ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನಕ್ಕೆ ಸವಾಲೊಡ್ಡುವ ಸೂಕ್ಷ್ಮ ಶರೀರ ಸಿದ್ಧಾಂತ

By Staff
|
Google Oneindia Kannada News

(ಹಿಂದಿನ ಪುಟದಿಂದ)

ಇದೆಲ್ಲ ಭ್ರಾಮಕ ಕಲ್ಪನೆಯೆಂದು, ಕತೆಯೆಂದು ತಳ್ಳಿಹಾಕಬಹುದಾಗಿತ್ತು. ಆದರೆ ವರ್ಜೀನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಯಾನ್ ಸ್ಟೀವನ್‌ಸನ್ ಇವಳನ್ನು ಕಾಣಲು 1974ರಲ್ಲಿ ಭಾರತಕ್ಕೆ ಬಂದರು. ಇವಳನ್ನು ಚೆನ್ನಾಗಿ ಪರೀಕ್ಷಿಸಿ, ಇದು ಪುನರ್ಜನ್ಮಕ್ಕೊಂದು ಸ್ಪಷ್ಟವಾದ ಸಾಕ್ಷ್ಯಾಧಾರ' ಎಂದರು. ಪುನರ್ಜನ್ಮವಲ್ಲದೇ ಬೇರಾವ ಅರ್ಥ- ವಿವರಣೆ ಕೊಡಲು ಸಾಧ್ಯವಿಲ್ಲ.' ಎಂದು ಮನಗಂಡೇ ಅವರು ತಮ್ಮ ದೇಶಕ್ಕೆ ಮರಳಿದರು.

ಮೃದುಲ ಶರ್ಮಾ ಐದು ವರ್ಷದ ಬಾಲಿಕೆ ಇದ್ದಾಗ ಹೃಷಿಕೇಶದ ಸ್ವಾಮಿ ಶಿವಾನಂದರನ್ನು ತಾಯಿಯ ಜೊತೆಗೆ ಭೇಟಿ ಮಾಡಿದ್ದಳು. ಸ್ವಾಮಿ ಶಿವಾನಂದರು ತಮ್ಮ ಬರಹದಲ್ಲಿ ಈ ವಿಚಾರ ಸೂಚಿಸಿದ್ದಾರಂತೆ. ಇಷ್ಟೆಲ್ಲ ವಿವರವಾಗಿ ಮೃದುಲ ಬಗ್ಗೆ ಬರೆಯಲು ದಿ ಟೈಮ್ಸ್ ಆಫ್ ಇಂಡಿಯಾ'ದ 1976 ಅಕ್ಟೋಬರ್31ರ ಸಂಚಿಕೆಯಲ್ಲಿ ಪ್ರಕಟಗೊಂಡ ಸಚಿತ್ರ ಲೇಖನವೇ ಆಧಾರ ಎಂದು ಜಗದಾತ್ಮಾನಂದರು ಬರೆಯುತ್ತಾರೆ. ಸೋವಿಯೆಟ್ ದೇಶದಲ್ಲಿ ಕೂಡ ಬಹಳ ಅಭ್ಯಾಸ ನಡೆದಿದೆಯಂತೆ ಅಲ್ಲಿ 152ರಷ್ಟು ಗ್ರಂಥಗಳು ಪ್ರಕಟವಾಗಿದ್ದವೆಂದು ಬರೆಯುತ್ತಾರೆ.

ಎಲುಬು ರಕ್ತ ಮಾಂಸ ನರವ್ಯೂಹಗಳಿಂದ ಕೂಡಿದ ಮನುಷ್ಯ ಶರೀರದ ಹಿನ್ನೆಲೆಯಲ್ಲಿ, ಸಾಮಾನ್ಯ ದೃಷ್ಟಿಗೆ ಗೋಚರಿಸದ, ಭಾರತದಲ್ಲಿ ಪುರಾತನ ಕಾಲದಿಂದಲೂ ಯೋಗಿಗಳಿಗೆ ಗೋಚರಿಸಿದೆ ಎಂದು ಹೇಳಲಾದ, ಅತ್ಯಂತ ಸೂಕ್ಷ್ಮವಾದ ಚೈತನ್ಯಮಯ ಶರೀರವಿದೆ ಎಂಬ ಸೂಚನೆ ರಶ್ಯನ್ ತಜ್ಞರಿಗೆ ಸುಮಾರು 1939ರ ಹೊತ್ತಿಗೆ ತಿಳಿದಿತ್ತು. ಆಗಲೇ ದಕ್ಷಿಣ ರಶಿಯಾದ ಕ್ಯೂಬಾನ್ ಪ್ರಾಂತದ ಕ್ರಸ್ನೋದರ್ ಎಂಬಲ್ಲಿ ಸಂಶೋಧನೆ ಪ್ರಾರಂಭವಾಗಿತ್ತು. ಮನುಷ್ಯ ದೇಹದಲ್ಲಿ ಸೂಕ್ಷ್ಮಾತಿಸೂಕ್ಷ್ಮ ರೂಪದಿಂದಿರುವ ಈ ಚೈತನ್ಯ ಶರೀರವನ್ನು ಗುರುತಿಸಲು ಅಗತ್ಯವಾದ ಕೆಲವೊಂದು ಉಪಕರಣಗಳನ್ನು ಸಜ್ಜುಗೊಳಿಸಲು ತಜ್ಞರನ್ನು ಹುಡುಕುತ್ತಿದ್ದರು. ಅವರಿಗೆ ಸಹಾಯಕನಾಗಿ ಬಂದ ತಾಂತ್ರಿಕಜ್ಞನೇ ಸಮ್ಯೋನ್ ಡೆವಿಡೊವಿಚ್ ಕೀರ್ಲಿಯನ್.'

ಮನುಷ್ಯದೇಹದಿಂದ ಹೊರಹೊಮ್ಮುವ ಒಂದು ವಿಶಿಷ್ಟ ಚೈತನ್ಯವು ವಿದ್ಯುತ್ತಿನ ಪ್ರವಾಹವನ್ನು ಪ್ರಭಾವಗೊಳಿಸುವುದೆಂದು ತಜ್ಞರು ಹೇಳುತ್ತಾರೆ. ದೇಹದಿಂದ ಹೊರಹೊಮ್ಮುವ ಆ ಚೈತನ್ಯ ಅಥವಾ ಪ್ರಭಾವಲಯದ ಫೋಟೋ ತೆಗೆಯಲು ನಮ್ಮ ದೇಹವನ್ನು ಅಥವಾ ಯಾವುದಾದರೊಂದು ಅಂಗವನ್ನು ಅಧಿಕ ಆವರ್ತನದ ವಿದ್ಯುತ್ ಪ್ರವಾಹಕ್ಷೇತ್ರದ ಸಮೀಪವಿರಿಸಬೇಕು. ಆಗ ಹೊರಹೊಮ್ಮುವ ಚೈತನ್ಯವು ವಿದ್ಯುತ್ ಕ್ಷೇತ್ರದ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಆಗ ಅವುಗಳ ಬಣ್ಣವೂ ಬದಲಿಸುತ್ತದೆ. ಕೀರ್ಲಿಯನ್ ಸಿದ್ಧಪಡಿಸಿದ ಪರಿಷ್ಕೃತ ಉಪಕರಣದಿಂದ ಅವುಗಳ ಸ್ಥಿತ್ಯಂತರ, ಗತಿವೈಚಿತ್ರ್ಯ, ವರ್ಣವೈವಿಧ್ಯಗಳನ್ನು ಕಾಣಬಹುದು. ಕೀರ್ಲಿಯನ್ ಉಪಕರಣ ವಿದ್ಯುತ್ ಅಲ್ಲದ ಚೈತನ್ಯವನ್ನು' ಒಂದು ರೀತಿ ವಿದ್ಯುತ್ತಾಗಿ ಪರಿವರ್ತಿಸಿ ನಮ್ಮ ದೃಷ್ಟಿಗೆ ನಿಲುಕುವಂತೆ ಮಾಡುತ್ತದೆ. ಕೀರ್ಲಿಯನ್ ಉಪಕರಣದ ಮೂಲಕ ಈ ಸೂಕ್ಷ್ಮದೇಹದ ಅಥವಾ ಶಕ್ತಿದೇಹದ ರೋಮಾಂಚಕಾರಿ ಅದ್ಭುತ ದೃಶ್ಯವನ್ನು ವಿಕ್ಷಿಸಿದವರು ಅತೀಂದ್ರಿಯ ವಿಚಾರದಲ್ಲಿ ಸಾಮಾನ್ಯ ಕುತೂಹಲಿಗಳಾದ ಜನರಲ್ಲ. ಸೋವಿಯಟ್ ದೇಶದ ಪ್ರಿಸೀಡಿಯಮ್ ಆಫ್ ದಿ ಅಕಾಡೆಮಿ ಆಫ್ ಸೈಯನ್ಸಿಸ್"ನ ಮೇಧಾವಿ ಸಂಶೋಧಕ ವಿಜ್ಞಾನಿಗಳು ಎನ್ನುತ್ತಾರೆ.

ಈ ವಿಚಾರದಲ್ಲಿ ಭಾರತೀಯರಿಗೆ ಅಸಡ್ಡೆ ಏಕೆ?' ಎಂದು ಸ್ವಾಮೀಜಿ ಪ್ರಶ್ನಿಸುತ್ತಾರೆ. ಜಗತ್ತಿನಲ್ಲಿ ಇಷ್ಟೊಂದು ಸಂಶೋಧನೆ ನಡೆಯುತ್ತಿರುವಾಗ, ಭಾರತದಲ್ಲಿ ಇಂದು ಆಂಗ್ಲ ವಿದ್ಯಾಭ್ಯಾಸ ಮಾಡಿದ ಯಾವ ವ್ಯಕ್ತಿಗಾದರೂ ಈ ಹಳೆಯ ಸಿದ್ಧಾಂತಗಳು ಮೂಢನಂಬಿಕೆಯ ಕಂತೆ, ಪಾಮರರನ್ನು ವಂಚಿಸಲು ಮಾಡಿದ ಸಂಚು' ಎನ್ನುವ ಭಾವನೆಯು ರೂಢಮೂಲವಾಗುತ್ತದೆ' ಎಂದು ಖೇದಿಸುತ್ತಾರೆ. ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಪ್ರಾಕ್ತನ ಸಿದ್ಧಾಂತಗಳ ಸತ್ವ ಮತ್ತು ಮಹತ್ವಗಳನ್ನು ತಿಳಿದು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡರೆ, ಬದುಕಿಗೊಂದು ಸಾರ್ಥಕತೆ ಬಂದೀತು ಎಂಬುದನ್ನು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ದುರ್ಲಭ ಎನ್ನುವಷ್ಟು ವಿರಳ ಎಂದರೆ ತಪ್ಪಲ್ಲ.'' ಎನ್ನುತ್ತಾರೆ.

ಇಂದು ಭಾರತೀಯರ ಯೋಗ, ತತ್ತ್ವಚಿಂತನೆ, ಸಂಗೀತ ಮತ್ತು ಕಲೆ - ಇವು ಇತರ ದೇಶದ ಮನಸ್ಸನ್ನು ಏಕೆ ಸೆಳೆಯುತ್ತವೆ? ಕೇವಲ ಹೊಸತನದ ಕ್ಷಣಿಕ ಕುತೂಹಲ, ಉದ್ವೇಗಕ್ಕಾಗಿಯೇ ಅಲ್ಲ. ಈ ದೇಶದ ಪುರಾತನ ಋಷಿಗಳು ಮನಸ್ಸಿನ ಆಳಕ್ಕೆ ಮುಳುಗಿ, ಜೀವನದ ಅರ್ಥ ಉದ್ದೇಶಗಳನ್ನು ಕಂಡುಕೊಂಡರು. ಜನತೆಗೆ ಕೆಲವೊಂದು ಶಾಶ್ವತ ಮೌಲ್ಯಗಳನ್ನು ನೀಡಿದರು. ವಿಜ್ಞಾನದ ಪ್ರಗತಿಯ ದೇಶಗಳಲ್ಲಿ ಮನಸ್ಸಿನ ಆಳಕ್ಕೆ ಮುಳುಗಿ ಅದರ ರಹಸ್ಯವನ್ನು ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಮ್ಯಾಕ್ಸ್‌ಮುಲ್ಲರ್ ಅವರ ಅಭಿಪ್ರಾಯದಂತೆ ಯೋಗಶಾಸ್ತ್ರಕ್ಕೆ ಸುಮಾರು ಆರು ಸಾವಿರ ವರ್ಷಗಳ ಪ್ರಾಚೀನತೆ ಇದೆ. ಗೌತುಮನು ಬುದ್ಧನಾಗುವ ಮೊದಲು ಅರಣ್ಯಗಳಲ್ಲಿ ಅಲೆಯುತ್ತಿರುವಾಗ ಅಸಂಖ್ಯ ಸಾಧಕ ತಪಸ್ವಿಗಳನ್ನು ಕಂಡ ವಿಚಾರವಿದೆ.'

ಪರಮ ಸಾಕ್ಷಾತ್ಕಾರದ ಸಾಧನೆಯಲ್ಲಿ ಆಪ್ತವಾಕ್ಯ ಅಥವಾ ಅಥವಾ ಶಬ್ದಪ್ರಮಾಣ, ಯುಕ್ತಿ ಅಥವಾ ತರ್ಕದ ಮೂಲಕ ವಿಚಾರದ ಒರೆಗಲ್ಲಿನಲ್ಲಿ ವಿಮರ್ಶಿಸುವ ವಿಧಾನ ಮತ್ತು ಸ್ವಂತ ಬದುಕಿನಲ್ಲಿ ಆ ಅನುಭವ - ಈ ಮೂರೂ ವಿಧಾನಗಳು ಸೇರಿಕೊಂಡಿವೆ.' ಯುಕ್ತಿತರ್ಕಗಳನ್ನು ಸ್ವಾನುಭವವನ್ನು ಬಿಟ್ಟು ಕೇವಲ ಶಬ್ದಪ್ರಮಾಣವನ್ನೇ ಅಧ್ಯಯನ ಮಾಡುವ ವ್ಯಕ್ತಿ ಮತಾಂಧನಾಗುವ ಸಂಭವವಿದೆ' ಅನ್ನುತ್ತಾರೆ. ಪಶ್ಚಿಮ ಸಂಸ್ಕೃತಿ ಸಮಾಜ ಉಳಿಯಬೇಕಾದರೆ ಕರ್ಮ ಸಿದ್ಧಾಂತದ ಅರಿವನ್ನು ಅಲ್ಲಿಯ ಜನಮಾನಸದಲ್ಲಿ ಪ್ರಸಾರಗೊಳಿಸಬೇಕೆಂದು ಆಂಗ್ಲ ಲೇಖಕ ಪಾಲ್ ಬ್ರಂಟನ್ ಒಮ್ಮೆ ಹೇಳಿದ್ದರಂತೆ.

ಚರ್ಚ್ ಹಗೂ ಕ್ರೈಸ್ತಧರ್ಮಾಧಿಕಾರಿಗಳೆಲ್ಲ ಇದನ್ನು (ಕರ್ಮ ಸಿದ್ಧಾಂತವನ್ನು) ಮೂಢನಂಬಿಕೆ ಎಂದು ವಿರೋಧಿಸಿದ್ದರೂ ಒಂದು ಗಣನೆಯ ಪ್ರಕಾರ ಅಮೇರಿಕಾ ದೇಶದ ನಾಲ್ವರಲ್ಲಿ ಒಬ್ಬರು ಈ ಸಿದ್ಧಾಂತವನ್ನು ಒಪ್ಪುತ್ತಾರೆ.' ಎನ್ನುತ್ತಾರೆ. ಬ್ರಿಟನ್ನಿನ ಸಂಡೇ ಟೆಲಿಗ್ರಾಫ್ ಪತ್ರಿಕೆ ನಡೆಸಿದ ಪರಿಶೀಲನೆಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಜನಸಾಮಾನ್ಯರ ನಂಬಿಕೆಯ ಪ್ರಮಾಣ (ಕರ್ಮ ಹಾಗೂ ಜನ್ಮಾಂತರ ಸಿದ್ಧಾಂತಗಳ ಬಗ್ಗೆ) ಶೇಕಡಾ ಹದಿನೆಂಟರಿಂದ ಇಪ್ಪತ್ತೆಂಟಕ್ಕೆ ಏರಿದೆಯಂತೆ.

ಕ್ರೈಸ್ತಮತದ ಯುನಿಟೇರಿಯನ್ ಪಂಥಕ್ಕೆ ಸೇರಿದ ಧರ್ಮಗುರು ವಿಲಿಯಂ ಆರ್ ಅಲ್‌ಗರ್ ಎಂಬವರು ಕರ್ಮ-ಜನ್ಮಾಂತರವಾದವನ್ನು ತಲೆಬುಡವಿಲ್ಲದ ಸಿದ್ಧಾಂತವೆಂದು ಪ್ರತಿಪಾದಿಸಲು ಅಧ್ಯಯನ ಮಾಡಲು ಹೊರಟು ತಮ್ಮ ಜೀವನವನ್ನೇ ಅದಕ್ಕಾಗಿ ಸವೆಸಿದರಂತೆ. ಕೊನೆಗೆ ಆದದ್ದೇ ಬೇರೆ. ಅವರು ಆ ಸಿದ್ಧಾಂತದ ಪ್ರತಿಪಾದಕರೇ ಆದರಂತೆ. ಅವರ ಉದ್ಗ್ರಂಥ ಭವಿಷ್ಯ ಜೀವನದ ವಿಮರ್ಶಾತ್ಮಕ ಇತಿಹಾಸ' ಉನ್ನತ ಮಟ್ಟದ ಪಾಂಡಿತ್ಯಕ್ಕೆ ಅದ್ವಿತೀಯ ಮಾದರಿ ಎಂದು ಹೊಗಳಲ್ಪಟ್ಟ ಗ್ರಂಥ. ಕರ್ಮಜನ್ಮಾಂತರ ಯುಕ್ತಿಯುಕ್ತವಾದ ಅದ್ಭುತ ಸಿದ್ಧಾಂತ, ಅದನ್ನು ಮೂಢನಂಬಿಗೆ ಎಂದು ಅಲ್ಲಗಳೆಯುವುದು ಮೂರ್ಖತನ' ಎಂದು ಹೇಳಿದ್ದಾರಂತೆ.

ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವಚಾರ್ಜುನ' ಎಂದ ಕೃಷ್ಣ.
ನರನದು ಮರುಹುಟ್ಟು, ಆದರೆ ನಾರಾಯಣನದು ಪುನರಾವತಾರ.
ಜನುಮಮರಣದ ಲೀಲೆ, ಎಲ್ಲದಕ್ಕೂ ಅವನೇ ಸೂತ್ರಧಾರ.
ಮತ್ತೆಮತ್ತೆ ಸಾಯುವ ಶರೀರ, ಬದಲುಮಾಡುವ ಹಳೆಯ ಬಟ್ಟೆ.
ಉಟ್ಟು ಹರಿಯುವ ದೇಹಕಾಗಿ ಯಾಕೆ ಶೋಕ, ಯಾಕೆ ಚಿಂತೆ?
(ಜೀವಿ" ವಚನ 57-2)

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-4
ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-3
ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-2
ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-1

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X