ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಾಣಿ ಕಾಳಿನಷ್ಟು ಬದಲಾವಣೆ ತಂದಿದ್ದೇನೆ

By ಪ್ರಸಾದ ನಾಯಿಕ
|
Google Oneindia Kannada News

(ಮಾಸ್ಟರ್ ಹಿರಣ್ಣಯ್ಯ ಸಂದರ್ಶನದ 2ನೇ ಭಾಗ)

ಒನ್ಇಂಡಿಯಾ : ಅಲ್ಲಿಂದ ಇಲ್ಲಿಯವರೆಗೆ ಭ್ರಷ್ಟಾಚಾರದ ಸ್ವರೂಪವೂ ಬದಲಾದಂತೆ ಲಂಚಾವತಾರ ನಾಟಕ ಕೂಡ ಎಷ್ಟು ಸ್ವರೂಪ ಪಡೆದುಕೊಂಡಿದೆ?

ಹಿರಣ್ಣಯ್ಯ : ಈ ಅರವತ್ತು ವರ್ಷಗಳಲ್ಲಿ ಹನ್ನೊಂದು ಸಾವಿರ ಪ್ರದರ್ಶನವನ್ನು ಕಂಡಿದೆ. ಸಮಾಜ, ರಾಜಕೀಯ ವ್ಯವಸ್ಥೆ ಬದಲಾದಂತೆಲ್ಲ ನಾಟಕವೂ ಬದಲಾಗಲೇಬೇಕಾಗಿತ್ತು. ಪ್ರತಿಹಂತದಲ್ಲೂ ಬದಲಾವಣೆ ಮಾಡಿದ್ದೀನಿ ಅಂತ ಹೇಳುವ ಧೈರ್ಯ ನನ್ನಲ್ಲಿಲ್ಲ. ಆದರೆ, ಏಳೆಂಟು ಸಾವಿರ ಬದಲಾವಣೆಗಳನ್ನಾದರೂ ಕಂಡಿದೆ.

Nataratnakara Master Hirannaiah interview part 2

ಒನ್ಇಂಡಿಯಾ : ಈ ನಾಟಕ ಲಂಚ ತೆಗೆದುಕೊಳ್ಳುವವರ ಮೇಲೆ ಅಥವಾ ಸಮಾಜದ ಮೇಲೆ ಪರಿಣಾಮ ಬೀರಿದೆಯಾ? ಪರಿಣಾಮ ಬೀರಲೆಂದೇ ನೀವು ಈ ನಾಟಕ ಆಡುತ್ತಿದ್ದಿರಾ ಅಥವಾ ಬರೀ ಮನರಂಜನೆಗಾಗಿ ಲಂಚಾವತಾರ ನಾಟಕ ಆಡುತ್ತಿದ್ದಿರಾ?

ಹಿರಣ್ಣಯ್ಯ : ಈ ಮೂರು ಅಂಶಗಳನ್ನೂ ಒಂದುಗೂಡಿಸಿ ಹೇಳಬೇಕೆಂದರೆ, ಈ ನಾಟಕದಿಂದ ನಾನು ಲೆಜೆಂಡ್ ಆಗಬೇಕು ಅಥವಾ ಪರಿಣಾಮ ಬೀರಬೇಕು ಎಂದೇನೂ ಅಂದುಕೊಂಡಿಲ್ಲ. ನೋಡಿ, ಸಕ್ಸಸ್ ಹ್ಯಾಸ್ ಮೆನಿ ಫಾದರ್ಸ್. ಆದರೆ, ಫೇಲ್ಯೂರ್ ಹ್ಯಾಸ್ ನನ್ ಅಂತ ಮಾತಿದೆ. ನೋಡಿ 1959ರಲ್ಲಿ ನಮ್ಮ ಕಂಪನಿಗೆ ದಾರಿದ್ರ್ಯ ಬಂದುಬಿಟ್ಟಿತು. ಗಳಿಕೆ ಮೂರಂಕಿ ಹೋಗಿ ಎರಡಂಕಿಗೆ ಬಂದುಬಿಟ್ಟಿತ್ತು. ದಿನಕ್ಕೆ ಇಪ್ಪತ್ತು ರುಪಾಯಿ ಕೂಡ ಹುಟ್ಟುತ್ತಿರಲಿಲ್ಲ. ನೆಸೆಸಿಟಿ ಈಸ್ ದಿ ಫಾದರ್ ಆಫ್ ಇನ್ವೆನ್ಷನ್ ಅಂತ ಹೇಳ್ತಾರೆ.

ಆಗ, 1954ರಿಂದ 1959ರಲ್ಲಿ ನನ್ನ ಹೊಟ್ಟೆಯೊಳಗೆ ಬಚ್ಚಿಟ್ಟಿದ್ದ ಲಂಚಾವತಾರವನ್ನು ನನ್ನ ಹೊಟ್ಟೆಪಾಡಿಗಾಗಿ ತೆಗೆದಿಡಬೇಕಾಯಿತು. ರಾಜಕಾರಣಿ, ಅಧಿಕಾರಿಗಳ ಲಂಚಾವತಾರದ ವಿರುದ್ಧದ ಜನರ ಮಾತನ್ನೇ ನಾನು ಆಡಲು ಪ್ರಾರಂಭಿಸಿದೆ. ಜನರು ಪ್ರೋತ್ಸಾಹ ನೀಡಲು ಪ್ರಾರಂಭಿಸಿದರು. ಗಳಿಕೆ ಏರಲು ಪ್ರಾರಂಭಿಸಿತು. ಇದು ಒಂದು ಭಾಗ. ಮತ್ತೊಂದು ಭಾಗ, ನಾನು ಆಡುತ್ತಿದ್ದ ಮಾತಿಗೆ ನಾನೇ ಹೊಣೆಗಾರನಾಗಬೇಕಾಯಿತು. ಅಂಥ ಸಂಸ್ಕಾರ ನನ್ನ ತಂದೆತಾಯಿ ಕೊಟ್ಟಿದ್ದರು. ನನ್ನಲ್ಲಿ ನಾನೇ ಅರಿವಿಲ್ಲದಂತೆ ವ್ಯಕ್ತಿತ್ವದಲ್ಲಿ ಶುದ್ಧತೆ ಮತ್ತು ಪರಿವರ್ತನೆ ತಂದುಕೊಂಡೆ.

ಇದರಿಂದ ಸಮಾಜದಲ್ಲಿ ಬದಲಾವಣೆ ಆಗಿದೆಯಾ ಎಂಬ ಪ್ರಶ್ನೆ ಕೇಳಿದಿರಿ. ಈ ಪ್ರಶ್ನೆಯನ್ನೇ ನಾನು ಅನೇಕ ಬಾರಿ ನಾನೇ ಕೇಳಿಕೊಂಡಿದ್ದೇನೆ. ಇಂದಿನ ಜೀವನದಲ್ಲಿ ಬದುಕಿಗೆ ಎಲ್ಲರಿಗೂ ನೆಸೆಸಿಟಿ ಇರುತ್ತದೆ. ಬದಲಾವಣೆಗೆ ನಾನು ಪ್ರೇರಕನಾದೆ ಅಂತ ಮಾತ್ರ ಹೇಳಬಲ್ಲೆ. ಸಮಾಜದ ಕೊಳಕನ್ನು ಕೆಟ್ಟ ಭಾಷೆಯಲ್ಲಿ ಚುಚ್ಚಿಚುಚ್ಚಿ ಹೇಳಿದೆ. ನನ್ನ ಬಳಿ ಅನೇಕರು ಹೇಳಿಕೊಂಡಿದ್ದಾರೆ. 'ನಾನು ತಗೊಳ್ಳೋದನ್ನ ಬಿಟ್ಟಿದ್ದೀನಿ, ಆದರೆ ಇತರರಿಗೆ ತಿನ್ನಿಸಬೇಕಲ್ಲ? ಹಾಗಾಗಿ ನನ್ನ ಬದುಕಿಗೆ ಎಷ್ಟು ಬೇಕೋ ಅಷ್ಟು ಮಾತ್ರ ತಗೋತೀನಿ. ಇಲ್ಲದಿದ್ದರೆ ನಾನು ಉಳಿಯಲ್ಲ' ಅಂತ ಹೇಳಿದ್ದಾರೆ. ಲಂಚ ತಗೊಳ್ಳೋದನ್ನು ಅಷ್ಟುಮಾತ್ರ ಕಡಿಮೆ ಮಾಡಿದ್ದಾರಲ್ಲ. ಅವರಲ್ಲಿ ಪುಟಾಣಿ ಕಾಳಿನಷ್ಟು ಬದಲಾವಣೆ ತಂದಿದ್ದೇನೆ ಎಂಬ ಸಮಾಧಾನವಿದೆ.

English summary
Nataratnakara Master Hirannaiah interview by Oneindia on the occasion of his 80th birthday on 15th February and 50th anniversary celebration of his masterpiece drama Lanchavatara. Hirannaiah spoke on variety of subjects ranging from drama, corruption to internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X