ಮೀರಾ ಭಜನೆ ಕನ್ನಡಕ್ಕೆ ತಂದ ಮುಂಬೈ ಕನ್ನಡತಿ ದಾಕ್ಷಾಯಣಿ

Posted By: ಡಾ| 'ಜೀವಿ' ಕುಲಕರ್ಣಿ
Subscribe to Oneindia Kannada

ಮುಂಬೈಯಲ್ಲಿ ಉತ್ತಮ ಕನ್ನಡ ಲೇಖಕಿಯರ ಒಂದು ಪಡೆಯೇ ನಿರ್ಮಾಣವಾಗುತ್ತಿದೆ. ಅದರಲ್ಲಿ ಡಾ| ದಾಕ್ಷಾಯಣಿ ಯಡಹಳ್ಳಿಯವರು ಒಬ್ಬರು. ಇವರು ಮೂಲತಃ ವಿಜಾಪುರ ಜಿಲ್ಲೆಯ (ಈಗ ಬಾಗಲ್ಕೋಟೆ ಜಿಲ್ಲೆಯ) ಇಳಕಲ್‌ನವರು. ಮೊದಲು ಬಿ.ಎಸ್.ಸಿ. ಪದವೀಧರೆ. ಬಿ.ಎಡ್. ಆಗಿ ಶಿಕ್ಷಕಿಯಾದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಎಂ.ಎ. ಪದವಿ ಗಳಿಸಿದರು.

ಮುಂಬೈಗೆ ಬಂದಮೇಲೆ ಕನ್ನಡ ವಿಷಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದು ವರದರಾಜ ಆದ್ಯ ಸುವರ್ಣ ಪದಕವನ್ನು ಗಳಿಸಿದರು(2009). ಅಷ್ಟಕ್ಕೆ ಅವರ ವಿದ್ಯಾದಾಹ ತಣಿಯಲಿಲ್ಲ. 'ಅಕ್ಕ ಮಹಾದೇವಿ ಮತ್ತು ಮೀರಾಬಾಯಿ: ಒಂದು ತೌಲನಿಕ ಅಧ್ಯಯನ' ಎಂಬ ವಿಷಯದಲ್ಲಿ, ಡಾ| ರಘುನಾಥ ಅವರ ಮಾರ್ಗದರ್ಶನದಲ್ಲಿ, ಮಹಾಪ್ರಬಂಧವನ್ನು ರಚಿಸಿ ಪಿಎಚ್.ಡಿ ಪದವಿಯನ್ನು ಗಳಿಸಿದರು (2016).

ಮುಳುಂದದ ವಿಪಿಎಂ ಶಾಲೆಯಲ್ಲಿ ವಿಜ್ಞಾನ ಹಾಗೂ ಇಂಗ್ಲಿಷ್ ಶಿಕ್ಷಕಿಯಾಗಿದ್ದರು. ಕೆಲಕಾಲ ಜೂನಿಯರ್ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯ ಬೋಧಿಸಿದರು. ಸಾಹಿತ್ಯದಲ್ಲಿಯೂ ಇವರು ಕತೆಗಾರ್ತಿಯಾಗಿ, ಕವಯಿತ್ರಿಯಾಗಿ ಕೆಲವು ಬಹುಮಾನ ಗಳಿಸಿದ್ದಾರೆ. ಬ್ರಹ್ಮ ಕಮಲ', ಗುನು ಗುನು' ಇವರ ಕವನ ಸಂಕಲನಗಳಾದರೆ, ದಂತಪಂಕ್ತಿಯ ನಡುವೆ', ಉಡುಗೊರೆ' ಇವರ ಕಥಾ ಸಂಗ್ರಹಗಳು. ನೂರಾ ಹನ್ನೊಂದು ನುಡಿಗಳು' ಇವರ ಕಥನ ಕಾವ್ಯ.

Kannada translation of Meera bhajan by Daksyanayi

ಹೊರನಾಡ ಕನ್ನಡ ಲೇಖಕಿಯರು ಒಳನಾಡಿನ ಲೇಖಕಿಯರಿಗಿಂತ ಕಡಿಮೆ ಇಲ್ಲ. ಆದರೆ ಬೆಳಕಿಗೆ ಬರುವ ಅವಕಾಶಗಳು ಕಡಿಮೆ. ಅವರು ಎಂ.ಎ. ತರಗತಿಯಲ್ಲಿ ಓದುತ್ತಿರುವಾಗ ನಾನೂ ಅವರ ಶಿಕ್ಷಕರಲ್ಲಿ ಒಬ್ಬನಾಗಿದ್ದೆ ಎನ್ನುವುದು ನನಗೆ ಹೆಮ್ಮೆಯ ವಿಷಯ.

ಕನ್ನಡದಲ್ಲಿ ಚೆನ್ನಮಲ್ಲಿಕಾರ್ಜುನ ತನ್ನ ಗಂಡನೆಂದು ಹಾಡಿದ ಅನುಭಾವಿ ಕವಿ ಅಕ್ಕ ಮಹಾದೇವಿಯಂತೆ, ಗಿರಿಧರ ಗೋಪಾಲನೇ ತನ್ನ ಗಂಡನೆಂದು ಹಾಡಿದ ಮೀರಾಬಾಯಿ ಅದ್ಭುತ ಕವಯಿತ್ರಿಯರು. ಅವರ ಬಗ್ಗೆ ತೌಲನಿಕ ಅಭ್ಯಾಸ ಮಾಡುವಾಗ ಮೀರಾಬಾಯಿಯ ಭಜನೆಗಳನ್ನು ಕನ್ನಡಕ್ಕೆ ತರುವ ಇಚ್ಛೆಯಾಯಿತು. ಈ ಸಾಹಸವನ್ನು ಕೃತಿಗೆ ತಂದ ಡಾ| ದಾಕ್ಷಾಯಣಿ ಯಡಹಳ್ಳಿಯವರು ಅಭಿನಂದನಾರ್ಹರು. ಅವರ ಗ್ರಂಥ ಕನ್ನಡ ಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆ ಎನ್ನಬಹುದು.

ಈ ಪುಸ್ತಕಕ್ಕೆ ತೂಕದ ಮುನ್ನುಡಿ ರೂಪದ ಸವಿನುಡಿ ಬರೆದವರು ಡಾ| ಸುನೀತಾ ಶೆಟ್ಟಿ ಅವರು. ಕನ್ನಡ ನಾಡಿನ ಅಕ್ಕಮಹಾದೇವಿ, ತಮಿಳುನಾಡಿನ ಆಂಡಾಳ್ ಹಾಗೂ ರಾಜಸ್ಥಾನದ ಮೀರಾ, ಇವರೆಲ್ಲ (ಇಂಥ) ಭಕ್ತಿ ಮಾರ್ಗವನ್ನು ಹಿಡಿದವರು. ಸರ್ವ ಸಮರ್ಪಣಾ ಭಾವದಿಂದ ಆರಾಧ್ಯ ದೈವಕ್ಕೆ ಶರಣಾದವರು. ಅಕ್ಕನದು ವಚನಗಳಾದರೆ, ಆಂಡಾಳ್ ಹಾಡಿದ್ದು ಭಕ್ತಿಗೀತೆಗಳನ್ನ, ಮೀರಾಬಾಯಿಯ ಗೀತೆಗಳು ಭಜನೆಗಳೆಂದು ಕರೆಯಲ್ಪಡುತ್ತವೆ.' ಎನ್ನುತ್ತಾರೆ. ದಾಕ್ಷಾಯಣಿಯವರ ಸಾಹಸವನ್ನು ಮೆಚ್ಚುತ್ತಾರೆ.

Kannada translation of Meera bhajan by Daksyanayi

ಮೀರಾಬಾಯಿಯ ಬಗ್ಗೆ ಸಂಶೋಧನೆ ಮಾಡಿದ ದಾಕ್ಷಾಯಣಿಯವರು ಮೀರಾಳ ಜೀವನಗಾಥೆಯನ್ನು ಸಂಕ್ಷಿಪ್ತದಲ್ಲಿ ಕೊಟ್ಟಿದ್ದಾರೆ. ರಜಪೂತ ರಾಜವಂಶದಲ್ಲಿ ಜನಿಸಿದ ಮೀರಾ ನಾಲ್ಕು ವರ್ಷದವಳಾಗಿದ್ದಾಗ ತಾಯಿಯನ್ನು ಕಳಕೊಂಡಳು. ತಂದೆ ರಾಜಕಾರ್ಯದಲ್ಲಿ ವ್ಯಸ್ತನಾಗಿರುತ್ತಿದ್ದ. ಅವಳು ಬಾಲ್ಯದಿಂದಲೇ ಕೃಷ್ಣ ಭಕ್ತಳಾಗಿದ್ದಳು. ಒಮ್ಮೆ ಒಬ್ಬ ಸಾಧುವಿನ ಬಳಿ ಕೃಷ್ಣನ ಸುಂದರ ಪ್ರತಿಮೆ ನೋಡಿ ಮೀರಾ ಕೊಡಿರಿ ಎಂದು ಬೇಡಿದಳು. ಸಾಧು ಕೊಡಲು ಒಪ್ಪಲಿಲ್ಲ. ಆತನ ಕನಸಿನಲ್ಲಿ ಕೃಷ್ಣ ಬಂದು ಮೂರ್ತಿಯನ್ನು ಒಪ್ಪಿಸಲು ಆಜ್ಞೆ ಮಾಡಿದ. ಸಾಧು ಮಾರನೆಯ ದಿನ ಮೂರ್ತಿಯನ್ನು ತಂದು ಮೀರಾಗೆ ಒಪ್ಪಿಸಿದ. ಅಂದಿನಿಂದ ಮೀರಾ ಮೂರ್ತಿಯ ಶೃಂಗಾರ, ಪೂಜೆ ಹಾಗೂ ಪ್ರಾರ್ಥನೆಯಲ್ಲಿ 24 ಗಂಟೆ ಕಳೆಯಹತ್ತಿದಳು. ಇದಕ್ಕೆ ಆಧಾರ ಅವಳ ಭಜನೆಗಳಲ್ಲಿ ದೊರೆಯುತ್ತದೆ ಎನ್ನುತ್ತಾರೆ ದಾಕ್ಷಾಯಣಿ.

ಹನ್ನೆರಡು ವಯಸ್ಸಿಗೆ ಮೀರಾನ ಮದುವೆಯಾಯ್ತು. ಕೃಷ್ಣನ ಭಕ್ತಿ ಪ್ರೇಮದಲ್ಲಿ ಪರಿವರ್ತಿತವಾಗಿತ್ತು. ಕೆಲವೇ ವರ್ಷಗಳಲ್ಲಿ ಪತಿ ಸ್ವರ್ಗಸ್ಥನಾದ. ಸಹಗಮನ ಮಾಡಲು ಮನೆಯವರು ಒತ್ತಾಯಿಸಿದರು. ಮೀರಾ ಒಪ್ಪಲಿಲ್ಲ. ಗಿರಿಧರ ಗಾಸ್ಯಾ, ಸತಿನ ಹೋಸ್ಯಾ' ಎಂದಳು. ಗಂಡ ಗಿರಿಧರನಿರುವಾಗ ಸತಿ ಹೋಗುವುದಿಲ್ಲ' ಎಂದು ವಾದಿಸಿದಳು. ಆಕೆಯ ಕಷ್ಟದ ಜೀವನ ಆರಂಭವಾಯ್ತು.

ಯಾವಾಗಲೂ ಭಕ್ತರ, ಸಾಧುಸಂತರ ಜೊತೆಯಲ್ಲಿ ಹಾಡುತ್ತ ನರ್ತಿಸುತ್ತಿದ್ದ ಅವಳನ್ನು ಮುಗಿಸಿಬಿಡಲು ಪರಿವಾರದವರು ಪ್ರಯತ್ನಿಸಿದರು. ಆಕೆಗೆ ವಿಷವನ್ನು ಕೊಡಲಾಯಿತು, ಪೆಟ್ಟಿಗೆಯಲ್ಲಿಟ್ಟು ಹಾವನ್ನು ಅವಳ ಮೇಲೆ ಬಿಡಲಾಯಿತು, ಮುಳ್ಳಿನ ಹಾಸಿಗೆಯ ಮೇಲೆ ಮಲಗಿಸಲಾಯಿತು. ಮೇರೆ ತೊ ಗಿರಿಧರ ಗೋಪಾಲ, ದೂಸರೊ ನ ಕೋಯಿ' ಎಂದು ಹಾಡಿದಳು. ಅವಳ ಭಜನೆಗಳಲ್ಲಿ ಭಕ್ತಿರಸ ಉಕ್ಕೇರಿದೆ, ಅವಳ ಪ್ರೇಮ ನಿವೇದನೆ, ವಿರಹ ವೇದನೆ, ನಲ್ಲನ ಪ್ರತೀಕ್ಷೆಯಲ್ಲಿರುವ ಅಶ್ರುಪೂರಿತ ಕಣ್ಣುಗಳು, ಹಸಿವು ತೃಷೆಗಳನ್ನು ಮರೆತ ಕೃಶವಾದ ದೇಹ, ಅವನ ಬರವಿಗಾಗಿ ಕಾಯುತ್ತಿರುವ ಚಿತ್ರ ಭಜನೆಗಳಲ್ಲಿ ತುಂಬಿದೆ.

ಮೀರಾಳ ಭಜನೆಗಳಲ್ಲಿ ಭಕ್ತಿಯ ಮಧುರ ರಸ ಓತಪ್ರೋತವಾಗಿ ಹರಿಯುತ್ತಿದೆ. ಗೇಯ ಗುಣ ಮನಕ್ಕೆ ಮುದ ನೀಡುತ್ತದೆ. ಈ ಕಾರಣದಿಂದ ಅವುಗಳನ್ನು ಪದ್ಯರೂಪದಲ್ಲಿ ಅನುವಾದಿಸುವ ಇಚ್ಛೆ ಆದಾಗ ಡಾ.ರಾಮಕಿಶೋರ ಶರ್ಮಾ ಹಾಗೂ ಡಾ. ಸುಜೀತಕುಮಾರ ಶರ್ಮಾ ಇವರುಗಳು ಸಂಪಾದಿಸಿದ ಮೀರಾಬಾಯಿ ಕೀ ಸಂಪೂರ್ಣ ಪದಾವಲಿಯಿಂದ ಭಜನೆಗಳನ್ನು ಆಯ್ದು ಅನುವಾದ ಕಾರ್ಯ ಆರಂಭಿಸಿದರು. ಶಬ್ದಾನುವಾದಕ್ಕೆ ಒತ್ತು ಕೊಡದೆ ಭಾವಾನುವಾದಕ್ಕೆ ಒತ್ತು ಕೊಟ್ಟಿದ್ದೇನೆ' ಎಂದು ಡಾ| ದಾಕ್ಷಾಯಣಿ ಹೇಳುತ್ತಾರೆ.

ಈ ಪುಸ್ತಕ ಇನ್ನೊಂದು ವೈಶಿಷ್ಟ್ಯವೆಂದರೆ, ಇವರು ಆಯ್ಕೆ ಮಾಡಿದ 161 ಭಜನೆಗಳನ್ನು ಮೂಲಪಾಠದಲ್ಲಿ ಒದಗಿಸಿ, ಅದರ ಕೆಳಗೆ ಅನುವಾದವನ್ನು ಪ್ರಕಟಿಸಿದ್ದಾರೆ. ಮೀರಾಬಾಯಿಯ ಭಜನೆಯನ್ನು ಪ್ರೀತಿಯಿಂದ ಹಾಡದ ಹಿಂದೂಸ್ತಾನಿ ಸಂಗೀತದ ಗಾಯಕರು ಯಾರೂ ಇಲ್ಲ ಎನ್ನಬಹುದು. ಅವಳ ಹಾಡುಗಳ ನಾಡಿನಾದ್ಯಂತ ಪ್ರಸಿದ್ಧವಾಗಿವೆ. ಅವುಗಳ ಮೂಲದೊಂದಿಗೆ ಸಿದ್ಧವಾದ ಅನುವಾದ ಇಲ್ಲಿ ದೊರೆಯುವುದರಿಂದ ಇದೊಂದು ವಾಚಕರಿಗೆ ದೊರೆತ ಅಧಿಕತಮ ಲಾಭವೆನ್ನಬಹುದು.

ಕೆಲವು ಭಜನೆಗಳ ಅನುವಾದ ನಾವು ನೋಡಬಹುದು:

ಮ್ಹಾರಾ ರೀ ಗಿರಿಧರ ಗೋಪಾಲ ದೂಸರಾ ಣಾ ಕೂಯಾ
ದೂಸರಾ ಣಾ ಊಯಾ ಸಾಧಾ ಸಕಲ ಲೋಕ ಜೂಯಾ
ಭಾಯಾ ಛಾಡ್‌ಯಾ, ಬಂಧಾ ಛೋಡ್‌ಯಾ ಸಗಾ ಸೂಯಾ
ಸಾಧಾ ಢಿಂಗ ಬೈಠ ಬೈಠ, ಲೋಕ ಲಾಜ ಖೂಯಾ
ಭಗತ ದೇಖ್ಯಾ ರಾಜೀ ಹ್ಯಯಾ, ಜಗತ ದೇಖ್ಯಾ ರೂಯಾ
ಅಸುವಾ ಜಲ ಸೀಂಚ ಸೀಂಚ ಪ್ರೇಮ ಬೇಲ ಬೂಯಾ
ದಧ ಮಥ ಘ್ರತ ಕಾಢ ಲಯಾ ಡಾರ ದಯಾ ಛೂಯಾ
ರಾಣ ವಿಷರೊ ಪ್ಯಾಲೊ ಭೇಜ್ಯಾ ಫಿಯ ಮಗಣ ಹೂಯಾ
ಮೀರಾ ರೀ ಲಗಣ ಲಗ್ಯಾ ಹೋಣಾ ಹೊ ಜೊ ಹೂಯಾ

ಇದರ ಅನುವಾದ ಹೀಗಿದೆ:

ಗಿರಿಧರ ಗೋಪಾಲ ನನ್ನವನಲ್ಲದೆ ಬೇರಾರೂ ಅಲ್ಲ
ಮತ್ಯಾರೂ ಇಲ್ಲ ಸಜ್ಜನರೆ ಹುಡುಕಿದೆ ಈ ಜಗವೆಲ್ಲ
ಬಂಧು ಬಳಗ ಬಿಟ್ಟೆ ಎಲ್ಲ ಸಂಬಂಧ ಕಳಚಿಬಿಟ್ಟೆ
ಸಂತ ಜನರ ಸಮೂಹದಿ ಕುಳಿತು ನಾಚಿಕೆ ಬಿಟ್ಟೆ
ಭಕ್ತ ಜನರ ನೋಡಿ ಮನವು ಆನಂದದಿ ನಿಂದಿತು
ಜಗದ ಕ್ಲೇಶ ಕಂಡು ದುಃಖದಿ ಅಲ್ಲೆ ಮುರುಟಿಕೊಂಡಿತು
ಕಣ್ಣ ಬಿಂಬ ಹನಿಸಿ ಹನಿಸಿ ಪ್ರೇಮ ಬಳ್ಳಿಯ ನಟ್ಟೆನು
ಮೊಸರು ಕಡೆದು ತುಪ್ಪ ಕೊಂಡೆ ಮಜ್ಜಿಗೆ ಚೆಲ್ಲಿ ಬಿಟ್ಟೆನು
ವಿಷದ ಬಟ್ಟಲು ರಾಣಾ ಕಳಿಸಿದ ಕುಡಿದು ಮಗ್ನಳಾದೆ
ಏನಾಗುವದೋ ಆಗಲಿ ಮೀರಾ ನಿರತೆ ಹರಿಯ ಧ್ಯಾನದೆ.

ಆ ಲೋಕದ ಪರತತ್ವ ಈ ಲೋಕದಲ್ಲಿ ಸಿಗುವಂತಹದಲ್ಲ ಎಂಬುದು ಮೀರಾಳಿಗೆ ಗೊತ್ತಿದೆ. ಅದಕ್ಕಾಗಿ ಅವನನ್ನು, ಸೃಷ್ಟಿಕರ್ತನನ್ನು, ವಿಶ್ವವ್ಯಾಪಿ ಪರಮಾತ್ಮನನ್ನು, ಒಂದೆಡೆ ನಿಲ್ಲದ ಸದಾ ಭ್ರಮಣಶೀಲನನ್ನು, ಪ್ರೀತಿಗೆ ಸ್ಪಂದಿಸದವನನ್ನು ಜೋಗಿಯಾಗಿಸಿಬಿಟ್ಟಳು.

ಎಂತಹ ಅದ್ಭುತ ಭಜನೆ ಇದು ನೋಡಿರಿ:

ಜೋಗಿ ಮತ ಜಾ ಮತ ಜಾ ಮತಜಾ
ಪಈ ಪರು ಮೈ ತೇರೀ ಚೇರೀ ಹೌ
ಪ್ರೇಮ ಭಗತಿ ಕೊ ಪೌಡೊ ಹೀ ನ್ಯಾರೂ
ಹಮಕೊ ಗೈಲ ಬತಾಜಾ
ಅಗರ ಚಂದಣ ಕೀ ಚಿತಾ ರಚಾವೂ
ಅಪಣೆ ಹಾಠ ಜಲಾಜಾ
ಆಲ ಬಲ ಭಈ ಭಸ್ಮ ಕೀ ಢೇರೀ
ಅಪಣೇ ಅಂಗ ಅಗಾ ಜಾ
ಮೀರಾ ಕಹೈ, ಪ್ರಭು ಗಿರಿಧರ ನಾಗರ
ಜೋತ ಮೆ ಜೋತ ಮಿಲಾಜಾ

ಇದರ ಅನುವಾದ ಹೀಗಿದೆ:

ಹೋಗದಿರೆಲೊ ಜೋಗಿ ಹೋಗದಿರು ನೀನು
ಕಾಲಿಗೆ ಬೀಳುವೆ ನಿನ್ನ ದಾಸಿಯು ನಾನು
ಪ್ರೇಮ ಭಕ್ತಿಯ ದಾರಿ ಇರುವದೆ ಬೇರೆ
ನನಗದರ ಗುಟ್ಟು ತಿಳಿಸಿ ಹೋಗೊ ದೊರೆ
ಚಿತೆಯ ರಚಿಸುವೆನೆನ್ನ ಕಟ್ಟಿಗೆಯ ಚಂದನ
ನಿನ್ನ ಕೈಯಿಂದ ಕೊಡು ಅಗ್ನಿಯ ಸ್ಪರ್ಶನ
ಉರಿದು ನಿಂದ ಆ ಭಸ್ಮದ ರಾಶಿಯ
ಲೇಪಿಸಿಕೊ ನಿನ್ನಂಗಕೆ ನನ್ನ ಚಿತಾ ಬೂದಿಯ
ಮೀರಾ ಹೇಳಿದಳು ಪ್ರಭು ಗಿರಿಧರ ನಾಗರನೆ
ಜ್ಯೋತಿಯಲಿ ಬೆರಸೆನ್ನ ಆತ್ಮ ಜ್ಯೋತಿಯನೆ.

ಇನ್ನೊಂದು ಅದ್ಭುತ ಭಜನೆ, ಪ್ರಖ್ಯಾತ ಭಜನೆ ಹೀಗಿದೆ:

ಜೊ ತುಮ ತೋಡೊ ಪಿಯಾ ಮೈ ನಹಿ ತೋಡೂ
ತೇರೀ ಪ್ರೀತ ತೋಡೀ ಪ್ರಭು ಕೌನ ಸಂಗ ಜೋಡೂ
ತುಮಭಯೆ ತರುವರ, ಮೈ ಭಈ ಪಂಖಿಯಾ
ತುಮ ಭಯೆ ಸರವರ, ಮೈ ತೇರಿ ಮಛಿಯಾ
ತುಮ ಭಯೆ ಗಿರಿವರ, ಮೈ ಭಈ ಮೋರಾ
ತುಮ ಭಯೆ ಚಂದಾ ಭಈ ಮೈ ಚಕೋರಾ
ತುಮ ಭಯೆ ಮೋತೀ, ಮೈ ಭಈ ಧಾಗಾ
ಬಾಯೀ ಮೀರಾ ಕೆ ಪ್ರಭು ಬ್ರಜ ಕೆ ಬಾಸೀ
ತುಮ ಮೇರೆ ಠಾಕುರ ಮೈ ತೇರೆ ದಾಸಿ

ಅದರ ಅನುವಾದ ಹೀಗಿದೆ:

ಶ್ಯಾಮ ನೀನು ಪ್ರೀತಿ ಕಡಿದುಕೊಂಡರೂ
ನಾನು ಗಟ್ಟಿಗೊಳ್ಳುವೆ ಮಧುರ ಭಾವದಲ್ಲಿ
ನಿನ್ನ ಪ್ರೇಮ ತೊರೆದು ನಾ ಯಾರ ಸೇರಲಿ
ನೀನಿರುವೆ ವೃಕ್ಷರಾಶಿ ನಾನು ಪಕ್ಷಿಕಾಶಿ
ನೀನಿರುವೆ ನೀರತಾಣ ನಾನಲ್ಲಿ ಮತ್ಸ್ಯರಾಶಿ
ನೀನು ಮೇರು ಗಿರಿಯು ನಾನಲ್ಲಿ ನವಿಲ ಸಿರಿಯು
ನೀನು ಬಾನ ಚಂದಿರ ನಾ ನಿನಗೆ ಒಲಿದ ಚಕೋರ
ನೀನಾದೆ ಮುತ್ತುಮಾಲೆ ನಾನಲ್ಲಿ ನೂಲಿನೆಳೆ
ನೀನು ಚಿನ್ನ ಗಟ್ಟಿ ನಾನಾದೆ ಕೊರಳ ಮಾಲೆ
ಮೀರಾಳ ಪ್ರಭು ನೀನು ಬೃಜವಾಸಿ
ನೀನೆನ್ನ ಒಡೆಯ ನಾನಿನ್ನ ದಾಸಿ.

ಈ ಹಾಡು ಸಿನೆಮಾಗಳಲ್ಲಿ, ಅನ್ಯ ಮಾಧ್ಯಮಗಳಲ್ಲಿ, ಗಾಯಕರ ಸಮ್ಮೇಲನಗಳಲ್ಲಿ ನೂರಾರು ಬಾರಿ ನಾನು ಕೇಳಿದ್ದೆ. ಆದರೆ ಇರದ ಪೂರ್ತಿ ಪಾಠ ದೊರೆಯದೆ ಒದ್ದಾಡಿದ್ದೆ.

ನಾನು ನಮ್ಮ ಕಾಲೇಜಿನ ಒಂದು ಹಿಂದಿ ಕವಿಗಳ ಸಮ್ಮೇಲನದ ಅಧ್ಯಕ್ಷತೆ ವಹಿಸಿದ್ದೆ(ಹಿಂದೆ ನಾನು ಪ್ರಾಂಶುಪಾಲನಾಗಿದ್ದಾಗ). ಸಂಸ್ಕೃತ ಭೂಯಿಷ್ಠ, ಪಂಡಿತ ಹಿಂದಿ ನನಗೆ ಮಾನ್ಯವಿಲ್ಲ. ಅಲ್ಲಿ ಇಲ್ಲಿ ಸ್ವಲ್ಪ ಉರ್ದು ಪದಗಳು ಇದ್ದರೆ ಆ ಹಿಂದಿಗೆ ಬಹ ರುಚಿ ಬರುತ್ತದೆ ಎಂದಿದ್ದೆ. ಅದಕ್ಕೆ ಒಂದು ಉದಾಹರಣೆ ಕೊಡುವೆ ಎಂದಿದ್ದೆ. ಆಗ ನನಗೆ ಮೀರಾ ನೆನಪಾದಳು.

ನೋಡಿ ಮೀರಾನ ಒಂದು ಹಾಡು ಹೀಗೆ ಪ್ರಾರಂಭವಾಗುತ್ತದೆ: ಮೇರಾ ದರ್ದ ನ ಜಾಣೆ ಕೋಯಿ'. ಈ ಪದ್ಯ ಮರಾ ದುಃಖನ ಜಾಣೆ ಕೋಯಿ ಎಂದರೆ ಹೇಗೆ? ದರ್ದ ಶಬ್ದವನ್ನು ಹಿಂಡಿದರೆ ಅದರಲ್ಲಿ ಕಣ್ಣಿರು ಬರುತ್ತವೆ, ದುಃಖ ಶಬ್ದದಲ್ಲಿ ಅವು ಬರುವುದಿಲ್ಲ! ನನ್ನ ಮಾತು ಕೇಳಿ ಹಿಂದಿಯ ಮುಖ್ಯಸ್ಥೆ ಪ್ರೊ. ರೋಶನ್ ಬೆನ್ ಡುಮಾಸಿಯಾ ತಮ್ಮ ಭಾಷಣದಲ್ಲಿ ಹೇಳಿದ್ದರು: ಪ್ರೊ.ಕುಲಕರ್ಣಿಜೀ ಆಪ ಛುಪೆ ರುಸ್ತುಂ ನಿಕಲೇ. ಉನ್ಹೆ ಹಿಂದಿ ಅಚ್ಛಾ ಆತಾ ಹೈ! ಎಂಬ ಉದ್ಗಾರ ತೆಗೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dr Dakshayani Yadahalli is one of the rarest and talented women Kannada writers in Mumbai. She has translated Meera Bhajans to Kannada. The author has also written about Akkamahadevi. GV Kulkarni from Mubai introduces Dakshayani.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ