• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ

By Staff
|

ಶಂಕರಪುರಂನಲ್ಲಿರುವ ಬ್ರಾಹ್ಮಣರ ಕಾಫಿ ಬಾರ್ ಯಡಿಯೂರಪ್ಪನವರ ಭೇಟಿಯಿಂದಾಗಿ ಇವತ್ತು ಸುದ್ದಿ ಕೇಂದ್ರಕ್ಕೆ ಬಂದಿರಬಹುದು, ವಿಶ್ವೇಶ್ವರ ಭಟ್ ಅವರು ಬರೆದ ಎಂಟಿಆರ್ ಹೋಟೆಲಿನ ಇತಿಹಾಸ ಮತ್ತು ಪರಂಪರೆಯ ಬಗೆಗೆ ಕನ್ನಡಿಗರು ಬೆನ್ನು ತಟ್ಟಿಕೊಳ್ಳುತ್ತಿರಬಹುದು, ತಟ್ಟಿಕೊಳ್ಳಿರಿ ತಟ್ಟಿಕೊಳ್ಳಿರಿ. ಆದರೆ ಕನ್ನಡಿಗರೇ ಒಂದು ವಿಷಯ ತಿಳಿಯಿರಿ. ಐದಾರು ಶತಮಾನಗಳ ಹಿಂದೆಯೇ ನಮ್ಮಲ್ಲಿ ಉಡುಪಿ ಹೋಟೆಲುಗಳಿದ್ದವು, ಅಲ್ಲಿ ರುಚಿರುಚಿಯಾದ ಇಡ್ಲಿ ದೋಸೆಗಳು ಬಿಕರಿಯಾಗುತ್ತಿದ್ದವು. ಅದನ್ನು ಸ್ವತಃ ನಮ್ಮ ತಿರುಪತಿ ತಿಮ್ಮಪ್ಪನೇ ನಡೆಸುತ್ತಿದ್ದನು. ಅವನೇ ನಿಜವಾದ ಮಾಲಿಕ, ಉಳಿದವರು ಮಾಣಿಗಳಷ್ಟೆ!

* ಹಂಸಾನಂದಿ, ಉತ್ತರ ಕ್ಯಾಲಿಫೋರ್ನಿಯಾ

ಪ್ರಪಂಚದ ಎಲ್ಲಿಂದ ಎಲ್ಲಿಗೆ ಹೋದರೂ, ಅಲ್ಲೊಬ್ಬ ಕಾಕಾ ಟೀ ಅಂಗಡಿ ಇಟ್ಟುಕೊಂಡಿರುತ್ತಾನೆ ಅನ್ನೋದೊಂದು ಹಳೇ ನಗೆಚಟಾಕಿ. ಅರವತ್ತೊಂಬತ್ತರಲ್ಲಿ, ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಮೇಲೆ ಇಳಿದಾಗ ಅಲ್ಲಿಯೂ ಒಬ್ಬ ಪ್ರತ್ಯಕ್ಷ ಆಗಿದ್ದನಂತೆ ಟೀ ಹಿಡ್ಕೊಂಡು ಎನ್ನೋ ಮಟ್ಟಿಗೆ ಇದು ಹೆಸರುವಾಸಿ. ಇದರ ಹಿಂದೇ ಬರೋದು ಉಡುಪಿ ಹೋಟೆಲ್ ಗಳ ಸಮಾಚಾರ. ಆಡು ಮುಟ್ಟದ ಸೊಪ್ಪಿಲ್ಲ, ಅನ್ನೋ ಹಾಗೆ ಉಡುಪಿ ಹೋಟೆಲ್ ಗಳಿಲ್ಲದ ಊರೇ ಇಲ್ಲ. ಮೊದಮೊದಲು ಹೋಟೆಲ್ ನಡೆಸುವ ಆಸೆ, ಅಥವಾ ಯೋಚನೆ ಉಡುಪಿಯವರಿಗೇ ಏಕೆ ಬಂತು? ಅದನ್ನು ಯಾರಾದ್ರೂ ಉಡುಪಿ ಕಡೇವ್ರೇ ಹೇಳಬೇಕು. ಅಥವಾ ತಿಂಡಿಪೋತ ಅನ್ನೋ ಹೆಸರು ಗಳಿಸಿರೋ ಕೃಷ್ಣ ಇರೋ ಊರ್ನೋರಾದ್ರಿಂದ ಹೀಗೇನಾದ್ರೂ ಆಯ್ತಾ? ನನಗೆ ಗೊತ್ತಿಲ್ಲ. ಅಂತೂ, ಕರ್ನಾಟಕದ ಹೊರಗೂ ಭಾರತದ ಸುಮಾರು ಹಲವು ರಾಜ್ಯಗಳಲ್ಲಿ,ಅದ್ರಲ್ಲೂ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ವಿಶೇಷವಾಗಿಯೇ ಉಡುಪಿ ಹೋಟೆಲ್ಗಳನ್ನು ಕಾಣಬಹುದು.

ಈ ಉಡುಪಿ ಹೋಟೆಲ್ ಅನ್ನೋದು ತಮಿಳ್ನಾಡಿನಲ್ಲಿನಲ್ಲಂತೂ ಹೇಗೆ ಹಾಸುಹೊಕ್ಕಾಗಿದೆ ಅಂದರೆ ಅದಕ್ಕೆ ಸಸ್ಯಾಹಾರಿ ಅಂತ ಬೇರೆಯೇ ಅರ್ಥ ಬಂದುಬಿಟ್ಟಿದೆ. ವೆಜಿಟೇರಿಯನ್ ಅಂತ ಹೇಳೋಬದಲು ಅವರು ಉಡುಪಿ ಅಂತಷ್ಟೇ ಹೇಳುತ್ತಾರೆ. ಸರವಣ ಭವನ್ (ಉಡುಪಿ) ಅನ್ನೋ ಬೋರ್ಡ್ ನಿಮಗೆ ಕಂಡ್ರೆ, ಅದು ನಡೆಸ್ತಾ ಇರೋದು ಉಡುಪಿಯವರಲ್ಲದೇ, ಆಂಧ್ರದವರೇ ಆಗಿದ್ದರೂ, ಅಥವಾ ಅಸ್ಸಾಮ್ ನವರೇ ಆಗಿದ್ರೂ, ಅದಕ್ಕೆ ವೆಜಿಟೇರಿಯನ್ ಅನ್ನೋದೇ ಅರ್ಥ.

ಪರದೇಶಗಳಲ್ಲಿಯೂ ಹೆಚ್ಚು ಭಾರತೀಯರಿರೋ ಕಡೆ, ರೆಸ್ಟೂರಾ ಬಿಸಿನೆಸ್ಸಿಗೆ ಇಳಿದೋರು, ಈ ಉಡುಪಿ ಹೆಸರನ್ನ ಚೆನ್ನಾಗೇ ಉಪಯೋಗಿಸ್ಕೋತಾರೆ. ಉಡುಪಿ ಪ್ಯಾಲೇಸ್ ಅನ್ನೋ ಹೆಸರು ಅಮೆರಿಕೆಯ ಪೂರ್ವದ ವಾಷಿಂಗ್ಟನ್ ಡಿ.ಸಿ.ಇಂದ ಪಶ್ಚಿಮದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ವರೆಗೆ ಹತ್ತು ಹಲವು ಕಡೆ ಇವೆ. ಇವಲ್ಲಿ ಅಸಲಿ ಉಡುಪಿ ಎಷ್ಟೋ ನಕಲಿ ಎಷ್ಟೋ ಗೊತ್ತಿಲ್ಲ. ಇದೇ ರೀತಿ ಬೇರೆ ದೇಶಗಳಲ್ಲೂ ಇರಬಹುದು. ಆದ್ರೆ ಒಂದು ವಿಷಯ ಮಾತ್ರ ಹೇಳ್ಬಿಡ್ತೀನಿ. ಈ ಉಡುಪಿ ಪ್ಯಾಲೇಸ್ಗಳಲ್ಲೆಲ್ಲ ಹೆಸರು ಮಾತ್ರ ಉಡುಪಿ. ದೋಸೆ ನೋಡಕ್ಕೆ ನಮ್ಮ ಒರಿಜಿನಲ್ ಉಡುಪಿ ತರಹವೇ. ಆದರೆ, ಬಾಯಿ ಬಿಟ್ಟರೆ ಬಣ್ಣಗೇಡು! ಒಟ್ಟಿನಲ್ಲಿ, ವಿಧಿ ಇಲ್ಲದೇ ಹೋದರೆ ಮಾತ್ರ ಹೋಗಬೇಕಾದ ಪ್ಯಾಲೇಸ್ ಗಳು ಇವು. ಕಾಸೂ ಹಾಳು ತಲೇನೂ ಬೋಳು ಅನ್ನೋ ಗಾದೆ ಯಾವ್ದೋ ಇಂತಾ ಕಡೇನೇ ಮಾಡಿರ್ಬೇಕು.

ಅದೆಲ್ಲ ಇರಲಿ. ಈ ಉಡುಪಿ ಪುರಾಣ ನಿಲ್ಸಿ ಸ್ವಲ್ಪ ತಿರುಪತಿ ತಿಮ್ಮಪ್ಪನ ಸ್ಮರಣೆ ಮಾಡ್ತೀನಿ. ನಮ್ಮೂರಲ್ಲಿ, ತಿರುಪತಿ ಭೀಮಾಸ್ ಅನ್ನೋ ಒಂದು ದೋಸೆ-ಇಡ್ಲಿ ಹೋಟೆಲ್ ಇದೆ. ಭೀಮ ಏನೋ ಅಡಿಗೆಗೆ ಪ್ರಖ್ಯಾತಿ ಆದವನು. ಆದ್ರೆ, ತಿರುಪತಿಗೂ, ಭೀಮಂಗೂ ಯಾವ ಸಂಬಂಧ? ಅಥವಾ ತಿರುಪತಿಗೂ ಹೋಟೆಲ್ ಇಂಡಸ್ಟ್ರಿಗೂ ಏನಾರೂ ನಂಟಿದೆಯೋ ಅನ್ನೋ ವಿಷಯ ಅಂತೂ ನನಗೆ ಮೊದಲು ತಿಳಿದಿರಲಿಲ್ಲ , ಒಂದು ಪುರಂದರ ದಾಸರ ದೇವರನಾಮವನ್ನು ಓದುವ ತನಕ.

ಮೊದಲಿಗೆ ಆ ಹಾಡನ್ನು ಇಲ್ಲಿ ಬರೆಯುವೆ.

ಧಣಿಯ ನೋಡಿದೆನಾ ವೆಂಕಟನ ಮನದಣಿಯೇ ನೋಡಿದೆನಾ! ||ಪಲ್ಲವಿ||

ಧಣಿಯ ನೋಡಿದೆ ಶಿಖಾಮಣಿ ತಿರುಮಲನಾ! ||ಅನುಪಲ್ಲವಿ||

ಕೇಸಕ್ಕಿ ಅನ್ನ ಉಂಬುವನಾ ಬಡ್ಡಿ

ಕಾಸು ಬಿಡದೇ ಹೊನ್ನ ಗಳಿಸುವನಾ!

ದೋಸೆ ಅನ್ನವ ಮಾರಿಸುವನಾ ತನ್ನ

ದಾಸರ ಮ್ಯಾಳದಿ ಕುಣಿದಾಡುತಿಹನಾ! ||1||

ಬೆಟ್ಟದೊಳಗೆ ಇರುತಿಹನ ಮನ

ಮುಟ್ಟಿ ಭಜಿಪರಿಗಿಷ್ಟವ ಸಲ್ಲಿಸುವನಾ!

ಕೊಟ್ಟ ವರವ ತಪ್ಪದವನ

ಸೃಷ್ಟಿಗಧಿಕ ಶ್ರೀ ಪುರಂದರ ವಿಠಲನ! ||2||

ತಿರುಮಲ, ಬೆಟ್ಟದ ಮೇಲೆ ಇರುವುದು ಎಲ್ಲವನ್ನೂ ನೋಡಿದಾಗ , ಇದು ತಿರುಪತಿ ತಿಮ್ಮಪ್ಪನ ಮೇಲೆ ಎಂದು ಸುಲಭವಾಗಿ ತಿಳಿಯುತ್ತೆ. ತಿಮ್ಮಪ್ಪ ತನ್ನ ಮದುವೆಯ ಸಾಲಕ್ಕೆ ಬಡ್ಡಿಕಾಸಿಗೆಂದು ದುಡ್ಡು ಸಂಪಾದಿಸುತ್ತಿದ್ದಾನೆ ಅನ್ನೋದು ಪರಂಪರೆಯ ನಂಬಿಕೆ ಅಲ್ಲವೆ? ಇದರ ಜೊತೆಗೆ, ದೋಸೆ ಅನ್ನವ ಮಾರಿಸುವನಾ ಎನ್ನುವ ಮಾತನ್ನು ನೋಡಿದಾಗ, 15-16ನೇ ಶತಮಾನದಲ್ಲೇ ತಿರುಪತಿಯಲ್ಲಿ ದೋಸೆ ಊಟದ ಖಾನಾವಳಿಗಳಿದ್ದವು ಅನ್ನೋದು ಗೊತ್ತಾಗುತ್ತೆ ಅಲ್ಲವೆ? ಪ್ರವಾಸಿಗಳಿಗೆ ಅನುಕೂಲಕ್ಕಾಗಿ ಧರ್ಮಛತ್ರ ಅರವಟ್ಟಿಗೆಗಳು ಇದ್ದ ಮಾತನ್ನ ನಾವು ಕೇಳೇ ಇದ್ದೇವೆ. ಆದರೆ, 500 ವರ್ಷಗಳ ಹಿಂದೆಯೇ ಊಟ ತಿಂಡಿ ಮಾರುವೆಡೆಗಳು ಇದ್ದವು ಅನ್ನೋದು ಈ ಹಾಡಿಂದ ಅನುಮಾನವಿಲ್ಲದೇ ತಿಳೀತಾಯಿದೆ.

ಇದಕ್ಕೇ ಇರಬೇಕು, ಸಾಹಿತ್ಯ ಅನ್ನೋದು ಸಮಾಜದ ಕನ್ನಡಿ ಅಂತ ಹೇಳೋದು! ಆದ್ರೆ, ನಾನು ಹೇಳ್ದೆ ಅಂತ ಈಗ್ಲೆ ಎಲ್ಲಾರ್ಗೂ ಹೇಳ್ತಾ ಬಂದ್ಬಿಡ್ಬೇಡಿ! ಈಗ ಹೆಸರಿಗಾದ್ರೂ ಉಡುಪಿ ಹೋಟೆಲ್ ಗಳು, ಬೆಂಗಳೂರು ಅಯ್ಯಂಗಾರ್ ಬೇಕರಿಗಳು ಇನ್ನೂ ಬದುಕಿವೆ. ಆಮೇಲೆ, ಅವುಗಳೆಲ್ಲವೂ ತಿರುಪತಿ ಅಂತ ಹೆಸ್ರು ಬದ್ಲಾಯ್ಸಿಕೊಂಡ್ರೆ ಕಷ್ಟ. ಅಲ್ವಾ?

ಪೂರಕ ಓದಿಗೆ

ನಾಷ್ಟಾಗಾಗಿ ಶಿಷ್ಟಾಚಾರ ಬದಿಗಿಟ್ಟ ಯಡಿಯೂರಪ್ಪ

ಎಂಟಿಆರ್ : ಆಹಾರ ಸಂಸ್ಕೃತಿಗೆ ಹೊಸರುಚಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more