ಕಾರ್ನಾಡರ ಆಡಾಡತ ಆಯುಷ್ಯದ ಸುತ್ತಮುತ್ತ-4

Girish Karnads autobiography
ವರದರಾಜ ಹುಯಿಲಗೋಳ ಎಂಬ ಸಾಹಿತಿಗಳು ಬಾಸೆಲ್ ಮಿಶನ್ ಹೈಸ್ಕೂಲಿನಲ್ಲಿ ಗಿರೀಶರ ಕನ್ನಡ ಶಿಕ್ಷಕರಾಗಿದ್ದರು. ಒಮ್ಮೆ ಕೆಲ ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ಕರೆದಿದ್ದರು. ಆಗ ಅವರ ಮನೆಗೆ ಕರ್ನಾಟಕ ಕುಲಪುರೋಹಿತರೆಂದು ಖ್ಯಾತಿ ಪಡೆದ ಆಲೂರ ವೆಂಕಟರಾಯರು ಬಂದರು. ವಿಶಾಲವಾದ ಬಿಳಿಗಡ್ಡ, ಜಟೆಯಂತೆ ಹರಡಿರುವ ಕೂದಲು, ಮೈಗೆ ಸುತ್ತಿಕೊಂಡ ಶಲ್ಯೆ ನೋಡಿದರೆ ಪುರಾಣಕಾಲದ ಋಷಿಯಂತೆ ಕಾಣುತ್ತಿದ್ದರು. ಅವರಿಂದ ಪ್ರಭಾವಿತರಾದ ಗಿರೀಶರು ತಮ್ಮ ಮನೆಗೆ ಮರಳಿದ ಮೇಲೆ ಅವರ ಮೇಲೊಂದು ಕವಿತೆ ಬರೆದರಂತೆ. ಇನ್ನೊಂದು ಸಭೆಯಲ್ಲಿ ಖ್ಯಾತ ನಾಟಕಕಾರ ಶ್ರೀರಂಗರನ್ನು ಕಂಡರಂತೆ. ತಮ್ಮ ಶಾಲೆಯ ಕವಿತಾ ಸ್ಪರ್ಧೆಯಲ್ಲಿ ನ್ಯಾಯಾಧೀಶರಾಗಿ ಬಂದ ವಿ.ಕೃ.ಗೋಕಾಕರನ್ನು ಕಂಡರು. ಕರ್ನಾಟಕ ಕಾಲೇಜಿನ ಭವ್ಯವಾದ ಕಾರಿಡಾರ್ ನೋಡಿ ಗಿರೀಶ ಪ್ರಭಾವಿತರಾಗಿದ್ದರು. ತಾವೂ ಭವಿಷ್ಯದಲ್ಲಿ ಅಲ್ಲಿಯ ವಿದ್ಯಾರ್ಥಿಯಾಗುವುದನ್ನು ನೆನಸಿ ಬೀಗಿದ್ದರು.

ಕರ್ನಾಟಕ ಕಾಲೇಜಿನ ಕಟ್ಟಡ ಮೂಲತಃ ಮದ್ರಾಸ್ ಸದರ್ನ್ ಮರಾಠಾ ರೇಲ್ವೆಯ ಆಫೀಸಿಗಾಗಿ ಕಟ್ಟಿದ ಭವ್ಯ ಕಟ್ಟಡ. ಅದನ್ನು ಒಬ್ಬ ಗವರ್ನರ್ ಶಿಕ್ಷಣ ವಿಭಾಗಕ್ಕೆ ಕೊಟ್ಟು ಪುಣ್ಯಕಟ್ಟಿಕೊಂಡಿದ್ದ. ಕೆಂಪು ಇಟ್ಟಂಗಿ ಹಾಗೂ ಉಕ್ಕನ್ನು ಬಳಸಿ ಸೃಷ್ಟಿಸಿದ ಭವ್ಯ ಪ್ರಾಕಾರದ ಕಮಾನು, ಕಿಡಕಿ ಬಾಗಿಲುಗಳು, ಪ್ರಶಸ್ತವಾದ ವರ್ಗಗಳು, ವಿಸ್ತೃತ ಕಾರಿಡಾರು, ಮುಂಭಾಗದಲ್ಲಿ ಬಂದೊಡನೆ ಸ್ವಾಗತಿಸಿ ಮೊದಲನೆಯ ಮಾಳಿಗೆಗೆ ಕರೆದೊಯ್ಯುವ ಅಗಲ ಪಾವಟಣಿಗೆಗಳು, ಕಾರಿಡಾರಿನ ಮೂಲೆಗಳಲ್ಲಿದ್ದ ಸುರುಳಿ ಸೋಪಾನಗಳು, ಇವೆಲ್ಲ ಹೆಜ್ಜೆ ಹೆಜ್ಜೆಗೆ ಅದರ ಅದ್ವಿತೀಯತೆಯನ್ನು ಸಾರಿ ಹೇಳಿ, ಕಾಲೇಜಿನ ಭವಿಷ್ಯತ್ತಿನ ವಿದ್ಯಾರ್ಥಿಗಳಾದ ನಮ್ಮಲ್ಲಿ ಅಭಿಮಾನವನ್ನು ಹುಟ್ಟಿಸುತ್ತಿದ್ದವು, ಎಂದು ಬರೆಯುತ್ತಾರೆ.

ಇಂಥ ಭವ್ಯ ಕಾಲೇಜಿನ ಪ್ರಾಂಶುಪಾಲರಿಗೆ ಒಪ್ಪುವಂಥ ವ್ಯಕ್ತಿತ್ವ ಗೋಕಾಕರದಾಗಿತ್ತು ಎಂದು ಬರೆಯುತ್ತಾರೆ. ಎತ್ತರವಾದ ಆಳು, ಸ್ವಲ್ಪ ಬಗ್ಗಿ ದಾಪುಗಾಲಿನ ನಡಿಗೆ, ಆಳವಾದ ಆದರೆ ಕೊಂಚ ನಾಸಿಕ ದನಿ, ನಗುಮುಖ, ಹೀಗಾಗಿ ಯಾವ ಸಮೂಹದಲ್ಲೂ ಎದ್ದು ಕಾಣುವ ಆಕೃತಿ. ಇದಲ್ಲದೆ ಕಣ್ಣಲ್ಲಿ ಶ್ರೇಷ್ಠ ಸಾಹಿತಿಗಳು ಎಂಬ ಗ್ಲ್ಯಾಮರ್ ಕೂಡ ಇತ್ತು. ಇದೆಲ್ಲವನ್ನೂ ಮೀರಿ ಅವರ ಸುತ್ತ ಪ್ರಭಾವಲಯದಂತೆ ಬೆಳಗುತ್ತಿತ್ತು ಅವರ ಶೈಕ್ಷಣಿಕ ವಿಕ್ರಮ. ಆಕ್ಸಫರ್ಡಿಗೆ ಹೋಗಿ ಇಂಗ್ಲಿಷ್ ಸಾಹಿತ್ಯದಲ್ಲಿ ಅಭಿನಂದನಾಸ್ಪದ ಪ್ರಥಮ ವರ್ಗ ಪಡೆದವರು, ನಮ್ಮನ್ನಾಳಿದ ಬ್ರಿಟಿಷರನ್ನು ಅವರ ವಾಙ್ಮಯದಲ್ಲೇ ಮೀರಿ ನಿಂತವರು ಎಂದು.

ಗೋಕಾಕರ ಒಂದು ವೈಶಿಷ್ಟ್ಯವೆಂದರೆ ಅವರು ಎಲ್ಲ ಕ್ಲಾಸಿಗಳಿಗೂ ಪಾಠ ಹೇಳುತ್ತಿದ್ದರು. ಇತರ ಪ್ರಾಂಶುಪಾಲರಂತೆ ಕೇವಲ ಡಿಗ್ರಿ ಕ್ಲಾಸುಗಳಿಗೆ ಮಾತ್ರ ಪಾಠಮಾಡುತ್ತಿರಲಿಲ್ಲ. ಹೀಗಾಗಿ ಎಲ್ಲ ವಿದ್ಯಾರ್ಥಿಗಳ ಸಂಪರ್ಕ ಅವರಿಗೆ ಬರುತ್ತಿತ್ತು. ಒಂದು ದಿನ ಗಿರೀಶರು ವರ್ಗ ಮುಗಿದೊಡನೆ ಗೋಕಾಕರನ್ನು ಕಾರಿಡಾರಿನಲ್ಲಿ ಸಂಧಿಸಿ ತಾನು ಕನ್ನಡದಲ್ಲಿ ಕವಿತೆ ಬರೆಯುವುದಾಗಿಯೂ, ಆಧುನಿಕ ಇಂಗ್ಲಿಷ್ ಕಾವ್ಯ ತಿಳಿದುಕೊಳ್ಳಲು ಯಾವ ಪುಸ್ತಕ ಓದಬೇಕು? ಎಂದು ಕೇಳಿದರು. ಗೋಕಾಕರಿಗೆ ಸಂತೋಷ ಆಗಿರಬೇಕು. ತಮ್ಮೊಡನೆ ತಮ್ಮ ಆಫೀಸಿಗೆ ಕರೆದುಕೊಂಡು ಹೋದರು. ಎದುರಿಗಿನ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೇಳಿದರು.

ನೀನು ಈ ಪ್ರಶ್ನೆ ಯಾರಿಗಾದರೂ ಕೇಳಿದರೆ ಟಿ.ಎಸ್.ಎಲಿಯಟ್(T.S.Eliot)ನ ಕಾವ್ಯ ಓದು ಎಂದು ಹೇಳಬಹುದು. ಅವನು ಒಳ್ಳೆಯ ಕವಿ. ಆದರೆ ಕಠಿಣ ಕವಿ, ಆರಂಭದಲ್ಲಿಯೇ ಅವನನ್ನು ಓದುವದು ಬೇಡ ಎನ್ನುತ್ತ, ಡಬ್ಲೂ.ಎಚ್. ಆಡೆನ್, ಸ್ಟೀಫನ್ ಸ್ಪೆಂಡರ್, ಸಿ.ಡೇ.ಲೂಇಸ್, ಲೂಇಸ್ ಮ್ಯಾಕ್‌ನೀಸ್ (W.H.Auden, Stephen Spender, C Day Lewis, Louis MacNiece) ಮುಂತಾದ ಕವಿಗಳ ಹೆಸರು ಬರೆದುಕೊಳ್ಳಲು ಹೇಳಿದರು. ಗಿರೀಶ ಕೂಡಲೆ ಲೈಬ್ರರಿಗೆ ಧಾವಿಸಿದರು. ಕಾಲೇಜಿನಲ್ಲಿ ಹೆಜ್ಜೆಯಿಟ್ಟ ಗಳಿಗೆಯಿಂದ ತಮ್ಮಲ್ಲಿ ಬೆಳವಣಿಗೆ ಪ್ರಾರಂಭವಾಯಿತು ಎಂದು ಗಿರೀಶ ಬರೆಯುತ್ತಾರೆ. ಲಾರೆನ್ಸ್ ಡ್ಯೂರೆಲ್ ಎಂಬ ಅಜ್ಞಾತ ಲೇಖಕನ ಪುಸ್ತಕ (ಎ ಕೀ ಟು ಮಾಡರ್ನ ಬ್ರಿಟಿಶ್ ಪೋಯಟ್ರಿ) ಅವರ ಮೇಲೆ ಪ್ರಭಾವ ಬೀರಿತ್ತು. ಐನ್‌ಸ್ಟೈನ್, ಫ್ರಾಯ್ಡ, ಡಾರ್ವಿನ್ ಮುಂತಾದ ವಿಜ್ಞಾನಿಗಳು ತಮ್ಮ ಅನ್ವೇಷಣೆಗಳಿಂದ ಹೇಗೆ ಕಾವ್ಯದ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾಯಿಸಿದ್ದಾರೆಂಬುದನ್ನು ಸೋದಾಹರಣವಾಗಿ ಅವನು ವಿವರಿಸಿದ್ದನಂತೆ.

ಮೊದಲನೆಯ ವರ್ಷದಲ್ಲಿದ್ದಾಗ(1954) ಗಿರೀಶ ತನ್ನ ಪಠ್ಯದಲ್ಲಿರುವ ಎಲ್ಲ ಕವಿತೆ ಮೊದಲೇ ಓದಿಬಿಟ್ಟಿದ್ದರು. ಒಮ್ಮೆ ಗೋಕಾಕರು ಯಾವ ಪದ್ಯ ಕಲಿಸಲಿ? ಎಂದು ಕೇಳಿದಾಗ ಗಿರೀಶ ಕುಬ್ಲಾ ಖಾನ(Kubla Khan) ಎಂದರಂತೆ. (ಪ್ರಸಿದ್ಧ ರೊಮ್ಯಾಂಟಿಕ್ ಕವಿ ಮತ್ತು ವಿಮರ್ಶಕ ಕೋಲ್ರಿಜ್ ಅಫೀಮಿನ ಅಮಲಿನಲ್ಲಿ ಬರೆದ ಕಠಿಣ ಸ್ವಾರಸ್ಯಕರ ಕವಿತೆ ಅದಾಗಿತ್ತು). ಗೋಕಾಕರು ಕವಿತೆಯಲ್ಲಡಗಿರುವ ಮಾಯಾ ವಿಶ್ವವನ್ನು ತೆರೆದಿಟ್ಟರು. ಗಿರೀಶರಿಗೆ ಎಷ್ಟು ಆನಂದವಾಗಿತ್ತೆಂದರೆ ಮೂರು ವರ್ಷಗಳಲ್ಲಿ ಆ ಕವಿತೆಯನ್ನು ಮೂರುಸಲ ಕನ್ನಡಕ್ಕೆ ಭಾಷಂತರಿಸಿದರಂತೆ. ಪ್ರೊ.ವಿ.ಎಂ.ಇನಾಂದಾರರು ಕಲಿಸಿದ ಎಲಿಯಟ್ ಕವಿಯ ವೇಸ್ಟ್ ಲ್ಯಾಂಡ್ (Waste Land) ಇವರನ್ನು ಆಧುನಿಕ ಕ್ಷೇತ್ರಕ್ಕೆ ಕರೆದೊಯ್ಯಿತು. ಎಲಿಯಟ್ ಇವರ ನಚ್ಚಿನ ಕವಿಯಾದ. ಅವನ ಪ್ರಸಿದ್ಧ ದಿ ಫೋರ್ ಕ್ವಾರ‍್ಟ್ರೆಟ್ಸ್(The Four Quartrets)ನ್ನು ಮಿತ್ರರಾದ ಕೃಷ್ಣ ಬಸರೂರ, ಅರೋರ ಫಿಗೆರ್ರೇಡೊ ಅವರೊಂದಿಗೆ ಕುಳಿತು ಪ್ರತಿ ಸಾಲು ಮೆಚ್ಚುತ್ತ ಓದಿದರು.

ಆಗ ಭಾರತದ ಸಾಂಸ್ಕೃತಿಕ ವಾತಾವರಣ ಉಸಿರುಗಟ್ಟುವಂತಿತ್ತು. ತನ್ನ ಪ್ರತಿಭೆ ಇಲ್ಲಿ ಯಾರೂ ಗುರುತಿಸಲಾರರು ಎಂಬ ಭಾವ ಬಂದಿತು. ಎಲಿಯಟ್, ಎಜ಼್ರಾ ಪೌಂಡ್, ಹೆಮಿಂಗ್ವೇ ಅವರ ನಾಡಿನಲ್ಲಿ ತಾನು ಬೆಳಗಬೇಕು ಎಂದು ನಿಶ್ಚಯಿಸಿದರು. ತಮ್ಮ ಪ್ರೀತಿಯ ವಿಷಯ ಇಂಗ್ಲಿಷ್ ಸಾಹಿತ್ಯ ಹಾಗೂ ತತ್ತ್ವಶಾಸ್ತ್ರವಾಗಿದ್ದರೂ ಸ್ಕಾಲರ‍್ಶಿಪ್ ಪಡೆದು ವಿದೇಶಕ್ಕೆ ಶಿಕ್ಷಣ ಪಡೆಯಲು ಹೋಗಬೇಕಾದರೆ ಪ್ರಥಮ ದರ್ಜೆಯಲ್ಲಿ ಪಾಸಾಗಬೇಕು. ಅದಕ್ಕೆ ಗಣಿತ ವಿಷಯದಲ್ಲಿ ಬಿ.ಎ.ಡಿಗ್ರಿ ಪಡೆಯಲು ನಿಶ್ಚಯಿಸಿದರು. ಇಂಟರ್ ಆರ್ಟ್ಸ್‌ನಲ್ಲಿ ಹೆಚ್ಚಿನವರು ಲಾಜಿಕ್ ವಿಷಯ ಆರಿಸುತ್ತಾರೆ. ಅದಕ್ಕೆ ಬದಲಾಗಿ ಗಿರೀಶ ಗಣಿತ ಆರಿಸಿದ್ದರು. ಬಿ.ಎ.ಕ್ಲಾಸಿನಲ್ಲಿ ಅವರ ವಿಷಯ ಗಣಿತ ಮತ್ತು ಸಂಖ್ಯಾಶಾಸ್ತ್ರ ಆಯ್ದುಕೊಂಡರು. ಗೋಕಾಕರು ಸ್ವಲ್ಪ ಮಡಿವಂತರು. ಹುಡುಗ-ಹುಡುಗಿಯರಿಗೆ ಮುಕ್ತವಾಗಿ ಬೆರೆಯಲು ಬಿಡುತ್ತಿರಲಿಲ್ಲ. ಕಾವಿಬಟ್ಟೆ ಧರಿಸುವವರ ಬಗ್ಗೆ ವಿಶೇಷ ಆದರ ತೋರುತ್ತಿದ್ದರು. ಇದು ಗಿರೀಶರಿಗೆ ಸರಿಬರುತ್ತಿರಲಿಲ್ಲ. ಗೋಕಾಕರ ಯುಗಾಂತರ ನಾಟಕವನ್ನು ಕಾಲೇಜಿನಲ್ಲಿ ಪ್ರದರ್ಶಿಸಿದಾಗ ಕನ್ನಡ ಪ್ರಾಧ್ಯಾಪಕ ಮಳಗಿಯವರು ನಿರ್ದೇಶಿಸಿದ್ದರು, ಗಿರೀಶ ಅದರಲ್ಲಿ ಪಾತ್ರವಹಿಸಿದ್ದರು. ನಾಟಕದಲ್ಲಿ ವಿನೋದವಿಲ್ಲವೆಂದು ಕೆಲವು ಹಾಸ್ಯಪ್ರಧಾನ ದೃಶ್ಯಗಳನ್ನು ಬರೆಸಿದರು. ಈ ದೃಶ್ಯಗಳೇ ವಿದ್ಯಾರ್ಥಿಗಳ ಮೆಚ್ಚುಗೆ ಪಡೆದು ಮೂಲ ನಾಟಕದ ದೌರ್ಬಲ್ಯವನ್ನು ಎತ್ತಿತೋರಿಸಿದವು. ಅವರ ಕಾವ್ಯದ ಬಗ್ಗೆ ಕೂಡ ಗಿರೀಶರಿಗೆ ಹೆಚ್ಚಿನ ಆಕರ್ಷಣೆ ಇರಲಿಲ್ಲ. ಆದ್ದರಿಂದ ಅವರಿಂದ ದೂರ ಇರತೊಡಗಿದ್ದನ್ನು ಗೋಕಾಕರು ಗಮನಿಸಿದರು. ಆದರೆ ಕಾಲೇಜು ನಂತರದ ಜೀವನದಲ್ಲಿ ಭೆಟ್ಟಿಯಾದಾಗೆಲ್ಲ ಗೋಕಾಕರು ತಮ್ಮನ್ನು ಮಮತೆಯಿಂದ, ಆತ್ಮೀಯತೆಯಿಂದ ಬರಮಾಡಿಕೊಂಡರೆಂಬುದನ್ನು ಗಿರೀಶ ನೆನೆಯುತ್ತಾರೆ.

ಕರ್ನಾಟಕ ಕಾಲೇಜಿನಲ್ಲಿ ಇವರಿಗೆ ಬಹಳ ಪ್ರಿಯರಾದ ಪ್ರಾಧ್ಯಾಪಕರಾದ ಕೆ.ಜೆ.ಶಹಾ ಅವರು ತತ್ತ್ವಜ್ಞಾನ ಕಲಿಸುತ್ತಿದ್ದರು. ಅವರು ಕೆಂಬ್ರಿಜ್‌ನಲ್ಲ್ ವಿದ್ಯಾಭ್ಯಾಸ ಮಾಡಿದ್ದರು ಅಷ್ಟೇ ಅಲ್ಲ, ಅಲ್ಲಿ ವಿಶ್ವವಿಖ್ಯಾತ ತತ್ತ್ವವೇತ್ತ ವಿಟ್‌ಗೆನ್‌ಸ್ಟೈನ್‌ನ ನಿಕಟ ವಿದ್ಯಾರ್ಥಿಯಾಗಿದ್ದರು. ಇವರು ಕೆಂಬ್ರಿಜ್ ಮಾದರಿಯಲ್ಲಿ ಪಾಠಮಾಡುತ್ತಿದ್ದರು. ವಿದ್ಯಾರ್ಥಿಗಳು ಅವರ ವಿರುದ್ಧ ಮಷ್ಕರ ಹೂಡಿದ್ದೂ ಉಂಟು. ವಿದ್ಯಾರ್ಥಿಗಳಿಗೆ ಬೇಕಾಗಿದ್ದು ಟಿಪ್ಪಣಿಗಳು, ಪರೀಕ್ಷೆಗೆ ಬರುವ ಪ್ರಶ್ನೆಗಳಿಗೆ ಕೊಡಬೇಕಾದ ನಿರ್ಧಾರಿತ ಉತ್ತರಗಳು. ಗಿರೀಶರೂ ಕೆಲ ಸಲ ಅವರ ಕ್ಲಾಸ್‌ನಲ್ಲಿ ಹೋಗಿ ಕೂಡುತ್ತಿದ್ದರು. ಅವರು ಕಲಿಸಿದ್ದೆಲ್ಲ ಅರ್ಥವಾಗದಿದ್ದರೂ ಅವರು ಕೇಳುವ ಪ್ರಶ್ನೆಗಳು ತಮ್ಮನ್ನು ಯಾವ ದಿಕ್ಕಿನಲ್ಲಿ ಕರೆದೊಯ್ಯುತ್ತವೆ ಎಂಬುದನ್ನು ತಿಳಿದುಕೊಳ್ಳಲೆತ್ನಿಸುತ್ತಿದ್ದರಂತೆ. ಮುಂದೆ ಆಕ್ಸಫರ್ಡ್‌ನಲ್ಲಿ ಇವರು ತತ್ತ್ವಜ್ಞಾನದ ವಿದ್ಯಾರ್ಥಿಯಾಗಿದ್ದಾಗ ಪ್ರೊ| ಶಹಾ ಅವರಿಂದ ಅನಧಿಕೃತವಾಗಿ ಪಡೆದ ಮಾರ್ಗದರ್ಶನವೇ ಇವರ ಅಭ್ಯಾಸಕ್ಕೆ ಊರುಗೋಲಾಗಿತ್ತಂತೆ. ರ‍್ಹೋಡ್ಸ್ ಸ್ಕಾಲರ‍್ಶಿಪ್ ಬಗ್ಗೆ ಎಲ್ಲ ಮಾಹಿತಿ ಕೊಟ್ಟು ಪ್ರಯತ್ನಿಸಲು ಹೇಳಿದ ಶ್ರೇಯಸ್ಸು ಪ್ರೊ| ಶಹಾ ಅವರಿಗೇ ಸಲ್ಲುತ್ತದೆ.

ಶಹಾ ಅವರು ಸಂಸ್ಕೃತವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಮುಂಬೈ ವಿಶ್ವವಿದ್ಯಾನಿಲಯದಿಂದ ಸಂಸ್ಕೃತ ವಿಷಯದಲ್ಲಿ ದಕ್ಷಿಣಾ ಫೆಲೋ ಗೌರವ ಪಡೆದಿದ್ದರು. ಭಾರತೀಯ ದರ್ಶನದ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದರು. ಭರ್ತೃಹರಿಗೂ ವಿಟ್‌ಗೆನ್‌ಸ್ಟೈನನಿಗೂ ಇರುವ ಸಾಮ್ಯ ಕುರಿತು ಅನ್ವೇಷಣೆ ಮಾಡಿದ್ದರು. ಭಾರತೀಯ ವೈಚಾರಿಕ ಸಂಪ್ರದಾಯ ನಾಟ್ಯಶಾಸ್ತ್ರ, ಮನುಸ್ಮೃತಿ, ಅರ್ಥಶಾಸ್ತ್ರ ಮೊದಲಾದ ಶಾಸ್ತ್ರಗಳು ಒಂದರೊಳಗೊಂದು ಹಾಸುಹೊಕ್ಕಾಗಿ ವಿಚಾರಧಾರೆಗಳಿಂದ ಬೆಳೆದು ಬಂದದ್ದು, ಈ ಎಲ್ಲ ಗ್ರಂಥಗಳ ಪರಸ್ಪರ ಸಂಬಂಧದ ಜಾಲವನ್ನು ಒಟ್ಟಾರೆ ತಿಳಿದುಕೊಂಡ ಹೊರತು ಆ ಗ್ರಂಥಗಳ ಸ್ವತಂತ್ರವಾದ ಮಹತ್ವ ಅರ್ಥವಾಗುವುದಿಲ್ಲ ಎಂದು ವಾದಿಸುತ್ತಿದ್ದರು. ಗಿರೀಶ ಅವರು 1988ರಿಂದ 1993ರವರೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಚೇರ್ಮನ್ ಆಗಿರುವಾಗ ಪ್ರೊ| ಶಹಾ ಅವರು ನಾಟ್ಯಶಾಸ್ತ್ರದ ಬಗ್ಗೆ ಒಂದು ವಿಚಾರ ಸಂಕಿರಣವನ್ನು ಯೋಜಿಸಲು ಬಯಸಿದರು. ಅಕಾಡೆಮಿಯವರು ಪ್ರಾಯೋಜಕರಾಗಲು ಒಪ್ಪಿದರು. ಸಂಕಿರಣದ ಮೊದಲನೆಯ ದಿನದ ತನಕ ಅವರ ಕೀನೋಟ್ ಅಡ್ರೆಸ್ ತಯಾರಾಗಿರಲಿಲ್ಲ. ಎಲ್ಲ ಸೂತ್ರ ಅವರ ಕೈಯಲ್ಲಿ ಬಿಟ್ಟಾಗ ಅವರು ಆಮಂತ್ರಿತರಲ್ಲಿ ಕೀರ್ತಿನಾಥ ಕುರ್ತಕೋಟಿ, ಕೆ.ವಿ.ಸುಬ್ಬಣ್ಣ ಅವರಂಥ ಸಂಸ್ಕೃತ ಬಲ್ಲ, ನಾಟ್ಯಶಾಸ್ತ್ರವನ್ನು ಅಭ್ಯಾಸ ಮಾಡಿದವರನ್ನು ಬಿಟ್ಟರೆ ಇತರರಾದ ಶಾಂತಿನಾಥ ದೇಸಾಯಿ, ಕೆ.ರಾಘವೇಂದ್ರರಾವ್, ಸಿ.ಡಿ.ನರಸಿಂಹಯ್ಯನವರಂತಹ ನಾಟ್ಯಶಾಸ್ತ್ರದ ಗಂಧಗಾಳಿ ಇಲ್ಲದ ಆಪ್ತಮಿತ್ರರನ್ನು ದಿಲ್ಲಿಗೆ (ಪಿಕ್‌ನಿಕ್‌ನಂತೆ) ಕರೆತಂದಿದ್ದರಂತೆ. ಗಿರೀಶರಿಗೆ ಮುಜಗರವಾಗಿತ್ತು. ತಾವು ತಪ್ಪು ಮಾಡಿದ್ದನ್ನು ನಂತರ ಪ್ರೊ| ಶಹಾ ಒಪ್ಪಿಕೊಂಡರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+