Get Updates
Get notified of breaking news, exclusive insights, and must-see stories!

ನಿರಾಶಾ ಕೂಪದಲ್ಲಿರುವ ರೋಗಿಗಳಿಗೆ ಹೊಸ ಆಶಾಕಿರಣ

Dr. B.T. Rudresh
ಬಿಟಿ ರುದ್ರೇಶ್ ಅವರ 'ನೋವು ನೀಗುವ ಕಾಯಕದಲ್ಲಿ ಕಂಡ ಬದುಕು, ಬೆಳಕು' ಪುಸ್ತಕ ಜೀವನದಲ್ಲಿ ಆಸಕ್ತಿ ಕಳೆದುಕೊಂಡ ಅನೇಕ ರೋಗಿಗಳಿಗೆ ಜೀವನೋತ್ಸಾಹ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಒಂದೇ ವರ್ಷದಲ್ಲಿ ಎರಡನೇ ಮುದ್ರಣ ಕಂಡಿದ್ದು ಪುಸ್ತಕದ ಜನಪ್ರಿಯತೆಗೆ ಸಾಕ್ಷಿ. ಪುಸ್ತಕವನ್ನು ಪರಿಚಯಿಸುವುದರೊಂದಿಗೆ ಅಂಕಣಕಾರರು ಪುಸ್ತಕದಲ್ಲಿನ ಆಸಕ್ತಿಕರ ಅಂಶಗಳನ್ನು ಇಲ್ಲಿ ನೀಡಿದ್ದಾರೆ.

ಅನುಭವ ಇದ್ದಲ್ಲಿ ಅಮೃತವಿರುತ್ತದೆ. ಜನಪರ ಕಾಳಜಿಯ ವೈದ್ಯನೊಬ್ಬ ಲೇಖನ ಕಾರ್ಯದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡರೆ, ಓದುಗರಿಗೆ ಮೂರು ಲಾಭಗಳು ದೊರೆಯುತ್ತವೆ:

1) ರೋಗದ ಬಗ್ಗೆ ಸರಿಯಾದ ಕಲ್ಪನೆ.
2) ತನ್ನ ರೋಗಕ್ಕೂ ಒಂದೆಡೆ ಉಪಶಮನವಿದೆ ಎಂಬ ಸಮಾಧಾನ.
3) ತನ್ನ ರೋಗಕ್ಕೆ ಒಂದು ಮೂಲಕಾರಣವಿದೆ, ಅದನ್ನು ತಾನು ಅರಿತಾಗ, ಅರ್ಧದಷ್ಟು ಸಮಸ್ಯೆ ಪರಿಹಾರವಾದಂತೆ ಎಂಬ ಆತ್ಮವಿಶ್ವಾಸ.

ಡಾ| ರುದ್ರೇಶ ಅವರು ಲೇಖಕರಾಗುವ ಹವ್ಯಾಸ ಪೂರೈಸಲು ಲೇಖನಗಳನ್ನು ಬರೆದವರಲ್ಲ. ತಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಂಡಾಗ ಅವರಿಗೆ ಒಂದು ಬಗೆಯ ನೆಮ್ಮದಿ ದೊರೆಯುತ್ತಿತ್ತು. ಅದನ್ನೇ ಲೇಖನ ರೂಪದಲ್ಲಿ ವಾಚಕರಲ್ಲಿ ಹಂಚಿಕೊಂಡರು. ಒಂದು ಪತ್ರಿಕೆಗೆ ಲೇಖನ ಬರೆದಾಗ ಅದನ್ನು ಮೆಚ್ಚಿ ಇತರ ಪತ್ರಿಕೆಯವರು ಅವರಿಗೆ ಬರೆಯಲು ಆಮಂತ್ರಿಸಿರುವುದು ಸಹಜ. ಕರ್ಣಾಟಕದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾದವು. ಕಳೆದ ಕಾಲು ಶತಮಾನದಿಂದ ಅವರು ವೈದ್ಯಕೀಯ ವೃತ್ತಿಯನ್ನು ಕೈಕೊಂಡಿದ್ದರೂ ಅವರು ಲೇಖನಗಳನ್ನು ಬರೆಯಲು ಶುರುಮಾಡಿದ್ದು 6-7 ವರ್ಷಗಳ ಹಿಂದೆ ಮಾತ್ರ. ಕನ್ನಡ ದೈನಿಕಗಳಾದ ಪ್ರಜಾವಾಣಿ, ವಿಜಯಕರ್ನಾಟಕ, ಕನ್ನಡಪ್ರಭ, ಉದಯವಾಣಿ, ಸಂಜೆವಾಣಿ; ವಾರಪತ್ರಿಕೆಗಳಾದ ಸುಧಾ, ತರಂಗಗಳಿಗೆ ಕಳೆದ ಆರು ವರ್ಷಗಳಿಂದ ಲೇಖನಗಳನ್ನು ಬರೆಯುತ್ತಿದ್ದಾರೆ. ಅವುಗಳಲ್ಲಿ 25 ಲೇಖನಗಳನ್ನು ಆಯ್ದು ಒಂದು ಪುಸ್ತಿಕೆ ಹೊರತಂದರು. ಅದಕ್ಕೆ ಸ್ವಲ್ಪ ಉದ್ದವಾದ, ಆದರೆ ಅರ್ಥಪೂರ್ಣ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಅದುವೆ ನೋವು ನೀಗುವ ಕಾಯಕದಲ್ಲಿ ಕಂಡ ಬದುಕು, ಬೆಳಕು''. ಒಂದು ವರ್ಷ ಮುಗಿಯುವುದರೊಳಗೆ ಎರಡನೆಯ ಸಂಸ್ಕರಣ ಸಿದ್ಧವಾಗಿದೆ. ಸಾಹಿತ್ಯ ಕೃತಿ ಮಾರಾಟವಾಗುವುದಿಲ್ಲ ಎನ್ನುವ ಕಾಲದಲ್ಲಿ ಆರೋಗ್ಯ, ಜ್ಯೋತಿಷ್ಯ, ವ್ಯಕ್ತಿವಿಕಸನದ ಬಗ್ಗೆ ಬರೆದ ಪುಸ್ತಕಗಳಿಗೆ ಬಹಳ ಬೇಡಿಕೆ ಇದೆ. (ನನ್ನ ಸಾಹಿತ್ಯೇತರ ಕೃತಿ, ಔಷಧಿಯಿಲ್ಲದೆ ಬದುಕಲು ಕಲಿಯಿರಿ' ಐದು ವರ್ಷಗಳಲ್ಲಿ ನಾಲ್ಕು ಸಂಸ್ಕರಣ ಪಡೆದುದೇ ಇದಕ್ಕೆ ಸಾಕ್ಷಿ.)

ಬದುಕು, ಬೆಳಕು' ಪುಸ್ತಕ ಹೋಮಿಯೋಪತಿಯ ಹೆಗ್ಗಳಿಕೆಯನ್ನು ಜಗತ್ತಿಗೆ ಸಾರುವ ಕನ್ನಡದಲ್ಲಿರುವ ಏಕೈಕ ಪುಸ್ತಕ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಬಗೆಯ ಪುಸ್ತಕ ಎಲ್ಲ ವೈದ್ಯಕೀಯ ಪ್ರಕಾರಗಳ ಬಗ್ಗೆ ಹೊರಬರುವುದು ಅವಶ್ಯಕವಾಗಿದೆ. (ಡಾ| ಸಂಜೀವ ಕಲಕರ್ಣಿಯವರ ಬೊಗಸೆಯಲ್ಲಿ ಧ್ಯಾನ', ಡಾ| ನಾರಾಯಣ ಮೊಗಸಾಲೆಯವರ ಪ್ರತಿ ಕ್ಷಣವೂ ನಿಮ್ಮದೇ' ಇವು ವೈದ್ಯವೃತ್ತಿಯನ್ನು ಅನುಸರಿಸಿರುವ ಬರೆದ ಅನುಭವ ಕಥನಗಳು. ಎರಡೂ ಪುಸ್ತಕಗಳು ಜನಪ್ರಿಯ ಪುಸ್ತಕಗಳು.)

ಡಾ| ರುದ್ರೇಶರ ಈ ಸ್ವಾನುಭವಕಥನವು ಒಂದು ರಮ್ಯ ಕತೆಯಂತೆ ಓದಿಸಿಕೊಂಡುಹೋಗುತ್ತದೆ. ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ ವಾಚಕರಲ್ಲಿ ಆದರಾಭಿಮಾನಗಳನ್ನು ಹುಟ್ಟಿಸುತ್ತದೆ. ಎಲ್ಲ ದಾರಿಗಳು ಮುಚ್ಚಿವೆ ಎಂದು ನಿರಾಶೆಯ ಕೂಪದಲ್ಲಿರುವ ರೋಗಿಗಳಿಗೆ ಹೊಸ ಆಶಾಕಿರಣವನ್ನು ತೋರುತ್ತದೆ. ಇವರ ಪುಸ್ತಕದಲ್ಲಿ ಹೋಮಿಯೋಪತಿಯ ಜನಕ ಡಾ| ಹಾನಿಮನ್ ಬಗ್ಗೆ, ಈ ಪರ್ಯಾಯ ಔಷಧ ಪದ್ಧತಿ ಹೋಮಿಯೋಪತಿಯ ಬಗ್ಗೆ, ಸಾಕಷ್ಟು ಮಾಹಿತಿ ದೊರೆಯುತ್ತದೆ. ಕೆಲವು ಅಸಾಧ್ಯ ರೋಗಗಳನ್ನು ನಿವಾರಿಸಿದ ಘಟನೆಗಳ ವಿವರ ದೊರೆಯುತ್ತದೆ.

ರೋಗನಿವಾರಣೆಯ ಒಂದು ದೊಡ್ಡ ತತ್ತ್ವವೆಂದರೆ, ರೋಗಿಯನ್ನು ಗುಣಪಡಿಸಬೇಕು, ರೋಗವನ್ನಲ್ಲ.' ದೇಹವೆಂದರೆ ಸ್ಪೇರ್‌ಪಾರ್ಟ್‌ಗಳ ಶೇಖರಣೆಯಲ್ಲ, ಅದು ಒಂದು ಅಖಂಡ ಪಿಂಡ. ಕಣ್ಣು, ಕಿವಿ, ಕೈ, ಕಾಲು, ಗಂಟಲು, ಹೃದಯ, ಕಿಡ್ನಿ, ತಲೆ ಇವುಗಳನ್ನೇ ಬೇರೆಬೇರೆಯಾಗಿ ಅಭ್ಯಸಿಸಿ ಹೈಟೆಕ್ ಟ್ರೀಟ್‌ಮೆಂಟ್ ನೀಡುವ ಸೂಪರ್ ಸ್ಪೆಷಾಲಿಸ್ಟರು ದೊರೆಯುತ್ತಾರೆ. ಹೋಮಿಯೋಪತಿ ಮತ್ತು ಆಯುರ್ವೇದದಲ್ಲಿ ಅಂಥ ಸ್ಪೆಷಾಲಿಸ್ಟರು ಇರುವುದಿಲ್ಲ. ಯಾಕೆಂದರೆ ಅವರು ದೇಹವನ್ನು ಅಖಂಡವಾಗಿ ನೋಡುತ್ತಾರೆ. ಸ್ಪೆಷಾಲಿಸ್ಟರು ತಾವು ತಜ್ಞತೆ ಪಡೆದ ದೇಹಭಾಗ ರಿಪೇರಿ ಮಾಡುವಾಗ ಇನ್ನೊಂದು ಭಾಗಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಒಂದು ವರದಿಯ ಪ್ರಕಾರ, ಜಗತ್ತಿನಲ್ಲಿ ಔಷಧಿ ದೊರೆಯದೇ ಸಾಯುವವರಿಗಿಂತ, ತಪ್ಪು ಔಷಧಿ ಸೇವಿಸಿ ಸಾಯುವವರ ಸಂಖ್ಯೆ ಅಧಿಕವಾಗಿದೆ. ಹೈಟೆಕ್ ವಿಧಾನದಲ್ಲಿ, ಬಹಳ ಸಲ, ಸೂಜಿಯಿಂದ ಗುಣಪಡಿಸುವ ಕಾಯಿಲೆಗೆ ಖಡ್ಗವನ್ನು ಬಳಸುತ್ತಾರೆ. ಅಲ್ಲಿ ಉಪಾಯಕ್ಕಿಂತ ಅಪಾಯವೇ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ.

ವಿವಿಧ ರೋಗಗಳನ್ನು ಗುಣಪಡಿಸಿದ ಅನುಭವ ಬಿಂಬಿಸುವ 25 ಲೇಖನಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಚರ್ಚಿಸಬಯಸುತ್ತೇನೆ.

ಡಯಾಬಿಟೀಸ್' ಎಂಬ ರೋಗವು ಮೊದಲು ಸಿರಿವಂತರ ರೋಗವಾಗಿತ್ತು, ವಯಸ್ಸಾದವರಿಗೆ ಬರುವ ಕಾಯಿಲೆಯಾಗಿತ್ತು. ಈಗ ಹದಿಹರಯದ ತರುಣರಿಗೂ, ಬಡವರಿಗೂ, ಮಧ್ಯಮ ವರ್ಗದವರಿಗೂ ಅಂಟಿಕೊಳ್ಳುವುದನ್ನು ನೋಡಿದರೆ ನಮ್ಮ ಆಧುನಿಕ ಜೀವನ ಶೈಲಿಯಲ್ಲಿಯೇ ಈ ರೋಗದ ಬೀಜಗಳು ಅಡಗಿವೆ ಎಂಬುದು ಗೊತ್ತಾಗುತ್ತದೆ. ಸಕ್ಕರೆ ಅಧಿಕವಾಗಿ ತಿಂದರೆ ಈ ಕಾಯಿಲೆ ಬರುವುದಿಲ್ಲ. ಮುಖ್ಯವಾಗಿ ಮಾನಸಿಕ ತಲ್ಲಣ, ಆತಂಕ, ಒತ್ತಡದ ಪರಿಣಾಮದಿಂದಾಗಿ ಈ ಸಕ್ಕರೆಯ ರೋಗ ಬರುತ್ತದೆ ಎಂಬುದು ಈಗ ಸಿದ್ಧವಾಗಿದೆ. ಇದು ನಾಗರೀಕತೆಯ ಅಭಿಶಾಪವಾಗಿದೆ' ಎಂದು ಡಾ| ರುದ್ರೇಶ್ ಹೇಳುತ್ತಾರೆ. ಯಾವ ಪ್ರಾಣಿಗೂ ಬರದ ಡಯಾಬಿಟೀಸ್ ಮನುಷ್ಯ ಪ್ರಾಣಿಯನ್ನೇಕೆ ಹುಡುಕಿಕೊಂಡು ಬಂತು ಎಂಬುದು ಹಿಂದೆ ಯಕ್ಷಪ್ರಶ್ನೆಯಾಗಿತ್ತು. ಇಂದು ಅದು ತೆರೆದ ಸತ್ಯವಾಗಿದೆ. ಮನುಷ್ಯ ನಿಸರ್ಗ ವಿರುದ್ಧ ಆಚರಣೆಯಿಂದ ಈ ಕಾಯಿಲೆಗಳಿಗೆ ಅಹ್ವಾನ ನೀಡುತ್ತಾನೆ. ವಿಪರೀತ ಲಾಲಸೆ, ಸ್ವೇಚ್ಛಾಚಾರ, ಒಂದೇ ದಿನದಲ್ಲಿ ಧನಿಕನಾಗಬೇಕೆಂಬ ಹಂಬಲದಿಂದ ಹಿಡಿಯುವ ಅಡ್ಡದಾರಿಗಳು; ಅದರಿಂದ ಉಂಟಾಗುವ ಜಂಜಾಟ, ಅದರ ಹಿಂದಿರುವ ಅಸೂಯೆ, ದ್ವೇಷ, ಅಹಂಕಾರ' ಮಧುಮೇಹಕ್ಕೆ ಕಾರಣ ಎನ್ನುತ್ತಾರೆ.

ಪ್ರಕೃತಿಯನ್ನೇ ಗೆಲ್ಲಲು ಹೊರಟಿರುವ ಮಾನವನಿಗೆ ಪ್ರಕೃತಿ ನೀಡಿದ ಉಡುಗೊರೆ ಡಯಾಬಿಟಿಸ್' ಎನ್ನುತ್ತಾರೆ. ಈ ರೋಗದ ಲಕ್ಷಣಗಳು- ಹಸಿವು, ಬಾಯಾರಿಕೆ, ಮೂತ್ರದಲ್ಲಿ ಸಕ್ಕರೆ, ಸುಸ್ತು. ಕೆಂಟ್‌ನ ಔಷಧಿ ಕೋಶ ನಿಘಂಟುವಿನಲ್ಲಿ ಅಸಂಖ್ಯ ಔಷಧಿಗಳನ್ನು ಸೂಚಿಸಲಾಗಿದೆ; ಮೂತ್ರದಲ್ಲಿಯ ಸಕ್ಕರೆಗೆ 63, ಬಹುಮೂತ್ರಕ್ಕೆ 230, ವಿಪರೀತ ಹಸಿವಿದೆ 140, ಬಾಯಾರಿಕೆಗೆ 230 ಔಷಧಿಗಳನ್ನು ಸೂಚಿಸಲಾಗಿದೆ. ಆ ಔಷಧಿಗಳಲ್ಲಿ ಒಂದೆರಡು ಮಾತ್ರ ಒಬ್ಬ ರೋಗಿಗೆ ಯೋಗ್ಯವಾಗಿರುತ್ತದೆ. ಆ ಯೋಗ್ಯ ಔಷಧಿ ಹುಡುಕಲು ವೈದ್ಯ ಪತ್ತೇದಾರನ ಕೆಲಸ ಮಾಡಬೇಕಾಗುತ್ತದೆ. ರೋಗಿಯ ಪರಿಸರ, ಅವನ ಮೇಲೆ ಪ್ರಭಾವಬೀರಿದ ವ್ಯಕ್ತಿಗಳು ಹಾಗೂ ಘಟನೆಗಳ ಬಗ್ಗೆ ವೈದ್ಯ ಅಭ್ಯಸಿಸಬೇಕಾಗುತ್ತದೆ.

ಒಂದು ಕೇಸ್ ಹೀಗಿದೆ: ಒಬ್ಬ ಸ್ಪುರದ್ರೂಪೀ ತರುಣಿ ಡಾ| ರುದ್ರೇಶರ ಕಡೆಗೆ ಎರಡು ಕಾಯಿಲೆಗಳನ್ನು ಹೊತ್ತುಕೊಂಡು ಬರುತ್ತಾಳೆ. ಒಂದು ದಯಾಬಿಟೀಸ್ ಇನ್ನೊಂದು ಬಿಳಿಸೆರಗು. ಆರು ವರ್ಷಗಳ ಹಿಂದೆ ಅವಳ ಗಂಡ ಅಪಘಾತದಲ್ಲಿ ಮಡಿದ ಸುದ್ದಿ ಕೇಳಿದ ಮೇಲೆ ಅವಳಿಗೆ ಈ ಕಾಯಿಲೆ ಶುರುವಾಯಿತು. ಅವನು ಮಡಿದ ಆರು ದಿನಗಳ ಮೇಲೆ ಇವಳಿಗೆ ಆ ಸುದ್ದಿ ತಿಳಿದಿತ್ತು. ಯಾಕೆ ಎಂದರೆ ಅವಳು ತಾಯಿಯ ಮನೆಯಲ್ಲಿದ್ದಳಂತೆ. ತಾಯಿಯ ಮನೆಗೆ ಬರಲು ಕಾರಣ ಕೇಳಿದರೆ, ಗಂಡನು ಎರಡು ಬಗೆಯ ಮೋಸ ಮಾಡಿದ್ದು ತಿಳಿಯಿತು. ಅವನು ಇವಳ ರೂಪಕ್ಕೆ ಮರುಳಾಗಿ, ತಾನೇ ಮುಂದೆ ಬಂದು, ವರದಕ್ಷಿಣೆ ವರೋಪಚಾರ ಇಲ್ಲದೆ ಮದುವೆಯಾಗಿದ್ದ. ಆದರೆ ಗಂಡನ ಮನೆಗೆ ಬಂದಾಗ ಅವಳಿಗೆ ಮೊದಲನೆಯ ಶಾಕ್ ಆದದ್ದು ಅವನ ಮೊದಲ ಹೆಂಡತಿ ಅಲ್ಲಿರುವುದನ್ನು ಕಂಡಾಗ. ನಂತರ ಕಿರುಕಳ ಪ್ರಾರಂಭವಾಯ್ತು. ಅವನೊಬ್ಬ ಕುಡುಕ ಮತ್ತು ಮೋಸಗಾರ, ವಂಚಕ ಎಂದು ತಿಳಿಯಿತು. ಹಣ ತರಲು ಹಿಂಸಿಸಿ ಇವಳನ್ನು ತವರಿಗೆ ಅಟ್ಟಿದ್ದ. ನಂತರ ಅವನು ಸತ್ತ ಸುದ್ದಿ ಅವಳಿಗೆ ತಲುಪಿತು. ಮನೆಯಲ್ಲಿ ಮೊದಲೇ ತಂದೆ ತೀರಿಕೊಂಡಿದ್ದ. ತಾಯಿಯೂ ನಂತರ ಅಸುನೀಗಿದ್ದಳು. ಇವಳು ಒಂಟಿಯಾಗಿ ಕೊರಗುತ್ತ ಅನಾಥಪ್ರಜ್ಞೆಯ ನಡುವೆ ಬಾಳುತ್ತಿದ್ದಳು. ತಾನು ವಿಧವೆ ಎಂಬುದನ್ನು ಪ್ರದರ್ಶಿಸಲು ಮನಸಾಗಲಿಲ್ಲ. ಮಂಗಳಸೂತ್ರ ಇಟ್ಟು ಏನೂ ಆಗದವರಂತೆ ಇದ್ದಳು. ಆಗ ಒಬ್ಬ ತರುಣ ಇವಳಿಗೆ ಸಹಾಯ ಮಾಡಲು ಮುಂದೆ ಬಂದ. ಇವಳನ್ನು ತಾನು ಮದುವೆಯಾಗುವುದಾಗಿ ಭರವಸೆ ಕೊಟ್ಟ. ಇವಳ ದೇಹಸುಖ ಪಡೆಯತೊಡಗಿದ. ಅವಳ ಮನೆಗೆ ಬಂದು ಆಗಾಗ ಇರತೊಡಗಿದ. ಮೂರು ವರ್ಷದ ಹಿಂದೆ ಅವಳ ಜೀವನದಲ್ಲಿ ಎರಡನೆಯ ಅಘಾತ ಆಯಿತು. ಒಂದು ದಿನ ಒಬ್ಬ ತರುಣಿ ಇವಳ ಮನೆಯನ್ನು ನುಗ್ಗಿ ಇವಳನ್ನು ತರಾಟೆಗೆ ತೆಗೆದುಕೊಂಡಳು. ಬಹಳ ಬೈದು ಅವಮಾನ ಮಾಡಿದಳು. ಅವಳೊಡನೆ ಮಲಗಲು ಬರುತ್ತಿದ್ದ ಪುರುಷ ತನ್ನ ಗಂಡನೆಂದೂ, ಇವಳಿಂದ ತನ್ನ ಬಾಳು ಹಾಳಾಗುತ್ತಿದೆ ಎಂದು ಆರೋಪಿಸಿದಳು. ಇದೇ ವೇಳೆಗೆ ಅವಳಿಗೆ ಬಿಳಿಸೆರಗಿನ ಬಾಧೆ ಆರಂಭವಾಯ್ತು. ಈ ಘಟನೆಗಳನ್ನು ಅವಳು ಯಾರಿಗೂ ಹೇಳಿದ್ದಿಲ್ಲ. ಡಾಕ್ಟರರು ತಮ್ಮ ಪರೀಕ್ಷೆಯ ವೇಳೆಯಲ್ಲಿ ಅವಳಿಂದ ಈ ಮಾಹಿತಿ ಹೊರಬರುವಂತೆ ಮಾಡಿದರು. ರೊಗ ಬರಲು ಮೂಲಕಾರಣ ವಿದಿತವಾದ ಮೇಲೆ ತಕ್ಕ ಹೋಮಿಯೋಪತಿ ಔಷಧಿ ಕೊಡುಲು ಪ್ರಾರಂಭಿಸಿದರು. ಆ ಮಹಿಳೆಗೆ ಡಾಕ್ಟರರು ತಾವು ಕೊಟ್ಟ ಔಷಧಿಗಳ ವಿವರ ನೀಡುತ್ತಾರೆ. ಮೊದಲು ನೇಟ್ರಮ್ ಮ್ಯೂರ್' ಔಷಧಿ ಕೊಟ್ಟರಂತೆ. ಎಲ್ಲದಕ್ಕೂ ಅವಳು ತನ್ನ ದೈವವನ್ನು ಹಳಿಯುತ್ತಿದ್ದುದನ್ನು ಪರಿಗಣಿಸಿ ಇಗ್ನೇಷಿಯಾ' ಔಷಧಿ ಕೊಟ್ಟರು. ನಿರೀಕ್ಷೆಗೆ ಮೀರಿ ದಯಾಬಿಟೀಸ್ ನಿಯಂತ್ರಣಕ್ಕೆ ಬಂತಂತೆ. ಎರಡನೆಯ ಪುರುಷನ ಸಂಬಂಧ ಬಂದಾಗ ಬಿಳಿಸೆರಗು ಪ್ರಾರಂಭವಾಯ್ತು, ಸಂಭೋಗದ ಅನಂತರ ಹೆಚ್ಚಾಯಿತು ಎಂಬುದು ತಿಳಿಯಿತು. ನಂತರ ನೇಟ್ರಮ್ ಕಾರ್ಬ್' ಮತ್ತು ಟ್ಯುಬರ್‌ಕುಲಿನಮ್' ಕೊಟ್ಟ ಮೇಲೆ ಬಿಳಿಸೆರಗಿನ ಜೊತೆಗೆ ಅವಳ ಮಾನಸಿಕ ಸ್ಥಿತಿ ನಿಯಂತ್ರಣಕ್ಕೆ ಬಂತಂತೆ.

ಪುಸ್ತಕ : ನೋವು ನೀಗುವ ಕಾಯಕದಲ್ಲಿ ಕಂಡ ಬದುಕು, ಬೆಳಕು
ಪ್ರಕಟಣೆ : ನಿರುಪಮಾ ಪ್ರಕಾಶನ, ಕೆಹೆಚ್‌ಬಿ ಕಾಲನಿ, ಕೆಂಗೇರಿ, ಬೆಂಗಳೂರು-560 060
ಬೆಲೆ : ರೂ.100
ವಿಳಾಸ : ಡಾ।ರುದ್ರೇಶ್‌, ಅಶ್ವಿನಿ ಹೋಮಿಯೋ ಕ್ಲಿನಿಕ್‌, ಡಾ।ಡಿವಿಜಿ ರಸ್ತೆ , ಬಸವನಗುಡಿ, ಸಿಂಡಿಕೇಟ್‌ ಬ್ಯಾಂಕ್‌ ಮುಂಭಾಗ, ಬೆಂಗಳೂರು- 560004.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+