ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನಕ್ಕೆ ಸವಾಲೊಡ್ಡುವ ಸೂಕ್ಷ್ಮ ಶರೀರ ಸಿದ್ಧಾಂತ

By Staff
|
Google Oneindia Kannada News

Swamy Jagadatmanandaಪುನರ್ಜನ್ಮ, ಕರ್ಮಸಿದ್ಧಾಂತ, ಅತೀಂದ್ರೀಯ ಶಕ್ತಿಯ ಅಸ್ತಿತ್ವದ ಬಗ್ಗೆ ಮಾನವನಿಗೆ ತಿಳಿವಳಿಕೆ ಬಂದಾಗಿನಿಂದ ಚರ್ಚೆ ನಡೆಯುತ್ತಲೇ ಇದೆ. ಮುಂದೆಯೂ ನಡೆಯುತ್ತದೆ. ವೈಜ್ಞಾನಿಕವಾಗಿ ಪ್ರತಿಯೊಂದನ್ನು ಒರೆಗೆ ಹಚ್ಚಿ ನೋಡುವ ವಿಜ್ಞಾನಿ ಇಂಥ ಶಕ್ತಿಯನ್ನು ಅಲ್ಲಗಳೆಯಬಹುದು. ಆದರೆ, ಅನುಭವಕ್ಕೆ ಬಂದ ಅನೇಕ ಘಟನೆಗಳು ದಾಖಲಾಗಿವೆ. ಇಂಥ ವಿಷಯದ ಬಗ್ಗೆ ಜಗದಾತ್ಮಾನಂದರು ವಿಸ್ತೃತವಾಗಿ ತಮ್ಮ ಪುಸ್ತಕ 'ಬದುಕಲು ಕಲಿಯಿರಿ'ಯಲ್ಲಿ ವರ್ಣಿಸಿದ್ದಾರೆ. ಓದುಗರು ನಂಬಿದ್ರೆ ನಂಬಬಹುದು ಬಿಟ್ರೆ ಬಿಡಬಹುದು.

ಸಾರಸಂಗ್ರಹ: ಡಾ| 'ಜೀವಿ' ಕುಲಕರ್ಣಿ

ಅಧ್ಯಾಯ ಐದು : ಅದ್ಭುತ(ಘಟನೆ)ಗಳು ಸಾರುವ ಸತ್ಯ

ಮೊದಲು ಜನನವನರಿಯೆ
ಮರಣದ ಹದನ ಕಡೆಯಲಿ ತಿಳಿಯೆ
ಮಧ್ಯದಲಿ ನಾ ನೆರೆನಿಪುಣನೆಂಬುದು ಬಳಿಕ ನಗೆಗೇಡು!''
-ಕನಕದಾಸ

ನಿನಗೆ ಗೊತ್ತಿಲ್ಲದ ವಿಚಾರವನ್ನು ಗೊತ್ತಿಲ್ಲ ಎಂದು ನಮ್ರನಾಗಿ ಒಪ್ಪಿಕೊ, ಅದೇ ನಿನ್ನ ಜ್ಞಾನದ ಕಿಂಡಿಯನ್ನು ತೆರೆಯಬಲ್ಲದು.'' -ಕನ್‌ಫ್ಯೂಶಿಯಸ್(ಚೀನಿ ತತ್ವಜ್ಞಾನಿ)

ವೈಜ್ಞಾನಿಕ ಅನ್ವೇಷಣೆಗಳಿಗೆ ತಿಳಿಯದ ಅನೇಕ ಸಂಗತಿಗಳು ಜೀವನದಲ್ಲಿ ನಡೆಯುತ್ತವೆ. ದೇಹಕ್ಕಿಂತ ಭಿನ್ನವಾದ ಜೀವತತ್ವವಿದೆ ಎಂಬ ಮಾತನ್ನು ವಿಜ್ಞಾನಿಗಳು ಒಪ್ಪುವುದಿಲ್ಲ. ಎಲುಬು ರಕ್ತಮಾಂಸ ನರವ್ಯೂಹಗಳಿಂದ ಕೂಡಿದ ನಮ್ಮ ಈ ಸ್ಥೂಲ ಶರೀರದಲ್ಲಿ ಅತ್ಯಂತ ಸೂಕ್ಷ್ಮವಾದ ಇನ್ನೊಂದು ಶರೀರವಿದೆ ಎಂಬುದನ್ನು ನಮ್ಮ ದೇಶದಲ್ಲಿ ಪುರಾತನರು(ಋಷಿಮುನಿಗಳು) ತಿಳಿದುಕೊಂಡಿದ್ದರು. ಅದನ್ನು ಅವರು ಸೂಕ್ಷ್ಮಶರೀರ'ವೆಂದು ಕರೆದರು. ಇದಕ್ಕೆ ಲಿಂಗಶರೀರ'ವೆಂಬ ಹೆಸರೂ ಇದೆ. ನಮ್ಮ ಸ್ಥೂಲದೇಹ ಅಳಿದರೂ ಈ ಸೂಕ್ಷ್ಮದೇಹಕ್ಕೆ ನಾಶವಿಲ್ಲ.'

ಕ್ರಿಸ್ತಧರ್ಮ, ಮಹಮ್ಮದೀಯ ಧರ್ಮ ಅನುಸರಿಸುವವರು ಪುನರ್ಜನ್ಮ ಹಾಗೂ ಕರ್ಮಸಿದ್ಧಾಂತಗಳಲ್ಲಿ ವಿಶ್ವಾಸ ಇಡುವುದಿಲ್ಲ. ಬ್ರಾಜಿಲ್‌ನಲ್ಲಿ ಹಳ್ಳಿಯ ಬಡ ರೈತನೊಬ್ಬ ಮಹಾ ಸರ್ಜನ್‌ನಾಗಿ ಪರಿವರ್ತಿತನಾದ ಘಟನೆಯ ಬಗ್ಗೆ ಸ್ವಾಮಿಜಗದಾತ್ಮಾನಂದರು ಬರೆಯುತ್ತಾರೆ. ಆ ರೈತ ಯಾವುದೇ ವೈದ್ಯಕೀಯ ವ್ಯಾಸಂಗ ಮಾಡಿದವನಲ್ಲ, ಯಾವ ತರಬೇತಿ ಪಡೆದವನಲ್ಲ. ಅವನು ಶಸ್ತ್ರಕ್ರಿಯೆಗೆ ಬಳಸುತ್ತಿದ್ದ ಉಪಕರಣ ಒಂದು ಪುಟ್ಟ ಚಾಕು. ರೋಗಿಗೆ ಎಚ್ಚರ ತಪ್ಪಿಸದೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡುತ್ತಿದ್ದ. ಜೊತೆಗೆ ಔಷಧ ಸೂಚಿಸಿ ಚೀಟಿಯನ್ನೂ ಸರಸರನೆ ಬರೆದುಕೊಡುತ್ತಿದ್ದ. ಪ್ರತಿದಿನ ಸಾವಿರಾರು ಜನ ಇವನಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿದ್ದರಂತೆ. ಇವನ ಶಸ್ತ್ರಕ್ರಿಯೆಯಿಂದ ಕುರುಡರು ಕಣ್ಣು ಪಡೆದರು, ಕುಂಟರು ಊರುಗೋಲು ಎಸೆದು ನಡೆದಾಡಿದರು. ಪೌಲೋ ವಿಶ್ವವಿದ್ಯಾಲಯದ ಮತ್ತು ಮೆಡಿಕಲ್ ಅಕಾಡೆಮಿಯ ಸದಸ್ಯರು ಇವನ ಶಸ್ತ್ರಚಿಕಿತ್ಸೆಯ ವಿಧಾನ ಪ್ರತ್ಯಕ್ಷ ಪರಿಶೀಲಿಸಿದರು, ಮೂಕವಿಸ್ಮಿತರಾದರು. ಅವನ ಹೆಸರು ಜಿ. ಅರ್ಹಿಗೋ. ಅವನು ಚಿಕಿತ್ಸಾಲಯ ಸೇರಿದಾಗ ಡಾ| ಫ್ಲೀಟ್ಸ್ ಎಂಬ ಸರ್ಜನ್‌ನ ವ್ಯಕ್ತಿತ್ವ ಅವನಲ್ಲಿ ಆವಾಹಿತವಾಗುತ್ತಿತ್ತು (ಪ್ರವೇಶಿಸುತ್ತಿತ್ತು). ಜರ್ಮನ್ ಭಾಷೆ ಅರಿಯದ ಇವನು ಚಿಕಿತ್ಸೆಯಲ್ಲಿ ತೊಡಗಿದಾಗ ಪೋರಚುಗೀಸ್ ಮಿಶ್ರಿತ ಜರ್ಮನ್ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿದ್ದನಂತೆ. ಕ್ರೈಸ್ತಧರ್ಮಗುರುಗಳು ಇವನನ್ನು ವಿರೋಧಿಸಿದರು. ಇವನಿಗೆ ಜೈಲುವಾಸವಾಯ್ತು. ಅವನ ಅಭಿಮಾನಿಗಳು ಎಂಟು ಲಕ್ಷ ನಲವತ್ತು ಸಾವಿರ ಡಾಲರ್ ನಿಧಿ ಸಂಗ್ರಹಿಸಿ. ಅವನಿಗೆ ಕಳಿಸಿದರು. ಆ ಹಣವನ್ನು ಅವನು ಹಿಂತಿರುಗಿಸಿದ. ರೋಗಿಗಳಿಂದ ಅವನು ಚಿಕ್ಕಾಸೂ ಬಯಸಿರಲಿಲ್ಲ. 1955ರಿಂದ 1971ರವರೆಗೆ ಅವನು ಅದ್ಭುತ ಶಸ್ತ್ರಚಿಕಿತ್ಸೆ ಮಾಡಿದ. 1971 ಜನವರಿಯಲ್ಲಿ ರಸ್ತೆ ಅಪಘಾತದಲ್ಲಿ ಮಡಿದ. ಅವನ ಅಭಿಮಾನಿಗಳು ಸಹಸ್ರಸಹಸ್ರ ಸಂಖ್ಯೆಯಲ್ಲಿ ಅವನ ಅಂತ್ಯಯಾತ್ರೆಯಲ್ಲಿ ಭಾಗವಹಿಸುತ್ತ ಅಶ್ರುತರ್ಪಣ ಸಲ್ಲಿಸಿದರು. ಇವನ ಬಗ್ಗೆ ಸಚಿತ್ರ ಲೇಖನ ರೀಡರ್ಸ್ ಡೈಜೆಸ್ಟ್'(ಮೇ 1975)ನಲ್ಲಿ ಪ್ರಕಟವಾಗಿತ್ತಂತೆ. ಅವನ ಮೈಯಲ್ಲಿ ಆವಾಹಿತನಾದ ವ್ಯಕ್ತಿ ಯಾರೆಂದರೆ ಎರಡನೆಯ ಮಹಾಯುದ್ಧದಲ್ಲಿ ಸರ್ಜನ್ ಆಗಿ ಸೇವೆ ಸಲ್ಲಿಸಬೇಕೆಂದು ಬಯಸಿದ ಡಾ| ಫಿಟ್ಸ್. ತನ್ನ ಅಕಾಲಿಕ ಮರಣದಿಂದ ಅತೃಪ್ತನಾದವ ತನ್ನ ಆಸೆ ಈಡೇರಿಸಲು ರೈತ ಅರ್ಹಿಗೋನ ದೇಹವನ್ನು ಬಳಸುತ್ತಿದ್ದನಂತೆ.

ಹುಟ್ಟುವಾಗ ವ್ಯಕ್ತಿ ಎಲ್ಲಿಂದ ಬಂದ? ಸತ್ತಮೇಲೆ ಎಲ್ಲಿಗೆ ಹೋಗುವ? ಮರಣಾನಂತರ ಜೀವನ, ಜನ್ಮಾಂತರ ಮತ್ತು ಕರ್ಮವಾದ - ಇವುಗಳ ಅಡಿಪಾಯದ ಮೇಲೆ ಹಿಂದೂ, ಬೌದ್ಧ ಹಾಗೂ ಜೈನಧರ್ಮಗಳು ತಮ್ಮ ಸೌಧಗಳನ್ನು ಕಟ್ಟಿವೆ. ಪಶ್ಚಿಮ ದೇಶದ ಧರ್ಮಗಳಲ್ಲಿ ಕರ್ಮ, ಜನ್ಮಾಂತರವಾದಗಳನ್ನು ಒಪ್ಪದಿದ್ದರೂ ಮರಣಾನಂತರ ಜೀವಾತ್ಮನು ಸ್ವರ್ಗ ಅಥವಾ ನರಕದಲ್ಲಿ ವಾಸಮಾಡುತ್ತಾನೆ ಎಂಬ ಕಲ್ಪನೆಗಳಿವೆ' ಎನ್ನುತ್ತಾರೆ.

ಕೆಲವು ವರ್ಷಗಳಿಂದೀಚೆ ಮನೋವಿಜ್ಞಾನಿಗಳೂ, ಮನೋರೋಗ ತಜ್ಞರೂ ಅತೀಂದ್ರಿಯ ಅನುಭವಗಳ ಬಗ್ಗೆ ಅಮೇರಿಕಾ ಮತ್ತು ರಶಿಯಾ ದೇಶಗಳಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ ಬಗ್ಗೆ ಬರೆಯುತ್ತಾರೆ. ಸ್ವಿಸ್ ದೇಶದ ಮಹಿಳಾ ವೈದ್ಯೆ ಡಾ| ಎಲಿಜಬೆತ್ ಕುಬ್ಲೇರ್ ರಾಸ್ ಅವರು ಸಾವನ್ನಪ್ಪುವ ಮೊದಲು ರೋಗಿಗಳ ಮಾನಸಿಕ ಸ್ಥಿತಿಗತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಸಾವಿನ ಆಚೆಗೆ ಜೀವನವಿದೆ' ಎಂದು ಡಾಣಾಡಂಗುರವಾಗಿ ಹೇಳಿದ್ದರು. ಅವರು ಹಲವಾರು ಸಂಗತಿಗಳನ್ನು ದಾಖಲಿಸಿದ್ದಾರೆ.

ಅಮೇರಿಕೆಯ ಇಂಡಿಯಾನಾ ಆಸ್ಪತ್ರೆಯಲ್ಲಿ 40 ವರ್ಷದ ಹೆಂಗಸೊಬ್ಬಳು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಟ್ಟಾಗ ಅವಳು ಅಪೂರ್ವ ಅನುಭವ ಪಡೆದಳಂತೆ. ಅವಳು ದೇಹದ ಹೊರಗೆ ಬಂದು ಆ ಕೋಣೆಯ ಮೇಲ್ಭಾಗದಲ್ಲಿ, ಆಕಾಶದಲ್ಲಿ ಮೋಡವು ತೇಲುವಂತೆ ತೇಲುತ್ತ ಮಂಚದಲ್ಲಿ ಮಲಗಿದ್ದ ತನ್ನ ಶರೀರವನ್ನು ಕಂಡಳಂತೆ. ಅಪೂರ್ವ ಶಾಂತಿ ಹಾಗೂ ಮುಕ್ತತೆಯ ಅನುಭವವನ್ನು ಪಡೆದಳಂತೆ. ಅವಳ ದೇಹದ ಶಸ್ತ್ರಕ್ರಿಯೆಯಲ್ಲಿ ತೊಡಗಿ ಹೆಣಗಾಡುತ್ತಿದ್ದ ಡಾಕ್ಟರರ ಚಟುವಟಿಕೆಗಳನ್ನು ಚೆನ್ನಾಗಿ ಪರೀಕ್ಷಿಸಬಲ್ಲವಳಾಗಿದ್ದಳು. ಅವರು ಆಡುವ ಮಾತುಗಳನ್ನು ಅವಳು ಕೇಳುತ್ತಿದ್ದಳು. ಒಬ್ಬ ಡಾಕ್ಟರ್ ನುಡಿದ ಹಾಸ್ಯದ ಚಟಾಕಿಯನ್ನೂ ಆಲಿಸಿದಳು. ವೈದ್ಯರೆಲ್ಲ ಸೇರಿ ಅವಳು ಸತ್ತಿದ್ದಾಳೆ ಎಂಬ ಹೇಳಿಕೆ ಇತ್ತರು. ಮೂರು ಗಂಟೆಗಳ ಬಳಿಕ ಅವಳು ತನ್ನ ದೇಹವನ್ನು ಪ್ರವೇಶಿಸಿದಳು. ಎಲ್ಲರಿಗೂ ಅಚ್ಚರಿ. ಮುಂದೆ ಅವಳು 18 ತಿಂಗಳು ಬದುಕಿದ್ದಳಂತೆ.

ಅತೀಂದ್ರಿಯ ಅನುಭವಗಳನ್ನು ಬುದ್ಧಿಭ್ರಮಣೆಯಾದ ವ್ಯಕ್ತಿಗಳೇ ಪಡೆಯಲು ಸಾಧ್ಯ ಎಂಬ ಭಾವನೆ ಹಿಂದೆ ಇತ್ತು. ಮನೋವೈಜ್ಞಾನಿಗಳು ಕೆಲವರು ಈಗ ಅಂಥ ಭಾವನೆ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಅಮೇರಿಕೆಯ ಟ್ರಾನ್ಸ್‌ಪರ್ಸನಲ್ ಸೈಕಾಲಜಿ ವಿಭಾಗದ ಅನ್ವೇಷಣಾತಜ್ಞರು ತಮ್ಮ ಪತ್ರಿಕೆಗಳಲ್ಲಿ ಸಾಕಷ್ಟು ಮಾಹಿತಿ ನೀಡಿದ್ದಾರೆ ಎಂದು ಬರೆಯುತ್ತಾರೆ. ನಾವು ಯಾವುದನ್ನು ಜೀವತತ್ವ ಅಥವಾ ಜೀವಾತ್ಮ ಎಂದು ಕರೆಯುತ್ತೇವೋ ಅದೊಂದು ನಿರ್ದಿಷ್ಟವಾದ ಶಕ್ತಿ ಮಾತ್ರವಲ್ಲ, ದೇಹದ ನಾಶದೊಂದಿಗೆ ನಾಶವಾಗದ ಆತ್ಮ' ಎಂದು ಹಿಂದಿನ ಕಾಲದ ಜನರು ಕರೆಯುತ್ತಲಿದ್ದ ತಥ್ಯ ಎಂದು ತಿಳಿಯುವ ಕಾಲ ದೂರವಿಲ್ಲ' ಎಂಬುದೂ ಅವರ ಅಭಿಪ್ರಾಯವಾಗಿದೆಯಂತೆ. ದೇಹದಿಂದ ಮನಸ್ಸು ಬೇರೆಯಾಗಿರುವುದನ್ನು ತಜ್ಞರು ಕಾಣುತ್ತಿದ್ದಾರೆ. ಕೆಂಟುಕಿಯ ಆಷ್ಟನ್ ಪ್ರಯೋಗಶಾಲೆಯ ಟೆಪ್ಲೋ ಹಲವು ಪ್ರಯೋಗಗಳ ಬಳಿಕ ಆತ್ಮ'ದ ಅಸ್ತಿತ್ವದ ಬಗ್ಗೆ ನಿರ್ಭೀತಿಯಿಂದ ಮಾತನಾಡತೊಡಗಿದ್ದಾರೆ' ಎನ್ನುತ್ತಾರೆ.

ಅಂತೀನಿ ಕ್ರ್ಯಾನ್ಸಿ ಇಟಲಿಯ ಮಿಲಾನ್ ನಗರ ವಾಸಿ. ಆಗರ್ಭ ಶ್ರೀಮಂತ. ಹೆಂಡತಿ ಹಾಗೂ ಮಗಳೊಂದಿಗೆ ಸುಖವಾಗಿ ಬಾಳುತ್ತಿದ್ದ. 12 ವರ್ಷದ ಮಗಳನ್ನು ದುಷ್ಟರು ಅಪಹರಿಸಿದರು. ಕೊನೆಗೆ ದೊರೆತದ್ದು ಅವರ ಮಗಳಲ್ಲ, ಮಗಳ ಶವ. ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಮನಃಶಾಂತಿ ಪಡೆಯಲು ಭಾರತಕ್ಕೆ ಬಂದರು. ಸತ್ಯಸಾಯಿಬಾಬಾ ಅವರಿಂದ ಸಾಂತ್ವನ ಪಡೆದರು. ನಿಮ್ಮ ಮಗಳು ಹಿಂದಿನ ಜನ್ಮದ ಕರ್ಮದಿಂದಾಗಿ ಅಪಮೃತ್ಯುವಿಗೆ ಈಡಾದಳು. ಮತ್ತೆ ಅವಳು ನಿಮ್ಮ ಮನೆಯಲ್ಲಿ ಹುಟ್ಟಿ ಬರಲಿದ್ದಾಳೆ' ಎಂದು ಬಾಬಾ ಆಶ್ವಾಸನೆ ನೀಡಿದರಂತೆ(!?). ನಂತರ ಅವರಿಗೆ ಎರಡನೆಯ ಮಗಳು ಹುಟ್ಟಿದಳು. ಅವಳು ಮೊದಲನೇಯ ಮಗಳಂತೆಯೇ ಇದ್ದಾಳಂತೆ.

ಮುಂಬೈಯ ಸುಪ್ತಿಶಾಸ್ತ್ರಜ್ಞ ಪ್ರೊ. ಜೆ.ವಿ.ರಾವ್ ಅವರು ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿದ್ದರು. 8 ವರ್ಷದ ಕೆಥೊಲಿಕ್ ಸಂಪ್ರದಾಯದ ತರುಣಿಯನ್ನು ವಶ್ಯಸುಪ್ತಿಗೆ ಒಳಪಡಿಸಿದರಂತೆ. ಅವಳಿಗೆ ಪೂರ್ವಜನ್ಮದ ಸ್ಮರಣೆಯಾಗಿ ಯಾವುದೋ ಭಾಷೆಯಲ್ಲಿ ಮಾತಾಡತೊಡಗಿದಳಂತೆ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಇಟಾಲಿಯನ್ ಪಾದ್ರಿಯೊಬ್ಬರು ವೇದಿಕೆಗೆ ಬಂದು ಅವಳು ಆಡುತ್ತಿರುವ ಭಾಷೆ ಇಟಾಲಿಯನ್ ಎಂದರಂತೆ. ಹಿಂದಿನ ಜನ್ಮದಲ್ಲಿ ತಾನು ಗಂಡಾಗಿದ್ದ ವಿಷಯ, ಇಟಲಿಯಲ್ಲಿ ಬಸ್ ಅಪಘಾತದಲ್ಲಿ ಮರಣ ಹೊಂದಿದ ವಿಷಯ ತಿಳಿಸಿದಳು. ಅವಳು ಪುನಃ ಮೊದಲಿನ ಸ್ಥಿತಿಗೆ ಬಂದಾಗ ಅವಳು ಇಟಾಲಿಯನ್ ಅರಿತಿಲ್ಲವೆಂದೂ, ಭಾರತವನ್ನು ಬಿಟ್ಟು ಹೊರದೇಶಕ್ಕೆ ಹೋಗಿಲ್ಲವೆಂಬುದು ತಿಳಿಯಿತು. (ಮಿರರ್' ಪತ್ರಿಕೆಯ 1983, ಸಪ್ಟೆಂಬರ್ ಸಂಚಿಕೆಯಲ್ಲಿ ಇದರ ಬಗ್ಗೆ ಲೇಖನ ಪ್ರಕಟವಾಗಿದೆ) ಎಂದು ಬರೆಯುತ್ತಾರೆ.

ಇದಕ್ಕಿಂತ ರೋಚಕವಾದ ಕತೆ ಮೃದುಲ ಶರ್ಮಾ ಅವಳದು. ಮೃದುಲ ಶರ್ಮಾ ಎಂಬ ಗೃಹಿಣಿ ಎಂ.ಎ. ಪದವೀಧರೆ. ಮೀರತ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾಳೆ. ಹಿಂದಿನ ಜನ್ಮದಲ್ಲಿ ಅವಳು ಮುನ್ನು ಆಗಿದ್ದಳು. ಆಗ ಬನಾರಸ್ ವಿಶ್ವವಿದ್ಯಾಲಯದಿಂದ ಹಿಂದಿ ಎಂ.ಎ.ಪಾಸಾಗಿದ್ದಳು. ಎರಡು ಡಿಗ್ರಿಗಳ ಮಧ್ಯದ ಅಂತರ ಒಂದು ಜೀವನ ಮಾತ್ರ! 1945ರಲ್ಲಿ ಅವಳು ಡೆಹರಾಡೂನ್‌ನಲ್ಲಿ ತೀರಿಕೊಂಡಿದ್ದಳು. ಅದಕ್ಕೆ ದಾಖಲೆ ಇದೆ. ನಾಲ್ಕು ವರ್ಷಗಳ ನಂತರ, 1949ರಲ್ಲಿ ನಾಸಿಕದಲ್ಲಿ ಜನಿಸಿದಳು. ಹಿಂದಿನ ಜನ್ಮದ ತಾಯಿ ಸತ್ಯವತಿ ಶೆಟ್ಟಿ. ಆ ದಿನಗಳಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದಳು. ಈ ಜನ್ಮದ ತಾಯಿ ಶಾಂತಾ ಶಾಸ್ತ್ರಿ. ಇವಳು ಬ್ರಾಹ್ಮಣಳು. ಹಿಂದಿನ ತಾಯಿ ಬನಿಯಾ ಜಾತಿಯವಳು. ಮೃದುಲ ಎರಡು ವರ್ಷದ ಕೂಸು ಇರುವಾಗಲೇ ಅವಳಿಗೆ ಪೂರ್ವ ಜನ್ಮದ ಸ್ಮರಣೆ ಪ್ರಾರಂಭವಾಗಿತ್ತಂತೆ. ಪತಿಯ ಅಗಲಿಕೆಯ ತರುವಾಯ ಶಾಂತಾ ಶಾಸ್ತ್ರಿ ದೈವಯೋಗವೋ ಎಂಬಂತೆ ಡೆಹರಾಡೂನಿನ ಒಂದು ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇರಿ ಅಲ್ಲಿಯೇ ಮಗಳೊಂದಿಗೆ ವಾಸಿಸತೊಡಗಿದಳು.

ಒಂದು ದಿನ ಡೆಹರಾಡೂನಿನಲ್ಲಿ ನಡೆದ ಒಂದು ಧಾರ್ಮಿಕ ಸಭೆಗೆ ತಾಯಿಯ ಜೊತೆಗೆ ಮೃದುಲ ಹೋಗಿದ್ದಳು. ಆ ಸಭೆಯಲ್ಲಿ ಮೂಲೆಯಲ್ಲಿ ಕುಳಿತಿದ್ದ ವಯಸ್ಸಾದ ಮಹಿಳೆಯನ್ನು ಗುರುತಿಸಿದಳು. ಆ ವೃದ್ಧೆಯ ಬಳಿಯಲ್ಲಿ ಕುಳಿತ ಇನ್ನೊಬ್ಬ ಹೆಂಗಸಿಗೆ ಹೇಳಿದಳು, ನೀನು ನನ್ನ ತಂಗಿ'. ಅವಳಿಗೆ ಅಚ್ಚರಿ. ಇದು ಹೇಗೆ ಸಾಧ್ಯ? ನಾನು ದೊಡ್ಡವಳು, ನೀನಿನ್ನೂ ಚಿಕ್ಕ ಮಗು.' ಆಗ ಮೃದುಲ ಅಂದಳು ನಾನು ನಿನ್ನ ಹಿರಿಯ ಅಕ್ಕ ಮುನ್ನೂ.' ಅವಳಿಗೆ ಪರಮಾಶ್ಚರ್ಯ. ತಾಯಿ ಸತ್ಯವತಿಗೆ ನಂಬಿಕೆಯಾಗಲಿಲ್ಲ. ಪರೀಕ್ಷಿಸಿ ನೋಡುವ ಕುತೂಹಲದಿಂದ ಮಗುವನ್ನು ಮನೆಗೆ ಕರೆದೊಯ್ದರು. ಮನೆಯವರನ್ನೆಲ್ಲ ಗುರುತಿಸಿದಳು. ತನ್ನ ಪುಸ್ತಕದ ಬೀರು ತೋರಿಸಿದಳು. ಅಲ್ಲಿಯ ಫ್ಯಾನ್ ನೋಡಿ ಹಿಂದೆ ಇದು ಇರಲಿಲ್ಲ ಎಂದಳು. ಕುಶಾಲಚಂದ ಎಂಬವರು ಆನಂದಸ್ವಾಮಿ ಆಗಿದ್ದರು. ಅವರನ್ನು ಗುರುತಿಸಿ, ಸ್ವಾಮಿ, ನೀವು ಯಾವಾಗಿನಿಂದ ಕಾವಿ ಬಟ್ಟೆ ತೊಡಲು ಪ್ರಾರಂಭಿಸಿದಿರಿ? ಮೊದಲು ಬಿಳಿಯ ಬಟ್ಟೆ ಧರಿಸುತ್ತಿದ್ದಿರಿ.' ಎಂದಾಗ ಅವರಿಗೆ ಅಚ್ಚರಿ. ಮರೆಯಿಂದ ಎಲ್ಲವನ್ನೂ ನೋಡುತ್ತ ಆಲಿಸುತ್ತ ನಿಂತಿದ್ದ ಹಿಂದಿನ ಜನ್ಮದ ತಂದೆ ಅಂದರು, ಮಗೂ, ನೀನು ಎಲ್ಲರನ್ನೂ ಗುರುತಿಸಿದೆ, ಆದರೆ ಮನೆಯಲ್ಲಿದ್ದ ನಿನ್ನ ಸೇವಕರನ್ನು ಗುರುತಿಸಲಿಲ್ಲ.' ಅವರನ್ನು ತಬ್ಬಿಕೊಂಡು ಮೃದುಲ ಹೇಳಿದಳು, ನೀವು ಸೇವಕರಲ್ಲ, ನನ್ನ ಅಪ್ಪ.' ಎಲ್ಲರಿಗೂ ಪರಮ ಸಂತೋಷವಾಯಿತು. ಅವರೆಲ್ಲ ಪ್ರೀತಿಯ ಹೊನಲನ್ನೇ ಹರಿಸಿದರು. ಇಬ್ಬರು ತಾಯಂದಿರ ಪ್ರೀತಿಯನ್ನು ಪಡೆದು ಬೆಳೆದಳು ಮೃದುಲ. ಅವಳ ಮದುವೆಯ ಸಮಯದಲ್ಲಿ ಹಿಂದಿನ ಜನ್ಮದ ತಂದೆತಾಯಿ ಅವಳಿಗೆ ಚಿನ್ನಾಭರಣ, ನಗದು ಹಣ, ಅಷ್ಟೇ ಅಲ್ಲ ಒಂದು ಬಂಗ್ಲೆಯನ್ನು ಕಾಣಿಕೆಯಾಗಿ ಕೊಟ್ಟರಂತೆ.

ಇದೆಲ್ಲ ಭ್ರಾಮಕ ಕಲ್ಪನೆಯೆ? ಮುಂದೆ ಓದಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X