• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೊರು ಗೊರು ಗೊರುಕನ ಎಂಬ ಸೋಲಿಗರ ಹಳ್ಳಿಯ ಹಾಡು

By ಜಯನಗರದ ಹುಡುಗಿ
|

ಬೆಂಗಳೂರಿನಿಂತ ಸುಮಾರು 170 ಕಿಲೋಮೀಟರ್ ಹೋದರೆ ನಿಮಗೊಂದು ದಟ್ಟಕಾಡು ಸಿಗುತ್ತದೆ. ಆ ದಟ್ಟ ಕಾಡಿನಲ್ಲಿ ಸುಮಾರು 60 ಹುಲಿಗಳು, ಸಾವಿರಾರು ಆನೆಗಳು, ಜಿಂಕೆಗಳು, ಕರಡಿಗಳು ಇರುತ್ತೆ. ಯಾವ ಗಲಾಟೆ, ಗೋಜಲೂ ಇಲ್ಲ. ಮುಂಚೆ ವೀರಪ್ಪನ್ ಎಂಬ ನರಹಂತಕ ಓಡಾಡಿಕೊಂಡಿದ್ದ ಈಗ ಕಾಡು ಶಾಂತವಾಗಿದೆ. ಶ್ರೀಗಂಧದ ಮರವೂ ಕಡಿಮೆ ಆಗಿದೆ. ಇಷ್ಟೆಲ್ಲಾ ಬಹಳ ಕಾಮನ್ ಆಗಿ ಕಾಣುವ ಕಾಡಿನಲ್ಲಿ ಕಾಡಿನ ಮಧ್ಯಭಾಗದಲ್ಲಿ, ಅಂಚಿನಲ್ಲಿ 5000 ಜನರೂ ಇದ್ದಾರೆ ಎಂದರೆ ಅಶ್ಚರ್ಯವಾಗುತ್ತದೆ ಅಲ್ವೇ? ಹೌದು ಈ ಸೌಹಾರ್ದಯುತ ಸಹಬಾಳ್ವೆಗೆ ಏನು ಕಾರಣ ಎಂಬ ಜಾಡು ಹುಡುಕುತ್ತಾ ಹೋದರೆ ಅದೊಂದು ಸುಂದರ ಕಥೆ.

"ಗೊರು ಗೊರು ಗೊರು ಕನ" ಎಂಬ ಹಳ್ಳಿಯ ಹಾಡು ನಮ್ಮೆಲ್ಲರ ಕಿವಿಯಲ್ಲಿ ಬೆಳಗ್ಗೆ ಮೊಳಗುತ್ತದೆ. 'ಗೊರುಕನ' ಎಂದರೆ ಕಾಡುದೇವರು ಸೋಲುಗ ನುಡಿಯಲ್ಲಿ. ಇನ್ನೊಂದು ಅರ್ಥ ಕಾಡಿನಲ್ಲಿ ಬೀಸುವ ಗಾಳಿ ಗೊ....ರು ಎಂಬ ಶಬ್ದ ಮಾಡುತ್ತದೆ. ಆ ಶಬ್ದವನ್ನೇ ಇವರೆಲ್ಲಾ ಖುಷಿಯಾಗಿ ಹಾಡುತ್ತಾರೆ. ಒಂದು ಸಂಸ್ಕೃತಿಯಲ್ಲಿ ಹಬ್ಬ, ಹಾಡು ಸಂತೋಷ ಮಾತ್ರವೇ ಇದ್ದರೆ ಎಷ್ಟು ಚೆಂದ ಎಂದು ನನಗೆ ಒಮ್ಮೊಮ್ಮೆ ಅನ್ನಿಸಿದ್ದಿದೆ.

ಕಾಡುವ ಕಾಪಾಡುವ ಮುದ್ದಿಸುವ ಮುದ್ದಿಸಿಕೊಳ್ಳುವ 'ಕಾಳ'! ಐ ಲವ್ ಯೂ!

ಅದಿರಲಿ, ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ತಪ್ಪಲ್ಲಿನಲ್ಲಿ ಸ್ವಲ್ಪ ಜನ ಕಾಡಿನಲ್ಲಿ, ಸ್ವಲ್ಪ ಜನ ಕಾಡಂಚಿನಲ್ಲಿ ವಾಸಿಸುವ ಜನಾಂಗವೇ ಸೋಲಿಗರು. ಪ್ರಕೃತಿ ಜೊತೆ ಸಂಘರ್ಷಕ್ಕಿಳಿಯದೇ, ಆಧುನಿಕ ಮನುಷ್ಯನ ಜೊತೆ ತಿಕ್ಕಾಟವಿಲ್ಲದೆ ಈಗಲೂ ತಮ್ಮತನವನ್ನ ಕಾಯ್ದುಕೊಂಡು ಬದುಕುತ್ತಿರುವ ಅತ್ಯಂತ ಸ್ವಾಭಿಮಾನಿ ಜನರ ಗುಂಪು. ವಾರಾಂತ್ಯ ಜಡೆಯಪ್ಪ ಎಂಬ ಸೋಲಿಗರ ಹೀರೋ ನನಗೆ ಮತ್ತು ಅಕ್ಷರನಿಗೆ ಜೀವನ ಕಲೆಯನ್ನ ಹೇಳಿಕೊಟ್ಟಿದ್ದು ಸುಳ್ಳಲ್ಲ.

'ಗೋರುಕಣ' ಎಂಬ ಸೋಲಿಗರ ಅತ್ಯಂತ ಇಷ್ಟದ ಪದವನ್ನೇ ಒಂದು ಹೊಸ ರೆಸಾರ್ಟನ್ನ ಸೋಲಿಗರಿಂದ, ಸೋಲಿಗರಿಗೋಸ್ಕರ ಕಟ್ಟಲಾಗಿದೆ. ಇಲ್ಲಿ ನಾವೆಲ್ಲರೂ ಹೋಗಿದ್ದು ಅವರ ಜೀವನ ಶೈಲಿಯನ್ನ ಕಲಿಯಬಹುದು, ಹಾಗಾಗಿಯೂ ಅಳವಡಿಸಿಕೊಳ್ಳಲು ಪ್ರಯತ್ನಿಸಬಹುದು. ಈ ಗೋರುಕನದಲ್ಲಿ ಮುಂಚಿನ ಕಾಲದಲ್ಲಿ ಗುಡಿಸಲಿನಲ್ಲಿ ಕಡಿಮೆ ಜಾಗದಲ್ಲಿ ಕಡಿಮೆ ಖರ್ಚಿನಲ್ಲಿ ವಾಸಿಸುವ ಬಗೆಯನ್ನ ತಿಳಿಸುತ್ತಾರೆ. ಬೇಕಿದ್ದರೆ ಕಲಿಯಬಹುದು.

ಹುಟ್ಟೂರು ನನ್ನ ಬಾ ಎಂದು ಕರೆಯುತ್ತಿದೆ, ವಾಪಸ್ ಬರುತ್ತಿದ್ದೇನೆ!

ಕಾಡೆ ಜೀವನ, ಕಾಡೆ ದೇವರು : ಸೋಲಿಗರು ಅನಾದಿಕಾಲದಿಂದಲೋ ಕಾಡಿನಲ್ಲಿಯೇ ಇದ್ದವರು. ಜೇನುತುಪ್ಪ, ಕಾಡಿನ ಕೆಲ ಉತ್ಪನ್ನಗಳಾದ ಸೀಗೇಕಾಯಿ, ಅಳಲೆಕಾಯಿ ಮುಂತಾದವುಗಳನ್ನ ಹೆಕ್ಕಿ, ಕಟ್ಟಿಗೆಗಳನ್ನ, ಹಣ್ಣುಗಳನ್ನ ಅವರ ಅಗತ್ಯಕ್ಕೆ ತಕ್ಕಂತೆ ಆರಿಸಿಕೊಂಡು ಜೀವನ ಮಾಡುವವರು. ಅವರಿಗೆ ಕಾಡೆ ಜೀವನ, ದೇವರು ಎಲ್ಲಾ. ಕಾಡಲ್ಲಿ ಇರುವ ಪ್ರಾಣಿಗಳ ಜೊತೆಯೂ ಸೌಹಾರ್ದಯುತ ಜೀವನ. ಅಲ್ಲಿನ ಮಕ್ಕಳಿಗೆ ಹುಲಿ, ಚಿರತೆಯೆಂದರೆ ಭಯವೇ ಇಲ್ಲವೇನೋ ಅನ್ನುವ ಹಾಗೆ ಅವರು ಬದುಕಿದ್ದಾರೆ.

ಹುಲಿಗಳ ಸಂಖ್ಯೆ ಕಡಿಮೆಯಾದಾಗ, ಕಾಡಿನಲ್ಲಿ ಒಂದಷ್ಟು ಕಳ್ಳ ಚಟುವಟಿಕೆಗಳು ಶುರುವಾದಾಗ ಸರ್ಕಾರ ಇವರನ್ನ ಬೇರೆ ಕಡೆ ಸ್ಥಳಾಂತರಿಸುವ ಪ್ರಯತ್ನ ಮಾಡಿತ್ತು. ಕಾಡು ಬಿಟ್ಟು ಬೇರೆ ಪ್ರಪಂಚವೇ ಗೊತ್ತಿರದ್ದಿದ್ದ ಜನಕ್ಕೆ ಯಾವ ಹಕ್ಕುಗಳು, ಹೊರಜಗತ್ತಿನ ವ್ಯವಹಾರದ ಪರಿಚಯವಿರಲ್ಲಿಲ್ಲ. ಸ್ವಲ್ಪ ಆಲೋಚಿಸಿ ಇವೆಲ್ಲದರ ದುರುಪಯೊಗವನ್ನ ಕಾಣದ ಕೆಟ್ಟ ಶಕ್ತಿಗಳು ತೆಗೆದುಕೊಳ್ಳಬಹುದಿತ್ತು. ಅವರ ಕೈಗಳಿಗೆ ಗನ್ನು ಕೊಟ್ಟು ಹೋರಾಟ ಮಾಡಿಸಬಹುದಿತ್ತು. ಆದರೆ ಅವರೆಲ್ಲ ಕೈಯಲ್ಲಿ ಪೆನ್ನು ಹಿಡಿದು, ಜೀವನ ಕಲೆಯನ್ನ ಕಲಿತು ಬಹಳ ಚೆನ್ನಾಗಿ ಜೀವನ ಮಾಡುತ್ತಿದ್ದಾರೆ. ನಿಜವಾದ ಕ್ರಾಂತಿ ಹಿಂಸೆಯಿಂದ ಸಾಧ್ಯವೇ ಇಲ್ಲ ಎಂದೂ ತೋರಿಸಿರುವ ಏಕೈಕ ಗುಂಪೆಂದರೆ ತಪ್ಪಾಗುವುದಿಲ್ಲ.

ನಂದಿ ಬೆಟ್ಟದ ತಪ್ಪಲ್ಲಿನಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ

ಕುಸುಮಬಾಲೆಯೆಂಬ ಅತಿ ಸುಂದರಿ : ಬಿಳಿಗಿರಿ ರಂಗನಾಥಸ್ವಾಮಿಯನ್ನ ರಂಗ ಭಾವ ಎಂದೇ ಕರೆಯುತ್ತಾರೆ. ಸೋಲಿಗರ ಮುಖ್ಯಸ್ಥನಿಗೆ ಕುಸುಮಬಾಲೆಯೆಂಬ ಅತಿ ಸುಂದರಿ ಮಗಳಿದ್ದಳಂತೆ. ಅವಳನ್ನ ರಂಗನಾಥಸ್ವಾಮಿ ಮದುವೆಯಾದನಂತೆ, ಅದಕ್ಕೆ ಅವರಿಗೆ ರಂಗನಾಥ ಭಾವನಾಗುತ್ತಾನೆ ವಾರಗೆಯಿಂದ. ಭಕ್ತಿಯಿಂದ ವಿಭೂತಿ ಹಚ್ಚಿಕೊಂಡು "ರಂಗ ಭಾವ" ಎಂದು ತಮ್ಮ ಹಾಡು ಮತ್ತು ನೃತ್ಯವನ್ನ ಶುರು ಮಾಡುತ್ತಾರೆ. ನಮ್ಮ ಆಧುನಿಕರಲ್ಲಿ ಈಗಲೂ ಶೈವ - ವೈಷ್ಣವ ಎಂಬ ಎರಡು ಪಂಗಡಗಳು ಅದೆಷ್ಟೆಷ್ಟು ಕಿತ್ತಾಡಿದ್ಯೋ ದೇವರೇ ಬಲ್ಲ. ಅದೆಲ್ಲವನ್ನ ಮೀರಿ ಮನುಷ್ಯ ಮನುಷ್ಯರು ಬಿಡಿ ಪ್ರಾಣಿಗಳ ಜೊತೆಜೊತೆಗೆ ಜೀವನ ಮಾಡುವ ಇವರನ್ನ ನೋಡಿ ನನಗೆ ನಿಜವಾಗಿಯೂ ಮೂಗಿನ ಮೇಲೆ ಬೆರಳಿಡುವ ಸರದಿಯಾಯಿತು.

ಪ್ರಾಣಿಗಳು 30-40 ಮೀಟರ್ ದೂರ ಇದ್ದಾಗ, ಮೆಳೆಗಳ ಮಧ್ಯ ಅಡಗಿದ್ದಾಗ ಅವುಗಳ ವಾಸನೆಯಿಂದಲೇ ಕಂಡುಹಿಡಿಯುವ ಕಲೆ ಅವರಿಗೆ ಪರಂಪರಾಗತವಾಗಿ ಬಂದಿದೆ. ವರ್ಷಕ್ಕೆ ಒಂದು 200 ದಿವಸವಾದರೂ ನೆಗಡಿಯಿರುವ ನನಗೆ ಹಾಗೂ ಮೂಗಿನ ಆಲಿಫಾಕ್ಟರಿ ಎಪಿಥೀಲಿಯಮ್ ಎನ್ನುವ ಮೂಗಿನ ಮುಂಭಾಗದಲ್ಲಿ ಇರುವ ವಾಸನೆ ಗ್ರಹಿಸುವ ಟಿಶ್ಯೂ ಕೈ ಕೊಡುತ್ತಲೇ ಇರುವುದರಿಂದ ನನಗೆ ಇವರ ಈ ಕಲೆ ಬಹಳ ಹೊಗಳಬಹುದಾದ್ದದ್ದು. ಹುಲಿ ಬಂದರೆ ಕತ್ತಿ ಹಿಡಿದೇ ಓಡಿಸುವ, ಆನೆ ಬಂದರೆ ಮರ ಹತ್ತುವ ಕಲೆ ಇವರಿಗೆ ಕರಗತ.

ಬೆಂಗಳೂರು ಪುಸ್ತಕೋತ್ಸವವೆಂಬ ಹಬ್ಬ, ಕಲಿಕೆಯ ಮಹಾವಿದ್ಯಾಲಯ

ಇಷ್ಟೆಲ್ಲಾ ಹೇಳುತ್ತಾ ಇದ್ದದ್ದು ಜಡೆಯಪ್ಪ ಎಂಬ ಸೋಲಿಗರ ಹೀರೋ. ಸೋಲಿಗರಲ್ಲಿ ಹೆಸರುಗಳು ಹಾಗೆಯೇ ಇರುತ್ತದೆ. ಜಡೆಯಪ್ಪ ಒಂದು ದೇವರ ಹೆಸರು, ಮಾದೇಶ್ವರ, ಕಾಟಿ ಎಂದರೆ ಕಾಡೆಮ್ಮೆ ದೇವರು, ಹುಲಿ ವೀರಪ್ಪ, ಆನೆದೇವರು ಮತ್ತು ಕರಡಿ ದೇವರು. ಪ್ರಕೃತಿಯಲ್ಲಿ ಎಲ್ಲವನ್ನೂ ಪೂಜಿಸುವ ಇವರು ಮಾರಮ್ಮನಿಗೆ ವಿಶೇಷವಾಗಿ ತಲೆಬಾಗುತ್ತಾರೆ.

ವರನಿಗೆ ಕಲ್ಲೆಸೆಯುವ ವಧು : ಇವರ ಸಾಂಸಾರಿಕ ಚೌಕಟ್ಟುಗಳ ಬಗ್ಗೆ ವಿಚಾರಿಸಿದಾಗ ಗೊತ್ತಾದದ್ದು ರೊಟ್ಟಿಹಬ್ಬ ಎನ್ನುವ ಹಬ್ಬದಲ್ಲಿ ಬೆಂಕಿಯ ಸುತ್ತ ಮದುವೆಯಾಗ ಬಯಸುವ ಗಂಡಸರೆಲ್ಲ ಗೊರು ಗೊರು ಕನ ಎಂದು ಹಾಡು ಹಾಡಿಕೊಂದು ನೃತ್ಯ ಮಾಡುತ್ತಾ ಇರುತ್ತಾರೆ. ಇದನ್ನ ನೋಡುವ ಹುಡುಗಿಯರು ಮತ್ತು ದೊಡ್ಡವರು ಹುಡುಗ ಇಷ್ಟವಾದರೆ ಹುಡುಗನಿಗೆ ಕಲ್ಲೆಸೆಯುತ್ತಾಳೆ. ಎಲ್ಲರ ಸಮ್ಮುಖದಲ್ಲಿ ಇಬ್ಬರೂ ಕಾಡಿಗೆ ಹೋಗುತ್ತಾರೆ. 2-3 ದಿವಸ ಹೊಂದಾಣಿಕೆಯಾದರೆ ಮಾತ್ರ ಮದುವೆ, ಇಲ್ಲದಿದ್ದರೆ ಮದುವೆಯಿಲ್ಲ. ಕಾಡಿಗೆ ಒಳ ಭಾಗಕ್ಕೆ ಹೋದ ಕಾರಣ ಜುಲ್ಮಾನೆಯಾಗಿ ಮುಖ್ಯಸ್ಥನಿಗೆ 12-50 ರುಪಾಯಿ ಕೊಡುತ್ತಾರೆ. ಇದಷ್ಟೆ ಇವರ ಮದುವೆಯ ರೀತಿ. ಆಧುನಿಕ ಸ್ವಯಂವರ ಮತ್ತು ಲಿವ್ ಇನ್ ರೆಲೇಷನ್ಶಿಪ್ ಎರಡನ್ನೂ ಆ ಕಾಲದಿಂದ ಈ ಕಾಲದವರೆಗೂ ನಡೆಸಿಕೊಂಡು ಬಂದಿದ್ದಾರೆ.

ಇವರ ಎಲ್ಲ ಹಬ್ಬ ಹರಿದಿನಗಳಲ್ಲಿಯೂ ಹಾಡು, ನೃತ್ಯ, ಒಳ್ಳೆ ಊಟ ಇದ್ದೇ ಇರುತ್ತದೆ. ಆದ್ದರಿಂದಲೇನೋ ಇವರಷ್ಟು ಸುಖಿಗಳು. ಕ್ಲಿಷ್ಟವಾಗಿ ಜೀವಿಸಿ, ಒಂದೈವತ್ತು ರೀತಿ ರಿವಾಝುಗಳನ್ನ ನಮ್ಮ ಮೇಲೆ ನಾವೇ ಹಾಕಿಕೊಂಡು ಸಿಕ್ಕಾಪಟ್ಟೆ ಕಷ್ಟ ಮಾಡಿಕೊಂಡಿದ್ದೇವಾ ಎಂಬ ಪ್ರಶ್ನೆ ಮೂಡುತ್ತದೆ. ಸರ್ಕಾರ ಈ ಜನಾಂಗವನ್ನ ಕಾಡಿನಿಂದ ದಬ್ಬಿ ಬೇರೆನನ್ನೋ ಮಾಡಬೇಕೆನಿಸಿದಾಗ, ಅಥವಾ ನರಹಂತಕ ವೀರಪ್ಪನ್ ಕಾಡಿನಲ್ಲಿದ್ದಾಗ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಪರಿಸ್ಥಿತಿಯಲ್ಲಿಯೂ ತಮ್ಮ ತನವನ್ನ ಹೋಗಲಾಡಿಸದೇ ಅವರ ಹಾಗೆ ಬದುಕುತ್ತಿರುವ ಸೋಲಿಗರು ಮತ್ತು ಅವರನ್ನ ಉದ್ಧರಿಸಿದ ಡಾ || ಸುದರ್ಶನ್ ಅವರ ಬಗ್ಗೆ ಮುಂದಿನ ವಾರ.. ಕಾದು ಓದಿ.

English summary
Gorukana - the song of tribals in Biligiriranga hills in Chamarajanagar district. Soliga people living in the forest leading their life in their own way, worshipping the forest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X