ಪುಸ್ತಕ ಭಂಡಾರದಲ್ಲಿ ಮರೆಯಲಾಗದ 30 ಆಣಿಮುತ್ತುಗಳು!
‘ನಾನು ಸ್ವರ್ಗ ಹೇಗಿರುತ್ತದೆ ಎಂದು ಊಹಿಸಿಕೊಂಡಾಗ, ಅದೊಂದು ಪುಸ್ತಕಾಲಯದಂತೆ ಕಾಣಿಸುತ್ತದೆ’ ಎಂಬ ಜಾರ್ಜ್ ಲೂಯಿಸ್ ಬೋರ್ಜಸ್‌ರ ಮಾತಿನಲ್ಲಿ ಅತಿಶಯವೇನಿಲ್ಲ! ಪುಸ್ತಕಗಳು ನೀಡುವ ಸುಖ, ಓದುಗನಿಗೆ ಮಾತ್ರ ಅರ್ಥವಾಗಲು ಸಾಧ್ಯ. ಪುಸ್ತಕಗಳ ಆಳ, ಅಗಲ, ಮಹತ್ವ ಬಣ್ಣಿಸುವ 30 ಜನಪ್ರಿಯ ಹೇಳಿಕೆಗಳು ನಿಮ್ಮ ಮುಂದೆ...
- ಡಾ. ಮೈ. ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್
[email protected]
ಮೇರೀಲ್ಯಾಂಡ್ ಸಂಸ್ಥಾನದ ಪ್ರಮುಖ ಜಿಲ್ಲೆಗಳಲ್ಲಿ ಮಂಟ್‌ಗಾಮರಿ ಜಿಲ್ಲೆಯೂ ಒಂದು. ಮಂಟ್‌ಗಾಮರಿ ಜಿಲ್ಲೆಯ ಪ್ರಮುಖ ನಗರಗಳಲ್ಲಿ ರಾಕ್‌ವಿಲ್ ಎಂಬ ನಗರವೂ ಒಂದು. ಮಂಟ್‌ಗಾಮರಿ ಜಿಲ್ಲೆಯ ಶಾಲೆಗಳು ಒಳ್ಳೆಯ ಮಟ್ಟದ ವಿದ್ಯಾಭ್ಯಾಸ ವ್ಯವಸ್ಥೆಗೆ ಇಡೀ ಅಮೇರಿಕದಲ್ಲೇ ಹೆಸರಾಗಿವೆ. ಈ ಜಿಲ್ಲೆಯ ಸರ್ಕಾರ ಉತ್ತಮ ಶಾಲೆಗಳನ್ನು ನಡೆಸುವುದರ ಜೊತೆಗೆ ಹಲವು ಅತ್ಯುತ್ತಮ ಪುಸ್ತಕಾಲಯಗಳನ್ನೂ ನಡೆಸಿಕೊಂಡು ಬಂದಿದೆ.
ರಾಕ್‌ವಿಲ್ ನಗರದಲ್ಲಿ ಇತ್ತೀಚೆಗೆ ಒಂದು ಆಧುನಿಕ ಪುಸ್ತಕಾಲಯ ಸುಮಾರು ಇಪ್ಪತ್ತಾರು ಮಿಲಿಯನ್ ಡಾಲರುಗಳ ಖರ್ಚಿನಲ್ಲಿ ಕಟ್ಟಲ್ಪಟ್ಟಿದೆ. ಒಂದು ಲಕ್ಷ ಚದುರಡಿ ವಿಸ್ತಾರವುಳ್ಳ ಈ ಪುಸ್ತಕಾಲಯ, ಸೌಧಶಿಲ್ಪದ ದೃಷ್ಟಿಯಿಂದ ಕೂಡ ಹೆಸರುಮಾಡಿದೆ. ಮಾನವಜೀವಾಣು ಶಾಸ್ತ್ರಕ್ಕೆ ಸಂಬಂಧಪಟ್ಟ ಹಲವಾರು ಸಂಶೋಧನೆಗಳಿಗೆ ಹೆಸರಾದ ಈ ಜಿಲ್ಲೆಯಲ್ಲಿ ಅನೇಕ ವೈಜ್ಞಾನಿಕ ಸಂಸ್ಥೆಗಳು ತಳವೂರಿವೆ. ಈ ಒಂದು ಸ್ಥಳೀಯ ಹೆಗ್ಗಳಿಕೆಯನ್ನು ಪ್ರತಿನಿಧಿಸುವುದಕ್ಕಾಗಿ, ಈ ಹೊಸ ಪುಸ್ತಕಾಲಯದ ಕಟ್ಟಡದ ಹೊರಮೈಗೆ ಕೊಟ್ಟಿರುವ ಆಕಾರದಲ್ಲಿ ‘‘ಹೀಲಿಕ್ಸ್’’ನಂಥ (ಹಾವಿನ ನಡೆಯಂತೆ ತೋರುವ) ಉಬ್ಬುತಗ್ಗುಗಳನ್ನು ಉಪಯೋಗಿಸಲಾಗಿದೆ. ಅದೇರೀತಿ, ಕಟ್ಟಡದ ಮಧ್ಯಭಾಗದ ಪ್ರಾಂಗಣಕ್ಕೆ ಹೆಜ್ಜೆ ಇಟ್ಟಾಗ ನೆಲದಮೇಲೆ ಕಾಣುವ ಚಿತ್ರ ಹ್ಯೂಮನ್ ಜಿನೋಮಿನ (ಮಾನವ ಜೀವಾಣು) ನಕ್ಷೆ.
ಮಕ್ಕಳ ಪುಸ್ತಕಗಳು, ಅಂಧರಿಗಾಗಿ ವಿಶೇಷವಾಗಿ ಬ್ರೈಲ್ ಲಿಪಿಯಲ್ಲಿ ಮುದ್ರಿಸಿರುವ ಪುಸ್ತಕಗಳು, ಮಾತಾಡುವ (ಧ್ವನಿಮುದ್ರಿತ) ಪುಸ್ತಕಗಳು, ದೃಷ್ಟಿಮಾಂಧ್ಯಆಗುತ್ತಿರುವವರಿಗಾಗಿ ದೊಡ್ಡಕ್ಷರದ ಪುಸ್ತಕಗಳೇ ಮೊದಲಾಗಿ ಸಹಸ್ರಾರು ಹಳೆಯ ಮತ್ತು ಹೊಸ ಗ್ರಂಥಗಳಿವೆ. ಅಂಗವಿಕಲರಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರಷ್ಯನ್, ವಿಯಟ್‌ನಮೀಸ್, ಕೊರಿಯನ್, ಚೈನೀಸ್ ಮುಂತಾದ ಭಾಷೆಗಳೂ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಕಟವಾದ ಪುಸ್ತಕಗಳ ಸಂಗ್ರಹ ಕೂಡ ಇಲ್ಲಿದೆ. ಗಣಕಗಳ ಉಪಯೋಗಕ್ಕೂ ಸಾಕಷ್ಟು ಒತ್ತು ಕೊಡಲಾಗಿದೆ. ನಿಶ್ಶಬ್ದ ಬೇಕಾದವರಿಗಾಗಿ ಅಧ್ಯಯನದ ಕೋಣೆಗಳು ಸಾಕಷ್ಟಿವೆ.
ಈ ಕಟ್ಟಡದ ಆರಂಭೋತ್ಸವ ಇತ್ತೀಚೆಗೆ ಆದಾಗ, ವೃತ್ತಪತ್ರಿಕೆಯಲ್ಲಿ ಹಲವು ವಿವರಗಳನ್ನು ಓದಿದ್ದೆನಾಗಿ ಸ್ವಲ್ಪ ಕುತೂಹಲವೂ ನನ್ನ ಮನಸ್ಸಿನಲ್ಲಿ ಉಂಟಾಗಿತ್ತು. ಹೀಗಾಗಿ, ಕಳೆದ ವಾರಾಂತ್ಯದಲ್ಲಿ ಅಲ್ಲಿಗೆ ಭೇಟಿ ಇತ್ತಾಗ ಒಳಾಂಗಣದಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದದ್ದು, ಸುತ್ತಲೂ ಭಿತ್ತಿಯಮೇಲೆ ದಪ್ಪಕ್ಷರಗಳಲ್ಲಿ ಕೆತ್ತಿದ ಆಣಿಮುತ್ತುಗಳು. ಕಲ್ಲಿನ ಮೇಲಿರುವ ಅಮೃತವಾಕ್ಯಗಳು ಕಾಗದದಮೇಲೂ ಇರಬಹುದೆಂದು ಭಾವಿಸಿ ವಿಚಾರಿಸಿದೆ. ಅವುಗಳನ್ನು ಮುದ್ರಿಸಿಲ್ಲವೆಂದು ಅಲ್ಲಿಯ ಒಬ್ಬಾಕೆ ಹೇಳಿದಾಗ ನನಗೆ ಕೊಂಚ ನಿರಾಸೆ ಆಯಿತು. ಆದರೂ, ಒಂದಿಷ್ಟು ಸಮಯ ಹಿಡಿದರೂ ಚಿಂತೆಯಿಲ್ಲ, ಅವುಗಳನ್ನು ಸಂಗ್ರಹಿಸಬೇಕು, ಜಾಲತರಂಗದ ಮಿತ್ರರೊಂದಿಗೆ ಹಂಚಿಕೊಳ್ಳಬೇಕು ಎನ್ನಿಸಿತು. ಅವುಗಳನ್ನು ಕನ್ನಡಿಸಿದ್ದೇನೆ, ಇಗೋ ಓದಿ ಆಯ್ದ ಈ ಮುತ್ತುಗಳನ್ನು. (ಅವುಗಳನ್ನು ನುಡಿದ ಮಹಾನುಭವಿಗಳ ಹೆಸರುಗಳನ್ನು ಕಂಸಗಳಲ್ಲಿ ಕೊಡಲಾಗಿದೆ.)
(1) ಒಮ್ಮೆ ಓದಲು ಕಲಿತರೆ, ನೀವು ಎಂದೆಂದಿಗೂ ಮುಕ್ತರಾದಂತೆ. (ಫ್ರೆಡೆರಿಕ್ ಡಗ್ಲಸ್)
(2) ಜೀವನದಲ್ಲಿ ಎಲ್ಲವೂ ಅರಿತುಕೊಳ್ಳಬೇಕಾದ್ದೇ ಹೊರತು ಹೆದರಿಕೊಳ್ಳಬೇಕಾದ್ದು ಯಾವುದೂ ಇಲ್ಲ. (ಮೇರೀ ಕ್ಯೂರಿ)
(3) ತಿಳಿವಳಿಕೆಗೆ ಭಾರವಿಲ್ಲ, ತಿಳಿದುಕೊಂಡಿದ್ದನ್ನೆಲ್ಲಾ ನಿರಾಯಾಸವಾಗಿ ಹೊತ್ತು ತಿರುಗಬಹುದು. (ಚೈನಾದೇಶದ ಒಂದು ನಾಣ್ನುಡಿ)
(4) ಒಂದು ಒಳ್ಳೆಯ ಪುಸ್ತಕಾಲಯದಲ್ಲಿ ಒಬ್ಬ ಓದುಗನನ್ನಲ್ಲದಿದ್ದರೆ ಮತ್ತೊಬ್ಬನನ್ನು ಅಸಮಾಧಾನಗೊಳಿಸುವಂಥ ಹಲವು ಪುಸ್ತಕಗಳಾದರೂ ಇದ್ದೇ ಇರುತ್ತವೆ. (ಜಾನ್ ಗುಡ್ವಿನ್)
(5) ಅಪ್ರಿಯವಾಗಿದ್ದರೂ ಸತ್ಯಾಂಶಗಳನ್ನು ಅಮೆರಿಕದ ಜನತೆಗೆ ತಿಳಿಸಲು ನಾವು ಭಯಪಡುವುದಿಲ್ಲ. ಅದೇ ರೀತಿ, ಒಳ್ಳೆಯ ಚಿಂತನೆಗಳು ಅಥವಾ ತತ್ವಗಳು ಪರಕೀಯ ಮೂಲದ್ದೆಂಬ ಕಾರಣದಿಂದಾಗಲೀ, ಅಥವಾ ನಮ್ಮ ಜನರಿಗೆ ಸ್ಪರ್ಧೆಯ ಸವಾಲನ್ನೊಡ್ಡಬಹುದೆಂಬ ಭಯದಿಂದಾಗಲೀ ಅವನ್ನು ನಾವು ಅಮೆರಿಕದ ಜನತೆಯಿಂದ ಮುಚ್ಚಿಡುವುದಿಲ್ಲ. ಏಕೆಂದರೆ, ಯಾವ ದೇಶದ ಜನರಿಗೆ ಸತ್ಯಾಸತ್ಯಗಳನ್ನು ಸ್ವತಃ ಪರೀಕ್ಷಿಸಿಕೊಳ್ಳಲು ಸ್ವಾತಂತ್ಯವಿಲ್ಲವೋ, ಅಂಥ ದೇಶ ತನ್ನ ಜನರನ್ನು ಕಂಡರೆ ಹೆದರುತ್ತದೆ ಎಂದು ಅರ್ಥ. (ಅಧ್ಯಕ್ಷ, ಜಾನ್ ಎಫ್. ಕೆನಡಿ)
(6) ಸುದ್ದಿಯನ್ನು ಮುಚ್ಚಿಡುವ ಅಥವಾ ಸೋಸಿಬಿಡುವ (ಅಂದರೆ ಸೆನ್ಸರ್ ಮಾಡುವ) ಸಮಾಜಕ್ಕೆ ತನ್ನಲ್ಲಿ ತನಗೇ ಭರವಸೆಯಿಲ್ಲವೆಂದರ್ಥ. (ಪಾಟರ್ ಸ್ಟೀವರ್ಟ್)












Click it and Unblock the Notifications