ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀತಿ ಕಥೆ : ಅಧಿಕಾರದ ಮದದಲ್ಲಿ ತೇಲಬೇಡ

By * ಎಆರ್ ಮಣಿಕಾಂತ್
|
Google Oneindia Kannada News

Never forget your past
ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ ಈ ಊರಿಗೆ ರಾಮಪುರ ಎಂಬ ಹೆಸರು ಬಂತೆಂದೂ, ಕಾಲಕ್ರಮೇಣ ಜನರ ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತೆಂದೂ ಜನ ಈಗಲೂ ಮಾತಾಡುತ್ತಾರೆ. ಊರ ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರ ಶಿವನನ್ನು ಪೂಜಿಸಿದನಂತೆ ಎಂದು ಇನ್ನೊಂದು ಕತೆಯನ್ನು ಹೇಳುತ್ತಾರೆ.

ಈಗ ಹೇಳಲಿರುವ ಕಥೆ ಅದೆಷ್ಟೋ ವರ್ಷಗಳ ಹಿಂದೆ ನಡೆದದ್ದು. ಅಂದರೆ, ರಾಜರ ಆಡಳಿತವಿತ್ತಲ್ಲ? ಆಗ ನಡೆದದ್ದು. ರಾಂಪುರದಲ್ಲಿ ಆಗ ಒಬ್ಬ ಭಿಕ್ಷುಕನಿದ್ದ. ಅವನ ಹೆಸರು ಸುಬ್ಬ. ಒಂದು ಮಾಸಲು ಅಂಗಿ, ಅಲ್ಯುಮಿನಿಯಂ ತಟ್ಟೆ ಹಾಗೂ ಮಾರುದ್ದದ ಒಂದು ಕೋಲು. ಇವಿಷ್ಟೂ ಸುಬ್ಬನ ಆಸ್ತಿ. ಬೆಳಗಿನ ಹೊತ್ತು, ಈಶ್ವರನ ದೇವಾಲಯದ ಮುಂದಿನ ಅರಳೀಕಟ್ಟೆಯಲ್ಲಿ ಆತ ಕೂತಿರುತ್ತಿದ್ದ. ದೇವಸ್ಥಾನಕ್ಕೆಂದು ಬಂದವರು ಏನಾದರೂ ಕೊಟ್ಟರೆ ಅದನ್ನು ಪಡೆದುಕೊಳ್ಳುತ್ತಿದ್ದ. ಬೆಳಗ್ಗೆ-ಮಧ್ಯಾಹ್ನ-ಸಂಜೆ ಏನು ಸಿಗುತ್ತಿತ್ತೋ ಅದನ್ನು ಖುಷಿಯಿಂದ ತಿನ್ನುತ್ತಿದ್ದ. ಬಹುಶಃ ಅವನಿಗೆ ಆಸೆಯಿರಲಿಲ್ಲ. ನಾಳೆಗೆ ಕೂಡಿಡುವ ಬುದ್ಧಿಯೂ ಇರಲಿಲ್ಲ. ಹಾಗಾಗಿ ಅವನು ಮನೆಮನೆಯಲ್ಲಿ ಭಿಕ್ಷೆ ಕೇಳಲು ಹೋಗುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಊರಿನ ಯಾರದಾದರೂ ಮನೆಯ ಜಗುಲಿಯಲ್ಲಿ ಮಲಗಿಬಿಡುತ್ತಿದ್ದ. ಬೆಳಗ್ಗೆ ಆದದ್ದೇ ತಡ, ಊರ ಸಮೀಪವಿದ್ದ ಕೆರೆಯ ಬಳಿ ಹೋಗಿ, ನಿತ್ಯಕರ್ಮಗಳನ್ನು ಮುಗಿಸಿ ಸೀದಾ ಬಂದು ಅರಳೀಕಟ್ಟೆಯಲ್ಲಿ ಕೂತುಬಿಡುತ್ತಿದ್ದ.

ಸುಬ್ಬನಿಂದ ಯಾವತ್ತೂ ಯಾರಿಗೂ ತೊಂದರೆಯಾಗಿರಲಿಲ್ಲ. ದಿನವೂ ಒಂದೊಂದು ಮನೆಯ ಜಗುಲಿಯಲ್ಲಿ ಮಲಗುತ್ತಿದ್ದನಲ್ಲ? ಆಗ, ಕೂಡ ಮನೆಯವರಿಗೆ ಯಾವುದೇ ರೀತಿಯ ಕಿರಿಕಿರಿಯಾಗದಂತೆ ಎಚ್ಚರವಹಿಸುತ್ತಿದ್ದ. ಅವನು ಹೊರಗಿದ್ದಾನೆ ಎಂದರೆ, ಮನೆಯ ರಕ್ಷಣೆಗೆ ಒಬ್ಬ ಸಮರ್ಥ ಕಾವಲುಗಾರ ಇದ್ದಂತಾಗುತ್ತಿತ್ತು. ಈ ಕಾರಣದಿಂದ ಊರಿನ ಯಾರೂ ಸುಬ್ಬನನ್ನು ಯಾಕಪ್ಪಾ ಇಲ್ಲಿ ಉಳ್ಕೊಂಡಿದೀಯ ಎಂದು ಕೇಳುತ್ತಿರಲಿಲ್ಲ.

ಹುಟ್ಟು ಸೋಮಾರಿಯಂತಿದ್ದ, ಭಿಕ್ಷೆಯನ್ನೇ ಬದುಕಾಗಿಸಿಕೊಂಡಿದ್ದ ಸುಬ್ಬನಿಗೆ ಒಂದು ವಿಶೇಷ ಗುಣವಿತ್ತು. ಜನ ಏನಾದರೂ ಸಮಸ್ಯೆ ಹೇಳಿದರೆ, ಅವನು ಅದಕ್ಕೆ ಪರಿಹಾರ ಹೇಳುತ್ತಿದ್ದ. ಎಷ್ಟೇ ಕಷ್ಟದ ಸಮಸ್ಯೆ ಅಂದುಕೊಂಡರೂ ಅದನ್ನು ಸುಲಭವಾಗಿ ಬಿಡಿಸುತ್ತಿದ್ದ. ಹೀಗೆ ಪರಿಹಾರ ಹೇಳುತ್ತಿದ್ದನಲ್ಲ? ಅದಕ್ಕೆ ನಯಾಪೈಸೆಯ ಗೌರವಧನವನ್ನೂ ಪಡೆಯುತ್ತಿರಲಿಲ್ಲ. ಬದಲಾಗಿ, ಇದು ನನ್ನ ಆತ್ಮ ಸಂತೋಷದ ಕೆಲಸ ಎಂದು ಬಿಡುತ್ತಿದ್ದ. ರಾಂಪುರದ ಕಡುಬಡವನಿಂದ ಹಿಡಿದು ಪಟೇಲರವರೆಗೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಬ್ಬನ ಬಳಿಗೆ ಸಮಸ್ಯೆಹೊತ್ತುಕೊಂಡು ಬರುತ್ತಿದ್ದರು. ಆತ ಎಲ್ಲವನ್ನೂ ಕೇಳಿಸಿಕೊಂಡು ಐದಾರು ನಿಮಿಷದ ನಂತರ ಪರಿಹಾರ ಹೇಳುವುದನ್ನು ವಿಸ್ಮಯದಿಂದ ಕೇಳುತ್ತಿದ್ದರು. ನಂತರ, ಇಷ್ಟೊಂದು ಬುದ್ಧಿವಂತನಾಗಿದ್ದರೂ ಈತ ಪಟ್ಟಣಕ್ಕೆ ಹೋಗಿ ಕೈ ತುಂಬಾ ಸಂಪಾದಿಸದೆ, ಕುಗ್ರಾಮದಲ್ಲಿ ಭಿಕ್ಷೆ ಬೇಡುವುದಾದರೂ ಏಕೆ ಎಂದು ತಮಗೆ ತಾವೇ ಕೇಳಿಕೊಳ್ಳುತ್ತಿದ್ದರು. ಉತ್ತರ ಹೊಳೆಯದೇ ಹೋದಾಗ ಸುಮ್ಮನಾಗುತ್ತಿದ್ದರು.

ಹೀಗಿರುವಾಗಲೇ ಒಂದು ದಿನ ಮಹಾರಾಜರ ಸವಾರಿ ರಾಂಪುರ ಗ್ರಾಮಕ್ಕೆ ಬಂತು. ಅಂದಮೇಲೆ ಕೇಳಬೇಕೆ? ಈಶ್ವರ ದೇವಾಲಯವನ್ನು ಬಗೆಬಗೆಯಲ್ಲಿ ಅಲಂಕರಿಸಲಾಯಿತು. ಪಟೇಲರೂ ಸೇರಿದಂತೆ ಊರ ಹಿರಿಯರೆಲ್ಲ ಬೆಳಗಿನಿಂದಲೇ ಮಹಾರಾಜರ ದಾರಿ ಕಾಯುತ್ತಿದ್ದರು. ಕಡೆಗೊಮ್ಮೆ ಮಹಾರಾಜರ ಸವಾರಿ ಬಂದೇ ಬಂತು. ಮುಖಂಡರಿಂದ ಮಹಾರಾಜರು ಆತಿಥ್ಯ ಸ್ವೀಕರಿಸಿದರು. ತುಸು ಹೊತ್ತು ವಿಶ್ರಾಂತಿ ಪಡೆದರು. ನಂತರ ಪ್ರಜೆಗಳ ಸುಖ-ದುಃಖ ಕೇಳಲು ಹೊರಟ. ಆ ಸಂದರ್ಭದಲ್ಲಿಯೇ ಅರಳೀ ಕಟ್ಟೆಯಲ್ಲಿ ಒಂದು ಮಾಸಲು ಅಂಗಿ-ಅಲ್ಯುಮಿನಿಯಂ ತಟ್ಟೆ ಹಿಡಿದು ಕೂತಿದ್ದ ಸುಬ್ಬ ಮಹಾರಾಜರ ಕಣ್ಣಿಗೆ ಬಿದ್ದ.

ಚಂದಮಾಮ, ಬಾಲಮಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ನೀತಿ ಕಥೆಗಳು ಹೀಗೇ ಇರುತ್ತಿತ್ತು.
ತಮ್ಮದು ರಾಮರಾಜ್ಯ, ಸುಭಿಕ್ಷಾ ಸಾಮ್ರಾಜ್ಯ ಎಂಬುದು ಮಹಾರಾಜರ ನಂಬಿಕೆಯಾಗಿತ್ತು. ಇಂಥ ಸಂದರ್ಭದಲ್ಲಿ ಭಿಕ್ಷುಕನೊಬ್ಬ ಕಣ್ಣಿಗೆ ಬಿದ್ದುದರಿಂದ ಅವರಿಗೆ ತುಂಬ ಬೇಜಾರಾಯಿತು. ಛೆ, ನಮ್ಮ ರಾಜ್ಯದಲ್ಲಿ ಈಗಲೂ ಭಿಕ್ಷುಕರು ಇದ್ದಾರಲ್ಲ ಎಂದು ನೊಂದುಕೊಂಡರು. ನಂತರ ಪಟೇಲರನ್ನು ಕರೆದು-ಯಾರೀತ? ನೋಡೋಕೆ ಗಟ್ಟಿಮುಟ್ಟಾಗೇ ಇದ್ದಾನೆ. ಇವನಿಗೆ ದುಡಿದು ತಿನ್ನಲು ಏನು ದಾಡಿ ಎಂದು ಪ್ರಶ್ನೆ ಹಾಕಿದರು. ಮಹಾಪ್ರಭುಗಳೆ, ಈತ ಭಿಕ್ಷುಕ ನಿಜ. ಆದರೆ ಇವನು ಅಪಾರ ಬುದ್ಧಿವಂತನೂ ಹೌದು. ಎಂಥ ಸಮಸ್ಯೆಗೂ ಪರಿಹಾರ ಹೇಳಬಲ್ಲ ಶಕ್ತಿ ಈ ಭಿಕ್ಷುಕನಿಗಿದೆ. ಅಂದಹಾಗೆ, ಇವನ ಹೆಸರು ಸುಬ್ಬ. ಇವನನ್ನು ನಮ್ಮ ಊರಿನ ಆಸ್ತಿ ಎಂದು ಕರೆದರೂ ತಪ್ಪಿಲ್ಲ ಸ್ವಾಮಿ...!'

ಪಟೇಲರಿಂದ ಈ ಬಗೆಯ ಉತ್ತರ ಕೇಳಿ ಮಹಾರಾಜರಿಗೆ ಆಶ್ಚರ್ಯವಾಯಿತು. ಹಿಂದೆಯೇ, ಈ ಭಿಕ್ಷುಕನ ಇನ್ನೊಂದು ಮುಖವನ್ನು ನೋಡಿಬಿಡುವ ಆಸೆಯೂ ಬಲಿಯಿತು. ಅದೇ ಸಂದರ್ಭಕ್ಕೆ, ತುಂಬ ದಿನಗಳಿಂದಲೂ ಪರಿಹಾರವಾಗದೆ ತಲೆ ತಿನ್ನುತ್ತಿದ್ದ ಆಡಳಿತಕ್ಕೆ ಸಂಬಂಸಿದ ಸಮಸ್ಯೆಯೊಂದು ನೆನಪಾಯಿತು. ತಕ್ಷಣವೇ ಭಿಕ್ಷುಕನ ಬಳಿ ಹೋದ ಮಹಾರಾಜರು-ನೋಡಯ್ಯ, ನನ್ನದೊಂದು ಸಮಸ್ಯೆ ಇದೆ. ಅದಕ್ಕೆ ಪರಿಹಾರ ಸೂಚಿಸಿದರೆ ನಿನಗೆ ಬಹುಮಾನವಾಗಿ ಒಂದು ಚಿನ್ನದ ನಾಣ್ಯ ಕೊಡ್ತೇನೆ' ಎಂದರು.

ಈ ಸುಬ್ಬ ತಕ್ಷಣವೇ ಹೀಗೆಂದ: ಮಹಾಪ್ರಭುಗಳೆ, ನನಗೆ ಚಿನ್ನದ ನಾಣ್ಯ ಬೇಡ. ಅದನ್ನು ನೀವೇ ಇಟ್ಟುಕೊಳ್ಳಿ. ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಏನೆಂದು ಹೇಳಿ...' ಒಬ್ಬ ಯಃಕಶ್ಚಿತ್ ಭಿಕ್ಷುಕನಿಂದ ಈ ಬಗೆಯ ಉತ್ತರವನ್ನು ಮಹಾರಾಜರು ನಿರೀಕ್ಷಿಸಿರಲಿಲ್ಲ. ಅವರಿಗೆ ತುಂಬ ಬೇಸರವಾಯಿತು. ಆದರೆ ಏನೂ ಮಾಡುವಂತಿರಲಿಲ್ಲ. ಇರಲಿ' ಎಂದುಕೊಂಡು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.

ಭಿಕ್ಷುಕ ಸುಬ್ಬ ಐದಾರು ನಿಮಿಷ ತಲೆ ತಗ್ಗಿಸಿದ್ದ. ಆ ಸಮಯದಲ್ಲಿ ತನ್ನಷ್ಟಕ್ಕೆ ತಾನೇ ಏನೇನೋ ಮಾತಾಡಿಕೊಂಡ. ಕೈ ಬೆರಳುಗಳನ್ನು ಬಿಡಿಸಿ, ಮಡಿಚಿ ಅದೇನೇನೋ ಲೆಕ್ಕಾಚಾರ ಮಾಡಿದ. ನಂತರ ಒಂದು ಪರಿಹಾರ ಹೇಳಿಯೇ ಬಿಟ್ಟ. ಅದು ಮಹಾರಾಜರಿಗೆ ಸರಿ ಕಾಣಿಸಿತು. ಅವರು ಸುಬ್ಬನನ್ನು ಪ್ರೀತಿ, ಅಭಿಮಾನ, ಮೆಚ್ಚುಗೆಯಿಂದ ನೋಡುತ್ತ, ಒಂದು ಚಿನ್ನದ ನಾಣ್ಯವನ್ನು ಅವನ ಮುಂದಿಟ್ಟು: ಇದನ್ನು ನೀನು ಸ್ವೀಕರಿಸಲೇಬೇಕು ಎಂದು ಹೇಳಿ ಅರಮನೆಗೆ ಬಂದರು. ಮರುದಿನ ಮಹಾರಾಜರಿಗೆ, ಆಡಳಿತದ ವಿಷಯಕ್ಕೆ ಸಂಬಂಸಿದಂತೆ ಇನ್ನೊಂದು ಸಮಸ್ಯೆ ತಲೆದೋರಿತು. ಮಂತ್ರಿಮಂಡಲದ ಪ್ರಮುಖರ ಮುಂದೆ ಈ ಸಮಸ್ಯೆ ಇಟ್ಟರು. ಅವರು ಸೂಚಿಸಿದ ಪರಿಹಾರಗಳು ಮಹಾರಾಜರಿಗೆ ಇಷ್ಟವಾಗಲಿಲ್ಲ. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ಮತ್ತೆ ರಾಂಪುರದ ಭಿಕ್ಷುಕ ಸುಬ್ಬನ ನೆನಪಾಯಿತು. ಅವತ್ತೇ ಸಂಜೆ ಸಮಸ್ಯೆಯೊಂದಿಗೆ ರಾಜ, ಸುಬ್ಬನ ಮುಂದೆ ನಿಂತಿದ್ದ.

ಸುಬ್ಬ ಈ ಬಾರಿಯೂ ಮಹಾರಾಜನಿಗೆ ತುಂಬ ಇಷ್ಟವಾಗುವಂಥ ರೀತಿಯಲ್ಲೇ ಸಮಸ್ಯೆಗೆ ಪರಿಹಾರ ಸೂಚಿಸಿದ. ಅದನ್ನು ಕೇಳಿದ ನಂತರವಂತೂ ಸುಬ್ಬನ ಪ್ರಚಂಡ ಬುದ್ಧಿಶಕ್ತಿಯ ಕುರಿತು ಮಹಾರಾಜರಿಗೆ ಅನುಮಾನವೇ ಉಳಿಯಲಿಲ್ಲ. ಅವರು ಎರಡೇ ಕ್ಷಣದಲ್ಲಿ ಒಂದು ನಿರ್ಧಾರಕ್ಕೆ ಬಂದು ಸುಬ್ಬನನ್ನು ಉದ್ದೇಶಿಸಿ ಹೀಗೆಂದರು: ಸುಬ್ಬು ಅವರೇ, ನೀವು ಒಂದೊಂದು ಸಮಸ್ಯೆಗೂ ಪರಿಹಾರ ಸೂಚಿಸುವ ರೀತಿ ಸೊಗಸಾಗಿದೆ. ಒಬ್ಬ ಮಹಾಮಂತ್ರಿಗೆ ಇರಬೇಕಾದ ಬುದ್ಧಿ ಶಕ್ತಿ ನಿಮಗಿದೆ. ಅದು ಸದುಪಯೋಗ ಆಗಬೇಕು. ಹಾಗಾಗಿ ನೀವು ದಯವಿಟ್ಟು ಅರಮನೆಗೆ ಬನ್ನಿ. ನನ್ನ ವಿಶೇಷ ಸಲಹೆಗಾರರೆಂದು ನೇಮಿಸಿಕೊಳ್ಳುತ್ತೇನೆ. ನಿಮಗೆ ಅರಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ನಿಮಗೆ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ನಮಗೆ ಆಡಳಿತದಲ್ಲಿ ಮಾರ್ಗದರ್ಶನ ಮಾಡಿ...'

ಮಹಾರಾಜರು ಹೇಳಿದ ಮೇಲೆ ಕೇಳಬೇಕೆ? ಅವತ್ತೇ ಅಲ್ಲಲ್ಲಿ ಹರಿದುಹೋಗಿದ್ದ, ಗಬ್ಬುನಾತ ಹೊಡೆಯುತ್ತಿದ್ದ ಶರ್ಟು, ಅಲ್ಯುಮಿನಿಯಂ ತಟ್ಟೆ ಹಾಗೂ ಹಳೆಯ ಊರುಗೋಲಿನೊಂದಿಗೇ ಸುಬ್ಬ ಅರಮನೆಗೆ ಬಂದ. ಮರುದಿನದಿಂದಲೇ ಅವನ ಗೆಟಪ್ಪು ಬದಲಾಗಿಹೋಯಿತು. ಮೊದಲಿಗೆ, ಸುಬ್ಬನ ಹೆಸರು ಸುಬ್ರಾಯ ಶರ್ಮ ಎಂದಾಯಿತು. ಕೆಲವರು ಅವನನ್ನು ಜೋಯ್ಸರೇ ಎನ್ನಲೂ ಶುರುಮಾಡಿದರು. ಮಹಾರಾಜರಂತೂ ತುಂಬ ಪ್ರೀತಿಯಿಂದ ಮಂತ್ರಿಗಳೇ...' ಎಂದೇ ಕರೆಯುತ್ತಿದ್ದರು. ಮಹಾರಾಜರ ನಿವಾಸದ ಪಕ್ಕದಲ್ಲೇ ಇದ್ದ ಇನ್ನೊಂದು ಸೌಧದಲ್ಲಿ ಸುಬ್ಬುವಿನ ವಾಸಕ್ಕೆ ವ್ಯವಸ್ಥೆ ಮಾಡಲಾಯಿತು. ಒಂದು ಕಾಲದಲ್ಲಿ ವಾರವಿಡೀ ಸ್ನಾನ ಮಾಡದಿದ್ದ ಸುಬ್ಬ, ಈಗ ಪ್ರತಿದಿನವೂ ಸುಗಂಧದ್ರವ್ಯ ಹಾಕಿದ್ದ ನೀರಲ್ಲೆ ಕೈ ತೊಳೆಯುವುದನ್ನು, ದಿನದಿನವೂ ಮಡಿ ವಸ್ತ್ರ ಧರಿಸುವುದನ್ನು; ಅರಮನೆಯ ಶಿಸ್ತು, ಶಿಷ್ಟಾಚಾರದೊಂದಿಗೆ ಬದುಕುವುದನ್ನು ರೂಢಿ ಮಾಡಿಕೊಂಡ. ಈ ಹಿಂದೆಲ್ಲಾ ರಾಂಪುರದ ಅರಳೀಕಟ್ಟೆಯಲ್ಲಿ ಕೂತು ಅವರಿವರ ಸಂಕಟಗಳಿಗೆ ಪರಿಹಾರ ಹೇಳುತ್ತಿದ್ದವನು, ಈಗ ರಾಜನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹೇಳುವಂಥವನಾದ. ಮಹಾರಾಜರು ಈ ಸುಬ್ರಾಯನನ್ನು ಅದೆಷ್ಟು ಹಚ್ಚಿಕೊಂಡರೆಂದರೆ, ಅರಮನೆಯ ಹಾಗೂ ರಾಜ್ಯದ ಎಲ್ಲ ರಹಸ್ಯಗಳನ್ನೂ ಅವನೊಂದಿಗೆ ಹೇಳಿಕೊಂಡರು.

ಮಹಾರಾಜರು ಮೊನ್ನೆ ಮೊನ್ನೆಯಷ್ಟೇ ಬಂದ ಸುಬ್ರಾಯಶರ್ಮನಿಗೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿದ್ದು ಅರಮನೆಯಲ್ಲಿದ್ದ ಉಳಿದ ಮಂತ್ರಿಗಳನ್ನು ಕೆರಳಿಸಿತು. ಹಾಗೆಯೇ ಸುಬ್ರಾಯನ ಅತಿಯಾದ ಬುದ್ಧಿವಂತಿಕೆ ಕಂಡು ಅವರಿಗೆ ಅನುಮಾನವೂ ಬಂತು. ಸಮಯ ನೋಡಿ ಮಹಾರಾಜರಿಂದ ಅವನನ್ನು ದೂರ ಮಾಡಲೇಬೇಕು ಎಂದು ಅವರೆಲ್ಲ ಲೆಕ್ಕ ಹಾಕಿಯೇಬಿಟ್ಟರು. ಸುಬ್ರಾಯನ ಒಂದೇ ಒಂದು ತಪ್ಪಿಗಾಗಿ ಹುಡುಕುತ್ತಿದ್ದವರಿಗೆ, ಕಡೆಗೂ ಅಂಥದೊಂದು ಸಂದರ್ಭ ಒದಗಿಬಂತು. ಈ ವೇಳೆಗೆ ಸುಬ್ರಾಯ ಅರಮನೆಗೆ ಬಂದು ವರ್ಷವೇ ಕಳೆದಿತ್ತು. ಅದೊಂದು ದಿನ ಮಂತ್ರಿಮಂಡಲದ ಎಲ್ಲರೂ ಸೇರಿ ಮಹಾರಾಜರ ಬಳಿ ಹೋದರು. ಪ್ರಭೂ, ನಾವೆಲ್ಲ ನಿಮ್ಮೊಂದಿಗೆ ಒಂದು ಮಹತ್ವದ ವಿಷಯ ಕುರಿತು ಚರ್ಚಿಸಬೇಕಾಗಿದೆ. ಒಂದು ರಹಸ್ಯ ಸಭೆಯ ಏರ್ಪಾಡು ಮಾಡಿ. ಆದರೆ, ಒಂದು ವಿನಂತಿ. ಈ ಸಭೆಗೆ ಸುಬ್ರಾಯ ಶರ್ಮರನ್ನು ಕರೆಯಬಾರದು' ಎಂದರು.

ಈ ಮಂತ್ರಿಗಳೆಲ್ಲ ಅರಮನೆಯಲ್ಲಿ ದಶಕಗಳಿಂದ ಇದ್ದವರು. ಹಾಗಾಗಿ ಅವರನ್ನು ಸಂದೇಹದಿಂದ ನೋಡಲು ರಾಜನಿಗೆ ಮನಸ್ಸಾಗಲಿಲ್ಲ. ವಿಷಯ ಮಹತ್ವದ್ದೇ ಇರಬೇಕು. ಹೇಗಿದ್ದರೂ ದಿನವೂ ಸಂಜೆ ಸುಬ್ರಾಯ ಶರ್ಮ ಅಂತಃಪುರದಲ್ಲಿ ನಡೆವ ಚರ್ಚೆಗೆ ಬರುತ್ತಾನೆ. ಆಗ ಇದನ್ನೆಲ್ಲ ಹೇಳಿದರಾಯಿತು ಎಂದೇ ರಾಜ ಯೋಚಿಸಿದ. ನಂತರ, ಗುಪ್ತ ಸಭೆಗೆ ದಿನವನ್ನೂ ನಿಗದಿಪಡಿಸಿದ.

ಮಹಾರಾಜರೆ, ನಮ್ಮ ಮಾತನ್ನು ದಯಮಾಡಿ ನಂಬಿ. ನಾವು ಕಳೆದು ಐದು ತಿಂಗಳಿನಿಂದಲೂ ದಿನದಿನವೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ನಂತರವೇ ಈ ಮಾತು ಹೇಳುತ್ತಿದ್ದೇನೆ. ಏನೆಂದರೆ- ಸುಬ್ರಾಯ ಶರ್ಮ ಬೇರೆ ಯಾರೂ ಅಲ್ಲ. ಆತ ಶತ್ರುದೇಶದ ಗೂಢಚಾರಿ. ಅವನಿಗೆ ಸಕಲೆಂಟು ವಿದ್ಯೆಗಳನ್ನು ಕಲಿಸಿದ ನಂತರವೇ ನಮ್ಮ ದೇಶಕ್ಕೆ ಕಳಿಸಲಾಗಿದೆ. ಇಲ್ಲವಾದರೆ, ಒಬ್ಬ ಯಃಕಶ್ಚಿತ್ ಭಿಕ್ಷುಕನಿಗೆ ಇಂಥ ಅಪರೂಪದ ಬುದ್ಧಿವಂತಿಕೆ ಬರಲು ಹೇಗೆ ಸಾಧ್ಯ? ನಾವು ಕಣ್ಣಾರೆ ಕಂಡಿರುವ ಮಾತು ಕೇಳಿ; ಸುಬ್ರಾಯ ಪ್ರತಿದಿನವೂ ಸಂಜೆ ತನ್ನ ಮಹಲಿನ ಸಮೀಪವಿರುವ ಪುಟ್ಟದೊಂದು ಕೋಣೆಗೆ ತಪ್ಪದೇ ಹೋಗುತ್ತಾನೆ. ಒಬ್ಬನೇ ಹೋಗುತ್ತಾನೆ. ಹಾಗೆ ಹೋಗುವ ಮುನ್ನ ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಹಾಗೆ ಕೋಣೆಯ ಒಳಗೆ ಹೋದವನು, ಅರ್ಧ ಗಂಟೆಯ ನಂತರ ಹೊರಗೆ ಬರುತ್ತಾನೆ. ಹಾಗೆ ಹೊರಬಂದವನನ್ನು ಕೋಣೆಯಲ್ಲಿ ಇಷ್ಟು ಹೊತ್ತು ಏನು ಮಾಡುತ್ತಿದ್ದೆ ಎಂದು ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಾನೆ. ಬಹುಶಃ ಅವನು ತನ್ನವರಿಗೆ ಆ ಕೋಣೆಯಲ್ಲಿ ನಿಂತು ನಮ್ಮ ರಾಜ್ಯದ ರಹಸ್ಯವನ್ನೆಲ್ಲ ಹೇಳುತ್ತಾನೆ ಅನಿಸುತ್ತೆ. ಆ ಕೋಣೆಯಿಂದ ಹೊರಹೋಗಲು ಸುರಂಗ ಮಾರ್ಗವಿದ್ದರೂ ಇದ್ದೀತು. ಯಾವುದನ್ನೂ ನೀವೇ ಪರಿಶೀಲಿಸಿ ಬೇಕಾದರೆ...' ಎಂದರು.

ಒಂದು ಅನುಮಾನದ ಅಡ್ಡಗೆರೆ ಎಂಥ ಮಧುರ ಬಾಂಧವ್ಯವನ್ನೂ ಅಳಿಸಿಹಾಕಬಲ್ಲದು. ಮಹಾರಾಜನ ವಿಷಯದಲ್ಲೂ ಹೀಗೇ ಆಯಿತು. ಮಂತ್ರಿಮಂಡಲದ ಸದಸ್ಯರೆಲ್ಲರ ಮಾತುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ರಾಜನಿಗೆ ಸುಬ್ರಾಯ ಶರ್ಮ ಒಬ್ಬ ಗೂಢಚಾರಿ ಎಂಬುದು ಗ್ಯಾರಂಟಿಯಾಗಿ ಹೋಯಿತು. ಅದುವರೆಗೆ ಅವನ ಬುದ್ಧಿವಂತಿಕೆಯ ವಿಷಯದಲ್ಲಿ ಇದ್ದ ಅಭಿಮಾನವೆಲ್ಲ ಕ್ಷಣ ಮಾತ್ರದಲ್ಲಿಯೇ ಅನುಮಾನವಾಗಿ ಬದಲಾಯಿತು. ಇರಲಿ. ಎಲ್ಲವನ್ನೂ ಪ್ರತ್ಯಕ್ಷವಾಗಿ ನೋಡೋಣ. ಆನಂತರವೇ ಸುಬ್ರಾಯನನ್ನು ಶಿಕ್ಷಿಸೋಣ ಎಂದು ನಿರ್ಧರಿಸಿದ ರಾಜ. ಅದೊಂದು ಸಂಜೆ ಸುಬ್ರಾಯ ಆ ಕೋಣೆಗೆ ಹೋದ ಹತ್ತು ನಿಮಿಷದ ನಂತರ ತಾನೂ ಹೋಗಲು ನಿರ್ಧರಿಸಿದ. ಕೋಣೆಯ ಸುತ್ತಲೂ ಮಾರುವೇಷದಲ್ಲಿ ಸೈನಿಕರನ್ನು ಬಿಟ್ಟು ಒಳಗಿನಿಂದ ಯಾರೇ ಅಪರಿಚಿತರು ಬಂದರೂ ಹಿಂದೆ ಮುಂದೆ ನೋಡದೆ ಕತ್ತರಿಸಿ ಹಾಕಿ ಎಂದು ಸೈನಿಕರಿಗೆ ತನ್ನ ಆದೇಶ ನೀಡಿದ.

ಕಡೆಗೂ, ಎಲ್ಲರೂ ಅಂದುಕೊಂಡಿದ್ದ ಸಮಯ ಬಂತು. ಸುಬ್ರಾಯ ಶರ್ಮ ಅವಸರದಲ್ಲಿ ಎಂಬಂತೆ ತನ್ನ ಮನೆಗೆ ಸಮೀಪದ ಕೋಣೆ ಹೊಕ್ಕ. ಸ್ವಲ್ಪ ದೂರದಲ್ಲಿ ಮಾರು ವೇಷದಲ್ಲಿದ್ದ ರಾಜ ಇದನ್ನು ಗಮನಿಸಿದ. ಸುಬ್ರಾಯ, ಕಳ್ಳನಂತೆ ಸುತ್ತಮುತ್ತ ನೋಡಿ ಕೊಣೆ ಪ್ರವೇಶಿಸಿದನಲ್ಲ? ಅದನ್ನು ಕಂಡು ರಾಜನ ರಕ್ತ ಕುದಿಯಿತು. ಅವನ ದೇಶದ್ರೋಹ ಏನಿರಬಹುದು ಎಂದು ನೆನಪು ಮಾಡಿಕೊಂಡು ನಿಂತಲ್ಲೇ ಕಟಕಟನೆ ಹಲ್ಲು ಕಡಿದ. ನಂತರ, ತನ್ನನ್ನು ತಾನೇ ನಿಗ್ರಹಿಸಿಕೊಂಡು, ಸಮಾಧಾನ ಮಾಡಿಕೊಂಡು ಸದ್ದಾಗದಂತೆ ಆ ಕೋಣೆಯ ಬಳಿ ಬಂದು, ದಬದಬನೆ ಬಾಗಿಲು ಬಡಿದ.

ಯಾರದು?' ಎಂದ ಸುಬ್ರಾಯನ ತಣ್ಣಗಿನ ದನಿಗೆ ನಾನು. ಬಾಗಿಲು ತೆಗೆ' ಎಂದ ರಾಜ. ಬಾಗಿಲು ತೆರೆಯಿತು. ರಾಜ ಕತ್ತಿ ಹಿಡಿದುಕೊಂಡೇ ಒಳಗೆ ಬಂದ. ಸುಬ್ರಾಯನನ್ನು ಬಿಟ್ಟು ಯಾವ ಕುನ್ನಿಯೇ ಕಂಡರೂ ಅದರ ತಲೆ ಹಾರಿಸಬೇಕು ಎಂಬುದು ರಾಜನ ಎಣಿಕೆಯಾಗಿತ್ತು. ಆದರೆ, ಅಲ್ಲಿ ಯಾರೆಂದರೆ ಯಾರೂ ಇರಲಿಲ್ಲ. ಬದಲಿಗೆ ಸುಬ್ರಾಯನ ಹಳೆಯ ಸಂಗಾತಿಗಳಾದ ಹರಕು ಬಟ್ಟೆ, ಅಲ್ಯುಮಿನಿಯಂ ತಟ್ಟೆ ಹಾಗೂ ಊರುಗೋಲಿತ್ತು. ಅವನನ್ನೇ ಬೆರಗಿನಿಂದ ನೋಡಿದ ರಾಜ-ನೀನು ದಿನಾಲೂ ಇಲ್ಲಿಗೆ ಬರ್‍ತೀಯಂತೆ. ಸ್ವಲ್ಪ ಹೊತ್ತು ಇಲ್ಲೇ ಇರ್‍ತೀಯಂತೆ. ಇಲ್ಲಿ ನೀನು ಏನು ಮಾಡ್ತಿರ್‍ತೀಯ? ಹೇಳು...' ಅಂದ.

ಮಹಾಪ್ರಭುಗಳೆ, ಒಂದು ಕಾಲದಲ್ಲಿ ಬೀದೀಲಿ ಕೂತು ಭಿಕ್ಷೆ ಬೇಡುತ್ತಿದ್ದವ ನಾನು. ಅಂಥವನಿಗೆ ಈಗ ರಾಜ ಮರ್ಯಾದೆ ಸಿಗುತ್ತಿದೆ. ಅಧಿಕಾರದ ಅಮಲಿನಲ್ಲಿ ತೇಲಬೇಡ. ಈ ಹಿಂದೆ ನೀನು ಏನಾಗಿದ್ದೆ ಎಂಬುದನ್ನು ಮರೆಯಬೇಡ ಎಂದು ನನಗೆ ನಾನೇ ಹೇಳಿಕೊಳ್ಳುವ ಸಲುವಾಗಿ ದಿನವೂ ಕೋಣೆಗೆ ಬರುತ್ತಿದ್ದೆ. ಈ ಹಳೆಯ ಸಂಗಾತಿಗಳ ಮುಂದೆ ನಿಂತು ಆ ಮಾತುಗಳನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ನೀವು ಯಾರನ್ನೋ ಬೇಟೆಯಾಡಲು ಬಂದಂತಿದೆಯಲ್ಲ, ಯಾರ ನಿರೀಕ್ಷೆಯಲ್ಲಿ ಬಂದಿರಿ ಮಹಾಪ್ರಭು ಎಂದ ಸುಬ್ಬ ಉರುಫ್ ಸುಬ್ರಾಯ ಶರ್ಮ.

ಈ ಮಾತು ಕೇಳಿ ರಾಜನಿಗೆ ತನ್ನ ಕುರಿತು ನಾಚಿಕೆಯಾಯಿತು. ಸುಬ್ರಾಯನ ವಿಷಯವಾಗಿ ಏನೇನೋ ಕಲ್ಪಿಸಿಕೊಂಡಿದ್ದಕ್ಕೆ ಅಸಹ್ಯ ಅನ್ನಿಸಿತು. ಆತ ಏನೊಂದೂ ಮಾತಾಡದೆ, ಸುಬ್ರಾಯನನ್ನು ಬಾಚಿ ತಬ್ಬಿಕೊಂಡ. ಆ ಅಪ್ಪುಗೆ, ಅದರ ಬಿಸುಪು ಜತೆಗೇ ಇದ್ದ ಮೌನ-ಅದೆಷ್ಟೊ ಪ್ರಶ್ನೆಗಳಿಗೆ ಉತ್ತರ ಹೇಳಿತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X