• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಂಕ ಸೀನರ ಒಂದು Encounterರಾತ್ರಿ

By Staff
|

'ಅಕ್ಟೋಬರ್ 2'ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರನ್ನು ಸ್ಮರಿಸುತ್ತ, ನಮಿಸುತ್ತ ಈ ನಗೆಗುಳಿಗೆಯನ್ನು ಸಾದರಪಡಿಸಲಾಗಿದೆ.ಯಂಕ ಮತ್ತು ಸೀನರ ಅಕ್ಟೋಬರ್ ಒಂದನೆ ತಾರೀಕಿನ ಅಪರರಾತ್ರಿ ಪ್ರಸಂಗ, ಬಾಪೂಜಿಯವರ ಜನ್ಮ ಮುನ್ನಾದಿನದ ವಿಶೇಷವಲ್ಲದ ವಿಶೇಷ!

ಶರತ್ ಯಳಂದೂರು, ಬ್ಲೂಮಿಂಗ್ಟನ್ ; ಇಲಿನಾಯ್

Kindly Excuse me, Sirಮಧ್ಯರಾತ್ರಿಯ ಸಮಯ ಯಂಕ ಸೀನ ಬೈಕಿನಲ್ಲಿ ಕೂತು ಹಾಡುತ್ತಾ ಬರುತ್ತಿದ್ದಾರೆ. 'ಕುಡಿಯೋದೆ ನಂ ವೀಕ್ನೆಸ್ಸು ಆದರು ನ್ಯಾಯಕೆ ದುಡಿಯೋದೆ ನಮ್ಮ ಬ್ಯುಸಿನೆಸ್ಸು'ಯಾವುದೋ ಚಲನ ಚಿತ್ರದ ಹಾಡು. ಯಂಕ ಬೈಕ್ ಓಡಿಸುತ್ತಿದ್ದಾನೆ. ಸೀನ ಬೈಕಿನ ಹಿಂದಿನ ಸೀಟಿನಲ್ಲಿ ಹಿಂದುಮುಂದಾಗಿ ಕೂತು ತಾನು ಬೈಕ್ ಓಡಿಸುತ್ತಿರುವಂತೆ ನಟಿಸುತ್ತಿದ್ದಾನೆ. ರಸ್ತೆಯ ಉದ್ದ ಅಗಲ ಅಳತೆ ಮಾಡಿಕೊಂಡು ಬರುತ್ತಿರುವ ಇವರ ಶೈಲಿ ನೋಡಿದರೆ ತಿಳಿಯುತ್ತದೆ ಇಬ್ಬರೂ ಸರೀಯಾಗೇ ಏರಿಸಿಕೊಂಡು ಬರುತ್ತಿದ್ದಾರೆ ಅಂತ.

ಎಡ್ಡಾದಿಡ್ಡಿ ಓಡಿಸುತ್ತಿದ್ದ ಯಂಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ. ಮುಂದೆ ರಸ್ತೆಯಲ್ಲಿ ವಯಸ್ಸಾದ ಮುದುಕನೊಬ್ಬ ಕೈಯಲ್ಲಿ ಕೋಲು ಹಿಡಿದುಕೊಂಡು ನಿಂತಿದ್ದಂಗೆ ಇದೆ. ಮುದಕನಿಗೆ ಇನ್ನೇನು ಬಯ್ಯಬೇಕು ಎಂದು ಬಾಯಿ ತೆರೆಯಲಿದ್ದ ಯಂಕನಿಗೆ ಏನೋ ಅನುಮಾನ ಬಂದು ನಾಲ್ಕೈದು ಬಾರಿ ಕಣ್ಣುಜ್ಜಿಕೊಂಡು ನೋಡಿದ ಅನುಮಾನವೇ ಇಲ್ಲ ಮುಂದೆ ನಿಂತಿರುವುದು ಮಹಾತ್ಮ ಗಾಂಧೀಜಿ. ಯಂಕನಿಗೆ ಏರಿದ್ದ ಅಲ್ಪ ಸ್ವಲ್ಪ ನಶೆಯು ಇಳಿದು ಹೋದಂತಾಯಿತು. ತಕ್ಷಣ ಹಿಂದೆ ಕುಳಿತಿದ್ದ ಸೀನನಿಗೆ 'ರಸ್ತೆಯಲ್ಲಿ ಮುಂದೆ ಗಾಂಧಿ ತಾತ ನಿಂತಿದ್ದಾರೆ'ಎಂದು ಹೇಳಿದ. ಸೀನ ಅದನ್ನು ಕೇಳಿಸಿಕೊಂಡವನೆ ಪಕಪಕನೆ ನಗತೊಡಗಿದ. 'ಲೇ ಮಗನೆ ನಾನು ಜಾಸ್ತಿ ಕುಡಿದಿದ್ದೀನಿ ಅಂತ ನಿನಗೆ ಗಾಡಿ ಓಡಿಸಲು ಹೇಳಿದೆ, ಈಗ ನೋಡಿದರೆ ನೀನೇ ಜಾಸ್ತಿ ಕುಡಿದಂಗೆ ಇದೆ' ಎಂದ. ಯಂಕನಿಗೆ ಮತ್ತೆ ಅನುಮಾನ ಬಂದು ಕಣ್ಣುಜ್ಜಿ ನೋಡಿದ ಇಲ್ಲ ಈಗಲೂ ಕಾಣಿಸುತ್ತಿದ್ದಾರೆ. ಈಗ ಬೇರೆ ಕೈ ಆಡಿಸಿ ಹತ್ತಿರ ಬರುವಂತೆ ಕರೆಯುತ್ತಿದ್ದಾರೆ.

'ಲೇ ಸೀನ ಗಾಂಧಿ ತಾತ ಕರೀತಾ ಇದ್ದಾರೆ ನೀನೇ ನೋಡಲೇ'ಅಂದ. ಹಿಂದು ಮುಂದಾಗಿ ಕುಳಿತಿದ್ದ ಸೀನ ತಿರುಗಿ ನೋಡಲೊಪ್ಪದೆ 'ಲೇ ಯಂಕ ನಿನಗೆ ಬಡಕೊಂಡೆ. ಆ ಮುನ್ನಬಾಯಿನ ಗಾಂಧೀ-ಗಿರಿ ಸಿನಿಮ ಹೆಚ್ಚಿಗೆ ನೋಡಬ್ಯಾಡ ಅಂತ. ನನ್ನ ಮಾತು ಕೇಳಕ್ಕಿಲ್ಲ ನೀನು ಈವಾಗ ನೋಡು ನಿಂಗೇ ಗಾಂಧಿ ಕಾಣಿಸ್ತಾವ್ರೆ ' ಅಂತ ಹೇಳುತ್ತ ಗಾಡಿಯಿಂದ ಕೆಳಗಿಳಿದು ತಿರುಗಿ ನೋಡುತ್ತಾನೆ ಅರ್ರೆ,ನಿಜವಾಗ್ಲು ಗಾಂಧಿ ತಾತ ನಿಂತಿದ್ದಾರೆ! 'ಲೇ ಯಂಕಾ ನನ್ಗು ಗಾಂಧಿ ತಾತ ಕಾಣಿಸ್ತಾವ್ರಲ್ಲೋ !! ಸಿನಿಮಾದಾಗೆ ಆ ಮುನ್ನಬಾಯಿ ಗಾಂಧಿ ತಾತನ ಬಗ್ಗೆ ಅದ್ಯಾವುದೋ ಪುಸ್ತಕ ಓದಿ ಓದಿ ಅಂಗೆ ಕಾಣಿಸ್ತಂತೆ ಆದ್ರೆ ನಾವ್ಯಾವ ಪುಸ್ತಕ ಓದಿದ್ದೇವಲೇ?' ಹೀಗೇ ಮಾತಾಡುತ್ತಾ ಇಬ್ಬರು ಗಾಂಧೀಜಿಯ ಹತ್ತಿರ ಬಂದು ನಮಸ್ಕರಿಸಿ ನಿಂತರು.

ಗಾಂಧೀಜಿ ಯಾಕೊ ಬಹಳ ಸಪ್ಪಗಿದ್ದರು ಯಂಕನೇ ಧೈರ್ಯ ಮಾಡಿ ಕೇಳಿದ 'ಏನು ತಾತ ಗಾಂಧಿ-ಗಿರಿ actingಮಾಡಿ ಮುನ್ನಬಾಯಿ ಜೈಲಿಗೆ ಹೋದ ಅಂತ ಬ್ಯಾಸರನಾ?' ಎನ್ನುವಷ್ಟರಲ್ಲಿ ಸೀನ ಮಧ್ಯೆ ಬಾಯಿ ಹಾಕಿ 'ತಾತ ನಾಳೆ ನಿಮ್ಮ ಉಟ್ಟಿದ ಅಬ್ಬ ಅಂತಲ್ಲ.. ಮತ್ತೆ ಉಟ್ಟಿದ ಅಬ್ಬದ ದಿನ ಇಂಗೆಲ್ಲಾ ಬ್ಯಾಸರ ಮಾಡ್ಕಬಾರ್ದು ಗಾಂಧಿ-ಗಿರಿ ಮಾಡೋರೆಲ್ಲಾ ನೊಂದುಕೊಂತಾರೆ 'ಅಂದ. ಆಗ ಗಾಂಧೀಜಿ ಮಾತಾಡತೊಡಗಿದರು; 'ಏನ್ರಪ್ಪಾ ಕುಡಿಯೋದು ಕೆಟ್ಟದ್ದು, ದೇಹಕ್ಕೆ ಒಳ್ಳೇದಲ್ಲಾ ಅಂತ ಗೊತ್ತಿಲ್ವೇನಪ್ಪಾ?'

ಆಗ ಯಂಕ ಸೀನನ ಕಡೆ ನೋಡತೊಡಗಿದ. ಇಂತಹ ಪ್ರಶ್ನೆಗಳಿಗೆಲ್ಲಾ ಸೀನನೇ ಸರಿಯಾಗಿ ಉತ್ತರಿಸುತ್ತಾನೆ ಎಂಬಂತೆ. ಆಗ ಸೀನ 'ಹೌದು ತಾತ ಕುಡಿಯೋದು ಕೆಟ್ಟದ್ದು ಅಂತ ನಮಗೂ ಗೊತ್ತು' ಅಂತ ಇನ್ನೂ ಏನೋ ಹೇಳಲಿದ್ದ. ಅಷ್ಟರಲ್ಲಿ ಗಾಂಧೀಜಿ 'ಗೊತ್ತಿದ್ದೂ ಯಾಕೆ ಕುಡೀತಿ ಮಗೂ' ಎಂದು ಪ್ರೀತಿಯಿಂದ ಕೇಳಿದರು. ಸರಿ ಸೀನ ತನ್ನ ಉತ್ತರವನ್ನು ಮುಂದುವರೆಸಿದ. 'ತಾತ ನಾವೇನೋ ವಸಿ ಬುದ್ಧಿವಂತರು ಕುಡಿಯೋದು ಕೆಟ್ಟದು ಅಂತ ನಮಗೆ ಗೊತ್ತಿದೆ. ಅಂಗಂತ ನಾವು ಕುಡೀದೆ ಒದ್ರೆ ಏಟೋ ಜನ ನಮ್ಮಷ್ಟೂ ಬುದ್ಧಿ ಇಲ್ಲದೋರು ಅದು ಕೆಟ್ಟದು ಅಂತ ತಿಳೀದೆ ನಮ್ಮ ಪಾಲಿನದು ಕುಡಿದು ಕುಡಿದು ಸಾಯ್ತಾರೆ. ಅದ್ಕೆ ನಾವೂ ಕುಡಿದು ಅವ್ರ ಸಾವನ್ನು ಸ್ವಲ್ಪ ದಿನ ಮುಂದಕ್ಕೆ ಆಕುವ ಅಂತ ಕುಡೀತೀವಿ' ಅಂದ. ತಾನೇನೋ ಮಹಾ ತ್ಯಾಗಮಯಿ ಎಂಬಂತೆ.

ಗಾಂಧೀಜಿ ಬೇಸರದಿಂದ 'ಹೇ ರಾಮ್ ಇವರಿಗೆ ನೀನೆ.....' ಅಂತ ಏನೋ ಪ್ರಾರ್ಥನೆ ಮಾಡೋಕ್ಕೆ ಹೊರಟಿದ್ದರು. ಅಷ್ಟರಲ್ಲಿ ಯಂಕ ಬಾಯಿ ಹಾಕಿ 'ಅಲ್ಲಾ ತಾತ ಆ ರಾಮಾಯಣ, ರಾಮ ಸೀತೆ, ಹನುಮ ಎಲ್ಲಾ ಕಟ್ಟೂಕತೆ ಅಂತ ನಮ್ಮ ಕೇಂದ್ರ ಸರ್ಕಾರನೇ ಯೇಳ್ತಂತಲ್ಲ' ಅಂದ. ಅದಕ್ಕೆ ಗಾಂಧೀಜಿ 'ನನ್ನ ಬೇಸರಕ್ಕೆ ಅದು ಒಂದು ಕಾರಣನಪ್ಪ' ಅಂದ್ರು. ತಕ್ಷಣ ಸೀನ 'ತಾತ ಅದಕ್ಕೆಲ್ಲಾ ನೀನು ಬ್ಯಾಸರ ಮಾಡ್ಕೊಬ್ಯಾಡ. ಎಂಗು ಒಟ್ಟೆಗೆ ಇಟ್ಟಿಲ್ಲದೆ ಏಟೊಂದು ಜನ ಉಪವಾಸ ಬಿದ್ದವ್ರೆ ಅಂತವ್ರನೆಲ್ಲಾ ಸೇರಿಸಿಕೊಂಡು ಗಾಂಧಿ-ಗಿರಿ ಮಾಡಿಬಿಡ್ತೀನಿ' ಅಂದ. ಗಾಂಧೀಜಿಗೆ ಗಾಬರಿಯಾಗಿ 'ಅವ್ರನೆಲ್ಲಾ ಸೇರಿಸಿಕೊಂಡು ಏನು ಮಾಡ್ತೀಯ ಮಗು' ಅಂದ್ರು. ಅದಕ್ಕೆ ಯಂಕ 'ಅದೇ ತಾತ ಉಪವಾಸ ಸತ್ಯಾಗ್ರಹ, ಈವಾಗ ಗಾಂಧಿ-ಗಿರಿ ಅಂದ್ರೇನೆ ಜನಕ್ಕೆ ಅರ್ಥ ಆಗೋದು'ಅಂದ .

ಆಗ ಸೀನ 'ತಾತ ನಾಳೆ ಉಟ್ಟಿದ ಅಬ್ಬಕ್ಕೆ ಏನು ವಿಸೇಸ ಕಾರ್ಯಕ್ರಮ?'ಅಂದ. ಗಾಂಧೀಜಿ ಬೇಸರದಿಂದಲೇ ಅವನಿಗುತ್ತರಿಸುತ್ತಾ 'ಎಲ್ಲಿ ಕಾರ್ಯಕ್ರಮನಪ್ಪಾ.. ಅದ್ಯಾರೋ ಯಡಿಯೂರಪ್ಪಾನಂತಲ್ಲ ಅವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮವಂತೆ ನಾಡಿದ್ದು. ಹಾಗಾಗಿ ಹಸ್ತಾಂತರ ಆಗುವುದೋ ಇಲ್ಲವೋ ಅಂತ ಜನಗಳು ಹಾಗು ಜನನಾಯಕರು ಚರ್ಚೆ ಮಾಡುತ್ತಾ ಜ್ಯೊತಿಷಿಗಳ ಹಿಂದೆ ಮುಂದೆ ಓಡಾಡಿಕೊಂಡು ಬ್ಯುಸಿಯಾಗಿದ್ದಾರೆ. ಇನ್ನು ನನ್ನ ಹುಟ್ಟಿದ ಹಬ್ಬ ಆಚರಿಸುವುದಕ್ಕೆ ಅವರಿಗೆಲ್ಲಿ ನೆನಪಿರುತ್ತೆ ? ಅದ್ಸರಿ ಈ ದೇಶದ ಮಹಾನ್ (?!) ನಾಯಕರೆ ನನ್ನ ಹುಟ್ಟಿದ ಹಬ್ಬ ಮರೆತು ದೊಂಬರಾಟ ಆಡುತ್ತಿರುವಾಗ ನಿಮಗೆ ನನ್ನ ಹುಟ್ಟಿದ ಹಬ್ಬದ ನೆನಪಿರುವುದು ಸ್ವಲ್ಪ ಸಂತೋಷಯದ ವಿಷಯವೇ' ಎಂದು ಗಾಂಧೀಜಿ ಸ್ವಲ್ಪ ತಮ್ಮ ಬೇಸರ ಕಳೆದುಕೊಳ್ಳಲು ಪ್ರಯತ್ನಿಸಿದರು.

ಆಗ ಸೀನ 'ನಮ್ಮಂತವರಿಗಲ್ಲದೆ ಇನ್ಯಾರಿಗೆ ನೆನಪಿರುತ್ತೆ ತಾತ' ಅಂದ. ಗಾಂಧೀಜಿ ಕುತೂಹಲದಿಂದ ಇವನು ಇನ್ನೇನು ಹೇಳುತ್ತಾನೆ ಅಂತ ನೋಡತೊಡಗಿದರು. ಸೀನ ಮುಂದುವರೆಸುತ್ತಾ 'ಎಂಗೆಂದ್ರೆ ನಾಳೆ Dry-Day ಅಲ್ವಾ ನಮಗೆ ನಾಳೆ ಕುಡಿಯೋಕ್ಕೆ ಎಲ್ಲೂ ಸಿಕ್ಕೋಲ್ಲಾ. ಅಪ್ಪಿ ತಪ್ಪಿ ಸಿಕ್ಕಿದರೂ ಜಾಸ್ತಿ ಬೆಲೆ ಕೊಡಬೇಕು. ಅದ್ಕೆ ಇವತ್ತೆ ಸ್ವಲ್ಪ ಜಾಸ್ತಿ ಏರಿಸಿಕೊಂಡು ಮನೆ ಕಡೆ ಒಂಟಿದೀವಿ. ನಿಮ್ಮ ಉಟ್ಟಿದ ಅಬ್ಬ ಯಾರು ಮರೆತರೂ ನಾವು ಕುಡುಕರು ಮಾತ್ರ ಮರೆಯಕ್ಕಿಲ್ಲಾ' ಅಂದ.

ಗಾಂಧೀಜಿ ಬಹಳ ವ್ಯಥೆಯಿಂದ ಇದೆಂತಾ ಕಾಲ ಬಂತಪ್ಪಾ ಶ್ರೀರಾಮಚಂದ್ರಾ ಎಂದರು . ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಕಂಡು ಯಂಕ ಸ್ವಲ್ಪ ವಿಷಯಾಂತರ ಮಾಡುವ ಅಂತ 'ಏನು ತಾತ, ಈ ಯಡ್ಡಿ ಹಾಗು ಅವರ ಚಡ್ಡೀ ಕಡೆಯವರಿಗೆ ಅಧಿಕಾರ ಹಸ್ತಾಂತರ ಆಗುತ್ತೆ ಅಂತೀಯ?'ಎಂದು ಕೇಳಿದ.

ಗಾಂಧೀಜಿ ಉತ್ತರಿಸುವ ಮೊದಲೇ ಸೀನ 'ತಾತ ಈ ಕೋಮುವಾದಿಗಳಿಗೆ ಅಧಿಕಾರ ಕೊಟ್ಟರೆ ಅಲ್ಪಸಂಖ್ಯಾತರಿಗೆ ತೊಂದರೆ ಆಗೋಯ್ತದೆ ಅಂತ ರಾಜಕೀಯ ಪಕ್ಷಗಳೆಲ್ಲಾ ಗಲಾಟೆ ಮಾಡ್ತಾವ್ರೆ 'ಅಂದ. ಆಗ ಗಾಂಧೀಜಿ ಇವರಿಬ್ಬರಿಗೂ ಸೇರಿಸಿ ಉತ್ತರಿಸುವಂತೆ 'ಅಲ್ರಪ್ಪಾ ಇದೇ ಕೋಮುವಾದಿಗಳ ಪಕ್ಷ ಇಡೀ ದೇಶವನ್ನು 5 ವರ್ಷಗಳ ಕಾಲ ಆಳಿದರು. ಅಲ್ಲದೆ ಉತ್ತರ ಭಾರತದಲ್ಲಿ ಅನೇಕ ರಾಜ್ಯಗಳನ್ನು ಆಳಿದರು ಹಾಗು ಆಳುತ್ತಿದ್ದಾರೆ. ಹೀಗಿರುವಾಗ ಕರ್ನಾಟಕವೊಂದರಲ್ಲಿ ಅಧಿಕಾರ ಅದು ದೇವೇಗೌಡರ ಮರ್ಜಿಯಲ್ಲಿ ನಡೆಸುವ ಆಡಳಿತದಿಂದ ಅಲ್ಪಸಂಖ್ಯಾತರಿಗೆ ತೊಂದರೆ ಆಗಿಹೋಗುತ್ತದೆ ಎಂದರೆ ಅದು ವ್ಯರ್ಥ ವಾದ'ಅಂದರು.

ತಕ್ಷಣ ಸೀನ 'ತಾತ ಅಲ್ಪಸಂಖ್ಯಾತರ ಚಿಂತೆ ಬಿಡು. ನಿನ್ನನ್ನು ಕೊಂದ ಅದೆಂತದೋ ಗೋಡ್ಸೆ ಈ ಚಡ್ಡೀ ಕಡೆಯವನಂತೆ. ಅಂತಾದ್ರಾಗೆ ಚಡ್ಡಿಗಳಿಗೆ ಅಧಿಕಾರ ಬಂದ್ರೆ ನಿಂಗೆ ಸಂತೋಷ ಆಯ್ತದಾ?' ಎಂದು ಕೇಳಿದ. ಯಂಕ ಕೂಡ ಈಗ ಕುತೂಹಲದಿಂದ ಗಾಂಧೀಜಿ ಏನು ಹೇಳಬಹುದು ಅಂತ ಗಾಂಧೀಜಿಯ ಕಡೆಗೆ ನೋಡತೊಡಗಿದ.

ಆಗ ಗಾಂಧೀಜಿ 'ನೋಡ್ರಪ್ಪ ಆ ಗೋಡ್ಸೆ ಕೊಂದದ್ದು ಬರಿ ಈ ದೇಹವನ್ನು. ಆದರೆ ನಿಜವಾಗಿ ಈ ಗಾಂಧಿಯನ್ನು ಕೊಂದದ್ದು ರಾಜಕೀಯ ನಾಯಕರು ಹಾಗು ಈ ದೇಶದ ಜನ. ಗಾಂಧಿ ತತ್ವ ಅಂತ ಬರೀ ಬಾಯಿ ಮಾತಲ್ಲಿ ಆಡಿದವರೆ ಜಾಸ್ತಿ. ಕಾರ್ಯಕ್ಕೆ ಇಳಿಸಿ ಅದರಂತೆ ತಮ್ಮ ಬದುಕಲ್ಲಿ ನಡೆದುಕೊಂಡವರು ಇಡೀ ದೇಶದಲ್ಲಿ ಹುಡುಕಿದರೂ ಸಿಗುವುದು ಕೇವಲ ಬೆರಳೆಣಿಕೆಯಷ್ಟು ಮಂದಿಯಷ್ಟೆ. ಉತ್ತಮವಾದ ಆದರ್ಶ, ಮೌಲ್ಯಗಳನ್ನು ಇಟ್ಟುಕೊಂಡು ದೇಶವನ್ನು ನಡೆಸಬೇಕಾದ ನಿಮ್ಮಂತ ಯುವಕರು ಹೀಗೆ ಕುಡಿದು ಮತ್ತರಾಗಿ ಬೀದಿ ಬೀದಿ ಅಲೆಯುತ್ತಿದ್ದೀರಿ. ಪುಂಡಾಟ, ಭ್ರಷ್ಟಾಚಾರಗಳಿಗೆ ಮಿತಿಯೇ ಇಲ್ಲ. ನಮ್ಮ ಸಂಸ್ಕೃತಿಯನ್ನೆಲ್ಲಾ ಗಾಳಿಗೆ ತೂರಿ ಅಂಧರಂತೆ ಪಾಶ್ಚ್ಯಾತ್ಯರನ್ನು ಅನುಸರಿಸುತ್ತಾ ದೇಶ ಮುಂದುವರೆದಿದೆ ಎಂಬ ಭ್ರಮೆಯಲ್ಲಿದ್ದೀರಿ. ಸ್ವಾತಂತ್ರ್ಯಾನಂತರ ನಮ್ಮ ದೇಶ ರಾಮರಾಜ್ಯವಾಗಬೇಕೆಂದು ನಾ ಕನಸುಕಂಡರೆ ಇಂದಿನ ಸರ್ಕಾರಗಳು ರಾಮನನ್ನೆ ಅಲ್ಲಗಳೆಯುತ್ತಿದ್ದಾರೆ. ಇನ್ನೆಲ್ಲಿಯ ರಾಮ ರಾಜ್ಯ? ಹೇ ರಾಮ್ ಈ ರೀತಿಯ ಸ್ವಾತಂತ್ರ್ಯಕ್ಕಾಗಿಯ ನಾವೆಲ್ಲಾ ದೇಶಕ್ಕಾಗಿ ಅಂದು ಮಡಿದದ್ದು? ಇದೆಲ್ಲಾ ನೆನಸಿಕೊಂಡು ಬೇಸರವಾಗಿದೆಯಪ್ಪಾ' ಎಂದು ಹೇಳಿ ಮಾತು ನಿಲ್ಲಿಸಿದರು.

ಗಾಂಧೀಜಿ ಕಣ್ಣಲ್ಲಿ ನೀರು ಜಿನುಗುವುದು ಕಂಡು ಯಂಕ ಸೀನರಿಗೆ ಏನು ಮಾತಾಡಲು ತೋರದೆ ನಿಂತಿದ್ದಾಗ, ಹತ್ತಿರದಿಂದ ಯಾವುದೋ ಬೈಕ್ ರಸ್ತೆಬದಿಯ ಕಂಬಕ್ಕೆ ದಡಾರ್ರ್ರ್ ಎಂದು ಡಿಕ್ಕಿ ಹೊಡೆದು ಮೋರಿಯಲ್ಲಿ ಬಿದ್ದಿತು. ಮೋರಿಯಿಂದ ತೂರಾಡುತ್ತಾ ಎದ್ದು ಬಂದ ಸವಾರನನ್ನು ನೋಡಿದರೆ ತಿಳಿಯುತ್ತಿತ್ತು ಎಷ್ಟು ಏರಿಸಿರಬೇಕೆಂದು. ಅವಮಾನದಿಂದ ಯಂಕ ಮತ್ತು ಸೀನ, ಗಾಂಧೀಜಿಯ ಕಡೆ ತಿರುಗಿದರೆ ಗಾಂಧೀ ತಾತ ಆಗಲೆ ಕಣ್ಮರೆಯಾಗಿದ್ದರು. ಯಂಕ ಸೀನ ಒಬ್ಬರ ಮುಖವನ್ನು ಒಬ್ಬರು ನೋಡುತ್ತಿದ್ದರು.. ನಾಳೆಯಿಂದ ತಮ್ಮ ಜೀವನ ಹೇಗಿರಬೇಕೆಂಬ ನಿರ್ಧಾರ ಇಬ್ಬರ ಕಣ್ಣುಗಳಲ್ಲು ಮಿಂಚುತ್ತಿತ್ತು.

ಭಾರತದ ನೇತಾರರನ್ನು ಭೇಟಿಮಾಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X