಸಹಿ ಹಾಕಬೇಕೆಂದು ರಾಜ್ಯದ ಮುಖ್ಯಮಂತ್ರಿಯನ್ನು ಒತ್ತಾಯಿಸುವ ಮೂಲಕ ದೇವೇಗೌಡರು ಎರಡನೇ ಬಾರಿಗೆ ರಾಜ್ಯದ ಮರ್ಯಾದೆ ತೆಗೆದಿದ್ದಾರೆ. ಆದರೆ ಅಧಿಕಾರ ಲಾಲಸೆಗಾಗಿ ರಾಜ್ಯವನ್ನೇ ಒತ್ತೆಯಾಗಿಟ್ಟುಕೊಂಡಿದ್ದ ಈ ಅಪ್ಪ-ಮಕ್ಕಳಿಗೆ ಮಾನದ ಬೆಲೆಯೇ ಗೊತ್ತಿಲ್ಲವೆ?

ಕುಮಾರಸ್ವಾಮಿಯವರೇ, ನಿಮ್ಮ ಕುಟುಂಬದ ದುರಾಸೆಗಾಗಿ ಕರ್ನಾಟಕವನ್ನು ಬಿಹಾರ, ಉತ್ತರ ಪ್ರದೇಶ, ಗೋವಾ ಮಟ್ಟಕ್ಕೆ ಇಳಿಸಲು ನಿಮಗೆ ಮನಸ್ಸಾದರೂ ಹೇಗೆ ಬಂತು? ನಿಮ್ಮ ಕುಟುಂಬಕ್ಕೆ ವಾಗ್ದಾನದ ಮಹತ್ವವೇ ಗೊತ್ತಿಲ್ಲವೆ? ಬಿಜೆಪಿಯನ್ನು ಕೋಮುವಾದಿ ಎನ್ನುವುದಾದರೆ, ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದು ತಪ್ಪು ಎಂಬುದು 20 ತಿಂಗಳು ಅಧಿಕಾರ ಸವಿದ ನಂತರ ಗೊತ್ತಾಯಿತೆ? ಒಂದು ವೇಳೆ, ಕೊನೆಗೂ ಅರಿವಾಯಿತು ಎನ್ನುವುದಾದರೂ ಮೈತ್ರಿ ಮುರಿದು ಬಿದ್ದ ನಂತರ ಮತ್ತೆ ಮರುಮೈತ್ರಿಗೆ ಮುಂದಾಗಿದ್ದೇಕೆ? ನಿಮ್ಮಿಂದಾಗಿ ಬಿಜೆಪಿಗೆ 20 ತಿಂಗಳಾದರೂ ಅಧಿಕಾರದ ರುಚಿ ಸಿಕ್ಕಿತು ಎನ್ನುತ್ತಿದ್ದೀರಲ್ಲಾ, ಯಾವ ರಾಜಕೀಯ ಅನುಭವವೂ ಇಲ್ಲದ ಹಾಗೂ ಮೊದಲ ಬಾರಿಗೆ ಶಾಸಕರಾಗಿದ್ದ ನೀವು ಏಕಾಏಕಿ ಮುಖ್ಯ ಮಂತ್ರಿಯಾಗಿದ್ದೇ ಬಿಜೆಪಿ ಬೆಂಬಲದಿಂದ ಅಲ್ಲವೆ?

ಪುಕ್ಕಟೆ ಅಧಿಕಾರ ಸಿಕ್ಕಿದ್ದು ನಿಮಗೋ ಜನಬೆಂಬಲ ಹೊಂದಿದ್ದ 79 ಶಾಸಕರ ಬಿಜೆಪಿಗೋ? ಇಷ್ಟಾಗಿಯೂ ನೀವು ಮೈತ್ರಿ ಮಾಡಿಕೊಂಡಿದ್ದರಿಂದಾಗಿಯೇ ಬಿಜೆಪಿ ಚೂರಾಗುವುದು ತಪ್ಪಿತು ಎಂದು ಮೈತ್ರಿ ಮುರಿಯುವಾಗ ಹೇಳಿದ್ದ ನೀವೂ ಕೂಡ ಜೆಡಿಎಸ್ ಚೂರಾಗುತ್ತದೆ ಎಂಬ ಭಯದಿಂದಲೇ ಅಲ್ಲವೆ ಮತ್ತೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಓಡಿ ಬಂದಿದ್ದು? ಆಗ ಎಲ್ಲಿ ಹೋಗಿತ್ತು ನಿಮ್ಮ ಆತ್ಮಸಾಕ್ಷಿ? ಎಂ.ಪಿ. ಪ್ರಕಾಶ್ ಅವರು ಎಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸುತ್ತಾರೋ ಎಂಬ ಭಯವೇ ಅಲ್ಲವೆ ಬಿಜೆಪಿಗೆ ನೀವು ಭೇಷರತ್ ಬೆಂಬಲ ವ್ಯಕ್ತಪಡಿಸುವಂತೆ ಮಾಡಿದ್ದು? ರಾಜ್ಯಪಾಲರು, ರಾಷ್ಟ್ರಪತಿಗಳ ಮುಂದೆ ಖುದ್ದು ಹಾಜರಾಗಿ ಪ್ರಮಾಣಪತ್ರ ನೀಡಿ, ವಾರದೊಳಗೆ ಬಣ್ಣ ಬದಲಾಯಿಸುತ್ತೀರಲ್ಲಾ ನಿಮಗೂ ಆ ಊಸರವಳ್ಳಿಗೂ ವ್ಯತ್ಯಾಸವೇ ಇಲ್ಲವೆ?

“ನಾನು ಅಷ್ಟು ಕಷ್ಟಪಟ್ಟು ಪಕ್ಷ ಕಟ್ಟಿದೆ, ಉಳಿಸಿದೆ, ಕೈಯಲ್ಲಿದ್ದ ಹಣವನ್ನೂ ಕಳೆದುಕೊಂಡೆ" ಅಂತ ಮೊನ್ನೆ ಅರಮನೆ ಮೈದಾನದಲ್ಲಿ ದೇವೇಗೌಡರು ಹಳೇ ಪುರಾಣ ಹೇಳಿದ್ದಾರೆ. ಅಂದಮಾತ್ರಕ್ಕೆ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಂತೆ ದೇವೇಗೌಡ ರೇನು ಶುದ್ಧಹಸ್ತರೇ? ಮೋರಿ ಕಟ್ಟುತ್ತಿದ್ದ ದೇವೇಗೌಡರು ಇವತ್ತು ಪದ್ಮನಾಭ ನಗರದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಮನೆಗಳ ಅಧಿಪತಿಯಾಗಿದ್ದಾರಲ್ಲಾ ದುಡ್ಡು ಎಲ್ಲಿಂದ ಬಂತು ಕುಮಾರಸ್ವಾಮಿಯವರೇ? ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಿಂದಲೇ ಬಂದಿರುವ ನಿಮಗೆ ಸ್ವಂತ ಚಾನೆಲ್ ಪ್ರಾರಂಭವಿಸುವಷ್ಟು ತಾಕತ್ತು ಬಂದಿದ್ದಾದರೂ ಹೇಗೆ? ವ್ಯಾಪಾರ, ವಹಿವಾಟು ಮಾಡಿ ಹಣ ಗಳಿಸಿದಿರೋ ಅಥವಾ ರಾಜಕೀಯವನ್ನೇ ದಂಧೆ ಮಾಡಿಕೊಂಡಿದ್ದೀರೋ? ಇಡೀ ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಕೃಷಿ ಭೂಮಿ ಅನ್ಯರ ಪಾಲಾಗಿದ್ದು ನಿಮ್ಮ ಕಾಲದಲ್ಲಿಯೇ ಅಲ್ಲವೆ?

ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ಸಣ್ಣ ಹಿಡುವಳಿದಾರರು, ಭೂಮಿಯೇ ಇಲ್ಲದವರು ಗುತ್ತಿಗೆ ಬೇಸಾಯ ಮಾಡುತ್ತಾರೆ. ಅಂದರೆ ಭೂಮಿಯ ಒಡೆಯರಿಗೆ ವರ್ಷಕ್ಕೆ ಇಂತಿಷ್ಟು ಕ್ವಿಂಟಾಲ್ ಭತ್ತ, ರಾಗಿ ನೀಡುತ್ತೇನೆಂಬ ವಾಗ್ದಾನ ಮಾಡುವ ಮೂಲಕ ಬೇಸಾಯ ಮಾಡುತ್ತಾರೆ. ಕಟಾವಿನ ನಂತರ ಫಸಲು ಕಡಿಮೆಯಾದರೂ ಮಾತಿಗೆ ತಪ್ಪದೆ ಹೇಳಿದಷ್ಟು ಭತ್ತ, ರಾಗಿ ನೀಡುತ್ತಾರೆ. ಇಲ್ಲಿ ಭೂಮಾಲೀಕರು ಹಾಗೂ ಬೇಸಾಯಗಾರರ ನಡುವೆ ಯಾವ ಲಿಖಿತ ಒಪ್ಪಂದಗಳೂ ಆಗಿರುವುದಿಲ್ಲ. ಬಾಂಡ್ ಪೇಪರ್ ಮೇಲೆ ಬರೆಸಿಕೊಂಡಿರುವುದೂ ಇಲ್ಲ. ಆದರೂ ಮಾತು ಉಳಿಸಿಕೊಳ್ಳುತ್ತಾರೆ. ಭೂಮಾಲೀಕರೂ ಅಷ್ಟೇ, ಬೆಳೆ ಫಸಲಿಗೆ ಬಂದ ಕೂಡಲೇ ಕುಡುಗೋಲು ಹಿಡಿದುಕೊಂಡು ಬರುವುದಿಲ್ಲ. ಇಂತಹ ಪರಸ್ಪರ ವಿಶ್ವಾಸದಿಂದಲೇ ಇವತ್ತಿಗೂ ಗುತ್ತಿಗೆ ಬೇಸಾಯ ನಡೆಯುತ್ತಿದೆ. ಇಂತಹ ಒಕ್ಕಲು ಹಿನ್ನೆಲೆಯಿಂದ ಬಂದಿದ್ದರೂ ಕೊಟ್ಟ ಮಾತನ್ನೇ ಮರೆಯುವ ನೀವು ನಿಜವಾಗಿಯೂ ಮಣ್ಣಿನ ಮಕ್ಕಳಾ? ಎಸ್‌ಇಝೆಡ್ ಹೆಸರಿನಲ್ಲಿ ಒಕ್ಕಲು ಭೂಮಿಯನ್ನೇ ಖಾಸಗಿ ಕಂಪನಿಗಳಿಗೆ ಧಾರೆ ಎರೆದ ನಿಮ್ಮ ನಿಜಬಣ್ಣ ಯಾರಿಗೂ ಗೊತ್ತಿಲ್ಲ ಅಂತ ಭಾವಿಸಿದ್ದೀರಾ? ಅಲ್ಲಾ ಸ್ವಾಮಿ, ನಿಮ್ಮ ಕುಟುಂಬದ ಅಧಿಕಾರದಾಸೆಗಾಗಿ ರಾಜ್ಯವನ್ನೇ ಒತ್ತೆಯಾಗಿಟ್ಟುಕೊಳ್ಳಲು ನಿಮಗೆ ಅಧಿಕಾರ ಕೊಟ್ಟವರಾರು?

ಸಾರ್ವಜನಿಕವಾಗಿ ಇಷ್ಟೊಂದು 'ನಿಜ" ಹೇಳುತ್ತೀರಲ್ಲಾ ನಿಮಗೆ ಮುಜುಗರವೇ ಆಗುವುದಿಲ್ಲವಾ? ಅದಿರಲಿ, ಮುಖ್ಯಮಂತ್ರಿಯಾಗುವ ಅರ್ಹತೆ ಯಡಿಯೂರಪ್ಪನವರಿಗಿಲ್ಲ ಅಂತ ದೇವೇಗೌಡರು ಹೇಳಿದ್ದರಲ್ಲಾ, 21ತಿಂಗಳ ಹಿಂದೆ ಮುಖ್ಯಮಂತ್ರಿಯಾಗುವ ಮೊದಲು ನೀವೇನು ಸಾಬೀತು ಮಾಡಿದ್ರಿ? ಒಬ್ಬ ಚಲನಚಿತ್ರ ನಿರ್ಮಾಪಕ, ಹಂಚಿಕೆದಾರನಾಗಿದ್ದ ನಿಮಗೆ ರಾಜಕೀಯದಲ್ಲಿ ಯಾವ ಅನುಭವ ಇತ್ತು? ಮೊನ್ನೆ ಮರುಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬಾಂಡ್ ಪೇಪರ್‌ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹಿ ಹಾಕುವುದಿಲ್ಲ, ಬೇಕಾದರೆ ಪಕ್ಷದ ಅಧ್ಯಕ್ಷರಾದ ಸದಾನಂದ ಗೌಡ ಅವರು ಸಹಿ ಹಾಕುತ್ತಾರೆ ಎಂದು ಬಿಜೆಪಿ ಸ್ಪಷ್ಟವಾಗಿ ಹೇಳಿದಾಗ, 'ಅಪ್ಪನನ್ನು ಕೇಳಿಕೊಂಡು ಬರುತ್ತೇನೆ" ಎಂದು ಪರಾರಿಯಾದ ನಿಮಗೆ ಸ್ವಂತ ಬುದ್ಧಿಯೇ ಇರಲಿಲ್ಲವೆ?

ನಿಮಗೆ ಹಣಕಾಸು ಖಾತೆ ನೀಡುತ್ತೇವೆ, ಗಣಿ, ನಗರಾಭಿವೃದ್ಧಿ, ಲೋಕೋಪಯೋಗಿ ಹಾಗೂ ವಿದ್ಯುತ್ ಖಾತೆಗಳನ್ನು ನಮಗೇ ನೀಡಬೇಕು ಎಂದು ಬಿಜೆಪಿ ಜತೆ ಒಳಗೊಳಗೇ ಡೀಲ್ ಮಾಡಿಕೊಳ್ಳುವಾಗ ಎಲ್ಲಿ ಅಡಗಿ ಕುಳಿತಿತ್ತು ನಿಮ್ಮ ಪ್ರಾಮಾಣಿಕತೆ? ನಿಮ್ಮ ಹಿರಿಯ ಸಹೋದರ ರೇವಣ್ಣನವರಿಗೆ ಯಾವ ಸರಕಾರ ಬಂದರೂ ಲೋಕೋಪಯೋಗಿ ಹಾಗೂ ವಿದ್ಯುತ್ ಖಾತೆಗಳೇ ಏಕೆ ಬೇಕು? ಕುಳಿತಲ್ಲಿಗೇ ಕಪ್ಪಕಾಣಿಕೆ ಬರುತ್ತದೆ ಎಂದೋ? ಲೋಕೋಪಯೋಗಿ ಖಾತೆ ಸಿಕ್ಕಿದರೆ ನಿರಾಯಾಸವಾಗಿ ರಸ್ತೆಗಳನ್ನೇ ನುಂಗಬಹುದು ಎಂದೇ? ನಗರಾಭಿವೃದ್ಧಿ ಖಾತೆ ಬೇಕೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದು ಕಪ್ಪಕಾಣಿಕೆ ಕೊಡಲೊಪ್ಪದ ಖೇಣಿಯವರನ್ನು ಹಣಿಯುವುದಕ್ಕಾಗಿಯೇ? ಇನ್ನು ನಿಮಗೆ ಗಣಿ ಖಾತೆಯೇ ಏಕೆ ಬೇಕು?

'ನಾನು ಯಾರೆಂದು ತೋರಿಸುತ್ತೇನೆ" ಅಂತ ನಿಮ್ಮ ತಂದೆಯವರು ಗುಡುಗಿದ್ದಾರಲ್ಲ, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಸಿಂಧ್ಯಾ, ಸಿದ್ದರಾಮಯ್ಯ, ಬೈರೇಗೌಡ, ನಂಜೇಗೌಡ, ಡಿ.ಬಿ. ಚಂದ್ರೇಗೌಡ. ಬಿ.ಎಲ್. ಶಂಕರ್ ಮುಂತಾದ ನಾಯಕರನ್ನೇ ಮಟ್ಟಹಾಕಿದ ದೇವೇಗೌಡರು ದಯಾನಾಯಕ್‌ಗಿಂತ ಒಳ್ಳೆಯ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂಬುದು ಜನರಿಗೆ ಯಾವತ್ತೋ ಗೊತ್ತಾಗಿದೆ ಸ್ವಾಮಿ! ಆದರೆ ಕರ್ನಾಟಕದ ಜನ ದಡ್ಡರಲ್ಲ. 1999ರಲ್ಲಿ ಜನ ನಿಮ್ಮ ಸಮಸ್ತ ಕುಟುಂಬದವರಿಗೆ ಯಾವ ಶಾಸ್ತಿ ಮಾಡಿದ್ದರು ಎಂಬುದು ಅಷ್ಟು ಬೇಗ ಮರೆತು ಹೋಯಿತಾ? ಅಪ್ಪ ಮತ್ತು ನೀವಿಬ್ಬರೂ ಮಕ್ಕಳು ಸೋತಿದ್ದು ಯಾರಿಗೂ ಗೊತ್ತಿಲ್ಲ ಅಂತ ಭಾವಿಸಿದ್ದೀರಾ?

ನಿಮ್ಮ ತಂದೆಯವರನ್ನು ಕಳೆದ ಚುನಾವಣೆಯಲ್ಲೂ ಕನಕಪುರದ ಮತದಾರರು ಸೋಲಿಸಿದ್ದಾರೆ ಎಂಬುದು ನೆನಪಿಲ್ಲವೆ? ಕಾವೇರಿ ನ್ಯಾಯ ಮಂಡಳಿ ತೀರ್ಪು ಹೊರಬಿದ್ದು ಇಡೀ ರಾಜ್ಯಕ್ಕೇ ಅನ್ಯಾಯವಾದಾಗ, ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರಿದಾಗ ಬೆಂಗಳೂರಲ್ಲೇ ನಿಶ್ಚಿಂತೆಯಿಂದ ಮಲಗಿದ್ದ ದೇವೇಗೌಡರು ಮೊನ್ನೆ ಇದ್ದಕ್ಕಿದ್ದಂತೆ ಸಂಸತ್ತಿಗೆ ಹೋಗಿದ್ದೇಕೆ? ಮಗನ ವಚನ ಭ್ರಷ್ಟತೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿಯೇ ಅಲ್ಲವೆ? ಕಳೆದ ಮೂರು ವರ್ಷಗಳಲ್ಲಿ ಎಂದಾದರೂ ಸಂಸತ್ತಿನಲ್ಲಿ ದೇವೇಗೌಡರ ಧ್ವನಿ ಕೇಳಿ ಬಂದಿತ್ತಾ?

ಅದಿರಲಿ, ಟೀವಿ ಕ್ಯಾಮೆರಾಗಳ ಮುಂದೆ ನಿಂತುಕೊಂಡು, 'ಕೇಶವಕೃಪ" ಅಂತ ಬಿಜೆಪಿಯವರನ್ನು ಹೀಯಾಳಿಸಿದಿರಲ್ಲಾ, ಪದ್ಮನಾಭನಗರ ನಿಮ್ಮ ಗರ್ಭಗುಡಿಯಲ್ಲವೆ? “ನಾನು ಜಾತಿಯಿಂದ ಯಾರನ್ನೂ ಗುರುತಿಸಲಿಲ್ಲ. ಆ ರೀತಿ ಮಾಡಿದ್ದರೆ ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗುತ್ತಿರಲಿಲ್ಲ. ವೀರಶೈವ ಮಠಾಧೀಶರು ರಾಜಕೀಯದಲ್ಲಿ ತಲೆ ಹಾಕುವುದನ್ನು ಬಿಡಬೇಕು" ಅಂತ ನಾಡಿನ ಗೌರವಕ್ಕೆ ಪಾತ್ರರಾಗಿರುವ ಸಿದ್ಧಗಂಗಾ ಶ್ರೀಗಳಿಗೇ ಬುದ್ಧಿ ಹೇಳಲು ಹೊರಟಿದ್ದೀರಲ್ಲಾ ನಿಮಗೇನೆನ್ನಬೇಕೆಂಬುದೇ ರಾಜ್ಯದ ಜನತೆಗೆ ತಿಳಿಯುತ್ತಿಲ್ಲ. ಈ ರಾಜ್ಯದಲ್ಲಿ ವೀರಶೈವರು ಒಕ್ಕಲಿಗರಷ್ಟೆ ಪ್ರಭಾವಿ ಸಮುದಾಯ. ಆ ಸಮುದಾಯದ ಗೌರವಕ್ಕೆ ಭಾಜನರಾಗಿರುವ ಮಠಾಧೀಶರು ಅನ್ಯಾಯದ ವಿರುದ್ಧ ಧ್ವನಿಯೆತ್ತಿದರೆ ಅವರ ಬಾಯಿ ಮುಚ್ಚಿಸುತ್ತೀರಾ? ನಿಮಗೆ ಜಾತಿ ಮುಖ್ಯವಲ್ಲ ಅನ್ನುವುದಾದರೆ ಹಾಸನ, ಹೊಳೆನರಸೀಪುರ, ರಾಮನಗರ, ಕನಕಪುರಗಳಲ್ಲೇ ಏಕೆ ಚುನಾವಣೆಗೆ ಸ್ಪರ್ಧಿಸುತ್ತೀರಿ?

ಕುಮಾರಸ್ವಾಮಿಯವರೇ ಒಮ್ಮೆ ನೆನಪಿಸಿಕೊಳ್ಳಿ 21 ತಿಂಗಳ ಹಿಂದೆ ಸರಕಾರ ರಚಿಸುವಾಗ ನಿಮ್ಮ ಜತೆಗೆ ಯಾರ್‍ಯಾರಿದ್ದರೆಂಬುದನ್ನು. ನಿಮ್ಮ ಹೆಗಲಿಗೆ ಹೆಗಲು ಕೊಟ್ಟ ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಸಂತೋಷ್ ಲಾಡ್, ಬಿ.ಸಿ. ಪಾಟೀಲ್ ಮುಂತಾದ ಶಾಸಕ ಸ್ನೇಹಿತರು ಈಗ ಎಲ್ಲಿಗೆ ಹೋದರು? ಯಡಿಯೂರಪ್ಪನವರಂತೂ ನಿಮ್ಮ ಮಿತ್ರರಲ್ಲ ಬಿಡಿ. ಆದರೆ ಈ ಎಲ್ಲ ನಿಮ್ಮ ಶಾಸಕ ಮಿತ್ರರನ್ನೂ ನಿಮ್ಮ ಜತೆಗೆ ಇಟ್ಟುಕೊಳ್ಳಲು ಆಗಲಿಲ್ಲವಲ್ಲ. ಇದು ಮಿತ್ರದ್ರೋಹವಲ್ಲವೆ? ಯಡಿಯೂರಪ್ಪನವರಿಗೆ ಮೋಸಮಾಡಿದ ಮಾತು ಹಾಗಿರಲಿ, ಮನಸ್ಸು ಮಾಡಿದ್ದರೆ ನಿಮ್ಮ ಪಕ್ಷದ 40 ಮಂದಿಯನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಅವರಿಗೂ ಪಂಗನಾಮ ಹಾಕಿದರಲ್ಲಾ. ಇಷ್ಟೆಲ್ಲಾ ಮಾಡಿ ನೀವು ಸಾಧಿಸಿದ್ದಾದರೂ ಏನು?

ಕುಮಾರಣ್ಣ, ನಿಮಗಿಂತಲೂ ಬಹಳ ಚಿಕ್ಕ ವಯಸ್ಸಿಗೆ ಅಸ್ಸಾಮ್‌ನ ಮುಖ್ಯಮಂತ್ರಿಯಾಗಿದ್ದ ಪ್ರಫುಲ್ ಕುಮಾರ್ ಮಹಂತ ಅವರ ದುರಂತ ಕಥೆ ಗೊತ್ತಿಲ್ಲವೆ? ಅವರೇ ಕಟ್ಟಿದ ಪಕ್ಷದ ಕಚೇರಿಗೆ ಕಾಲಿಡದಂತೆ ಮಹಂತ ವಿರುದ್ಧ ಫರ್ಮಾನು ಹೊರಡಿಸಿರುವುದು ತಿಳಿದಿಲ್ಲವೆ? ಸಂಘಮಿತ್ರಾ ಭರಾಲಿ ಎಂಬ ಹೆಣ್ಣಿನ ಹಿಂದೆ ಬಿದ್ದು ಹಾಳಾದ ಮಹಂತ ಚರಿತೆ ನೆನಪಿಸಿಕೊಳ್ಳಿ, ನೀವೆಲ್ಲಿದ್ದೀರೆಂಬುದು ತಿಳಿಯುತ್ತದೆ.ದಯವಿಟ್ಟು ಉತ್ತರಿಸಿ, ರಾಜ್ಯದ ಜನತೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X