ರೋಡಿನ ಜೀವಂತಿಕೆಯ ಸಂಕೇತವಾಗಿದ್ದ ಟೆಲಿಫೋನ್ ಬೂತ್ ಕಾಣೆಯಾಗಿವೆ
ಒಂದು ವಾರದ ಹಿಂದೆ ಮನೆಯ ಹತ್ತಿರದ ಜಯನಗರದ ಸೆಂಟ್ರಲ್ ಮಾಲ್ ಮುಂದೆ ನಡೆದುಹೋಗುತ್ತಿದ್ದೆ. ಅದರ ಎದುರಿಗೆ ಇರುವ ಒಂದು ಮನೆಯ ಮುಂದೆ "ಮನೆ ಮಾರಾಟಕ್ಕಿದೆ" ಎಂಬ ಬೋರ್ಡ್ ಕಂಡು ಹೌಹಾರಿದ್ದೆ. ನಮ್ಮ ಬಡಾವಣೆಯಲ್ಲಿ ಈಗ ಎಲ್ಲಿ ಮನೆ ಮಾರಾಟಕ್ಕಿದೆ ಎಂದು ಬೋರ್ಡು ನೋಡಿದರೂ ಭಯ ಆಗುತ್ತದೆ.
ಎಲ್ಲ ಹಳೆಯ ಮನೆಗಳನ್ನ ಕರಕರ ಕೊರೆಸಿ, ಗೋಡೆ ಒಡೆದು ಕೆಟ್ಟದಾಗಿ ಐಶಾರಾಮಿ ಮನೆ ಮಾಡುತ್ತಾರೆ ಅಥವಾ ಮಾರಾಟ ಮಾಡಿ ಅಲ್ಲೊಂದು ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟುತ್ತಾರೆ. ಅದರ ಮುಂದೆ ಕಡ್ಡಾಯವಾಗಿ ಒಂದು ಟೀ ಅಂಗಡಿ, ಅದರ ಮುಂದೊಂದಷ್ಟು ಪೋಕರಿ ಹುಡುಗರು ನಿಂತು ಸಿಗರೇಟು ಸೇದುವ ದೃಶ್ಯ ಸರ್ವೇಸಾಮಾನ್ಯವಾಗುತ್ತಿದೆ.
ಆಮೇಲೆ ಕೂಲಂಕುಷವಾಗಿ ನೋಡಿದಾಗ ಬೇರೆ ಯಾವುದೋ ಅಡ್ರೆಸ್ ಕಂಡು "ಸದ್ಯ" ಎಂದುಕೊಂಡು ಬರುತ್ತಾ ಇದ್ದೆ. ಮತ್ತೆ ಚಕ್ಕನೆ ತಿರುಗಿ ನೋಡಿದ್ದು "ಎಸ್ ಟಿ ಡಿ" ಬೂತಿನ ಮನೆ ಎಂದು ಕರೆಯುತ್ತಿದ್ದ ಮನೆ ಅದು ಎಂದು ನೆನಪಾಯಿತು. ನಾವೆಲ್ಲ ಚಿಕ್ಕವರಿದ್ದಾಗ ಆಟ ಆಡುವಾಗ ತುಂಬಾ ಆಡುತ್ತಾ ಇದ್ದದ್ದು "ಐ ಸ್ಪೈ ಯೂ". ಯಾವ ಯಾವ ಮನೆಯಲ್ಲಿ ಬಚ್ಚಿಟ್ಟುಕೊಳ್ಳುವ ಜಾಗಗಳಿದ್ದವು ಎಂಬ ವಿಷಯ ನಮಗೆ ಸರಿಯಾಗಿ ಗೊತ್ತಿದ್ದವು. ಕೆಲವೊಮ್ಮೆ ಅವರ ಮನೆಯ ಸಂಪಿನ ಹತ್ತಿರ ಅಡಗಿಕೊಳ್ಳುವ ಜಾಗವಿತ್ತೆಂದೇ ಗೊತ್ತಿರುತ್ತಿರಲ್ಲಿಲ್ಲ. ನಮಗೆ ತಿಳಿದಿತ್ತು.

ರಸ್ತೆಯ ಕೊನೆಯಾದ್ದರಿಂದ ಆ ಮನೆಯಲ್ಲಿ ಎಸ್ ಟಿ ಡಿ ಬೂತ್ ಇತ್ತು. ಅದು ನಮ್ಮ ರಸ್ತೆಗೆ ಬಂದಾಗ ನಮ್ಮ ಮನೆಗೇ ಏನೋ ಹೊಸ ವಸ್ತು ಬಂತು ಎಂದು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದೆವು. ಎಲ್ಲರ ಮನೆಯಲ್ಲಿಯೂ ಲ್ಯಾಂಡ್ಲೈನ್ ಇದ್ದರೂ, ಈ ಎಸ್ ಟಿ ಡಿ ಮತ್ತು ಐ ಎಸ್ ಡಿ ಕರೆಗಳನ್ನ ಮಾಡುವುದಕ್ಕೆ ಮನೆಯ ಫೋನ್ಗಳು ಸಿಕ್ಕಾಪಟ್ಟೆ ದುಬಾರಿಯಾಗಿದ್ದ ಕಾರಣ ಇಲ್ಲಿಯೇ ಬಂದು ಮಾಡಬೇಕಿತ್ತು.
ಸರಾಸರಿ ನಮ್ಮ ರಸ್ತೆಯಲ್ಲಿ ಮನೆಗೆ ಒಬ್ಬರಾದರೂ ಕಡ್ಡಾಯವಾಗಿ ಅಮೇರಿಕಾದಲ್ಲಿ ಅಥವಾ ಹೊರ ರಾಜ್ಯದಲ್ಲಿ ಇರುತ್ತಿದ್ದರು. ರಾತ್ರಿ 9 ಘಂಟೆಯ ನಂತರ ಬೂತಿನ ಮುಂದೆ ದೊಡ್ಡ ಕ್ಯೂ ಇರುತ್ತಿತ್ತು. ಕಡಿಮೆ ಬೆಲೆಗೆ ಫೋನುಗಳು ಸಿಗುತ್ತಿದ್ದ ಕಾರಣ ಆಗಲೇ ಎಲ್ಲರೂ ಮಾತಾಡುತ್ತಿದ್ದರು. ಆ ಕ್ಯೂನಲ್ಲಿಯೇ ಎಲ್ಲರ ಮನೆಯ ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು.
ರಾತ್ರಿಯ ಮೇಲೆ ಆ ಬೂತುಗಳು ತುಂಬಿಕೊಳ್ಳುತ್ತಿದ್ದವು, ಸಂಜೆ, ಮಧ್ಯಾಹ್ನ ಖಾಲಿ ಇರುತ್ತಿದ್ದವು. ನಮಗೆ ಆ ಬೂತಿನಲ್ಲಿ ಹೋಗಿ ಜನ ಏನು ಮಾತಾಡುತ್ತಾರೆ ಎಂಬ ಕುತೂಹಲ. ಮನೆಯ ವಿಷಯಗಳನ್ನ ಊರಿನಲ್ಲಿರುವವರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದರು ಆದರೆ ಸಮಯದ ಮೇಲೆ ನಿಗಾ ಇಡಬೇಕಾಗಿತ್ತು. ವಿಪರೀತ ಮಾತಾಡಿದರೆ ಆ ಲೆದರ್ ಕೋಟಿಂಗ್ ಇದ್ದ ಬಿಲ್ಲಿಂಗ್ ಮೆಷೀನಿನಲ್ಲಿ ಸಿಕ್ಕಾಪಟ್ಟೆ ದುಡ್ಡು ಪ್ರಿಂಟ್ ಆಗುತ್ತಿತ್ತು. ಇದನ್ನೆಲ್ಲಾ ನೋಡಿಕೊಳ್ಳುವುದಕ್ಕೆ ಒಬ್ಬ ಹುಡುಗ.
ನಮ್ಮ ಮನೆಗಳಲ್ಲಿ ಸರಿಯಾಗಿ ಓದುತ್ತಿರಲ್ಲಿಲ್ಲ ಅಂದರೆ "ಮನೆ ಮುಂದೆ ಬೂತ್ ಇಟ್ಕೋಬೇಕು" ಎಂದೂ ಹೆದರಿಸುತ್ತಿದ್ದರು. ಯಾರ ಮನೆಯಲ್ಲಿ ಎಷ್ಟು ಘಂಟೆಗೆ ಬೂತಿಗೆ ಹೋಗುತ್ತಾರೆ, ಯಾವ ದಿವಸ ಹೋಗುತ್ತಾರೆ ಎಂಬ ಅಂದಾಜೂ ಇರುತ್ತಿತ್ತು. ಹೆಣ್ಣು ಮಕ್ಕಳೂ ಬರುತ್ತಿದ್ದ ಕಾರಣ ಅಲ್ಲಿ ಪೋಕರಿಗಳು ಸುಮಾರು ಜನ ಸಿಗರೇಟು ಹಿಡಿದು ರಜನಿಕಾಂತ್ ಥರಹ ಸಿಗರೇಟು ಸೇದೋದಕ್ಕೆ ಹೋಗಿ ಕಮಂಗಿಗಳ ಥರಹ ಕಾಣುತ್ತಿದ್ದರು. ನಾವು ಹುಡುಗಿಯರು ಸುಮ್ಮನಿರದೆ "ಸಿಗ್ರೇಟು ಆರೋಗ್ಯಕ್ಕೆ ಹಾನಿಕರ" ಎಂದು ಕಿರುಚಿ ಸೈಕಲ್ ತುಳಿದುಕೊಂಡು ಹೋಗುತ್ತಿದ್ದೆವು. ಅಸಲಿಗೆ ಆ ಬೂತು ನಮ್ಮ 4 ರೋಡಿನ ಜೀವಂತಿಕೆಯ ಸಂಕೇತವಾಗಿತ್ತು.
ಪರ ಊರಿನಲ್ಲಿ ಯಾರಿಗೋ ಹುಷಾರಿಲ್ಲದಿದ್ದರೆ, ಯಾರೋ ಸತ್ತುಹೋಗಿದ್ದರೆ, ಇನ್ಯಾರದ್ದೋ ಏನೋ ತೊಂದರೆ ಇದ್ದರೆ ಎಮರ್ಜೆನ್ಸಿ ಎಂದು ಅಲ್ಲಿಗೆ ಕರೆ ಮಾಡುತ್ತಿದ್ದರು. ಅಲ್ಲಿನ ಜನರನ್ನ ನೋಡಿ ನಮಗೆ ಎಲ್ಲವೂ ಅರ್ಥವಾಗುತ್ತಿದ್ದವು. ಇವತ್ತು ಎಷ್ಟು ಖುಷಿ, ಎಷ್ಟು ದುಃಖದ ವಿಚಾರ ಎಂಬ ಲೆಕ್ಕವನ್ನ ಅಲ್ಲೇ ಆಟವಾಡುತ್ತಿದ್ದ ನಾವೆಲ್ಲ ಇಡುತ್ತಿದ್ದೆವು. ಪ್ರೇಮಿಗಳ ಸಂಖ್ಯೆ ಸಿಕ್ಕಾಪಟ್ಟೆ ಇರುತ್ತಿತ್ತು. ಪಿಸುಗುಟ್ಟುವಿಕೆ ಮಾತುಗಳು ಸುಮಾರು ಇರುತ್ತಿದ್ದವು, ಫೋನ್ ಮಾಡಲ್ಲಿಕ್ಕಲ್ಲದಿದ್ದರೂ ಬೇರೆ ಬೇರೆ ಕಡೆಯಿಂದ ಒಬ್ಬೊಬ್ಬರು ಬಂದು ಅಲ್ಲಿ ಕಟ್ಟೆಯ ಮೇಲೆ ಪಟ್ಟಾಂಗ ಹೊಡೆಯುತ್ತಿದ್ದರು.
ನಮಗೆ ಜೂಟಾಟ ಆಡಿ ಓಡಿ ಓಡಿ ಸುಸ್ತಾದ ಮೇಲೆ ಕಟ್ಟೆಯ ಮೇಲೆ ಕೂತಾಗ ಇವೆಲ್ಲ ಕಾಣಸಿಗುತ್ತಿದ್ದವು. ಕಣ್ಣಾಮುಚ್ಚಾಲೆ ಆಡುವಾಗ ಒಂದು ಬಾರಿಯಾದರೂ ಬೂತಿನ ಒಳಗಡೆ ಹೋಗಿ ಬಚ್ಚಿಟ್ಟುಕೊಳ್ಳುವ "ಡೇರ್" ತೆಗೆದುಕೊಂಡಿದ್ದೆವು. ಮೆತ್ತಗೆ ಹೋಗಿ ಬಾಗಿಲು ತೆಗೆಯುವುದರೊಳಗೆ ಅಲ್ಲಿದ್ದ ಹುಡುಗ ಬಂದು ಓಡಿಸುತ್ತಿದ್ದ. ನಮಗೆಂದಿಗೂ ಅಲ್ಲಿ ಒಳಗೆ ಹೋಗುವ ಪ್ರಮೇಯವೇ ಬರಲ್ಲಿಲ್ಲ. ಇನ್ನು ನಮಗೆಲ್ಲ ಹುಡುಗಿಯರಿಗೂ ಬೇರೆ ದೇಶದಿಂದ ಕರೆ ಮಾಡುವ ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ, ಅಕ್ಕ, ಅತ್ತೆ ಇರದಿದ್ದ ಕಾರಣ ಮತ್ತೂ ಲವರ್ಸ್ ಇರುವಷ್ಟು ದೊಡ್ಡವರಲ್ಲದಿರುವುದರಿಂದ ನಮಗೆ ಬೂತಿನ ಕರೆ ಮರೀಚಿಕೆಯಾಗಿತ್ತು.
ನಾವೆಲ್ಲ ಗೆಳತಿಯರು ದೊಡ್ಡವರಾದ ಮೇಲೆ ಒಬ್ಬರಾದರೂ ವಿದೇಶಕ್ಕೆ ಹೋಗಿ ಇಲ್ಲಿನ ಬೂತಿಗೆ ಕರೆ ಮಾಡುತ್ತೇವೆ ಎಂದು ನಂಬಿದ್ದೆವು. ಆಗ ಯಾರು ಸರತಿಯಲ್ಲಿ ಮೊದಲು ಬರಬೇಕೆಂದು ನಿಯಮ ಮಾಡಿಕೊಂಡಿದ್ದೆವು. ಹಾಗೆ ನಾವು ದೊಡ್ದವರಾಗುತ್ತಾ ಆಗುತ್ತಾ ಎಸ್ ಟಿ ಡಿ ಕರೆಗಳು ಚೀಪ್ ಆಗುತ್ತಾ ಹೋಯಿತು. ಮನೆಗೆ ಸಹ ಫಾರಿನ್ ಇಂದ ಕರೆ ಮಾಡಬಹುದು ಎಂಬ ಹೊಸ ಯೋಜನೆಯೂ ಬಂತು. ಆಮೇಲೆ ಮೊಬೈಲ್ ಬಂದು ಎಲ್ಲವೂ ಸರಾಗವಾಗಿ ಹೋಯ್ತು.
ಬೂತಿನ ಮನೆಯವರು ಆಮೇಲೆ ಹಾಲು ಮತ್ತು ದಿನಪತ್ರಿಕೆಯನ್ನ ಮಾರುತ್ತಿದ್ದರು. ನಂತರ ನಾವು ಕಾಲೇಜು ಬರುವ ಹೊತ್ತಿಗಂತೂ ಬೂತು ಪೂರ್ತಿ ಮುಚ್ಚಿತ್ತು. ಆಮೇಲೆ ಅದು ಪಿಜಿ ಆಯ್ತು, ಬರೀ ಹುಡುಗ ಹುಡುಗಿಯರಿಗೆ ಬಾಡಿಗೆ ಕೊಡುವ ಬ್ಯಾಚುಲರ್ ಹೋಂ ಆಯ್ತು. ಆ ರಾಕ್ಷಸ ಮಾಲ್ ಬಂದ ಮೇಲಂತೂ ಆ ಬೂತಿನ ಮನೆಯವರ ಥರ ಥರ ಲೈಟುಗಳು ಮಂಜಾದವು. ಮಾಲ್ ಕಡೆಯಿಂದ ಕಣ್ಣು ಕುಕ್ಕುವ ಕೆಂಪು ಲೈಟ್ ರಸ್ತೆಯನ್ನೆಲ್ಲಾ ತುಂಬಿತ್ತು.
ಆ ಮನೆಯ ಗೇಟು ತೆರೆಯದಿರುವಷ್ಟು ಗಾಡಿಗಳು ಅದರ ಮುಂದೆ ತುಂಬಿರುತ್ತದೆ. ಬೂತಿಗೋಸ್ಕರ ಅವರು ಆಕ್ರಮಿಸಿದ್ದ ಹೆಚ್ಚುವರಿ ಜಾಗದ ಕರ್ವ್ ಇನ್ನೂ ಹಾಗೇ ಇದೆ. ಈಗಲೂ ಪೋಕರಿಗಳ ಸಿಗರೇಟು ಸೇವನೆ ಮುಂದುವರಿಯುತ್ತಲೇ ಇರುತ್ತದೆ. ನಾವು ಹುಡುಗಿಯರು ಅಂದಿಕೊಂಡಿದ್ದ ಬೂತಿನಲ್ಲಿ ಕಣ್ಣಮುಚ್ಚಾಲೆಗೆ ಬಚ್ಚಿಟ್ಟುಕೊಳ್ಳುವ ಆಸೆ ಮತ್ತು ಫಾರಿನ್ನಿಗೆ ಒಬ್ಬರು ಹೋಗಿ ಸರತಿಯಲ್ಲಿ ಮಾತಾಡುವ ಕನಸು ಹಾಗೆಯೇ ಉಳಿದಿದೆ. ಯಾಕೆಂದರೆ ಅದನ್ನ ವಾಟ್ಸ್ಯಾಪು ಕಿತ್ತುಕೊಂಡು ಸುಮಾರು ವರ್ಷವಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications