ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮಗಮಾ ಗಮಾಡಸ್ತಾವ ಮಲ್ಲಿಗಿ...

By Staff
|
Google Oneindia Kannada News


ದ.ರಾ.ಬೇಂದ್ರೆಅವರ ಆಯ್ದ ನೂರು ಕವನಗಳ ಸಂಕಲನ ‘ನೂರು ಮರ ನೂರು ಸ್ವರ, ಒಂದೊಂದು ಅತಿ ಮಧುರ’. ಈ ಕೃತಿ ಪರಿಚಯಿಸುವ ಪ್ರಯತ್ನ ಅಂಕಣಕಾರರದು. ಈ ಮಾಲಿಕೆಯ ಎರಡನೇ ಲೇಖನ ಇಲ್ಲಿದೆ.
‘ಸಹಸ್ರತಂತ್ರೀ ನಿಸ್ವನದಂತೆ । ಮಾತರಿಶ್ವನಾ ಘನಮನದಂತೆ । ಗುಡುಗಾಡುತ್ತಿದೆ ಗಗನದ ತುಂಬ । ಪ್ರಣವ ಪ್ರವೀಣನ ನಾದಸ್ತಂಭ.’ ಈ ಕವನದ ಇಂಗ್ಲಿಷ್‌ ಅನುವಾದವನ್ನು ಗೋಕಾಕರು ಮಾಡಿದರು. ಅದು ಆಶ್ರಮದ ಪತ್ರಿಕೆ ‘ಮದರ್‌ ಇಂಡಿಯಾ’ದಲ್ಲಿ ಪ್ರಕಟವಾಯಿತು. ಸಂಪಾದಕ ಕೆ.ಡಿ.ಸೆಟ್ನ ಇದರ ಮಹತ್ವದ ಬಗ್ಗೆ ಬರೆದಿದ್ದಾರೆ. ಈ ಅತಿಮಾನಸ ಆವಿಷ್ಕಾರದ ಫಲಶ್ರುತಿ ಈ ಪದ್ಯದ ಕೊನೆಯ ನುಡಿಯಲ್ಲಿದೆ. ‘ಧರ್ಮ ಮೇಘವೇ ವರ್ಷಿಸುವಂತೆ । ಸತ್ಯದ ಸತ್ವವ ಸ್ಪರ್ಷಿಸುವಂತೆ । ಧರಣಿಯ ಕೆಚ್ಚಲು ಹರ್ಷಿಸುವಂತೆ । ಬರಲಿದೆ ಮಳೆ ಉದ್ಘರ್ಷಿಸುವಂತೆ’ ಎನ್ನುತ್ತಾರೆ.

‘ನಾದಬೇಕು’ ಎಂಬ ಪದ್ಯದಲ್ಲಿ ಕವಿ ನಾದವನ್ನು ನಾದುತ್ತಾರೆ. ವಿಶ್ವಕ್ಕೆ ಕನ್ನಡದ ವಿಶಿಷ್ಟ ಕೊಡುಗೆಯ ಬಗ್ಗೆ ಬೇಂದ್ರೆ ಹೇಳುತ್ತಾರೆ. ‘ವಿದ್ಯಾರಣ್ಯರ ಭೇದ ಬೇಕು । ಪೂರ್ಣಪ್ರಜ್ಞರ ಭೇದ ಬೇಕು । ಅರವಿಂದ ಆಮೋದಬೇಕು । ಏಕೀಕರಣಕ್ಕ ಕಾದಬೇಕು’. ಇಲ್ಲಿ ಕನ್ನಡದ ಸಮನ್ವಯ ದೃಷ್ಟಿ ಇದೆ.

‘ಚೈತನ್ಯದ ಪೂಜೆ’ ಪದ್ಯ ಜಾಗತಿಕ ಸಾಮರಸ್ಯದ ಬಗ್ಗೆ ಹೇಳುತ್ತದೆ. ಅದಕ್ಕೆ ಅವಶ್ಯವಾದುದು ಸೌಜನ್ಯ, ಸಾಮರ್ಥ್ಯ, ಸತ್ಯ, ಸೌಂದರ್ಯ, ಮತ್ತು ಆನಂದ. ಚೈತನ್ಯದ ಪೂಜೆಯಲ್ಲಿ ‘ಸೌಜನ್ಯವೆಂಬುದು ಮೊದಲ ಹೂವು’ ಅದರಿಂದ ನಾವೂ ನೀವು ಅರಳಬೇಕು ಎನ್ನುತ್ತಾರೆ ಬೇಂದ್ರೆ. ಈ ಪೂಜೆಯಲ್ಲಿ ಸಾಮರ್ಥ್ಯ ಬೆಲಪತ್ರಿ, ಪ್ರೀತಿಯೇ ನೈವೇದ್ಯ, ಸೌಂದರ್ಯ ಎದೆಯಲ್ಲಿಯ ಧ್ಯಾನ, ಆನಂದವೇ ಗೀತ, ಇದುವೆ ಸಾಮಗಾನವಾಗಬೇಕು ಎನ್ನುತ್ತಾರೆ.

‘ನಾಕು ತಂತಿ’ ಪದ್ಯ ನಾದ-ಶಬ್ದ-ಸಂಖ್ಯೆಗಳ ಚಮತ್ಕಾರದಂತೆ ಕಂಡರೂ ಅದರಲ್ಲಿ ಅರ್ಥದ ಒಂದು ಲೋಕವೇ ಅಡಗಿದೆ. ಇದನ್ನು ಮೈಸೂರು ಅನಂತಸ್ವಾಮಿ ಹಾಡಿದಾಗ ಅದು ಮಂತ್ರದ ಮೋಡಿಯನ್ನೇ ಹಾಕಿತು, ಕೇಳುವವರಿಗೆಲ್ಲ ರೋಮಾಂಚನವಾಯಿತು. ಬೇಂದ್ರೆಯವರು ‘ನಾನು, ನೀನು, ಆನು, ತಾನು’ ಎಂಬ ಚೌದಂತಿ ವೀಣೆಯನ್ನು ಇಲ್ಲಿ ನುಡಿಸುತ್ತಿದ್ದಾರೆ. ‘ಈ ಜಗ, ಅಪ್ಪಾ ಅಮ್ಮನ ಮಗಾ । ಅಮ್ಮನೊಳಗ ಅಪ್ಪನ ಮೊಗ । ಅಪ್ಪನ ಕತ್ತಿಗೆ ಅಮ್ಮನ ನೊಗ । ನಾ ಅವರ ಕಂದ । ಶೀ ಗುರು ದತ್ತ ಅಂದ.’(ಹೆಚ್ಚಿನ ವಿವರಣೆಗೆ, ‘ನಾ ಕಂಡ ಬೇಂದ್ರೆ’-ಜೀವಿ, ಪುಟ 34-36 ನೋಡಿರಿ).

‘ನೂರು ಮರ, ನೂರು ಸ್ವರ’ ದ ಮೂರನೆಯ ಭಾಗದಲ್ಲಿ ‘ಮರ್ಯಾದೆ’ಯಿಂದ ‘ಚತುರೋಕ್ತಿ’ಯ ವರೆಗೆ (1966 ರಿಂದ 1997) ಪ್ರಕಟವಾದ ಎಂಟು ಪದ್ಯಗಳಿವೆ. ಈ ವಿಭಾಗಕ್ಕೆ ಬರೆದ ಪೀಠಿಕೆಯಲ್ಲಿ ಡಾ। ವಾಮನ ಬೇಂದ್ರೆ ಹೇಳುತ್ತಾರೆ, ‘‘ ಬೇಂದ್ರೆಯವರಿಗೆ ಕಾವ್ಯ ಸೃಷ್ಟಿ ಹಾಗೂ ಜೀವನ ಬೇರೆ ಬೇರೆ ಅಲ್ಲ. ಕಾವ್ಯವೇ ಜೀವನ. ಜೀವನವೇ ಕಾವ್ಯ. ಮಾತು ಶ್ರುತಿಯಾದಾಗ ಕಾವ್ಯ ಕೃತಿ.’’ ಎಂದು.

ಅಂಬಿಕಾತನಯದತ್ತ ಕವಿ. ಲಿಪಿಕಾರ ಬೇಂದ್ರೆ. ಬೇಂದ್ರೆಯವರಿಗೆ 72 ವಯಸ್ಸಾದಾಗ ಅವರು ‘ಬಾ ಹತ್ತರ’ ಕವಿತೆ ಬರೆದರು. ‘ಬಾಹತ್ತರ’ ಶಬ್ದಕ್ಕೆ ಕನ್ನಡದಲ್ಲಿ ‘ಬಾ ಸಮೀಪ’ ಎಂದು ಅರ್ಥವಿದ್ದರೆ ಮರಾಠಿಯಲ್ಲಿ ‘ಎಪ್ಪತ್ತೆರಡು’ ಎಂಬ ಅರ್ಥವಿದೆ. ‘ಬಾ ಹತ್ತರಕೇ । ಪ್ರಶ್ನೋತ್ತರಕೆ । ನಿನ್ನುತ್ತರಕೆ, ನನ್ನೆತ್ತರಕೆ । ಇದು ಉತ್ತಮಿಕೆ । ಪುರುಷೋತ್ತಮಿಕೆ’ ಎಂದು ಓದುಗನನ್ನು ಪ್ರಶ್ನೋತ್ತರಕ್ಕೆ ಕರೆಯುತ್ತಿದ್ದಾರೆ. ಇದು ಉತ್ತಮ ಅಷ್ಟೇ ಅಲ್ಲ, ಪುರುಷೋತ್ತಮ ತತ್ತ್ವ ಹುಡುಕುವ ದಾರಿ ಎನ್ನುತ್ತಾರೆ.

ಇಲ್ಲಿ ಬರುವ ‘ದತ್ತ ಉಗಾಭೋಗ’ ‘ಚತುರೋಕ್ತಿ’ ಎಂಬ ಸಂಗ್ರಹದಲ್ಲಿ ಬರುವ ದಶಪದಿ. ‘ಒಮ್ಮೆ ಮೂನಾ! ನೀ ಸನ್ನಾಗಿ ಬಾ । ಮತ್ತೆ ಒನ್ನಾಗಿ ಬಾ । ಮತ್ತೆ ಚೆನ್ನಾಗಿ ಬಾ।’. ಹಿಂದುಸ್ತಾನ ಮತ್ತು ಪಾಕಿಸ್ತಾನ ಮತ್ತೆ ಒಂದಾಗಬೇಕು ಎಂಬ ಆಶಯದ ಪದ್ಯವಿದು. ಮೂನು(ಚಂದ್ರ) ಪಾಕಿನ ಸಂಕೇತ. ಸನ್‌(ಸೂರ್ಯ) ಭರತದ ಸಂಕೇತ. ಇವೆರಡು ಒನ್‌(ಒಂದು) ಆಗಬೇಕು ಎನ್ನುತ್ತಾರೆ.

ನಾಲ್ಕನೆಯ ಭಾಗದಲ್ಲಿ ‘ಪರಾಕಿ’ಯಿಂದ ‘ಶತಮಾನ’ದ ವರೆಗೆ (1982 ರಿಂದ 2004) ಪ್ರಕಟವಾದ, ಅಂದರೆ ಕವಿಗಳ ಮರಣೋತ್ತರದಲ್ಲಿ ಪ್ರಕಟವಾದ ಕವನಗಳಿಂದ ಹತ್ತು ಕವಿತೆಗಳನ್ನು ಆರಿಸಲಾಗಿದೆ. ‘ಬೆನಕ ಪೂಜೆ’ ಎಂಬ ಬಾನುಲಿ ರೂಪಕಕ್ಕಾಗಿ ರಚಿಸಲಾದ ರೂಪಕದಲ್ಲಿರುವ ಪದ್ಯ ‘ತಾ ಲೆಕ್ಕಣಿಕೆ, ತಾ ದೌತಿ’ ಎಂಬುದು.

ಹೊಸ ಧಾಟಿಯಲ್ಲಿ ಬರೆದ ಪದ್ಯವಿದು. ವ್ಯಾಸರು ಭಾರತ ಕತೆ ಹೇಳಿದರು, ಬರೆದುಕೊಂಡವ ಗಣಪತಿ. ಇಲ್ಲಿ ಕವಿ ಗಣಪತಿಗೆ ಅವನು ಬಳಸಿದ ಲೆಕ್ಕಣಿಕೆ ಹಾಗೂ ದೌತಿ ಕೊಡಲು ಬೇಡುತ್ತಿದ್ದಾರೆ. ‘ಪಾಡ್ಯಾ, ಬಿದಿಗಿ, ತದಿಗಿ, ಚೌತಿ । ತಾ ಲೆಕ್ಕಣಿಕೆ, ತಾ ದೌತಿ’ ಎಂದು ಹೇಳುತ್ತಾರೆ. ‘ನವಭಾರತ ಹರಕಿ ಪರ್ವ ಬರೆಯುವೆ’ ... । ‘ನವ ತಾರುಣ್ಯ ಕರಿಕಿ ದುರ್ವಾ ಎರೆಯುವೆ’.. । ‘ನವಮಾನವ ಬೆರಿಕೆಗರ್ವಾ ಹರಿಯುವೆ’...ತಾ ಲೆಕ್ಕಣಿಕೆ’ ಎನ್ನುತ್ತಾರೆ. ಕೊನೆಗೆ ‘ಹೊಸ ಬಾಲಾ । ಹೊಸ ಶಾಲಾ । ಹೊಸ ಕಾಲಾ ।’ ತೆರೆಯುವುದಾಗಿ ಹೇಳುತ್ತಾರೆ.

‘ವಂದೇ ಅಮ್ಮಾಜಿ’ ಎಂಬ ಪದ್ಯದಲ್ಲಿ ‘ಹೂ ಬಳ್ಳೀ ಹೂ ಹೂವು, ಧಾರವಾಡ ಧಾರ । ಅಂಬಿಕಾತನಯ ಸೂಜಿ । ನಾರುಗಂಪಿನ ಮಾಲೆ , ಹತ್ತು ಒಂದರ ಶಾಲೆ । ಆ ಮಹಾ ಶಿವನೊಂದು, ಆ ಬೀಜ ಶಕ್ತಿ-ಪೂಜೆ’ ಎನ್ನುತ್ತಾರೆ. ಹುಬ್ಬಳ್ಳಿ (ಹೂ-ಬಳ್ಳಿ) ಧಾರವಾಡ ಬೆಸೆಯುವ ಸೂಜಿ ಅಂಬಿಕಾತನಯ ಎಂದು ಹೇಳುವ ಮಾತು ಸಾರ್ಥಕವಾಗಿದೆ.

ನೂರನೆಯ ಹಾಡು ‘ವಸಂತ ಮುಖ’ ಎಂಬ ಪದ್ಯ ಸಖೀಗೀತದಿಂದ ಆಯ್ದದ್ದು. 1937ರಷ್ಟು ಹಿಂದೆ ಬರೆದ ಪದ್ಯ. ‘ಉದಿತ ದಿನ! ಮುದಿತ ವನ । ವಿಧ ವಿಧ ವಿಹಗಸ್ವನ । ಇದುವೆ ಜೀವ ಇದು ಜೀವನ । ಪವನದಂತೆ ಪಾವನ.’ ವಸಂತದ ಸುಂದರ ಚಿತ್ರ ಇಲ್ಲಿದೆ. ಈ ಪದ್ಯ ಕೊನೆಯ ನುಡಿಯಿಂದ ಪ್ರಸ್ತುತ ಕವನ ಸಂಗ್ರಹದ ಶೀರ್ಷಿಕೆಯನ್ನು ಪಡೆಯಲಾಗಿದೆ. ‘ನೂರು ಮರ ನೂರು ಸ್ವರ । ಒಂದೊಂದು ಅತಿ ಮಧುರ । ಬಂಧವಿರದೆ ಬಂಧುರ । ಸ್ವಚ್ಛಂದ-ಸುಂದರ.’

ಸುಂದರವಾದ, ಭಾವ ಬಂಧುರವಾದ, ನೂರು ಅಮರ ಕವಿತೆಗಳ ಅಪೂರ್ವ ಸಂಗ್ರಹಕ್ಕೆ, ಬೇಂದ್ರೆ ಕಾವ್ಯ ರಸಿಕರ ಸ್ವಾಗತ!

***

(‘ನೂರು ಮರ ನೂರು ಸ್ವರ । ಒಂದೊಂದು ಅತಿ ಮಧುರ’ ಮುಂಬೈಯಲ್ಲಿ ಪಡೆಯ ಬಯಸುವವರು ಸಂಪರ್ಕಿಸಿರಿ: ‘ಬೇಂದ್ರೆ ಅಭ್ಯಾಸ ಮಂಡಲಿ, ಮುಂಬಯಿ’ ಫೋನ್‌: 9324242172)

ಇದನ್ನೂ ಓದಿ :

ಬೇಂದ್ರೆ ಅವರ ನೂರು ಅಮರ ಗೀತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X