• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವನದ ಸಿದ್ಧಾಂತವೇ ಇರಲಿ, ಐಟಂ ಸಾಂಗೇ ಇರಲಿ, ಹಂಸಲೇಖರನ್ನ ಮೀರಿಸೋರಿಲ್ಲ!

By ಜಯನಗರದ ಹುಡುಗಿ
|

ಜೂನ್ 23ರಂದು 67ನೇ ವಯಸ್ಸಿಗೆ ಕಾಲಿಟ್ಟ ಸಂಗೀತ ಮಾಂತ್ರಿಕ, ಕನ್ನಡ ಸಿನೆಮಾಲೋಕದ ಗಂಧರ್ವ ಹಂಸಲೇಖ ಅವರು ರಚಿಸಿದ, ರಾಗಸಂಯೋಜಿಸಿರುವ ಹಾಡುಗಳು, ಕನ್ನಡ ನಾಡು ನುಡಿ, ಜೀವನಪ್ರೀತಿಯಿಂದ ಶ್ರೀಮಂತವಾಗಿವೆ. ಯಾರೆ ನೀನು ರೋಜಾ ಹೂವೇನೇ ಆಗಲಿ, ನೀನೇನಾ ಭಗವಂತನೇ ಆಗಲಿ, ಈ ಬಾಳು ಬಣ್ಣದ ಬುಗುರಿಯೇ ಆಗಲಿ, ಆಗುಂಬೆಯಾ ಈ ಸಂಜೆಯೇ ಆಗಲಿ... ಆ ಮಾಂತ್ರಿಕ ಸ್ಪರ್ಶದಿಂದ ಕೇಳುಗರು ಮಂತ್ರಮುಗ್ಧರಾಗುತ್ತಾರೆ. ಅವರ ಹಾಡು ಕೇಳುತ್ತಲೇ 'ಜಯನಗರದ ಹುಡುಗಿ'ಯ ಈ ಲೇಖನ ಓದಿರಿ.

***

ತುಂಬಾ ಜನರು ನನ್ನ ಕಛೇರಿ ಬೆಂಗಳೂರು ದಕ್ಷಿಣದಲ್ಲಿದೆ ಎಂದು ಹೊಟ್ಟೆ ಉರಿದುಕೊಳ್ಳುತ್ತಿದ್ದಾಗ ಅದನ್ನ ಕಡಿಮೆ ಮಾಡಲು, ಒಂದಷ್ಟು ದಿವಸ ನಾನು ಮರೆತ್ತಿದ್ದ, ಬೆಂಗಳೂರಿನ ಭಾಗವೇ ಅಲ್ಲ ಎಂದು ಅಂದುಕೊಂಡ, ಸಿಲ್ಕ್ ಬೋರ್ಡಿನ ಆಚೆಗಿನ ಜಗತ್ತಲ್ಲಿ ನಮ್ಮ ಕ್ಲೈಂಟ್ ನ ಕಛೇರಿಗೆ ಹೋಗಬೇಕಿತ್ತು. ಒಂದಿಪ್ಪತ್ತೈದು ಸಿಗ್ನಲ್ ಗಳು, ಟ್ರಾಫಿಕ್ ಜಾಮ್, ಒಂದಷ್ಟು ಗಲಾಟೆ, ಸಮಯದೊಡನೆ ಗುದ್ದಾಟ, ಮನೆಗೆ ಬಹಳ ತಡವಾಗಿ ತಲುಪುವ ಆಯಾಸಗಳು, ಕೆಲಸ, ಲೇಖನ ಇವೆಲ್ಲವನ್ನ ಸರಿದೂಗಿಸುವಾಗ ಆಗುವ ತಲೆನೋವುಗಳ ನಡುವೆ ಒಂದಷ್ಟು ಮುದಕೊಡೋದು ಸಂಗೀತ.

ಕ್ಯಾಬಿನಲ್ಲಿ ಕೂತಾಗ ಅಲ್ಲಿ ಇಲ್ಲಿ ಪ್ರೈಮ್ ಪ್ಲೇನಲ್ಲಿ ಹಂಸಲೇಖ ಹಾಡನ್ನ ಹುಡುಕುತ್ತಿದ್ದೆ. ಚಾಲಕ "ಹಿಂದಿ ಗಾನ" ಅಂದ್ರು. ನಾನು "ಅಣ್ಣ ಹಂಸಲೇಖ ಹಾಡಿದ್ಯಾ" ಅಂದೆ. ಅವರು ಎಷ್ಟು ಖುಷಿಯಾದ್ರಂದ್ರೆ "ಅಲ್ಲಿಲ್ಲ ನನ್ನ ಹತ್ರ ಇದೆ" ಎಂದು ಸ್ಪೀಕರಿಗೆ ಹಾಕಿ ಶುರು ಮಾಡಿದ್ದು "ಓ ಮೇಘವೇ" ಎಂಬ ಹಾಡಿಂದ. ಮನೆಯಿಂದ 2 ಘಂಟೆಯ ಪ್ರಯಾಣ ಆರಾಮಾಗಿದ್ದು ಆಗಲೇ.

'ಒನ್ ಇಂಡಿಯಾ'ದಲ್ಲಿ 'ಓಂ ಮಹಾಪ್ರಾಣ ದೀಪಂ' ಹಾಡಿನ ಕಥೆ ಬಿಚ್ಚಿಟ್ಟ ಹಂಸಲೇಖ

ಚಿಕ್ಕಣ್ಣ ಚಾಲಕ ಆಗೋದಕ್ಕೂ ಮೊದಲು ಮಂಡ್ಯದ ಆರ್ಕೇಸ್ಟ್ರಾದಲ್ಲಿ ಹಾಡ್ತಿದ್ರಂತೆ. ಅಲ್ಲಿಂದ ಹಂಸಲೇಖಾರ ಬಗ್ಗೆ ಮಾತು ಶುರುವಾಯ್ತು. ಹಿನ್ನೆಲೆಯಲ್ಲಿ ಹಂಸಲೇಖಾರ ಹಾಡುಗಳು ಬರುತ್ತಾ ಇತ್ತು. ಯಾವ ಮಟ್ಟಿಗೆ ಹುಚ್ಚರಾಗಿದ್ವಿ ಅಂದ್ರೆ ಹಾಡುಗಳ ಲಿರಿಕ್ಸ್ ಅನ್ನು ಪೂರ್ತಿ ಪೂರ್ತಿ ಹೇಳೋಹಾಗೆ.

ಜೀವನದ ದೊಡ್ಡ ಘಟ್ಟಗಳಲ್ಲಿ, ಖುಷಿಯಲ್ಲಿ, ಅಳುವಿನಲ್ಲಿ, ಕೋಪದಲ್ಲಿ ನಮ್ಮಂತಹ ತುಂಬಾ ಜನರನ್ನ ಪೊರೆದ್ದದ್ದು ಹಂಸಲೇಖಾರ ಸಾಲುಗಳೇ. ಕೆಳಗೆ ಬಿದ್ದಾಗ "ಈ ಭೂಮಿ ಬಣ್ಣದ ಬುಗುರಿ" ಹಾಡಿನ "ಮರೆತಾಗ ಜೀವ ಪಾಠ, ಕೊಡುತಾನೆ ಛಾಟಿಯ ಏಟ" ಸಾಲು, ಖುಷಿಯಾದಾಗ "ಶ್ರೀಗಂಧ"ದ ಹಾಡು, ಅಳುವಾಗ "ಪ್ರೇಮ ಗೀಮ ಜಾನೆ ದೋ" ಅನ್ನೋ ಹಾಡು, ಹತಾಶೆಯಾದಾಗ "ಯಾರಿಗೆ ಬೇಕು ಈ ಲೋಕ" ಎಂದು ಜೋರಾಗಿ ಹಾಡಿದ ಎಷ್ಟೋ ಸಂದರ್ಭಗಳು ಬಂದಿವೆ. ಎಲ್ಲಾ ಹಾಡಿನಲ್ಲೂ ಒಂದೊಂದು ಸಾಲು ತಲೆಯಲ್ಲಿ ಕೂತರೆ ಅದು ಹೋಗೋದೆ ಇಲ್ಲ.

ಇದನ್ನೆ ಓಲಾ ಓಡಿಸುವ ಚಿಕ್ಕಣ್ಣನೂ ಹೇಳುತ್ತಿದ್ದ. ಆಗಾಗ ಮನಸ್ಸನ್ನ ತಿಳಿ ಮಾಡಿಕೊಳ್ಳಬೇಕಾದಾಗ ಕೇಳೋದು ಅದೇ ಹಾಡುಗಳಂತೆ. ಒಂದು ಆಲ್ಬಮ್ ತೆಗೆದುಕೊಂಡ್ರೆ ಅದರಲ್ಲಿ ದೇವರಮನೆಯಲ್ಲಿ ಹಾಕುವ "ಓಂ ಬ್ರಹ್ಮಾನಂದ ಓಂಕಾರ" , ಗೆಳೆಯರೆಲ್ಲಾ ಪಡ್ಡೆ ಹೈಕಳಾಗಿ "ಮೆಹಬೂಬ" ಹಾಡು, ಇನ್ನು ಸ್ನೇಹಿತರೆಲ್ಲ ಸೇರಿ ಪ್ರೀತಿಯಲ್ಲಿ ಬಿದ್ದವನಿಗೆ "ಕೋಮಾ" ಹಾಡು, ಇನ್ನು ಕೈಕೊಟ್ಟ ಹುಡುಗಿಯನ್ನ ನೆನೆದು "ಓ ಗುಲಾಬಿಯೇ" ಹಾಡು ಒಂದು ಥರಾ ಒಂದು ಆಯಾಮ ಮುಗಿಸಿದಂತೆ. ದೊಡ್ಡೋರಿಂದ ಚಿಕ್ಕೋರವರೆಗೂ, ಎಲ್ಲಾ ವಯಸ್ಸಿಗೂ ಕೇಳುವಷ್ಟು ಹಾಡುಗಳನ್ನು ಕೊಟ್ಟಿದ್ದಾರೆ ಈ ಮಾಂತ್ರಿಕ.

ಸಂಕ್ರಾಂತಿಗಾಗಿ ಒನ್ ಇಂಡಿಯಾಕ್ಕೆ 'ಹಂಸಲೇಖ' ನೀಡಿದ ವಿಶೇಷ ಸಂದರ್ಶನ

ಒಂದು ಕಡೆ ದೇಸಿ ಸಾಹಿತ್ಯ, ಸಂಗೀತವನ್ನ ಪಸರಿಸುತ್ತಾರೆ, ಅಲ್ಲೆಲ್ಲೋ ವೆಸ್ಟರ್ನ್ ಕೀ ಬೋರ್ಡ್ ಬಗ್ಗೆ ಮಾತಾಡುತ್ತಾರೆ, ಇನ್ನೆಲ್ಲೋ ಶಾಸ್ತ್ರೀಯ ಸಂಗೀತ, ಮತ್ತೆಲ್ಲೋ ಹುಟ್ಟಾ ಪೋಲಿ ಹಾಡುಗಳು ಎಲ್ಲ ವೈಪರೀತ್ಯವನ್ನ ಅನುಭವಿಸುವುದಕ್ಕೆ ಕೊಟ್ಟಿರುವವರು ಅವರು. ಅವರ ಸಾಹಿತ್ಯ ಎಲ್ಲರನ್ನ ಮುಟ್ಟಿದಕ್ಕೆ ಒಂದು ಉದಾಹರಣೆ ಈ ಎರಡು ಹಾಡುಗಳು. ಈ ಹಾಡಿನ ಸಾಲಿನಲ್ಲಿ ಹೀರೋಗೆ ಆಗಿರುವ ದುಃಖವನ್ನ ಹಳ್ಳಿ ಭಾಷೆಯಲ್ಲಿ, ತುಂಬಾ ನೇರವಾಗಿ "ಯಾವ್ದೋ ಜನ್ಮದ ಕೋಪವ ಮರೆತಿಲ್ಲ ಶಿವ, ಈ ಜನ್ಮದಲ್ಲಿ ನಂಗೆ ನೀಡ್ವನೆ" ಎಂದು ಹೇಳುತ್ತಾನೆ ಅದೇ ಭಾವ ತುಂಬಾ ಸಫೆಸ್ಟಿಕೇಟೆಡ್ ಆಗಿ "ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ ಬಾಳು ಹಬ್ಬದಿಂದ ಬ್ರಹ್ಮಾನಂದ" ಎಂದು ಇನ್ನೊಬ್ಬ ಹೀರೋ ಮತ್ತೊಂದು ಸಿನೆಮಾದಲ್ಲಿ ಹೇಳುತ್ತಾನೆ.

"ಹುಡಿಗೀರಂದ್ರೆ ಡೇಂಜರಪ್ಪೋ" ಅಂತಾ ಬಯ್ಯೋ ಹಾಡಿಂದ ಹಿಡಿದು "ಆ ಸೌಂದರ್ಯ ಲೋಕದಿಂದ ಜಾರಿದೆ, ನಿನ್ನ ನೋಡೋಕೆ ನೂರು ಕಣ್ಣು ಸಾಲದೆ" ಎಂದು ಹೊಗಳಿ ಸಹ ಒಲಿಸಿಕೊಳ್ಳೋ ಕಲೆ ಇದೆ.

ಅವರ ಹಾಡಿನಲ್ಲಿ ನನಗೆ ಬಹಳ ಆಸಕ್ತಿದಾಯಕವಾಗುವುದು ಕೋರಸ್. ಫೇಸ್ ಬುಕ್ಕಿನಲ್ಲಿ ಅದರ ಬಗ್ಗೇನೆ ದೊಡ್ಡ ಚರ್ಚೆಯಾಗಿತ್ತು. ಪುಟ್ನಂಜ ಹಾಡಿನಲ್ಲಿ ಕಡ್ಡಾಯವಾಗಿ ಧೀಮ್ ಧೀಮ್ ದರ್ ಥರಿಕಿಟವನ್ನ ಕಲಿಯದೇ ನಾನು ಪುಟ್ಟ ನಂಜ ಎಂಬ ಹಾಡು ಹಾಡುವುದೇ ಇಲ್ಲ. ಇನ್ನು ಡಬ್ ಸ್ಮಾಶ್ ಶುರುವಾದಾಗ ತುಂಬಾ ಜನ ಖುಷಿ ಪಟ್ಟು ಮಾಡಿದ್ದು "ಕೋಮಾ ಕೋಮಾ ಪ್ರೇಮ ಥಕಿಟಥಾ" ಎಂದು ಆ ಕೋರಸ್ ಅನ್ನೇ. ಇನ್ನು ಯಾರಮ್ಮ ಇವಳು ನಶೆಯ ಹುಡುಗ ಹಾಡಿನಲ್ಲಿ "ಚಾಂಗ್ ಚಕ್ಕ ಛಾಂಗ್ ಚಕ್ಕ ಚಾ" ಹಾಡಿನ ಅಪ್ಯಾಯಮಾನವಾದ ಭಾಗ. ಇನ್ನು ಸಂಕ್ರಾಂತಿಯಲ್ಲಿ ಕಡ್ಡಾಯವಾಗಿ ಹಾಡುವ ಸಂಕ್ರಾಂತಿ ಬಂತು ರತ್ತೋ ರತ್ತೋ ಹಾಡಲ್ಲಿ ಝುಂ ಝುಂ ಅಂತು ಮರೆಯೋಕೆ ಸಾಧ್ಯವೇ ಇಲ್ಲ.

ಹೀಗೆ ಹಾಡುಗಳು ಮುಂದೆ ಹೋಗುತ್ತಿದ್ದಾಗ ಕ್ಯಾಬಿನಲ್ಲಿ ಚಿಕ್ಕಣ್ಣ ಹಾಡನ್ನ ಸ್ಕಿಪ್ ಮಾಡಲು ಹೋದರು. "ನಾನು ಹಾಕಿ ಸಾರ್" ಅಂದೆ. "ಅಯ್ಯೋ ಐಟಂ ಹಾಡು, ಬೇಡ ಮೇಡಮ್" ಅಂದ್ರು. "ಯಾವ್ದು" ಅಂದೆ. 'ಬಂತು ಬಂತು ಕರೆಂಟು ಬಂತು' ಅಂದ್ರು. "ಹಾಕಿ" ಅಂದೆ. ಅದರಲ್ಲಿ "ವರ್ಣಬೇಧ ಮರೆತಿಲ್ಲ, ಮೇಲು ಕೀಳು ಮರೆತ್ತಿಲ್ಲ, ಒಂಟಿ ಹುಡುಗಿ ಹಿಂದೆ ಕಳ್ಳರೆಲ್ಲ ಹಿಂದೆ, ಜಾತಿ ಜಾತಿ ಸೇರೋಲ್ಲ, ಭಾಷೆ ಭಾಷೆ ಸೇರೋಲ್ಲ, ಹುಡುಗಿ ಅಂದ್ರೆ ಮಂದಿ ಜಾತಿ ಗೀತಿ ಚಿಂದಿ" ಎಂಬ ಸಾಲುಗಳನ್ನ ಕೇಳುತ್ತಾ ಇದ್ದೆ. ಚಿಕ್ಕಣ್ಣ ನಾನೂ ಇಬ್ಬರೂ ನಸುನಕ್ಕೆವು. ಪೋಲಿ ಹಾಡಲ್ಲಿ ಸಿದ್ಧಾಂತ, That is haMs!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The mesmerizing Kannada Cinema music director Hamsalekha never fails to thrill the music lovers. His composition are full of life and makes you immerse in the music world. Tribute to him by Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more