• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಷ್ಟಿದ್ದರೇನು ಹತ್ತಿರ, ನಡುವೆ ಎಷ್ಟೊಂದು ಕಂದರ

By * ಎಆರ್ ಮಣಿಕಾಂತ್
|
ಅಮ್ಮಂದಿರ ದಿನ, ಹೀಗೆ ಬಂದು ಹಾಗೆ ಹೋಗಿಬಿಟ್ಟಿದೆ. ಅದನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡು- ಅಮ್ಮ ಅಂದರೆ ಪ್ರೀತಿ, ಅಮ್ಮ ಅಂದರೆ ಮಮತೆ, ಅಮ್ಮ ಅಂದರೆ ಜೋಗುಳ, ಅಮ್ಮ ಅಂದರೆ ಜಾಸ್ತಿ ಸಲುಗೆ, ಅಮ್ಮ ಅಂದರೆ ಕರುಣೆ, ಅಮ್ಮ ಅಂದರೆ ಹಳೆಯ ಸೀರೆಯ ಎಂಥದೋ ಘಮಲು, ಅಮ್ಮ ಅಂದರೆ ಕೈತುತ್ತು, ಅಮ್ಮ ಎಂದರೆ ಪ್ರಾರ್ಥನೆ, ಅಮ್ಮ ಎಂದರೆ ಪ್ರೀತಿಯ ಗದರಿಕೆ, ಅಮ್ಮ ಎಂದರೆ ಪಾರಿಜಾತದ ಪರಿಮಳವನ್ನೂ ಮೀರಿದಂಥ ಆಕರ್ಷಣೆ, ಅಮ್ಮ ಎಂದರೆ ಧರ್ಮಸ್ಥಳ, ತಿರುಪತಿ, ಶೃಂಗೇರಿ, ಕಾಶಿಯ ದೇವರುಗಳಿಗೂ ಸೈಡು ಹೊಡೆಯುವಂಥ ದೇವತೆ... ಮತ್ತು ಅಮ್ಮ ಅಂದರೆ ಅಮ್ಮಾ!

ಅಮ್ಮನ ಮಹತ್ವವನ್ನು; ಅಮ್ಮನ ಮಹಾತ್ಮೆಯನ್ನು ಹೀಗೆಲ್ಲ ಹೇಳುತ್ತಾ ಹೋಗಬಹುದೇನೋ. ಆದರೆ, ಈ ಕ್ಷಣದ ಬೆಳವಣಿಗೆಗಳನ್ನು; ಒಂದು ನಿರ್ದಿಷ್ಟ ಕಾರಣವೇ ಇಲ್ಲದೆ ಕಡಿದು ಹೋಗುತ್ತಿರುವ ಸಂಬಂಧಗಳನ್ನು; ಸಮಾಜದಲ್ಲಿ ಒಂದಿಷ್ಟು ಹೆಸರು ಮಾಡಿರುವ ಮಂದಿಯ ಹೇಳಿಕೆಗಳನ್ನು ಗಮನಿಸಿದರೆ- ಖಂಡಿತ ಶಾಕ್ ಆಗುತ್ತದೆ. ಏಕೆಂದರೆ ಆ ಜನ-ಸಂಬಂಧಗಳಿಗೆ ಒಂದು ಅರ್ಥವೇ ಇಲ್ಲ ಎಂಬಂತೆ ಮಾತಾಡುತ್ತಿದ್ದಾರೆ. ಕ್ಷಣಿಕ ಸುಖದ ಹಿಂದೆ ಬಿದ್ದು ಸಂಕಟದ ಚಕ್ರಸುಳಿಗೆ ಕೊರಳೊಡ್ಡುತ್ತಿದ್ದಾರೆ. ನಾವು ನೆಮ್ಮದಿಯಾಗಿದ್ದರೆ ಸಾಕು. ಜೀವನದಲ್ಲಿ ಒಂದು ನೆಲೆ ಕಂಡುಕೊಂಡರೆ ಸಾಕು ಎಂಬ ಅರ್ಜೆಂಟಿನಲ್ಲಿ ಇನ್ನೊಂದು ಸಂಸಾರದ ಕುತ್ತಿಗೆ ಅದುಮುತ್ತಿದ್ದಾರೆ!

ಸುತ್ತಿ ಬಳಸಿ ಹೇಳುವುದೇ ಬೇಡ. ನೇರವಾಗಿ ವಿಷಯಕ್ಕೆ ಬರೋಣ. ಕಳೆದ ಹತ್ತು ದಿನಗಳಿಂದಲೂ ಬಿಸಿ ಬಿಸಿ ಸುದ್ದಿಯಾಗಿರುವುದು ನಟಿ ಶ್ರುತಿ ಹಾಗೂ ಮಹೇಂದರ್ ಪ್ರಕರಣ ಕೇಳಿ: ಈಗಿನ ದಿನಗಳಲ್ಲಿ ಅವತ್ತಷ್ಟೇ ನಿರ್ದೇಶನ ಆರಂಭಿಸಿದ ಡೈರೆಕ್ಟರ್ ಕೂಡ ಕಡಿಮೆ ಅಂದರೂ ಒಂದು ಲಕ್ಷಕ್ಕೆ ಡಿಮ್ಯಾಂಡು ಮಾಡುತ್ತಾನೆ. ಒಂದು ಸಿನಿಮಾಕ್ಕೆ ಅದೇ ಮೊದಲ ಬಾರಿಗೆ ಬಣ್ಣ ಹಚ್ಚಿಕೊಂಡ ನಟಿಯರ ರೇಟು ಕೂಡ ಐವತ್ತು ಸಾವಿರದ ಗಡಿ ದಾಟಿ ಎಪ್ಪತ್ತು ಸಾವಿರದ ಆಚೀಚೆಗೆ ಬಂದು ನಿಲ್ಲುತ್ತದೆ. ಅಂದ ಮೇಲೆ ಸೀನಿಯರ್ ಅನ್ನಿಸಿಕೊಂಡವರ ಬಗ್ಗೆ ಹೇಳುವುದೇ ಬೇಡ. ಅವರದೇನಿದ್ದರೂ ದಿನಕ್ಕಿಷ್ಟು' ಎಂಬಂಥ ದುಡಿಮೆ. ಈಗೀಗ ಸಿನಿಮಾ ಇಲ್ಲದಿದ್ದರೆ ಟೀವಿ, ಟೀವಿ ಇಲ್ಲದಿದ್ದರೆ ಜಾಹೀರಾತು ಕ್ಷೇತ್ರ; ಅಲ್ಲೂ ಜಾಗ ಸಿಗದಿದ್ದರೆ ರಾಜಕೀಯ ಎಂಬಂಥ ಸ್ಕೀಮ್‌ಗಳೇ ಜಾರಿಯಲ್ಲಿರುವುದರಿಂದ ಜನಪ್ರಿಯರು' ಎಂಬ ಲೇಬಲ್ ಅಂಟಿಸಿಕೊಂಡವರಿಗೆ- ದುಡಿದು ಬದುಕುವುದು ಈಗ ಒಂದು ಸಮಸ್ಯೆಯೇ ಅಲ್ಲ.

ಹೀಗಿದದರೂ ನಟಿ ಶ್ರುತಿ ಬಾಲಿಶವಾಗಿ ಮಾತಾಡಿದ್ದಾರೆ. ಮಗುವಿನ ಸ್ಕೂಲ್ ಫೀ ಹೊಂದಿಸಲೂ ಮಹೇಂದರ್‌ಗೆ ಆಗ್ತಾ ಇರಲಿಲ್ಲ ಕಣ್ರೀ. ಹೀಗಾದ್ರೆ ಬದುಕೋದು ಹೇಗೆ? ನಾನು ಡೈವೋರ್ಸ್ ಕೊಡುವಷ್ಟರ ಮಟ್ಟಿಗೆ ಯೋಚಿಸಿದೆ ಅಂದರೆ ನಾನು ಅನುಭವಿಸಿದ ಕಷ್ಟ, ಅದೆಷ್ಟಿರಬಹುದೋ(?) ಯೋಚಿಸಿ ಎಂದು ಪ್ರಶ್ನೆ ಎಸೆದಿದ್ದಾರೆ. ಆ ಮೂಲಕ, ಅಯ್ಯೋ ಪಾಪ ಶ್ರುತಿ' ಅನ್ನಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗಿದ್ದರೆ ಒಂದು ವರ್ಗದ ಸಿಂಪತಿಯಾದರೂ ಶ್ರುತಿಗೆ ದಕ್ಕುತ್ತಿತ್ತೋ ಏನೋ; ಆದರೆ, ಈ ಕಡೆ ಡೈವೋರ್ಸ್‌ಗೆ ಅರ್ಜಿ ಹಾಕಿ ನೆಟ್ಟಗೆ ಎರಡು ದಿನ ಮುಗಿವ ಮುನ್ನವೇ ಮಾಜಿ ಪತ್ರಕರ್ತನನ್ನು ಮದುವೆಯಾಗುವ ಮಾತಾಡಿದ್ದಾರೆ ಶ್ರುತಿ. ಇದು ಮದುವೆಯಾಗುವ ವಯಸ್ಸಲ್ಲ ಎಂದು ನನಗೂ ಗೊತ್ತಿದೆ. ಆಗಲೇ ನನ್ನ ಬದುಕಿನ ಅರ್ಧ ಆಯುಷ್ಯ ಕಳೆದು ಹೊಗಿದೆ. ಉಳಿದ ಅರ್ಧ ವಯಸ್ಸನ್ನು ನೆಮ್ಮದಿಯಾಗಿ ಕಳೆಯಬೇಕು ಅಂದ್ಕೊಂಡಿದೀನಿ' ಎಂದು ವೇದಾಂತದ ಮಾತಾಡಿದ್ದಾರೆ. ಅಲ್ರೀ ಮೇಡಂ, ಈಗ ಮದುವೆ ಆಗೋಕೆ ಹೊರಟಿದ್ದೀರಲ್ಲ? ಆ ವ್ಯಕ್ತಿಗೂ ಆಗಲೇ ಮದುವೆಯಾಗಿದೆ. ಒಂದು ಮಗುವೂ ಇದೆ. ನೀವು ಈಗ ಆತನ ಬದುಕಿಗೆ ಹೋದರೆ, ಆ ಸಂಸಾರವನ್ನು ಒಡೆದು ಹಾಕಿದಂತೆ ಆಗೋದಿಲ್ವೆ ಎಂದರೆ, ಅವರ ಸಂಸಾರದಲ್ಲೂ ಹೊಂದಾಣಿಕೆ ಇರಲಿಲ್ವಂತೆ ಕಣ್ರೀ' ಎಂದು ತಿಪ್ಪೆ ಸಾರಿಸಿದ್ದಾರೆ.

ನಿಜ ಹೇಳಬೇಕೆಂದರೆ, ಶ್ರುತಿ' ಇಲ್ಲಿ ಒಂದು ಸಂಕೇತವಷ್ಟೆ. ಏಕೆಂದರೆ, ಮದುವೆಯಾಗುವುದು, ಒಂದಷ್ಟು ದಿನ ಸಂಸಾರ ನಡೆಸುವುದು, ನಂತರ ಯಾವುದೋ ಕುಂಟುನೆಪವನ್ನು ಮುಂದೆ ಮಾಡಿ ಡೈವೋರ್ಸ್ ಪಡೆಯುವುದು, ನಂತರ ಇನ್ನೊಂದು ಬದುಕಿನೆಡೆಗೆ ಹೊರಳಿಕೊಳ್ಳುವುದು ನಮ್ಮ ಬಹುಪಾಲು ಚಿತ್ರನಟಿಯರ ಪಾಲಿಗೆ ಒಂದು ಹವ್ಯಾಸವೇ ಆಗಿಬಿಟ್ಟಿರುವಂತೆ ಕಾಣುತ್ತದೆ. ಬೇಕಿದ್ದರೆ ಸುಮ್ಮನೇ ಕುತೂಹಲಕ್ಕಾಗಿ ಕಣ್ಣು ಹಾಯಿಸಿ ನೋಡಿ; ಡ್ರೀಂಗರ್ಲ್ ಹೇಮಾಮಾಲಿನಿ, ಕನಸಿನ ಕನ್ಯೆ ಶ್ರೀದೇವಿ, ಅಪ್ಸರೆಗೇ ಸೈಡು ಹೊಡೆಯುವಂತಿದ್ದ ಜಯಪ್ರದಾ, ಬೋಲ್ಡ್ ಅಂಡ್ ಬ್ಯೂಟಿಫುಲ್ ಖ್ಯಾತಿಯ ಸಂಗೀತಾ ಬಿಜಲಾನಿ, ನಗ್ಮಾ; ಸತಿ ಸಕ್ಕೂಬಾಯಿ ಎಂದಾಕ್ಷಣ ನೆನಪಾಗುವ ಆರತಿ; ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ಚೆಂದದ ಉದಾಹರಣೆಯಾಗಿರುವ ಜಯಮಾಲಾ; ತಮ್ಮ ಸಿನಿಮಾಗಳಲ್ಲಿ ನಾಯಕನನ್ನು ಒಂದು ಆದರ್ಶ' ಎಂಬಂತೆ ತೋರುತ್ತಿದ್ದ ಪುಟ್ಟಣ್ಣ ಕಣಗಾಲ್- ಹದಿಹರಯದ ಎಲ್ಲ ಮನಸ್ಸುಗಳ ರೋಲ್ ಮಾಡೆಲ್ ಆಗಿರುವ ಅಮೀರ್‌ಖಾನ್, ಇವರೆಲ್ಲ ಎರಡನೇ ಸಂಬಂಧಗಳಿಗೆ ಒಲಿದು ಹೋದವರೇ.

ಆ ಕ್ಷಣದ ಆಕರ್ಷಣೆಗೆ ಒಳಗಾಗಿ, ಇವರೆಲ್ಲ ಒಂದು ಸಂಬಂಧ ಕುದುರಿಸಿಕೊಂಡರು ಎಂಬುದು ಬಹಿರಂಗ ಸತ್ಯ. ಆದರೆ, ಹೀಗೆ ಹೊಸ ಸಂಬಂಧಕ್ಕೆ ನೀರೆರೆಯಲು ಹೊರಟವರಿಗೆಲ್ಲ ತಮ್ಮ ನಡವಳಿಕೆಯಿಂದ ಇನ್ನೊಂದು ಕುಟುಂಬಕ್ಕೆ ನೋವಾಗುತ್ತದೆ. ಒಂದು ಸಂಸಾರದ ಬಾಂಧವ್ಯವೇ ಒಡೆದು ಹೋಗುತ್ತದೆ' ಎಂಬ ಸರಳ ಸತ್ಯವೂ ಗೊತ್ತಿರುತ್ತದೆ. ಹಾಗಿದ್ದೂ ಅದೇನೂ ಗೊತ್ತಿಲ್ಲದಂತೆ ನಟಿಸುವಲ್ಲಿ' ಈ ಜನ ಯಶಸ್ವಿಯಾಗಿರುತ್ತಾರೆ. ಸಿನಿಮಾದಲ್ಲಿ ಥೇಟ್ ಗರತಿ ಗಂಗಮ್ಮನಂತೆ ಕಾಣಿಸಿಕೊಳ್ಳುವ ಹೆಂಗಸರೇ ನಿಜ ಬದುಕಿನಲ್ಲಿ ಅವರ ತದ್ವಿರುದ್ಧ ಹಾದಿಯಲ್ಲಿ ನಡೆದು ಹೋಗುತ್ತಾರೆ. ಮದುವೆಯಾದದ್ದು ಸೆಕೆಂಡ್ ಹ್ಯಾಂಡ್ ಗಂಡನನ್ನೇ/ಹೆಂಡತಿಯನ್ನೇ ಆದರೂ ನಂತರದ ಕೆಲವು ದಿನಗಳಲ್ಲಿ ತಮ್ಮ ಹನಿಮೂನ್ ವಿವರಣೆಯನ್ನು ನಾಚುತ್ತಾ ಹೇಳಿಕೊಳ್ಳುತ್ತಾರೆ. ಸೆಲೆಬ್ರಿಟೀಸ್' ಎಂಬ ಕಾರಣದಿಂದ ಪತ್ರಿಕೆಯವರೋ, ಟೀವಿಯವರೋ ಸಂದರ್ಶನಕ್ಕೆ ಬಂದರೆ- ನಾವು ಇಷ್ಟು ದಿನದಲ್ಲಿ ಒಂದೇ ಒಂದು ಬಾರೀನೂ ಜಗಳ ಮಾಡಲಿಲ್ಲ ಸಾರ್, ಒಬ್ಬರನ್ನೊಬ್ಬರು ಬಿಟ್ಟಿರೋಕೇ ಆಗ್ತಿಲ್ಲ ಸಾರ್' ಎಂದು ಕೊಚ್ಚಿಕೊಳ್ಳುತ್ತಾರೆ. ಪರಸ್ಪರರ ಹೆಸರಲ್ಲಿ ಪೂಜೆ, ಅರ್ಚನೆ ಮಾಡಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಆದರೆ, ನಂತರದ ಕೆಲವೇ ವರ್ಷಗಳಲ್ಲಿ ಯಾವುದೋ ಕುಂಟು ನೆಪ ಹೇಳಿ ಆ ಸಂಬಂಧವೆಂಬೋ ಸಂಬಂಧದ ಹೊಕ್ಕಳು ಬಳ್ಳಿಯನ್ನೇ ಕತ್ತರಿಸಿಬಿಡುತ್ತಾರೆ.

ಇಂಥ ಸಂದರ್ಭಗಳಲ್ಲಿ ಪುಟ್ಟಣ್ಣ ಕಣಗಾಲ್ ಅವರಂಥ ಭಾವುಕರು ಹತ್ತು ಜನರಿಗೆ ಗೊತ್ತಾಗುವಂತೆಯೇ ಗೋಳಾಡುತ್ತಾರೆ. ಮಹೇಂದರ್ ಥರದ ಜನ ಎದೆಯ ನೋವನ್ನೆಲ್ಲ ಅಂಗೈಲಿ ಅದುಮಿಟ್ಟುಕೊಂಡು, ಜಾರಬೇಕಿದ್ದ ಕಂಬನಿ ಕಣ್ಣೊಳಗೇ ಇಂಗಿ ಹೋಗುವಂತೆ ನೋಡಿಕೊಂಡು ಮೌನದ ಮೊರೆ ಹೋಗುತ್ತಾರೆ. ಅಮೀರ್‌ಖಾನ್‌ನಂಥ ಜಾಣರು ಮಾತ್ರ ಎಲ್ಲವೂ ವಿಧಿ ವಿಲಾಸ' ಎಂದು ನಂಬಿಕೊಂಡು ಸಂಕಟವೇ ಗೊತ್ತಿಲ್ಲದವರಂತೆ ಬದುಕುತ್ತಾರೆ!

**

ಎರಡನೇ ಸಂಬಂಧದಲ್ಲಿ ಹೊಸ ಬದುಕು ಕಟ್ಟಿಕೊಳ್ಳುತ್ತಾರಲ್ಲ? ಅವರ ಬದುಕನ್ನೇ ಮತ್ತೆ ಗಮನಿಸೋಣ. ಹಳೆಯ ಬದುಕಿನ ಗೋಜಲಿನಿಂದ ಹೊಸ ಬದುಕಿನ ಸಂಭ್ರಮದ ಕಡಲಿಗೆ ಅವರೇನೋ ಬಂದು ಬೀಳುತ್ತಾರೆ. ಅವರೇನೋ ಹಳೆಯ ಸಂಬಂಧವನ್ನು ಮರೆತಷ್ಟೇ ಸುಲಭವಾಗಿ ಹೊಸ ಬದುಕಿಗೆ ಹೊಂದಿಕೊಳ್ಳುತ್ತಾರೆ ನಿಜ. ಆದರೆ ಮಕ್ಕಳ ಗತಿ? ಮೊನ್ನೆ ಮೊನ್ನೆಯವರೆಗೂ ಜತೆಗೇ ಇದ್ದ ಅಪ್ಪ/ಅಮ್ಮನನ್ನು ಮರೆತು, ಆಗಷ್ಟೇ ಪರಿಚಯವಾದ ಇನ್ನೊಂದು ವ್ಯಕ್ತಿಯನ್ನು ಡ್ಯಾಡಿ ಎಂದೋ, ಅಂಕಲ್ ಎಂದೋ/ಮಮ್ಮಿ ಎಂದೋ ಅಥವಾ ಆಂಟಿ ಎಂದೋ ಕರೆಯಲೇಬೇಕಾದ ಅನಿವಾರ್ಯತೆ ಆ ಮಕ್ಕಳದ್ದಾಗುತ್ತದೆ. ಅಪ್ಪನನ್ನೋ, ಅಮ್ಮನನ್ನೋ ಅತಿಯಾಗಿ ಹಚ್ಚಿಕೊಂಡ ಮಕ್ಕಳಂತೂ, ಹೀಗೆ ದಿಢೀರನೆ ಕಿತ್ತು ಹೋಗುವ ಸಂಬಂಧಗಳಿಂದ ವಿಪರೀತ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಹೊಸ ಸಂಬಂಧದ ಹೆಸರಲ್ಲಿ ಹೊಸ ಬದುಕು ಆರಂಭಿಸಿದ ಅಪ್ಪ-ಅಮ್ಮನ ಮೇಲೆ ಒಂದು ಸಿಡಿಮಿಡಿಯನ್ನೂ; ಅಸಹನೆಯನ್ನೂ ಎದೆಯೊಳಗೆ ಬಚ್ಚಿಟ್ಟುಕೊಂಡೇ ಬೆಳೆಯುತ್ತಾರೆ. ಹಳೆಯ ಬದುಕು ನೆನಪಾದಾಗಲೆಲ್ಲ ಏನನ್ನೋ ಕಳೆದುಕೊಂಡವರಂತೆ ಚಡಪಡಿಸುತ್ತಾರೆ.

ಮುಂದೊಂದು ಸಂದರ್ಭದಲ್ಲಿ ಅಪ್ಪ-ಅಮ್ಮನಿಗೆ ತಿರುಗಿ ಮಾತೂ ಆಡಿಬಿಡುತ್ತಾರೆ. ತುಂಬಾ ಪ್ರೀತಿಯಿಂದ ಬೆಳೆಸಿದ ಮಕ್ಕಳೇ ತಿರುಗಿಬಿದ್ದಾಗ ಆಗುವ ಯಾತನೆ ಇದೆಯಲ್ಲ; ಅದು ಮಾತಿಗೆ ನಿಲುಕದ್ದು. ದಾಂಪತ್ಯದಲ್ಲಿ ಇಂಥ ಅನಾಹುತಗಳು ಆಗಬಾರದು ಎಂದಾದರೆ, ಗಂಡ-ಹೆಂಡತಿ ಇಬ್ಬರೂ ಅಹಮಿಕೆಯನ್ನು' ಬಿಟ್ಟು ಬದುಕಬೇಕು. ನಾನಿಲ್ಲದಿದ್ದರೆ ಅವಳಿಗೆ ಬದುಕೇ ಇಲ್ಲ ಎಂದು ಇವನೋ; ನಾನಿಲ್ಲದಿದ್ದರೆ ಅವನು ಮಣ್ಣು ತಿನ್ನಬೇಕಾಗ್ತದೆ. ನನ್ನನ್ನು ಮದುವೆಯಾದ ನಂತರವೇ ಅವನು ಉದ್ಧಾರವಾದ ಎಂದು ಅವಳೋ' ಯೋಚಿಸಲು ಶುರುಮಾಡಿದ ತಕ್ಷಣ ಮಾಧುರ್‍ಯದ ಬದುಕಿನಲ್ಲಿ ಅಪಶ್ರುತಿ ಕೇಳಿಬರುತ್ತದೆ. ಇದರ ಸುಳಿವು ಸಿಕ್ಕ ತಕ್ಷಣ ಗಂಡನೋ, ಹೆಂಡತಿಯೋ ಎಚ್ಚೆತ್ತುಕೊಂಡು ಬಿರುಕನ್ನು' ತಕ್ಷಣವೇ ಮುಚ್ಚಬೇಕು. ಇಲ್ಲದೇ ಹೋದರೆ, ಅದು ದಿನೇ ದಿನೆ ಚಕ್ರಬಡ್ಡಿಯ ಥರಾ ಬೆಳೆಯುತ್ತಾ ಹೋಗುತ್ತದೆ. ಬಹುಶಃ ಇಂಥ ಸಂದರ್ಭಗಳಲ್ಲಿ ತಮ್ಮೊಳಗೆ ಒಲವೆಂಬ ಗುಲಾಬಿ ಒಳಗೊಳಗೇ ಬಾಡುತ್ತಿವೆ ಎಂಬ ಸತ್ಯದ ಗಂಡ ಮತ್ತು ಹೆಂಡತಿ- ಇಬ್ಬರಿಗೂ ಗೊತ್ತಿರುತ್ತದೆ. ಹಾಗಿದ್ದೂ ಇಬ್ಬರೂ ನಾಟಕವಾಡುತ್ತಾರೆ. ಬಂಧುಗಳ ಗೃಹಪ್ರವೇಶದಲ್ಲಿ, ಸಂಬಂಧಗಳ ಮದುವೆಯಲ್ಲಿ; ಪಕ್ಕದ ಮನೆಯವರ ಮಗುವಿನ ನಾಮಕರಣದಲ್ಲಿ ಜತೆಯಾಗಿ ನಿಂತು ಫೋಟೊ ತೆಗೆಸಿಕೊಳ್ಳುತ್ತಾರೆ. ಬಸ್ಸಿನಲ್ಲಿ, ಬೈಕಿನಲ್ಲಿ, ಆಟೊದಲ್ಲಿ ಅಂಟಿಕೊಂಡೇ ಕೂತು ಹತ್ತು ಮಂದಿಯ ಹೊಟ್ಟೆ ಉರಿಸುತ್ತಾರೆ. ತಮ್ಮನ್ನು ತಾವೇ ಆದರ್ಶ ದಂಪತಿಗಳು' ಎಂದು ಕರೆದುಕೊಳ್ಳುತ್ತಾರೆ ಮತ್ತು ಕಡೆಗೊಂದು ದಿನ ಎಲ್ಲ ಆದರ್ಶಕ್ಕೂ, ಎಲ್ಲ ನಂಬಿಕೆಗೂ ಎಳ್ಳು ನೀರು ಬಿಟ್ಟು ಎದ್ದು ಹೋಗುತ್ತಾರೆ!

ಇದನ್ನೆಲ್ಲ ಕಂಡು ಬೆರಗಾಗಿ- ಏನ್ಸಾರ್ (ಏನ್‌ಮೇಡಂ) ಇದೂ ಎಂದು ಉದ್ಗರಿಸಿದವರಿಗೆ ಮೊನ್ನೆ ಶ್ರುತಿ ಹೇಳಿದರಲ್ಲ, ಅದೇ ಥರ ಒಂದಿಷ್ಟೂ ಸಂಕೋಚವಿಲ್ಲದೆ ಉತ್ತರಿಸುತ್ತಾರೆ: ತುಂಬಾ ಹಿಂದೆಯೇ ಡೈವೋರ್ಸ್ ಕೊಡಬೇಕು ಅಂತಿದ್ದೆ. ಆದ್ರೂ ಇವತ್ತಲ್ಲ ನಾಳೆ ಸರಿ ಹೋಗಬಹುದು ಅಂತ ಎಲ್ಲವನ್ನೂ ಸಹಿಸಿಕೊಂಡೆ. ಆದರೆ, ಅವರು' ಬದಲಾಗಲೇ ಇಲ್ಲ. ಕಡೆಗೂ ಗಟ್ಟಿ ನಿರ್ಧಾರ ಮಾಡಿ ಅವರ ಬದುಕಿಂದ ಹೊರಗೆ ಬಂದಿದೀನಿ. ಇನ್ನೂ ಹೆಚ್ಚಿಗೆ ಕೇಳಬೇಡಿ ಪ್ಲೀಸ್, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ, ಪ್ಲೀಸ್...'

***

ಹೀಗೆ, ಯಾವುದೋ ಕುಂಟು ನೆಪವನ್ನು ಮುಂದೆ ಮಾಡಿ ಒಂದು ಬದುಕಿನಿಂದ, ಒಂದು ಸಂಬಂಧದಿಂದ ಎದ್ದು ಬರುತ್ತಾರಲ್ಲ? ಆ ಜನ ಬದುಕೆಂದರೆ ಏನೆಂದು ತಿಳಿದಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ. ಏಕೆಂದರೆ, ಒಂದು ಬೊಗಸೆ ಪ್ರೀತಿಯನ್ನು, ಒಂದು ಬೊಗಸೆ ನೆಮ್ಮದಿಯನ್ನು, ಒಂದು ಆತ್ಮಗೌರವವನ್ನು, ಮೆಚ್ಚುಗೆಯ ಮಾತುಗಳನ್ನು, ಬದುಕಿಗೊಂದು ಭದ್ರತೆಯನ್ನು ಅರಸಿಯೇ ಅವರು ಹೊಸ ಬಾಂಧವ್ಯಕ್ಕೆ ಹಾತೊರೆದಿರುತ್ತಾರೆ ನಿಜ. ಆದರೆ, ಪ್ರೀತಿಯೆಂಬುದು, ನೆಮ್ಮದಿ ಎಂಬುದು, ಸಂತೃಪ್ತಿಯೆಂಬುದು ಅವನ್ಯಾವನೋ(ಳೋ) ಐ ಲವ್ ಯೂ' ಎಂದಾಕ್ಷಣ ಸಿಗುವಂಥದಲ್ಲ. ಅದು ದುಡ್ಡಿಗೂ ಸಿಗುವ ವಸ್ತು'ವಲ್ಲ. ಚೌಕಾಶಿಗೆ ದೊರಕುವಂಥ ಪದಾರ್ಥವೂ ಅಲ್ಲ. ಅದು, ನಮ್ಮ ಮಧ್ಯೆಯೇ ಇರುವಂಥಾದ್ದು. ಅದನ್ನು ನಮಗೆ ಬೇರೆ ಯಾರೋ ತಂದುಕೊಡುವುದಿಲ್ಲ. ನಾವೇ ಖರೀದಿಸಬೇಕು. ಒಲವೆಂಬ ಪಾತ್ರೆಯೊಳಗೆ ನೀರು ಸದಾ ಇರುವಂತೆ, ಅದು ಎಂದೂ ಹಾಳಾಗದಂತೆ, ಕೆಂಡದಂತೆ ಬತ್ತಿ ಹೋಗದಂತೆ, ಆಗೊಮ್ಮೆ-ಈಗೊಮ್ಮೆ ಆಕಸ್ಮಿಕವಾಗಿ ಬೀಳುವ ಬೆಂಕಿಗೆ ಸೀದು ಹೋಗದಂತೆ ನಾವೇ ನೋಡಿಕೊಳ್ಳಬೇಕು. ಡೈವೋರ್ಸ್' ಪಡೆದು ನೆಪದಲ್ಲಿ ಒಂದು ಬದುಕಿನಿಂದ ಎದ್ದು ಹೋದರೆ- ಕೇವಲ ಗಂಡನಿಗೋ, ಹೆಂಡತಿಗೋ; ಮಕ್ಕಳಿಗೋ ಬೇಸರವಾಗುವುದಿಲ್ಲ. ಒಂದಿಡೀ ಕುಟುಂಬಕ್ಕೇ ಘಾಸಿಯಾಗುತ್ತದೆ. ಆಗ ಬಿಕ್ಕಳಿಸುವವರ ಸಾಲಿನಲ್ಲಿ ಮುದಿ ತಂದೆ, ತಾಯಿಗಳಿರುತ್ತಾರೆ. ಅಕ್ಕ-ತಂಗಿಯರಿರುತ್ತಾರೆ. ಅಣ್ಣ ತಮ್ಮಂದಿರೂ ಇರುತ್ತಾರೆ ಮತ್ತು ಕೆಲವು ಕುಟುಂಬಗಳಲ್ಲಿ ಮನೆಯವರಿಗಿಂತ ಹೆಚ್ಚಾಗಿ ಅಂಟಿಕೊಂಡಂಥ' ಬಂಧುಗಳೂ ಇರುತ್ತಾರೆ.

ಥತ್, ಅವನು(ಳು) ದುಡಿಯುತ್ತಿಲ್ಲ ಎಂಬ ಕಾರಣ ಮುಂದಿಟ್ಟು ಡೈವೋರ್ಸ್ ಕೇಳುವುದಿದೆಯಲ್ಲ? ಅದು ನೀಚತನದ ಪರಮಾವಧಿ. ಅವನು ದುಡಿಯದಿದ್ದರೇನಂತೆ? ಒಂದಷ್ಟು ದಿನ ಅವಳೇ ದುಡಿದರಾಯಿತು. (ಒಂದು ವೇಳೆ ಕಟ್ಟಿಕೊಂಡವನು ಬದುಕಿಡೀ ಸೋಂಬೇರಿ ಸುಬ್ಬನೇ ಆಗಿದ್ದರೆ ಅವನನ್ನು ಎಡಗಾಲಲ್ಲೇ ಒದ್ದು ಹೋದರೂ ಅದು ತಪ್ಪಲ್ಲ) ಹಾಗೆ ಮಾಡದೆ, ಈಗ ದುಡೀತಾ ಇಲ್ಲವಲ್ಲ? ಹಾಗಾಗಿ ಈತ ನನಗೆ ಸರಿಜೋಡಿಯಲ್ಲ ಎಂಬುದನ್ನು ಕಳ್ಳ ಮನಸ್ಸಿನ ಪಿಳ್ಳೆ ನೆವ ಎನ್ನದೇ ವಿಧಿಯಿಲ್ಲ.

ಏಕೆಂದರೆ, ಜಗಳವಾಡದ, ಮುನಿಯದ ಸಂಬಂಧಗಳು ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ. ನಾವಿಬ್ರೂ ಯಾವತ್ತೂ ಜಗಳ ಆಡಲೇ ಇಲ್ಲ' ಎಂದು ಗಿಳಿಯಂತೆ ಉಲಿಯುವ ಗಂಡ-ಹೆಂಡತಿ ಕೂಡ ವಾರದಲ್ಲಿ ನಾಲ್ಕು ಬಾರಿ ಕಿತ್ತಾಡಿರುತ್ತಾರೆ. ಪರಸ್ಪರ ಏಕವಚನದಲ್ಲೇ ಬಯ್ದಾಡಿಕೊಂಡಿರುತ್ತಾರೆ. ಆದರೆ, ಹತ್ತು ಮಂದಿಯ ಮುಂದೆ ನಿಂತಾಗ ಮಾತ್ರ ಆದರ್ಶ ದಂಪತಿಗಳಂತೆ ನಡೆದುಕೊಂಡಿರುತ್ತಾರೆ. ತಮ್ಮೊಳಗಿನ ಒಲವಿನ ಬಳ್ಳಿ ಎಂದೂ ಬಾಡದಂತೆ ನೋಡಿಕೊಂಡೇ ಬದುಕುತ್ತಾರೆ. ಆ ಮೂಲಕ ಹತ್ತು ಮಂದಿಯ ಪಾಲಿಗೆ ಆದರ್ಶವೂ ಆಗುತ್ತಾರೆ. ಇಂಥ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು ಬದುಕಬೇಕೆಂಬ ಸರಳ ಸತ್ಯ, ಬೆಳ್ಳಿ ತೆರೆಯಲ್ಲಿ ಗರತಿ ಗಂಗಮ್ಮರಂತೆ ಮೆರೆಯುವ ನಟೀಮಣಿಯರಿಗೆ ಅರ್ಥವೇ ಆಗುವುದಿಲ್ಲವಲ್ಲ; ದುರಂತವಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Love and hatred between Shruthi and Mahendar has exhibited ugly face of film industry, writes Manikanth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more