ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷ ಬಿಳಿ ಬಟ್ಟೆಯಂತೆ ಶುದ್ಧವಾಗಿರಲಿ, ಬಣ್ಣ ತುಂಬಲಿ

By ಜಯನಗರದ ಹುಡುಗಿ
|
Google Oneindia Kannada News

ಹೊಸ ವರ್ಷ ಬಂತು. ಕೆಲವರಲ್ಲಿ ಅದು ಸಂತಸ ತರತ್ತೆ, ಕೆಲವರಿಗೆ ಅದು ದುಃಖ, ಇನ್ನೂ ಕೆಲವರಿಗೆ ಯಾವ ಬದಲಾವಣೆಯೂ ತರುವುದಿಲ್ಲ!

ಹೊಸ ವರ್ಷ ಚಿಕ್ಕವಳಿದ್ದಾಗ ಒಂದು ದೊಡ್ಡ ಹಬ್ಬವೇನೋ ಅಂತ ಮನೆಯಲ್ಲಿ ಯಾಕೆ ಪಾಯಸ ಚಿತ್ರಾನ್ನ ಮಾಡ್ತಿಲ್ಲಾ ಎಂದು ಯೋಚನೆ ಮಾಡ್ತಿದ್ದೆ. ಮನೆಯಲ್ಲಿ ಇರುತ್ತಿದ್ದ ಬೆಂಗಳೂರು ಪ್ರೆಸ್ ನ ಹೊಸ ಕ್ಯಾಲೆಂಡರ್ ನಲ್ಲಿ ಕೆಂಪು ಇಂಕಿನಲ್ಲಿದ್ದ ರಜಾದಿನಗಳೆಲ್ಲ ಮನೆಯಲ್ಲಿ ಚಿತ್ರಾನ್ನ ಪಾಯಸದ ಅಡುಗೆಯಾಗುತ್ತಿತ್ತು. ಮಾಡದಿದ್ದ ಹಬ್ಬಗಳಿಗೆ ಅವತ್ತು ಸಿಹಿ ತಿಂಡಿ ಏನಾದ್ರೂ ಅಕ್ಕ ಪಕ್ಕದ ಮನೆಯಿಂದ ಬರುತ್ತಿತ್ತು. ಈ ದಿನ ಅದೂ ಆಗ್ತಿರ್ಲಿಲ್ಲ.

ನಾನು ಮತ್ತು ಹೇಳಿದ ಹಾಗೆ ಕೆಲಸ ಮಾಡುವ ಅಲೆಕ್ಸಾ!ನಾನು ಮತ್ತು ಹೇಳಿದ ಹಾಗೆ ಕೆಲಸ ಮಾಡುವ ಅಲೆಕ್ಸಾ!

ಸಿಹಿ ತಿಂಡಿ ಪ್ರಿಯಳಾಗಿದ್ದ ನನಗೆ ಇದು ಒಪ್ಪಲಸಾಧ್ಯವಾದ ಮಾತು. ಯಥಾ ಪ್ರಕಾರ ತಾತನ ಹತ್ತಿರ ನನ್ನ ತಲೆಹರಟೆ ಶುರುವಾಗುತ್ತಿತ್ತು. ಈ ಥರಹದ ಪ್ರಶ್ನೆಗಳು ತಾತನಿಗೆ ಹೊಸದಾಗಿರಲ್ಲಿಲ್ಲ. ಯಾಕೆ, ಏನು ಅಂತೆಲ್ಲ ವಿಪರೀತ ತಲೆ ತಿನ್ನುತ್ತಿದ್ದೆ. ತಾತನಿಗೆ ಅವತ್ತು ಏನೂ ಹೊಳಿಲ್ಲಿಲ್ಲ ಅಂತ ಕಾಣತ್ತೆ, 'ಇಲ್ಲ ಗುಡ್ಡಿ ಈ ಹಬ್ಬದ ದಿವಸ ಹೊಸಾ ಥರಹದ ಅಡಿಗೆ ಮಾಡಿದ್ರೆ, ವರ್ಷ ಪೂರ್ತಿ ಹೊಸಾ ಅಡಿಗೆಗಳನ್ನ ತಿನ್ನಬಹುದು' ಎಂದು ಹೇಳಿ ಕೈತೊಳೆದುಕೊಂಡು ಬಿಟ್ಟರು.

May the New Year be like white dress and filled with colors

ಸರಿ ನಮ್ಮ ಅಮ್ಮನಿಗೆ ನನ್ನ ಕಾಟ ಶುರು ಆಯ್ತು. ಹೊಸಾ ಥರ ಅಡಿಗೆ ಮಾಡಮ್ಮ ಅಂತ. ಮೊದಲ ಬಾರಿಗೆ ಅಮ್ಮನಿಗೆ ಇವ್ಳಿಗೇನ್ ಮಾಡೋದು ಅಂತ ಗೊತ್ತಾಗ್ಲಿಲ್ಲ. ಸರಿ ಅದೇನೋ ಮಾಡೋಣ ಅಂತ ಅಡಿಗೆ ಮನೆಗೆ ಹೋದ್ರು. ನಿಮಿಷ ನಿಮಿಷಕ್ಕೂ ಹೊಸಾ ಥರ ಅಡಿಗೆ ಎಂದು ಕುಣಿತ್ತಿದ್ದೆ. ಸ್ವಲ್ಪ ದೊಡ್ಡವಳಾದ ಮೇಲೆ ತಾತ 'ಬ್ರಿಗೇಡ್ ರೋಡ್ ನಲ್ಲಿ ದೀಪಾಲಂಕಾರ ಮಾಡಿರ್ತಾರೆ, ಮಕ್ಕಳ್ಳನ್ನ ಕರೆದುಕೊಂಡು ಹೋಗು, ಕಾರು ಹೊಸದಾಗಿ ಬಂದಿದೆ' ಎಂದು ಬಲವಂತವಾಗಿ ಅಪ್ಪನನ್ನ ಕಳಿಸಿದ್ದರ ಪರಿಣಾಮ ಒಮ್ಮೆ ಆ ದೀಪಾಲಂಕಾರವನ್ನೆಲ್ಲಾ ನೋಡಿದ್ದೆ.

ಇಂಡೋನೇಷ್ಯಾದ ಬಾರೋಂಗ್ ಎಂಬ ಅದ್ಭುತ!ಇಂಡೋನೇಷ್ಯಾದ ಬಾರೋಂಗ್ ಎಂಬ ಅದ್ಭುತ!

ಒಟ್ಟಿನಲ್ಲಿ ಈ ಹಬ್ಬಕ್ಕೆ ಏನು ಪ್ರಾಮುಖ್ಯ, ಯಾಕೆ ಹೀಗೆಲ್ಲಾ ಹುಚ್ಚುಚ್ಚಾಗಿ ಆಡ್ತಾರೆ ಎಂದು ತಲೆ ಬಿಸಿ ಮಾಡ್ಕೊತಾ ಇದ್ದೆ. ಗೆಳತಿಯರೆಲ್ಲಾ ಸೇರಿ ಒಮ್ಮೆ ರಾತ್ರಿ ಹನ್ನೆರಡು ಘಂಟೆಯವರೆಗೂ ಎದ್ದು ಕೇಕ್ ಕಟ್ ಮಾಡೋಣ ಎಂದು ಕೂತಿದ್ದೆವು. ನನಗೆ ಬೆಳಗ್ಗೆ ಬೇಗ ಏಳೋ ಅಭ್ಯಾಸ. 10 ಘಂಟೆಗೆ ನಿದ್ದೆಗೆ ಜಾರಿದ್ದೆ. ಗೆಳತಿ ಎಬ್ಬಿಸಿ ಹ್ಯಾಪಿ ನ್ಯೂ ಇಯರ್ ಎನ್ನುವಾಗ ಕೋಪಗೊಂಡು ಬಯ್ದಿದ್ದೆ ಎಂದು ಮೊನ್ನೆ ಅವಳು ನೆನಪಿಸಿದ್ದಾಗಲೇ ನೆನಪಾಗಿದ್ದು. ರಾತ್ರಿ ಹನ್ನೆರಡು ಘಂಟೆಯವರೆಗೂ ಒಮ್ಮೊಮ್ಮೆ ಟೀವಿಯಲ್ಲಿ ಹೊಸ ನಟ ನಟಿಯರು ಕುಣಿಯುವುದನ್ನು ಕಂಡು ಖುಷಿಯಾಗುತ್ತಿದ್ದೆ. ರಾತ್ರಿಯಲ್ಲಾ ಕೂತು ಸಿ ಅಶ್ವತ್ಥ ಅವರ ಹಾಡುಗಳ ಮಾಧುರ್ಯವನ್ನ ಸವಿದ್ದಿದ್ದೇನೆ.

May the New Year be like white dress and filled with colors

ಅಮ್ಮ ಯಾವಾಗ್ಲೂ ಎಲ್ಲಿ ಇರ್ತಿವೋ ಹಾಗೆ ನಮ್ಮ ಆಚರಣೆಗಳನ್ನ ಮಾಡಬೇಕು. ಇಲ್ಲೆಲ್ಲಾ ಹುಚ್ಚುಚ್ಚಾಗಿ ಕೇಕೆ ಹಾಕೊಂಡು ರಸ್ತೆಯಲ್ಲಿ ಓಡಾಡೋದಲ್ಲಾ. ಫಾರಿನ್ ಗೆ ಹೋದಾಗ ಮಾಡ್ಕೋ. ಇಲ್ಲಿ ಲಕ್ಷಣವಾಗಿ ಮನೇಲಿ ಮಲ್ಕೋ ಅಂತ ಬುದ್ಧಿ ಹೇಳಿದ್ದರು. ಶುಭಾಶಯ ತಿಳಿಸಲು ಸಹ ಒಂದು ರುಪಾಯಿ ಖರ್ಚು ಆಗತ್ತೆ ಎಂದು ತಿಳಿದು ಹಿಂದಿನ ದಿವಸವೇ ಶುಭಾಶಯ ತಿಳಿಸುವ ಮಟ್ಟಕ್ಕೆ ಬೆಳೆದೆವು.

ಹಣತೆ ಹಚ್ಚುತ್ತೇನೆ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ!ಹಣತೆ ಹಚ್ಚುತ್ತೇನೆ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ!

ಈಗ ವಾಟ್ಸಾಪ್ ಬಂದು ಅವರಿಗೆ ಬಂದ ಚಿತ್ರ ಇವರಿಗೆ, ಇವರಿಗೆ ಬಂದ ಚಿತ್ರ ಅವರಿಗೆ ಕಳಿಸುವ ಪರಿಪಾಠ ಬಂದಿದೆ. ಮೊನ್ನೆ ಯಾರಿಗೋ ಶುಭಾಶಯ ತಿಳಿಸಿದಾಗ ನಮ್ಮದಲ್ಲದ ಹಬ್ಬ ಎಂದು ಮರು ಉತ್ತರ ಬರೆದಿದ್ದರು. ನಮ್ಮ ಯುಗಾದಿ ನಮಗೆ ಹೊಸ ವರ್ಷ ಎಂದು ಮಾರುದ್ದದ ಸಂದೇಶವನ್ನ ಸಹ ಬರೆದರು. ಈ ಥರಹದ ಮರು ಉತ್ತರಗಳು ತಾತ ಇದ್ದಾಗಲೂ ನಮ್ಮ ಮನೆಯಲ್ಲಿ ಚರ್ಚೆ ಆಗುತ್ತಿತ್ತು. ಅದನ್ನೆ ತಾತ ಒಮ್ಮೆ ಹೇಳಿದ್ದರು. ಸಂತಸ ಪಡುವುದಕ್ಕೆ ಆ ಸಂಪ್ರದಾಯ ಈ ಸಂಪ್ರದಾಯ ಅಂತ ಯಾವುದು ಇಲ್ಲ. ಸಂಭ್ರಮ ಪಡಬೇಕಷ್ಟೆ. ಅದಕ್ಕೂ ಮನಸ್ಸು ದೊಡ್ಡದಿರಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದರು. ಈ ಕಥೆಯನ್ನ ಅವರಿಗೇ ಬರೆದು ತಿಳಿಸೋಣ ಎಂದುಕೊಂಡೆ. ನಂತರ ಅನ್ನಿಸಿದ್ದು ಅವರಿಗೆ ಆ ದೊಡ್ಡ ಮನಸ್ಸಿದೆಯೋ ಇಲ್ಲವೋ ಎಂದು.

May the New Year be like white dress and filled with colors

ಹೋದ ವರ್ಷ ನಾ ಫಾರಿನ್ ನಲ್ಲಿಯೇ ಈ ಹಬ್ಬವನ್ನ ಆಚರಿಸುವ ಅವಕಾಶ ಬಂತು. ಅಮ್ಮ ಹೇಳಿದ ಹಾಗೆ ರಸ್ತೆಯಲ್ಲಿ ನಿಂತು ಕೇಕೆ ಹಾಕಿ ನಗೋದು ಎಂದು ಯೋಚಿಸುತ್ತಿರುವಾಗ, ಅಣ್ಣ ಮನೆಯಿಂದಲೇ ಪಟಾಕಿಗಳು ಕಾಣಿಸುತ್ತೆ, ಒಳ್ಳೆ ಅಡಿಗೆ ಮಾಡಿ ಊಟ ಮಾಡೋಣ ಎಂದ. ಅಂತೂ Netherlandನ ಒಂದು ಹಳ್ಳಿ ದೆನ್ ಹಾಗ್ ನಲ್ಲಿ ಚಿತ್ರಾನ್ನ, ಪಾಯಸ ಮಾಡಿಕೊಂಡು, ಮಂಜಿನ ಹನಿಗಳು ಒಂದೊಂದೆ ಬೀಳುವುದನ್ನು ನೋಡಿ, ಪಟಾಕಿಯನ್ನ ಮನೆಯ ಕಿಟಕಿಯಿಂದ ನೋಡಿ ಆನಂದ ಪಟ್ಟೆ. 26ನೇ ವರ್ಷಕ್ಕೆ ಹೊಸ ವರ್ಷಕ್ಕೂ ಚಿತ್ರಾನ್ನ ಪಾಯಸ ಮಾಡಿ ತಿಂದದ್ದಾಯಿತು.

ಹೊಸ ವರ್ಷಕ್ಕೆ ಎಷ್ಟೊಂದು ಸಂಕಲ್ಪ ಮಾಡಿ ಅದನ್ನ ಪಾಲಿಸಿದ್ದೂ ಇದೆ, ಇರದಿದ್ದೂ ಇದೆ. ಆದರೂ ಪ್ರತಿ ವರ್ಷ ನಾ ಮಾಡುವ ಸಂಕಲ್ಪ ಹೊಸ ಹೊಸ ಪುಸ್ತಕಗಳನ್ನ ಓದಲೇಬೇಕೆನ್ನುವುದು. ಹೋದ ವರ್ಷ ಮಾಡಿದ ಸಂಕಲ್ಪಕ್ಕೆ ನನಗೆ ಸಿಕ್ಕ ಲೆಕ್ಕ 24. ಈ ವರ್ಷ ಅದಕ್ಕೂ ಜಾಸ್ತಿ ಮಾಡಬೇಕೆಂದಿದೆ. ಹೋದ ವರ್ಷವೇ ಜಯನಗರದ ಹುಡುಗಿ ಬರೆಯೋದಕ್ಕೆ ಶುರು ಮಾಡಿದ್ದು. ವಿಸ್ತಾರವಾದ ಕಥೆ ಮತ್ತೊಮ್ಮೆ ಬರೆಯುತ್ತೇನೆ.

May the New Year be like white dress and filled with colors

ಗೆಳತಿ, ಬ್ರೆಝಿಲ್ ನಲ್ಲಿ ಬಿಳಿ ಬಟ್ಟೆ ಹಾಕಿಕೊಂಡು ಹೊಸ ವರ್ಷ ಆಚರಿಸುತ್ತಾರೆ. ಜೀವನ ಬಿಳಿಯ ಬಣ್ಣದ್ದಾಗಿದ್ದರೆ ಹೊಸ ಹೊಸ ಬಣ್ಣಗಳನ್ನ ತುಂಬಬಹುದು ಎಂದು ಹೇಳಿದಳು. ಹೌದು ನಮ್ಮ ಈ ವರ್ಷ ಸಹ ಬಿಳಿಯ ಬಟ್ಟೆಯ ಹಾಗೆ ಶುದ್ಧವಾಗಿರಲಿ. ಹೊಸ ಬಣ್ಣಗಳು ಬರಲಿ, ಕಲೆ ಮಾಡುವ ಬಣ್ಣಗಳನ್ನ ಕಿತ್ತೊಗೆಯಿರಿ. ಪ್ರತಿ ಕಲೆಗೂ ಒಂದು ಸಾಬೂನಿದೆ, ಸಬೂಬಿದೆ. ಕುವೆಂಪು ಹೇಳಿದಂತೆ "ಗತವರ್ಷದ ಮೃತಪಾಪವ ಸುಡು, ತೊರೆ; ಅಪಜಯ ಅವಮಾನಗಳನು ಬಿಡು; ಮರೆ; ಕಳಚಲಿ ಬೀಳಲಿ ಬಾಳಿನ ಹಳೆಪೊರೆ, ನವ ವತ್ಸರವನು ಕೂಗಿ ಕರೆ!"

ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಮತ್ತಷ್ಟು ಮಗದಷ್ಟು ಬರೆಯಬೇಕೆಂಬ ಆಸೆ ಹುಟ್ಟಿದೆ.

English summary
May the New Year be like clean white dress and fill it with beautiful colors of your choice. The New Year is not just about celebrating with friends, but all about happiness with the near and dear ones. An article by Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X