• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆವರಣ : ಸತ್ಯ ಮತ್ತು ಸೌಂದರ್ಯದ ನಡುವೆ ತಾಕಲಾಟ

By Staff
|

ಸತ್ಯವನ್ನು ಮುಚ್ಚಿಡುವ ಆವರಣಶಕ್ತಿಯಿಂದ ನಾವು ಬಿಡುಗಡೆಹೊಂದಬೇಕೆಂಬ ಸಂದೇಶವನ್ನು ಹಂಚುವುದೇ ಮುಖ್ಯ ಉದ್ದೇಶವಾಗಿದ್ದಲ್ಲಿ, ಆ ಗುರಿಯನ್ನು ಮುಟ್ಟುವುದರಲ್ಲಿ ಕಾದಂಬರಿ ಸಫಲವಾಗಿದೆ. ಹಿಂದೂಸ್ತಾನದ ಮೇಲೆ ಮುಸಲ್ಮಾನರ ದಂಡಯಾತ್ರೆಗಳು, ಗೆದ್ದ ಮುಸಲ್ಮಾನ ಸುಲ್ತಾನರು ಸೋತವರ ಮೇಲೆ ತೋರಿಸಿದ ಅಮಾನುಷ ವರ್ತನೆ, ಅಧಿಕಸಂಖ್ಯಾತರಾದರೂ ನಿರ್ವೀರ್ಯರಂತೆ ಪರರ ಆಳ್ವಿಕೆಯನ್ನು ಒಪ್ಪಿಕೊಂಡ ಅಂದಿನ ಜನತೆಯ ಪರಿಸ್ಥಿತಿ, ಅವರ ದೌರ್ಬಲ್ಯಗಳ ಜೊತೆಗೆ ಅನೈಕ್ಯತೆ, ಅಸಹಾಯಕತೆ ಮತ್ತು ಅನಿವಾರ್ಯತೆಗಳೂ ಇತ್ತೆಂಬ ಅಂಶಗಳು ವಸ್ತುನಿಷ್ಟವಾಗಿ ಕಾದಂಬರಿಯ ತೂಕವನ್ನು ಹೆಚ್ಚಿಸುತ್ತವೆ. ಈ ಸತ್ಯಾಂಶಗಳ ಪಟ್ಟಿಯಾಂದನ್ನು ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದರೆ, ಅಂಥ ಪಟ್ಟಿ ಯಾರನ್ನು ತಲುಪಬೇಕೋ ಅವರನ್ನು (ಅಂದರೆ ಸಾಧಾರಣ/ಸರಾಸರಿ ಓದುಗರನ್ನು) ತಲುಪುವುದು ದುಸ್ಸಾಧ್ಯ ಎಂಬ ಅರಿವಿನಿಂದ ಇಂಥ ಒಂದು ತಂತ್ರದ ಬಳಕೆಯಾಗಿದೆ ಎಂಬುದನ್ನು ಕೂಡ ಪುಸ್ತಕವೇ ವಿಷದಪಡಿಸುತ್ತದೆ.

ಯಾವ ವಿಷಯದ ಮೇಲೇ ಬರೆಯಲಿ, ಭೈರಪ್ಪನವರು ಸಾಕಷ್ಟು ಸಂಶೊಧನೆ ನಡೆಸದೇ ಬರೆಯುವವರಲ್ಲ ಎಂಬುದು ಅವರ ಓದುಗರಿಗೆಲ್ಲ ತಿಳಿದ ವಿಷಯವೇ. ಔರಂಗಜೇಬನ ಕಾಲದ ಚರಿತ್ರೆಗೆ ಸಂಬಂಧಪಟ್ಟ ವಿವರಗಳನ್ನು ಸಾಕಷ್ಟು ಶ್ರಮವಹಿಸಿ ಅಧ್ಯಯನಮಾಡಿ ಲಕ್ಷ್ಮಿಯ(ರಜಿಯಾಳ) ತಂದೆ ನರಸಿಂಹೇಗೌಡರ ಪಾತ್ರದ ಮೂಲಕ ಆಧಾರಗಳ ಸಹಿತ ಪ್ರಸ್ತುತಪಡಿಸಿರುವುದಕ್ಕೆ ಒಂದು ಕಾರಣ ಇದೆ. ಅದೇನೆಂದರೆ, ಈ ಕಾದಂಬರಿಯನ್ನೋದಿ ಹುಳುಕನ್ನು ಹುಡುಕುವ ಓದುಗರು ಒಡ್ಡಬಹುದಾದ ತಕರಾರುಗಳನ್ನು ಮುಂಗಡವಾಗೇ ಊಹಿಸಿ ಜವಾಬುಗಳನ್ನು ಅಲ್ಲಿಯೇ ಒದಗಿಸುವುದೇ ಆಗಿದೆ. ಮುಸಲ್ಮಾನ ಕುಟುಂಬ ಒಂದರಲ್ಲಿ ನಡೆಯಬಹುದಾದ ಆಗುಹೋಗುಗಳನ್ನು ನೇರವಾಗಿ ಅಧ್ಯಯನಮಾಡಿ ಅನುಭವಹೊಂದಿ ಕಥಾವಸ್ತುವಿಗೆ ಸಾಕಾಗುವಷ್ಟು ಸನ್ನಿವೇಶಗಳನ್ನು ಜಾಗರೂಕತೆಯಿಂದ ಹೆಣೆದು ರಜಿಯಾ ಮತ್ತು ಅಮೀರರಂಥ ಪಾತ್ರಗಳನ್ನು ಸೃಷ್ಟಿಸಿದ್ದಾರೆ.

ಇನ್ನೊಂದು ವಿಷಯ ಎಲ್ಲರ ಗಮನಕ್ಕೆ ಸುಲಭಗ್ರಾಹ್ಯವಾದದ್ದು. ಕಾದಂಬರಿಯ ಒಂದು ಪ್ರಮುಖ ಪಾತ್ರವನ್ನು ಸೃಷ್ಟಿಸುವಾಗ, ‘ನಿಜಜೀವನದಲ್ಲಿ ಸಮಕಾಲೀನ ವ್ಯಕ್ತಿಯಾಬ್ಬರನ್ನು ನೆನಪಿಗೆ ತರುವಷ್ಟು ಸಾಮ್ಯವಿರುವ ರೀತಿ ಸೃಷ್ಟಿಸುವುದರ ಔಚಿತ್ಯವೇನು?’ ಎಂಬ ಪ್ರಶ್ನೆ ಹಲವರನ್ನು ಕಾಡಿರುವಂತೆ ನನ್ನನ್ನೂ ಕಾಡಿತು. ಕಾದಂಬರಿಕಾರ ಸೃಷ್ಟಿಸುವ ಪಾತ್ರಗಳು ನಿಜಜೀವನದ ಪಾತ್ರಗಳನ್ನು ಹೋಲುವುದು ಅಪರಾಧವಲ್ಲ, ಅದು ನೈಜತೆಯ ದೃಷ್ಟಿಯಿಂದ ಅಗತ್ಯವೂ ಹೌದು, ಆದರೆ, ಇಂಥವರನ್ನೇ ಚಿತ್ರಿಸಲಾಗಿದೆ ಎಂದು ಓದುಗರು ಥಟ್ಟನೆ ಹೇಳುವಷ್ಟು ಸಾಮ್ಯವಿಲ್ಲದಂತೆ ಪಾತ್ರಗಳನ್ನು ಸೃಷ್ಟಿಸಿದ್ದರೂ ಸತ್ಯಾನ್ವೇಷಣೆಯ ಮತ್ತು ಆವರಣಶಕ್ತಿಯಿಂದ ಅನಾವರಣಗೊಳ್ಳುವ ಕ್ರಿಯೆಗೆ ಹೆಚ್ಚೇನೂ ಭಂಗ ಬರುತ್ತಿರಲ್ಲ ಎನಿಸುತ್ತದೆ.

ಮುಗಿಸುವ ಮುನ್ನ ಒಂದೆರಡು ಮಾತುಗಳು. ಭೈರಪ್ಪನವರೇ ಹೇಳಿರುವಂತೆ ‘‘ಈ ಕಾದಂಬರಿಯ ಐತಿಹಾಸಿಕ ವಿಷಯದಲ್ಲಿ ನನ್ನ ಸ್ವಂತದ್ದು ಏನೂ ಇಲ್ಲ. ಇಡೀ ವಸ್ತುವಿಗೆ ಈಗಿರುವ ರೂಪ ಕೊಟ್ಟಿರುವುದೊಂದೇ ನನ್ನ ಸ್ವಂತಿಕೆ.’’ ಕಾಶಿಯಲ್ಲಿದ್ದ ದೇವಾಲಯವನ್ನು ಔರಂಗಜೇಬ ಕೆಡವಿಸಿದ ಎಂಬುದು ಐತಿಹಾಸಿಕ ದಾಖಲೆಯಿಂದ ಸಾಬೀತಾಗುವ ವಿಚಾರ. ಹಂಪಿಯ ನರಸಿಂಹ ಊನವಾದದ್ದೂ ವಿಗ್ರಹಾರಾಧನೆಯನ್ನು ಸಹಿಸದ ಸುಲ್ತಾನರ ಅನುಯಾಯಿಗಳಿಂದಲೇ ಎಂಬುದು ಸಹ ಐತಿಹಾಸಿಕ ಸತ್ಯ.

ಹಿಂದೂಧರ್ಮದ ಶ್ರುತಿ-ಸ್ಮೃತಿ-ಪುರಾಣಗಳಲ್ಲಿರುವ ಸಮಸ್ತ ವಿಷಯಗಳೂ ಇಂದಿಗೂ ಸೂಕ್ತ, ಎಲ್ಲರಿಗೂ ಎಲ್ಲ ಸಂದರ್ಭಗಳಿಗೂ ಸೂಕ್ತ ಎಂದು ಹೇಳುವುದು ಹೇಗೆ ಹುಚ್ಚುತನವಾಗುತ್ತದೋ, ಹಾಗೇ ಕುರಾನಿನಲ್ಲಿರುವ ಅಥವಾ ಪ್ರವಾದಿ ಮೊಹಮ್ಮದರ ಜೀವನದ ಉದಾಹರಣೆಗಳು ಇಂದಿಗೂ ಸೂಕ್ತ, ಎಂದೆಂದಿಗೂ ಸೂಕ್ತ ಎಲ್ಲರಿಗೂ ಸೂಕ್ತ, ಈ ಮಾತನ್ನು ಒಪ್ಪದವರನ್ನು ಹಿಂಸೆಗೆ ಗುರಿಮಾಡುವುದೂ, ಕೊಲ್ಲುವುದು, ಅವಮಾನಿಸುವುದು ಮುಸಲ್ಮಾನರ ಕರ್ತವ್ಯ ಎಂದು ನಂಬುವುದೂ ಹುಚ್ಚುತನ. ಈ ಬಗ್ಗೆ ಬುದ್ಧಿವಂತರೆಲ್ಲ ಕಣ್ತೆರೆಯಬೇಕು, ಅವಿದ್ಯಾವಂತರನ್ನು ಎಚ್ಚರಿಸಬೇಕು, ಮನುಷ್ಯ-ಮನುಷ್ಯರ ನಡುವೆ ಉಂಟಾಗುವ ದ್ವೇಷವನ್ನು ಹೋಗಲಾಡಿಸಬೇಕು. ಇಂಥ ವಾತಾವರಣ ಉಂಟಾಗಬೇಕಿದ್ದರೆ, ಸತ್ಯವನ್ನು ಮರೆಮಾಚುವ ಕಾರ್ಯವನ್ನು ನಾವು ವಿರೋಧಿಸಬೇಕು, ಆವರಣಶಕ್ತಿಯಿಂದ ಬಿಡುಗಡೆಹೊಂದಬೇಕು. ಈ ಸಂದೇಶವನ್ನು ಸ್ಪಷ್ಟವಾಗಿ, ಗಟ್ಟಿಯಾಗಿ, ನಿರರ್ಗಳವಾಗಿ ಮತ್ತು ಯಾವ ಸಂಕೋಚವೂ ಇಲ್ಲದೇ ನಿರ್ಭಯವಾಗಿ ಲೋಕಕ್ಕೆ ಉದ್ಘೋಷಿಸುವುದರ ಮೂಲಕ ಭೈರಪ್ಪನವರು ಆವರಣಶಕ್ತಿಯ ವಿರುದ್ಧ ಯುದ್ಧ ಸಾರಿದ್ದಾರೆ ಎಂಬ ಕಾರಣದಿಂದ ಈ ಕಾದಂಬರಿಗೆ ವಿಶಿಷ್ಟ ಸ್ಥಾನವಿದೆ.

ಅದೇ ರೀತಿ, ಜಾತ್ಯತೀತತೆ/ಧರ್ಮಾತೀತೆಯ ಸೋಗಿನಲ್ಲಿ ನಡೆಯುವ ಮೋಸ, ವಾಮಪಂಥದ ಆದರ್ಶಗಳ ಹೆಸರಿನಲ್ಲಿ ನಡೆಯುವ ವಂಚನೆ, ಮತ್ತು ಅಲ್ಪಸಂಖ್ಯಾತರ ಓಟುಗಳ ಅಪೇಕ್ಷೆಯಿಂದ ರಾಜಕೀಯಪಕ್ಷಗಳು ನಡೆಸುವ ಸಂಚುಗಳನ್ನು ಅಷ್ಟೇ ಧೈರ್ಯದಿಂದ ರಟ್ಟು ಮಾಡಿರುವುದೂ ಸ್ತುತ್ಯರ್ಹ.

ಆವರಣ ಕಾದಂಬರಿಯ ಪ್ರವೇಶದಲ್ಲಿ ಭೈರಪ್ಪನವರೇ ಬರೆದಿರುವ ಮಾತುಗಳಿಗಿಂತ ಬೇರೆ ಮುಕ್ತಾಯ ಈ ಲೇಖನಕ್ಕೆ ಬೇಕಿಲ್ಲ. ‘‘ನಮ್ಮ ಪೂರ್ವಿಕರ ಯಾವಯಾವ ಕೃತ್ಯಗಳನ್ನು ನಾವು ತಿರಸ್ಕರಿಸಬೇಕು ಎಂಬ ವಿವೇಚನೆ ಇಲ್ಲದಿದ್ದರೆ ನಾವು ಪ್ರೌಢರಾಗುವುದಿಲ್ಲ. ಇತಿಹಾಸದಿಂದ ಪಡೆಯುವಂತೆ ಬಿಡಿಸಿಕೊಳ್ಳುವುದೂ ಪಕ್ವತೆಯ ಗುರುತು. ಇದು ಪ್ರತಿಯಾಂದು ಧರ್ಮ, ಜಾತಿ, ವರ್ಗದವರಿಗೂ ಅನ್ವಯಿಸುವ ಮಾತು.’’

ಪ್ರತಿಯಾಂದು ದೇಶದಲ್ಲೂ, ಪ್ರತಿಯಾಂದು ಸಮಾಜದಲ್ಲೂ, ಆವರಣಶಕ್ತಿ ಕೆಲಸಮಾಡುತ್ತದೆ. ಅಂಥ ಒಂದು ಶಕ್ತಿ ಬೆಳೆಯದಂತೆ ನೋಡಿಕೊಳ್ಳುವ ಹೊಣೆ ಸಮಾಜದ ವಿದ್ಯಾವಂತರ ಮೇಲಿದೆ. ವಿದ್ಯೆಯಿಂದ ಯೋಚನಾಸಾಮರ್ಥ್ಯ, ಯೋಚನಾಸಾಮರ್ಥ್ಯದಿಂದ ಪ್ರಶ್ನಿಸುವ ಶಕ್ತಿ, ಪ್ರಶ್ನಿಸುವ ಹಕ್ಕನ್ನು ಕಾಪಾಡಿಕೊಂಡಾಗ ಮಾತ್ರ ನಿಜವಾದ ಸ್ವಾತಂತ್ರ್ಯ!

ಆವರಣ ಕಾದಂಬರಿಯನ್ನು ಓದಿದ್ದರಿಂದ ಓದುಗರಮೇಲೆ ಸತ್ಪರಿಣಾಮವಾಗಲಿ, ಓದುವ ಬರೆಯುವ ಮತ್ತು ಚರ್ಚಿಸುವ ಸ್ವಾತಂತ್ಯ್ರಕ್ಕೆ ಭಾರತದಲ್ಲಿ ಎಂದಿಗೂ ಧಕ್ಕೆ ಬಾರದಿರಲಿ ಎಂಬ ಸದಾಶಯದೊಂದಿಗೆ ವಿರಮಿಸುವೆ ಮುಂದಿನ ಕಂತಿನವೆರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X