• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳ್ಳ,ಕಳ್ಳಿ,ಕೊರಮರ ಸಂತೆಯಲ್ಲಿ ಯಾರು ಯಾರಿಗೆ ಜೋಡಿ?

By Staff
|

ಪಾಪಿ, ಮಹಾಪಾಪಿ, ಜಗತ್‌ಪಾಪಿಗಳ ನಡುವೆ ದೇಶವೇ ಅಲ್ಲದ ದೇಶ ಪಾಕಿಸ್ತಾನದಲ್ಲಿ ಘೋರಕಾಳಗ. ಪ್ರಜಾಪ್ರಭುತ್ವದ ಮಾರಣಹೋಮ ಮಾಡಿದ ದೇಶದಲ್ಲಿ ಇನ್ನೊಂದು ಮಹಾಚುನಾವಣೆ !ವಹಾರೆ ಮೇರಾ ಮುರುಗ ! ಹೊರಗೆ ಪ್ರಜಾಪ್ರಭುತ್ವದ ಬೋರ್ಡು, ಒಳಗೆ ಕಸಾಯಿಖಾನೆ. ಮುಶರ್ರಫ್ನ ಖಾಸಾ ದೋಸ್ತ್‌ ಬುಷ್ಯಪ್ಪನೇ ಹಲಾಲ್‌!


Mandate Pakistan :2007ಅಮೆರಿಕದಲ್ಲಿ ಒಂದು ನಾಣ್ನುಡಿ ಇದೆ: "ಐ ಸ್ಕ್ರ್ಯಾಚ್ ಯುವರ್ ಬ್ಯಾಕ್, ಯು ಸ್ಕ್ರ್ಯಾಚ್ ಮೈನ್" (ನಿನ್ನ ಬೆನ್ನನು ನಾನು ತುರಿಸುವೆ, ನನ್ನ ಬೆನ್ನನು ನೀನು ತುರಿಸು). ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ನೋಡಿದರೆ ಈ ಗಾದೆ ನೆನಪಾಗದೇ ಇರದು.

ಮಹಾಭಾರತದ ಕತೆಯನ್ನು ಕೇಳಿದ ಮುಸಲ್ಮಾನನೊಬ್ಬ ಉದ್ಗಾರ ತೆಗೆದನಂತೆ -- "ಉಸ್‌ಮೆ ಕ್ಯಾ ಹೈ? ಎಕ್ ಬುಡ್ಢಾ, ಎಕ್ ಛೊಕ್ರಾ, ಎಕ್ ಮಾದರ್‍ಚೋದ್" (ಒಬ್ಬ ಮುದುಕ, ಒಬ್ಬ ಹುಡುಗ, ಒಬ್ಬ ತಾಯಿಗ್ಗಂಡ -- ಭೀಷ್ಮ, ಅಭಿಮನ್ಯು ಮತ್ತು ಕೃಷ್ಣ ಇವರ ಪಾತ್ರಗಳನ್ನುದ್ದೇಶಿಸಿ ಆಡಿದ ಮಾತು ಅದು ಎಂದು ಹೇಳುವ ಅಗತ್ಯವೇನಿಲ್ಲ). ಅದೇ ರೀತಿ, ’ಮಹಾಪಾಕಿ’ ಎಂಬ ಕಾವ್ಯದಲ್ಲಿ ಏನಿದೆ? ಒಬ್ಬ ಲಂಚಕೋರ, ಒಬ್ಬಳು ಲಂಚಕೋರಿ ಮತ್ತೊಬ್ಬ ಕೊರಮ ಸರ್ವಾಧಿಕಾರಿ ಸೈನಿಕ! ಅಂತೂ ಕಳ್ಳ-ಕಳ್ಳಿ-ಕೊರಮರು ಸಂತೆಯಲ್ಲಿ ಭೇಟಿಯಾದಾಗ ಯಾರಾದರೂ ಇಬ್ಬರು ಜೋಡಿಯಾಗುವ ಸುದ್ದಿ ಕೇಳಿಬರುತ್ತಿದೆ ಪಾಕಿಸ್ತಾನದ ರಾಜಕೀಯದ ವಿಚಿತ್ರಕತೆಯಲ್ಲಿ. ಈ ಚಕ್ಕಳಗೊಂಬೆಯಾಟದಲ್ಲಿ ಅಮೆರಿಕದ ಕೈಬೆರಳುಗಳು ಸದ್ದಿಲ್ಲದೇ ಆಟವಾಡುತ್ತಿವೆ!

ಒಬ್ಬ ಸೈನ್ಯಾಧಿಕಾರಿಗೆ, ಯಾರ ಭಯವೂ ಇಲ್ಲ, ಸೈನ್ಯದ ಬೆಂಬಲ ಇರುವ ತನಕ! ಸುಮಾರು ಎಂಟು ವರ್ಷಗಳ ಹಿಂದೆ, ಪಾಕಿಸ್ತಾನದ ಅನಭಿಷಿಕ್ತ ಸಾಮ್ರಾಟನಾದ ಮುಷರಫ್, ಚುನಾಯಿತ ಜನನಾಯಕ ಮತ್ತು ದೇಶದ ಪ್ರಧಾನಿಯಾಗಿದ್ದ ನವಾಜ್ ಶರೀಫನನ್ನು ಸಿಂಹಾಸನದಿಂದ ದಬ್ಬಿ ಬೀಳಿಸಿದ್ದಲ್ಲದೇ ಅವನನ್ನು ಆಜೀವ ಕಾರಾಗೃಹವಾಸಕ್ಕೆ ತಳ್ಳಲು ಹೊರಟಿದ್ದ. ಅದೇನು ನಡೆಯಿತೋ ಹಿನ್ನೆಲೆಯಲ್ಲಿ, ಆ ಅಲ್ಲಾನೆ ಬಲ್ಲ, ಅವನಿಗೆ ಜೀವದಾನ ಮಾಡಿ ದೇಶಭ್ರಷ್ಟನನ್ನಾಗಿಸಿದ. ದೇಶಕಳೆದುಕೊಂಡವರಿಗೆಲ್ಲ ಒಂದು ಅತಿಥೇಯ-ದೇಶ ಇದ್ದೇ ಇರುತ್ತಲ್ಲ, ನವಾಜ್‌ ಶರೀಫ ಚಾಚೂ ಎನ್ನಲಿಲ್ಲ, ಕುನ್ನಿಯಂತೆ ಬಾಲ ಮುದುರಿಕೊಂಡು ದೇಶ ಬಿಟ್ಟೋಡಿದ, ಸೌದೀ ಅರೇಬಿಯದ ಆತಿಥ್ಯದಲ್ಲಿ ಸದ್ದಿಲ್ಲದೇ ವರ್ಷಗಟ್ಟಲೆ ಅಜ್ಞಾತವಾಸವನ್ನು ಅನುಭವಿಸಿದ. ಅವನ ಏನೇನು ರಹಸ್ಯಗಳು ಮುಷರಾಫನಿಗೆ ಗೊತ್ತಿದ್ದುವೋ, ಅಂತೂ ಸಾಧಾರಣ ಜನತೆಯಾಗಲೀ, ಬುದ್ಧಿಜೀವಿಗಳೇ ಆಗಲೀ ಒಬ್ಬರೂ ಚಕಾರವೆತ್ತಲಿಲ್ಲ.

ಹಿಂದೆ ಜುಲ್ಫಿಕರ್ ಆಲಿ ಭುಟ್ಟೋವನ್ನು ಸೈನ್ಯಾಧಿಕಾರಿಗಳು ಗಲ್ಲಿಗೇರಿಸಿದಾಗಲೂ ಅಷ್ಟೆ, ಯಾರೂ ಬಾಯ್ಬಿಡಲಿಲ್ಲ. ಇತ್ತೀಚೆಗೆ, ಬಲೂಚೀಸ್ತಾನದ ಜನಪ್ರಿಯನಾಯಕನನ್ನು ಸೈನಿಕರ ಗುಂಡು ಬಲಿತೆಗೆದುಕೊಂಡಾಗಲೂ ಅಷ್ಟೆ, ಎಲ್ಲ ಗಪ್‌ಚುಪ್! ಸೈನ್ಯಬಲವೆಂಬುದೇ ಹಾಗೆ, ಎಂಥವರ ಬಾಯನ್ನು ಬೇಕಾದರೂ ಮುಚ್ಚಿಸುವ ಭಯಾನಕ ಶಕ್ತಿ ಅದಕ್ಕಿದೆ. ಸೈನ್ಯಕ್ಕೆ ವಿರುದ್ಧ ಒಂದು ಮಾತಾಡಿದರೂ ಪಾಕೀಸ್ತಾನದ ನಾಯಕರು ಉದ್ಧಾರವಾಗಲು ಸಾಧ್ಯವಿಲ್ಲದಂತೆ ಅಲ್ಲಿನ ವ್ಯವಸ್ಥೆ ಒಂದು ಅಲಿಖಿತ ಕಾನೂನನ್ನೇ ಮಾಡಿಟ್ಟಿರುವಂತಿದೆ.

ಅಲ್ಲಿನ ಪತ್ರಿಕೆಗಳ ಬಾಯಿ ಮುಚ್ಚಿಸುವುದರಲ್ಲಿಯೂ ಪಾಕೀಸ್ತಾನೀ ಸೈನ್ಯ ಸಾಕಷ್ಟು ಜಯಗಳಿಸಿದೆ. ಅಷ್ಟೇ ಅಲ್ಲ, ನ್ಯಾಯಾಂಗವೆಂಬ ಅಂಗ ಕಿಂಚಿತ್ತಾದರೂ ಸ್ವಾತಂತ್ರ್ಯ ತೋರುವುದು ಸಾಧ್ಯವಿರಲಿಲ್ಲ ಆ ದೇಶದಲ್ಲಿ, ಇತ್ತೀಚಿನ ವರೆಗೆ. ಸೈನ್ಯಾಧಿಕಾರವನ್ನೂ ಬಿಡದೆ ಅಧ್ಯಕ್ಷಸ್ಥಾನವನ್ನೂ ಬಿಡದೆ, ಹೆಸರಿಗೆ ಮಾತ್ರ ಪ್ರಜಾಪ್ರತಿನಿಧಿಗಳಾಗಿರುವ ಕೈಗೊಂಬೆಗಳಿಂದ ವೋಟು ಹಾಕಿಸಿಕೊಂಡು ಇನ್ನೂ ಅದೆಷ್ಟು ವರ್ಷ ರಾಜ್ಯವಾಳಬೇಕೆಂಬ ಆಸೆಯಿತ್ತೋ ಆ ಕೊರಮನಿಗೆ. ಅಷ್ಟರಲ್ಲಿ, ಒಬ್ಬ ನ್ಯಾಯಾಧಿಪತಿ ಕೊಂಚ ಧೈರ್ಯ ಮಾಡಿ ಇವನ ಕೈಗೊಂಬೆಯಾಗಲು ತಾನು ಸಿದ್ಧವಿಲ್ಲ ಎಂದು ಬಿಟ್ಟ. ಅದೇನು ಸಾಹಸವೋ, ಅದೆಂತು ಧೈರ್ಯ ಬಂತೋ, ಅಂತು ಅವ ಮುಷರ್ರಾಫನು ಹಾಕಿದ ತಾಳಕ್ಕೆ ಕುಣಿಯಲೊಲ್ಲೆ ಎಂದು ಅಸಾಧ್ಯ ಧೈರ್ಯ ಪ್ರದರ್ಶಿಸಿದ.

ಅವನನ್ನೂ ಗಲ್ಲಿಗೇರಿಸಲು ಸಾಧ್ಯವಿದ್ದಿದ್ದರೆ ಅವನ ಗತಿಯೂ ಇಷ್ಟು ಹೊತ್ತಿಗೆ ಮುಗಿದು ಹೋಗುತ್ತಿತ್ತೋ ಏನೋ. ಆದರೆ ಅದು ಹಾಗಾಗಲಿಲ್ಲ. ಅವನನ್ನು ಕಾರಾಗೃಹಕ್ಕೆ ತಳ್ಳಲು ಹೊರಟ ನಮ್ಮ ಕೊರಮ. ’ವಿನಾಶಕಾಲೇ ವಿಪರೀತ ಬುದ್ಧಿಃ’ ಎಂಬ ಮಾತು ಸುಮ್ಮನೇ ಬಳಕೆಗೆ ಬಂದಿಲ್ಲ. ಯಾವನೇ ಆಗಲೀ ವಿಪರೀತಮತಿಯಾದಾಗ ಅವನ ದಾರಿ ದುರ್ಗಮವಾಗುತ್ತದೆ. ಇವನ ನಡತೆಯನ್ನು ಸಹಿಸಲು ಪಾಕೀಸ್ತಾನದ ಜನತೆಗೆ ತಾಳ್ಮೆ ಉಳಿದಿಲ್ಲವೇನೋ ಎನ್ನಿಸುತ್ತಿದೆ. ಪ್ರಜಾಪ್ರಭುತ್ವದ ಅನುಭವವನ್ನು ಇದುವರೆಗೂ ಅನುಭವಿಸದ ಪಾಕೀಸ್ತಾನದ ಪ್ರಜೆಗಳಿಗೂ ಆಶಾವಾದಕ್ಕೆ ಎಡೆ ಇದ್ದೀತೆ? ಪಾಕೀಸ್ತಾನದ ಬುದ್ಧಿಜೀವಿಗಳು ಕಣ್ಬಿಟ್ಟಾರೇ? ಸಾಧಾರಣ ಜನತೆ ಸಿಡಿದೆದ್ದೀತೆ?

ಆದರೆ, ಈ ಕೊರಮ ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಜಾತಿಯವನಲ್ಲ. ಅನೇಕ ಮೂಲಗಳಿಂದ ಕದ್ದು ತಂದ ಅಣುವಿದ್ಯೆಯನ್ನು ಬಳಸಿ ಪಾಕೀಸ್ತಾನ ಸ್ಫೋಟಿಸಿದ ಅಣು ಬಾಂಬಿನ ಕತೆ ಎಲ್ಲರಿಗೂ ಗೊತ್ತೇ ಇದೆ. ತಾನು ಕದ್ದಿದ್ದು ಸಾಲದೋ ಎಂಬಂತೆ, ಕದ್ದ ಮಾಲನ್ನು ಧಾರಾಳವಾಗಿ ಕರೀಮಾರುಕಟ್ಟೆಯಲ್ಲಿ ಮಾರಿ ಕೋಟಿಗಟ್ಟಲೆ ಹಣ ಮಾಡಿ ರಾಜಾರೋಷವಾಗಿ ಜೀವಿಸುತ್ತಿರುವ ವಿಜ್ಞಾನಿಗೆ "ಫಾದರ್ ಆಫ್‌ ದಿ ಇಸ್ಲಾಮಿಕ್ ಬಾಂಬ್" ಎಂಬ ಪದವಿಕೊಟ್ಟು ಮೆರೆಸಲು ಹೇಗೆ ಸಾಧ್ಯವಾಯಿತು? ಮುಷರ್ರಾಫನೇ ಈ ಕಳ್ಳ ವಿಜ್ಞಾನಿಗೆ ಆಶ್ರಯಕೊಟ್ಟು ಅಮೆರಿಕನ್ನರಿಗೂ ಚಳ್ಳೆ ಹಣ್ಣು ತಿನ್ನಿಸಿದವ.

ಇವನ ಪ್ರತಿಭೆ ಇಷ್ಟೇ ಅಲ್ಲ. ನಂಬಿಸಿ ಕುತ್ತಿಗೆ ಕುಯ್ಯುವ ಕೊರಮ ಇವನು. ಭಾರತಕ್ಕೆ ಭೇಟಿ ಕೊಟ್ಟು ತಾಜ್ ಮಹಲನ್ನು ನೋಡಿಕೊಂಡು ಹೋದ. ತಾಯಿಯನ್ನು ಕರೆದುಕೊಂಡು ದೆಹಲಿಯಲ್ಲಿ ದೇಶ ವಿಭಜನೆಗೆ ಮುನ್ನ ತಾನು ಹುಟ್ಟಿದ ಮನೆಯನ್ನು ನೋಡಿಬಂದ. ಶಾಂತಿಯ ಒಪ್ಪಂದ ಇನ್ನೇನು ಆಗಬೇಕು ಅನ್ನುವಾಗ ನುಣುಚಿಕೊಂಡು ಓಡಿದ. ಭಾರತದೊಂದಿಗೆ ಶಾಂತಿ ಆಗಿಬಿಟ್ಟರೆ ಪಾಕೀಸ್ತಾನದಲ್ಲಿ ಸೈನಿಕರಿಗೇನು ಕೆಲಸವಿದೆ? ಅಷ್ಟಕ್ಕೇ ಬಿಟ್ಟನೇ, ಇಲ್ಲ, ಗಡಿಯಲ್ಲಿ ಇಲ್ಲದ ಚೇಷ್ಟೆ ತೆಗೆದು ಯುದ್ಧವನ್ನೇ ಪ್ರಾರಂಭಿಸಿದ, ನೂರಾರು ಭಾರತೀಯ (ಮತ್ತು ಪಾಕೀಸ್ತಾನದ) ಯೋಧರ ಅಕಾಲಮೃತ್ಯುವಿಗೆ ಕಾರಣನಾದ. (ಸಾಲದ್ದಕ್ಕೆ, ತನ್ನ ಇತ್ತೀಚಿನ ಪುಸ್ತಕದಲ್ಲಿ ಕಾರ್ಗಿಲ್ ಯುದ್ಧದಬಗ್ಗೆ ಬರೆಯುತ್ತಾ, ಭಾರತೀಯ ಸೈನಿಕರ ಕಳೇಬರಗಳನ್ನು ಸಾಗಿಸಲು ಸಾಕಷ್ಟು ಶವಪೆಟ್ಟಿಗೆಗಳು ಇರಲಿಲ್ಲವೆಂದು ಜಂಬ ಕೊಚ್ಚಿಕೊಂಡಿದ್ದಾನೆ!)

ಇತರ ಸೈನ್ಯಾಧಿಕಾರಿಗಳಂತಲ್ಲ, ಇವ. ಒಂದು ಕಡೆ ಮುಲ್ಲಾಗಳಿಗೆ ಬೆಣ್ಣೆಹಾಕುತ್ತಾನೆ, ಇನ್ನೊಂದುಕಡೆ ಜಾತ್ಯಾತೀತನಂತೆ ಉಗ್ರರನ್ನು ಖಂಡಿಸುತ್ತಾನೆ. ಯಾರಿಗೂ ಕಾಣದಂತೆ ಉಗ್ರರನ್ನು ಸಾಕುತ್ತಾನೆ, ಅದೂ ರಾಜಧಾನಿಯ ಮಧ್ಯದಲ್ಲಿ! ಕೆಂಪು ಮಸೀದಿಯ ಮದರಸಾಗಳಲ್ಲಿ ಮುಗ್ದ ಬಾಲಕ ಬಾಲಕಿಯರ ತಲೆಯನ್ನು ಕೆಡಿಸುವ ಕಾರ್ಯಕ್ರಮ ಇವನ ಒಪ್ಪಿಗೆ ಇಲ್ಲದೇ ಮುಂದುವರೆಯಲು ಸಾಧ್ಯವೇ? ಅಲ್ಲಿ ತಯಾರಾದ ಭಯೋತ್ಪಾದಕರು ಆಫ್‌ಘಾನಿಸ್ತಾನದಲ್ಲೋ ಭಾರತದ ಕಾಶ್ಮೀರ ಪ್ರಾಂತ್ಯದಲ್ಲೋ ಪ್ರತ್ಯಕ್ಷರಾಗುತ್ತಾರೆ. ಬಾಂಬುಗಳನ್ನು ಸ್ಫೋಟಿಸಿ ನೂರಾರು ಮಾರಣಹೋಮಗಳಿಗೆ ಕಾರಣರಾಗುತ್ತಾರೆ. ಆದರೆ, ತನ್ನ ಮೂಗಿನಡಿಯಲ್ಲೇ ಬೆಳೆಯುತ್ತಿರುವ ಈ ಭಯೋತ್ಪಾದಕರಬಗ್ಗೆ ತನಗೆ ಏನೇನೂ ಗೊತ್ತಿಲ್ಲದಂತೆ ಬೂಟಾಟಿಕೆ ಮಾಡುತ್ತಾನೆ. ತಾನೇ ಸಾಕಿದ ನಾಯಿಗಳು ತನ್ನ ಕಾಲನ್ನೇ ಕಚ್ಚಲುಬಂದಾಗ ಎಚ್ಚರಿಕೆ ಉಂಟಾಗುವುದೇನೋ? ತಾನು ಭಯೋತ್ಪಾದಕರನ್ನು ಸದೆಬಡಿಯುವ ಗುಂಪಿನವನು ಎಂದು ಪ್ರಪಂಚಕ್ಕೆ ಸಾರಲು ತಾನೇ ಕೃಷಿಮಾಡಿ ಬೆಳೆಸಿದ ಕೆಂಪು ಮಸೀದಿಯ ಮದರಸಾಗಳಮೇಲೆ ಸೈನಿಕರನ್ನು ಛೂ ಬಿಡುತ್ತಾನೆ.

ಇವ ಅಮೆರಿಕದ ಅಧ್ಯಕ್ಷ ಬುಷ್ಷನ ಪರಮ ಮಿತ್ರರ ಪೈಕಿ ಒಬ್ಬ. ಅಮೇರಿಕಾ ಪಾಕೀಸ್ತಾನವನ್ನಾದರೂ ಬಿಟ್ಟುಕೊಟ್ಟೀತು, ಮುಷರ್ರಾಫ಼ನ ಕೈಬಿಡುವುದಿಲ್ಲ. ಹೀಗಾಗಿ, ಅವನಿಗೆ ಮತ್ತೈದು ವರ್ಷಗಳ ಪಟ್ಟ ಕಟ್ಟಲು ಬೇಕಾದ ವ್ಯವಸ್ಥೆಯನ್ನೆಲ್ಲ ರಹಸ್ಯವಾಗಿ ಮಾಡುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ, ದೇಶಭ್ರಷ್ಟನಾದ ಒಬ್ಬ "ಲಂಚಕೋರ" ಚುನಾಯಿತ ಪ್ರತಿನಿಧಿ ಸ್ವದೇಶಕ್ಕೆ ಹಿಂದಿರುಗುವ ತಯಾರಿಯಲ್ಲಿದ್ದಾನೆ, ಆದರೆ, ನಮ್ಮ ಮುಷರ್ರಾಫ಼ನಿಗೆ ಅವನು ಹಿಂದಿರುಗುವುದು ಇಷ್ಟವಿಲ್ಲ. ಆದರೂ ನ್ಯಾಯಾಲಯ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಮತ್ತೊಬ್ಬಳು, ಅವಳೂ ಲಂಚಕೋರಳೇ, ಆಕೆ ಗಲ್ಲಿಗೇರಿಸಲ್ಪಟ್ಟ ಜುಲ್ಫಿಕರ್ ಆಲಿ ಭುಟ್ಟೋ ಮಗಳು ಮತ್ತು ಈ ಗಾಗಲೇ ಎರಡು ಬಾರೀ ಪಾಕೀಸ್ತಾನದ ಪ್ರಧಾನಿಯಾಗಿ ದುಡಿದವಳು. ಸ್ವಯಂನಿರ್ಧಾರದಿಂದ ದೇಶ ಬಿಟ್ಟು ಪರದೇಶಿಯಾಗಿರುವ ಬೇನಜೀರ್ ಹೊರಗುಳಿದಿರುವುದು ಮುಷರ್ರಾಫ಼ನಿಗೆ ಹೆದರಿಯೇ. ಅವಳ ಪತಿಯೂ ಲಂಚಕೋರ, ಪತ್ನಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸರ್ಕಾರೀ ಹಣವನ್ನು ಲೂಟಿಮಾಡಿ ಇದುವರೆಗೂ ಕಾರಾಗೃಹವಾಸದಲ್ಲಿದ್ದವ.

ಈಗ, ಇದ್ದಕ್ಕಿದ್ದಂತೆ ಈ ಬದ್ಧವೈರಿಗಳು ಒಬ್ಬರಿಗೊಬ್ಬರು ಪರಮಮಿತ್ರರಾಗುವ ಸಾಧ್ಯತೆಯಬಗ್ಗೆ ಕದ್ದು ಕದ್ದು ಮಾತುಕತೆ ನಡೆಸುತ್ತಿದ್ದಾರೆ. "ಪಾಲಿಟಿಕ್ಸ್ ಮೇಕ್ಸ್ ಫಾರ್‌ ಸ್ಟ್ರೇಂಜ್ ಬೆಡ್‌ಫೆಲ್ಲೋಸ್" ಎಂಬ ಮಾತನ್ನು ಇಲ್ಲಿ ಅನ್ವಯಮಾಡುವಾಗ ಕೊಂಚ ಹುಷಾರಾಗಿರಬೇಕು (ಮುಷರ್ರಾಫ಼ ಮತ್ತು ಬೇನಜೀರ್ ಇವರಿಬ್ಬರ ಲಿಂಗಭೇದದ ಕಾರಣದಿಂದ ಸೂಚ್ಯಾರ್ಥವನ್ನು ಮಾತ್ರ ಸ್ವೀಕರಿಸಿ ವಾಚ್ಯಾಥವನ್ನು ತಿರಸ್ಕರಿಸಬೇಕು!).

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more