ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಕನ್ನಡ ಬರುತ್ತಾ? ಅಂತ ಕೇಳುವ ಮೊದಲು...

"ಬೆಂಗ್ಳೂರಿನಲ್ಲಿ ಜನರಿಗೆ ಎಲ್ಲಿ ಕನ್ನಡ ಬರತ್ತೆ ಮ್ಯಾಡಮ್ , ಬರಿ ಇಂಗ್ಲಿಷ್ ಹೊಡಿತಾರೆ. ನೀವೇನೊ ಮಾತಾಡುತ್ತೀರ, ಓದುತ್ತೀರ. ನಿಮಗೆ ಮದ್ವೆ ಆಗ್ಲಿ, ಮದುವೆಯಾದ ಆ ಹುಡ್ಗಂಗೆ ಕನ್ನಡ ಬರಲ್ಲ ಅಂದ್ರೆ ನಿಮ್ಮ ಮಕ್ಕಳಿಗೂ ಕನ್ನಡ ಬರಲ್ಲ ಬಿಡಿ."

By ಜಯನಗರ ಹುಡುಗಿ
|
Google Oneindia Kannada News

ನಾನು ಬಾರ್ಸಿಲೋನಾದಲ್ಲಿ ಓದುತ್ತಿರುವ ವಿಶ್ವವಿದ್ಯಾಲಯದಲ್ಲಿ ನಾವು 5 ಜನ ಭಾರತೀಯರು. ಅಮ್ಮ ಮಾಡಿದ ಅಡುಗೆಯನ್ನು ತಿಂದು ಬೆಳೆದ ನನಗೆ ಇಲ್ಲಿ ಎಲ್ಲಾ ನಾನೆ ಮಾಡಿಕೋಬೇಕಾದ ಪರಿಸ್ಥಿತಿ. ಸರಿ, ಅಮ್ಮ ಅದನ್ನು ಸುಲಭ ಮಾಡಿ, ಬರಿ ಬಿಸಿ ನೀರಿಗೆ ಹಾಕೊಂಡು ಕಲಿಸುವ ಅಡುಗೆ ಪದಾರ್ಥಗಳನ್ನ ಕಳುಹಿಸಿಕೊಟ್ಟಿದ್ದಾರೆ.

ಊಟಕ್ಕೆ ನಾವೆಲ್ಲರೂ (ಸ್ಪಾನಿಶ್, ಜರ್ಮನ್, ಡಚ್, ಲುಕ್ಸುಂಬೆರ್ಗ್, ಟರ್ಕಿ, ಬಲ್ಗೇರಿಯ, ಲೆಬಾನನ್, ಇಂಗ್ಲೆಂಡ್, ಮೆಕ್ಸಿಕೊ) ದೇಶದವರೆಲ್ಲಾ ಒಟ್ಟಿಗೆ ಕೂತು ನಮ್ಮ ದೇಶದ ಭಾಷೆ, ಸಂಸ್ಕೃತಿ, ಊಟ ಇವೆಲ್ಲದರ ಬಗ್ಗೆ ಹರಟೆ ಹೊಡೆಯುತ್ತಾ ಇರುತ್ತೇವೆ.

ನನ್ನ ಭಾರತದ ಸ್ನೇಹಿತನಿಗೆ ನನ್ನ ಡಬ್ಬಿಯ ಗೊಜ್ಜವಲಕ್ಕಿ ಕಂಡು ಇದೇನು ಎಂಬ ಪ್ರಶ್ನೆ. ನಾನು ಇಂಗ್ಲಿಷ್ನಲ್ಲಿ ಏನೇನೋ ಹೇಳಲು ಹೊರಟೆ. ನನ್ನ ಸ್ಪಾನಿಶ್ ಗೆಳತಿ, ಅರೆ ಇವಳ್ಯಾಕೆ ಇವಳ ದೇಶದವನಿಗೆ ಅರ್ಥ ಮಾಡಿಸಲು ಇಷ್ಟೆಲ್ಲ ಕಷ್ಟ ಪಡುತ್ತಾ ಇದ್ದಾಳೆ ಎಂದುಕೊಂಡು, ನನಗೆ ಮರುಪ್ರಶ್ನೆ ಹಾಕಿದಳು. ಭಾರತೀಯರೆಲ್ಲ ಬರೀ ಇಂಗ್ಲಿಷ್ನಲ್ಲಿ ಯಾಕೆ ಮಾತಾಡುತ್ತೀರ, ನಿಮ್ಮದೇ ಭಾಷೆ ಇಲ್ಲವೆ ಎಂದು ಕೇಳಿದಳು. [ಕನ್ನಡದಲ್ಲೇ ಮಾಹಿತಿ ನೀಡಿದ್ರೆ ಮಾತ್ರ ಉತ್ಪನ್ನ ಕೊಳ್ತೇನೆ!]

Before someone asks you do you know Kannada

ಅವಳಿಗೆ ನಮ್ಮ ದೇಶದ ಭಾಷಾ ನೀತಿ, 22 ಅಧಿಕೃತ ಭಾಷೆಗಳೆಲ್ಲ ವಿವರಿಸಿದ ಮೇಲೆ, ನೀವೆಲ್ಲಾ ಬೆಂಗಳೂರಿಂದ ಬಂದವರಲ್ಲವೆ, ಯಾಕೆ ಕನ್ನಡ ಮಾತಾಡಲ್ಲ ಅಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಸುಸ್ತು ಮಾಡಿಸಿದ್ದಳು. 'ಅವನು ಕನ್ನಡದವನಲ್ಲ, ಬೆಂಗಳೂರಲ್ಲಿ ಕೆಲಸ ಮಾತ್ರ ಮಾಡುತ್ತಿದ್ದ' ಎಂದು ಹೇಳಿದರೂ, 'ನೀವೆಲ್ಲರೂ ಹಾಗದ್ರೆ ಇಲ್ಲಿನ ಸ್ಪಾನಿಶ್ ಭಾಷೆ ಯಾಕೆ ಕಲಿತು, ಮಾತಾಡುತ್ತೀರ? ಎಲ್ಲಿ ಹೋದರೂ ಅಲ್ಲಿನ ಭಾಷೆ ಕಲೀಬೇಕು ಅಂತ ನೀನೆ ಹೇಳುತ್ತಾ ಇದ್ದೆ...' ಹೀಗೆ ಇವಳ ಮಾತು ಸಾಗಿತ್ತು.

ಮನೆಗೆ ನಡೆದುಕೊಂಡು ಬರುವಾಗೆಲ್ಲ ಅದೇ ಯೋಚನೆ ತಲೆಯಲ್ಲಿ ಗಿರಿಕಿ ಹೊಡೆಯುತ್ತಿತ್ತು. ನಾನು ಬೆಳಗ್ಗೆ ಭಾರತದ ಸಮಯಕ್ಕೆ ಎದ್ದು, ಇಂದಿನ ಪಾಠ ಅಂತ ವಾಟ್ಸಾಪ್ನಲ್ಲಿ ಕನ್ನಡ ಹೇಳಿಕೊಡೋಳು, ಕನ್ನಡ ಗೊತ್ತಿಲ್ಲ ಎಂಬ ಸಂಸ್ಥೆಗೆ volunteer. ಆದರೂ ನನ್ನ ಗೆಳತಿ ಕೇಳಿದ ಪ್ರಶ್ನೆ ಮನಸ್ಸಲ್ಲಿ ಕಾಡುತ್ತಲೇ ಇತ್ತು.

ಅಮ್ಮ ಮನೆಯಲ್ಲಿ ಎಂದಿಗೂ ಕನ್ನಡದಲ್ಲಿಯೇ ವ್ಯವ್ಯಹಾರ ಮಾಡುತ್ತಲಿದ್ದಳು. ತಾತ ಯಾವಗ್ಲೂ ನಿನ್ನ ಇಂಗ್ಲಿಷ್ ಪ್ರೇಮಕ್ಕೆ ಮನೆ ವೇದಿಕೆಯಲ್ಲ ಅಂತ ಖಡಾಖಂಡಿತವಾಗಿ ಹೇಳಿ, ಕನ್ನಡವನ್ನು ಮೊದಲು ಬಳಸು ಅಂತ ದಬಾಯಿಸುತ್ತಿದ್ದರು. ನಾನು ಕಲಿತ್ತಿದ್ದ ಶಾಲೆ ಆಂಗ್ಲ ಮಾಧ್ಯಮವಾಗಿದ್ದರೂ ಸಹ ಕನ್ನಡ ಬಳಕೆ ಚೆನ್ನಾಗಿಯೆ ಇತ್ತು. ನಾನು ಇದ್ದ ಬೆಂಗಳೂರಲ್ಲಿಯೂ ಕನ್ನಡ ಬಳಕೆ ಜಾಸ್ತಿಯೇ ಇತ್ತು. [ಕನ್ನಡೇತರರಿಗೆ ಕನ್ನಡ ಕಲಿಸುವುದು ಹೇಗೆ? ಇಲ್ಲಿದೆ ಮಾರ್ಗ]

Before someone asks you do you know Kannada

ತಾತ ದಿನ ಬೆಳಗ್ಗೆ ಕನ್ನಡ ಪತ್ರಿಕೆ ಓದಿಸುತ್ತಿದ್ದರೆ, ಅಮ್ಮ ದಿನಸಿ ಪಟ್ಟಿಯನ್ನು ಬರೆಯಲು ಹೇಳುತ್ತಿದ್ದರು. ಅಲ್ಲೆ ನಮ್ಮ ಅ ಕಾರ , ಹ ಕಾರ, ಅಲ್ಪ ಪ್ರಾಣ, ಮಹಾ ಪ್ರಾಣ ಇವೆಲ್ಲವೂ ಅಭ್ಯಾಸ ಆಗಿದ್ದು. ಅಮ್ಮ ಇಷ್ಟು ಮನಸ್ಸು ಮಾಡಿ ಹೇಳಿಕೊಟ್ಟಿಂದಲೇನೋ ಕನ್ನಡ ಅಷ್ಟು ಸುಲಲಿತ. ನಮ್ಮ ಸ್ನೇಹಿತೆಯರ ಗುಂಪು ಸಹ ಕನ್ನಡದಲ್ಲೇ ಆಟ, ಪಾಠ. ಉದ್ದುದ್ದ ಕನ್ನಡ ಪದ್ಯ ನಮ್ಮ ಗುಂಪಿನ ಹಾಡುಗಳಾಗಿತ್ತು. ಈಗಲೂ ಕುವೆಂಪುರವರ 'ದೇವರು ರುಜು ಮಾಡಿದನು' ಪದ್ಯ ಮಧ್ಯರಾತ್ರಿ ಎಬ್ಬಿಸಿ ಕೇಳಿದರು ಹೇಳಬಲ್ಲೆ. ಬೆಂಗಳೂರಲ್ಲಿ ಅರಾಮಾಗಿ ಕನ್ನಡ ಮಾತಾಡಬಹುದಾಗಿತ್ತು.

ಬೆಂಗಳೂರಿನಲ್ಲಿ ಕನ್ನಡಕ್ಕೆ ಅದರದ್ದೇ ಆದ ಮನ್ನಣೆಯೇ ಇಲ್ಲ. ನಮ್ಮದು ಮಿಶ್ರಭಾಷೆ ಅಂತೆಲ್ಲ ಆಡಿಕೊಳ್ಳುತ್ತಾರೆ. ಅಲ್ಲೊಂಚೂರು ಇಲ್ಲೊಂಚೂರು ಸೇರಿಸಿ ಕನ್ನಡ ಆದಂಗೆ ಇದೆ ಅಂತ ಹಲವರ ಕುಹಕದ ಮಾತು ಬೇರೆ. ಹಾ, ಇದು 2000 ಇಸವಿಯ ಕೆಳಗಿನ ಮಾತು. ಇವಾಗ ಬೆಂಗಳೂರ ಕನ್ನಡಕದಲ್ಲಿ ಕನ್ನಡ ಹುಡುಕಬೇಕು. ಮೊನ್ನೆ ಕನ್ನಡ ಹೇಳಿಕೊಡುವ ವಾಟ್ಸಾಪ್ ಗುಂಪಲ್ಲಿ 'I miss you' ಅನ್ನೋದನ್ನ ಕನ್ನಡದಲ್ಲಿ ಹೇಳಿ ಅಂತ ನನ್ನ ವಿದ್ಯಾರ್ಥಿ ಕೇಳುತ್ತಿದ್ದರು. ಪ್ರಾಯಶಃ ಆ ಶಬ್ದವನ್ನು ಕನ್ನಡದಲ್ಲಿ ಬಳಸಿದ್ದೇ ಇಲ್ಲ. ನಿಜವಾಗಲೂ ಯಾರಿಗಾದರೂ ಹೇಳಿದ್ದರೂ, ಅದು ಇಂಗ್ಲಿಷಿನಲ್ಲೆ ಆಗಿತ್ತು. ಹೀಗೆ ಎಷ್ಟೊಂದು ಪದಗಳ್ಳನ್ನ ಮರೆತು ಬಿಟ್ಟಿದೀನಿ. ನನ್ನ ವಿದ್ಯಾರ್ಥಿಗಳು ನೆನಪಿಸಿದಾಗ, ಅರೆ ಇದಕ್ಕೂ ಕನ್ನಡ ಪದ ಇದೆಯಲ್ಲ ಅಂತ ಹುಡುಕುತ್ತಿದ್ದೆ.

ನಾನು ಬಸ್, ಆಟೋದಲ್ಲಿ ಓಡಾಡುವಾಗ ಯಾವಾಗಲೂ ಕಾಡುತ್ತಿದ್ದ ಪ್ರಶ್ನೆ, ಯಾಕೆ ಕನ್ನಡ ಮಾತಾಡೋದನ್ನ ಮರೆತೇ ಬಿಟ್ಟಿದಾರೆ ಜನ ಬೆಂಗಳೂರಲ್ಲಿ. ಬೇರೆ ಭಾಷೆಯವರ ಮೇಲೆ ಗೂಬೆ ಕೂರಿಸೋ ಮೊದಲು ನಮ್ಮ ಕಥೆಯನ್ನ ನಾವೆ ವಿಶ್ಲೇಷಿಸೋಣ.

ನನ್ನ ತಂದೆ ಡಿ. ಆರ್. ಡಿ. ಓ ನಲ್ಲಿ ವಿಜ್ಞಾನಿಯಾಗಿದ್ದರು. ಸೆಂಟ್ರಲ್ ಶಾಲೆಯಲ್ಲಿ ಓದುವ ಅವಕಾಶ ಇತ್ತು. ಆ ಶಾಲೆಯಲ್ಲಿ ಕನ್ನಡ ಕಡ್ಡಾಯ ಅಲ್ಲದ ಕಾರಣ ಅಮ್ಮ ನಮ್ಮನ್ನು ಮನೆಯ ಹತ್ತಿರದ ಶಾಲೆಗೆ ಸೇರಿಸಿದ್ಲು. ಅವಳಿಗೆ ನಾವು ಕನ್ನಡ ಕಲಿಯುವುದು ಅಷ್ಟು ಮುಖ್ಯವಾಗಿತ್ತು. ಮಕ್ಕಳಿಗೆ ಅವರ ಭಾಷೆಯಲ್ಲಿ ಓದೋದಕ್ಕೆ ಬರೆಯೋದಕ್ಕೆ ಬರದಿದ್ದರೆ, ಅವರಿಗೆ ಸಾಹಿತ್ಯದ ಪರಿಚಯ ಆಗೋದಿಲ್ಲ, ಅವರ ಬಿಡುವಿನ ವೇಳೆಯೆಲ್ಲ ದಂಡ ಎಂದು ನಂಬಿದ್ದಳು. ಶಾಲೆಯು ಸಹ ಎಲ್ಲ ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುತ್ತಾ ಬಂದಿತ್ತು. [ಕನ್ನಡ ಕಲಿತರೆ ಏನು ಲಾಭ ಎಂದು ಪ್ರಶ್ನೆ ಕೇಳುವವರಿಗೆ]

Before someone asks you do you know Kannada

ನಮ್ಮ ಮನೆಯ ಹತ್ತಿರ ಅಂಗಡಿಯವರೆಲ್ಲ ಕನ್ನಡದಲ್ಲೆ ಮಾತಾಡುತ್ತಿದ್ದರಿಂದಲೆನೋ ಇನ್ನು ಕಡಲೆ ಬೇಳೆ, ಉದ್ದಿನ ಬೇಳೆ ಶಬ್ದಗಳ್ಳನ್ನೆ ಕೇಳುತ್ತಿದ್ವಿ. ಒಂದು ದಿನ ಮನೆಯ ಹತ್ತಿರ ದೊಡ್ಡ super market ಶುರು ಆಗಿದೆ ಅಂತ ಅಮ್ಮ ಮನೆಗೆ ಸಾಮನು ತಗೊಂಡು ಬಾ ಅಂತ ಕಳಿಸಿದ್ದರು. ನನ್ನ ಪಟ್ಟಿ ಅಚ್ಚ ಕನ್ನಡದಲ್ಲಿತ್ತು. ಅಲ್ಲಿನದ್ದೆಲ್ಲ ಇಂಗ್ಲಿಷ್, ಹಿಂದಿಯ ಶಬ್ದಗಳು. ಇವಾಗ್ಲೂ ಲವಂಗ ಅನ್ನೋದು ನನಗೆ ಲವಂಗವೆ, clove ಅಂತ ತಕ್ಶಣ ನೆನಪಾಗೊಲ್ಲ. ಅಲ್ಲಿ ಬೇಳೆ ಎಲ್ಲವೂ ದಾಲ್ ಆಗಿತ್ತು. ಇಲ್ಲೇನು ಸಾಮಾನು ಇಲ್ಲ ಅಂತ ಓಡಿ ಬಂದಿದ್ದೆ. ತಂಗಿ ಬಂದು ಇದೆಲ್ಲ ಬೇರೆ ಭಾಷೆ ಅಂತ ಸಾಮಾನು ತೆಗೆದುಕೊಂಡು ಬಂದ್ದಿದ್ದಳು. ಆವಾಗಿನಿಂದ ಸ್ವಲ್ಪ ಸ್ವಲ್ಪವೆ ಕನ್ನಡ ಮರೆಯಾಗಕ್ಕೆ ಶುರು ಆಯಿತು.

IT ಪಾರ್ಕ್ ಎಲ್ಲ ಹತ್ತಿರವಿದ್ದ ಕಾರಣ, ವೋಲ್ವೋ ಬಸ್ ಮನೆಯ ಹತ್ತಿರ ಓಡಾಡೋಕೆ ಶುರು ಆಯಿತು. ಸರಿ ಮತ್ತಿನ್ನೇನು ತಡ ಅಂತ ಎಲ್ಲ ಬದಲಾಗೋಕೆ ಶುರು ಆಯಿತು. ಇನ್ನು ಬರಿ ಕನ್ನಡ ಬರುತ್ತಿದ್ದ ಹಿರಿಯ ಜೀವಗಳು ನಮ್ಮ ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ 'ಮಗು ಆ ಸಾಮಾನು, ಈ ಮಾತ್ರೆ ಅಲ್ಲಿಂದ ತಂದುಕೊಡು, ಅವರ ಭಾಷೆ ನನಗೆ ಅರ್ಥವೆ ಆಗುವುದಿಲ್ಲ' ಹಾಗೆಲ್ಲ ಕೇಳಿಕೊಳ್ಳುವಾಗ, ನಾವು ಏನು ಒಂದು ಭಾಷೆ ಕಲಿಯಕ್ಕೆ ಇಷ್ಟು ಕಷ್ಟ ಪಡಬೇಕ? ಅಂತ ನಾವು ಹಾಸ್ಯ ಮಾಡುತ್ತ, ನಮ್ಮ ಬೇರೆ ಭಾಷೆಯ ಜ್ಞಾನ ಪ್ರದರ್ಶನ ಮಾಡಿಕೊಳ್ಳುತ್ತಿದ್ವಿ. ಯಾಕೆ ನಮ್ಮ ಮಕ್ಕಳಿಗೆ ನಾವು ಕನ್ನಡ ಕಲಿಸೋದನ್ನ ಬಿಟ್ಟಿದೀವಿ? ಯಾಕೆ ಅವರಿಗೆ ಕನ್ನಡಕ್ಕಿಂತ ಮತ್ತೊಂದು ಭಾಷೆ ಆಪ್ತವಾಗಿದೆ? ಅನ್ನೋ ಪ್ರಶ್ನೆ ನನಗೆ ಯಾವಾಗಲೂ ಕಾಡುತ್ತಾ ಇರುತ್ತದೆ. [ಇಂಗ್ಲೀಷ್-ಎಲ್ಲರ ಕನ್ನಡ ನಿಘಂಟಿಗೆ ಮುನ್ನುಡಿ]

Before someone asks you do you know Kannada

ಮನೆಯ ಅಂಗಳ, ಚಪ್ಪಲ್ಲಿ ಗೂಡು, ಬಜ್ಜಿ ಅಂಗಡಿ ಹಾಗೆಲ್ಲ ಕನ್ನಡ ಪದ ಉಪಯೋಗಿಸೋದನ್ನ ಬಿಟ್ಟೆ ಬಿಟ್ಟಿದ್ದೇವೆ. ಒಮ್ಮೊಮ್ಮೆ ನನಗೆ ಆ ಪದಗಳ ನೆನಪಿರುವುದಿಲ್ಲ. ಹೀಗೆ ದಂಡಿಯಾಗಿ ಕನ್ನಡ ಮಾತಾಡುತ್ತಿದ್ದ ಬೆಂಗಳೂರು ಇವತ್ತು ಕನ್ನಡ ಉಳಿಸಿ ಅನ್ನೋ ಕೂಗಿಗೆ ಮಾದರಿ ಆಗಿದೆ. ಒಮ್ಮೆ ಓಲಾ ಚಾಲಕ ನನಗೆ ಕನ್ನಡ ಬರುವುದನ್ನು ನಂಬದೆ, ಅವರ ಕನ್ನಡ ದಿನ ಪತ್ರಿಕೆ ಕೊಟ್ಟು ಓದಲು ಹೇಳಿದ. ಮೇಲೆಯೆ ಅವರಿಗೆ ನಂಬಿಕೆ ಬಂದಿದ್ದು ನಾನೂ ಕನ್ನಡತಿ ಅಂತ. ಜಯನಗರದಿಂದ ಮಾರತಹಳ್ಳಿಯ ಪೂರ್ತಿ ಪ್ರಯಾಣ ಅವರು ನನಗೆ ಕನ್ನಡ quiz ಮಾಡಿದ ಮೇಲೆಯೆ ನಂಬಿದ್ದು.

"ಬೆಂಗ್ಳೂರಿನಲ್ಲಿ ಜನರಿಗೆ ಎಲ್ಲಿ ಕನ್ನಡ ಬರತ್ತೆ ಮ್ಯಾಡಮ್ , ಬರಿ ಇಂಗ್ಲಿಷ್ ಹೊಡಿತಾರೆ. ನೀವೇನೊ ಮಾತಾಡುತ್ತೀರ, ಓದುತ್ತೀರ. ನಿಮಗೆ ಮದ್ವೆ ಆಗ್ಲಿ, ಮದುವೆಯಾದ ಆ ಹುಡ್ಗಂಗೆ ಕನ್ನಡ ಬರಲ್ಲ ಅಂದ್ರೆ ನಿಮ್ಮ ಮಕ್ಕಳಿಗೂ ಕನ್ನಡ ಬರಲ್ಲ ಬಿಡಿ ಬೆಂಗ್ಲೂರಲ್ಲಿ ಇದ್ರೆ" ಅಂತ ನನ್ನ ಭವಿಷ್ಯವನ್ನ ಚಾಲಕನೇ ನಿರ್ಧರಿಸಿಬಿಟ್ಟರು. ಹೀಗಿದೆ ಸ್ವಾಮಿ ನಮ್ಮ ಕನ್ನಡ ಪ್ರೇಮ, ಅದನ್ನ ಬದಲಾಯಿಸಕ್ಕೆ ಕನ್ನಡ ಗೊತ್ತಿಲ್ಲ, ಮುನ್ನೋಟ, ದಟ್ಸ್ ಕನ್ನಡ, ಅಂಗಡಿಯಲ್ಲಿ ಕನ್ನಡ ನುಡಿ ಮುಂತಾದ ಸಂಸ್ಥೆಗಳು ಪ್ರಯತ್ನ ಮಾಡುತ್ತಾನೆ ಇವೆ. ಕನ್ನಡಿಗರು ಕನ್ನಡ ಓದೋ ಹಾಗಾಗಲಿ, ಬೇರೆಯವರು ಮಾತಾಡೊ ಹಾಗಾಗಲಿ.

ಇಷ್ಟೆಲ್ಲ ಹೇಳುವಾಗ ನನ್ನ ಅಣ್ಣನ ಮಗ 11 ವರ್ಷದವನು, ಮಗಳು 15 ವರ್ಷದವಳು ಬೆಂಗ್ಳೂರಿಂದ ಕರೆ ಮಾಡಿ "ನಿನ್ನ ಲೇಖನ ಚೆನ್ನಾಗಿತ್ತು ಹೋದ ವಾರ, ಪ್ರತಿ ವಾರ ಹೋಮ್ ವರ್ಕ್ ಮಾಡಬೇಕು, ಆ ವೆಬ್ಸೈಟ್ ನ ಬುಕ್ಮಾರ್ಕ್ ಮಾಡ್ಕೊತೀವಿ" ಅಂತ ಕನ್ನಡದಲ್ಲಿ ಅಂದಾಗ, ಪರ್ವಾಗಿಲ್ಲ ನಮ್ಮ ಮುಂದಿನ ಪೀಳಿಗೆ ಇನ್ನು ಹಾಳಾಗಿಲ್ಲ, ಬೆಂಗ್ಳೂರಲ್ಲಿ ಕನ್ನಡ ಇನ್ನು ಉಳಿದಿದೆ ಅಂತ ನಿಟ್ಟುಸಿರು ಬಿಟ್ಟೆ.

ನಿಮಗೆ ಕನ್ನಡ ಬರುತ್ತಾ ಎಂದು ಯಾರಾದರೂ ಕೇಳುವ ಮೊದಲು ನೀವೇ ಕನ್ನಡದಲ್ಲಿ ಮಾತಾಡಿ. ಅಲ್ಲದೆ, ನೀವು ಯಾರಿಗಾದರೂ ಕನ್ನಡ ಕಲಿಸಿದ್ದೀರಾ? ಕಲಿಸುತ್ತಿರುವಾಗ ಆದ ತಮಾಷೆ ಪ್ರಸಂಗಗಳನ್ನ ತಿಳಿಸಿ.

English summary
Do you know Kannada? This is the question many people ask Kannadigas in Bengaluru, the capital city of Karnataka. Why is it happening in Bengaluru? Why people have forgotten to speak in their mother tongue Kannada? Meghana Sudhindra writes from Barcelona.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X