ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ| ಬಿಟಿ ರುದ್ರೇಶ್‌ರ ಅನುಭವ ಕಥನ (ಭಾಗ 2)

By Staff
|
Google Oneindia Kannada News

Dr. BT Rudresh's book on homeopathyನಿತ್ಯ ವ್ಯಾಯಾಮ, ನಿಯಮಿತ ಆಹಾರ ಪದ್ಧತಿ, ವ್ಯವಸ್ಥಿತ ಜೀವನ ವಿಧಾನ, ಔಷಧಿಯಷ್ಟೇ ಮುಖ್ಯ. ಇವಿಲ್ಲವಾದರೆ ಜಗತ್ತಿನ ಅತ್ಯುತ್ತಮ ವೈದ್ಯ ಕೂಡ ಅಪ್ರಯೋಜಕನಾಗುತ್ತಾನೆ ಎನ್ನುವ ಡಾ.ಬಿಟಿ ರುದ್ರೇಶ್ ಅವರು 'ನೋವು ನೀಗುವ ಕಾಯಕದಲ್ಲಿ ಕಂಡ ಬದುಕು, ಬೆಳಕು' ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ಕಥಾರೂಪದಲ್ಲಿ ಹಣೆದಿದ್ದಾರೆ.

(ಮುಂದುವರಿದಿದೆ)

ಇನ್ನೊಂದು ಕೇಸ್ ಹೀಗಿದೆ:

ಹುಬ್ಬಳ್ಳಿಯ ವರ್ತಕರೊಬ್ಬರು ತಮ್ಮ ತಂಗಿಯ ವಿಚಿತ್ರ ಕಾಯಿಲೆಯ ಬಗ್ಗೆ 1966 ರಲ್ಲಿ ಡಾ| ರುದ್ರೇಶರಿಗೆ ಒಂದು ಪತ್ರ ಬರೆದಿದ್ದರಂತೆ. 24 ವರ್ಷದ ತಮ್ಮ ಸೋದರಿಗೆ ರೈಲು ಪ್ರಯಾಣ ಮಾಡುವಾಗ ಕಿಟಕಿಯ ಬಾಗಿಲು ಬಿದ್ದು ಕೈಗೆ ಗಾಯವಾಗಿತ್ತು. ಬಾವು ಮತ್ತು ನೋವು ಕೆಲಕಾಲ ಇತ್ತು ನಂತರ ಮಾಯವಾಯ್ತು. ಅದಾದ ಒಂದು ತಿಂಗಳ ಮೇಲೆ ಅವಳ ಬಲಭುಜ, ಬೆನ್ನು, ಕುತ್ತಿಗೆ ಮತ್ತು ಬಲಗೈಯಲ್ಲಿ ಚಾಕು ಇರಿದಂತೆ ನೋವಾಗುತ್ತಿತ್ತು. ಎಕ್ಸ್-ರೇಯಲ್ಲಿ ಕಾರಣ ತಿಳಿಯಲಿಲ್ಲ. ನೋವು ನಿವಾರಕ ಮದ್ದು ಕೆಲಸಮಾಡಲಿಲ್ಲ. ಸ್ಟಿರಾಯಿಡ್ ಕೊಟ್ಟಾಗ ತತ್ಕಾಲ ಉಪಶಮನ ದೊರೆಯಿತು, ಆದರೆ ನೋವು ಮತ್ತೆ ಮರುಕಳಿಸಿತು. ಮೂಳೆ ತಜ್ಞರಿಗೆ, ಫಿಜಿಷಿಯನ್ನರಿಗೆ, ಕಿವಿ-ಮೂಗು-ಗಂಟಲು ತಜ್ಞರಿಗೆ ದಂಡ ತೆತ್ತು ಪರೀಕ್ಷಿಸಿದರೂ ಕಾರಣ ತಿಳಿಯಲಿಲ್ಲ. ಸರ್ವೈಕಲ್ ಸ್ಪಾಂಡಿಲೈಟಿಸ್ ಇರಬೇಕೆಂದು ತೀರ್ಮಾನಿಸಲಾಯಿತು. ನೋವುನಿವಾರಕ ಗುಳಿಗೆ, ನಂತರ ನಿದ್ರೆಗೆ ಇಂಜೆಕ್ಷನ್ ಕೊಡುತ್ತಿದ್ದರು. 2 ಗಂಟೆಗಳ ನಂತರ ಸ್ವಲ್ಪ ನಿದ್ದೆ ಬರುತ್ತಿತ್ತು. ಮರುದಿನ ಯಥಾ ಪ್ರಕಾರ ರಕ್ತ ಮೂತ್ರ ಪರೀಕ್ಷೆ, ಕ್ಷಕಿರಣ, ಸ್ಕ್ಯಾನಿಂಗ ಮಾಡಿದಾಗ ಎಲ್ಲ ಸರಿಯಾಗಿದೆ ಎಂಬ ರಿಪೋರ್ಟ್ ಬಂತು. ಔಷಧಿ ನಿಲ್ಲಿಸಿದರು.

ಆವರ ಪತ್ರಕ್ಕೆ ಉತ್ತರ ಕೊಡುವ ಮೊದಲೇ ಆ ಹುಡುಗಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದರಂತೆ. ಒಂದು ಹೊಟೇಲಿನಲ್ಲಿ ಇಳಿದುಕೊಂಡರು, ಬೆಳಿಗ್ಗೆ ಒಂದು ಇಂಜೆಕ್ಷನ್ ಕೊಟ್ಟು ನಂತರ ಡಾ| ರುದ್ರೇಶರ ಬಳಿಗೆ ಕರೆದುಕೊಂಡು ಬಂದರಂತೆ. ಅವಳ ತಂದೆ ಹೇಳಿದರಂತೆ, ಇವಳಿಗೆ ನೋವು ಬಂದಾಗ ಇವಳಿಡುವ ಬೊಬ್ಬೆ ತಾಳಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಅವಳನ್ನು ಕೋಣೆಯಲ್ಲಿ ಕೂಡಿಟ್ಟು, ಬಾಗಿಲು ಕಿಟಿಕೆ ಮುಚ್ಚಿ, ಎಲ್ಲೆಡೆ ಬಟ್ಟೆ ತುರುಕಿದರೂ ಅವಳ ಬೊಬ್ಬೆ ಬೀದಿಗೆ ಕೇಳಿಸುತ್ತದೆ. ನೆರೆಹೊರೆಯವರು ಪೋಲೀಸರಿಗೆ ದೂರು ಕೊಟ್ಟು, ಮನೆ ಖಾಲಿಮಾಡಿ ಇಲ್ಲವೆ ಅವಳನ್ನು ಆಸ್ಪತ್ರೆಯಲ್ಲಿಡಿ ಅನ್ನುತ್ತಾರೆ. ಮುಂಬೈ, ಬೆಂಗಳೂರು ಡಾಕ್ಟರರಲ್ಲದೆ ವಿದೇಶದ ತಜ್ಞ ಡಾಕ್ಟರರ ಸಲಹೆ ಪಡೆದರೂ ಫಲಿತಾಂಶ ಸೊನ್ನೆಯಾಗಿದೆ.''

ಆಗ ಡಾ| ರುದ್ರೇಶರಿಗೆ ಹೊಳೆದದ್ದು, ಈ ಹುಡುಗಿಗೆ ರೈಲಿನಲ್ಲಿ ಕಿಟಿಕೆ ಬಿದ್ದ ನೋವು ಒಂದೇ ಕಾರಣವಲ್ಲ, ಮತ್ತೆ ಬೇರೆ ಯಾವುದೋ ಕಾರಣವಿದೆ, ಆ ಹುಡುಗಿ ಬಾಯಿಬಿಡುತ್ತಿಲ್ಲ. ಏನಾದರೂ ಮಾಡಿ ಆ ಕಾರಣ ತಿಳಿದುಕೊಳ್ಳಬೇಕು' ಎಂಬ ವಿಚಾರ. ಹೆದ್ದಾರಿ ಬಿಟ್ಟು ಕವಲು ದಾರಿ ಹಿಡಿಯಲು ನಿಶ್ಚಯಿಸಿದರು. ನೋವಿನಿಂದ ಅವಳ ಮುಖ ಕಳೆಗುಂದಿತ್ತು, ಆದರೂ ಕಣ್ಣಲ್ಲಿ ಹೊಳಪಿತ್ತು. ಸುಂದರಿಯಾಗಿದ್ದಳು. ಅವಳಿಗೆ ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಾಗಲಿಲ್ಲ. ಕೊನೆಗೆ ಗಗನಸಖಿ (ಏರ್ ಹೋಸ್ಟೆಸ್) ಆಗಲು ಪಯತ್ನಿಸಿದಳು. ಪ್ರಾರಂಭಿಕ ಟೆಸ್ಟ್ ಪಾಸಾಗಿದ್ದಳು. ಕೊನೆಯ ಹಂತ ತಲುಪಿದ್ದಳು. ಮೂರು ಜನ ಸಹೋದರಿಯರಲ್ಲಿ ಇವಳು ನಡುವಿನವಳು. ಅಕ್ಕನ ಮದುವೆಯಾಗಿತ್ತು. ಅತ್ತೆಯ ಕಾಟ ತಾಳದೇ ತವರು ಮನೆ ಸೇರಿದ್ದಳು. ತಂಗಿಯ ಮದುವೆಯ ಪ್ರಯತ್ನ ನಡೆದಿತ್ತು. ತನ್ನ ಸ್ಥಿತಿಯಿಂದ ತತ್ತರಿಸಿಹೋಗಿದ್ದಳು. ಆದರೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿತ್ತು, ಮಹತ್ವಾಕಾಂಕ್ಷೆ ಇತ್ತು. ಅವಳದು ನೇಟ್ರಮ್ ಮೂರ್' ವ್ಯಕ್ತಿತ್ವವೆಂದು ನಿರ್ಧರಿಸಿ ಅದೇ ಔಷಧಿ ಶುರು ಮಾಡಿದರು.

ಅವಳೊಬ್ಬಳನ್ನೇ ಕೂಡಿಸಿಕೊಂಡು ಇನ್ನೊಂದು ಕಾರಣ ತಿಳಿಯಲು ಯತ್ನಿಸಿದರು. ಅವಳ ಮನೆಯವರು ಶಿರಡಿಯ ಸಾಯಿಬಾಬಾ ದರ್ಶನಕ್ಕೆ ಹೋಗಿದ್ದರಂತೆ. ಅಲ್ಲಿ ಹೊಟೇಲಿನಲ್ಲಿ ತಂಗಿದ್ದರು. ಸೆಕೆ ಇತ್ತು. ಕಿಟಿಕಿಯ ಬಾಗಿಲು ತೆರೆದಿದ್ದರು. ಯಾವುದೋ ಪುರುಷರ ಕೈ ಅವಳ ಎದೆಯ ಮೇಲೆ ಆಟ ಆಡಿತ್ತು. ಹೆದರಿಕೆ, ನಾಚಿಕೆ ಆವರಿಸಿತು, ಕಿರುಚಲು ಸಾಧ್ಯವಾಗಲಿಲ್ಲ. ಪ್ರತಿರೋಧದಿಂದ ಅವಳು ಕಂಗಾಲಾದಳು. ಆ ಘಟನೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ಈ ಘಟನೆಯನ್ನು ಅವಳು ಹಿರಿಯರಲ್ಲಿ, ಸಮವಯಸ್ಕರಲ್ಲಿ ಹೇಳಕೊಳ್ಳಲು ಆಗಲಿಲ್ಲ. ಆದ್ದರಿಂದ ಆ ಘಟನೆಯ ನೆನಪು ಶಾಪವಾಗಿತ್ತು, ನಿರಂತರ ಕಾಡುತ್ತಿತು.

ರುದ್ರೇಶರ ಪತ್ತೇದಾರಿಕೆಯಿಂದಾಗಿ ಅದು ಹೊರಬಿತ್ತು. ಈ ವಿಷಯ ತಿಳಿದಾಗ ಡಾಕ್ಟರರು ನೇಟ್ರಮ್ ಮ್ಯೂರ್' ಔಷಧಿಯ ಜೊತೆಗೆ ಮ್ಯಾಗ್‌ಫಾನ್' ಕೊಟ್ಟು ಕಳಿಸಿದರು. ಎರಡು ವಾರದ ನಂತರ ಸುಧಾರಣೆ ಕಂಡುಬಂತು. ಅವಳನ್ನು ಕೊರೆಯುತ್ತಿರುವ ಭಯಾನಕ ಘಟನೆಯನ್ನು ಮನದಲ್ಲಿಟ್ಟುಕೊಂಡು, ಮಾಂಸಖಂಡಗಳ ಮೇಲೆ ಕೆಲಸ ಮಾಡುವ ಜೆಲ್ಸೇಮಿಯಂ' ಕೊಡಲು ಪ್ರಾರಂಭಿಸಿದರು. ಆ ಔಷಧಿಯಲ್ಲಿರುವ ಮ್ಯಾಗ್ನೋಷಿಯಂ' ಅಂಶ ಮಾಂಸಖಂಡಗಳ ಮೇಲೂ ನರಗಳ ಮೇಲೂ ಪರಿಣಾಮ ಬೀರುತ್ತಿತ್ತು. ಮೊದಲು ಪ್ರತಿದಿನ ಆಗುವ ರೋಗ ಉಲ್ಬಣ್ (ಅಟ್ಯಾಕ್) ಐದು ದಿನಕ್ಕೊಮ್ಮೆ, ನಂತರ ಏಳು ದಿನಕ್ಕೊಮ್ಮೆ, ನಂತರ ಹದಿನೈದು ದಿನಕ್ಕೊಮ್ಮೆ ಕಾಣಿಸಿತು, ನಂತರ ನಿಂತೇ ಹೋಯಿತು.

ಇದಾದ ನಾಲ್ಕು ತಿಂಗಳ ತರುವಾಯ ಹುಬ್ಬಳ್ಳಿಯಲ್ಲಿ ನಡೆದ ಒಂದು ಕಾರ್ಯಾಗಾರದಲ್ಲಿ ಪ್ರಬಂಧ ಮಂಡಿಸಲು ಡಾ| ರುದ್ರೇಶ್ ಹೋಗಿದ್ದರು. ಡಾಕ್ಟರರನ್ನು ಕಾಣಲು ತರುಣಿ ತಂದೆಯೊಡನೆ ಪ್ರತ್ಯಕ್ಷಳಾದಳಂತೆ. ಅವಳ ತಂದೆ ಇವರ ಜೊತೆಗಿದ್ದ ಡಾ| ರಾಮದಾಸ್ ಅವರಿಗೆ ಹೇಳಿದರಂತೆ, ಸಾರ್, ನಾನು ಇವಳ ಜನ್ಮಕೊಟ್ಟ ತಂದೆ. ಆದರೆ ಡಾ| ರುದ್ರೇಶ್ ಅವರು ಇವಳಿಗೆ ಪುನರ್ಜನ್ಮ ಕೊಟ್ಟ ತಂದೆ.'' ಆಗ ಡಾ| ರುದ್ರೇಶರ ಕಣ್ಣಂಚಿನಲ್ಲಿ ಆನಂದಭಾಷ್ಪ ಕಂಡಿತ್ತು. ಅವರು ಬೆಟ್ಟದಂತಹ ಸಮಸ್ಯೆಯನ್ನು ಮಂಜಿನಂತೆ ಕರಗಿಸುವ ಔಷಧ ಪದ್ಧತಿಯ ಜನಕ ಹಾನಿಮನ್‌ರಿಗೆ ಮನದಲ್ಲಿ ನಮೋ ಎಂದರಂತೆ.

ಈ ಪುಸ್ತಕದಲ್ಲಿ ಕ್ಯಾನ್ಸರ್, ರುಮ್ಯಾಟಿಜಂ, ಎಕ್ಸಿಮಾ, ಅಸ್ತಮಾ, ಕಿಡ್ನಿ ಫೆಲ್ಯುವರ್, ಮೊದಲಾದ ಕಾಯಿಲೆಯಿಂದ ಬಳಲಿ ಹೋಮಿಯೀಪತಿ ಚಿಕಿತ್ಸೆ ಪಡೆದು ಗುಣಮುಖರಾದ ಅನೇಕ ರೋಗಿಗಳ ಕೇಸ್-ಹಿಸ್ಟರಿ ಆಧಾರಿತ ಸತ್ಯಕತೆಗಳು ಇವೆ. ಸಂತಾನಹೀನತೆ ಒದು ರೋಗವಲ್ಲ, ಅದು ಕೊರತೆ. ಅದರಿಂದ ಬಳಲಿದವರಿಗೆ ಸಂತಾನಭಾಗ್ಯ ನೀಡಿದ ಕತೆಗಳೂ ಇವೆ.

ಡಾ| ರುದ್ರೇಶ್ ಅವರು ತಮ್ಮ ಅನುಭವಗಳನ್ನು ಕತೆಯ ರೂಪದಲ್ಲಿ ಹೆಣೆಯುವುದರ ಜೊತೆಗೆ ರೋಗಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಾರೆ. ಹೋಮಿಯೋಪತಿ ಚಿಕಿತ್ಸೆಯ ಅನನ್ಯತೆಯ ಬಗ್ಗೆ ಕೂಡ ಹೇಳುತ್ತಾರೆ.

ಅವರ ಪುಸ್ತಕದಿಂದ ಆಯ್ದ ಸ್ಮರಣೀಯವಾದ ಕೆಲವು ಮಾತುಗಳು, ಹೇಳಿಕೆಗಳು ಹೀಗಿವೆ:

  • ನಿತ್ಯ ವ್ಯಾಯಾಮ, ನಿಯಮಿತ ಆಹಾರ ಪದ್ಧತಿ, ವ್ಯವಸ್ಥಿತ ಜೀವನ ವಿಧಾನ, ಔಷಧಿಯಷ್ಟೇ ಮುಖ್ಯ. ಇವಿಲ್ಲವಾದರೆ ಜಗತ್ತಿನ ಅತ್ಯುತ್ತಮ ವೈದ್ಯ ಕೂಡ ಅಪ್ರಯೋಜಕನಾಗುತ್ತಾನೆ.
  • ವೈದ್ಯರು, ರೋಗಿಗೆ ಔಷಧಿ ಕೊಟ್ಟು ಕಳುಹಿಸಿದರೆ ಸಾಕು' ಎಂಬ ಧೋರಣೆ ಇಟ್ಟುಕೊಂಡರೆ ಸಾಲದು. ವೈದ್ಯ ನಿಜವಾದ ಸ್ನೇಹಿತ-ದಾರ್ಶನಿಕ-ಮಾರ್ಗದರ್ಶಿ ಆದಾಗ ಮಾತ್ರ ಲೋಕಕ್ಕೆ ಕಲ್ಯಾಣವಾಗುವದು.
  • ಚರ್ಮದ ತೊಂದರೆ ಇರುವವರಿಗೆ ಡಯಾಬಿಟೀಸ್, ಕ್ಷಯ, ಕ್ಯಾನ್ಸರ್ ಮುಂತಾದ ಮಾರಕ ರೋಗಗಳ ತೊಂದರೆ ಇರುವುದಿಲ್ಲ.
  • ಚರ್ಮದ ವಿಷಯದಲ್ಲಿ ಇನ್ನೊಂದು ಕೌತುಕದ ವಿಷಯವಿದೆ. ರೋಗದ ಚಿಹ್ನೆಗಳನ್ನು ಪ್ರಕೃತಿ ದೇಹದ ಅಮೂಲ್ಯ ಅಂಗವಾದ ಚರ್ಮದ ಮೇಲೆ ತೋರಿಸುತ್ತದೆ. ಆದ್ದರಿಂದ ಔಷಧೋಪಚಾರ ಮಾಡುವಾಗ ವ್ಯಕ್ತಿಯ ವೈಯಕ್ತಿಕತೆಯ ಕಡೆ ಹೆಚ್ಚಿನ ಗಮನ ಕೊಡಬೇಕು, ರೋಗದ ಕಡೆಗಲ್ಲ.
  • ರೋಗಿಯನ್ನು ಸರಿಪಡಿಸಿದರೆ ರೋಗ ತಾನಾಗಿಯೇ ಸರಿಹೋಗುತ್ತದೆ. ರೋಗಿಯನ್ನು ಸರಿಪಡಿಸದೆಯೇ ಬರಿ ರೋಗಕ್ಕೆ ಔಷಧಿ ಕೊಟ್ಟರೆ ತತ್ಕಾಲಿಕ ಉಪಶಮನ ದೊರೆಯಬಹುದು, ಅಷ್ಟೇ ಅದು ಮರಳಿ ಕೂಡ ಬರಬಹುದು.
  • ಸಮಸ್ಯೆ ಬಂದಾಗ ಒದ್ದಾಡುವುದಕ್ಕಿಂತ ಬಾರದಂತೆ ನೋಡುವುದೇ ಜಾಣತನ.
  • ಸ್ಪಾಂಡಿಲೈಟಿಸ್ ಅಥವಾ ಬೆನ್ನು ನೋವು ಹಿಂದಿನ ಕಾಲಕ್ಕಿಂತ ಇಂದಿನ ಕಾಲದಲ್ಲಿ ಹೆಚ್ಚು ವ್ಯಾಪಕವಾಗಿರಲು ಕಾರಣ ಇಂದಿನ ನಾಗರೀಕತೆ ಎನ್ನಬಹುದು.
  • ಕ್ಯಾನ್ಸರ್ ಏಕೆ? ಹೇಗೆ? ಬರುತ್ತದೆ ಎನ್ನುವುದು ಈಗಲೂ ಜಿಜ್ಞಾಸೆಯ ವಿಷಯವಾಗಿದೆ. ಹೋಮಿಯೋಪತಿಯ ಮಟ್ಟಿಗೆ ಹೇಳುವುದಾದರೆ ಬೇಗ ಕಂಡು ಹಿಡಿದಲ್ಲಿ ಗುಣಪಡಿಸುವುದು ಖಂಡಿತ' ಎಂಬ ಸಿದ್ಧಾಂತ ಅಕ್ಷರಶಃ ಸತ್ಯ. ಹೋಮಿಯೋಪತಿಯ ದೃಷ್ಟಿಯಲ್ಲಿ ಮೂರು ದೋಷಗಳು ಒಟ್ಟಾರೆ ಸೇರಿದರೆ ಕ್ಯಾನ್ಸರ್.(ಸೋರಾ, ಸಿಫಿಲಿಸ್, ಹಾಗೂ ಸೈಕ್ರೋಸಿಸ್).
  • ಲಂಡನ್ನಿನ ನಿಯತಕಾಲಿಕವೊಂದು ಜಗತ್ತಿನಲ್ಲಿ ಅತ್ಯಂತ ಸಂತೋಷದಿಂದಿರುವ ವ್ಯಕ್ತಿ ಯಾರು? ಎಂದು ಒಂದು ಸಮೀಕ್ಷೆ ನಡೆಸಿತು. ದೊರೆತ ಸಹಸ್ರಾರು ಉತ್ತರಗಳಲ್ಲಿ ಕೆಳಗೆ ಕೊಟ್ಟಿರುವ ನಾಲ್ವರನ್ನು ಅತ್ಯಂತ ಸಂತೋಷದಲ್ಲಿರುವ ವ್ಯಕ್ತಿಗಳೆಂದು ಆರಿಸಿತು.
  1. ಕಲಾಕೃತಿಯನ್ನು ಬರೆದು ಮುಗಿಸಿದ ಬಳಿಕೆ ಸಿಳ್ಳೆಹಾಕುತ್ತಿದ್ದ ಕಲಾವಿದ.
  2. ಮರಳಲ್ಲಿ ಮನೆ ಕಟ್ಟಿ ನೋಡಿ ಸಂತಸದಿಂದ ಕುಪ್ಪಳಿಸುತ್ತಿರುವ ಮಗು.
  3. ಮಗುವಿಗೆ ಸ್ನಾನಮಾಡಿಸುತ್ತಿರುವ ತಾಯಿ.
  4. ರೋಗಿಯೊಬ್ಬನನ್ನು ಬದುಕಿಸಲು ಹೆಣಗಾಡಿ ಯಶಸ್ವಿಯಾದ ವೈದ್ಯ.

***

(ಡಾ| ರುದ್ರೇಶ್ ಅವರ ಚಿಕಿತ್ಸೆ ಪಡೆಯಲು ಬಯಸುವವರು ಕೆಳಗಿನ ವಿಳಾಸಕ್ಕೆ ಬರೆಯಿರಿ: Dr.B.T.Rudresh, Ashvini Homio Clinic, (Opp. Syndicate Bank), D.V.G.Rd, Basavanagudi, Bangalore-4 Ph:080-26797575). ಸಂತಾನಕ್ಕೆ ಸಂಬಂಧಿಸಿದವರು ಎರಡು ತಿಂಗಳು, ಇತರ ಕಾಯಿಲೆಯವರು ಒಂದು ತಿಂಗಳು ಕಾಯಬೇಕಾದೀತು. ಸ್ವಂತ ವಿಳಾಸ ಬರೆದ, ಅಂಚೆಚೀಟಿ ಹಚ್ಚಿದ, ಎನ್‌ವಲಪ್ ಕಳಿಸಿರಿ. ನಿಮಗೆ ಉತ್ತರ ದೊರೆಯುವುದು.)

ಡಾ| ಬಿಟಿ ರುದ್ರೇಶ್‌ರ ಅನುಭವ ಕಥನ (ಭಾಗ 1)ಡಾ| ಬಿಟಿ ರುದ್ರೇಶ್‌ರ ಅನುಭವ ಕಥನ (ಭಾಗ 1)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X