• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಟ್ಸ್‌ಕನ್ನಡಕ್ಕೆ ಸಂತೋಷದಿಂದ ಮರಳಿದ ಹೊಂಬೆಳಕು

By Staff
|

Shikaripura Harihareshwara, Mysoreವಾಚಕವೃಂದದಲ್ಲಿ ವಿಜ್ಞಾಪನೆಗಳು

ಪ್ರತಿನಿತ್ಯ ನಾಲಕ್ಕಾದರೂ ಕನ್ನಡ ಸಾಲುಗಳನ್ನು ಓದದಿದ್ದರೆ ನಿದ್ದೆ ಬಾರದ ಕನ್ನಡಿಗರ ಸಾಗರವೊಂದುಂಟು. ಅಂತೆಯೇ ನಿತ್ಯ ಕನ್ನಡದಲ್ಲಿ ಏನನ್ನಾದರೂ ಬರೆಯದಿದ್ದರೆ ಚಡಪಡಿಕೆಗೆ ಗುರಿಯಾಗುವ ನಾವೆಗಳೂ ಅನೇಕಾರುಂಟು. ಇಂತು, ಅನಂತದಲ್ಲಿ ಲೀನವಾಗುವ ಸಾಗರಕ್ಕೆ ನಾವೆಗಳನ್ನು ಪ್ರತಿನಿತ್ಯ ಜೋಡಿಸುವ ಅಂತರ್ಜಾಲ ಉದ್ಯಮ ಪ್ರೀತಿಯೂ ಉಂಟು.

ಕನ್ನಡಾಭಿಮಾನಕ್ಕೆ ಜೋತುಬಿದ್ದು ನಿತ್ಯ ಓದುವ ಚಟ ಅಂಟಿಸಿಕೊಂಡ ವರ್ಗಕ್ಕೂ ಹಾಗೂ ನಿಷ್ಕಲ್ಮಷ ಕನ್ನಡ ಪ್ರೀತಿಗೆ ಕಟ್ಟುಬಿದ್ದು ದಣಿವರಿಯದೆ ಬರೆಯಲು ಕುಳಿತುಕೊಳ್ಳುವ ಬರಹಗಾರ ವರ್ಗಕ್ಕೂ ಮತ್ತೊಮ್ಮೆ ನಮಸ್ಕಾರಗಳು. ಎಲ್ಲೇ ಇರು ಕನ್ನಡಿಗನಾಗಿರು ಎಂಬ ಕವಿವಾಣಿಯನ್ನು ತಮ್ಮದೇ ವಾಣಿಯಾಗಿಸಿಕೊಂಡು ಕಾಲಕಾಲಕ್ಕೆ ನಮ್ಮ ಜಾಲತಾಣಕ್ಕೆ ಬರಹ ಕಾಣಿಕೆಗಳನ್ನು ಅರ್ಪಿಸುವ ಲೇಖಕ ಸಮುದಾಯಕ್ಕೆ ನಾವು ತುಂಬಾ ಆಭಾರಿಗಳು. ವಿಶೇಷವಾಗಿ, ಅಂಕಣ ಬರಹದ ಕಾಲಚಕ್ರಕ್ಕೆ ಸಿಲುಕಿ ನಿಯಮಾನುಸಾರ ಬರೆಯುವುದನ್ನು ಕರ್ತವ್ಯವೆಂದು ಭಾವಿಸಿರುವ ಲೇಖಕರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

ದಟ್ಸ್‌ಕನ್ನಡ ಜಾಲತಾಣದಲ್ಲಿ ಅನೇಕ ಅಂಕಣಗಳು ಬೆಳಕು ಕಂಡಿವೆ. ಕಾಣುತ್ತಿವೆ. 2000 ಇಸವಿಯಲ್ಲಿ ನಮ್ಮ ವೆಬ್ ತಾಣ ಆರಂಭವಾದಾಗ ತಮ್ಮ ವೈವಿಧ್ಯಮಯ ಬರಹಗಳಿಂದ ತಾಣವನ್ನು ಸಂಪನ್ನಗೊಳಿಸಿದವರಲ್ಲಿ ಶಿಕಾರಿಪುರ ಹರಿಹರೇಶ್ವರ ಅಗ್ರಗಣ್ಯರು. ಆಗ ಅವರು ಅಮೆರಿಕದಲ್ಲಿದ್ದರು. ವಿಶ್ರಾಂತ ಜೀವನಕ್ಕೆ ಭಾರತಕ್ಕೆ ಮರಳಿ ಈಗ ಮೈಸೂರು ವಾಸಿಯಾಗಿರುವ ಹರಿ ದಟ್ಸ್‌ಕನ್ನಡದಲ್ಲಿ ತಮ್ಮ ಅಂಕಣವನ್ನು ಪುನರಾರಂಬಿಸುತ್ತಿದ್ದಾರೆ. Return for the good ಎನ್ನೋಣವೆ ! ಬರಮಾಡಿಕೊಳ್ಳಿ- ಸಂಪಾದಕ

***

ಈ ಜನಪ್ರಿಯ ಜಾಲತಾಣದಲ್ಲಿ, ನನ್ನ ನೆಚ್ಚಿನ ಅಂಕಣ 'ಹೊಂಬೆಳಕ ಹೊನಲಿ"ಗೆ ಬರೆಯುವುದನ್ನ ನಿಲ್ಲಿಸಿ ಸುಮಾರು ನಾಲ್ಕು ವರುಷಗಳು ಸಂದಿವೆ. ಹೊಸವರ್ಷ ಆರಂಭದಲ್ಲಿ ಅಂಕಣವನ್ನು ಮತ್ತೆ ಬರೆಯಲು ಮುಂದಾಗಿದ್ದೇನೆ. ಈ ಪುನರಾಗಮನದ ಸಮಯದಲ್ಲಿ, ಹೊಸಿಲು ದಾಟಿ ಮತ್ತೆ ಒಳ ಬರುವ ಮುನ್ನ ನಿಮ್ಮೊಡನೆ ಹಲವು ಹತ್ತು ವಿಚಾರಗಳನ್ನ ಮೊದಲೇ ಹಂಚಿಕೊಳ್ಳುವ ಅಭಿಲಾಷೆಯೇನೋ ಇದೆ. ಆದರೆ, ಅದಕ್ಕಾಗಿ ಅನಿರ್ದಿಷ್ಟವಾಗಿ ನಿಮ್ಮ ಅಮೂಲ್ಯ ಕಾಲ ಮತ್ತು ಜಾಲತಾಣದ ಜಾಗ ಹರಣ ಮಾಡುವ ಉದ್ದೇಶ ನನಗಿಲ್ಲ.

ಒಂದಂತೂ ನಿಜ: ಹಿಂತಿರುಗಿ ಬರುವ ವೇಳೆಗೆ ಸೇತುವೆಯಡಿ ಬಹಳ ನೀರು ಹರಿದು ಹೋಗಿಯಾಗಿದೆ. ಉದ್ಯಾನವನದಲ್ಲಿ ಹೊಸಹೊಸ ಸಸಿ ಬಳ್ಳಿ ಗಿಡ ಮರಗಳು ಮೇಲೆದ್ದು, ಚಿಗುರಿ, ಹೂ ಕಾಯಿ ಹಣ್ಣುಗಳನ್ನು ಬಿಟ್ಟು ಸಮೃದ್ಧವಾಗಿ ತಲೆಯೆತ್ತಿವೆ. ಅಂದು ನೆಟ್ಟ ತೆಂಗಿನ ಮರಗಳಲ್ಲಿ ಕಾಯಿಗೊಂಚಲುಗಳು ತೂಗಾಡುತ್ತಿವೆ. ಆಗ ಮೊಟ್ಟೆಯೊಡೆದು ಹೊರಬರುತ್ತಿದ್ದ ಎಷ್ಟೋ ಮರಿ ಹಕ್ಕಿಗಳು ಬೆಳೆದು, ಗರಿಗೆದರಿ ಹಾರಾಡಿಕೊಂಡು ಈಗ ಬಾನಾಡಿಗಳಾಗಿವೆ- ಇವೆಲ್ಲ ಸಂತೋಷ ತರುವ ವಿಚಾರ. ಎಷ್ಟು ನೀರೆರೆದು ಪೋಷಿಸಿದರೇನು, ಅಂತಃಸತ್ವದ ಕೊರತೆಯೇ ಕುತ್ತಾಗಿ, ಹಲವು ಗಿಡಗಳು ಪ್ರಖರ ಬಿಸಿಲಿನ ಝಳವನ್ನು ತಾಳಲಾರದೆ, ಗಾಳಿ ಚಳಿ ಮಳೆಗಳ ಹೊಡೆತಗಳನ್ನು ತಡೆದುಕೊಳ್ಳಲಾಗದೆ, ಬಾಡಿಹೋದದ್ದೂ ಗೋಚರವಾಗುತ್ತಿದೆ.

ಏನುಮಾಡಲಾದೀತು? ಹೇಳಿ ಕೇಳಿ ಇದು ಸ್ಫರ್ಧೆಯ ಆಡುಂಬೊಲ. ಓಡಬೇಕು, ಇಲ್ಲವೇ ಓಡುವವರಿಗೆ ಎಡೆಮಾಡಿಕೊಡಲು ಪಕ್ಕಕ್ಕೆ ಸರಿದು ನಿಲ್ಲಬೇಕು! ಆದರೆ, ಓಡಿದವರೆಲ್ಲ ಗೆದ್ದೇ ಗೆಲ್ಲುತ್ತಾರೆಂಬ ಭ್ರಮೆ ಯಾರಿಗೂ ಇಲ್ಲ; ನೋಡುವವರಿಗಂತೂ ಇಲ್ಲವೇ ಇಲ್ಲ. ಮಳೆ ಬಂದರೂ ಕಾಮನ ಬಿಲ್ಲು ಮೂಡುವುದೆಂಬ ನಿಯಮವಂತೂ ಇಲ್ಲ. ಹೊಸ ನೀರು ಬಂದು, ಹಳೆಯ ನೀರು ಕೊಚ್ಚಿಕೊಂಡು ಹೋಗುವುದು ಪ್ರಕೃತಿ ನಿಯಮ, ಋತ; ಋತ ಒಂದೇ ಗೆಲ್ಲುವುದು, ಬೇರಲ್ಲ!

***

ಸ್ವಲ್ಪ ಆತ್ಮಕಥನ ಮಾಡಿಕೊಳ್ಳುತ್ತೇನೆ: ಅಂಕಣಕ್ಕೆ ಬರೆಯುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದಾಗ, ಬರಹಗಾರನೊಬ್ಬನಿಗೆ ಜನ ಏನು ಹೇಳುತ್ತಾರೆ? ಆತ್ಮೀಯರಾದವರು ಕಾಗದಗಳನ್ನು ಬರೆದು, ಫೋನ್ ಮಾಡಿ, ಕಂಡಾಗ ಬಿರು ನುಡಿದು, ಏಕೆ ನಮ್ಮೊಡನೆ ಮಾತನಾಡುವುದನ್ನ ನಿಲ್ಲಿಸಿದಿರಿ, ನಿಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳುವುದನ್ನ ಹೀಗೇಕೆ ಕಡೆಗಣಿಸಿದಿರಿ- ಎಂದೆಲ್ಲ ಜಗಳವಾಡುತ್ತಾರೆ. ಏನೇನೋ ಸಬೂಬು, ನೆಪ, ಕಾರಣಗಳನ್ನು ಆಗ ನಾನೂ ಮುಂದೊಡ್ಡುತ್ತೇನೆ. ನಾವು ಅಮೆರಿಕಾದಲ್ಲಿ "ಅಮೆರಿಕನ್ನಡ" ಪತ್ರಿಕೆ ನಡೆಸುತ್ತಿದ್ದಾಗ, ಸಹೃದಯ ಲೇಖಕರಿಗೆ ನನ್ನ ಹೆಂಡತಿ ನಾಗಲಕ್ಷ್ಮಿ ಮತ್ತು ನಾನು "ದಿನವೂ ಬರೆಯದಿದ್ದರೆ, ನಿಮ್ಮ ಲೇಖನಿ ಮೊಂಡು ಆಗಿ ತುಕ್ಕು ಹಿಡಿದು ಹೋಗುತ್ತದೆ, ಬರೆಯಿರಿ" ಎಂದು ದುಂಬಾಲು ಬೀಳುತ್ತಿದ್ದಂತೆ, ಬಲ್ಲವರು ನನಗೂ ಹಿತವಚನ ಹೇಳುತ್ತಾರೆ.

ಭರತಖಂಡಕ್ಕೆ ಮರಳಿ ಮೈಸೂರಿನಲ್ಲಿ ನಿವೃತ್ತ ಜೀವನದ ಆರಂಭಿಸದ ಮೇಲೆ ಇಲ್ಲಿ ಓದಲು ನನಗೆ ಸಾಕಷ್ಟು ವೇಳೆ ಸಿಗುತ್ತದೆ. ವಿಪುಲವಾಗಿ ವಿಧ ವಿಧ ಸಾಮಗ್ರಿ ಸಿಕ್ಕು, ಅದರಲ್ಲಿ ಮುಳುಗುತ್ತೇನೆ. ಓದು ಬರಹದ ಶತ್ರು- ಎನ್ನುತ್ತಾರೆ; ಅದರ ಜೊತೆಗೆ, ಭಾಷಣವನ್ನೂ ಸೇರಿಸಿದರೆ ಅರ್ಥವತ್ತಾಗಿ ಇರುತ್ತೇನೋ. ಇಲ್ಲಿನ ಪತ್ರಿಕೆಗಳಿಗೆ, ಅಂಕಣ ಬರೆಯುತ್ತೇನೆ; ಸಂಭಾವನಾ ಗ್ರ೦ಥಗಳಿಗೆ, ವಿಶೇಷ ಸಂಪುಟಗಳಿಗೆ ಸಂಶೋಧನಾತ್ಮಕ ಪ್ರಬಂಧ ರಚಿಸಿ, ಕಳುಹಿಸುತ್ತೇನೆ; ಕೇಳಿ ಬಂದವರ ಹಿರಿ-ಕಿರಿಯರ ಗ್ರಂಥಗಳಿಗೆ ಮುನ್ನುಡಿಯ ತಿಲಕಗಳನ್ನಿಡುತ್ತೇನೆ, ಬೆನ್ನುಡಿಯ ಪರಿಚಯಾತ್ಮಕ ಷಹಭಾಸಗಿರಿಯನ್ನೂ ತಟ್ಟ ತೊಡಗುತ್ತೇನೆ; ಖುಷಿ ಪಡುತ್ತೇನೆ. ಶುಕ್ರವಾರ ಶನಿವಾರ ಭಾನುವಾರಗಳೆಲ್ಲ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಲೇ ಇದ್ದರೆ, ಬಿಡುವೆಲ್ಲಿಂದ ಬರಬೇಕು- ಕುದುರೆ ಎತ್ತೆತ್ತಲೋ ಓಡುತ್ತದೆ. ಹೀಗಾಗಿ, ಇಲ್ಲಿನ ಅಂಕಣದ ಪ್ರಾಂಗಣದ ಓಟಕ್ಕಾಗಿ ಎಂದು ಹೊಡೆದಿದ್ದ ಶಿಸ್ತಿನ ಲಾಳಗಳು ಈ ಹುಚ್ಚಾಟದಲ್ಲಿ ಸವೆದು ಹೋಗಿ ಬಿಡುತ್ತವೆ.

***

ಮೊನ್ನೆ ನನ್ನ ಸ್ನೇಹಿತರಿಗೆ ಕೆಲವರಿಗೆ ಕಾಗದ ಬರೆದೆ: ಮತ್ತೆ ವಾರಕ್ಕೊಮ್ಮೆ ಲೇಖನ ಬರೆದು ಹೊಂಬೆಳಕ ಹೊನಲಲ್ಲಿ ಮೀಯಲು ಸಂಪಾದಕರು ಕೇಳಿಕೊಂಡಿದ್ದಾರೆ; ನಿಮ್ಮ ಸಲಹೆ ಸೂಚನೆಗಳನ್ನು ಕೊಟ್ಟು ಉಪಕರಿಸಿ- ಅಂತ. ಒಡನೆಯೇ, ತುಂಬಾ ಜನ ಸಹೃದಯರು ನನಗೆ ಮಾರುತ್ತರಿಸಿ, ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹಂಚಿಕೊ೦ಡಿದ್ದಾರೆ; ಅವರ ಆಭಿಮಾನಕ್ಕೆ ನಾನು ಚಿರಋಣಿ. ಜೊತೆಗೆ, ದಟ್ಸ್‌ಕನ್ನಡ ಜಾಲತಾಣದ ಸಂಪಾದಕರಾದ ಶಾಮಸುಂದರ ಅವರು ಕೆಲವು ಮುನ್ಸೂಚನೆಗಳನ್ನೂ ಕೊಟ್ಟು ಎಚ್ಚರಿಸಿದ್ದಾರೆ. ಬರೀ ಒಳ್ಳೆಯ ಮಾತುಗಳಿಗೇ ಮೀಸಲಿಟ್ಟು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿ, ಗುದ್ದಲಿಯನ್ನ ಗುದ್ದಲಿಯೆಂದೇ ಕರೆದು ಗುದ್ದಿದರೆ ತಪ್ಪೇನು- ಎನ್ನುತ್ತಾರೆ ಅವರು.

ಗೋಳದ ಆ ಮೂಲೆಯಿಂದ ಈ ಮೂಲೆಗೆ ಎಲ್ಲೆಲ್ಲೋ ಸುತ್ತಾಡಿ ಬಂದವರು, ಕನ್ನಡಕ್ಕಾಗಿ ಕೈ ಸುಟ್ಟುಕೊ೦ಡವರು, ನಿಮ್ಮ ಹಣೆಯಕುಂಕುಮವನ್ನೇ ಎಷ್ಟೋ ಖಾಲಿ ಹಣೆಗಳಿಗೆ ಹಚ್ಚಿ ಸಿಂಗರಿಸಿದವರು, ನಿಮ್ಮ ಅಪೂರ್ವ ಸಿಹಿ-ಕಹಿ ಅನುಭವಗಳನ್ನು ನುಂಗಿ ಏಕೆ ಇಂಗಿಸಿಕೊಳ್ಳುತ್ತೀರಿ? ಯಥೋಚಿತ ಬರಹಕ್ಕಿಳಿಸ ಬೇಡವೇ?- ಛೇಡಿಸುತ್ತಾರೆ, ಲೇವಡಿ ಮಾಡುತ್ತಾರೆ. ಅವರೆಲ್ಲರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂಬ ಆಶಾಭಾವನೆ ನನ್ನದು. ಲೇಖಕರ ಬೌದ್ಧಿಕ ವ್ಯಾಯಾಮದ ಫಲವಾಗಿ, ಕೆಲವರಿಗಾದರೂ ಕಿಂಚಿತ್ತು ಪ್ರಯೋಜನವಾದರೆ ಅದೇ ಬರಹಗಾರರ ಶ್ರಮದ ಸಾರ್ಥಕ್ಯ. ಇನ್ನು ಈಗ ಸಾಕು- ಎಂದು ನನಗೆ ಅನ್ನಿಸುವವರೆಗೂ ಬರೆಯಲು ಪ್ರಯತ್ನಿಸುವೆ. ಮೊದಲ ಕಂತಿನದಾಗಿ,ನೀವೀಗ ಓದುತ್ತಿರುವ ಪತ್ರಿಕೆಯ ಬಗ್ಗೆಯೇ ನಾಲ್ಕು ಮಾತುಗಳನ್ನು ಬರೆಯುತ್ತೇನೆ:

***

ಕಿರುತೆರೆ ಬೆಳ್ಳಿತೆರೆ ದೂರದರ್ಶನ ನೃತ್ಯ ನಾಟಕಗಳಂತಹ ದೃಶ್ಯಮಾಧ್ಯಮ, ಆಕಾಶವಾಣಿ ಧ್ವನಿಸುರುಳಿ ಧ್ವನಿಮುದ್ರಿಕೆಗಳಂಥ ಶ್ರವ್ಯಮಾಧ್ಯಮಗಳ ಪ್ರಭಾವ ಎಷ್ಟೇ ದಟ್ಟವಾಗಿ ನಮ್ಮ ಸುತ್ತ ಮುತ್ತ ಹಬ್ಬಿದ್ದರೂ, ಈ ಕಂಪ್ಯೂಟರ್ ಯುಗದಲ್ಲೂ ಓದಿನ ಬಗ್ಗೆ ಒಲವು ಕುಂಠಿತವೇನೂ ಆಗಿಲ್ಲ- ಹೌದು, ನಾವು ಓದುತ್ತೇವೆ. ನಾವು ಏನು ಓದುತ್ತೇವೆ ಅನ್ನುವುದು ನಮ್ಮ ಆಸಕ್ತಿಯನ್ನ ಅವಲಂಬಿಸಿದೆ. ಕಾಲ ಕಳೆಯುವುದಕ್ಕೆ ಕೈಗೆ ಸಿಕ್ಕಿದುದರ ಮೇಲೆ ಕಣ್ಣಾಡಿಸುವುದು ಬೇರೆ. ಓದಬೇಕು ಅಂತ ಮನಸನ್ನ ಅದರಲ್ಲಿ ಮುಳುಗೇಳಿಸುವುದು ಬೇರೆ. ಒಂದು ಭ್ರಾಮಕ ಪ್ರಪಂಚದ ಕಲ್ಪನಾ ಲೋಕದಲ್ಲಿ, ಫ್ಯಾಂಟಸಿಯಲ್ಲಿ, ಸ್ವಲ್ಪ ಹೊತ್ತು ಮೈಮರೆತು ಕನಸುಗಾಣುತಲಿದ್ದು, ಬಿದ್ದು, ಎದ್ದು ಬರುವ ಕತೆ ಕಾದಂಬರಿಗಳ ಓದು ಒಂದು ಬಗೆಯದು.

ಅತ್ತ ಇತ್ತ ಏನಾಗುತ್ತಿದೆ, ಯಾರು ಯಾರು ಏನು ಆಡುತ್ತಿದ್ದಾರೆ, ಮಾಡುತ್ತಿದ್ದಾರೆ, ಮಾತಾಡುತ್ತಿದ್ದಾರೆ, ಎಲ್ಲಿಂದೆಲ್ಲಿಗೆ ಓಡಾಡುತ್ತಿದ್ದಾರೆ, ಒಳಹೊಕ್ಕು ನೋಡುತ್ತಿದ್ದಾರೆ, ಕಾಡುತ್ತಿದ್ದಾರೆ, ಬೇಡುತ್ತಿದ್ದಾರೆ, ಮನದಾಳವನ್ನು ತೋಡಿಕೊಳ್ಳುತ್ತಿದ್ದಾರೆ- ಎನ್ನುವುದರ ಮಾಹಿತಿಗಳನ್ನ ಸದ್ಯದ ಮಟ್ಟಕ್ಕೆ ಮುಟ್ಟಿಸಿ ಇಟ್ಟುಕೊಳ್ಳುವುದಕ್ಕಾಗಿಯಾದರೂ ನಾವು ಸುದ್ದಿ ಪತ್ರಿಕೆಗಳಿಗೆ ಶರಣು ಹೋಗುತ್ತೇವೆ. ಬಗೆ ಬಗೆಯ ಅಭಿರುಚಿಗಳಿಗೆ ತೃಪ್ತಿಕರ ಸ್ವಾದಿಷ್ಟ ಸಾಮಗ್ರಿಯನ್ನು ಒದಗಿಸುವ ಪತ್ರಿಕೆಯೊಂದು ನಮಗೆ ಸಿಕ್ಕಿತೋ, ನಾವದನ್ನು ಓದದೇ ಬಿಡುವುದಿಲ್ಲ. ಆ ನಿಯತಕಾಲಿಕವನ್ನ ನಮ್ಮ ಜೀವನದ ಅಂಗವನ್ನಾಗಿಸಿಕೊಳ್ಳುವುದರಲ್ಲೂ ಹಿಂದೆ ಮುಂದೆ ನೋಡುವುದಿಲ್ಲ.

ಪತ್ರಿಕೆ ಅನ್ನುವುದು, ಅದು ದೈನಿಕವಾಗಿರಲಿ, ಸಾಪ್ತಾಹಿಕ ಪಾಕ್ಷಿಕ ಮಾಸಿಕ ವಾರ್ಷಿಕ ಅಥವಾ ಸಂಸ್ಮರಣಾತ್ಮಕವಾಗಿರಲಿ- ತನ್ನ ಓದುಗರ ಆಸಕ್ತಿ ಅಭಿಲಾಷೆ ಆಶೋತ್ತರಗಳನ್ನ ಪ್ರತಿಬಿಂಬಿಸುವ ಒಂದು ಸಮರ್ಥ ವೇದಿಕೆ. ಅವರು ಏನು ಬಯಸುತ್ತಾರೆ ಅನ್ನುವುದನ್ನ ಓದುಗರಿಗೆ ಉಣಬಡಿಸುವುದರ ಜೊತೆ ಜೊತೆಗೆ, ಅವರ ಬಯಕೆಗಳು ಕಾಮನೆಗಳು ಯಾವ ದಿಕ್ಕಿನಲ್ಲಿ ಸಂಚರಿಸಹೊರಟರೆ ಅವರಿಗೂ, ಸಮಾಜಕ್ಕೂ ಕ್ಷೇಮ ಅನ್ನುವುದು ಪತ್ರಿಕೆ ನಡೆಸುವವರ ಮನದ ಮಿಡಿತವಾಗಿರುತ್ತೆ. ಪೂಜೆ ನೆಗಳ್ತೆ ಲಾಭವೂ ಬೇಕು, ಈ ಯಶಸ್ಸು, ಅರ್ಥದ ಗಳಿಕೆ, ಶಿವೇತರವಲ್ಲದುದರ ಅಳಿವಿನ ಜೊತೆಗೆ, ಸದ್ಯ ಪರ ನಿವೃತ್ತಿಯೂ ಬೇಕು. ಅಂದರೆ ಸಮಾಜದ ಇಂದಿನ ಮುಂದಿನ ಒಳಿತಿನ ಬಗ್ಗೆ ಕಾಳಜಿಯೂ ಸಹ ಒಂದು ಒಳ್ಳೆಯ ಪತ್ರಿಕೆಯ ಮೂಲ ಉದ್ದೇಶವಾಗಿರುತ್ತದೆ.

ಪ್ರತಿಭಾವಂತ ಬರಹಗಾರರ ಮೌಲಿಕ ಚಿಂತನೆಗಳಿಗೆ ಇಲ್ಲಿ ಮುಕ್ತ ಅವಕಾಶಗಳನ್ನ ಯಥೋಚಿತವಾಗಿ ಕಲ್ಪಿಸಿಕೊಡುತ್ತ ಅವರನ್ನ ಪತ್ರಿಕೆ ಬೆಳೆಸುತ್ತದೆ, ತಾನೂ ಬೆಳೆಯುತ್ತದೆ. ತನ್ನ ಬುಡದಲ್ಲಿ ಏನೂ ಬೆಳೆಯದ, ಬಿಳುಲುಗಳ ಜಾಲದ ಆಲದ ಮರವಾಗುವುದಿಲ್ಲ; ಅದು ಹಲವು ಬಗೆಯ ಧ್ವನಿ ಧ್ವಾನ ರವ ಸ್ವನ ನಾದ ನಿನಾದ ಇಂಚರಗಳ, ಕೂಜನಗಳ ಕೊರಳ ಪರವೆಗಳು, ಹಕ್ಕಿಗಳು ಗೂಡುಕಟ್ಟಲು ಎಡೆಮಾಡಿಕೊಡುವ ರೆಂಬೆಕೊಂಬೆಗಳ ಅರಳಿ ಮರವಾಗಿರುತ್ತದೆ- ಈ ಬಗೆಯ ಆದರ್ಶ ಪತ್ರಿಕೆ.

ಹಕ್ಕಿಗಳು ಎಂದೆನೇ, ಚಿಂತನೆಗಳ ಬಣ್ಣ ಬಣ್ಣದ ಹಕ್ಕಿಗಳು ಗರಿಗೆದರಿ ಹಾರಾಡುವುದೂ ಈ ಬಗೆಯ ಪತ್ರಿಕೆಯ ಆಗಸದಲ್ಲೇ; ವಿಚಾರ ಆಚಾರವಾಗಿ ಪ್ರಚಾರಗೊಳ್ಳುವುದೂ ಈ ಮಾದರಿ ನಿಯತಕಾಲಿಕದ ಬಾಂದಳದಲ್ಲೇ. ವಲಸೆ ಹೋದಲ್ಲೂ, ತಂಗಿದ ಹುಲ್ಲುಗಾವಲುಗಳಲ್ಲೂ ನಮ್ಮ ನಮ್ಮ ಜೀವನದ ಮಟ್ಟವನ್ನು ಉತ್ತಮಪಡಿಸಿಕೊಂಡ ಬಳಿಕ, ನಾವಾಡುವ ನುಡಿಯ ಗರಿಮೆ ಹಿರಿಮೆ, ನಮ್ಮ ನಾಡಿನ ಹೆಗ್ಗಳಿಕೆಯ ನೆನಕೆ, ಶಾಂತಿಯುತ ಸಹಬಾಳ್ವೆ, ತೌರಿನಲ್ಲಿಯೇ ಇರುವ ಸಿಗುವ ತರಿಸಿಕೊಳ್ಳುವ ಎಲ್ಲ ಸಂಪನ್ಮೂಲಗಳ ಸದ್ಬಳಕೆ, ತನ್ಮೂಲಕ ನಮ್ಮ ನುಡಿಗೂ ನಾಡಿಗೂ ಸಂಸ್ಕೃತಿಗೂ ವಿಶ್ವಮಾನ್ಯತೆ- ಇದೇ ಅಲ್ಲವೇ ನಮ್ಮೆಲ್ಲರದಾಗುವ ಹೆಬ್ಬಯಕೆ? ಆ ಗುರಿಯತ್ತ ಹಲವು ಹೆದ್ದಾರಿಗಳನ್ನು ಹುಡುಕಲು, ಹೆಮ್ಮೆ ತರುವ ಆ ಸಂತೋಷವನ್ನು ಇಮ್ಮಡಿಕೊಳ್ಳುವುದಕ್ಕೆ ಸಾಧನಮಾಧ್ಯಮವಾಗಿ ತಾನೆ ಇದೆ ನಮ್ಮ ಈ ಆದರ್ಶ ಪತ್ರಿಕೆ?

ಹಲವಾರು ಸಾಧನೆಗಳಿಂದ ತನ್ನ ಹೆಚ್ಚುಗಾರಿಕೆಯನ್ನು ಮೆರೆಯುತ್ತಿರುವ, ಕಾಲಕಾಲಕ್ಕೆ ವಿಕ್ರಮಗಳನ್ನು ಸ್ಥಾಪಿಸಿರುವ, ಓದುಗರನ್ನು ಬೆಳೆಸಿ ತಾನೂ ಬೆಳೆಯುತ್ತಿರುವ, ಈಗ ನೀವು ಓದುತ್ತಿರುವ, ನಮ್ಮ ಈ ಅನುಕ್ಷಣದ ಅಂತರ್ ಜಾಲ ಪತ್ರಿಕೆ ಇನ್ನೂ ಮೈತುಂಬಿಕೊಂಡು ವಿಜೃಂಭಿಸಲಿ. ಈ ಅಂಕಣದ ಲೇಖನಗಳೂ ಸಹ ಇನ್ನಿತರರ ಬರೆಹಗಳೊಂದಿಗೆ ಈ ಜ್ಞಾನದಾಸೋಹಕ್ಕೆ ಪೂರಕವಾಗಿರಲಿ ಎಂದು ಹಾರೈಸುವೆ. ಬೇಕು ಬಹುದು ಬೇಡ-ಗಳನ್ನು ತಿಳಿಸುತ್ತ, ನೀವೂ ಪ್ರತಿಕ್ರಿಯಿಸುತ್ತ, ಜೊತೆಗಿರುವಿರಿ ತಾನೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more