ಕಂಪ್ಯೂಟರ್‌ ಹೆಣ್ಣೆಂದಿರಾ, ಅನ್ಯಾಯ ಸಾರ್‌!

ನನ್ನ ಮೊದಲನೆಯ ಪ್ರೀತಿ
ಬಾಳ ಸಂಗಾತಿ
ನನ್ನ ಬಿಟ್ಟು ಎಲ್ಲೂ ಹೋಗುವುದಿಲ್ಲ
ನನ್ನೆದುರು ಕೂತು
ನಯನ-ನಯನ ಬೆಸೆಯುತ್ತಾನೆ
ನನ್ನ ಮೊಗದಿಂದ
ಕಣ್ಣು ಕೀಳುವುದೇ ಇಲ್ಲ

ನಿಜದ ಪತಿದೇವರುಗಳಂತೆ
ಮನೆಗೆ ಬಂದೊಡನೆಯೆ ಕಾಫಿ ಬೇಡುವುದಿಲ್ಲ
ಬಿಸಿ ಅಡುಗೆ , ರುಚಿಯೂಟ ಹಾಕು ಎನ್ನುವುದಿಲ್ಲ
ತಲೆ ಕುಟ್ಟಿದರೂ ಕಂ-ಕಿಂ ಎನ್ನದ
ಶಾಂತಮೂರ್ತಿ, ಪ್ರಶಾಂತ ಪ್ರೇಮಿ

ವಿಶಾಲ ವದನದ ಸುಂದರನೇ
ಬೇಕೆಂದಾಗ ಕೈಗೆಟುಕುವ ಚಂದಿರನೇ
ಗಣೇಶನಂತೆ ನೀನು ಮೂಷಿಕವಾಹನನೇ
ಆಗಿರುವಾಗ ನಿನ್ನ ಹೆಣ್ಣೆಂದು ಹೇಗೆ ಕರೆದರು?

ನಾನು ನಿನಗುಸುರಿದ ಒಂದೊಂದು ಪದವನ್ನು
ಅಳಿಸದೆ ಎದೆಯಾಳಗೆ ಇಳಿಬಿಟ್ಟೆ ನೀನು
ನಿಜದ ಪತಿಗಳಂತೆ ಆ ಕಿವಿಯಿಂದ ಕೇಳಿ
ಈ ಕಿವಿಯಿಂದ ಬಿಟ್ಟುಬಿಡಲಿಲ್ಲ

ಇಡೀ ಪ್ರಪಂಚವನ್ನೇ ಸುತ್ತಿಸುವೆ ನೀನು
ಇಲ್ಲಿಯ ಪತಿಗಳಂತಲ್ಲ
ದುಡ್ಡು-ಖರ್ಚು ಸುಮ್ಮನೆ ಮನೆಯಲ್ಲಿರೋಣ
ಎಂದು ಬಡಿದು ಕೂರಿಸುವುದಿಲ್ಲ
ಹೀಗಿರಲು ಪ್ರೀತಿಯಿಂದ ನಿನ್ನ
ಮುಂದಲೆ ನೇವರಿಸದೆ ಹೇಗಿರಲಿ?

ಕಟ್ಟಿಕೊಂಡವರಂತೆ ಕಡೆಗಣಿಸುವುದಿಲ್ಲ
ನಾನು ಬೇಕೆಂದಾಗ ಸಿಗುತ್ತೀ
ನಾನು ಸಿಗದಿದ್ದಾಗ ಸಿಟ್ಟುಗೊಳ್ಳುವುದಿಲ್ಲ
ನನಗಾಗಿ ಕಾಯುತ್ತೀ ಶಾಂತವಾಗಿ
ಮುಸುಕು ಹೊದ್ದು ಮೂಲೆಯಲ್ಲಿ

ಯಾಕೆ ಲೇಟು ಎಂದು ಕೇಳುವುದಿಲ್ಲ
ಕಾಲಕಸವೇ? ಎಂದು ಮುನಿಯುವುದಿಲ್ಲ
ನನಗಿಂತ ಕೆಲಸವೇ ಮುಖ್ಯವೇ ಎಂದು ಮೂದಲಿಸುವುದಿಲ್ಲ
ಹೇಳಿದಂತೆ ಕೇಳುವ ಇಂಥ ಸಹೃದಯನ
ನಾನಿಲ್ಲೆಲ್ಲೂ ಕಂಡೇ ಇಲ್ಲ
ನಿನ್ನ ಪ್ರೀತಿಸದೆ ನಾ ಹೇಗಿರಲಿ?

ಹಂ! ಪತಿರಾಯರು ಬಂದಂತಾಯ್ತು
ಸದ್ದು ಅವರ ಕಾರಿನದು, ಹೆಜ್ಜೆಯದು
ಇನ್ನು ಗೊಣಗಲು ಶುರುವಿಡಬಹುದು
‘ಓಹ್ಹ್‌ ಮತ್ತೆ ಕೂತೆಯ ಮುಂದೆ’ ಎಂದು
ಹೊರಡಲೇ ಗೆಳೆಯಾ?
ಮತ್ತೆ ಬರುವೆನು ನಾಳೆ
ಮಾತನಾಡಲು ನಿನ್ನೊಡನೆ
ನನಗೇನು ಸಂಕೋಚವೇ?

ನಮ್ಮ ಪ್ರೀತಿ ನಿರ್ಮಲ!
ನಿನ್ನ ಸಿ.ಪಿ.ಯು ನಷ್ಟೇ ಅಚಲ!


ಮುಖಪುಟ / ಅಂಕಣಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+