ಮೈಸೂರಿನಲ್ಲಿ ಕಾವ್ಯೋಪಖ್ಯಾನ

ಮೈಸೂರಿಗೂ ಹಬ್ಬಿರುವ ಕವನ ವಾಚನ ಸಂಸ್ಕೃತಿಯಲ್ಲಿ ತಾವೂ ಬೆರೆತುಹೋದ ಬಗೆಗೆ, ಮತ್ತು ತಾವೇ ರಚಿಸಿ ಓದಿದ ಕವನದ ಬಗ್ಗೆ ಲೇಖಕರು ಬರೆದಿದ್ದಾರೆ.

ಶಿಕಾರಿಪುರ ಹರಿಹರೇಶ್ವರ, ಮೈಸೂರು

ಹೋದ ವಾರ ನಾಗಲಕ್ಷ್ಮಿ ಮತ್ತು ನಾನು ಒಂದೊಂದು ಕವನವನ್ನು ಬರೆದು ಸಭಿಕರೆದುರು ಓದಿದೆವು. ಅದರಲ್ಲೇನಿದೆ ವೈಶಿಷ್ಟ್ಯ; ಹಿಂದೆಯೂ ನೀವು ಅಮೆರಿಕನ್ನಡ ನಡೆಸುತ್ತಿದ್ದಾಗ ನೆಲಸಿದ್ದ ಅಮೆರಿಕದಲ್ಲೂ, ಭೇಟಿಯಿತ್ತಾಗ ಭಾರತದಲ್ಲೂ ಹೀಗೆಯೇ ಸಮಯ ಸಿಕ್ಕಾಗಲೆಲ್ಲಾ ಆಗಾಗ್ಗೆ ಓದುತ್ತಲೇ ಇದ್ದಿರಲ್ಲ, ಈಗೇನು ಹೊಸತಿಲ್ಲಿ?- ಎಂದು ಆಕ್ಷೇಪಿಸ ಬೇಡಿ. ತಾಳಿ, ಸ್ವಲ್ಪ ಪೀಠಿಕೆ ಹಾಕಿ, ಮುಂದುವರಿಯುವೆ.

ಮೈಸೂರಿನಲ್ಲಿ ಒಂದು ಅದ್ಧೂರಿಯ ಸಮಾರಂಭ ನಡೆಯಿತು. ಇತ್ತೀಚೆಗೆ ಜರುಗಿದ ಒಂಬತ್ತನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಕಾರಣಗಳಿಗಾಗಿ ವಿಶಿಷ್ಟವಾಗಿತ್ತು. ಈ ಸಮಾರಂಭದಲ್ಲಿ ನಡೆದ ಸಂಕೀರ್ಣ ಕವಿಗೋಷ್ಠಿಯಲ್ಲಿ ಕವಿತೆ, ವಚನ, ಚುಟುಕು ಮುಕ್ತಕಗಳು ಮತ್ತು ಶಿಶುಗೀತೆಗಳ ವಾಚನ ಸಮ್ಮಿಳಿತವಾಗಿತ್ತು. (ಈ ಸಂಕೀರ್ಣ ಕವಿಗೋಷ್ಠಿಯಲ್ಲಿ ತಮ್ಮ ಕವನವನ್ನು ವಾಚಿಸಿ, ವೇದಿಕೆಯಿಂದ ಕೆಳಗಿಳಿದು, ಮನೆಗೆ ಹೋಗಿ, ಹೃದಯಾಘಾತದಿಂದ ಕೊನೆಯುಸಿರೆಳೆದ ಆ ವಿದೇಶವಾಸಿ ಕವಿಯ ಆತ್ಮಕ್ಕೆ ಶಾಂತಿ ಕೋರೋಣ).

ಇದಲ್ಲದೆ, ಇದರ ಹಿಂದಿನ ದಿನದ, ಬಹುಶಃ ನಾಡಿನಲ್ಲೇ ಮೊಟ್ಟ ಮೊದಲಬಾರಿ ಪ್ರಯೋಗಗೊಂಡ, ಅಲ್ಲಿನೆಲ್ಲರ ಗಮನ ಸೆಳೆದ, ಒಂದು ವಿಶಿಷ್ಟ ಕಾರ್ಯಕ್ರಮವೆಂದರೆ- ಅದು, ಈ ಸಖೀಗೀತ! ಅದೊಂದು ಕವಿ ದಂಪತಿಗಳ ಕಾವ್ಯೋತ್ಸವ. ನವೋಲ್ಲಾಸದ ದಾಂಪತ್ಯ ಗೀತೆಗಳ ಸೊಗಸು, ದಾಂಪತ್ಯ-ಉಪಖ್ಯಾನದೊಳು ಒಂದು ಸಂಜೆ, ದಾಂಪತ್ಯದಲ್ಲಿನ ಅನುರಾಗ ಚಿಂತನ- ಎಂದೆಲ್ಲ ಪತ್ರಿಕೆಗಳು ಹೊಗಳಿ ಹಾಡಿದ ಈ ವಿಶಿಷ್ಟ ಕಾರ್ಯಕ್ರಮ ಹಲವರ ನೆನಪಿನಲ್ಲಿ ಹಸಿರಾಗಿ ಉಳಿಯುವ ಸಮಾರಂಭವಾಗಿತ್ತು. ಅಲ್ಲಿ ನಾವು ವಾಚಿಸಿದ ಕವನಗಳ ಬಗ್ಗೆ ಕೊನೆಯಲ್ಲಿ ಚರ್ಚಿಸೋಣ.

****

ಮೈಸೂರಿನಲ್ಲಿ, ಕನ್ನಡನಾಡಿನ ಇನ್ನಿತರ ಕಡೆಗಳಲ್ಲಿ ಇತ್ತೀಚೆಗೆ ಸಾಹಿತ್ಯಕ ಸಮಾರಂಭಗಳ ಅಂಗವಾಗಿ ಕವಿಗೋಷ್ಠಿಗಳನ್ನು ಏರ್ಪಡಿಸುವುದು ಸಾಮಾನ್ಯವಾಗಿದೆ. ಒಂದು ಪುಸ್ತಕದ ಲೋಕಾರ್ಪಣೆ (ಅದನ್ನು ಬಿಡುಗಡೆ ಎಂದು ಹಿಂದೆ ಕರೆಯುತ್ತಿದ್ದೆವು), ವಿಚಾರ ಸಂಕಿರಣ, ಉಪನ್ಯಾಸ, ಇನ್ನಿತರ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಾಗಲೀ- ಸಾಹಿತ್ಯಾಸಕ್ತರನ್ನು ಒಂದುಗೂಡಿಸಲು ಒಂದು ಕವಿಗೋಷ್ಠಿಯನ್ನು ಏರ್ಪಡಿಸುವುದು ಪ್ರಚಲಿತ ಪದ್ಧತಿಯಾಗಿದೆ. ಸ್ವರಚಿತ ಕವನಗಳನ್ನ ವಾಚಿಸುವ ಕವಿಗೊಂದಿಗೆ ಆ ಕವನಗಳನ್ನ ಬೇರೊಬ್ಬರು ಹಾಡುವ ಕಾವ್ಯ-ಗಾಯನ ನಡೆಸುವುದುಂಟು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕವಿ ವಾಚಿಸಿದ ನಂತರ, ಅದನ್ನೇ ಗಾಯಕ ಹಾಡುವಾಗ, ಚಿತ್ರ ಕಲಾವಿದನೊಬ್ಬ ಆ ಕವಿತೆಯ ಭಾವವನ್ನು ತಾನು ಗ್ರಹಿಸಿದಂತೆ ಸಭಿಕರೆದುರೇ ಚಿತ್ರ ಬಿಡಿಸುವ ಕಾವ್ಯ-ಗಾಯನ-ಕುಂಚ ಸಮಾರಂಭವನ್ನೂ ಏರ್ಪಡಿಸುತ್ತಿದ್ದಾರೆ. ಗಾಯನಕ್ಕೆ ಮೆರುಗನ್ನೀಯುವಂತೆ ಮೆಂಡೋಲಿನ್/ಪಿಟೀಲು, ತಬಲಾ/ಮೃದಂಗ, ಕೀ-ಬೋರ್ಡ್ ಮುಂತಾದ ಪಕ್ಕವಾದ್ಯಗಳ ಸಹಕಾರವನ್ನು ಒದಗಿಸುವುದೂ ಉಂಟು. ಕೆಲವೊಮ್ಮೆ ಹಾಡಿಗಾಗಿ ಗಾಯಕರೂ ವಾದ್ಯವೃಂದದವರೂ ಮೊದಲೇ ವಾರಗಟ್ಟಲೆ ತಯಾರಿ ನಡೆಸಿಕೊಂಡಿರುತ್ತರೆ. ಹೆಸರು ಮಾಡಿದ (ದುಬಾರಿ ವೆಚ್ಚದ), ಕೆಲವು 'ಏಕಸಂಧಿಗ್ರಾಹಿ" ಪರಿಣತರು 'ಯುದ್ಧೇ ಶಸ್ತ್ರಾಭ್ಯಾಸ"ಕ್ಕೆ ತೊಡಗಿದಾಗ, ಅಲ್ಲಲ್ಲಿ ತಡವರಿಸಿದರೆಂದರೆ, ನಡೆವರೆಡವದೇ ಕುಳಿತವರು ಎಡುವರೇ- ಎಂದು ಸಮಜಾಯಿಷಿ ಕೊಡುವುದೂ ಉಂಟು. ಇರಲಿ, ಇಂತಹ ಕಬ್ಬಿಗರ ಸಮಾವೇಶದಲ್ಲಿ ಉದಯೋನ್ಮುಖ ಮತ್ತು ಪ್ರಖ್ಯಾತ ಕವಿಪುಂಗವರು ಅಕ್ಕಪಕ್ಕದಲ್ಲಿ ಹೆಗೆಲೆಣೆಯಾಗಿ ಕುಳಿತು ವೇದಿಕೆಯಲ್ಲಿ ರಾರಾಜಿಸುವುದನ್ನ ಕಂಡಿದ್ದೇವೆ. ಇಂತಹ ಹಲವಾರು ಕಾವ್ಯ-ಗಾಯನ-ಕುಂಚ ಕಾರ್ಯಕ್ರಮಗಳಲ್ಲಿ ನಾಗಲಕ್ಷ್ಮಿಯೂ ನಾನೂ ಪಾಲ್ಗೊಂಡು ಸಂತೋಷಿಸಿದ್ದೇವೆ.

****

ಹಿಂದೆ ಗುರುಕುಲವಿದ್ಯಾಭ್ಯಾಸ ಪದ್ಧತಿಯಲ್ಲಿ ಕಾವ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದ ಆ ಕಾಲದಲ್ಲಿ, ಗುರುಗಳು ತಮ್ಮ ಶಿಷ್ಯರನ್ನು ಕವಿತ್ವರಚನೆಗೆ ಪ್ರೋತ್ಸಾಹಿಸುತ್ತಿದ್ದರು. ಕಲಿತವ ಪ೦ಡಿತನಾದನೆಂದರೆ ಅವನು ಅಲ್ಪಸ್ವಲ್ಪವಾದರೂ ಪದ್ಯ ಬರೆಯಬಲ್ಲವನೆಂದೇ ಭಾವನೆ. ಅಣಕುಪದ್ಯವನ್ನಾದರೂ ಬರೆಯಬಲ್ಲವನೀತ. ಸಹೃದಯರೊಪ್ಪಿದ ನಿಜವಾದ ಕವಿಯಾಗಿದ್ದನೆಂದರೆ ಎಲ್ಲಿಲ್ಲದ ಮನ್ನಣೆ. ಅವನಲ್ಲಿ ಋಷಿಯ ಅಂಶ ಇದ್ದಿರಲೇಬೇಕೆಂಬ ಬಲವಾದ ನಂಬಿಕೆ. ಬುದ್ಧಿವಂತ, ಮನೀಷಿ, ಧೀಮಂತ, ಕೋವಿದ, ಪ್ರಾಜ್ಞ ಇತ್ಯಾದಿಗಳು ಕವಿಯ ಸಮಾನಾರ್ಥಕ ಪದಗಳು.

ಒಟ್ಟಾಗಿ ಕುಳಿತು ಊಟಮಾಡುವ ಸಮಾರಾಧನೆಯಲ್ಲಿ ಪಾಯಸ ಬಡಿಸುವ ವೇಳೆಗೆ ಚೂರ್ಣಿಕೆ ಹೇಳುವ ಗಿಳಿಗಳಲ್ಲಿ ತಮ್ಮದೇ ಸ್ವರಚಿತ ಕವನ/ಮುಕ್ತಕಗಳನ್ನು ಹೇಳುತ್ತಿದ್ದ ವಟುಗಳೂ ಕಾವ್ಯಪಟುಗಳೂ ಇರುತ್ತಿದ್ದರು. ಸಂತೋಷಕೂಟಗಳಲ್ಲಿ ಸಮಸ್ಯಾಪೂರಣ ಸ್ಪರ್ಧೆಗಳೂ ನಡೆಯುತ್ತಿದ್ದವು. ರಾಜಾಸ್ಥಾನದಲ್ಲಿ ಕವಿಗಳ ನಡುವೆ ಇಂತಹ ಪೈಪೋಟಿ ನಡೆಯುತ್ತಿದ್ದುದಕ್ಕೆ ಬಲ್ಲಾಳಸೇನನ ಭೋಜಪ್ರಬಂಧದಂಥ ಗ್ರಂಥಗಳ ಆಧಾರವಿದೆ. ಶೂನ್ಯಸಂಪಾದಕರ ಕಲ್ಪನೆಯಲ್ಲಿ ಶಿವಶರಣರ ಅನುಭವಮಂಟಪದಲ್ಲಿ ದಿನವೂ ಕವಿಗೋಷ್ಠಿನಡೆಯುತ್ತಿದ್ದಿರಬೇಕು.

ಮನೆ-ಮನೆ ಕವಿಗೋಷ್ಠಿ ಇತ್ತೀಚಿನ ಒಂದು ಹೊಸ ಪ್ರಕಾರ. ಸಭಾಂಗಣಕ್ಕಾಗಿ, ಅದರ ಅಲಂಕರಣಕ್ಕೆಂದು, ಬರುವ ಸಭಿಕರ ಉಪಹಾರ ಇತ್ಯಾದಿಗಳಿಗೆ ಹೆಚ್ಚು ವೆಚ್ಚಮಾಡಬೇಕಾಗಿಲ್ಲ; ಆತಿಥ್ಯಶೀಲ ಸಜ್ಜನರೊಬ್ಬರ ಮನೆಯೇ ಸಭಾಗೃಹ. ಬದಲಾದ ವ್ಯಾವಹಾರಿಕ ಕಾರಣಗಳಿಗಾಗಿ, ಇಂಥ ಕಾರ್ಯಕ್ರಮಗಳಿಗೆ ದೂರದೂರದಿಂದ ಸಹೃದಯರು ಬರುವ ದಿನಗಳು ಹಿಂದಾದವು. ಆತಿಥೇಯರ ಸ್ನೇಹದ ಕರೆಗೆ ಓಗೊಟ್ಟು ಬರುವ ಸಭಿಕರೂ ಹೆಚ್ಚೇನಿಲ್ಲ. ಅವರುಗಳ ಉಪಹಾರದ ಹೊಣೆಯನ್ನ, ಅಧ್ಯಕ್ಷ/ ಮುಖ್ಯ ಅತಿಥಿಗಳ ಸನ್ಮಾನ/ಗೌರವಸಮರ್ಪಣೆಯ ಜವಾಬ್ದಾರಿಯನ್ನೆಲ್ಲ ಮನೆಯ ಯಜಮಾನರೇ ವಹಿಸಿಕೊಳ್ಳುತ್ತಾರೆ. ಬಡಾವಣೆಯ ಸಾಹಿತ್ಯಾಸಕ್ತರೆಲ್ಲ ಒಂದೆಡೆ ಸೇರಲು ಸದವಕಾಶ. ಸ್ಥಳೀಯ ಹಿರಿ ಕಿರಿ ಚಿಕ್ಕ ಪುಟ್ಟ ಮರಿ ಕವಿಗಳಿಗೂ, ಗಿಂಡಿ ಮಾಣಿ ಕವಿಗಳಿಗೂ ತಮ್ಮ ಪ್ರತಿಭಾಪ್ರದರ್ಶನಕ್ಕೊಂದು ಸುವರ್ಣಾವಕಾಶ.

ಸಮಾರಂಭದ ಖರ್ಚನ್ನು ತೂಗಿಸಿಕೊಂಡು ಹೋಗಲು, ಭಾಗವಹಿಸುವ ಕವಿಗಳಿಂದಲೇ ಚಂದಾ ವಸೂಲು ಮಾಡಿ, ನಿಮ್ಮ ಕವನಗಳನ್ನ ಸಂಕಲಿಸಿ ಪುಸ್ತಕ ಹೊರತರುತ್ತೇವೆ- ಎಂದು ಅದಕ್ಕೂ ನಿಗದಿತ ಶುಲ್ಕ ತೆಗೆದುಕೊಂಡು, ಆ ಕವಿಗಳಲ್ಲೇ ಯಾರೊಬ್ಬರಿಗೋ ವಿಶೇಷ ಸನ್ಮಾನ, ಪ್ರಶಸ್ತಿಪ್ರದಾನ- ಇತ್ಯಾದಿಗಳನ್ನು ಪ್ರಚಾರಪೂರ್ವಕವಾಗಿ ಹಮ್ಮಿಕೊಂಡು ನಡೆಸುವ ಕವಿಗೋಷ್ಠಿಗಳಿಗೇನೂ ಈಗೀಗ ಕೊರತೆಯಿಲ್ಲ.

ಇಲ್ಲಿ ಇನ್ನೊಂದು ಮಾತು. ವಿಶೇಷ ಸಮಾರಂಭಗಳಿಗಾಗಿ ವಿಶಿಷ್ಟ ಕವಿಗೋಷ್ಠಿಗಳು ಏರ್ಪಾಡುಗುತ್ತವೆ. ದಸರಾ 'ಕವಿಗೋಷ್ಠಿ" ಬೇರೆ, 'ದಸರಾಕವಿ" ಗೋಷ್ಠಿ ಬೇರೆ. ವಿಶ್ವವಿಖ್ಯಾತ ದಸರೆಯ ವೈಭವದ ಅಂಗವಾಗಿ ಅರಸರು ಸಾಂಪ್ರದಾಯಿಕವಾಗಿ ಅರಮನೆಯ ಸಭಾಂಗಣದಲ್ಲಿ ನಡೆಸಿಕೊಂಡು ಬರುತ್ತಿದ್ದ ಒಂದು ವಿದ್ವತ್‌ಸಭೆ ಇತ್ತು. ಇದಕ್ಕೆ ಪ್ರೇಕ್ಷಕ/ಶ್ರೋತೃವಾಗಿ ಹೋಗುವುದೇ ಒಂದು ಮನ್ನಣೆಯೆಂದಿದ್ದ ಕಾಲದಲ್ಲಿ ಈ ಪಂಡಿತಮಂಡಲಿಯ ಆಡೊಂಬೊಲದ ದಂತಗೋಪುರಕ್ಕೆ ಹತ್ತಿ ಹೋಗುವುದೆಂದರೆ ಇನ್ನೆಷ್ಟು ಗೌರವದ ಸಂಕೇತವಾಗಿದ್ದಿರಬೇಕು? ಅದು ದಸರಾ 'ಕವಿಗೋಷ್ಠಿ". ಇದಕ್ಕೆ ವ್ಯತಿರಿಕ್ತವಾಗಿ ಅಸಾಹಿತ್ಯಕ ಮಾನದಂಡಗಳನ್ನು ಮುಂದಿಟ್ಟುಕೊಂಡು, ಏನೇನೋ ಕಾರಣಗಳಿಗಾಗಿ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು, ಕುರಿತೋದದೆಯುಂ ಪರಿಣತಮತಿಗಳು ತಾವೆಂಬ ಭ್ರಮೆಯ ಶ್ರೀವಿಜಯಪತಾಕೆಯನ್ನು ಹಾರಿಸುವವರನ್ನ ಈ ದಸರೆಗೆ ಆಹ್ವಾನಿಸಿದಾಗ ಅವರು ಹೆಸರಿಗೆ ದಸರಾಕವಿ; ಅಂಥವರ ಕೊಟ್ಟಿಗೆಯೇ 'ದಸರಾಕವಿ" ಗೋಷ್ಠಿ.

****
ಕವಿಗೋಷ್ಠಿಯಲ್ಲಿ ಓದುವ ಕವನಗಳ ಮುಖ್ಯ ಉದ್ದೇಶ ಜನಮನ ರಂಜನೆ. ಅಲ್ಲಿ ಸಭೆಯಲ್ಲಿ ಎಲ್ಲ ಬಲ್ಲವರೂ, ಬಲ್ಲೆನೆಂಬ ಹುಸಿ ಹಸಿ ನಂಬಿಕೆಯವರೂ, ಅಲ್ಪಸ್ವಲ್ಪ ಗ-ಪದ್ಯಗಳನ್ನು ಕೊರೆಯುತ್ತಿರುವವರೂ, ಕಾವ್ಯಪ್ರಪಂಚವನ್ನು ಇನ್ನೂ ಪ್ರವೇಶಿಸದವರೂ, ಸಾಮಾನ್ಯ ಶ್ರೋತೃಗಳೂ ಇದ್ದಾರು. ವಿಷಯ ವಸ್ತು ಯಾವುದೇ ಇರಲಿ, ಆಡುನುಡಿಯ ಸೊಗಡು, ಪ್ರಾಸ, ಪದಗಳ ರಿಂಗಣ- ಇವು ಹೆಚ್ಚು ಕಡಿಮೆ ಅಲ್ಲಿದ್ದ ಎಲ್ಲರನ್ನೂ ಆಕರ್ಷಿಸೀತು. ಥಟ್ಟನೆ ಅರ್ಥವಾಗುವ, ನವಿರಾದ ಹಾಸ್ಯದ ಪದ್ಯಗಳಿಗೇ ಹೆಚ್ಚು ಚಪ್ಪಾಳೆಗಳು ಮೀಸಲು. ಮರುದಿನದ ಪತ್ರಿಕೆಗಳಲ್ಲಿ ಉಲ್ಲೇಖಿತವಾಗುವ ಸಂಕ್ಶಿಪ್ತ ವರದಿಯ ಭಾಗಗಳೂ ಇವೇ. ಆದ್ದರಿಂದಲೇ, ಹೆಸರಾಂತ ಕವಿಗಳೂ ಸಹ, ತಮ್ಮ ಲಘುವಾದ ಸರಳವಾದ ತಮಾಷೆಯ ಪದ್ಯಗಳನ್ನೇ ಇಂಥ ಸಭೆಗಳಿಗೆ ಆರಿಸಿಕೊಳ್ಳುತ್ತಾರೆ. ಕೆಲವರು ಸಾಮಯಿಕ ಸಮಸ್ಯೆಗಳ ವಿಮರ್ಶಾತ್ಮಕ ಚಿಂತನೆಗೆ ಈ ಅವಕಾಶವನ್ನು ಬಳಸಿಕೊಳ್ಳುವುದನ್ನ ಕಾಣುತ್ತೇವೆ; ಅಂಥವರು ಗೆದ್ದದ್ದು ಕಡಿಮೆ.

ಕೆಲವರು ಕವಿಸಮ್ಮಿಳನದಲ್ಲಿ ಭಾಗವಹಿಸಲು ಭಾರೀ ತಪಸ್ಸನ್ನೇ ಮಾಡಿದರೆ, ಇನ್ನು ಕೆಲವರು ಒಂದು ಭಾರೀ ತಪ್ಪನ್ನು ಮಾಡುತ್ತಾರೆ. ಕವಿಗೋಷ್ಠಿಗೆ ತಾವು ಆಹ್ವಾನಿತರಾಗಿರುವುದು ಮೊದಲೇ ಗೊತ್ತಿದ್ದರೂ, ವ್ಯವಸ್ಥಾಪಕರ ಒತ್ತಾಯಕ್ಕೆ ಮಣಿದು ತಾವು ಬಂದು ಭಾಗವಹಿಸುತ್ತಿರುವರೋ ಏನೋ ಎನ್ನುವಂತೆ, ಏನೇನೋ ಪೂರ್ವ ಪೀಠಿಕೆಯ ಅಸಂಬದ್ಧ ಮಾತುಗಳನ್ನ ಆಡಿ, ಹಲವಾರು ವರ್ಷಗಳ ಹಿಂದೆ ಬರೆದ ಯಾವುದೋ ಒಂದು ತಮ್ಮ ಕವನಸಂಕಲನದೊಳಗೆ ವೇದಿಕೆಯಮೇಲಿರುವಾಗಲೇ ತಡಕಾಡುತ್ತ, ಒಂದು ಕವನವನ್ನು 'ಹಾ೦, ಸಿಕ್ಕಿತು!"- ಎನ್ನುವ ಭಾವದಲ್ಲಿ, ವಾಚಿಸುತ್ತಾರೆ. ಅಧ್ಯಕ್ಷರು 'ಪ್ರತಿಯೊಬ್ಬರಿಗೂ ಒಂದು ಕವನ ಸಾಕು"- ಎಂದದ್ದು ಈ ಜಾಣಕಿವುಡರಿಗೆ ಕೇಳಿಸದು. ಮತ್ತೆ ಕೆಲವರಿಗೆ ಸಭಿಕರ ಗ್ರಹಿಕೆಯ ಮೇಲೇ ಗುಮಾನಿ. ಮೊದಲೇ, ನಡುವೆ ಅಥವಾ ಕೊನೆಗೆ ತಮ್ಮ ಕವನವನ್ನ ತಾವೇ ವಿಮರ್ಶಿಸಿ, ಅಲ್ಲಿ ಹೇಳಲಾಗದ್ದನ್ನು ಈಗ ಅಪ್ಪಣೆಕೊಡಿಸುತ್ತಾ, ಕಾಲಹರಣಮಾಡುತ್ತಾರೆ- ತುದಿಗಾಲಲ್ಲಿ ನಿಂತ ವ್ಯವಸ್ಥಾಪಕರ ರಕ್ತದೊತ್ತಡವನ್ನು ಮೇಲೇರಿಸುತ್ತಾರೆ.

****
ಇದೆಲ್ಲ ಗೊತ್ತಿದ್ದರೂ, ಮೊನ್ನಿನ ಸಖೀಗೀತ ಕವಿಗೋಷ್ಠಿಯಲ್ಲಿ ನಾನು ಮಿಂಚಿದೆ- ಎಂದಲ್ಲ. ಹಾಗೆ ನೋಡಿದರೆ ನಮ್ಮಿಬ್ಬರಲ್ಲಿ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡದ್ದು ನಾಗಲಕ್ಷ್ಮಿಯ ಕವನ. “ತನಗೇಕೆ ಮೈಸೂರು ಪ್ರಿಯ, ಮೈಸೂರೆಂದೊಡನೆ ತನಗೆ ಬೆಟ್ಟ, ಕಟ್ಟೆ, ಮಲ್ಲಿಗೆ, ಬಾಳೆ ಚಿಗುರೆಲೆ, ಪಾಕ್, ರೇಷ್ಮೆ, ಚಂದನ, ವೀಣೆ, ಅರಮನೆ, ದಸರಾ- ಎಲ್ಲಾ ಹೇಗೆ ಕಣ್ಮುಂದೆ ಬಂದು ನಿಲ್ಲುತ್ತೆ. ಅದರ ಸೊಗಸು, ಸೊಬಗು, ಸಿಹಿ, ರಸ, ನವಿರು, ಪರಿಮಳ, ಸೊಗಡು, ವೈಭವ-ಗಳಿಂದ ಮೆರೆಯುವ ಬೆಡಗಿನ ಬೆರಗಿನ ಮೈಸೂರು" ಸಪ್ತಸಾಗರದಾಚೆಯಿಂದ ತನ್ನನ್ನಿತ್ತ ಏಕೆ ಸೆಳೆಯಿತು- ಎಂಬುದು ಅವಳ ಕವನದ ವಸ್ತುವಾಗಿತ್ತು.

ನಾನೋ ಸಾಹಿತ್ಯ ಸಮ್ಮೇಳನ, ವಿದ್ವಾಂಸರ ಸಭೆ, ಚಿಂತನಶೀಲರ ನಡುವೆ ದೇಶದ ಜ್ವಲ೦ತ ಸಮಸ್ಯೆಯ ಬಗ್ಗೆ ಏನಾದರೂ ಚರ್ಚಿಸುವುದು ಸೂಕ್ತವೋ ಏನೋ-ಎಂಬೆಲ್ಲ ನಂಬಿಕೆಯಿಂದ ಒಂದು ಕವನವನ್ನ ಹೊಸೆದಿದ್ದೆ. ಇತ್ತೀಚೆಗೆ ಒಂದು ಶಾಲೆಯ ಸಮಾರಂಭದ ಅತಿಥಿಯಾಗಿ ಹೋಗಿದ್ದಾಗ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ನೆನಪಿಗೆ ಬಂತು: ಬಹಳ ಹಿಂದಿನ ದಿನಗಳ, ಜನಪ್ರಿಯ 'ಜಾಗೃತಿ" ಹಿಂದೀ ಚಲನಚಿತ್ರದ 'ಹಮ್ ಲಾಯೇ ಹೈ೦, ತೂಫಾನ್ ಸೆ ಕಿಶ್ತೀ ನಿಕಾಲ್ ಕೇ; ಇಸ್ ದೇಶ್ ಕೋ ರಖನಾ ಹೈ ಬಚ್ಚೋ೦ ಸಂಭಾಲ್ ಕೇ||" ಹಾಡು. ಅದೇ ಈ ನನ್ನ ಕವನದ ಮೊದಲ ಪದ್ಯಕ್ಕೆ ಸ್ಫೂರ್ತಿ. ಉಳಿದುದು, ಎಲ್ಲರ ಕಳವಳದಂತೆ ಹುಟ್ಟಿ ಬೆಳೆದ ದೇಶದ ಕ್ಷೇಮದ ಬಗ್ಗೆ ಆತಂಕ. ಕವಿಗೋಷ್ಠಿಯಲ್ಲಿ ಓದಿದ ನನ್ನ ಆ ಕವನದ ಪೂರ್ಣಪಾಠ ಹೀಗಿದೆ:

ಹೆಗಲೇರಿದ ಹೊಣೆ

ಭೋರ್ಗರೆಯುವ ಕಡಲೊಡಲಿನ ಅಲೆಗಳ ನಡುವೆ,
ಬಿರುಗಾಳಿಗೆ ಹೊಯ್ದಾಡುವ ಹರಿಗೋಲನು ದಡಕೆ
ಎಳೆದೊಯ್ಯುತ ಮುಟ್ಟಿಸಿದೆವು ನಾವೀ ದಿನ ಹಿಂದೆ-
ಕಾಪಾಡುವ ಹೊಣೆ ಹೆಗಲೇರಿದೆ ನಿಮ್ಮದೆ ಮುಂದೆ.

ತುಳಿದಾಡುವ ಪರಕೀಯರ ಜೊತೆ ಸೆಣೆಸಿದ ಹದನ-
ಗುಂಡಿನ ಮಳೆಗೆದುರಾಯಿತು ನಿಶ್ಶಸ್ತ್ರದ ಜತನ,
ಬಿಸಿ ನೆತ್ತರು ಚೆಲ್ಲಾಡಿತು ಎದೆಯೊಡ್ಡಲು ಯೋಧ,
ಮಣಿಯದೆ ಮುನ್ನಡೆಯಿತು ಆ ದಿಟ್ಟದಟನ ಕದನ.

ನೆಲ ನಮ್ಮದು, ಜಲ ನಮ್ಮದು, ಗಿರಿ ನದಿ ಕಡಲು,
ಈ ಗಾಳಿಯು, ಹೊಳೆದಳಿಯುವ ಆಕಾಶದ ಬೆಳಕು,
ಕುಡಿ ಗಿಡ ಮರ ಜಲಚರಗಳ ಪಶು ಪಕ್ಷಿಯ ಬೆರಗು-
ಅದನನುಭವಿಸುವ ನಮಗೇತಕೆ ಇನ್ನಿತರರ ಹಂಗು?

ಹೊಡೆದೋಡಿಸುತಿರುವಾಗಲು ಹಗೆ ಸುಳಿಯದ ಮನಸು;
ತಾವೆಸಗಿದ ಅಪಕಾರಕೆ ಅವರೇ ಮರುಗಿದ ಸೊಗಸು;
ನಡೆಸಿದ ಕಾಣರಿಯದ ಕೇಳದ ಸ್ವಾತಂತ್ರ್ಯದ ಸಮರ-
ಜಗದೆಲ್ಲೆಡೆ ಚಿಗುರೊಡೆಯಿತು ಹೊಸಗಾಳಿಯ ಕನಸು!

ಊಳಿಗತನ, ಬಿಡಿ, ಸಾಕಾಗಿದೆ ನಮ್ಮನು ಆಳೇವು ನಾವೇ-
ಮುನ್ನುಗ್ಗಿದ ಕುಳ, ಹಳಿ ತಪ್ಪಿಸಿದೆವೆ ಉಗಿಬಂಡಿಯ ಕನಸ;
ಅತಿ ಲಾಲಸೆ, ಹುಸಿ ಭರವಸೆ, ಹಿತ ತನ್ನದೆ ಮೊದಲು,
ಅಮಲೇರಿದ ಜನ ಕೆಳಗಿಳಿಸುವರಯ್ಯೋ ದೇಶದ ಕಳಸ!

ಬೆಳಕಿನ ಅಲೆ ಪರಿಮಳದೊಲು ನಮ್ಮೆಡೆ ಬರಲು
ತೆರೆದೆವು ಅರೆ ಮುಚ್ಚಿದ ಮರೆ ಕಿಟಕಿಯ ತೆರೆಯ,
ನುಸುಳುತ ಬರೆ ಮೆಲ್ಲಡಿಯಲಿ ಬಾಗಿಲ ಬಳಿ ಹಾವು-
ಬೆರೆಗಾದೆವೆ ಮೈಮರೆತೆವೆ ಹೆಡೆಯಾಟಕೆ ನಾವು?

ಅವ ಕೊಟ್ಟರೆ ಉಂಟೆನ್ನುವ ದಿನ ಗೋಡೆಯ ಬರಹ,
ಶರವೇಗದಿ ಬರು ಬರುತಿದೆ ಕರಿ ಇರುಳೇ ಮರುಕಳಿಸಿ;
ಎದ್ದೇಳಿರಿ, ಏನಾಗಿದೆ ಕಣ್ಣರಳಿಸಿ ನೋಡಿರೆಲಾ ಸುತ್ತ,
ಗಳಿಸುಳಿಸಿದ ನೆಲ ಹುಸಿ ಉಸುಕಲಿ ತುಸ ಕುಸಿವುದ ನಿಲಿಸಿ.

ಉಪ್ಪುಣುಸಿದ ಮನೆಗಿಲ್ಲವೆ ಕಿಡಿಗೇಡಿಯ ಹಿಡಿ ನಿಷ್ಠೆ?
ಎದುರಾಡದೆ ಕುಳಿತೇಕಿಹುದೀ ಬಲುಬುದ್ಧಿಯ ಪ್ರತಿಷ್ಠೆ!
ನಾಡೊಡೆಯುವ ಕಡು ಉಗ್ರರ ಉಪಟಳ ತಡೆಗೆನ್ನಿ-
ಒಂದಾಗಿಯೇ ಮುನ್ನಡೆಯುವ ದೀಕ್ಷೆಯ ತೊಡ ಬನ್ನಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+