ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಂದರ್ಯ ಲಹರಿ :ಮಗುಮನಸ್ಸಿನ ಭಕ್ತರಿಗೆ ಮಾತ್ರ

By Staff
|
Google Oneindia Kannada News

Adishankaraಆಚಾರ್ಯ ಶ್ರೀ ಶಂಕರರು ರಚಿಸಿದ ಸಂಸ್ಕೃತ ಸ್ತೋತ್ರಸಾಹಿತ್ಯದ ಪರ್ವತಶ್ರೇಣಿಗಳಲ್ಲಿ ಸೌ೦ದರ್ಯಲಹರಿ ಶಿಖರಪ್ರಾಯದಲ್ಲಿದೆ. ಒಂದೊಂದೂ ತನ್ನ ವೈಶಿಷ್ಟ್ಯವನ್ನು ಮೆರೆಯುತ್ತಿರುವ ಈ ನೂರು ಚೌಪದಿಗಳಲ್ಲಿ, ಮೊದಲ ಪ್ರಾಸ್ತಾವಿಕ ಪದ್ಯಗಳ ಬಳಿಕ, ಸುಂದರ ಭಾವಗೀತೆಯೊಂದು ಹೀಗಿದೆ:

ಶಿಕಾರಿಪುರ ಹರಿಹರೇಶ್ವರ,ಮೈಸೂರು

ಭವಾನಿ ತ್ವಂ ದಾಸೇ ಮಯಿ ವಿತರ ದೃಷ್ಟಿ೦ ಸಕರುಣಾ-
ಮಿತಿ ಸ್ತೋತುಂ ವಾಂಛನ್ ಕಥಯತಿ ಭವಾನಿ ತ್ವಮಿತಿ ಯ: |
ತದೈವ ತ್ವಂ ತಸ್ಮೈ ದಿಶಸಿ ನಿಜಸಾಯುಜ್ಯಪದವೀ೦
ಮುಕುಂದಬ್ರಹ್ಮೇಂದ್ರಸ್ಫುಟಮುಕುಟನೀರಾಜಿತಪದಾಮ್||22||

ಇದನ್ನು ಬಿಡಿಸಿಕೊಂಡು ಹೀಗೆ ಹೇಳುವುದರಲ್ಲಿ ಒಂದು ಸೌಲಭ್ಯವಿದೆ:

'ಭವಾನಿ, ತ್ವಂ, ದಾಸೇ ಮಯಿ, ವಿತರ ದೃಷ್ಟಿ೦ ಸಕರುಣಾಮ್"-
ಇತಿ ಸ್ತೋತುಂ ವಾಂಛನ್, ಕಥಯತಿ- 'ಭವಾನಿ ತ್ವಂ"- ಇತಿ ಯ: |
ತದಾ ಏವ ತ್ವಂ ತಸ್ಮೈ ದಿಶಸಿ ನಿಜ-ಸಾಯುಜ್ಯ-ಪದವೀ೦
ಮುಕುಂದ-ಬ್ರಹ್ಮೇಂದ್ರ-ಸ್ಫುಟ-ಮುಕುಟ-ನೀರಾಜಿತ-ಪದಾಮ್||

ಇದಕ್ಕೆ ಅನ್ವಯಾನುಸಾರ ಈ ರೀತಿಯ ಗದ್ಯರೂಪವನ್ನು ಕೊಡಬಹುದು: 'ಭವಾನಿ, ಮಯಿ ದಾಸೇ, ತ್ವಂ, ಸಕರುಣಾಮ್ ದೃಷ್ಟಿ೦ ವಿತರ"- ಇತಿ ಸ್ತೋತುಂ ವಾಂಛನ್, 'ಭವಾನಿ ತ್ವಂ"- ಇತಿ ಯ: ಕಥಯತಿ, ತಸ್ಮೈ ತ್ವಂ ಮುಕುಂದ-ಬ್ರಹ್ಮೇಂದ್ರ-ಸ್ಫುಟ-ಮುಕುಟ-ನೀರಾಜಿತ-ಪದಾಮ್ ನಿಜ-ಸಾಯುಜ್ಯ-ಪದವೀ೦ ತದಾ ಏವ ದಿಶಸಿ||

'ಅಮ್ಮಾ ದೇವಿ, ನೀನು ನಿನ್ನ ಕರುಣಾಪೂರಿತ ನೋಟವನ್ನು ಈ ದಾಸನ ಮೇಲೆ ಬೀರು!"- ಎಂದು ಹೇಳಲು ಇಚ್ಛಿಸುತ್ತ, ಯಾರಾದರೂ 'ಅಮ್ಮಾ ನೀನು .. .."- ಎಂದೊಡನೆ, ತತ್‌ಕ್ಷಣವೇ ಅವರಿಗೆ ನಿನ್ನೊಡನೆ ಒಂದಾಗಿಬಿಡುವ ಸ್ಥಿತಿಯನ್ನು ಕಾಣಿಸಿಬಿಡುವೆ; ಅದು ಎಂತಹ ಸಾಯುಜ್ಯಪದವಿಯೆಂದರೆ, ದೇವಾಧಿದೇವತೆಗಳು ತಲೆಬಾಗಿ ನಿನಗೆ ನಮಿಸುತ್ತಿದ್ದಾಗ, ಅವರು ಧರಿಸಿರುವ ಕಿರೀಟಗಳು ಯಾವ ಪದಕಮಲಗಳನ್ನು ಆರತಿಯಂತೆ ಬೆಳಗುವುವೋ ಆ ನಿನ್ನ ಪಾದಗಳನ್ನು ಸೇರಿಹೋಗುವಂಥದ್ದು.

ಚಿಂತಿಸ ತೊಡಗಿದಾಗ ಅವರವರ ಓದು, ಅನುಭವವನ್ನ ಅನುಸರಿಸಿ ಬಗೆ ಬಗೆಯ ಅರ್ಥಗಳನ್ನು ಸ್ಫುರಿಸುತ್ತಲೇ ಹೋಗುವ ಈ ಪದ್ಯ ನಿಮಗೂ ಮೆಚ್ಚುಗೆಯಾದೀತು. ಸ್ವಲ್ಪ ವಿವರವಾಗಿ ನೋಡೋಣ:ಇಲ್ಲಿ ಅಚಾರ್ಯ ಶ್ರೀ ಶಂಕರರು ದೇವಿಯನ್ನು ತಾಯಿಯಾಗಿ ಕಾಣುತ್ತಿದ್ದಾರೆ; ಮಗುವಾಗಿ ತನ್ನ ಮತ್ತು ಅವಳ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ಪ್ರೀತಿಗೆ ಇನ್ನೊಂದು ಹೆಸರೇ ತಾಯಿ- ಎನ್ನುವಷ್ಟರ ಮಟ್ಟಿಗೆ ಅಕ್ಕರೆಯ ಮೂರ್ತರೂಪ ತಾಯಿ. ಮಗುವಿಗೆ ಏನು ಬೇಕು, ಏನನ್ನು ಅದು ಕೇಳುತ್ತದೆ, ಏನನ್ನು ಅದಕ್ಕೆ ಕೊಟ್ಟರೆ ಒಳ್ಳೆಯದು, ಎಷ್ಟು ಕೊಡಬೇಕು, ಹೇಗೆ ಕೊಡಬೇಕು, ಯಾವಾಗ ಕೊಡಬೇಕು- ಹೀಗೆ ಎಲ್ಲ ಪ್ರಶ್ನೆಗಳಿಗೂ ಆ ಪ್ರಶ್ನೆಗಳು ಹುಟ್ಟುವ ಮೊದಲೇ ಉತ್ತರಗಳನ್ನು ಅಂತ:ಕರಣದಲ್ಲಿ ಮನಗಂಡಿರುವವಳು ಮಾತೆ. ಏಕೆಂದರೆ ಆ ಮಗು ತನ್ನದೇ ಕರುಳ ಕುಡಿ. ಮಗು ಹುಟ್ಟಿದ ಸಂಭ್ರಮದ ಸಂಸ್ಕಾರಗಳ ವೇಳೆಯಲ್ಲೇ ತಾನು ಹೇಳಲಿಲ್ಲವೇ?-

ನನ್ನಂಗ ಅಂಗಗಳಿಂದ ಒಡಮೂಡಿ ಬಂದಿರುವೆ,
ನನ್ನ ಹೃದಯವೇ ಹೀಗೆ, ನೀ ಹುಟ್ಟಿ ನಿಂದೆ;
ನನ್ನಾತ್ಮ ಬೇರಲ್ಲ, ನೀನಲ್ಲದಿನ್ನಿಲ್ಲವೆ, ಮಗುವೆ.
ನೂರ್ಕಾಲ ಬಾಳು ನೀ ಸುಖ ಸಂತೋಷದಿಂದೆ.
ಅಂಗಾದ್ ಅಂಗಾದ್ ಸಂಭವಸಿ, ಹೃದಯಾದ್ ಅಧಿಜಾಯಸೇ,
ಆತ್ಮಾ ವೈ ಪುತ್ರನಾಮ ಅಸಿ, ಸ ಜೀವ ಶರದಶ್ ಶತಮ್||
(-ಋಗ್ವೇದೀಯ ಶತಪಥ ಬ್ರಾಹ್ಮಣ 14:6:4:8:26)

-ಎಂದು. ಅಷ್ಟು ಅನ್ಯೋನ್ಯತೆ. ಹೀಗಿದ್ದಾಗ, ಮಗುವಿನ ಬಯಕೆಯೇ ತನ್ನ ಹರಕೆ, ಬರಿಯ ಹಾರೈಕೆಯಲ್ಲ, ಅದರ ಪೂರೈಕೆಯೇ ತಾಯಿಯ ಸಹಜವಾದ ಸ್ವಾಭಾವಿಕ ಆರೈಕೆ. ಹೀಗಿದ್ದಾಗ, ತನಗೆ ಏನು ಬೇಕು ಎಂದು ಮಗು ತಾಯಿಗೆ ಹೇಳಬೇಕಿಲ್ಲ, ಎಲ್ಲವನ್ನೂ ವಿವರಿಸಿ ಹೇಳಲೂ ಬೇಕಿಲ್ಲ; ಸಾಂಕೇತಿಕವಾಗಿ ಸೂಚನೆ ಕೊಟ್ಟರೆ ಸಾಕು. ಮುಖಚರ್ಯೆಯೋ, ಚಲನವಲನವೋ, ಅಳುವೋ ಮಂದಹಾಸವೋ, ನಗುವೋ- ಕೇವಲ ಕುರುಹುಗಳೇ ಸಾಕಲ್ಲವೇ? “ಅಮ್ಮಾ, ನನಗೆ .. .. " ಎಂದು ಒಂದೆರಡು ಪದಗಳನ್ನು ಹೇಳಿದರೆ ಸಾಕು, ತಾಯಿಗೆ ಎಲ್ಲಾ ಅರ್ಥವಾಗಿ ಹೋದೀತು.

ತನ್ನ ಮಗು ಚೂಟಿಯಾದ ಮಗುವಾಗಿರಬೇಕು, ಬುದ್ಧಿವಂತಿಕೆಯಲ್ಲಿ ಎಲ್ಲರನ್ನೂ ಮೀರಿಸಿರಬೇಕು, 'ಜಾಣ ಮಗುವೆಂದರೆ ತನ್ನದೇ (ವೇದೋ ವೈ ಪುತ್ರನಾಮ ಅಸಿ!)"- ಎಂದೆಲ್ಲ ಹೆತ್ತವಳ ಆಕಾಂಕ್ಷೆ. ಅಣುಗನೋ ಅಣುಗೆಯೋ, ಅಷ್ಟು ತೀಕ್ಷ್ಣಬುದ್ಧಿಯ ತನ್ನ ಪ್ರೀತಿಪಾತ್ರವಾದ ಮಗು ಆಡಿಯೇ ಕೇಳಬೇಕೆಂದಿಲ್ಲ, ಸನ್ನೆ ಮಾಡಿ ತಿಳಿಸಿಬಿಡುವ ಚಾಕಚಕ್ಯತೆಯುಳ್ಳದ್ದೆಂದು ಎಲ್ಲ ತಾಯಂದಿರ ತುಸ ಹಸಿನಂಬಿಕೆ. ಕೆಲವರು ಪುಣ್ಯವಂತರ ಪಾಲಿಗೆ ಇದು ಹುಸಿಯೂ ಆಗಿರುವುದಿಲ್ಲ. ಅಂಥದೊಂದು ಸನ್ನಿವೇಶ ಇಲ್ಲಿದೆಯೆಂದು ಶಂಕರರು ಕಲ್ಪಿಸಿಕೊಳ್ಳುತ್ತಿದ್ದಾರೆ.

'ಅಮ್ಮಾ, ನನ್ನ ಮೇಲೆ ನಿನ್ನ ಕರುಣಾ ಕಟಾಕ್ಷವನ್ನು ಬೀರು, ದಯೆ ತೋರು"- ಎಂದು ಕೃಪಾಭಿಕ್ಷೆಯನ್ನು ಕೇಳಿಕೊಳ್ಳುವ ಸಂದರ್ಭ ಇದು. ಆ ಅನ್ನಪೂರ್ಣೆ, ಸದಾ ಪೂರ್ಣೆ, ಶ೦ಕರನ ಪ್ರಾಣವಲ್ಲಭೆ ಪಾರ್ವತಿಯನ್ನ ಈ ಶಂಕರರು ಬೇಡಿಕೊಳ್ಳುತ್ತಿರುವ ಭಿಕ್ಷೆ ಕೇವಲ ಜ್ಞಾನವೈರಾಗ್ಯದ ಸಿದ್ಧಿಗಾಗಿ. ಅದಕ್ಕಾಗಿ, ಪುರುಷಪ್ರಯತ್ನದ ಸಾಧನೆ ಎಷ್ಟೇ ಸಮೃದ್ಧವಾಗಿರಲಿ ಎಲ್ಲದಕ್ಕೂ, ದೈವಾನುಗ್ರಹ ಬೇಕೇ ಬೇಕು. ನಾವು ಆರು ಬಗೆದರೆ, ಏಳನೆಯದು ಒಂದಿದೆಯಲ್ಲ ನಿರ್ಣಾಯಕವಾದುದು, ಅದು ಆ ಶಕ್ತಿಯದೇ ಕೊಡುಗೆ.

ಬೇಡಿದ್ದ ನೀಡುವಳೆ, ಕೇಳಿದ್ದ ಕೊಡುವವಳೆ,
ನೀನಲ್ಲದಿನ್ನಾರು ನನ್ನ ಹೊಣೆ ಹೊರೆವ ಬಂಧು?
ದಯೆ ಕರುಣೆ ಅಕ್ಕರೆಯ ಜೇನ ಸವಿ ಮಮತೆಗಳ
ಹೊನಲುಗಳು ಕೂಡಿ ಸೇರಿದ ಸುಧೆಯ ಸಿಂಧು!
-ಎಂದು ತಾಯಿಯಲ್ಲಿ ಮಕ್ಕಳ ಬಿನ್ನಹ.

ಆಚಾರ್ಯ ಶಂಕರರಿಗಂತೂ ತಾಯಿಯೆಂದರೆ ಎಲ್ಲಿಲ್ಲದ ಪ್ರೀತಿ, ಗೌರವ, ಭಕ್ತಿ ಮತ್ತು ಪೂಜ್ಯಭಾವನೆ. ತಮ್ಮ ಸ೦ನ್ಯಾಸಿಧರ್ಮಕ್ಕೆ ಹೊರತೋರಿಕೆಗೆ ವಿರುದ್ಧವೆಂದು ಕಂಡುಬರುತ್ತಿದ್ದರೂ ಅದನ್ನು ಲೆಕ್ಕಿಸದೆ, ಪೂರ್ವಾಶ್ರಮದ ಬಂಧುಗಳ ಕೆಂಗಣ್ಣಿಗೆ ಗುರಿಯಾದರೂ ಆ ಬಗ್ಗೆ ಚಿಂತಿಸದೆ, ಹೊತ್ತ ಭೂಮಿಗಿಂತ ತೂಕವಾದ ಹೆತ್ತ ತಾಯಿಗೆ ತಮ್ಮ ಬಾಲ್ಯದಲ್ಲಿ ಕೊಟ್ಟ ಮಾತನ್ನು ತಪ್ಪದೇ ನಡೆಸಿಕೊಡುವ ಸಲುವಾಗಿ, ಅವಳ ಅಂತ್ಯಕಾಲದಲ್ಲಿ ಅವಳ ಬಳಿಗೆ ಹೋಗಿ, ದರ್ಶನ ಪಡೆದು, ತಾಯಿಯ ಅಂತ್ಯಕ್ರಿಯೆಗಳನ್ನು ತಾವೇ ನಡೆಸಿದರೆಂಬ ಐತಿಹ್ಯವಿದೆ. ಸತ್ಯಾಸತ್ಯತೆಯ ಬಗ್ಗೆ ಸಂಶೋಧನೆ ಅತ್ತ ಇರಲಿ, ಹೀಗೊಂದು ಸನ್ನಿವೇಶವನ್ನು ಶ೦ಕರರು ಮಾತೃಪ್ರೇಮಿಯಾಗಿ ಮಾನವೀಯತೆಯಿಂದ ಎದುರಿಸಿದರು- ಎಂಬುದೊ೦ದೇ ಸಾಕು ಶಂಕರವಿಜಯದ ದುಂದುಭಿ ಮೊಳಗುವುದಕ್ಕೆ. ಮಾತು ಎತ್ತಲೋ ಹೋಯಿತು.

ಕಾಲಟಿಯ ಆ ತಾಯಿಯನ್ನೇ ನೆನೆಸಿಕೊಳ್ಳುತ್ತಿದ್ದಾರೇನೋ. ಅವಳಿಂದಲೇ ಬಂದ ಮಗು, ಅವಳೊಡನೆ ಸೇರಿ ಒಂದಾಗುವ ಮಹತ್ವಾಕಾಂಕ್ಷೆ. ಹೋಗಿ ಸೇರುವ ಬೆಟ್ಟದ ಕಡಿದಾದ ಹಾದಿಯಲ್ಲಿ ನಾಲ್ಕು ಮುಖ್ಯ ಮೆಟ್ಟಲುಗಳು. ಸಾಲೋಕ್ಯ, ಸಾಮೀಪ್ಯ, ಸಾನ್ನಿಧ್ಯ ಮತ್ತು ಕೊನೆಯ ಸೋಪಾನ ಸಾಯುಜ್ಯ. ಸೇರಿ ಒಂದಾಗುವ ಈ ಮಜಲೇ ಕಟ್ಟಕಡೆಯದು. ಸೇರಿದರೂ, ಶಂಕರರೇ ಬೇರೊಂದು ಕಡೆ (ವಿಷ್ಣುಷಟ್ಪದಿ 3) ಹೇಳಿರುವಂತೆ, ಭಕ್ತ ಭಕ್ತಿ ಭಗವಂತ-ಗಳಲ್ಲಿ ಭೇದಗಳು ಅಪಗಮಿಸಿ ಮರೆಯಾದರೂ, 'ಸಮುದ್ರದಿಂದ ಅಲೆಗಳೇ ಹೊರತು, ಅಲೆಗಳಿಂದ ಸಮುದ್ರವಲ್ಲ (ಸಾಮುದ್ರೋ ಹಿ ತರಂಗ:, ಕ್ವಚನ ಸಮುದ್ರೋ ನ ತಾರಂಗ:)", ತಾರೆಗಳು ತುಂಬಿ ಮಿನುಗುತಲೆ ಇರಬಹುದು, ನಕ್ಷತ್ರಗಳೇ ಆಕಾಶವಲ್ಲ.

ತಾಯಿಯ ಅಡಿದಾವರೆಗಳಲ್ಲಿ ಒಂದಿನಿತು ಎಡೆ ಸಿಕ್ಕರೆ ಸಾಕು, ಆಸೆ ಈಡೇರಿತು, ನನ್ನ ಜನ್ಮ ಸಾರ್ಥಕವಾಯಿತು- ಎಂದುಕೊಳ್ಳುತ್ತಾನೆ ಭಕ್ತ. ಅಂತಿಂಥ ಪಾದಪದ್ಮಗಳಲ್ಲ ಅವು! ಇಂದ್ರ ಬ್ರಹ್ಮ ವಿಷ್ಣು ಮೊದಲಾದ ಸುರಾಸುರರೂ ತಲೆ ಬಾಗಿ ಆ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ. (ಅವಳು ಶಿವನ ಅರ್ಧಾಂಗಿಯೇ ಆದುದರಿಂದ, ಇಲ್ಲಿ ಶಿವನನ್ನು ಹೆಸರಿಸಿಲ್ಲವೆಂದು ಭಾವಿಸುವವರು ಕೆಲವರಾದರೆ, ಬ್ರಹ್ಮವಿಷ್ಣುಗಳಿಗೂ ಒಡೆಯ('ಇಂದ್ರ")ನಂತಿರುವ ಪರಶಿವನನ್ನೂ ಗುರುತಿಸಿದ್ದಾರೆಂದು ಶಿವಪಾರಮ್ಯವಾದಿಗಳು ಸಮಾಧಾನ ಪಟ್ಟುಕೊಳ್ಳಬಹುದು!). ಹಾಗೆ ಅವರು ಮಣಿದಾಗ, ಅವರು ತಲೆಯಲ್ಲಿ ಧರಿಸಿರುವ ಹೊಳೆ ಹೊಳೆವ ರತ್ನಖಚಿತ ಕಿರೀಟಗಳು ಪ್ರತಿಫಲಿಸುತಿರುವ ಬೆಳಕೇ ಆ ಪಾದಗಳಿಗೆ ಆರತಿ ಎತ್ತುತ್ತಿವೆಯೇನೋ ಎನ್ನಿಸುತ್ತಿದೆ.

ಕವಿಯಾಗಿ ಶಂಕರರು ಬಳಸುವ ಪದಗಳ ಆಯ್ಕೆಯ ವೈಶಿಷ್ಟ್ಯವನ್ನು ಗಮನಿಸಬೇಕು. ದೇವಿಗೆ ನೂರೆಂಟು ಹೆಸರು. ಉಮಾ ಕಾತ್ಯಾಯಿನೀ ಗೌರೀ ಕಾಲೀ ಹೈಮವತೀ ಈಶ್ವರೀ, ಶಿವಾ ಭವಾನೀ ರುದ್ರಾಣೀ ಶರ್ವಾಣೀ ಸರ್ವಮಂಗಳಾ, ಅಪರ್ಣಾ ಪಾರ್ವತೀ ದುರ್ಗಾ ಮೃಡಾಣೀ ಚಂಡಿಕಾ ಅ೦ಬಿಕಾ, ಆರ್ಯಾ ದಾಕ್ಷಯಣೀ ಗಿರಿಜಾ ಮೇನಕಾತ್ಮಜಾ- ಯಾವುದಾದರೂ ಆಗಬಹುದಿತ್ತು. ನಾಲ್ಕೇ ಮಾತ್ರೆಗಳ ಪದವೊಂದರ ಅವಶ್ಯಕತೆ ಇತ್ತೆನಿಸಿದ್ದರೆ ರುದ್ರಾಣಿ ಶರ್ವಾಣಿ ಮೃಡಾಣಿ- ಹೀಗೆ ಏನಾದರೊಂದನ್ನ ಆರಿಸಿಕೊಳ್ಳಬಹುದಿತ್ತು. ಆದರೆ, ಅವನ್ನೆಲ್ಲ ಬಿಟ್ಟು 'ಭವಾನಿ"ಯೇ ಏಕೆ ಬೇಕಿತ್ತು? ಇಲ್ಲೊಂದು ಚಮತ್ಕಾರ ಇದೆ. ಸ್ವಲ್ಪ ಕ್ಲಿಷ್ಟ ಸಂಸ್ಕೃತದ ವ್ಯಾಕರಣದ ವಿಚಾರವಾದ್ದರಿಂದ ಇದನ್ನು ಲೇಖನದ ಕೊನೆಗೆ ಇಟ್ಟುಕೊಳ್ಳೋಣ.

'ದಾಸ" ಪದವನ್ನು ಗಮನಿಸಿ: ಭಕ್ತಿ ಒಂಬತ್ತು ವಿಧ ಎಂದು ಭಾಗವತ (7:5:23) ಹೇಳುತ್ತದೆ: ಶ್ರವಣ ಕೀರ್ತನ ಸ್ಮರಣ ಪಾದಸೇವನ ಅರ್ಚನ ವಂದನ ದಾಸ್ಯ ಸಖ್ಯ ಆತ್ಮನಿವೇದನ- ಎಂದು. ಸಂಪೂರ್ಣವಾಗಿ ಒಪ್ಪಿಸಿಕೊಂಡಿರುವ ಆತ್ಮಸಮರ್ಪಣ ಭಾವ ಏನಿದೆ, ಅದಿಲ್ಲಿ ಸೂಚಿತವಾಗಿದೆ. ಪ್ರಪತ್ತಿಯೆಂದರೆ ಇದೇ. ಭಗವ೦ತನಿಗೆ ಗೊತ್ತು- ಭಕ್ತನಿ/ಳಿಗೆ ಏನು ಏಕೆ ಎಷ್ಟು ಹೇಗೆ ಯಾವಾಗ ಬೇಕು, ಅಂತ. 'ಏನೂ ಅರಿಯದವನು/ಳು; ನಿನ್ನ ಮಡಿಲಿಗೆ ಹಾಕಿರುವೆ. ಹಾಲಲ್ಲಾದರೂ ಮುಳುಗಿಸು, ನೀರಿಗಾದರೂ ತಳ್ಳು!"- ಎಂದು ಕೇಳಿಕೊಂಡಂತೆ ದಾಸ್ಯಭಾವ. 'ಅನನ್ಯತೆಯಿಂದ ದೇವರೊಬ್ಬನನ್ನೇ ಚಿಂತಿಸುವ, ಅವನನ್ನೇ ಉಪಾಸಿಸುವ ಜನರ ಯೋಗಕ್ಷೇಮವನ್ನು ದೇವರು ತಾನೇ ಹೊರುತ್ತಾನೆ!"- ಎಂಬ ಗೀತಾಚಾರ್ಯನ ಮಾತು(9:22) ನಂಬಿದವರ ಪಾಲಿಗೆ ಸತ್ಯಸ್ಯ ಸತ್ಯ.
'ವಾಂಛೆ": ಅಪೇಕ್ಷೆ, ಅಭಿಲಾಶೆ, ಅಭೀಪ್ಸೆ, ಆಮಿಷ, ಆಶಯ, ಇಚ್ಛೆ, ಈಪ್ಸೆ, ಕಾಮನೆ, ಮನೋರಥ, ಲಾಲಸೆ, ಲಿಪ್ಸೆ-ಗಳ ಯಾವ ಸಂಸ್ಕೃತ ರೂಪವೂ ವಾಂಛೆಗೆ ಇಲ್ಲಿ ಸರಿದೂಗದು. ಇದೇ ಬೇಕು- ಎಂಬ ಮಗುಮನಸ್ಸಿನ ತೀಕ್ಷ್ಣವಾದ, ಹಠದ ಮೊಂಡುತನದ ನೆರಳಿನಡಿಯ ಬಯಕೆಯೇ ವಾಂಛೆ. ಬೇಕಾದ್ದನ್ನ ಗಿಟ್ಟಿಸಿಕೊಳ್ಳುವ ರಂಪಾಟದ ಸೂಕ್ಷ್ಮ ಹೆಜ್ಜೆಗುರುತುಗಳು ಇದರಲ್ಲಿದೆ.

'ತದೈವ": ತತ್‌ಕ್ಷಣ, ಒಡನೆಯೇ, ವಾಕ್ಯವನ್ನು ಪೂರ್ಣವಾಗಿ ಹೇಳಿ ಮುಗಿಸುವುದರೊಳಗಾಗಿ ತಾಯಿ ಮಗುವಿನ ಇಂಗಿತವನ್ನು ಅರಿತುಕೊಳ್ಳುತ್ತಾಳೆ. ಅವಳು ಇಂಗಿತಜ್ಞೆ. ತೊದಲು ನುಡಿಯಲ್ಲೇ ಶಿಶು ಜಲ್ಪಿಸಬಹುದು, ಅದಕ್ಕೊಂದು ಭಾಷಾಂತರಕೋಶ ಸದಾ ಸಿದ್ಧವಾಗಿರುತ್ತದೆ, ತಾಯಿಯ ತಲೆಯಲ್ಲಿ. ಇ೦ತಹ ಆರಂಭಾಕ್ಷರಿ ಪ೦ದ್ಯದಲ್ಲಿ ಯಾವಾಗಲೂ ತಾಯಿಯದೇ ಗೆಲುವು. ಮಗುವಿನ ಇಂಗಿತವನ್ನು ಅರಿಯುವುದೊಂದೇ ಅಲ್ಲ, ಕ್ಷಣಾರ್ಧದಲ್ಲಿ ಪೂರೈಸಿಬಿಡುತ್ತಾಳೆ.

'ದಿಶಸಿ": ಅಂದರೆ, ಕಾಣಿಸಿಬಿಡುತ್ತೀಯೆ. ಕೊಡುವುದಲ್ಲ ನೀಡುವುದಲ್ಲ, ಬೇಡುವವಗೆ ಕಾಣಿಸುವುದು. ಭಕ್ತ ಅನುಭವಿಸುವಂತೆ, ಕಾಣ್ಕೆಯನ್ನು ದರ್ಶಿಸುವುದು.ಈಗ ಕಾದಿರಿಸಿರುವ 'ಭವಾನಿ"ಯ ಚಮತ್ಕಾರದ ಬಗ್ಗೆ ನಾಲ್ಕು ಮಾತು: ಸ್ವಲ್ಪ ಕ್ಲಿಷ್ಟವೆನಿಸಿದರೆ, ಬಿಟ್ಟುಬಿಡಿ. ಸಂಸ್ಕೃತದಲ್ಲಿ ಪದಗಳಿಗೆ ನಾನಾರ್ಥಗಳುಂಟು. ನಾಮಪದವಾದಾಗ ಭವಾನಿ ಎಂದರೆ ಪಾರ್ವತಿ ಎಂದೂ, ಕ್ರಿಯಾಪದವಾದಾಗ ಅದಕ್ಕೆ '[ನಾನು] ಆಗ ಬೇಕು, ಆಗುವ ಅಕಾ೦ಕ್ಷೆ ಇದೆ, ಆಗಲೆಂಬ ಪ್ರಾರ್ಥನೆ ಸಲ್ಲಿಸುತ್ತೇನೆ"- ಇತ್ಯಾದಿ ಅರ್ಥಗಳು ಇವೆ. ಶುಭಂ ಭವತು ([ನಿಮಗೆ] ಒಳ್ಳೆಯದು ಆಗಲಿ)- ಎಂಬುದನ್ನು ಕೇಳಿದ್ದೀರಿ. ಸರ್ವೇ ಸುಖಿನ: ಭವನ್ತು ([ಅವರಿವರು] ಎಲ್ಲರೂ ಸುಖಿಗಳು ಆಗಿರಲಿ), ದೀರ್ಘ ಆಯುಷ್ಮಾನ್ ಭವ (ಹೆಚ್ಚು ಆಯುಸ್ಸುಳ್ಳವನು [ನೀನು] ಆಗು)- ಇಂಥ ಹಾರೈಕೆಗಳನ್ನೂ ಕೇಳಿದ್ದೀರಿ. ಇಲ್ಲಿನ ಭವತು ಮುಂತಾದ ಕ್ರಿಯಾಪದಗಳು 'ಭೂ" ಎಂಬ ಧಾತುವಿನ ಆಜ್ಞೆ ಆಮಂತ್ರಣ ಪ್ರಾರ್ಥನೆ ಹಾರೈಕೆಗಳ ಗುಂಪಿನ ಭವಿಷ್ಯತ್ ಕ್ರಿಯಾರೂಪಗಳು. ನಾನು ಆಗಬೇಕು- ಎಂಬುದಕ್ಕೆ 'ಭೂ" ಧಾತುವಿನ ಸಂಸ್ಕೃತ ಕ್ರಿಯಾಪದ 'ಭವಾನಿ"- ಅಂತ. [ಖಚಿತವಾಗಿ 'ನಾನು ಆಗುವೆನು"- ಎಂಬುದಕ್ಕೆ ಭವಿಷ್ಯಾಮಿ ಎಂಬ ಇನ್ನೊಂದು ಭವಿಷ್ಯತ್ ಕಾಲದ ರೂಪ ಇದೆ. ಅದು ಬೇರೆ.]

'ನಾನು ನೀನೇ ಆಗಬೇಕು", ಅಂದರೆ ನಾನೂ ನೀನೂ ಒಂದಾಗಬೇಕು, ನಿನ್ನಲ್ಲಿ ಸೇರಿಬಿಡಬೇಕು, ನನಗೆ ಸಾಯುಜ್ಯಪದವಿ ಸಿಗಬೇಕು- ಎಂದೆಲ್ಲ ಅರ್ಥ ಬರುವಂತೆ 'ಭವಾನಿ ತ್ವಮ್"- ಎಂಬ ಪದಯುಗಳ ಪ್ರಯೋಗವನ್ನು ಚಾತುರ್ಯದಿಂದ ಅದ್ವೈತ ಪ್ರತಿಪಾದಕ ಕವಿ ಇಲ್ಲಿ ಮಾಡಿದ್ದಾರೆ. ಈ ನಾರಿಕೇಳಪಾಕದ ಸೊಗಸು ಸವಿಯುವ ದೊಂಬರಾಟ ಎಲ್ಲರಿಗಲ್ಲ ಬಿಡಿ.

ಒಟ್ಟಾರೆ, “ತನ್ನ ಮಗುವಿನ ಮನದಿಂಗಿತವನ್ನ ಸ್ವಾಭಾವಿಕವಾಗಿ ಅರಿಯುವ ಯಾವ ತಾಯಿಯಾದರೂ ತನ್ನ ಶಿಶುವಿಗೆ ಏನು ಬೇಕೆಂಬುದನ್ನು ಕ್ಷಣಾರ್ಧದಲ್ಲಿ ಅರಿತು ಆ ಮಗುವಿನ ಬಯಕೆಯನ್ನು ಈಡೇರಿಸುವಂತೆ, ನಿನ್ನನ್ನು 'ಕಾಣುವ" ನನ್ನ ಇಷ್ಟಾರ್ಥವನ್ನು, ಓ ಜಗನ್ಮಾತೆಯೇ, ನಾನು ಕೇಳುವ ಮೊದಲೇ ಪೂರೈಸು"- ಎಂದು ಕಳಕಳಿಯಿಂದ ಶಂಕರರು ಇಲ್ಲಿ ಕೇಳಿಕೊಳ್ಳುತ್ತಿದ್ದಾರೆ.ಮಗುಮನಸ್ಸಿನ ಭಕ್ತರೆಲ್ಲರಿಗೂ ತಾಯಿಯ ದರ್ಶನ ಸಿಕ್ಕೇ ಸಿಗುತ್ತದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X