ಮಕ್ಕಳನ್ನು ಬೆಳೆಸೋದು ಅಂದ್ರೆ ತಮಾಷೆ ಅಲ್ಲರೀ!

ಉತ್ತಮ ಬದುಕು ಬದುಕುವುದು ಎಲ್ಲರಿಗೂ ಎಷ್ಟು ಇಷ್ಟವೋ, ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇ ಕಷ್ಟದ ಕೆಲಸ. ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ನಮ್ಮನ್ನು ಗೊಂದಲಕ್ಕೆ ತಳ್ಳುತ್ತದೆ. ಸಾರ್ಥಕ ಮತ್ತು ನಿರರ್ಥಕಗಳ ನಡುವಿನ ಸಣ್ಣ ಗೆರೆಯೇ ಈ ಬದುಕಾ? ಏನೋ ಒಂದು. ಅಂತೂ, ಈ ಜಗದಲ್ಲಿ ಬದುಕುತ್ತಿದ್ದೇವಾ? ಬದುಕಿನ ಜಟಕಾ ಬಂಡಿ ಹತ್ತಿ ಸುತ್ತು ಹೊಡೆಯೋಣ ಬನ್ನಿ. ಬದುಕಿನ ಬಗ್ಗೆ ಅರ್ಥ ಮಾಡಿಸುವ ಯಾವುದೇ ಪ್ರಯತ್ನಕ್ಕೆ ಕೈಹಾಕದೆ, ಅದರ ಪುಟಗಳನ್ನು ತೆರೆದಿಡುವ ಹೊಸ ಪ್ರಯತ್ನವೇ ಈ ಅಂಕಣ.

***
ಢಣಢಣ ಗಂಟೆ ಬಾರಿಸಿದೆ. ಮಕ್ಕಳಿಗೆ ಅಕ್ಷರ ಕಲಿಸಿ, ವಿದ್ಯಾವಂತರನ್ನಾಗಿ ಮಾಡುವ ವಿದ್ಯಾದೇಗುಲಗಳು ಬಾಗಿಲು ತೆರೆದಿವೆ. ರಜಾದಿನಗಳ ಮಂಪರಿನಲ್ಲಿ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿರುವ ಮಕ್ಕಳನ್ನು ಲಗುಬಗನೆ ಬೆಳಿಗ್ಗೆ ಎಬ್ಬಿಸಿ, ಹಲ್ಲುಜ್ಜಿಸಿ, ತಿಂಡಿ ತುರುಕಿಸಿ, ಸಮವಸ್ತ್ರ ಹಾಕಿ, ಬ್ಯಾಗು ಹೆಗಲೇರಿಸಿ ಶಾಲೆಗೆ ಅಟ್ಟುವ ಪಾಲಕರ ವಾರ್ಷಿಕ ಡ್ಯೂಟಿ ಆರಂಭವಾಗಿದೆ.[ಅನ್ನಿಸುತಿದೆ ಯಾಕೋ ಇಂದು, ಶಾಲೆ ಅಂದ್ರೆ ಗುಮ್ಮ ಎಂದು..!]

Bringing up the children is not just fun

ಬಿಳಿ ಅಂಗಿ, ನೀಲಿ ಚಡ್ಡಿ, ಕಪ್ಪು ಶೂಸು, ಕತ್ತಿಗೊಂದು ಟ್ಯಾಗು, ಹೆಗಲಿಗೇರಿದ ಬ್ಯಾಗಿನಲ್ಲಿ ಟಿಫಿನ್ ಬಾಕ್ಸ್ ಹಾಕಿಕೊಂಡು, ಪೌಡರ್ ಬಳಿದುಕೊಂಡು ಮೊದಲ ಬಾರಿಗೆ ಶಾಲೆ ಮೆಟ್ಟಿಲೇರಲು ಸಜ್ಜಾಗಿರುವ ಪುಟಾಣಿ ಮಗುವಿನ ಅಂದವನ್ನು ನೋಡುವ ಪರಿಯಿದೆಯಲ್ಲ, ಅದು ಪಾಲಕರಿಗೆ ಅಪ್ಯಾಯಮಾನ, ಜೀವನಪೂರ್ತಿ ಮರೆಯಲಾಗದಂಥ ಅನುಭೂತಿ.

ಅತ್ತ ಸಂತೋಷವೂ ಇಲ್ಲ, ಇತ್ತ ದುಃಖವೂ ಇಲ್ಲ, ಅತ್ತ ನಗುವೂ ಇಲ್ಲ, ಇತ್ತ ಅಳುವೂ ಇಲ್ಲ ಎಂಬಂತಹ ಮುಖ ಮಾಡಿಕೊಂಡು ನಿಂತ ಮಗುವಿನ ಗಲ್ಲಕ್ಕೆರಡು ಬೆಲ್ಲದಂತಹ ಮುತ್ತುಕೊಟ್ಟು, ನಡಿನಡಿ ಫಸ್ಟ್ ಡೇನೇ ಲೇಟ್ ಆಗಬಾರದು ಅಂತ ದುಡದುಡನೆ ಶಾಲೆ ತಲುಪಿದಾಗ ಅಲ್ಲಿ ಮಕ್ಕಳ ಸಾಮ್ರಾಜ್ಯ.

ಶಿಕ್ಷಕರಿಗೂ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಸಡಗರ. ಮೊದಲ ಬಾರಿ ಶಾಲೆಗೆ ಹೋಗ್ತಿದೆ ಮಗು, ಏನು ಮಾಡ್ತಾನೋ ಏನೋ, ಚಡ್ಡಿಯಲ್ಲೇ ಸುಸ್ಸು ಅಥವಾ ಕಕ್ಕ ಮಾಡಿಕೊಂಡ್ರೆ, ಪಾಪ ಇನ್ನೂ ಸರಿಯಾಗಿ ಮಾತಾಡೋಕೆ ಬರಲ್ಲ ಎಂಬ ದುಗುಡ ಪಾಲಕರಲ್ಲಿ. ಕೆಲ ಮಕ್ಕಳು ಪಿಕ್ನಿಗೆ ಹೋಗ್ತಿದ್ದೆವೇನೋ ಎಂಬಂತೆ ಕೆನೆದಾಡುತ್ತಿದ್ದರೆ, ಹೊರೋ ಎಂದು ಅಳುತ್ತಿದ್ದ ಮಗುವನ್ನು ಮಿಸ್ಸು ಬಲವಂತಾಗಿ ಎತ್ತಿಕೊಂಡು ಹೋಗುತ್ತಿದ್ದಾಗ ಅಮ್ಮನ ಕಣ್ಣಲ್ಲೂ ಆತಂಕದ ಕಂಬನಿ.

ಗುರುತು ಪರಿಚಯವಿಲ್ಲದಿದ್ದರೂ ಮಕ್ಕಳಿಗಾಗಿ ಕಾದು ಕುಳಿತ ಅಮ್ಮಂದಿರ ಮಾತುಕತೆಗಳು ಶುರು. ನಿಮ್ ಮಗಾನಾ ಮಗಳಾ, ಓಹೋ ಮಗಳಾ, ಇವ್ನಂತೂ ತುಂಬಾ ತರ್ಲೆ, ಏನ್ ಮಾಡ್ತಾನೋ ಏನೋ, ಇವ್ಳಂತೂ ಶಾಲೆಗೆ ಹೋಗಲ್ಲಾ ಹೋಗಲ್ಲ ಅಂತ ಒಂದೇ ಸವನೆ ಹಟ, ನಮ್ಮಗ ಪರವಾಗಿಲ್ಲ ಶಾಲೆ ಅಂದ್ಕೂಡ್ಲೆ ಕುಣಿದಾಡೋಕೆ ಶುರುಮಾಡಿದ್ದ, ಆದ್ರೇನ್ ಮಾಡ್ತೀರಾ ಇನ್ನೂ ಕ್ಲೀನ್ ಮಾಡ್ಕೊಳ್ಳೋಕೆ ಬರಲ್ಲ, ಅಲ್ಲಿ ನೋಡಿ ಆ ಮಗು ಎಷ್ಟು ಪುಟಾಣಿ ಇದೆ, ಅದೇನ್ ತಿನ್ನಿಸ್ತಾರೋ ಇಲ್ಲೋ, ಆ ಮಗುನ್ನ ನೋಡಿ, ಅದೇನ್ ತಿನ್ನಿಸ್ತಾರೋ ಏನೋ... ಇತ್ಯಾದಿ ಇತ್ಯಾದಿ.

Bringing up the children is not just fun

ಅಮ್ಮಂದಿರದು ಒಂದು ರೀತಿಯ ಮಾತುಕತೆಯಾದರೆ, ಅಪ್ಪಂದಿರದು ಮತ್ತೊಂದು ದಿಕ್ಕಿನೆಡೆಗೆ. ಇವ್ರ ಬರೀ ಬುಕ್ಸಿಗೇ ಸಾವಿರದ ನಾನೂರು ರುಪಾಯಿ, ನಾವಿದ್ದಾಗ ಹೀಗಿರಲಿಲ್ಲ, ನಾನೋದಿದ್ದು ಕನ್ನಡ ಮೀಡಿಯಮ್ಮು, ಬಾಲವಾಡಿಯಿಂದ ಎಸ್ಸೆಸ್ಸೆಲ್ಸಿವರೆಗೆ ಇಷ್ಟೊಂದು ದುಡ್ಡು ಕೂಡ ಖರ್ಚು ಮಾಡಿರಲಿಕ್ಕಿಲ್ಲ, ವರ್ಷಕ್ಕೇ ಇಷ್ಟಾದ್ರೆ ಓದು ಮುಗಿಯುವ ಹೊತ್ತಿಗೆ ಇನ್ನೆಷ್ಟೋ, ಕಾಲ ಮೊದಲಿನಂತಿಲ್ಲ ಬಿಡಿ ಸಾರ್, ಒಳ್ಳೆ ಎಜ್ಯುಕೇಷನ್ನು ಕೊಡಿಸಬೇಕಂದ್ರೆ ಹಣ ಖರ್ಚು ಮಾಡಲೇಬೇಕು, ಏನ್ ಮಾಡೋದು, ಅಯ್ಯೋ ಬಿಡಿ ಸಾರ್, ಇವ್ರ ಡೊನೇಷನ್ನು, ತಿಂಗಳು ಫೀಸು, ವ್ಯಾನ್ ದುಡ್ಡು, ಹಾಳುಮೂಳಿಗೆಲ್ಲ ಹಣ ಹೊಂದಿಸೋ ಹೊತ್ತಿಗೆ ಸಾಕುಸಾಕಾಗಿರತ್ತೆ...

ಮಕ್ಕಳನ್ನು ಮೊದಲ ಬಾರಿಗೆ ಶಾಲೆಯ ಮೆಟ್ಟಿಲನ್ನು ಹತ್ತಿಸಿ, ಕಾಲೇಜು ಓದಿಸಿ ಯಶಸ್ಸಿನ ಮೆಟ್ಟಿಲಿಗೆ ತರುವ ಹಂತವಿದೆಯಲ್ಲ... ಅದು ಒಂದು ತಪಸ್ಸಿಗೆ ಸಮಾನ. ಡಿಗ್ರಿ ಮಾಡ್ತಾರೋ, ಇಂಜಿನಿಯರ್ ಆಗ್ತಾರೋ, ಮೆಡಿಕಲ್ ಓದ್ತಾರೋ ಅಥವಾ ಪೋಲಿಬಿದ್ದು ಹೋಗ್ತಾರೋ ಎಂಬ ದುಗುಡ ಎಲ್ಲ ಪೋಷಕರಲ್ಲಿ ಮನೆಮಾಡಿರುತ್ತದೆ. ಮಕ್ಕಳನ್ನು ಒಂದು ಹಂತಕ್ಕೆ ತರುವ ಹೊತ್ತಿಗೆ ಜೀವನವೇ ಉಸ್ಸಪ್ಪ. ಓದಿಸುವುದಷ್ಟೇ ನಮ್ಮ ಕೆಲಸ, ಮುಂದೆ ಏನು ಬೇಕಾದರೂ ಆಗಲಿ, ಆದ್ರೆ ನಮ್ಮ ಶ್ರಮ ವ್ಯರ್ಥ ಆಗಬಾರದು, ಕಡೆದಿನಗಳಲ್ಲಿ ನಮಗೊಂದಿಷ್ಟು ಆಸರೆಯಾಗಿದ್ದರೆ ಸಾಕು ಎಂಬ ಭಾವ ಮೂಡಿರುತ್ತದೆ.

ನಾವು ಕಂಡ ಕನಸು ಮಕ್ಕಳಾದರೂ ಸಾಕಾರ ಮಾಡಲಿ ಎಂಬ ಕನಸು ಹುಟ್ಟಿಕೊಂಡಿರುತ್ತದೆ. ಅದಕ್ಕೆ ಏನೆಲ್ಲ ತ್ಯಾಗ ಮಾಡಬೇಕೋ ಅದೆಲ್ಲಕ್ಕೂ ಅಪ್ಪಅಮ್ಮಂದಿರು ಸಿದ್ಧರಾಗಿರುತ್ತಾರೆ. ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿ ಬರುವ ಹೊತ್ತಿಗೆ ಪೋಷಕರ ಎರಡನೇ ಮಹಾಯುದ್ಧ ಆರಂಭ. ಮೆರಿಟ್ಟಲ್ಲಿ ಬರ್ಲಿಲ್ಲ ಅಂದ್ರೆ ಇಂಜಿನಿಯರಿಂಗ್ ಅಥವಾ ಮೆಡಿಕಲ್ಲಿಗೆ ಹಣ ಹೊಂದಿಸುವುದು ಹೇಗೆ? ಹ್ಯಾಗೋ ಹೊಂದ್ಸಿರ್ತಾರೆ, ಆದ್ರೆ ಅಲ್ಲಿ ಓದುತ್ತಿರುವ ಮಕ್ಕಳಿಗೆಷ್ಟೋ ಈ ಸಂಗತಿ ಗೊತ್ತೇ ಇರುವುದಿಲ್ಲ. ತಾವಾಯಿತು, ತಮ್ಮ ಕಾಲೇಜು ಲೈಫಾಯಿತು.

ಈ ವರ್ಷ ಹ್ಯಾಗಾದ್ರೂ ಸರಿ ಮುಂದಿನ ವರ್ಷ ತೊಂದರೆಯಾಗದ ಹಾಗೆ ಹಣ ಕೂಡಿಡಲೇಬೇಕು ಎಂದು ಅಮ್ಮಅಪ್ಪಂದಿರು ಶಪಥ ಮಾಡಿರುತ್ತಾರೆ. ತುಟ್ಟಿ ಜಮಾನಾ, ಎಲ್ಲಿ ಕೂಡಿಕೋಕಾಗತ್ತೆ? ಮಗನಿಗೆ ಬೈಕು ಕೊಡ್ಸಿರ್ತೀವಿ, ಮಗಳು ಸ್ಕೂಟಿ ಬೇಕಂದಿರ್ತಾಳೆ, ಜೊತೆಗೊಂದು ಲ್ಯಾಪ್ ಟಾಪ್ ಬೇಡಿಕೆ ಬಂದಿರತ್ತೆ, ಜೀವನವೆಲ್ಲ ಇವ್ರಿಗೇ ಅಂದ್ರೆ ಹೇಗೆ ನಮಗೂ ಒಂದು ಪುಟ್ಟ ಮನೆಯಿರಲಿ ಅಂತ ಹೆಂಡತಿ ದುಂಬಾಲು ಬಿದ್ದಿರುತ್ತಾಳೆ, ಸಂಸಾರ ದೊಡ್ಡದಾಗಿದೆ ಸಣ್ಣ ಕಾರಿರದಿದ್ದರೆ ಹೇಗೆ ಅಂದ ಅಪ್ಪನೇ ಲೆಕ್ಕ ಹಾಕಿರುತ್ತಾನೆ, ಲೈಫೇ ಇಎಂಐನಲ್ಲಿ ಕಳೆದುಹೋಗುವಂತೆ ನಮ್ಮನ್ನು ನಾವೇ ಸಿದ್ಧಮಾಡಿಕೊಂಡಿರುತ್ತೇವೆ. ಇನ್ನು ಉಳಿಕೆಯೆಲ್ಲಿ? ರೀ ತಮಾಷೆ ಅಲ್ಲರೀ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+