ಉಪ್ವಾಸ ಸತ್ಯಾಗ್ರಹ ಮಾಡೋವಾಗ ಯಾವ ಹೋಟೆಲ್ ಹತ್ರ ಮಾಡಾಣ, ಕೈ ಎತ್ತಿ..

Posted By:
Subscribe to Oneindia Kannada

ಸಾ...ಉಪವಾಸ ಸತ್ಯಾಗ್ರಹ ಮಾಡಂಗಿದ್ದರೆ ಸಂಪಂಗಿರಾಮ ನಗರದಲ್ಲೇ ಮಾಡಣ... ಅಯ್ಯೋ ಉಪವಾಸ ಸತ್ಯಾಗ್ರಹ ಮಾಡ್ಬೌದಾ ಅಂತ ನಾವಿನ್ನೂ ಡಿಸ್ಕಸನ್ ಮಾಡ್ತಾ ಇದ್ದೀವಿ, ಅವನ್ಯಾವನೋ ಸಂಪಂಗಿರಾಮನಗರದಲ್ಲೇ ಮಾಡಾಣ ಅನ್ನೋನು ಎಂದು ಕೆರಳಿದರು ಫಿರಂಗಿ ಸೋಮ.

ಕಾರ್ಪೋರೇಷನ್ ಬಸ್ ಸ್ಟಾಪ್ ಹತ್ತಿರದ ಕಲ್ಲಿನ ಕಾಂಪೌಂಡ್ ನ ಮೇಲೆ ಕೂತಿದ್ದ ಫಿರಂಗಿ ಸೋಮ, ಚಿಕ್ಕಿ ಸಂಪತ್ತು, ಬೋಟಿ ಸಿದ್ಲಿಂಗು, ಗುಲ್ಕನ್ ಶೀನ... ಎಲ್ಲರೂ ಉಪವಾಸ ಸತ್ಯಾಗ್ರಹ ಮಾಡುವ ಬಗ್ಗೆ ಗುಸುಗುಸು ಅಂತ ಮಾತನಾಡುತ್ತಿದ್ದದ್ದು ಸಹ ಹತ್ತಡಿ ದೂರ ಕೂತಿದ್ದ ಡಬಲ್ ಮೀಲ್ಸ್ ಕಿಟ್ಟಪ್ಪನಿಗೆ ಕೇಳಿಸಿಬಿಡ್ತು.

ತನ್ನ ಭಾವ ಮೈದುನ ಗೋಬಿ ರಾಮನ ಜತೆಗೆ ಕೂತು ಕಿವಿಯೊಳಗೆ ಗುಗ್ಗೆ ತೆಗೆದುಕೊಳ್ಳುತ್ತಿದ್ದ ಕಿಟ್ಟಪ್ಪನಿಗೆ ಉಪವಾಸ ಎಂಬ ಪದ ಸಿಡಿಲಿನಂತೆ ಬಡಿದಿತ್ತು. ಅವನ ನಾಲಗೆ ಫುಲ್ ಕಂಟೋಲ್ ಕಳೆದುಕೊಂಡು, ಸಂಪಂಗಿರಾಮನಗರದಲ್ಲಿ ಸತ್ಯಾಗ್ರಹ ಮಾಡಾಣ ಅಂತ ಬಂದು ಬಿಟ್ಟಿತು.

Humor: Which hotel should be near while fasting?

"ಅಣ್ಣಾ, ಅಲ್ಲೇ ಪಕ್ಕದಲ್ಲೇ ಸಿದ್ದಪ್ಪನ ಹೋಟೆಲ್ ಐತೆ. ಬೆಳಗ್ಗೆ ಏಳು ಗಂಟೆಗೆ ಹೋಟ್ಲು ತೆಗೆದರೆ ಭರ್ಜರಿ ತಿಂಡಿ ಆಗ್ತೈತೆ. ಆ ಮಸಾಲೆ ದೋಸೆ, ರೈಸ್ ಬಾತ್ ಮೂಗು ಮಟ್ಟ ಜಡಿದು, ಹ್ಯಾಪಿ ಡೆಂಟ್ ತಿಂದು, ಎಗ್ ಜ್ಯಾಕ್ಟ್ಲಿ ಒಂಬತ್ತು ಗಂಟೆಗೆ ಉಪವಾಸ ಶುರು ಹಚ್ಚಿಕೊಂಡು ಬಿಡಾಣ. ಮಧಾಹ್ನ ಒಂದೂವರೆಯಿಂದ ಎರಡೂ ಕಾಲು ಬ್ರೇಕ್. ಎಂಟಿ ಆರ್ ನಲ್ಲಿ ಊಟ ಮಾಡಿ, ಮೂರೂ ಕಾಲು ಸರಿಯಾಗಿ ಮತ್ತೆ ಸತ್ಯಾಗ್ರಹ ಶುರುವಚ್ಚಿಕೊಳ್ಳೋಣ. ಎಂಗೆ ಐಡಿಯಾ?" ಎಂದು ಹುಬ್ಬು ಕುಣಿಸಿದ ಕಿಟ್ಟಪ್ಪ.

ಏಯ್, ಡಬಲ್ ಮೀಲ್ಸ್ ನೀನೇನಾದರೂ ಕೈ ಪಕ್ಷದಾಗೆ ಇದ್ದೇನೋ? ಸರಕ್ಕನೆ ಪ್ರಶ್ನೆ ಎಸೆದ ಬೋಟಿ ಸಿದ್ಲಿಂಗು. ಅಣ್ಣ, ಅದೇನು ಕರೆಕ್ಟಾಗಿ ಹೇಳಿದ್ಯೋ ಎಂದು ಆನಂದ ತುಂದಿಲವಾಯಿತು ಡಬಲ್ ಮೀಲ್ಸ್.

ಏಯ್, ಆ ಗುಲ್ಕನ್ ಶೀನನಿಗೆ ನಾಲ್ಕು ತದುಕ್ರೋ ಎಂದು ಕೀರಲು ದನಿಯಲ್ಲಿ ಕೂಗಿದ ಚಿಕ್ಕಿ ಸಂಪತ್ತು. ನಾನೇನು ಮಾಡಿದ್ನಣ್ಣೋ ಎಂದು ಸಣ್ಣ ದನಿಯಲ್ಲಿ ಕಣ್ಣು ಚಿಕ್ಕದು ಮಾಡಿಕೊಂಡು ಕೇಳಿದ ಶೀನ.

ನಾನು ಮೊದಲೇ ಬಡಿದುಕೊಂಡೆ. ತಿಂಡಿ- ಊಟ ಮಾಡಿ, ಉಪವಾಸ ಸತ್ಯಾಗ್ರಹ ಮಾಡ್ತೀವಿ ಅಂತ ಪಬ್ಲಿಕ್ ಆಗಿ ಹೇಳೋರನ್ನ ಮೀಟಿಂಗ್ ಗೆ ಕರೀಬೇಡ, ಕರೀಬೇಡ ಎಂದು ಹೇಳಿರಲಿಲ್ವ ಎಂದು ಭೋರ್ಗರೆಯಿತು ಫಿರಂಗಿ.

ಈ ಧ್ವನಿಗೆ ಗಾಬರಿ ಬಿದ್ದ ಗೋಬಿ ರಾಮನು ಭಾವನ ಕೈ ಹಿಡಿದು ಎಳೆದು, ಕೆಂಪೇಗೌಡ ರಸ್ತೆ ಕಡೆಗೆ ಓಡಲು ಶುರು ಮಾಡಿದ. ಹೀಗೆ ಬಿಗ್ಗಬಿಗಿ ಕೈ ಹಿಡಿದು ಎಳೆದುಕೊಂಡು ಹೋಗುತ್ತಿದ್ದ ರಾಮ ಕಾವೇರಿ ಭವನದವರೆಗೂ ನಿಲ್ಲಲೇ ಇಲ್ಲ.

ಅಲ್ಲಿ ಹೋಗಿ ನಿಂತ ಮೇಲೆ ಕಿಟ್ಟಪ್ಪ ಏದುಸಿರು ಬಿಡುತ್ತಾ, ಯಾಕ್ಲಾ ಹಾಗೆ ಹುಚ್ಚು ನಾಯಿ ಥರ ಓಡಿಬಂದೆ? ನನ್ನ ಬನಿಯನ್ ಎಲ್ಲ ಒದ್ದೆ ಆಗಿಹೋಯಿತು ಎಂದು ಜೋರಾಗಿ ಉಸಿರು ಬಿಡುತ್ತಲೇ ಕೇಳಿದ.

ಭಾವೌ, ಈಗ ಕೂಗಿದ್ನಲ್ಲ ಆ ಫಿರಂಗಿ, ಅವನ ಜತೆಯಾಗೇ ಕಳೆದ ಕಿತ ನಾನು ಉಪವಾಸ ಸತ್ಯಾಗ್ರಹ ಮಾಡಿದ್ದು. ಅವನಿಗೆ ಮಧಾಹ್ನ ನಾನ್ ವೆಜ್ ಮಾಡಲಿಲ್ಲ ಅಂದರೆ, ಮನೇಲೇ ಊಟ ಮಾಡಲ್ಲ. ನನಗೆ ಅದು ಗೊತ್ತಿಲ್ಲದೆ ನಂದೀಶ್ವರ ಲಂಚ್ ಹೌಸ್ ನಿಂದ ಚಿತ್ರಾನ್ನ ತಂದುಕೊಟ್ಟು ಬಿಟ್ಟೆ. ಹಸಿವಿನ ಸಿಟ್ಟು, ನಾನ್ ವೆಜ್ ತಂದುಕೊಡಲಿಲ್ಲವಲ್ಲ ಅನ್ನೋ ಬೇಜಾರ್ ನಲ್ಲಿ ನನಗೆ ಬೇಜಾನ್ ಹೊಡ್ದು ಬಿಟ್ಟಿದ್ದ.

ಇನ್ನೊಂದು ಸಲ ಕಾಣಿಸಿಕೊಂಡರೆ ದಿಲ್ಲಿಯಲ್ಲಿ ಅಣ್ಣಾ ಹಜಾರೆ ಉಪವಾಸ ಮಾಡುವಾಗ ನನ್ನನ್ನು ಕರ್ದುಕೊಂಡು ಹೋಗಿ ಬಿಟ್ಬುಡ್ತೀನಿ ಅಂತ ಹೆದರಿಸಿದ್ದ. ಇವತ್ತು ನನ್ನ ಏನಾದರೂ ನೋಡಿಬಿಟ್ಟಿದ್ದರೆ ಅಷ್ಟೇ ಕತೆ. ಅದಕ್ಕೆ ಹಾಗೆ ಓಡಿಬಂದೆ ಎಂದು ಗೋಬಿ ನಿಟ್ಟುಸಿರು ಬಿಟ್ಟಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This article about hunger strike in a humorous way. Not intended to hurt anybody. Hunger strike in Punjab how successfully completed by political party is the inspiration for this article.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ