• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮ್ಮನಂಥ ಉಮಾಶ್ರೀಗೆ...

By * ಎಆರ್ ಮಣಿಕಾಂತ್
|
ರಾಷ್ಟ್ರಪ್ರಶಸ್ತಿ ವಿಜೇತೆ ಉಮಾಶ್ರೀ ಅವರಿಗೆ- ಹಾರ್ದಿಕ ಅಭಿನಂದನೆಗಳು .

ಮೇಡಂ, ಹೌದಲ್ವಾ? ನಿಮಗೆ ಈಗ ಬಿಡುವು ಅನ್ನೋದೇ ಇಲ್ಲ. ನಾಡಿನ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರ. ನಮ್ಮೂರಿಗೆ ಬನ್ನಿ, ನಮ್ಮೂರಿಗೆ ಬನ್ನಿ' ಎಂಬ ಆಹ್ವಾನಗಳು ಒಂದರ ಹಿಂದೊಂದು ಬರ್‍ತಿವೆ. ಯಾವುದೇ ಊರಿಗೆ ಹೋದರೂ ಅಭಿಮಾನಿಗಳು, ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಓಡೋಡಿ ಬರ್‍ತಿದಾರೆ. ನಿಮಗೆ ರಾಷ್ಟ್ರ ಪ್ರಶಸ್ತಿ ಬಂತಲ್ಲ ಮೇಡಂ, ಅದಕ್ಕೆ ಅಭಿನಂದನೆ' ಎಂದು ಪ್ರೀತಿಯಿಂದ ಹೇಳುತ್ತಿದ್ದಾರೆ. ತುಂಬ ಅಭಿಮಾನದಿಂದ ಬೊಕೆ ಕೊಡುತ್ತಿದ್ದಾರೆ. ಶಾಲು ಹೊದಿಸುತ್ತಿದ್ದಾರೆ. ತುಂಬ ಗೌರವದಿಂದ ಒಂದೊಳ್ಳೆಯ ಭಾಷಣ ಮಾಡುತ್ತಿದ್ದಾರೆ. ಸಮಾರಂಭಕ್ಕೆ ಬಂದ ಹೆಂಗಸರಂತೂ, ಜತೆಗಿರುವವರನ್ನು ತಿವಿದು- ಅಲ್ನೋಡ್ರಿ ಉಮಾಶ್ರೀ. ದೊಡ್ಡ ನಟಿ ಆಗಿದ್ರೂ, ಈಗ ಒಂದು ರಾಷ್ಟ್ರಪ್ರಶಸ್ತಿ ತಗೊಂಡ್ರೂ ಎಷ್ಟು ಸಿಂಪಲ್ಲಾಗಿ ಬಂದಿದ್ದಾರೆ ನೋಡಿ. ನೀವು ಏನೇ ಹೇಳಿ, ನಮ್ಮ ಕನ್ನಡ ಚಿತ್ರರಂಗ ಉಮಾಶ್ರೀ ಪ್ರತಿಭೆಗೆ ಸರಿಹೊಂದುವಂಥ, ಆಕೆಯ ಪ್ರತಿಭೆಗೆ ಸವಾಲಾಗುವಂಥ ಪಾತ್ರಗಳನ್ನು ಕೊಡಲೇ ಇಲ್ಲ' ಎಂಬ ಮೆಚ್ಚುಗೆಯ ಮಾತುಗಳಾಡುತ್ತಿದ್ದಾರೆ.

ಹೀಗೆ, ಅವರಿವರ ಪಿಸುಮಾತುಗಳೆಲ್ಲ ಮುಗಿದ ನಂತರ ಒಂದೆರಡು ಮಾತಾಡೋಣ ಎಂದುಕೊಂಡು ನೀವು ಮೈಕು ಕೈಗೆತ್ತಿಕೊಳ್ಳುತ್ತೀರಿ ನಿಜ. ಆದರೆ ಎರಡು ಮಾತಾಡುವ ವೇಳೆಗೇ, ಯಾಕೋ ಕಣ್ತುಂಬಿ ಬರುತ್ತದೆ. ಅದು ಆನಂದ ಬಾಷ್ಪ. ಹೇಗೋ ಕಷ್ಟಪಟ್ಟು ಕಂಬನಿ ಬೀಳದಂತೆ ತಡೆದು- ತುಂಬ ಭಾವುಕಳಾಗಿದೀನಿ. ಹೇಗೆ ಮಾತಾಡಬೇಕೋ ಅರ್ಥವಾಗ್ತಾ ಇಲ್ಲ ಎನ್ನುವ ವೇಳೆಗೆ ನಿಮ್ಮ ದನಿ ಭಾರವಾಗಿರುತ್ತದೆ. ಗಂಟಲು ಗದ್ಗದ. ಇದನ್ನು ಕಂಡ ಜನರು ಅಭಿಮಾನಿಗಳು. ಪಾಪ ಕಣ್ರೀ. ಉಮಾಶ್ರೀ ತುಂಬಾನೇ ಅತ್ಕೊಂಡು ಮಾತಾಡ್ತಾ ಇದಾರೆ' ಎಂದು ತಾವೂ ಕಣ್ತುಂಬಿಕೊಳ್ಳುತ್ತಾರೆ.

ಕೇಳಿ ಮೇಡಂ, ಇದು ಈ ಕ್ಷಣದ ಸತ್ಯ. ಹತ್ತು ದಿನದಿಂದ ಈಚೆಗೆ ಕಾಣುತ್ತಿರುವ ದೃಶ್ಯ. ಈಚೀಚೆಗಷ್ಟೇ ಕೇಳಿಬರುತ್ತಿರುವ ಮೆಚ್ಚುಮಾತು. ಈಗ ಎಲ್ಲರೂ ಹಠಕ್ಕೆ ಬಿದ್ದವರಂತೆ ನಿಮ್ಮನ್ನೂ, ನಿಮ್ಮ ಅಭಿನಯವನ್ನೂ ಹೊಗಳ್ತಾ ಇರೋದು ನೋಡಿ ನಿಮಗೆ ಏಕಕಾಲಕ್ಕೆ ಸಂತೋಷ, ಬೆರಗು ಮತ್ತು ಅನುಮಾನ ಜತೆಯಾಗಿರಬಹುದು. ಹಾಗಾಗಿ ಮೇಡಂ, ಈ ಸಂಭ್ರಮವನ್ನು ಒಂದರ್ಧ ಗಂಟೆ ಮರೆತು ನಡೆದು ಬಂದ ದಾರಿಯತ್ತ ಒಮ್ಮೆ ತಿರುಗಿ ನೋಡೋಣವಾ?

***

ಕೇಳಿ: ನಮ್ಮ ಜನಾನೇ ಹಾಗೆ. ಅವರು ಹೀರೋಯಿನ್‌ಗಳನ್ನು ಆರಾಧಿಸ್ತಾರೆ. ಪೂಜಿಸುತ್ತಾರೆ. ಒಳಗೊಳಗೇ ಪ್ರೀತಿಸುತ್ತಾರೆ! ಸ್ವಲ್ಪ ಹುಚ್ಚು ಹಿಡಿದ್ರೆ ಅಭಿಮಾನಿ ಸಂಘ ಕಟ್ಟಿಕೊಳ್ತಾರೆ. ಹಾಗೆಯೇ ನಾಯಕ-ನಾಯಕಿಯ ತಾಯಂದಿರ ಪಾತ್ರಗಳಲ್ಲಿ ನಟಿಸ್ತಾರಲ್ಲ? ಅವರನ್ನು ಅಯ್ಯೋ ಪಾಪ' ಅನ್ನೋ ದೃಷ್ಟಿಯಿಂದಲೇ ನೋಡ್ತಾರೆ. ಅದು ಬಿಟ್ಟರೆ, ಒಂದು ತಮಾಷೆಗೆ ವಸ್ತುವಾಗುವ, ಕಥೆಯೊಳಗೆ ಒಂದು ಪಾತ್ರವಾಗಿ ಬಂದು ಹೋಗುವ' ನಟಿಯರನ್ನು ಕಂಡರೆ ನಮ್ಮ ಜನರಿಗೆ ಏನೋ ತಾತ್ಸಾರ. ಇವರೆಲ್ಲ ಜಾಸ್ತಿ ದಿನ ಫೀಲ್ಡ್‌ನಲ್ಲಿ ಇರೋದಿಲ್ಲ. ಇವತ್ತಿದ್ದು ಇನ್ನೆರಡು ವರ್ಷದಲ್ಲಿ ಮಾಜಿ ಆಗಿಬಿಡ್ತಾರೆ ಎಂಬ ಕಾರಣಕ್ಕೆ ಜನ ಹಾಗೆ ವರ್ತಿಸ್ತಾರಾ? ಗೊತ್ತಿಲ್ಲ. ಮೂರು ದಶಕದ ಹಿಂದೆ ನೀವು ಪೋಷಕ ನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದಿರಲ್ಲ? ಅವತ್ತು ಇಂಡಸ್ಟ್ರಿಯ ಜನ ನಿಮ್ಮ ಅಭಿನಯವನ್ನು ಸೀರಿಯಸ್ಸಾಗಿ ತಗೊಳ್ಳಲೇ ಇಲ್ಲ. ಮೊದಲ ಐವತ್ತರವತ್ತು ಸಿನಿಮಾಗಳಲ್ಲಿ ಕಾಂಜಿಪೀಂಜಿ ಅನ್ನುವಂಥ ಪಾತ್ರಗಳನ್ನೇ ಕೊಟ್ಟರು. ಹಳೇದು ನೆನಪಿಸ್ತಾ ಇರೋದಕ್ಕೆ ಬೇಸರ ಮಾಡ್ಕೋಬೇಡಿ ಮೇಡಂ. ಆ ಪಾತ್ರಗಳು ಒಂಚೂರೂ ಚನ್ನಾಗಿರಲಿಲ್ಲ. ಅವುಗಳಲ್ಲಿ ಜೀವ' ಇರಲಿಲ್ಲ. ಆ ಪಾತ್ರಗಳಿಗೆ ಒಂದು ತೂಕ ಇರಲಿಲ್ಲ. ಸತ್ವ ಅಂತೀವಿ ನೋಡಿ, ಅದೂ ಇರಲಿಲ್ಲ. ಎಷ್ಟೋ ಸಿನಿಮಾಗಳಲ್ಲಿ ಆ ಚಿತ್ರದ ಕಥೆಗೂ ನಿಮ್ಮ ಪಾತ್ರಕ್ಕೂ ಸಂಬಂಧವೇ ಇರ್‍ತಿರಲಿಲ್ಲ. ಸಿನಿಮಾ ಆರಂಭವಾದ ಇಪ್ಪತ್ತೈದು ನಿಮಿಷಕ್ಕೋ, ಇಂಟರ್‌ವಲ್‌ಗೆ ಹದಿನೆಂಟು ನಿಮಿಷವಿದೆ ಅನ್ನುವಾಗಲೋ ಅಥವಾ ಮಧ್ಯಂತರದ ನಂತರವೋ ನಿಮ್ಮ ಪಾತ್ರ ಧುತ್ತನೆ ತೆರೆಯ ಮೇಲೆ ಬರ್‍ತಿತ್ತು. ಕೆಲವೊಂದು ಸಿನಿಮಾಗಳಲ್ಲಿ ನೀವು ಡಿಂಕಣಕ ಡಿಂಕಣಕ ಎಂದು ಕುಣಿದಾಡಿಕೊಂಡು ಬಂದು ಬಿಡ್ತಿದ್ರಿ. ಜತೆಯಲ್ಲಿ ಎನ್.ಎಸ್. ರಾವ್ ಅಥವಾ ಮುಖ್ಯಮಂತ್ರಿ ಚಂದ್ರು ಅವರ ಪಾತ್ರವೂ ಇರ್‍ತಿತ್ತು. ನೀವು ಸಖತ್ ತಮಾಷೆಯಾಗಿ ಒಂದೆರಡು ಡೈಲಾಗ್ ಹೊಡೆದು, ಒಮ್ಮೆ ಕಣ್ಣು ಮೆಡ್ಡರಿಸಿ, ಒಂದು ಆವಾಜ್ ಬಿಸಾಕಿ, ಸೀರೆಯ ನೆರಿಗೆಯನ್ನು ಸೊಂಟಕ್ಕೆ ಸಿಕ್ಕಿಸಿ, ಕುಸ್ತಿ ಮಾಡೇ ಬಿಡುವವರಂತೆ ನಿಂತು- ಹೇಯ್, ಬ್ಯಾಡ ನೋಡು, ನನ್ನನ್ನ ಕೆಣಕಬ್ಯಾಡ ಕಣೋ, ಸಿಟ್ಟು ಬಂದ್ರೆ ನಿನ್ನನ್ನ ಚಟ್ ಪಕಾರ್ ಅನ್ನಿಸಿಬಿಡ್ತೀನಿ ನೋಡು ಎಂದು ಡೈಲಾಗ್ ಹೇಳಿಬಿಡ್ತಿದ್ರಿ. ಕೆಲವೊಂದು ಸಂದರ್ಭದಲ್ಲಿ ಪಡ್ಡೆ ಹುಡುಗರೇ ಪೆಚ್ಚಾಗೋ ಥರಾ ವಿಷಲ್ ಹೊಡೆದು ಮತ್ತೆ ಡಿಂಕಣಕ ಡಿಂಕಣಕ ಅಂತ ಡ್ಯಾನ್ಸು ಮಾಡ್ಕೊಂಡು ಹೋಗಿಬಿಡ್ತಿದ್ರಿ. ಆಗೆಲ್ಲ ಜನ ಬೆರಗಾಗಿ- ಇಂಥ ಗಂಡುಬೀರಿ ಪಾತ್ರಗಳಿಗೆ ಈ ಉಮಾಶ್ರೀನ ಬಿಟ್ರೆ ಬೇರೆ ಯಾರೂ ಸಿಗಲ್ಲ ನೋಡ್ರಿ' ಅಂದು ತೀರ್ಪು ಕೊಡ್ತಿದ್ರು.

ಆದರೆ ನಿಮ್ಮನ್ನು ತುಂಬ ಹತ್ತಿರದಿಂದ ಕಂಡಿದ್ದವರು- ಪಾಪ ಕಣ್ರೀ ಉಮಾಶ್ರೀ. ಆಕೆ ವೈಯಕ್ತಿಕ ಬದುಕಿನಲ್ಲಿ ತುಂಬ ನೊಂದಿದ್ದಾಳೆ. ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದಾಳೆ. ಒಂದೊಂದು ಕಷ್ಟ ಎದುರಾದಾಗಲೂ ಒಂದಿಡೀ ರಾತ್ರಿ ಕಣ್ಣೀರು ಹಾಕಿದ್ದಾಳೆ. ಎಲ್ಲ ನೋವುಗಳ ವಿರುದ್ಧ;, ಬದುಕಲ್ಲಿ ಬಂದು ಹೋದ ಅಷ್ಟೂ ಸಂಕಟಗಳ ವಿರುದ್ಧ; ಅವಮಾನಗಳ ವಿರುದ್ಧ ಸೇಡು ತೀರಿಸ್ಕೋಬೇಕು ಅಂತ ಬದುಕ್ತಾ ಇದ್ದಾಳೆ. ಬೆಳ್ಳಿತೆರೆಯ ಮೇಲೇನೋ ಹಾಸ್ಯ ಪಾತ್ರಗಳಲ್ಲಿ ಮಿಂಚ್ತಾ ಇದಾಳೆ ನಿಜ. ಆದರೆ ಆಕೆಯ ಅಂತರಂಗದಲ್ಲಿ ಯಾರೂ ಅರ್ಥ ಮಾಡಿಕೊಳ್ಳದಂಥ ನೋವಿದೆ. ಹಾಗಾಗಿ ಉಮಾಶ್ರೀಯನ್ನು; ಆಕೆ ನಿರ್ವಹಿಸುವ ಪಾತ್ರಗಳನ್ನು ಕಂಡು ಟೀಕಿಸುವ ಮುನ್ನ ಹತ್ತು ಬಾರಿ ಯೋಚಿಸಬೇಕು' ಎಂದಿದ್ದರು.

ಹೌದಲ್ವ ಮೇಡಂ? ಹಲವರು ಇಂಥ ಅನುಕಂಪದ ಮಾತು ಹೇಳಿದ ನಂತರವೂ ಕೆಲವರು ಸುಮ್ಮನಾಗಲಿಲ್ಲ. ಯಾರನ್ನಾದರೂ ಕೆಣಕದಿದ್ರೆ ತಿಂದ ಅನ್ನ ಅರಗೋದಿಲ್ಲ ಎಂಬಂಥ ಮನಸ್ಸು ಅವರದು. ಅಂಥವರೆಲ್ಲ ಸೇರಿಕೊಂಡು ಛೆ ಛೆ, ಉಮಾಶ್ರೀ ಮಾಡ್ತಿದಾರಲ್ಲ ಪಾತ್ರ? ಅವುಗಳಿಗೆ ಏನಾದ್ರೂ ಅರ್ಥವಿದೆಯೇನ್ರೀ? ಮುಜುಗರ ತರುವಂಥ ಪಾತ್ರಗಳನ್ನು ಅವರು ಹೇಗೆ ಒಪ್ಕೋತಾರೋ? ಎಂದು ಕುಟುಕಿದ್ದರು. ಆಶ್ಚರ್ಯ. ನೀವು ಅವತ್ತೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಬದಲಾಗಿ, ನಾನು ಕಲಾವಿದೆ. ಪೋಷಕ ನಟಿ. ಇಂಥದೇ ಪಾತ್ರ ಬೇಕೆಂದು ಹಟ ಹಿಡಿದು ಕೂರಲು ನಾನು ಹೀರೋಯಿನ್ ಅಲ್ಲ. ನನಗೆ ದೊರಕಿದ ಪಾತ್ರಗಳಲ್ಲಿ ನಟಿಸಬೇಕಾದದ್ದು ನನ್ನ ಧರ್ಮ. ನನ್ನ ಮಟ್ಟಿಗೆ, ಪಾಲಿಗೆ ಬಂದದ್ದೇ ಪಂಚಾಮೃತ. ಕೆಲವೊಂದು ಪಾತ್ರಗಳಲ್ಲಿ ನಟಿಸುವಾಗ ನನಗೂ ಹಿಂಸೆಯಾಗುತ್ತೆ. ಬೇಸರವಾಗುತ್ತೆ. ದುಃಖವಾಗುತ್ತೆ. ಮುಜುಗರ ಆಗುತ್ತೆ. ಹಾಗಂತ ನಟಿಸದೇ ಹೋದರೆ ಹೊಟ್ಟೆ ಪಾಡಿನ ಗತಿಯೇನು? ನನ್ನ ಕಣ್ಮುಂದೆ ಮಕ್ಕಳಿದ್ದಾರೆ. ಅವರ ಭವಿಷ್ಯವಿದೆ. ಮಕ್ಕಳನ್ನು ತುಂಬಾ ಚೆನ್ನಾಗಿ ಓದಿಸಬೇಕು ಅನ್ನೋ ಆಸೆಯಿದೆ. ಈ ಕನಸು ನನಸಾಗಬೇಕಾದರೆ ದುಡ್ಡು ಬೇಕಲ್ಲ? ಹಾಗಾಗಿ ನಟಿಸ್ತಾ ಇದೀನಿ. ನನ್ನನ್ನು ಹೀಗೇ ನಟಿಸು, ಹೀಗೆ ನಟಿಸಬೇಡ. ಇಂಥ ಪಾತ್ರಗಳನ್ನು ಮಾತ್ರ ಒಪ್ಪಿಕೋ, ಇಂಥದನ್ನು ಒಪ್ಕೋಬೇಡ ಎಂದು ಹೇಳುವ ಜನಕ್ಕೆ ಒಂದು ಪುಟ್ಟ ಮಾತು ಹೇಳೋಕೆ ಇಷ್ಟಪಡ್ತೀನಿ; ನಮ್ಮ ಕುಟುಂಬಕ್ಕೆ ಒಂದು ತಿಂಗಳಿಗೆ ಇಂತಿಷ್ಟು ಖರ್ಚು ಬರುತ್ತೆ. ಅದನ್ನು ಕೊಡಲು ಯಾರಾದ್ರೂ ಮುಂದೆ ಬರೋದಾದ್ರೆ ಮಾತ್ರ ನಂಗೆ ಬುದ್ಧಿ ಹೇಳುವ ಕೆಲಸ ಮಾಡಲಿ...'

ಮುಟ್ಟಿ ನೋಡಿಕೊಳ್ಳುವಂಥಿದ್ದ ಈ ಮಾತು ಕೇಳಿದ ಮೇಲೆ ಟೀಕಿಸುವ ಜನ ತಣ್ಣಗಾದರು: ಉಮಾಶ್ರೀ ತಂಟೆಗೆ ಹೋಗೋದು ಬ್ಯಾಡ ಮಾರಾಯಾ ಎಂದುಕೊಂಡು ತೆಪ್ಪಗಾದರು. ಮುಂದೆ, ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ನಿಮ್ಮ ನಟನೆ' ಮುಂದುವರಿಯಿತು. ಬೆಳ್ಳಿತೆರೆಯ ಮೇಲೆ ನಿಮ್ಮ ಪಾತ್ರವನ್ನು ಕಂಡು ಘೊಳ್ಳನೆ ನಗುತ್ತಿದ್ದ ಜನ, ಒಡಲಾಳ' ನಾಟಕದಲ್ಲಿ ನಿಮ್ಮ ಸಾಕವ್ವನ ಪಾತ್ರ ನೋಡಿ ಕೂತಲ್ಲೇ ಕೈಮುಗೀತಿದ್ರು. ಒಂದೊಂದು ಡೈಲಾಗ್‌ಗೂ ಚಪ್ಪಾಳೆ ಹೊಡೀತಿದ್ರು. ಅದೇ ಮೊದಲ ಬಾರಿ ನಾಟಕ ನೋಡಿದವರಂತೂ-ಅರರೆ, ಏನ್ರೀ ಇದು ಸೋಜಿಗ? ಬೆಳ್ಳಿತೆರೆಯ ಮೇಲೆ ಫೇರ್ ಅಂಡ್ ಲವ್ಲಿ ಲೇಡಿಯ ಥರಾ ಮಿಂಚುವ ಕಲರ್ ಕಲರ್ ಉಮಾಶ್ರೀ, ರಂಗಭೂಮಿಯ ಮೇಲೆ ಗೂನು ಬೆನ್ನಿನ, ಹರಕು ಸೀರೆಯ, ಸುಕ್ಕುಗಟ್ಟಿದ ದೇಹದ, ಊರುಗೋಲಿನ ಆಸರೆಯಿಂದಷ್ಟೇ ನಡೆಯುವ ಅಜ್ಜಿಯಾಗಿ ಮೆರೀತಾ ಇದಾಳಲ್ಲ? ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಷ್ಟೊಂದು ಮುದುಕಿಯ ಥರಾ ಕಾಣಿಸೋಕೆ ಹೇಗೆ ಸಾಧ್ಯ? ಕೊಳ್ಳೇಗಾಲ ಚಾಮರಾಜನಗರ ಸೀಮೆಯ ಆಡುಭಾಷೆಯನ್ನು ಉಮಾಶ್ರೀ ಇಷ್ಟೊಂದು ಚೆನ್ನಾಗಿ ಕಲಿತದ್ದಾದ್ರೂ ಯಾವಾಗ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದರು.

ಇಂಥ ಮಾತುಗಳನ್ನೇ ಹತ್ತು ಮಂದಿಯಿಂದ ಕೇಳಿದ ರವಿಚಂದ್ರನ್, ತಮ್ಮ ಪುಟ್ನಂಜ' ಸಿನಿಮಾದಲ್ಲಿ 90 ವರ್ಷ ದಾಟಿದ ಹಣ್ಣಣ್ಣು ಮುದುಕಿಯ ಪಾತ್ರದಲ್ಲಿ ನಿಮ್ಮನ್ನು ತೋರಿಸಿದ್ರು ನೋಡಿ, ಅವತ್ತು ಇಡೀ ಕರ್ನಾಟಕ ಬೆರಗಾಗಿತ್ತು. ಥಿಯೇಟರಿಗೆ ಬಂದ ಜನ ಮುದುಕಿ ಪಾತ್ರದಲ್ಲಿರೋದು ನಿಜವಾಗ್ಲೂ ಉಮಾಶ್ರೀನಾ? ಎಂದು ಪದೇ ಪದೆ ಕಣ್ಣುಜ್ಜಿಕೊಂಡು ನೋಡಿದ್ರು. ನಿಮ್ಮ ಅಭಿನಯ ಕಂಡು ದಂಗಾಗಿ ಹೋಗಿದ್ರು. ಆ ಪಾತ್ರ ನಿರ್ವಹಿಸಿದ್ದಕ್ಕೆ ಚಿತ್ರರಂಗದ ಸಮಸ್ತರೂ ಮೆಚ್ಚುಗೆ ವ್ಯಕ್ತಪಡಿಸಿದಾಗ ಕೂಡ ನೀವು ಬೀಗಲಿಲ್ಲ. ಬದಲಿಗೆ ವಿನೀತರಾಗಿ ಹೇಳಿದ್ರಿ: ಪುಟ್ನಂಜಿಯ ಪಾತ್ರವನ್ನು ನನಗೆ ಕೊಟ್ಟವರು ರವಿಚಂದ್ರನ್. ಇವತ್ತು ಆ ಪಾತ್ರವೇನಾದ್ರೂ ಗೆದ್ದಿದ್ರೆ ಅದರ ಕ್ರೆಡಿಟ್ಟು ರವಿಚಂದ್ರನ್‌ಗೇ ಸಲ್ಲಬೇಕು. ನಾನು ಕೇವಲ ಕಲಾವಿದೆ. ನಿರ್ದೇಶಕರು ಹೇಳಿದಂತೆ ನಟಿಸಿದೀನಿ, ಅಷ್ಟೆ...' ಈ ವಿನಯದ ಮಾತುಗಳನ್ನು ಕೇಳಿದ ದಿನ ಎಷ್ಟು ಖುಷಿಯಾಯ್ತು ಗೊತ್ತ ಮೇಡಂ? ಅಮ್ಮಾ, ನಿನ್ನ ವಿನಯಕ್ಕೆ ನಮಸ್ಕಾರ' ಎಂದು ಚೀರಿ ಹೇಳುವ ಆಸೆಯಾಗಿಬಿಡ್ತು.

ದುರಂತ ನೊಡಿ: ಪುಟ್ನಂಜಿ'ಯ ಪಾತ್ರದಲ್ಲಿ ನಿಮ್ಮನ್ನು ನೋಡಿದ ನಂತರ ಕೂಡ ಗಾಂಧಿನಗರದ ಬೃಹಸ್ಪತಿಗಳು ನಿಮ್ಮ ಪ್ರತಿಭೆಯನ್ನು ಅರಿಯಲಿಲ್ಲ. ಸವಾಲು ಅನಿಸುವಂಥ ಪಾತ್ರ ಕೊಡಲಿಲ್ಲ. ಬದಲಿಗೆ, ಹಾಗೆ ಬಂದು ಹೀಗೆ ಹೋಗಿಬಿಡುವ ಪಾತ್ರ ಕೊಟ್ಟು ಕೈ ತೊಳೆದುಕೊಂಡ್ರು. ಅಂಥ ಸಂದರ್ಭದಲ್ಲೆಲ್ಲ ನಿಮಗೆ ದುಃಖವಾಯ್ತಾ? ಛೆ, ನನ್ನ ಹಣೆಬರಹವೇ ಇಷ್ಟು ಅನ್ನಿಸಿ ಬೇಜಾರಾಯ್ತಾ? ಒಂದು ಸಿದ್ಧ ಸೂತ್ರದ ಹಿಂದೆಯೇ ಗಿರಗಿಟ್ಲೆ ತಿರುಗುವ ಗಾಂಧಿನಗರದ ಬಗ್ಗೆ ಅಯ್ಯೋಪಾಪ ಅನ್ನಿಸ್ತಾ? ಮೂವತ್ತು ವರ್ಷ ಚಿತ್ರರಂಗದಲ್ಲಿ ಮಣ್ಣು ಹೊತ್ತರೂ ಒಂದು ದೊಡ್ಡ ಪ್ರಶಸ್ತಿ ಬರಲಿಲ್ಲ ಅನ್ನಿಸಿದಾಗ; ಜನ ನೆನಪಿಡುವಂಥ ಸಾಧನೆಯನ್ನು ನಾನು ಮಾಡಲಿಲ್ಲ ಅನ್ನಿಸಿದಾಗ- ಛಕ್ಕನೆ ಕಣ್ತುಂಬಿ ಬಂತಾ? ಉಹುಂ, ಇಷ್ಟು ವರ್ಷದ ಅವಯಲ್ಲಿ ನಾವ್ಯಾರೂ ಈ ಪ್ರಶ್ನೆ ಕೇಳಲಿಲ್ಲ. ನೀವೂ ಯಾವ ಸಂಕಟವನ್ನೂ ಹೇಳಿಕೊಳ್ಳಲಿಲ್ಲ. ಬದಲಿಗೆ ಎಲ್ಲ ನೋವನ್ನೂ ಎದೆಯೊಳಗೆ ಅದುಮಿಟ್ಟುಕೊಂಡು ನಗುನಗುತ್ತಾ ಉಳಿದುಬಿಟ್ರಿ- ಥೇಟ್ ಅಮ್ಮನಂತೆ!

***

ಈಗ ಏನಾಗಿದೆ ನೋಡಿ: ರಾಷ್ಟ್ರ ಪ್ರಶಸ್ತಿಯ ಕಿರೀಟ ನಿಮ್ಮನ್ನು ಹುಡುಕಿಕೊಂಡು ಬಂದಿದೆ. ಅದೇ ಕಾರಣದಿಂದ ನೀವು ಭಾರತದಲ್ಲಿ ವರ್ಲ್ಡ್ ಫೇಮಸ್' ಆಗಿಬಿಟ್ಟಿದೀರಿ. ಗುಲಾಬಿ ಟಾಕೀಸ್' ಚಿತ್ರವನ್ನೂ, ಅದರ ಪೋಸ್ಟರನ್ನೂ ಜನ ಬೆರಗಿನಿಂದ ನೋಡುತ್ತಿದ್ದಾರೆ. ಈ ಸಿನಿಮಾಕ್ಕೆ ಉಮಾಶ್ರೀ ಮೇಕಪ್ ಹಾಕ್ಕೊಳ್ದೇ ನಟಿಸಿದ್ದಾರಂತೆ ಕಣ್ರೀ ಎಂದು ಕಾಮೆಂಟು ಮಾಡುತ್ತಿದ್ದಾರೆ. ಹೆಂಗಸರಂತೂ ನ್ಯಾಷನಲ್ ಅವಾರ್ಡ್ ಬಂದರೆ, ಆ ನೆಪದಲ್ಲಿ ಉಮಾಶ್ರೀಗೆ ಚಿನ್ನದ ಪದಕ ಸಿಗುತ್ತಾ? ಸೈಟು ಸಿಗುತ್ತಾ? ಸರ್ಕಾರದಿಂದ ಮನೆ ಸಿಗುತ್ತಾ? ಬಹುಮಾನ ಅಂತ ಬಂದ್ರೆ ಅದೆಷ್ಟು ಲಕ್ಷ ಸಿಗಬಹುದು ಎಂಬ ಲೆಕ್ಕಾಚಾರಕ್ಕೆ ನಿಂತುಬಿಟ್ಟಿದ್ದಾರೆ. ಅದೇ ಸಂದರ್ಭದಲ್ಲಿ ಪಾಪ, ಬದುಕಿನಲ್ಲಿ ತುಂಬಾ ಕಷ್ಟಪಟ್ಟಿರೋ ಆಕೆ ನೆಮ್ಮದಿಯಿಂದಿರಲಿ' ಎಂದೂ ಹಾರೈಸುತ್ತಿದ್ದಾರೆ.

ಹೌದು ಮೇಡಂ, ನಿಮ್ಮನ್ನು ಎಲ್ಲ ವರ್ಗದ ಜನ ಪ್ರೀತಿಸ್ತಾರೆ. ಗೌರವಿಸ್ತಾರೆ. ಹಾಗಿರುವಾಗ ಒಂದೊಂದ್ಸಲ ನೀವು ಒಂದು ಜಾತಿಗಷ್ಟೇ ಮೀಸಲಾದವರಂತೆ ನಡಕೊಳ್ತೀರಿ. ರಾಜಕೀಯ ಅನ್ನೋದು ಕೊಚ್ಚೆ-ಗುಂಡಿ ಅಂತ ಗೊತ್ತಿದ್ರೂ ಅಲ್ಲಿಗೆ ಹೋಗಿ ಬಿಟ್ಟಿದೀರಿ. ಈ ಎರಡು ವಿಷಯವಾಗಿ ಹಲವರಿಗೆ ಬೇಸರವಿದೆ. ಅದು ಬಿಟ್ಟರೆ- ಯಾರು ಏನೇ ಹೇಳಿದ್ರೂ ನಿಮ್ಮನ್ನು ಟೀಕಿಸಲು ಮನಸ್ಸು ಬರಲ್ಲ. ನಿಮಗೆ ಪ್ರಶಸ್ತಿ ಬಂದ ಸುದ್ದಿ ಕೇಳಿ ಒಂಥರಾ ಖುಷಿಯಾಗಿದೆ. ಮುಂದೆ ಇಂಥವೇ ಐದಾರು ಪ್ರಶಸ್ತಿಗಳು ಉಮಾಶ್ರೀ ಎಂಬ ಅಮ್ಮನಿಗೆ ಒಲಿದು ಬರಲಿ ಎಂದು ಪ್ರಾರ್ಥಿಸುವ ಮನಸ್ಸಾಗಿದೆ. ನಮ್ಮ ಪ್ರಾರ್ಥನೆ ನಿಜವಾಗಲಿ ಮತ್ತು ಆ ಮೂಲಕ ನಿಮ್ಮ ಖುಷಿ ಹೆಚ್ಚಾಗಲಿ. ನಮಸ್ಕಾರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hearty congratulations to Umashree on winning best actress national award for Gulabi Talkies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more