• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಪಿಷ್ಠ ತಂದೆಗೆ ಕಪಾಳಮೋಕ್ಷವಾದ ಕಥೆ

By Staff
|

Parental warning : Think twice before punishing your kidಕೋಪಿಷ್ಠ ತಂದೆ ತಾಯಿಯರಿಗೊಂದು 'ಕಿವಿ'ಮಾತು: ನಿಮ್ಮ ಮಕ್ಕಳು ತಪ್ಪು ಮಾಡುವುದು ಸಹಜ. ಅವರನ್ನು ತಿದ್ದಬೇಕಾದವರು, ತೀಡಬೇಕಾದವರೂ, ಸರಿದಾರಿಗೆ ತರಬೇಕಾದವರೂ ನೀವೇನೆ. ಸರಿ. ಆದರೆ, ತಿದ್ದುವ ಭರದಲ್ಲಿ ತಪ್ಪೆಸಗುವ ಮಗುವಿಗೆ ಅನಾಗರೀಕ ಶಿಕ್ಷೆ ನೀಡಿದರೆ ಉಂಟಾಗುವ ಅನಾಹುತಗಳು ಮಾತ್ರ ಭೀಕರ. ಪಕ್ಕದ ಮನೆಯಲ್ಲಿ ಸಂಭವಿಸಿದ ಇಂಥದೊಂದು ಅನಾಹುತ ಕುರಿತ ಸ್ಯಾಂಪಲ್ ಬರಹ ಇಲ್ಲಿದೆ. ಕೋಪಿಷ್ಠ ತಂದೆಗೆ ಕಪಾಳಮೋಕ್ಷವಾದ ಈ ದಾರುಣ ಕಥೆಯನ್ನು ಓದಿ, ನೆನಪಿಟ್ಟುಕೊಳ್ಳಿ.

ಅಂಕಣಕಾರ : ಎ.ಆರ್. ಮಣಿಕಾಂತ್

ಶಿಕ್ಷಿಸದಿದ್ದರೆ ಮಕ್ಕಳು ಕೆಟ್ಟು ಹೋಗ್ತಾರೆ ;ಅಂಥದೊಂದು ಭಾವನೆ (ಅಥವಾ ನಂಬಿಕೆ ಅನ್ನಿ) ರಾಮರಾಯರಿಗೆ ಮೊದಲಿನಿಂದಲೂ ಇತ್ತು. ಅದೇ ಕಾರಣದಿಂದ ಅವರು ಮಗನನ್ನು ವಿಪರೀತ ಶಿಸ್ತಿನಿಂದ ಬೆಳೆಸಿದ್ದರು. ಮಗ ಚಿಕ್ಕದೊಂದು ತಪ್ಪು ಮಾಡಿದರೂ ಸಾಕು, ಅವರಿಗೆ ತುಂಬಾ ಅಂದರೆ ತುಂಬಾ ಸಿಟ್ಟು ಬರುತ್ತಿತ್ತು. ಅಂಥ ಸಂದರ್ಭದಲ್ಲೆಲ್ಲ ಎದುರು ನಿಂತ ಮಗನ ಕೆನ್ನೆ ಚದುರಿ ಹೋಗುವಂತೆ ಫಟಾರನೆ ಹೊಡೆದು ಬಿಡುತ್ತಿದ್ದರು. ಅದೇಕೋ ಏನೋ, ಯಾವತ್ತೆಂದರೆ ಯಾವತ್ತೂ ಅವರು ಬೆತ್ತ ಮುಟ್ಟಿದವರೇ ಅಲ್ಲ. ಅವರದೇನಿದ್ದರೂ ಕೆನ್ನೆಗೆ ಹೊಡೆಯುವುದಷ್ಟೇ ಕೆಲಸ. ಹೀಗೆ ಛಟೀರ್, ಛಟೀರನೆ ಹೊಡೆಯುವುದರಿಂದ ಮಗನಿಗೆ ವಿಪರೀತ ನೋವಾಗಿರಬಹುದು ಎಂದು ರಾಮರಾಯರು ಒಂದೇ ಒಂದು ಬಾರಿಯೂ ಯೋಚಿಸಲಿಲ್ಲ. ಬದಲಿಗೆ, ಮಗನನ್ನು ಹೆದರಿಸಿ ಹೇಗೆ ಕಂಟ್ರೋಲ್‌ನಲ್ಲಿ ಇಟ್ಕೊಂಡಿದೀನಲ್ವ ಎಂದು ಬೀಗುತ್ತಿದ್ದರು.

ರಾಮರಾಯರ ಮಗನೇ ವಿನಾಯಕ. ಅವನು ಯಾಕೆ ಹಾಗಿದ್ದ? ಗೊತ್ತಿಲ್ಲ. ಅವನು ಒಂಥರಾ ನಿಧಾನ ಪ್ರವೃತ್ತಿಯ ಹುಡುಗ. ಅವನು ವಿಪರೀತ ಬುದ್ಧಿವಂತ, ವಿಪರೀತ ಭಾವುಕ ಮತ್ತು ವಿಪರೀತ ಸೋಂಬೇರಿ. ಯಾವುದೇ ಕೆಲಸ ಆಗಲಿ, ಅದನ್ನ ಎರಡೆರಡು ಬಾರಿ ಹೇಳಬೇಕಿತ್ತು ಅವನಿಗೆ. ಅಪ್ಪ ಹೇಗಿದ್ರೂ ಹೊಡೆದೇ ಹೊಡೀತಾರೆ. ಹಾಗಿರುವಾಗ ಯಾವುದೇ ಕೆಲಸವನ್ನು ಹೇಳಿದ ತಕ್ಷಣ ಮಾಡಿ ಏನು ಪಯೋಗ? ಒಂದೆರಡು ಏಟು ತಿಂದ ಮೇಲೇ ಆ ಕೆಲಸ ಮಾಡಿದರಾಯ್ತು ಎಂಬ ಉಡಾಫೆ ಅವನದು. ಮನೇಲಿ ಮಾತ್ರವಲ್ಲ, ಶಾಲೆಯಲ್ಲೂ ಅವನು ಸೋಮಾರಿ ಸುಬ್ಬರಾವ್ ಆಗಿಯೇ ಉಳಿದು ಬಿಟ್ಟ. ಅವನ ದುರಾದೃಷ್ಟಕ್ಕೆ ಶಾಲೆಯಲ್ಲಿ ಕೂಡ ಕಪಾಳಕ್ಕೆ ಹೊಡೆಯುವ ಅಧ್ಯಾಪಕರೇ ಇದ್ದರು. ಇವನು ಉತ್ತರ ಹೇಳುವುದು ಎರಡು ಸೆಕೆಂಡು ತಡವಾದರೆ ಸಾಕು, ಕೆನ್ನೆಗೆ ಬಾರಿಸುತ್ತಿದ್ದರು.

ಹೀಗೆ, ಒಂದು ಕಡೆ ಅಪ್ಪ, ಇನ್ನೊಂದು ಕಡೆ ಗುರುಗಳಿಂದ ಪದೇ ಪದೆ ಕಪಾಲಕ್ಕೆ ಏಟು ತಿನ್ನುತ್ತಲೇ ವಿನಾಯಕ ಎಸ್ಸೆಸ್ಸೆಲ್ಸಿ ಮುಗಿಸಿದ. ಆದರೆ ಮೊದಲ ಪಿಯುಸಿ ದಾಟುವ ವೇಳೆಗೆ ಯಾಕೋ ಸರಿಯಾಗಿ ಕೇಳಿಸ್ತಿಲ್ಲ ಎನ್ನಲು ಶುರು ಮಾಡಿದ. ರಾಮರಾಯರು ಮೊದಲು ಅವನ ಮಾತು ನಿರ್ಲಕ್ಷಿಸಿದರು. ನಂತರ ಹರಕೆ ಕಟ್ಟಿಕೊಂಡರು. 'ನಿಮ್ಮ ಮಗ ಹತ್ತು ಸಾರಿ ಕೂಗಿದ್ರೂ ಮಾತಾಡಲ್ವಲ್ಲ ಯಾಕೆ ಸ್ವಾಮೀ" ಎಂದು ಹತ್ತು ಮಂದಿ ಕೇಳಲು ಶುರು ಮಾಡಿದರು ನೋಡಿ-ತಕ್ಷಣವೇ ಇಎನ್‌ಟಿ ಆಸ್ಪತ್ರೆಗೆ ಕರೆದೊಯ್ದರು.

ಆಸ್ಪತ್ರೆಯಲ್ಲಿ ಮಾಡಿದ ಪರೀಕ್ಷೆಗಳು ಒಂದೆರಡಲ್ಲ. ಹಾಗೆ ಏನೇನೆಲ್ಲ ಪರೀಕ್ಷೆ ಮಾಡಿದ ನಂತರ ಡಾಕ್ಟರು ರಾಮರಾಯರನ್ನು ಕರೆದು ಹೇಳಿದರು: 'ನಿಮಗೆ, ಒಂದು ಕೆಟ್ಟ ಸುದ್ದಿ ಹೇಳೋದಿದೆ ಸರ್. ಕಿವಿಗೂ, ಕಪಾಳಕ್ಕೂ ಮಧ್ಯೆ ಇವೆ ನೋಡಿ, ಅಷ್ಟೂ ನರಗಳಿಗೆ ದೊಡ್ಡ ಏಟು ಬಿದ್ದಿದೆ. ಅವು ಶಬ್ದವನ್ನು ಗ್ರಹಿಸುವಲ್ಲಿ ವಿಫಲವಾಗ್ತಿವೆ. ಅದೇ ಕಾರಣದಿಂದ ನಿಮ್ಮ ಮಗನಿಗೆ ಕಿವಿ ಕೇಳಿಸ್ತಾ ಇಲ್ಲ. ಈ ಹುಡುಗನಿಗೆ, ಇಷ್ಟು ಚಿಕ್ಕ ವಯಸ್ಸಿಗೇ ಯಾಕೆ ಹೀಗಾಯ್ತು? ಒಂದ್ಸಲ ಅವನನ್ನೇ ವಿಚಾರಿಸಿ ನಿಮಗೆ ವಿವರವಾಗಿ ಹೇಳ್ತೀನಿ. ಹೆದರಬೇಡಿ. ಸ್ವಲ್ಪ ಹೊತ್ತು ಹೊರಗಿರಿ" ಎಂದವರೇ ಮತ್ತೆ ವಿನಾಯಕನನ್ನು ತಮ್ಮ ಛೇಂಬರಿನಲ್ಲಿ ಕೂರಿಸಿಕೊಂಡು ಕೇಳಿದರು:

'ನಿಂಗೆ ಕೆನ್ನೆಯ ಪಕ್ಕಕ್ಕೆ ಕ್ರಿಕೆಟ್ ಬಾಲ್ ಬಿದ್ದಿತ್ತಾ? ಆಟ ಆಡ್ತಾ ಇದ್ದಾಗ ಕಲ್ಲಿನ ಮೇಲೇನಾದ್ರೂ ಬಿದ್ದಿದ್ಯಾ? ಆಗ ಕಪಾಲಕ್ಕೆ ಪೆಟ್ಟು ಬಿದ್ದಿತ್ತಾ? ಯಾವಾಗಾದ್ರೂ ಆಕ್ಸಿಡೆಂಟಾಗಿ ಆಗ ಕಪಾಲಕ್ಕೋ, ಕಿವಿಗೋ ಏಟು ಬಿದ್ದಿತ್ತಾ? ಚಿಕ್ಕಂದಿನಲ್ಲಿ ಕಿವಿ ನೋವು ಬರ್‍ತಿತ್ತಾ? ವಿಪರೀತ ಅನ್ನುವ ಹಾಗೆ ಕಿವಿ ಸೋರ್‍ತಾ ಇತ್ತಾ? ಅಥವಾ ಕಿವಿಯಲ್ಲಿರೋ ಗುಗ್ಗೆ ತೆಗೆಯಲು ಹೋಗಿ-ಚಿಮುಟದಂಥ ಚೂಪಾದ ಕಡ್ಡಿಯೇನಾದ್ರೂ ಚುಚ್ಚಿಕೊಂಡಿತ್ತಾ?" ಡಾಕ್ಟರ್‌ರ ಎಲ್ಲ ಪ್ರಶ್ನೆಗೂ ವಿನಾಯಕ ತುಂಬ ಸ್ಪಷ್ಟವಾಗಿ ಹೇಳಿದ: 'ಇಲ್ಲ ಸರ್. ಅಂಥದೇನೂ ಆಗಿಲ್ಲ. ಬೇಕಿದ್ರೆ ನಮ್ಮ ತಂದೇನ ಕೇಳಿ..."

ಡಾಕ್ಟರು ಹಾಗೇ ಮಾಡಿದರು. 'ಇಲ್ಲ ಡಾಕ್ಟ್ರೇ, ಇವನನ್ನ ತುಂಬಾ ಮುದ್ದಿನಿಂದ, ತುಂಬಾ ಎಚ್ಚರಿಕೆಯಿಂದ ಬೆಳೆಸಿದೀನಿ. ಅಂಥದೇನೂ ಆಗಿಲ್ಲ" ಎಂದು ರಾಮರಾಯರು ಹೇಳಿದರಲ್ಲ, ನಂತರದ ಒಂದೆರಡು ನಿಮಿಷಗಳ ಕಾಲ ಏನನ್ನೋ ಯೋಚಿಸಿದ ಡಾಕ್ಟರು ಛಕ್ಕನೆ ಕೇಳಿಬಿಟ್ಟರು: 'ಮಗೂ, ನಿಂಗೆ ಸ್ಕೂಲಲ್ಲಿ ಮೇಸ್ಟ್ರು ಅವಾಗವಾಗ ಏನಾದ್ರೂ ಕಪಾಳಕ್ಕೆ ಹೊಡೀತಿದ್ರಾ?"

ಡಾಕ್ಟರ ಮಾತು ಕೇಳಿದ್ದೇ ತಡ, ರಾಮರಾಯರಿಗೆ ಮೈಮೇಲೆ ಹಾವು ಹರಿದಂತಾಯಿತು. ಅವರು ನಿಂತಲ್ಲೇ ಬೆವೆತರು. ಮಗ ಏನು ಹೇಳ್ತಾನೋ ಅಂದುಕೊಂಡು ಒಂಥರಾ ಸಂಕೋಚ, ಭಯದಿಂದಲೇ ಅವನತ್ತ ನೋಡಿದರು. ಅವನು ಒಮ್ಮೆ ನೇರವಾಗಿ ಅಪ್ಪನನ್ನೇ ನೋಡಿದನಲ್ಲ, ಇವರಿಗೆ ಬೀಸಿ ಕಪಾಳಕ್ಕೆ ಹೊಡೆದಂತಾಯಿತು. ತಕ್ಷಣವೇ ಬೇರೆಡೆಗೆ ಮುಖ ತಿರುಗಿಸಿಬಿಟ್ಟರು. ಅದೇನೂ ಗೊತ್ತಿಲ್ಲದವನಂತೆ ವಿನಾಯಕ ಅದೇ ದೃಢ ಸ್ವರದಲ್ಲಿ ಹೇಳಿದ: 'ಇಲ್ಲ ಡಾಕ್ಟರ್. ಹಾಗೇನೂ ಇಲ್ಲ. ಎಲ್ಲೋ ಆಗೊಮ್ಮೆ ಈಗೊಮ್ಮೆ ನಾನು ತಪ್ಪು ಮಾಡಿದಾಗ ಹೊಡೆದಿರಬಹುದೇನೋ..."

ಇಲ್ಲ. ಈ ಹುಡುಗ ನಿಜ ಹೇಳ್ತಾ ಇಲ್ಲ ಎಂಬುದು ಡಾಕ್ಟರ್‌ಗೆ ತಕ್ಷಣ ಅರ್ಥವಾಗಿ ಹೋಯಿತು. ಅವರು ಏನೋ ಹೇಳಲು ಹೋದಾಗ ಮಧ್ಯೆ ಬಾಯಿ ಹಾಕಿದ ರಾಮರಾಯರು 'ಮತ್ತೆ ಮತ್ತೆ ಕಪಾಳಕ್ಕೆ ಹೊಡೆದ್ರೆ ಅದರಿಂದ ಕೂಡಾ ಕಿವುಡುತನ ಉಂಟಾಗುತ್ತೆ ಅಂತೀರಾ ಡಾಕ್ಟ್ರೆ? ಅಂಥ ಸಾಧ್ಯತೆಯೂ ಇದೆಯಾ?" ಎಂದರು. 'ನೋಡಿ ಸರ್, ಕಿವಿ ಮತ್ತು ಕಪಾಲದ ಮಧ್ಯೆ ಇವೆಯಲ್ಲ ನರಗಳು? ಅವು ತುಂಬಾ ಸೂಕ್ಷ್ಮ. ಮಕ್ಕಳಿಗೆ ಜೋರಾಗಿ ಆ ಜಾಗಕ್ಕೆ ಒಂದೇ ಒಂದು ಏಟು ಹೊಡೆದ್ರೂ ಸಾಕು, ಕಿವುಡುತನ ಉಂಟಾಗುತ್ತೆ. ಸ್ವಲ್ಪ ವಯಸ್ಸಾದ ಮೇಲೆ ಅದು ಸರಿಯಾಗೋದು ಕಷ್ಟ ಅಂದ್ರೆ ಕಷ್ಟ. ನಿಮ್ಮ ಮಗನದ್ದೂ ಈಗ ಹಾಗೇ ಆಗಿದೆ. ಯಾವುನೋ ಪಾಪಿ ಮೇಸ್ಟ್ರು ಈ ಹುಡುಗನಿಗೆ ಮತ್ತೆ ಮತ್ತೆ ಒಂದೇ ಜಾಗಕ್ಕೆ ಹೊಡೆದಿದಾನೆ! ಈ ಹುಡುಗ ಜೀವನ ಪೂರ್ತಾ ಹೀಗೇ ಬದುಕಬೇಕಾಗ್ತದೆ. ಮುಂದೆ ಹಿಯರಿಂಗ್ ಏಯ್ಡ್ ಹಾಕಿಕೊಳ್ಳೋದೇ ದಾರಿ...

ಡಾಕ್ಟರು ಇನ್ನೂ ಹೇಳುತ್ತಿದ್ದರೇನೋ, ಆದರೆ ಅದೇನನ್ನೂ ಕೇಳುವ ಸ್ಥಿತಿಯಲ್ಲಿ ರಾಮರಾಯರು ಇರಲಿಲ್ಲ. ಚಿಕ್ಕಂದಿನಲ್ಲಿ ಮಗನಿಗೆ ದಿನಕ್ಕೆ ಐದರ ಲೆಕ್ಕದಲ್ಲಿ ಕಪಾಳಕ್ಕೆ ಹೊಡೆದಿದ್ದರಲ್ಲ, ಅದೆಲ್ಲ ಅವರಿಗೆ ಮೇಲಿಂದ ಮೇಲೆ ನೆನಪಾಗಿ ಮುಖ ಕಪ್ಪಿಟ್ಟಿತು. ತಕ್ಷಣವೇ 'ಒಂದ್ನಿಮಿಷ ಬಂದೆ" ಎನ್ನುತ್ತಾ ಹೊರಗೆ ಬಂದರು. ಇತ್ತ, ಆ ಹುಡುಗನ ಮೇಲಿನ ಮಮಕಾರದಿಂದಲೋ ಅಥವಾ ಅವನ ಸಂಕಟದ ಮೂಲವೇನೆಂದು ಪತ್ತೆ ಹಚ್ಚುವ ಹಟದಿಂದಲೋ ಕಾಣೆ-ಡಾಕ್ಟರು ಮೆತ್ತಗೆ ಕೇಳಿಯೇಬಿಟ್ಟರು: 'ಮಗೂ, ಚಿಕ್ಕಂದಿನಲ್ಲಿ ನಿಮ್ಮ ತಂದೆ ಏನಾದ್ರೂ ಕಪಾಳಕ್ಕೆ ಜೋರಾಗಿ ಹೊಡೆದಿದ್ರಾ?"

ವಿನಾಯಕನಿಗೆ ತಕ್ಷಣವೇ ತನ್ನ ಬಾಲ್ಯ ನೆನಪಾಯಿತು: 'ಹೌದು, ಆಗೆಲ್ಲ ಅಪ್ಪ ದಿನಕ್ಕೊಂದು ಕಥೆ ಹೇಳಿಕೊಡುತ್ತಿದ್ದ. ಹಾಡು ಕಲಿಸುತ್ತಿದ್ದ. ಕೇರಂ ಆಡಲು ಹೇಳಿಕೊಟ್ಟಿದ್ದ. ಚೆಸ್ ಬೋರ್ಡು ತಂದಿಟ್ಟು- ಇದು ರಾಜ, ಇದು ಮಂತ್ರಿ, ಇದು ಸೈನಿಕ, ಇದು ಕುದುರೆ ಎಂದು ವಿವರಿಸಿದ್ದ. ಊಟದ ವೇಳೆಯಲ್ಲಿ ಏನೋ ನೆಪ ಹೇಳಿ ಎರಡು ತುತ್ತು ಜಾಸ್ತಿ ತಿನ್ನಿಸಿದ್ದ. ಹಬ್ಬದ ದಿನ ಹೊಸ ಬಟ್ಟೆ ಹಾಕಿ ನನ್ಮಗ ರಾಜಕುಮಾರ ಎಂದು ಬೀಗಿದ್ದ. ಬಿಸಿಬಿಸೀ ಅನ್ನಕ್ಕೆ ತುಪ್ಪ ಹಾಕಿಸಿ ತಿನ್ನಿಸಿದ್ದ. ದಿಢೀರನೆ ಜ್ವರ ಬಂದಾಗ ರಾತ್ರಿಯೆಲ್ಲಾ ಅತ್ತಿದ್ದ. ಎಸ್ಸೆಸ್ಸೆಲ್ಸೀಲಿ ಪಾಸಾದಾಗ ಕೇರಿಗೆಲ್ಲ ಸ್ವೀಟು ಹಂಚಿದ್ದ. ಅಕಸ್ಮಾತ್ ಎಡವಿ ಬಿದ್ದಾಗ ಇಡೀ ದಿನ ಸಂತೈಸಿದ್ದ.

ಅಂಥ ಅಪ್ಪ ಸಿಟ್ಟಿನ ಭರದಲ್ಲಿ ಹೊಡೆದಿದ್ದು ನಿಜ. ಆದರೆ ಅದನ್ನೇ ಈಗ ಹೇಳಿಬಿಟ್ಟರೆ ಡಾಕ್ಟರು ಕೂಡಾ ಅಪ್ಪನಿಗೆ ಬಯ್ಯಬಹುದು. ಉಹುಂ, ಅಪ್ಪನಿಗೆ ಅಪಮಾನವಾಗಬಾರದು..." ಹೀಗೆಲ್ಲ ಯೋಚಿಸಿದ ವಿನಾಯಕ- 'ಇಲ್ಲ ಡಾಕ್ಟರ್, ನಮ್ಮಪ್ಪ ನಂಗೆ ಒಂದೇ ಒಂದು ದಿನವೂ ಹೊಡೆದಿಲ್ಲ. ತುಂಬಾ ಗ್ರೇಟ್ ಅಪ್ಪ ಅವರು. ನಾನು ತಪ್ಪು ಮಾಡಿದಾಗ ಕೂಡ ಅವರು ಗದರಿಸಿಲ್ಲ. ಹಾಂ, ಈಗ ನೆನಪಾಗ್ತಾ ಇದೆ. ನಾನು ಎಂಟನೇ ಕ್ಲಾಸ್‌ನಲ್ಲಿದ್ದಾಗ ಒಂದ್ಸಲ ಕೆನ್ನೆಗೆ ಕ್ರಿಕೆಟ್ ಬಾಲ್ ಬಿದ್ದಿತ್ತು" ಅಂದುಬಿಟ್ಟ. ಇತ್ತ, ಬಾಗಿಲ ಪಕ್ಕದಲ್ಲೇ ನಿಂತು ಮಗನ ಎಲ್ಲ ಮಾತುಗಳನ್ನೂ ಕೇಳಿಸಿಕೊಂಡ ರಾಮರಾಯರು ದುಃಖ ತಡೆಯಲಾರದೆ ಸರಸರನೆ ಹೊರಗೆ ಹೋಗಿ ಬಿಕ್ಕಳಿಸಿ ಅತ್ತರು.

***

ಅಂದಿನಿಂದ ವಿನಾಯಕನ ಮುಂದೆ ನಿಲ್ಲಲು ರಾಮರಾಯರಿಗೆ ವಿಪರೀತ ಅಳುಕುಂಟಾಗುತ್ತಿತ್ತು. ಆದರೆ ಅವನು ಆರಾಮಾಗಿದ್ದ. ಹಿಯರಿಂಗ್ ಏಯ್ಡ್ ಹಾಕಿಕೊಂಡಾಗಲೂ ಸರಿಯಾಗಿ ಕೇಳಿಸ್ತಾ ಇಲ್ಲ ಅನ್ನಿಸಿದಾಗ ಮಾತ್ರ ಅಧೀರನಾದ. ಹತ್ತಾರು ಅವಮಾನಗಳ ಮಧ್ಯೆ ಹಣ್ಣಾದ. ಅದೊಂದು ದಿನ ಮಾತ್ರ ಮನೆಯಿಂದ ದೂರ ಹೋಗಿ ಸಮಾಧಾನವಾಗುವವರೆಗೂ ಅತ್ತು ಹಗುರಾದ. ಇತ್ತ, ರಾಮರಾಯರ ಪರಿಸ್ಥಿತಿ ಹೇಳುವುದೇ ಬೇಡ. ತನ್ನಿಂದಲೇ ಮಗನ ಬದುಕು ಹಾಳಾಯಿತು ಎಂಬ ಗಿಲ್ಟ್ ಅವರದು. ಹೀಗಿದ್ದಾ ಗಲೇ ಮೊನ್ನೆ ಫಾದರ್‍ಸ್ ಡೇ ಬಂತಲ್ಲ, ಅವತ್ತು ಸೀದಾ ಅಪ್ಪನ ಮುಂದೆ ನಿಂತ ವಿನಾಯಕ ಏನೊಂದೂ ಮಾತಾಡದೆ ಒಂದು ಚೀಟಿ ಕೊಟ್ಟ. ಅದರಲ್ಲಿ ಹೀಗಿತ್ತು; 'ಅಪ್ಪಾ, ಚಿಂತಿಸಬೇಡಿ. ಆಗಿದ್ದು ಆಗಿ ಹೋಯ್ತು. ಹೇಗೋ ಬದುಕ್ತೇನೆ. ಬಿ ಕೂಲ್, ಬಿ ಹ್ಯಾಪಿ. ಅಪ್ಪಾ, ಐ ಲವ್ ಯೂ. ನಿಮಗೆ ಫಾದರ್‍ಸ್ ಡೇ ಶುಭಾಶಯಗಳು..."

ರಾಮರಾಯರಿಗೆ ಮಾತೇ ಹೊರಡಲಿಲ್ಲ. ಅವರ ಕಣ್ಣು ಮಂಜಾಗಿದ್ದವು. ತಕ್ಷಣ ಎದ್ದು ನಿಂತು, ಮಗನ ಎರಡೂ ಕೈಗಳನ್ನು ಕಣ್ಣಿಗೊತ್ತಿಕೊಂಡು 'ನನ್ನನ್ನು ಕ್ಷಮಿಸಿಬಿಡಪ್ಪಾ" ಅಂದರು.

***

ಎಲ್ಲ ಮನೆಯ ಅಪ್ಪಂದಿರೆ, ದಯವಿಟ್ಟು ಕೇಳಿಸಿಕೊಳ್ಳಿ. ಈ ಸಮಾಜ ಯಾವತ್ತೂ ಅಷ್ಟೆ. ವಿಕಲಚೇತನರನ್ನು ತಾತ್ಸಾರದಿಂದ ನೋಡುತ್ತೆ. ಅಣಕಿಸುತ್ತೆ. ಅವಮಾನ ಮಾಡುತ್ತೆ. ಅದರಲ್ಲೂ ಕಿವಿ ಕೇಳೋದಿಲ್ಲ ಅಂತಾರಲ್ಲ, ಬಿಡಿ, ಅವರ ಬದುಕು ಬದುಕಲ್ಲ. ಅಂಧರಿಗೆ ಸಿಗುವ ಅನುಕಂಪ ಶ್ರವಣ ದೋಷ ಇದ್ದವರಿಗೆ ಸಿಗೋದಿಲ್ಲ. ಅದಕ್ಕೇ ಏನ್ಮಾಡಿ ಗೊತ್ತ? ಯಾವತ್ತೂ, ಯಾವುದೇ ಕಾರಣಕ್ಕೂ ಮಕ್ಕಳಿಗೆ ಕಪಾಳಕ್ಕೆ ಹೊಡೀಬೇಡಿ. ಹೊಡೆಯಲೇಬೇಡಿ. ಯಾಕೆಂದರೆ, ಅಂಥ ಒಂದೇ ಒಂದು ಹೊಡೆತ ನಿಮ್ಮ ಮಗುವಿನ ಭವಿಷ್ಯವನ್ನೇ ಅಳಿಸಿ ಹಾಕಬಲ್ಲದು. (ಇಷ್ಟಕ್ಕೂ ಹೊಡೆದು ಸಾಧಿಸುವುದೇನು?) ಹಾಗಾಗಿ, ಪ್ಲೀಸ್, ಕೆನ್ನೆಗೆ ಹೊಡೀಬೇಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more