ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಜಿ ತಂದ ಬೇರಿನಿಂದ ಬಾಯಿಹುಣ್ಣೆಂಬ ಉಗ್ರಗಾಮಿಗಳ ಸಂಹಾರ

By ವಿಘ್ನೇಶ ಅಡಿಗ, ಬೆಂಗಳೂರು
|
Google Oneindia Kannada News


Vignesh Adiga, Bangalore ಸಾಗರದ ಉದ್ದಗಲ ಆಳ ಹೇಗೆ ತಿಳಿಯಲಾಗದೋ ಹಾಗೇ ಮನುಷ್ಯನ ಜೀವನವೂ ಕೂಡ. ಎಲ್ಲಾ ವಿಷಯಗಳಲ್ಲೂ ತಾನು ಅಂದುಕೊಂಡಿದ್ದಕ್ಕಿಂತ ವಿರುದ್ಧವಾಗುವುದೇ ಹೆಚ್ಚು, "ತಾನೊಂದು ಬಗೆದರೆ.." ಎಂಬ ಗಾದೆಯೇ ಇದೆಯಲ್ಲ! ಈ ತತ್ವಶಾಸ್ತ್ರದ ಮಾತುಗಳು ನನ್ನ ಉದರ ಪೂಜೆಯಲ್ಲೂ ಸತ್ಯ ಸತ್ಯ ಎಂದು ಚೀರಾಡುತ್ತಿದೆ ! ಅರ್ಥವಾಗಿಲ್ಲವೇ?? ಬಿಡಿ, ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕೆಂದರೆ, "ನಾನೊಂದು ಬಗೆದರೆ ನನ್ನ ನಾಲಿಗೆಯೊಂದು ಬಗೆಯಿತು".

ಯಾವತ್ತೂ ಎಣ್ಣೆ ತಿಂಡಿ ಎಂದರೆ ನಾಲಿಗೆಯ ಅಂತರಾಳದಿಂದ ಬರುತ್ತಿದ್ದ ಲಾಲಾರಸ ಅಂದೇಕೋ ಹಿಂಜರಿಯುತ್ತಿತ್ತು, ಸೌರವ್ ಗಂಗೂಲಿ ರನ್‌ಗಾಗಿ ಒದ್ದಾಡುವಂತೆ ನಾನು ಒದ್ದಾಡುತ್ತಿದ್ದೆ. ಆದರೆ ಮರುದಿನ ಆ ಸೂರ್ಯ ಕಿರಣಗಳು ಮುಖದ ಮೇಲೆ ಬಿದ್ದಾಗಲೇ ಗೋತ್ತಾಗಿದ್ದು ನನ್ನ ಬಾಯಿಗೆ ಹುಣ್ಣೆಂಬ (Mouth Ulcers) ಉಗ್ರಗಾಮಿಗಳು Line of Control ಅನ್ನು ದಾಟಿ ನುಸುಳಿಬಿಟ್ಟಿದ್ದವು. ಅಬ್ಬಾ ಅದೇನು ಅಸಹನೀಯ ನೋವು, ನನ್ನ ಬಾಯಲ್ಲಿದ್ದ ಲಾಲಾರಸವೂ ಲಾವಾರಸದಂತೆ ಭಾಸವಾಗುತ್ತಿತ್ತು. ಯಾವುದೇ ರೀತಿಯ ಶಾಂತಿ ಪ್ರಕ್ರಿಯೆಗೆ ಅವಕಾಶ ನೀಡದೇ ಹುಣ್ಣೆಂಬ ಉಗ್ರಗಾಮಿಗಳು ತೀವ್ರ ಪ್ರತಿರೋಧ ಒಡ್ದುತ್ತಿದ್ದರು. ಇದರಿಂದಾಗಿ ಎಷ್ಟೇ ಪ್ರಯತ್ನಪಟ್ಟರೂ ಶಾಂತಿ ಪ್ರಯತ್ನ ವಿಫಲವಾಗುತ್ತಿತ್ತು.

ಇದಲ್ಲವನ್ನೂ ಮೌನವಾಗಿ ನೋಡುತ್ತಿದ್ದ ನನ್ನೀ ದೇಹ ಆವಾಗಲೇ ಸಂಧಾನಕ್ಕಾಗಿ ಹಾತೊರೆಯುತ್ತಿತ್ತು. ಹೇಗೋಮಾಡಿ ಅಂತು ಇಂತೂ ನನ್ನ ಬೆಳಗ್ಗಿನ ಹಲ್ಲುಜ್ಜುವ ಕಾಯಕ ಮುಗಿಸಿದೆ. ಇದನ್ನೆಲ್ಲಾ ನೋಡುತ್ತಿದ್ದ ಉದರ ಮಹಾಶಯ ಮತ್ತೆ ಜಪಾನ್‌ನ ಹಿರೋಷಿಮಾ, ನಾಗಾಸಾಕಿಯ ನೆನಪನ್ನು ತರುತ್ತಿದ್ದ. ಹಸಿವೆಯೆಂಬ ಪರಮಾಣು ಬಾಂಬ್ ಬಿದ್ದಿದ್ದರಿಂದ ತತ್ತರಿಸಿದ್ದ ನನ್ನ ಉದರ ಮತ್ತಷ್ಟು ತಾಳಹಾಕಲು ಪ್ರಾರಂಭಿಸಿತು. ಉಗ್ರಗಾಮಿಗಳು ಎಂಥವೇ ಆದರೂ ಹಸಿವೆಯನ್ನು ಹೈಜಾಕ್ ಮಾಡಲು ಸಾಧ್ಯವೆ?

ಒಂದೆಡೆ ನನ್ನ ಬಾಯಲ್ಲಿ ಯುದ್ಧ ನಡೆಯುತ್ತಿದ್ದರೆ ಇನ್ನೊಂದೆಡೆ ಮನೆಯಲ್ಲಿ ಯಾವುದೋ ಸಮಾರಂಭಕ್ಕಾಗಿ ಸಿದ್ದತೆ ನಡೆಯುತ್ತಿತ್ತು. ಅದಾಗಲೇ ನನ್ನ ಈ ಉಗ್ರಗಾಮಿಗಳು ನಾಲಿಗೆಯನ್ನೂ ಬಿಡದೆ "ಬಾಯ್ತುಂಬ ಹುಣ್ಣಿರಲಮ್ಮ" ಎಂಬ ಹೊಸ ಗಾದೆಗೆ ನಾಂದಿ ಹಾಡಿದ್ದವು! ಈ ಅಸಹನೀಯ ನೋವನ್ನು ಯಾರಿಗಾದರು ಹೇಳೋಣವೆಂದರೆ ಈ ಹುಣ್ಣೆಂಬ ಉಗ್ರಗಾಮಿಗಳು ನನ್ನ ಪ್ರತಿಯೊಂದು ಸ್ವರ ಉಚ್ಚಾರದಲ್ಲೂ AK-47ನಿಂದ ದಾಳಿಯಿಕ್ಕುತ್ತಿದ್ದವು!!!. ಮಾತಿನ ಮಲ್ಲನೆಂದೇ ಪ್ರ(ಕು)ಖ್ಯಾತಿ ಪಡೆದಿದ್ದ ನಾನು ಅಂದು ಈ ಹುಣ್ಣುಗಳಿಂದಾಗಿ ಮಾತೇ ಹೊರಡದಂಥ ಪರಿಸ್ಥಿತಿ ತಂದುಕೊಂಡಿದ್ದೆ. ಬಂದ ಪ್ರತಿಯಬ್ಬ ಅತಿಥಿಗಳಿಗೆ, ಕುಟುಂಬದವರಿಗೆ ನನ್ನ ಪರಿಸ್ಥಿತಿಯನ್ನು ತಿಳಿಯಪಡಿಸುವಲ್ಲಿ ಸಾಕುಸಾಕಾಗಿತ್ತು.

ಇದೆಲ್ಲದರ ಮಧ್ಯೆ ಸಂಧಾನಕ್ಕಾಗಿ ಬಂದವರು ನನ್ನ ಅಜ್ಜಿ. ಅವರೋ ಬ್ರಿಟಿಷ್ ಕಾಲದಿಂದಲೇ ಇಂತಹ ದಾಳಿಗೆ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದವರು. ಅದಾಗಲೇ ತಮ್ಮ ಸಂಧಾನಕ್ಕಾಗಿ ನನ್ನನ್ನು ಹತ್ತಿರದಲ್ಲೇ ಇದ್ದ ಗಿಡಮೂಲಿಕೆ ಅಂಗಡಿಗೆ ಕಳುಹಿಸಿದರು. ಆದರೆ ನನ್ನ ಅ(ದುರಾ)ದೃಷ್ಟ ಎನ್ನುವಂತೆ ಅವರು ಮಂಡಿಸಿದ್ದ ಸಂಧಾನಕಾರಕ ಗಿಡಮೂಲಿಕೆ ಅಲ್ಲಿರಲ್ಲಿಲ್ಲ. ಇವೆಲ್ಲದರ ಮಧ್ಯೆ ನನ್ನೀ ಉದರ ಮಿತ್ರ ತನ್ನ ಹಸಿವನ್ನು ತಾಳಲಾರದೆ ಉತ್ತರ ಕರ್ನಾಟಕದಲ್ಲಾದಂತೆ ನನ್ನ ಕಣ್ಣಂಚಲ್ಲಿ ಅತಿವೃಷ್ಟಿ ತಂದಿದ್ದ.

ಹೀಗೆ ನನ್ನ ಈ ಕದನಕ್ಕೆ ರಾತ್ರಿಯೂ ಕದನವಿರಾಮವಿಲ್ಲದ ಹುಣ್ಣಿನ Shell ದಾಳಿಯಿಂದ ತತ್ತರಿಸಿ ನನ್ನ ಬಾಯಿ ನಾಲಗೆಗಳು ತತ್ತರಿಸಿ ಹೋಗಿದ್ದವು. ತಮ್ಮನ್ನು ತಾವೇ Surrender ಮಾಡಿಕೊಳ್ಳುವ ನಿರ್ಧಾರಕ್ಕೆ ಬರುವಂತೆ ತೋರುತ್ತಿತ್ತು. ಆದರೆ ಧೃತಿಗೆಡದ ನಾನು ನಿದ್ರಾದೇವಿಯ ಅನುಗ್ರಹವನ್ನು ಪಡೆದು ಸುಖನಿದ್ರೆಯನ್ನು ಅನುಭವಿಸಿದೆ.

ಮರುದಿನ ಎಂದಿನಂತೆ ನನ್ನ ದಿನಚರಿ ಪ್ರಾರಂಭವಾಯಿತು. ಆಗಲೇಬೇಕಲ್ಲವೆ. ಎಲ್ಲಿಂದಲೋ ಕೇಳಿಬರುತ್ತಿದ್ದ "ರಘುವಂಶ ಸುಧಾಂ.."ಎನ್ನುವ ಹಾಡಿನ ರಾಗ "ಕದನ ಕುತೂಹಲ"ವೆಂದು ಕೇಳಿ ಆಶ್ಚರ್ಯಪಟ್ಟೆ, Coincidence ಎಂದರೆ ಹೀಗಿರುವುದೇ ಎಂದು ಮನದಾಳದಲ್ಲಿ ಆಲೋಚಿಸುತ್ತಿದ್ದ ನಾನು ನನ್ನ ಬಾಯಲ್ಲಾಗುತ್ತಿದ್ದ ಕದನವೇ ಈ ಕುತೂಹಲಕ್ಕೆ ಕಾರಣ ಎನ್ನುವಂತಿತ್ತು ಆ ರಾಗ....!!

ಅಂತೂ ಇಂತೂ ಆ ದಿನ ನನ್ನ ಅಜ್ಜಿ ಅದೆಲ್ಲಿಯದೋ ಒಂದು ಬೇರಿನ ಗಂಟನ್ನು ತಂದಿದ್ದರು, ಅವರೆನ್ನುವ ಹಾಗೆ ಅದು ಸಂಧಾನ ಮಾಡುವ ವಿಚಾರದಲ್ಲಿ ಎತ್ತಿದ ಕೈ. ಆ ಸಮಯದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ತಾಷ್ಕೆಂಟ್ ಒಪ್ಪಂದದಂತಾಗದಿರಲಿ ಎಂದು ಮನಸ್ಸಿನ ಯಾವುದೋ ಒಂದು ಮೂಲೆಯಿಂದ ಕೂಗು ಕೇಳಿ ಬರುತ್ತಿತ್ತು. ಕೊನೆಯಲ್ಲಿ ನನ್ನ ಅಜ್ಜಿ ತಮ್ಮ ಬೇರುಗಳೆಂಬ ಸಂಧಾನಕಾರರನ್ನು ನನ್ನೀ ಹುಣ್ಣೆಂಬ ಉಗ್ರಗಾಮಿಗಳ ಹತ್ತಿರ ಕಳುಹಿಸಿ ತಕ್ಕಮಟ್ಟಿನ ಸುಧಾರಣೆಯಲ್ಲಿ ಯಶಸ್ವಿಯಾದರು. ಆದರೆ ಈ ಒಪ್ಪಂದ ನಮ್ಮೀ ಗೌಡರ 12-ಅಂಶಗಳಂತೆ ಅರಗಿಸಿಕೊಳ್ಳಲು ಕಬ್ಬಿಣದ ಕಡಲೆಯಂತಿತ್ತು. ಅವುಗಳಲ್ಲಿ ಕೇವಲ ಮೂರು ಅಂಶಗಳನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ.

1. ಯಾವುದೇ ಕಾರಣಕ್ಕೂ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು LOC(Line of Control)ನಲ್ಲಿ ತರಬಾರದು.
2. Heating Arguments (ಉಷ್ಣಪ್ರಕ್ರತಿಯವನಾದ್ದರಿಂದ) ಮಾಡಬಾರದು.
2. ಕಾವೇರಿ ನೀರನ್ನು ಧಾರಳವಾಗಿ ಬಾಯಿಗೆ ಬಿಡಬೇಕು (ಸಧ್ಯ ಕರುಣಾನಿಧಿ ಆ ಸಮಯದಲ್ಲಿ ಅಲ್ಲಿರಲ್ಲಿಲ್ಲ!!)

ಹೀಗೆ ಒಪ್ಪಂದದ ಪಟ್ಟಿ ಬೆಳೆದೇ ಇತ್ತು. ಇದೆಲ್ಲದಕ್ಕೂ ಮೂಕ ಪ್ರೇಕ್ಷಕನಾಗಿ ಕುಳಿತಿದ್ದ ನಾನಗೆ, ಗೌಡರ ಅಥವಾ ಕರುಣಾನಿಧಿಯವರ ಆದರ್ಶ ಪಾಲಿಸಲೋ ಎನ್ನುವ ಒಂದು ದು(ದೂ)ರಾಲೋಚನೆ ಬಂದಿತ್ತು. ಆದರೆ ಕೊನೆಯಲ್ಲಿ ನನ್ನ ಆತ್ಮ, ಯಾವುದೇ ತರಹದ ನೀಚ ಕೆಲಸ ಮಾಡಬಾರದು ಎಂದು ಆದೇಶ ಹೊರಡಿಸಿತ್ತು.

ಅಂತೂ ಇಂತೂ ಈ ಸಂಧಾನದ ಕೊನೆಯಲ್ಲಿ ನನಗಂತೂ ಗೆಲುವು ದೊರೆತಿತ್ತು. ಆದರೆ ವಚನಭ್ರಷ್ಟನಾಗುವ ಅವಕಾಶವನ್ನೇ ಬಿಟ್ಟುಬಿಡಬೇಕಾಯಿತು. ಧಾರಳವಾಗಿ ಎಣ್ಣೆ ತಿಂಡಿ ತಿನ್ನುತ್ತಿದ್ದ ನಾನು ಬದಲಿಗಾಗಿ ಹೇರಳವಾಗಿ ಕಾವೇರಿ ನೀರನ್ನು ಕುಡಿಯಲಾರಂಭಿಸಿದೆ. ಇದರಿಂದ ಸಂತೃಪ್ತಗೊಂಡ ಬಾಯಿಹುಣ್ಣುಗಳೆಂಬ ಉಗ್ರಗಾಮಿಗಳು ಕ್ರಮೇಣ ಗಡಿಪಾರಾಗತೊಡಗಿದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X