ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ಅಮೇರಿಕಾ ಪ್ರವಾಸ- ಭಾಗ 4

By *ಡಾ.‘ಜೀವಿ’ ಕುಲಕರ್ಣಿ
|
Google Oneindia Kannada News

ವಿಶ್ವ ಕನ್ನಡ ಸಮ್ಮೇಳನದ ಎರಡನೆಯ ದಿನ

ಆಗಸ್ಟ್‌ 31, ಶನಿವಾರ ಮುಂಜಾನೆ 'ಕೋಬೊ ಹಾಲ್‌'ಗೆ ಬೇಗನೆ ಹೋದೆವು. ಅಲ್ಪೋಪಹಾರದ ತರುವಾಯ ಅಮೇರಿಕೆಯ ಎಲ್ಲ ಕನ್ನಡ ಸಂಘಗಳ ಮೆರವಣಿಗೆ ಇತ್ತು. ಕಳೆದ ಸಲ ಅದಕ್ಕೆ 'ದಸರಾ ಮೆರವಣಿಗೆ' ಎಂದು ಕರೆದಿದ್ದರು; ಅಲ್ಲದೆ, ಜಂಬೂ-ಸವಾರಿಗಾಗಿ ಒಂದು ಪುಟ್ಟ ಆನೆಯ ಪ್ರತಿಕೃತಿಯನ್ನೇ ತಂದಿದ್ದರು. ಈ ಸಲ ಆ ವೈಭವವಿರಲಿಲ್ಲ. ಅಮೇರಿಕೆಯಲ್ಲಿಯ ವಿವಿಧ ಕನ್ನಡ ಸಂಘಗಳ ಸದಸ್ಯರು ತಮ್ಮ ಬ್ಯಾನರ್‌ ಹಿಡಿದುಕೊಂಡು ದೇಶೀ ಉಡುಪುಗಳಲ್ಲಿ ಬಂದು ಮೆರವಣಿಗೆಯಲ್ಲಿ ಪಾಲುಗೊಂಡು ತಮ್ಮ ಉತ್ಸಾಹ ಪ್ರದರ್ಶಿಸಿದರು. ಅತಿಥಿಗಳೂ ಅದರಲ್ಲಿ ಭಾಗವಹಿಸಿದರು. ಮಹಿಳೆಯರ ಉತ್ಸಾಹ ಹೆಚ್ಚು ಎದ್ದು ಕಾಣುತ್ತಿತ್ತು.

ಸಭಾಗೃಹದಲ್ಲಿ ಮೊದಲು ಅಮೇರಿಕೆಯ ರಾಷ್ಟ್ರಗೀತೆ ನುಡಿಸಲಾಯ್ತು. ನಂತರ ಭಾರತದ ರಾಷ್ಟ್ರಗೀತೆ. ದೀಪ ಹಚ್ಚಿದ ಮೇಲೆ 'ಹಚ್ಚೇವು ಕನ್ನಡದ ದೀಪ', 'ನಿತ್ಯೋತ್ಸವ', 'ಜೋಗದ ಸಿರಿ' ಹಾಡುಗಳ ಸಂಭ್ರಮ. ರೂಢಿಯಂತೆ ಸ್ವಾಗತ ಭಾಷಣಗಳಾದವು. ಅಕ್ಕ ಅಧ್ಯಕ್ಷರಾದ ಅಮರನಾಥ ಗೌಡ್‌, ಸಮ್ಮೇಳನದ ಸಂಚಾಲಕರಾದ ಕುದೂರು ಮುರಳಿ ಅವರ ಭಾಷಣಗಳಾದವು.

ವಿಶೇಷ ಅತಿಥಿಯಾಗಿ ಆಗಮಿಸಿದ ಭಾರತದ ರಾಯಭಾರಿ ಲಲಿತ್‌ ಮಾನ್‌ಸಿಂಗ್‌ ಅವರು ಭಾಷಣ ಮಾಡಿದರು. ಅವರ ಪರಿಚಯವನ್ನು ರಮೇಶ ಗೌಡ್‌ ಅವರು ಮಾಡಿದರು. ಲಲಿತ್‌ ಸಿಂಗ್‌ ಅವರು ಪ್ರಾರಂಭದಲ್ಲಿ ಕನ್ನಡದಲ್ಲಿ 'ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ಅಭಿನಂದನೆ' ಎಂದಾಗ ಪ್ರೇಕ್ಷಕ ಸ್ತೋಮ ಕರತಾಡನದಿಂದ ಅವರನ್ನು ಸ್ವಾಗತಿಸಿತು. ಲಲಿತ್‌ ಮಾನ್‌ಸಿಂಗ್‌ ಅವರು ನಂತರ ಇಂಗ್ಲೀಷಿನಲ್ಲಿ ಚೆನ್ನಾಗಿ ಮಾತಾಡಿದರು. ಬಹುಸಂಖ್ಯೆಯಲ್ಲಿ ಬಂದಿದ್ದ ವಿಧಾನ ಸಭೆಯ ಸದಸ್ಯರನ್ನು, ಮಂತ್ರಿ ರಾಣಿ ಸತೀಶರನ್ನು, ಅಕ್ಕ ಅಧ್ಯಕ್ಷ ಅಮರನಾಥ ಗೌಡ್‌, ಅತಿಥಿ ಕವಿ ನಿಸಾರ್‌ ಅಹಮದರನ್ನು ಉದ್ದೇಶಿಸಿ, ನೆರೆದ ಕನ್ನಡ ಜನಸ್ತೋಮವನ್ನು ಅಭಿನಂದಿಸಿ ಮಾತನಾಡಿದರು.

'ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರಗೆ ನೆರೆದ ಬಹು ದೊಡ್ಡ ಜನರ ಗುಂಪನ್ನು ಉದ್ದೇಶಿಸಿ ಮಾತಾಡಲು ನನಗೆ ಆನಂದ ಆಗುತ್ತಿದೆ. ಭಾರತದ ಪ್ರತಿಯಾಂದು ರಾಜ್ಯವೂ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪಡೆದಿದೆ. ಅಶೋಕನ ತರುವಾಯ ದಕ್ಷಿಣದಲ್ಲಿ ಶಾತವಾಹನರು ಮೆರೆದರು. ಕರ್ನಾಟಕ ಎಂದೊಡನೆ ಶ್ರವಣ ಬೆಳ್ಗೊಳದ ಗೊಮ್ಮಟೇಶ್ವರ, ಚಾಲುಕ್ಯರ ಬದಾಮಿ, ಪಟ್ಟದಕಲ್ಲು, ಐಹೊಳೆಯ ಶಿಲ್ಪದ ನೆನಪಾಗುತ್ತದೆ. ನಂತರ ಬಂದ ರಾಷ್ಟ್ರಕೂಟರ ಅಜಂತಾ-ಎಲ್ಲೋರಾ, ಕೈಲಾಸ ದೇವಾಲಯ ನೆನಪಾಗುತ್ತದೆ. ನಂತರ ನಾಲ್ಕು ನೂರು ವರುಷಗಳ ಅಸ್ಥಿರತೆಯ ನಂತರ ಬಂದ ವಿಜಯನಗರ ಸಾಮ್ರಾಜ್ಯವನ್ನು, ಕೃಷ್ಣದೇವರಾಯನನ್ನು ಯಾರೂ ಮರೆಯುವಂತಿಲ್ಲ.

ಇದೆಲ್ಲ ಕರ್ನಾಟಕದ ಗತವೈಭವವಾಯ್ತು. ಸಮೀಪದ ಇತಿಹಾಸದಲ್ಲಿ ಬ್ರಿಟಿಶರನ್ನು ದೇಶದಿಂದ ತೊಲಗಿಸಲು ನಡೆದ ಪ್ರಯತ್ನದಲ್ಲಿ ಮೈಸೂರಿನ ಹೈದರಾಲಿ, ಟಿಪ್ಪು ಸುಲ್ತಾನರನ್ನು ಮರೆಯುವಂತಿಲ್ಲ. ಭಾರತದ ಮೊದಲನೆಯ ರಾಕೆಟ್‌ ತಯಾರಿಸಲು ಹೊರಟಿದ್ದ ಟಿಪ್ಪು ಸುಲ್ತಾನನನ್ನು ನಮ್ಮ ದೇಶದ ಕ್ಷಿಪಣಿ-ಜನಕ ಹಾಗೂ ಇಂದಿನ ರಾಷ್ಟ್ರಪತಿ ಅಬ್ದುಲ್‌ ಕಲಾಮರು ನೆನೆದರು. ಅಷ್ಟೇ ಅಲ್ಲ , ಟಿಪ್ಪು ನಿರ್ಮಿಸಿದ ಕ್ಷಿಪಣಿಯ ಅವಶೇಷ ಬ್ರಿಟಿಶ್‌ ಮ್ಯೂರಿkುಯಂನಲ್ಲಿ ಇದ್ದುದನ್ನು ಭಾರತಕ್ಕೆ ತರಿಸಲು, ಸ್ವಾತಂತ್ರೋತ್ಸವದ ದಿನ ಪ್ರದರ್ಶಿಸಲು, ಪ್ರಯತ್ನಿಸಿದರು. ಅದು ಸಫಲವಾಗಲಿಲ್ಲ , ಆ ಮಾತು ಬೇರೆ. ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಆದರೆ ಕನ್ನಡ ಜನತೆ ಹೇಳಿಕೊಳ್ಳುವ ಸ್ವಭಾವದವರಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಕರ್ನಾಟಕದ ಕೊಡುಗೆಯನ್ನು ಹೊರತುಪಡಿಸಿದರೆ ಭಾರತದ ಸಾಧನೆ ಬಡವಾಗುತ್ತದೆ.'

'ಕನ್ನಡ ಭಾಷೆ ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಇಲ್ಲಿ ಮಹಾ ಕವಿಗಳು ಕಲಾವಿದರು ಆಗಿಹೋಗಿದ್ದಾರೆ. ಭಾರತದ ಶ್ರೇಷ್ಠ ಆಚಾರ್ಯರಾದ ಶಂಕರ, ರಾಮಾನುಜ, ಮಧ್ವ, ವಿದ್ಯಾರಣ್ಯರು ಕರ್ನಾಟಕದವರು.'

ಆಧುನಿಕ ಕಾಲದ ಬಗ್ಗೆ ಮಾತಾಡುವುದಾದರೆ ಕಲೆಯ ಕ್ಷೇತ್ರದಲ್ಲಿ ಕನ್ನಡದ ಕೊಡುಗೆ ಹೇರಳವಾಗಿದೆ. ದೊಡ್ಡ ಚಿತ್ರಕಾರ ಕೆ.ಕೆ.ಹೆಬ್ಬಾರ್‌ ನನ್ನ ಮಿತ್ರರಾಗಿದ್ದರು. ಆಧುನಿಕ ತಂತ್ರ ವಿಜ್ಞಾನದಲ್ಲಿ ಕರ್ನಾಟಕದ ಕೊಡುಗೆ ಮಹತ್ತರವಾಗಿದೆ. ಅದರ ಫೌಂಡೇಶನ್‌ ಹಾಕಿದವರು ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಭಾರತದಲ್ಲಿ ಮೊದಲು ಹೈಡ್ರಾಲಿಕ್‌ ಪವರ್‌ ಪ್ಲಾಂಟ್‌ ಸ್ಥಾಪಿಸಿದವರೇ ಅವರು. ಇಂದು ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನದಿಂದ ಭಾರತವು 1992 ರಲ್ಲಿ 23 ಮಿಲಿಯನ್‌ ಡಾಲರ್‌ ಗಳಿಸಿದ್ದರೆ, ಕಳೆದ ವರ್ಷ ಅದು 10 ಬಿಲಿಯನ್‌ ಡಾಲರಿಗೆ ಅದು ಬೆಳೆದಿದೆ. ಅದರಲ್ಲಿ ಕರ್ನಾಟಕದ ಪಾತ್ರ ಬಹಳ ಗಣನೀಯವಾಗಿದೆ. ಬೆಂಗಳೂರಿಗೆ ಭಾರತದ 'ಸಿಲಿಕನ್‌ ವ್ಯಾಲಿ' ಎಂದು ಕರೆಯಲಾಗುತ್ತಿದೆ.' ಎಂದು ಮುಂತಾಗಿ ಮಾತಾಡಿದರು. ಅವರು ತಮ್ಮ ಭಾಷಣದ ಕೊನೆಗೆ ರಾಷ್ಟ್ರಕವಿ ಕುವೆಂಪು ಅವರ ' ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು' ಎಂಬ ಸಾಲು ಉದ್ಧರಿಸಿದಾಗ ಪ್ರೇಕ್ಷಕರು ಮತ್ತೆ ಕರತಾಡನ ಮಾಡಿ ತಮ್ಮ ಮೆಚ್ಚುಗೆ ಪಡಿಸಿದರು.

ಬಿ.ಎನ್‌.ಬಹಾದೂರ್‌ ಎಂಬ ಉದ್ಯಮಿ ಕರ್ನಾಟಕದ ಮುಖ್ಯಮಂತ್ರಿಗಳನ್ನು ಪರಿಚಯಿಸುತ್ತಾರೆ ಎಂದು ಕುದೂರು ಮುರಳಿಯವರು ಹೇಳಿದಾಗ ನಮಗೆಲ್ಲ ಅಚ್ಚರಿಯೇ ಕಾದಿತ್ತು. ಮುಖ್ಯಮಂತ್ರಿಗಳಿಗೆ ಬರಲಿಕ್ಕೆ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಬಹದೂರ್‌ ಅವರು ಪರಿಚಯ ಭಾಷಣ ಪ್ರಾರಂಭಿಸುತ್ತಿರುವಂತೆಯೇ ಬದಿಯಲ್ಲಿರುವ ದೈತ್ಯ-ಸ್ಕಿೃೕನ್‌ನಲ್ಲಿ ಮುಖ್ಯ ಮಂತ್ರಿ ಎಸ್‌.ಎಂ.ಕೃಷ್ಣ ಅವರ ಚಿತ್ರ ಕಾಣಿಸಿತು. ಪರಿಚಯದ ನಂತರ ಮುಖ್ಯಮಂತ್ರಿಗಳ ಭಾಷಣವನ್ನು ಎಲ್ಲರೂ ಕೇಳಿದರು. ಟೆಕ್ನಾಲಜಿಯ ಪ್ರಗತಿಗೆ ಇದು ಸಾಕ್ಷಿ ಹೇಳುವಂತಿತ್ತು.

ಮುಖ್ಯಮಂತ್ರಿಗಳ ಪ್ರತ್ಯಕ್ಷ ಭಾಷಣದ ಬಿತ್ತರಣೆ ನಡೆಯಿತು. ನೆರೆದ ಸುಮಾರು ನಾಲ್ಕು ಸಾವಿರ ಪ್ರೇಕ್ಷಕರಿಗೆ ಹಿಗ್ಗಾಯಿತು. ಅವರ ಮುದ್ರಿತ ಭಾಷಣದ ಪ್ರತಿಯನ್ನು ಹಂಚಲಾಯಿತು. ಮೋಜಿನ ವಿಷಯವೆಂದರೆ ಮುಖ್ಯ ಮಂತ್ರಿಗಳು ಭಾಷಣ ಮಾಡುತ್ತಿದ್ದರು, ಬರೆದ ಭಾಷಣ ಓದುತ್ತಿರಲಿಲ್ಲ. ಇದಕ್ಕೆ ಪುರಾವೆ ದೊರೆಯಿತು. ಅವರು ತಮ್ಮ ಭಾಷಣದಲ್ಲಿ ಭಾರತದ ರಾಯಭಾರಿ ಲಲಿತ್‌ ಮಾನ್‌ಸಿಂಗರು ತಮ್ಮ ಭಾಷಣದ ಕೊನೆಗೆ ಉಚ್ಚರಿಸಿದ ಕುವೆಂಪು ಅವರ ನುಡಿಗಳನ್ನು ಮುಖ್ಯ ಮಂತ್ರಿಗಳು ಪುನರುಚ್ಚರಿಸುತ್ತ 'ಮಾನ್ಯ ಲಲಿತ್‌ ಮಾನ್‌ಸಿಂಗರು ಈ ಸಾಲುಗಳನ್ನು ಈಗ ತಾನೇ ಉದಾಹರಿಸಿದ್ದಾರೆ' ಅಂದರು. ಈ ಮಾತುಗಳನ್ನು ಕೇಳಿದಾಗ ಮುಖ್ಯಮಂತ್ರಿಗಳು ನಮ್ಮೊಡನೆ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಎಲ್ಲರಿಗೂ ಭಾಸವಾಯಿತು.

ಮುಖ್ಯಮಂತ್ರಿಗಳು 'ಕಡಲಾಚೆ ಕನ್ನಡದ ಕೈಂಕರ್ಯನಿರತರಾದ ಕನ್ನಡ ಕುಲಬಾಂಧವರಿಗೆ' ತಮ್ಮ ಹಾಗೂ ನಾಡವರ ನಮಸ್ಕಾರಗಳನ್ನು ಪ್ರಾರಂಭದಲ್ಲಿ ತಿಳಿಸಿ 'ಪರದೇಶದಲ್ಲಿ ಕನ್ನಡದ ಪತಾಕೆಯನ್ನು' ಹಾರಿಸುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಸಂಘಟಕರನ್ನು ಪ್ರಾರಂಭದಲ್ಲಿ ಅಭಿನಂದಿಸಿದರು.

ಕನ್ನಡನಾಡು ನುಡಿಗಳ ಪ್ರಾಚೀನತೆ, 7 ಸಲ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯದ ಹೆಗ್ಗಳಿಕೆ, 'ಅಕ್ಕ' ಸಂಸ್ಥೆಯ (ಛತ್ರ)ಚಾಮರದ ಅಡಿ ಅಮೇರಿಕೆಯ ಎಲ್ಲ ಕನ್ನಡ ಸಂಸ್ಥೆಗಳು ಒಟ್ಟಾಗಿ ಸೇರಿ 'ಜನನಿ, ಜನ್ಮಭೂಮಿ' ಸ್ವರ್ಗಕ್ಕಿಂತ ಮಿಗಿಲೆಂದು ತಾಯ್ನಾಡು ಕರ್ನಾಟಕದ ಋಣ ತೀರಿಸಲು ಮುಂದಾಗಿದ್ದರ ಬಗ್ಗೆ ಮೆಚ್ಚಿಕೆ ವ್ಯಕ್ತಪಡಿಸಿದರು.

ಇಂದು ಜಾಗತೀಕರಣ, ಉದಾರೀಕರಣದ ಸಂಕ್ರಮಣ ಕಾಲದಲ್ಲಿ, ಪ್ರಭಾವಿ ಮಾಧ್ಯಮಗಳಿಂದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ದಾಳಿಯು ನಡೆಯುತ್ತಿರುವ ಬಗ್ಗೆ ಎಚ್ಚರಿಸಿದರು. ಅಂತಾರಾಷ್ಟ್ರೀಯವಾಗಿ ಮುಕ್ತವಾಗಿ ದೊರೆಯುವ ಅವಕಾಶಗಳನ್ನು ಬಳಸಿಕೊಂಡು ಒಂದಾಗಬೇಕು. ಆದರೆ ನಮ್ಮತನವನ್ನು ಮೆರೆಯಬೇಕು(ಮರೆಯಬಾರದು) ಎಂಬ ಸಂಕಲ್ಪ ಮಾಡಲು ಕರೆ ನೀಡಿದರು.

ಅನಿವಾಸಿ ಕನ್ನಡಿಗರು ಕನ್ನಡ ನಾಡನ್ನು ಕಟ್ಟುವಲ್ಲಿ ತೋರುತ್ತಿರುವ ಅಮಿತ ಉತ್ಸಾಹವನ್ನು ಶ್ಲಾಘಿಸಿದರು. ಸರಕಾರವು ರೂಪಿಸಿರುವ 'ಶಾಲಾ ದತ್ತು ಯೋಜನೆ'ಯಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದನ್ನು ಮೆಚ್ಚಿದರು. 'ನೀವೂ ಬೆಳೆದು ನಿಮ್ಮ ತಾಯಿ ನಾಡನ್ನೂ ಬೆಳಸುವ ಕಾರ್ಯದಲ್ಲಿ ತೊಡಗಲು ಪ್ರಶಸ್ತ ಕಾಲ ಸನ್ನಿಹಿತವಾಗಿದೆ' ಎಂದರು. ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿರುವದನ್ನು ನೆನೆದು ಸಮೃದ್ಧ ಕರ್ನಾಟಕ ಕಟ್ಟಲು ಅನಿವಾಸಿ ಕನ್ನಡಿಗರಿಗೆ ಅಹ್ವಾನ ನೀಡಿದರು. ಕರ್ನಾಟಕದಲ್ಲಿ ಕನ್ನಡಕ್ಕೆ ಹೇಗೆ ಅಗ್ರಸ್ಥಾನ ಕೊಡಲಾಗಿದೆ ಎಂಬುದರ ವಿವರ ನೀಡಿ ಉಚ್ಚ ವ್ಯಾಸಂಗಕ್ಕಾಗಿ ಶೇಕಡಾ 5 ರಷ್ಟು ಜಾಗೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮೀಸಲಾಗಿಟ್ಟಿರುವ ವಿಚಾರ ತಿಳಿಸಿದರು. ಮಾಹಿತಿ ತಂತ್ರಜ್ಞಾನದ ಲಾಭವನ್ನು ಜನಸಾಮಾನ್ಯರ ವರೆಗೆ ತಲುಪಿಸಲು 'ಭೂಮಿ' ಎಂಬ ಯೋಜನೆ ಕೈಗೊಂಡಿರುವುದರ ಬಗ್ಗೆ ಹೇಳಿದರು.

'ಕರ್ನಾಟಕದಲ್ಲಿರುವ 5 ಕೋಟಿ ಕನ್ನಡಿಗರ ಮತ್ತು ವಿಶ್ವದಾದ್ಯಂತ ವ್ಯಾಪಿಸಿದ ಕನ್ನಡಿಗರ ನಡುವೆ ಸೇತುವೆ ಕಟ್ಟುವ ಕೆಲಸ ಕರ್ನಾಟಕ ಸರಕಾರದ್ದು ಮತ್ತು 'ಅಕ್ಕ' ಸಂಸ್ಥೆಯದು' ಅಂದರು. ಹ್ಯೂಸ್ಟನ್‌ ನಗರದಲ್ಲಿ ಮೊದಲ ವಿಶ್ವ ಸಮ್ಮೇಳನ ನಡೆಯಿತು. ಎರಡನೆಯ ಸಮ್ಮೇಳನ ನ್ಯೂಯಾರ್ಕ್‌ನಲ್ಲಿ ನಡೆಯಬೇಕಾಗಿತ್ತು. ಆದರೆ ಸಪ್ಟೆಂಬರ್‌ 11 ರ ಭಯೋತ್ಪಾದಕರ ದಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಹಿಂದಿನ ದುಃಸ್ವಪ್ನವನ್ನು ಮರೆತು ಕನ್ನಡ ಚಟುವಟಿಕೆಯಲ್ಲಿ ನಿರತರಾಗಲು ಡೆಟ್ರಾಯಿಟ್‌ನ ಕನ್ನಡಿಗರು ಮುಂದೆ ಬಂದುದನ್ನು ಮೆಚ್ಚಿ ಸಮ್ಮೇಳನಕ್ಕೆ ಎಸ್‌.ಎಂ. ಕೃಷ್ಣ ಶುಭ ಕೋರಿದರು.

ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವೆ ರಾಣಿ ಸತೀಶರು ಭಾಷಣ ಮಾಡಿದ ಮೇಲೆ ಕವಿ ನಿಸಾರ್‌ ಅಹಮದ ಅವರು ನಿವಾಸ ಭಟ್‌ ಅವರು ಸಂಪಾದಿಸಿದ 'ಸ್ಪಂದನ' ವೆಂಬ ನೆನಪಿನ ಸಂಚಿಕೆ ಬಿಡುಗಡೆಗೊಳಿಸಿದರು.

ನಿಸಾರ್‌ ಅಹಮದರು ತಮ್ಮ ಭಾಷಣದಲ್ಲಿ ಮೊದಲು ಮಾತಾಡಿದವರನ್ನು, ಸಮ್ಮೇಳನದ ಪದಾಧಿಕಾರಿಗಳನ್ನು ಸಂಬೋಧಿಸಿ ಇಂತೆಂದರು, 'ಅದ್ಧೂರಿಯಿಂದ ವೈಭವಪೂರ್ಣವಾದ, ಸಂಪೂರ್ಣವಾದ ಸಮಾರಂಭ ನಡೆಸಿದ 'ಅಕ್ಕ'ದ ಎಲ್ಲ ಸದಸ್ಯರಿಗೆ ನನ್ನ ಹೃತ್‌ಪೂರ್ವಕ ಅಭಿನಂದನೆಗಳು, ಶ್ಲಾಘನೆಗಳು... ಕರ್ನಾಟಕದಿಂದ ದೂರ ಇದ್ದು, ಅಮೇರಿಕೆಯಲ್ಲಿ ನೆಲಸಿದ ಕನ್ನಡಿಗರ ಮೆರವಣಿಗೆ ನೋಡಿದಾಗ ನನ್ನ ಜನ್ಮ ಸಾರ್ಥಕವಾಯಿತು ಎನಿಸಿತು. ನಾನು 'ನಿತ್ಯೋತ್ಸವ' ಹಾಡು ಬರೆದು 38 ವರ್ಷ ಆಯಿತು. ಇಂದು ಆ ಹಾಡು ಕೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು. ನಾನು ಹಾಡು ಬರೆದದ್ದು ಕೃತಾರ್ಥವಾಯಿತು ಅಂತ ಅನಿಸಿತು. ಈ ಸಮ್ಮೇಳನಕ್ಕಾಗಿ ಅಮರನಾಥ ಗೌಡರು, 'ಅಕ್ಕ'ದ ಪದಾಧಿಕಾರಿಗಳು ಬಹಳ ದುಡಿದಿದ್ದಾರೆ. ನಾಲ್ಕು ದಿನ ಮೊದಲೇ ಬಂದೆ. ಅಮರನಾಥಗೌಡರ ಮನೆಯಲ್ಲಿ ಇಳಿದುಕೊಂಡೆ. ಮುಂಜಾನೆಯಿಂದ ಸಂಜೆಯ ವರೆಗೆ ಅವರು ಎತ್ತಿದ್ದ ಪೋನ್‌ ಕೆಳ್ಗಿಟ್ಟದ್ದು ನಾನು ನೋಡಲಿಲ್ಲ. ಅವರ ಮಿತ್ರರು ಕೂಡ ಬಹಳ ಒಳ್ಳೇಯ ಕೆಲಸ ಮಾಡ್ತಾ ಇದ್ದಾರೆ.

ನಾನೀಗ ಒಂದು ಮಾತು ಹೇಳಬೇಕು, ಹೇಳದಿದ್ದರೆ ನನ್ನ ಕರ್ತವ್ಯದಲ್ಲಿ ಚ್ಯುತಿಯಾಗುತ್ತದೆ. ನನ್ನನ್ನು ಅಮೇರಿಕೆಗೆ ಕರೆಸಿದವರು, ನಾಲ್ಕು ಜನ ನನ್ನ ಆತ್ಮೀಯ ಮಿತ್ರರು. ಈ ಮೊದಲು ಅವರ ಪರಿಚಯ ನನಗೆ ಇರಲಿಲ್ಲ. ಇಲ್ಲಿ ಬಂದ ಮೇಲೆ ಅವರ ಪರಿಚಯವಾಯಿತು. ಆ ಮಿತ್ರರ ಹೆಸರು ಹೇಳುವೆ. ಬೋಸ್ಟನ್‌ ನಗರದ ಗೋವಿಂದರಾಜು, ಫ್ಲೋರಿಡಾದ ಸೀತಾರಾಮಯ್ಯ, ಕ್ಯಾಲಿಫೋರ್ನಿಯಾದ ಕೃಷ್ಣಮೂರ್ತಿ ಹಾಗೂ ಅಯೋವಾದ ಕೃಷ್ಣಶಾಸ್ತ್ರಿಗಳು. ನನ್ನ ಪ್ರವಾಸದ ಎಲ್ಲ ವ್ಯವಸ್ಥೆ ಇವರುಗಳು ಮಾಡಿದ್ದಾರೆ, ಎಲ್ಲೆಡೆಗೆ ನನ್ನ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ. ನಾನು ಇವರೆಲ್ಲರಿಗೂ ಕೃತಜ್ಞ.

ಕವಿ ಕುವೆಂಪು ಅವರ 'ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು' ಎಂಬ ಸಾಲುಗಳನ್ನು ನೀವೆಲ್ಲ ಕೇಳಿದ್ದೀರಿ. ಆ ಪದ್ಯದ ಮುಂದಿನ ಚರಣ ಹೀಗಿದೆ:

'ನೀ ಮೆಟ್ಟುವ ನೆಲ- ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ- ಶ್ರೀಗಂಧದ ಮರ
ನೀ ಕುಡಿಯುವ ನೀರ್‌ ಕಾವೇರಿ.'

ದೂರ ದೂರದಿಂದ ನೀವು ಬಂದಿದ್ದೀರಿ. ಇದೆ ಕರ್ನಾಟಕವಾಗಿದೆ. ಈ ದೃಶ್ಯ ಕಂಡಾಗ ನನಗೆ ರೋಮಾಂಚನವಾಗುತ್ತದೆ. ನನಗೆ ಬಹಳ ಹೇಳೋದಿದೆ ಆದರೆ ಕಾಲಾವಕಾಶವಿಲ್ಲ. ಕನ್ನಡದ ಸೇವೆ ಯಾರೇ ಮಾಡ್ತಾ ಇರಲಿ ಅವರಿಗೆ ಕನ್ನಡ ತಾಯಿಯ ಆಶೀರ್ವಾದ ಇದ್ದೇ ಇರುತ್ತದೆ. ನಿಮ್ಮೆಲ್ಲರ ಮಧ್ಯೆ ನನಗೆ ದೊಡ್ಡ ಮನ್ನಣೆ ದೊರೆಯಿತು. ನಾನು ಕೃತಾರ್ಥನಾಗಿದ್ದೇನೆ. ನನ್ನನ್ನು ಇಲ್ಲಿ ಬರಮಾಡಿಕೊಳ್ಳಲು ಕಾರಣರಾದ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆ ಹೇಳುವೆ. ಈಗ ಊಟದ ಸಮಯ ಬಂತು. ಮತ್ತೊಮ್ಮೆ ಅವಕಾಶ ದೊರೆತಾಗ ಮಾತಾಡುವೆ.' ಎಂದರು.

ಊಟಕ್ಕಾಗಿ 'ರಿವರ್‌ ವ್ಯು' ಎಂಬ ವಿಶಾಲ ಹಾಲ್‌ ಇತ್ತು. ಅಲ್ಲಿ ಕೂಡ ಮನರಂಜನೆಯ ಕಾರ್ಯಕ್ರಮ ನಡೆಯುತ್ತಿತ್ತು. ಕನ್ನಡ ಸಿನೇಮಾ ದೃಶ್ಯಗಳನ್ನು ಕೂಡ ಆಗಾಗ ತೋರುತ್ತಿದ್ದರು. ಉಮಾ ಇಟ್ಟಗಿ ಸಮೂಹದಿಂದ ಕನ್ನಡ ಸಿನೇಮಾ ಗೀತಗಳ ಕಾರ್ಯಕ್ರಮ ಬಹಳ ಜನರನ್ನು ಆಕರ್ಷಿಸಿತು. ಓಕ್‌ಲ್ಯಾಂಡ್‌ ಹಾಲಿನಲ್ಲಿ ಸಹ ಮನರಂಜನೆಯ ಹಾಗೂ ಇತರ ಕಾರ್ಯಕ್ರಮಗಳು ನಡೆದಿರುತ್ತಿದ್ದವು. ಮೊದಲನೆಯ ಹಾಗೂ ಎರಡನೆಯ ಮಾಳಿಗೆಯಲ್ಲಿದ್ದ ಹಲವಾರು ಚಿಕ್ಕ ರೂಮುಗಳಲ್ಲಿ ಹಲವಾರು ಸೆಮಿನಾರ್‌, ಪರಿಸಂವಾದ ಹಾಗೂ ಚರ್ಚೆಗಳು ನಡೆದೇ ಇರುತ್ತಿದ್ದವು. ಎಲ್ಲ ಕಡೆಗೆ ಏಕಕಾಲಕ್ಕೆ ಹೋಗುವದು ಕಷ್ಟಕರವಾಗುತ್ತಿತ್ತು. ಹಾಲಿನ ಹೊರಗೆ ಬಟ್ಟೆ, ಆಭರಣ, ಫ್ಯಾನ್ಸಿ ಸರಕುಗಳ ಮಾರಾಟದ ಮಳಿಗೆಗಳಿದ್ದವು. ಪುಸ್ತಕ ವ್ಯಾಪಾರದ ಮಳಿಗೆ ಎರಡೋ ಮೂರೋ ಇದ್ದವು. ಮುಂದೆ 2004 ರಲ್ಲಿ ಮೂರನೆಯ ವಿಶ್ವ ಕನ್ನಡ ಸಮ್ಮೇಳನದ ವೀಳ್ಯವನ್ನು ಹೊತ್ತ ಫ್ಲೋರೀಡಾದ ಶ್ರೀಗಂಧ ಕನ್ನಡ ಸಂಘದವರು ಹೆಚ್ಚು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಆಗುವಂತೆ ಅನುಕೂಲತೆ ಒದಗಿಸಬೇಕು. ಉಚಿತ ಮಳಿಗೆ ನೀಡಿ ಪ್ರೋತ್ಸಾಹಿಸಬೇಕು. ಮನೋಹರ ಗ್ರಂಥ ಮಾಲೆಯವರ ಕನ್ನಡ ಲೇಖಕರ ಹಸ್ತಾಕ್ಷರಗಳ ಪ್ರದರ್ಶನ ಆಕರ್ಷಕವಾಗಿತ್ತು.

ಮನರಂಜನೆಯಲ್ಲಿ ಮಾಲಿನಿ ಶ್ರೀರಾಮರ 'ಯೌವನ ಪ್ರಾಶನ್‌, ಕೋಲಾರ್‌ ಡಾನ್ಸ್‌ ಗ್ರೂಪಿನ 'ಸಂಗ್ಯ ಬಾಳ್ಯಾ', ಉಮಾಶ್ರೀಯವರ ಏಕ ಪಾತ್ರಾಭಿನಯ, ವಾಸಂತಿ ಗೌಡ ಹಾಗೂ ನಲಿನಿ ಮಲ್ಲ್ಯ ಅವರ ಕೋಲಾಟ, ನಾಗಮಣಿ ವಿಶ್ವನಾಥ ಅವರ ನಾಟಕ 'ಲಾಕ್‌ಔಟ್‌ ಅಲ್ಲ ನಾಕ್‌ಔಟ್‌', ಸುಭದ್ರಾ ರಾಮಚಂದ್ರ ಅವರ 'ಮುದ್ದಣ ಮನೋರಮೆ', ಪೂರ್ಣ ಶಂಕರ್‌ ಅವರ ಕರಗ ನೃತ್ಯ, ನಾಗಮಣಿ ವಿಶ್ವನಾಥ್‌ ಅವರ ಏಕಪಾತ್ರಾಭಿನಯ 'ರಾಣಿ ಕಿತ್ತೂರ ಚೆನ್ನಮ್ಮ', ಸುಪ್ರಿಯಾ ದೇಸಾಯಿ ಅವರ 'ಮಹಿಷಾಸುರ ಮರ್ದಿನಿ' ನೃತ್ಯ, ವೀಣಾ ಗೌಡ ಹಾಗೂ ಬಿ.ವಿ.ಜಗದೀಶ್‌ ಅವರ 'ಚಿತ್ರಮಂಜರಿ' ಕಾರ್ಯಕ್ರಮ, ರೂಪಾ ಶ್ಯಾಮಸುಂದರ್‌ ಅವರ'ಕೃಷ್ಣ' ನೃತ್ಯ ರೂಪಕ, ಜಗನ್ನಾಥ ಕೆ ನಾಯಕರ ಏಕಪಾತ್ರಾಭಿನಯ, ಅನುಸೂಯಾ ಕುಲಕರ್ಣಿ ಅವರ ವಾದ್ಯ ಸಂಗೀತ, ಕೊನೆಗೆ ಹಿನ್ನೆಲೆಗಾಯಕಿ ಬಿ.ಕೆ.ಸುಮಿತ್ರಾ ಅವರ ಚಿತ್ರಗೀತಗಳ ರಸಮಂಜರಿ ಕಾರ್ಯಕ್ರಮ ಇದ್ದವು. ಅದರಲ್ಲಿ ಕೆಲವನ್ನು ಮಾತ್ರ ನೋಡುವುದು, ಕೇಳುವುದು ಸಾಧ್ಯವಾಯಿತು.

ಪೂರಕ ಓದಿಗೆ

English summary
America Diary-2002 by Dr. G.V. Kulakarni
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X