• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆಯಿಂದ-ಮಹಿಳೆಗೋಸ್ಕರ

By ಡಾ. ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂ
|

American poetess Maya Angeloಮೊನ್ನೆ ನನಗೊಂದು ವಿ-ಅಂಚೆ ಬಂತು. ಇದು ಒಬ್ಬರು ಮತ್ತೊಬ್ಬರಿಗೆ ಕಳಿಸಿದರೆ, ಅವರು ಇನ್ನೊಬ್ಬರಿಗೆ ಕಳಿಸುತ್ತ, ಹೀಗೇ ಮುಂದುವರೆಯುವ ಸರಪಳಿ-ಅಂಚೆ. ಕಳಿಸಿದವರು ಒಬ್ಬ ಮಹಿಳೆ. ಈಕೆ ನನಗೆ ಆಪ್ತರಾದವರ ಪೈಕಿಯವರು. ಸಾಹಿತ್ಯಾಭಿಮಾನಿ ಮತ್ತು ಪ್ರಖ್ಯಾತ ಬರಹಗಾರ್ತಿ ಸಹ. ವರ್ಷಾಂತ್ಯದ ಆಚರಣೆ ಮತ್ತು ಮುಂದಿನ ವರ್ಷಕ್ಕೆ ಶುಭಾಶಯ ಕೋರುವ ವಿ-ಅಂಚೆಗಳು ಧಂಡಿಯಾಗಿ ಬರುತ್ತಿರುತ್ತವೆ. ಅವುಗಳಂತೆ ಇದೂ ಒಂದು ಇರಬಹುದು, ಓದಿದ ಕೂಡಲೇ ಅಳಿಸಬೇಕಾದ ಅಂಚೆಯ ಗುಂಪಿಗೆ ಸೇರಿದ್ದಿರಬಹುದು ಎಂಬ ಅನುಮಾನದಿಂದಲೇ ತೆರೆದೆ. ತಕ್ಷಣ ಕಣ್ಣಿಗೆ ಬಿದ್ದದ್ದು - ಅನೇಕರ ಮೆಚ್ಚುಗೆಗೆ ಪಾತ್ರವಾಗಿರುವ ಅಮೇರಿಕದ ಒಬ್ಬ ಅಸಾಧಾರಣ ಕವಯತ್ರಿ ಮಾಯಾ ಏಂಜೆಲೋ ಚಿತ್ರ. ಚಿತ್ರದ ಜೊತೆಗೆ ಆಕೆ ಮಹಿಳೆಯರನ್ನು ಕುರಿತು ಮಹಿಳೆಯರಿಗಾಗಿಯೇ ಬರೆದ ಒಂದು ಕವನವೇ ಅಂಚೆಯ ಸಂದೇಶವೂ ಆಗಿತ್ತು. ಆದರೆ, ಮಹಿಳೆಯರಿಗಾಗಿ ಬರೆದ ಈ ಕವಿತೆ ನನಗೇಕೆ ಬಂತು ಎಂದು ಒಂದಿಷ್ಟು ತಿಣುಕಿದೆ.

ಅಂಚೆ ಕಳಿಸಿದಾಕೆ ಮತ್ತಾರೂ ಅಲ್ಲ, ನಮ್ಮ ವರಕವಿ ಪುತಿನ ಅವರ ಮಗಳು ಅಲಮೇಲು ಅಯ್ಯಂಗಾರ್. ನನಗೆ ಇದನ್ನು ರವಾನಿಸಲು ಕಾರಣವಿರಲೇಬೇಕು. ಹೆಂಗರುಳಿನ ಕವಿಹೃದಯ ನನಗೆ ಅರ್ಥವಾದರೂ ಆದೀತು ಎಂತಲೋ, ಅಥವಾ ಹೆಣ್ಣಿನ ಹೃದಯವನ್ನು ಅರಿತುಕೊಳ್ಳಬೇಕಾದ ಅಸಂಖ್ಯಾತ ಪುರುಷರ ಪೈಕಿ ನಾನೂ ಒಬ್ಬ ಎಂಬ ಗುಮಾನಿಯಿಂದಲೋ, ಅಂತು ಕಳಿಸಿದ್ದಾರೆ, ಓದಿ ಖುಷಿ ಪಡೋಣವೆಂದುಕೊಂಡೇ ಓದಿದೆ. ಓದಿದ ಮೇಲೆ ಖುಷಿಯೂ ಆಯಿತು, ಆ ಖುಷಿಯನ್ನು ಕನ್ನಡದಲ್ಲಿ ಹಂಚಿಕೊಳ್ಳಬೇಕು ಎನ್ನಿಸಿತು. ಜಾಲತರಂಗದ ಅನೇಕ ಮಹಿಳಾ ಓದುಗರಿಗೆ ವರ್ಷದ ಕೊನೆಯ ಅಂಕಣರೂಪದಲ್ಲಿ ಏಕೆ ಅರ್ಪಿಸಬಾರದು ಎನ್ನಿಸಿ, ಇದೋ ಮಾಯಾ ಬರೆದ ಕವನದ ಕನ್ನಡ ಅವತಾರ. ಆಕೆಯ ಅನೇಕ ಕವಿತೆಗಳಂತೆ ಇದೂ ಗದ್ಯದಂತೆ ಓದಿಸಿಕೊಳ್ಳುವ ಗಪದ್ಯ.

ಪ್ರತಿ ಹೆಣ್ಣಿಗೂ ಇರಬೇಕು

  • ಮಾಯಾ ಏಂಜೆಲೊ

ಪ್ರತಿ ಹೆಣ್ಣಿನ ಕೈಯಲ್ಲೂ ಇರಬೇಕು --

ಅಗತ್ಯ ಇರಲೀ ಇಲ್ಲದಿರಲಿ, ಬಯಕೆ ಇರಲೀ ಇಲ್ಲದಿರಲಿ,

ತನ್ನದೇ ಆದ ಮನೆಯೊಂದನ್ನು ಬಾಡಿಗೆಗೆ ಪಡೆದು

ಸ್ವತಂತ್ರವಾಗಿ ಬಾಳುವ ಛಾತಿ, ಅದಕ್ಕೆ ಬೇಕಾಗುವಷ್ಟು ಹಣ.

ಪ್ರತಿ ಹೆಣ್ಣಿನ ಬಳಿಯೂ ಇರಬೇಕು --

"ನಿನ್ನ ನಾ ನೋಡಬೇಕು, ಇನ್ನೊಂದು ಘಂಟೆಯಲ್ಲಿ ತಯಾರಾಗು"

ಎಂದು ತನ್ನ ಕೆಲಸದ ಮೇಲಧಿಕಾರಿ ಅಥವಾ ಪ್ರಿಯತಮ ಹೇಳಿದಾಗ,

ಉಡಲು ಅತ್ಯುತ್ತಮ ಸೀರೆ ಅಥವಾ ತೊಡಲು ಭರ್ಜರೀ ಪೋಷಾಕು.

ಪ್ರತಿ ಹೆಣ್ಣಿಗೂ ಇರಬೇಕು --

ಅತ್ಯಂತ ಸಂತೃಪ್ತಿ ತಂದ ಯೌವನ,

ಅದನ್ನು ಹಿಂದೆಬಿಟ್ಟು ಸಾಗುವ ಹಿರಿತನ,

ಮತ್ತೆ ಮತ್ತೆ ಹೇಳಿಕೊಂಡು ಖುಷಿಪಡುವಂಥಾ ಜೀವನ,

ಅದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾ ಕಳೆಯುವ ಮುದಿತನ.

ಪ್ರತಿ ಹೆಣ್ಣಿನಬಳಿಯೂ ಇರಬೇಕು --

ಯಾವ ಸ್ಕ್ರೂಮೊಳೆಯನ್ನಾದರೂ ತಿರುಗಿಸಬಲ್ಲ

ಸ್ವಯಂಚಾಲಿತ ಭೈರಿಗೆ.

ಪ್ರತಿ ಹೆಣ್ಣಿಗೂ ಇರಬೇಕು --

ಯಾವಾಗಲೂ ನಗಿಸುವಂಥ ಗೆಳೆಯ,

ಬಂದಾಗ ಅಳು, ಅಳಲು ಬಿಡುವ ಗೆಳತಿ.

ಪ್ರತಿ ಹೆಣ್ಣಿನ ಬಳಿಯೂ ಇರಬೇಕು --

ಕುಟುಂಬದಲ್ಲಿ ಮತ್ತಾರ ಬಳಿಯೂ ಇಲ್ಲದಂಥಾ

ಅಪರೂಪದ ಕುರ್ಚಿ-ಸೋಫ-ಮೇಜಿನ ಸೆಟ್ಟು.

ಪ್ರತಿ ಹೆಣ್ಣಿನ ಬಳಿಯೂ ಇರಬೇಕು --

ಅತಿಥಿಗಳನ್ನು ತಣಿಸುವ ಪಾಕಶಾಸ್ತ್ರ-ರಹಸ್ಯ,

ಕೋರೈಸುವ ತಟ್ಟೆ-ಲೋಟ-ಚಮಚಗಳ ಕಟ್ಟು,

ಕತ್ತುದ್ದದ ಮಧುಪಾನಪಾತ್ರೆಗಳು ಒಟ್ಟು,

ಕೊನೇಪಕ್ಷ ಎಂಟೆಂಟರ ಸೆಟ್ಟು.

ಪ್ರತಿ ಹೆಣ್ಣೂ ಪಡೆದಿರಬೇಕು --

ವಿಧಿಯನ್ನು ವಶದಲ್ಲಿಟ್ಟುಕೊಂಡಂಥ

ನಿರಾಳ ಮನಸ್-ಸ್ಥಿತಿ.

ಪ್ರತಿ ಹೆಣ್ಣೂ ಅರಿತಿರಬೇಕು --

ತನ್ನ ತಾನೇ ಕಳೆದುಕೊಳ್ಳದ ಜಾಗೃತಿ

ಆದರೂ ಗಾಢವಾಗಿ ಪ್ರೀತಿಸುವ ರೀತಿ.

ಪ್ರತಿ ಹೆಣ್ಣಿಗೂ ಇರಬೇಕು --

ಸ್ನೇಹವನ್ನು ಕಳೆದುಕೊಳ್ಳದೇ

ಕೆಲಸಕ್ಕೆ ರಾಜೀನಾಮೆಕೊಡುವ ಜಾಣ್ಮೆ,

ಮಾಜೀ ಪ್ರಣಯಿಯಿಂದ ಕಳಚಿಕೊಳ್ಳುವ ಉಪಾಯ,

ಸಂಗಾತಿಯೆದುರು ಸೆಟೆದು ನಿಂತು ಪ್ರತಿರೋಧಿಸುವ ಸ್ಥೈರ್ಯ.

ಪ್ರತಿ ಹೆಣ್ಣೂ ಅರಿತಿರಬೇಕು --

ಶಕ್ತಿಮೀರಿ ದುಡಿದು ಸಾಧಿಸಬೇಕಾದ್ದು ಯಾವುದು,

ಸದ್ದಿಲ್ಲದೇ ಕೈತೊಳೆದುಕೊಳ್ಳಬೇಕಾದ್ದು ಯಾವುದು,

ಇವೆರಡರ ನಡುವಣ ವ್ಯತ್ಯಾಸ.

ಪ್ರತಿ ಹೆಣ್ಣೂ ಅರಿತಿರಬೇಕು --

'ಮೊಳಕಾಲಿನ ಉದ್ದವನ್ನಾಗಲೀ

ನಿತಂಬದ ಅಗಲವನ್ನಾಗಲೀ

ತಂದೆತಾಯಿಗಳ ಪ್ರಕೃತಿಯನ್ನಾಗಲೀ

ಬದಲಾಯಿಸುವುದು ಸಾಧ್ಯವಿಲ್ಲ' ಎಂಬ ಸತ್ಯ.

ಪ್ರತಿ ಹೆಣ್ಣೂ ಅರಿತಿರಬೇಕು --

'ಬಾಲ್ಯ ಪರಿಪೂರ್ಣವಾಗಿರಲಿಲ್ಲದಿದ್ದರೇನಂತೆ,

ಅದು ಮುಗಿದು ಯಾವುದೋ ಯುಗವಾಗಿದೆ' ಎಂಬ ವರ್ತಮಾನ.

ಪ್ರತಿ ಹೆಣ್ಣೂ ಅರಿತಿರಬೇಕು --

'ಪ್ರೀತಿಗಾಗಿ ತಾನು ಏನೆಲ್ಲ ಮಾಡಲು ಸಿದ್ಧ

ಏನೆಲ್ಲ ಮಾಡಲು ಸಿದ್ಧಳಿಲ್ಲ' ಎಂಬ ಇತಿ-ಮಿತಿ.

ಪ್ರತಿ ಹೆಣ್ಣೂ ಹೊಂದಿರಬೇಕು --

ಏಕಾಂಗಿಯಾಗಿರುವ ಅಗತ್ಯವಿಲ್ಲದಿದ್ದರೂ

ಏಕಾಂಗಿಯಾಗಿರಬಲ್ಲ ತಾಕತ್ತು.

ಪ್ರತಿ ಹೆಣ್ಣೂ ಹೊಂದಿರಬೇಕು --

'ಯಾರನ್ನು ನಂಬಬಹುದು, ಯಾರನ್ನು ನಂಬಬಾರದು,

ನಂಬಿದರೂ ಎಷ್ಟು ನಂಬಬಹುದು' ಎಂಬ ತಿಳುವಳಿಕೆ,

ಅದರ ಜೊತೆಜೊತೆಗೇ ಯಾವುದನ್ನೂ

ತೀರ ಮನಸ್ಸಿಗೆ ಹಚ್ಚಿಕೊಳ್ಳದ ನಡವಳಿಕೆ.

ಪ್ರತಿ ಹೆಣ್ಣೂ ಹೊಂದಿರಬೇಕು --

'ಮನಸ್ಸಿಗೆ ಶಾಂತಿ-ಸಮಾಧಾನಗಳ ಅಗತ್ಯವಿದ್ದಾಗ

ತನ್ನ ಆಪ್ತ ಗೆಳತಿಯ ನಡುಮನೆಗೆ ಹೋಗಬೇಕೋ

ಊರಾಚೆಯ ವನದಲ್ಲಿರುವ ಬಿಡುಮನೆಗೆ ಹೋಗಬೇಕೋ'

ಎಂಬ ತೀರ್ಮಾನಶಕ್ತಿ.

ಪ್ರತಿ ಹೆಣ್ಣೂ ಹೊಂದಿರಬೇಕು --

'ಒಂದು ದಿನದಲ್ಲಿ, ಒಂದು ತಿಂಗಳಲ್ಲಿ,

ಅಥವಾ ಒಂದು ವರ್ಷದಲ್ಲಿ ಏನು ಸಾಧಿಸಬಹುದು,

ಏನು ಸಾಧಿಸಲಾಗದು' ಎಂಬುದರ ಪರಿಕಲ್ಪನೆ.

ಅಲಮೇಲು ವಿ-ಅಂಚೆಯಲ್ಲಿ ಬರೆದದ್ದು --"ಇದನ್ನು ಕೊನೇ ಪಕ್ಷ ಮೂರು ಅಥವಾ ಆರು ಗೆಳತಿಯರಿಗೆ ರವಾನಿಸಿ. ಕಳಿಸದಿದ್ದರೆ? ತಲೆ ಏನೂ ಹೋಳಾಗುವುದಿಲ್ಲ. ಆದರೆ ಇದನ್ನು ನಿಮಗೆ ಕಳಿಸಿದ ಗೆಳತಿ ನಿಮ್ಮನ್ನು ತೀವ್ರವಾಗಿ ಪ್ರೀತಿಸುತ್ತಾಳೆ ಎಂಬುದು ಮಾತ್ರ ಸತ್ಯ. ನಿಮ್ಮ ಒಳಿತನ್ನಲ್ಲದೇ ಆಕೆ ಮತ್ತೇನನ್ನೂ ಬಯಸುವುದಿಲ್ಲ" ಎಂಬ ಕೊನೆ ಮಾತು. ಅದೇ ರೀತಿ, ನೀವು ಪ್ರೀತಿಸುವ ಮೂರೋ ಆರೋ ಗೆಳೆಯ/ಗೆಳತಿಯರಿಗೆ ಈ ಲೇಖನವನ್ನು ರವಾನಿಸುವಿರಿ ಎಂಬ ಆಶಯದೊಂದಿಗೆ, ವಿಶೇಷವಾಗಿ ಎಲ್ಲ ಮಹಿಳೆಯರಿಗೂ (ಮತ್ತು ಮಹನೀಯರಿಗೂ ಸಹ) ಹೊಸವರ್ಷದ ಶುಭಾಶಯಗಳನ್ನು ಕೋರುತ್ತ ವಿರಮಿಸುವೆ ಮುಂದಿನ ಕಂತಿನ ವರೆಗೆ.

ವಿಸೂ: ಈ ಕವಿತೆಯನ್ನು ನನ್ನ ಗಮನಕ್ಕೆ ತಂದು ಒಂದಿಷ್ಟು ಸ್ಫೂರ್ತಿಯನ್ನಿತ್ತ ಅಲಮೇಲು ಅವರಿಗೆ ನನ್ನ ಕೃತಜ್ಞತೆಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more