ಮಾಧ್ಯಮಗಳಿಗೆ ಮುತಾಲಿಕ್ ಉಗುಳೇ ಮಂತ್ರ!

Who made Pramod Mutalik a hero?
ಶ್ರೀರಾಮಸೇನೆಯ ಕಾರ್ಯಕರ್ತರ ಪಬ್ ದಾಳಿ ಖಂಡನೀಯವೇ. ಆದರೆ ಅದಕ್ಕಿಂತ ಬರ್ಬರವಾಗಿ ಮಹಿಳೆಯರ ಮೇಲೆ ಹಲ್ಲೆಗಳಾಗುತ್ತಿವೆ. ಈ ದೇಶದಲ್ಲಿ ತಾಸಿಗೆ ಎಂಟು ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ. ಆದರೆ ಅವ್ಯಾವವೂ ಸುದ್ದಿಯಾಗುವುದಿಲ್ಲ. ಇಂಥ ಸುದ್ದಿಯನ್ನು ಪ್ರಸಾರ ಮಾಡಿದರೆ TRPಜಾಸ್ತಿಯಾಗುವುದಿಲ್ಲ. ಹೀಗಾಗಿ ಮುತಾಲಿಕ್ ಥರದವರು ರಾತ್ರೋರಾತ್ರಿ ರಾಷ್ಟ್ರೀಯ ಮಹತ್ವ ಪಡೆದುಕೊಳ್ಳುತ್ತಾರೆ. ಇದು ಮಾಧ್ಯಮಗಳ ಒಂದು ತಪ್ಪುಹೆಜ್ಜೆ ಅಲ್ಲ, ಪ್ರಮಾದದ ನೆತ್ತಿಯ ಮೇಲಿಟ್ಟ ದಾಪುಗಾಲು.

* ವಿಶ್ವೇಶ್ವರ ಭಟ್

ನಾವು ಪತ್ರಕರ್ತರಿದ್ದೇವಲ್ಲ... ನಮ್ಮಿಂದಾಗುವ ಉಪಟಳ ಅಷ್ಟಿಷ್ಟಲ್ಲ, ಕೆಲವೊಮ್ಮೆ ನಮ್ಮಿಂದ ಘೋರ ಅನಾಹುತಗಳಾಗಿಬಿಡುತ್ತವೆ. ಹಾಗೆ ಮಾಡಬೇಕೆಂಬುದು ನಮ್ಮ ಉದ್ದೇಶವಲ್ಲ. ಆದರೂ ಅನಾಹುತವಾಗಬಹುದು ಎಂಬ ಸಣ್ಣ ಸುಳಿವು ಸಹ ನಮಗಿರುವುದಿಲ್ಲ. ಆದರೆ ನಮಗೆ ಗೊತ್ತಿಲ್ಲದಂತೆ, ಆಗಬಾರದಂಥ ಅನಾಹುತವಾಗಿರುತ್ತದೆ. ನಾವು ಬಳಸುವ ಭಾಷೆ, ಪದಪ್ರಯೋಗ, ಸುದ್ದಿಯನ್ನು treat ಮಾಡುವ ರೀತಿಯಿಂದ ನಮಗರಿವಿಲ್ಲದಂತೆ ನಾವು ಸಮಾಜದ ಮನಸ್ಸುಗಳ ಮೇಲೆ ಪ್ರಭಾವ ಬೀರುತ್ತಿರುತ್ತೇವೆ. ಮುಂದೊಂದು ದಿನ ಅದು ಎಂಥ ಘೋರ ಪರಿಣಾಮ ಬೀರಬಹುದು ಎಂಬ ಸಣ್ಣ ವಿವೇಚನೆಯೂ ನಮಗಿರುವುದಿಲ್ಲ. ಆದರೆ ಪತ್ರಿಕೆಗಳಿಂದ, ಪತ್ರಕರ್ತರಿಂದ ಅವ್ಯಾಹತವಾಗಿ ಈ 'ದಾಳಿ' ಮುಂದುವರಿದಿರುತ್ತದೆ.

ಇತ್ತೀಚೆಗೆ ವಿಚಾರಸಂಕಿರಣವೊಂದರಲ್ಲಿ ಭಾಗವಹಿಸಿದಾಗ ವಿದ್ವಾಂಸರೊಬ್ಬರು ನನ್ನ ಮೇಲೆ ಹರಿಹಾಯ್ದರು. ಪತ್ರಿಕೆಗಳ ವಿರುದ್ಧ ತಮ್ಮ ಕೋಪ-ತಾಪ ಪ್ರದರ್ಶಿಸಿದರು. 'ನೀವುಪತ್ರಕರ್ತರಿದ್ದೀರಲ್ಲ' ಎಂದೇ ರಾಗ ತೆಗೆದರು. "ಅಲ್ರೀ, ಅವರು ಹೇಡಿಗಳಲ್ಲವೇನ್ರಿ? ಹುಚ್ಚು ನಾಯಿಗಳಲ್ಲವೇನ್ರಿ? ಅವರನ್ನು ನೀವು ಉಗ್ರವಾದಿಗಳು, ಭಯೋತ್ಪಾದಕರು, ಆತಂಕವಾದಿಗಳು ಎಂದೆಲ್ಲ ಕರೆಯುತ್ತೀರಲ್ಲ. ಇದರಿಂದ ಏನಾಗಿದೆಯೆಂದ್ರೆ ಆ ಹುಚ್ಚುನಾಯಿಗಳಿಗೆ ತಾವು ಭಯ ಹುಟ್ಟಿಸುವವರು, ಉಗ್ರರು ಅಂತ ಅನಿಸಲಾರಂಭಿಸಿ ತಮ್ಮ ರೌದ್ರಾವತಾರ ಮೆರೆಯುತ್ತಿದ್ದಾರೆ. ಹೇಡಿಗಳ ಗುಂಡಿಗೆ 8 ಬಲಿ, ಹುಚ್ಚುನಾಯಿಗಳಿಂದ ಗುಂಡಿನ ಚಕಮಕಿ, ಪೊಲೀಸ್ ಗುಂಡಿಗೆ ಹುಚ್ಚುನಾಯಿಗಳ ಸಾವು ಅಂತ ಬರೆದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನೀವು ಪತ್ರಕರ್ತರು ಮನಸ್ಸಿಗೆ ಬಂದಂತೆ ಬರೆಯುತ್ತೀರಿ. ನೀವೇ ಹೇಳಿ, ಹೇಡಿಗಳು ಭಯೋತ್ಪಾದಕರಾ? ಆ ಹೇಡಿಗಳಿಂದಾದ ಅಪರಾ ಕೃತ್ಯಗಳಿಗೆ ಬಣ್ಣ ಕೊಟ್ಟವರು ನೀವೇ ಅಲ್ವಾ?" ಎಂದು ಪ್ರಶ್ನಿಸಿದರು. ಅವರ ಮಾತಿನ ಅರ್ಥಕ್ಕಿಂತ ಅಂತರಂಗದ ದನಿಯೇನೆಂಬುದು ನನಗೆ ಅರ್ಥವಾಯಿತು.

ಕೆಲ ತಿಂಗಳುಗಳ ಹಿಂದೆ ಟಿವಿ ಸಂದರ್ಶನದಲ್ಲಿ ಭಾಗವಹಿಸಿದ್ದ ಖ್ಯಾತ ಪತ್ರಕರ್ತ ಅರುಣ್ ಶೌರಿ ಸಹ ಇದೇ ಧಾಟಿಯಲ್ಲಿ ಮಾತಾಡಿದ್ದರು. "ಕೆಲವು ಪದಗಳ ಅರ್ಥವೇನೆಂಬುದು ಗೊತ್ತಿಲ್ಲದಿದ್ದರೂ ಪತ್ರಕರ್ತರು ಅವನ್ನು ಬಳಸುತ್ತಾರೆ. ಅಲ್ಲದೇ ಈ ಪದಗಳ ಮೂಲಕ ಸಂಕೀರ್ಣ ರಾಜಕೀಯ ಬುದ್ಧಿಯನ್ನು ಮೆರೆಯುತ್ತಾರೆ" ಎಂದು ಹೇಳಿದ್ದರು. ಕೋಮುವಾದ, ಜಾತ್ಯತೀತತೆ, ಕೇಸರೀಕರಣ (Saffronisation) ಈ ಪದಗಳ ಅರ್ಥವೇನೆಂದು ಪತ್ರಕರ್ತರನ್ನು ಕೇಳಿ, ಯಾರಿಂದಲೂ ಸಮಾಧಾನವಾಗುವ ಉತ್ತರ ಸಿಗುವುದಿಲ್ಲ. ಕೋಮುವಾದ ಅಂದ್ರೆ ಏನೆಂದು ಕೇಳಿದರೆ ಬಿಜೆಪಿ ಮಾಡುತ್ತಿದೆಯಲ್ಲ ಅದೇ ಕೋಮುವಾದ ಅಂತಾರೆಯೇ ಹೊರತು ಕೋಮುವಾದ ಅಂದ್ರೆ ಏನು ಎಂದು ಹೇಳುವುದಿಲ್ಲ. ವಿಚಿತ್ರವೆಂದರೆ ಈ ಪದ ಸಂದರ್ಭಕ್ಕೆ ವಿರುದ್ಧವಾಗಿ, ಸರಿಯಾದ ಅರ್ಥ ಕೊಡದ ರೀತಿಯಲ್ಲಿ, ಅಪಾರ್ಥಕ್ಕೊಳಗಾಗುವ ರೀತಿಯಲ್ಲಿ ಬಳಕೆಯಾಗುತ್ತಿದೆ" ಎಂದಿದ್ದರು. ಇಂದಿನ ಸಂದರ್ಭದಲ್ಲಿ ಯಾವ ರಾಜಕೀಯ ಪಕ್ಷವೂ ತತ್ತ್ವ, ಸಿದ್ಧಾಂತದಲ್ಲಾಗಲಿ, ಆಚರಣೆಯಿಂದಾಗಲಿ ಜಾತ್ಯತೀತವಾದದಂತೆ ನಡೆಯುತ್ತಿಲ್ಲ. ಆದರೆ ಪತ್ರಿಕೆಗಳು ಬಿಜೆಪಿಯೇತರ ಪಕ್ಷಗಳನ್ನು Secular Forceಗಳೆಂದೇ ಕರೆಯುತ್ತವೆ. ಅರುಣ್ ಶೌರಿ ಕೇಳಿದ್ದು ಇದನ್ನೇ. ಈ ರೀತಿ ಒಂದು ಪದದಿಂದ ಒಂದು ಪಕ್ಷವನ್ನು ಸಮೀಕರಿಸುವುದು ಅಥವಾ ಪ್ರತ್ಯೇಕಿಸುವುದು ಎಷ್ಟರಮಟ್ಟಿಗೆ ಸರಿ ಎಂದು.

ಕೆಲವು ಪದಪುಂಜಗಳು ಪತ್ರಿಕೆ, ಟಿವಿಯಲ್ಲಿ ಅಯಾಚಿತವಾಗಿ ಮೇಲಿಂದ ಮೇಲೆ ಪ್ರಯೋಗವಾಗುತ್ತಾ ಕೊನೆಗೆ ಅವೇ ಕಾಯಂ ಆಗಿ ಓದುಗ ಅಥವಾ ಪ್ರೇಕ್ಷಕನ ಮನಸ್ಸಿನಲ್ಲಿ ನೆಲೆಸುತ್ತವೆ. ಒಮ್ಮೆ ಮುತ್ತಪ್ಪ ರೈ ಹೇಳಿದ್ದರು "ಪತ್ರಿಕೆಯವರು ನನ್ನ ಹೆಸರು ಬರೆಯುವಾಗಲೆಲ್ಲ ಭೂಗತಲೋಕದ ಪಾತಕಿ, ಭೂಗತಲೋಕದ ಮಾಜಿ ಡಾನ್ ಮುತ್ತಪ್ಪ ರೈ ಎಂದೇ ಬರೆಯುತ್ತಿದ್ದರು. ನಾನು ಹಲವು ಸಲ ಪ್ರತಿಭಟಿಸಿದರೂ ಇದು ಮುಂದುವರಿದಿತ್ತು. ಕೊನೆಗೊಂದು ದಿನ ಆ ಸುದ್ದಿ ಬರೆದ ವರದಿಗಾರನಿಗೇ ಫೋನ್ ಮಾಡಿ ಇನ್ನು ಮುಂದೆ ಭೂಗತಲೋಕದ ಪಾತಕಿ ಎಂದು ಬರೆದರೆ ನಿನ್ನ ಪಾಲಿಗೆ ಹಾಗೇ ಆಗಬೇಕಾಗುತ್ತದೆ ಹುಷಾರ್ ಎಂದು ಹೇಳಿದಾಗ ಹಾಗೆ ಬರೆಯುವುದನ್ನು ಬಿಟ್ಟರು." (ಅಂದಹಾಗೆ ಈಗ ಯಾರೂ ಅವರ ಬಗ್ಗೆ ಹಾಗೆ ಬರೆಯುವುದಿಲ್ಲ.) ಯಾರೋ ಒಬ್ಬರು ಬರೆಯುತ್ತಾರೆಂದು, ಯಾವುದೋ ಒಂದು ಪತ್ರಿಕೆ ಹಾಗೆ ಬರೆಯುತ್ತದೆಂದು ಎಲ್ಲರೂ ಹಾಗೇ ಬರೆಯಲಾರಂಭಿಸುತ್ತಾರೆ. ತಕ್ಷಣಕ್ಕೆ ಅದೇ ಚಾಲ್ತಿಯಲ್ಲಿ ಬಂದುಬಿಡುತ್ತದೆ. ಮಂಗಳೂರಿನ ಪಬ್ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ಮಾಡಿದಾಗ ಅದ್ಯಾರೋ ತಾಲಿಬಾನ್ ಕೃತ್ಯ ಎಂದರು. ಶುರು, ದಿಲ್ಲಿಯ ವಾರಪತ್ರಿಕೆಯೊಂದು Talibanisation of Karnataka ಎಂಬ ಶೀರ್ಷಿಕೆಯಡಿ ಮುಖಪುಟ ಲೇಖನ ಪ್ರಕಟಿಸಿತು. ಈಗಂತೂ ರಾಷ್ಟ್ರೀಯ ಪತ್ರಿಕೆ ಹಾಗೂ ಟಿವಿ ವಾಹಿನಿಗಳಿಗೆ ಕರ್ನಾಟಕ ಅಂದ್ರೆ ತಾಲಿಬಾನ್! ಯಾರೋ ನಾಲ್ಕು ಮಂದಿ ಪುಂಡರ ಕೃತ್ಯದಿಂದ ಕರ್ನಾಟಕ ತಾಲಿಬಾನ್ ಆಗೋಯ್ತು! (ತಾಲಿಬಾನ್‌ಗಳು ತಾವು ನಡೆಸುವ ದುಷ್ಕೃತ್ಯಕ್ಕೆ Karnatakisation of Talibanಎಂದು ಬಳಸಿದರೆ ಹೇಗಾಗಬಹುದು?)

ಪತ್ರಿಕೆಗಳಿಗೆ, ಟಿವಿ ವಾಹಿನಿಗಳಿಗೆ ತಾವು ನೀಡುವ ಸುದ್ದಿ, ಎಂಥ ಸೈಡ್ ಎಫೆಕ್ಟ್' ಮಾಡಬಹುದೆಂಬ ಸಣ್ಣ ಅರಿವು ಇದ್ದಿದ್ದರೆ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್‌ಗೆ ಈ ಪ್ರಮಾಣದ ಪ್ರಚಾರ ನೀಡುತ್ತಿರಲಿಲ್ಲ. "ನನ್ನ ಹೇರ್ ಸ್ಟೈಲ್ ಮೂಲಕ ಜಗತ್ತಿನ ಪತ್ರಿಕೆಗಳ ಮುಖಪುಟಗಳನ್ನು ಬದಲಿಸಬಲ್ಲೆ" ಎಂದು ರಾಜಕುಮಾರಿ ಡಯಾನಾ ಹೇಳಿದ್ದಳು. "ನಾನು ಸೀನಿದರೆ ಪತ್ರಿಕೆಗಳಿಗೆ ಶೀತಜ್ವರ ಬರುತ್ತದೆ" ಎಂದು ಅಮೆರಿಕ ಅಧ್ಯಕ್ಷನಾಗಿದ್ದ ರೊನಾಲ್ಡ್ ರೇಗನ್ ಹೇಳಿದ್ದ. ಅಂದರೆ ದಿನಾ ಕೂದಲನ್ನು ಸಿಂಗರಿಸಿಕೊಳ್ಳುವುದರ ಬದಲು ತುಸು ಬದಲಿಸಿದರೆ ಅದನ್ನೇ ಪತ್ರಿಕೆಗಳು ಮಹಾನ್‌ ಸುದ್ದಿಯೆಂಬಂತೆ ಬರೆಯುತ್ತವೆ ಎಂದು ಡಯಾನಾ ಪತ್ರಿಕೆಗಳಿಗೆ ತಿವಿದಿದ್ದಳು. ರೇಗನ್ ಹೇಳಿದ್ದೂ ಇದೇ ಅರ್ಥದಲ್ಲಿ. ಇಂದು ಏನಾಗಿದೆಯೆಂದರೆ ಪ್ರಧಾನಿ, ಸೋನಿಯಾಗಾಂಧಿ ಹಾಗೂ ಆಡ್ವಾಣಿಯಂಥವರ ಹೇಳಿಕೆಗಳನ್ನು ಮಸುಕುಗೊಳಿಸುವ ಅಥವಾ ಅವರ ಹೇಳಿಕೆಗಳನ್ನು ಒಳಪುಟಕ್ಕೆ ಕಳಿಸುವ ತಾಕತ್ತು ಮುತಾಲಿಕ್‌ರ ಒಂದು (ಅಸಂಬದ್ಧ) ಹೇಳಿಕೆಗೆ ಬಂದುಬಿಟ್ಟಿದೆ.

ಇಂದು ಅವರೇನೇ ಹೇಳಲಿ, ಅವರು ಹೇಳುವುದು ಶುದ್ಧ ಅವಿವೇಕವೆಂಬುದು ಗೊತ್ತಿದ್ದರೂ ಪತ್ರಿಕೆಗಳು ಅವನ್ನು ಮುಖಪುಟದಲ್ಲಿ ಪ್ರಕಟಿಸಿದರೆ, ಟಿವಿ ಸುದ್ದಿ ಚಾನೆಲ್‌ಗಳಂತೂ ಇಪ್ಪತ್ನಾಲ್ಕು ಗಂಟೆ ವಟರಗಪ್ಪೆ ಅರಚುವಂತೆ ಅರಚುತ್ತಿರುತ್ತವೆ. ಮಾಧ್ಯಮಗಳ ದೃಷ್ಟಿಯಲ್ಲಿ ಮುತಾಲಿಕ್ ಭಾರತೀಯ ಸಂಸ್ಕೃತಿಯ ರಾಯಭಾರಿ'. ತನಗೆ ಇಂಥ ಸ್ಥಾನಮಾನ ಕೊಡಿ ಎಂದು ಮುತಾಲಿಕ್ ಅಂತೂ ಕೇಳಿಲ್ಲ. ಇಷ್ಟೊಂದು ಪ್ರಚಾರ ಗಿಟ್ಟಿಸಿಕೊಳ್ಳಲು ಮುತಾಲಿಕ್ ಹಲವು ಕೋಟಿ ರೂ.ಗಳನ್ನು ಖರ್ಚು ಮಾಡಬೇಕಿತ್ತು. ಆದರೆ ಕೇವಲ ಒಂದು ಪಬ್ ದಾಳಿಯಿಂದ ಅವರಿಗೆ ಅಂಥ ಪ್ರಚಾರ ಸಿಕ್ಕಿಬಿಟ್ಟಿದೆ. ಕಳೆದ ಹದಿನೈದು ದಿನಗಳಿಂದ ದಿಲ್ಲಿ ಪತ್ರಿಕೆಗಳ ಮುಖಪುಟಗಳೆಲ್ಲ ಮುತಾಲಿಕ್‌ಮಯ. ಅದರಲ್ಲೂ ಪ್ರೇಮಿಗಳ ದಿನ(ವ್ಯಾಲಂಟೈನ್ಸ್ ಡೇ)ಗಳ ಆಚರಣೆಗೆ ಅವಕಾಶ ಕೊಡೊಲ್ಲ, ಆ ದಿನ ಅಲೆದಾಡುವ ಪ್ರೇಮಿಗಳಿಗೆ ತಾಳಿ ಕಟ್ತೇವೆ, ರಾಕಿ ಕಟ್ತೇವೆ ಅಂದಿದ್ದೇ ತಡ, ಟಿವಿ ವಾಹಿನಿಗಳಂತೂ ಹಿಸ್ಟಿರಿಯಾಕ್ಕೊಳಗಾದವರಂತೆ ವರ್ತಿಸುತ್ತಿರುವುದನ್ನು ಕಂಡು ಮುತಾಲಿಕ್ ಮುಸಿಮುಸಿ ನಕ್ಕಿರಬೇಕು. ಪ್ರಚಾರಗಿಟ್ಟಿಸುವುದು ಇಷ್ಟು ಸುಲಭ ಅಂತ ಅವರಿಗೆ ಗೊತ್ತಿರಲಿಲ್ಲ. ಈಗಂತೂ ಮುತಾಲಿಕ್ ಹೇಳಿದ್ದೆಲ್ಲ ಸುದ್ದಿ. ಭಜರಂಗದಳದಿಂದ ಹೊರಬಿದ್ದು, ರಾಜಕೀಯಪಕ್ಷ ಕಟ್ಟಿ ಕೈಸುಟ್ಟುಕೊಂಡು, ಇತಿಹಾಸದ ಕಸದಬುಟ್ಟಿ ಸೇರಿ, ಅಸ್ತಿತ್ವ ಕಾಪಾಡಲು ಹೆಣಗುತ್ತಿದ್ದ, ಪದೇ ಪದೆ ಪರಾಭವದಿಂದ ಕುಸಿದು ಹೋಗಿದ್ದ, ನೈತಿಕವಾಗಿ ದುರ್ಬಲವಾಗಿ ಹೈರಾಣಾಗಿ ಹೋಗಿದ್ದ ಮುತಾಲಿಕ್‌ಗೆ ಪಬ್ ದಾಳಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಅಲ್ಲ, ಪುನರ್ಜನ್ಮದಂತೆ ಒದಗಿಬಂತು. ಇಂದು ಮುತಾಲಿಕ್‌ಗೆ ಇರುವಷ್ಟು TRP ಪ್ರಾಯಶಃ ಒಸಾಮಾ ಬಿನ್ ಲಾಡೆನ್‌ಗಾಗಲಿ, ಮಲ್ಲಿಕಾ ಶೆರಾವತ್‌ಗಾಗಲಿ, ಅಮಿತಾಭ್‌ಗಾಗಲಿ, ಧೋನಿಗಾಗಲಿ ಇಲ್ಲ. ಎಲ್ಲ ಟಿವಿಗಳಲ್ಲೂ ಅವರದೇ ಬೈಟ್. ಅವರು ಹೇಳಿದ್ದೇ ನ್ಯಾಷನಲ್ ಹೆಡ್‌ಲೈನ್. ಪ್ರೇಮಿಗಳ ದಿನ' ಮುಗಿಯುವವರೆಗೆ ಅವರು ಉಗುಳಿದ್ದೆಲ್ಲ ಮಂತ್ರವೇ! ಒಂದು ಪಬ್ ದಾಳಿಯಿಂದ ಶ್ರೀರಾಮಸೇನೆ ಎಂಬ ಅನಾಮಧೇಯ ಸಂಘಟನೆಯೂ ಅಲ್‌ಖೈದಾದಷ್ಟೇ ಪ್ರಚಾರ ಗಿಟ್ಟಿಸಿಕೊಂಡುಬಿಟ್ಟಿತು.

ಶ್ರೀರಾಮಸೇನೆಯ ಕಾರ್ಯಕರ್ತರ ಪಬ್ ದಾಳಿ ಖಂಡನೀಯವೇ. ಆದರೆ ಅದಕ್ಕಿಂತ ಬರ್ಬರವಾಗಿ ಮಹಿಳೆಯರ ಮೇಲೆ ಹಲ್ಲೆಗಳಾಗುತ್ತಿವೆ. ಈ ದೇಶದಲ್ಲಿ ತಾಸಿಗೆ ಎಂಟು ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ. ಆದರೆ ಅವ್ಯಾವವೂ ಸುದ್ದಿಯಾಗುವುದಿಲ್ಲ. ಇಂಥ ಸುದ್ದಿಯನ್ನು ಪ್ರಸಾರ ಮಾಡಿದರೆ TRPಜಾಸ್ತಿಯಾಗುವುದಿಲ್ಲ. ಹೀಗಾಗಿ ಮುತಾಲಿಕ್ ಥರದವರು ರಾತ್ರೋರಾತ್ರಿ ರಾಷ್ಟ್ರೀಯ ಮಹತ್ವ ಪಡೆದುಕೊಳ್ಳುತ್ತಾರೆ. ಇದು ಮಾಧ್ಯಮಗಳ ಒಂದು ತಪ್ಪುಹೆಜ್ಜೆ ಅಲ್ಲ, ಪ್ರಮಾದದ ನೆತ್ತಿಯ ಮೇಲಿಟ್ಟ ದಾಪುಗಾಲು.

ಇತ್ತೀಚಿನ ವರ್ಷಗಳಲ್ಲಿ ಒಂದು ವಿಚಿತ್ರ ಪದ್ಧತಿ ಬೆಳೆದುಬಿಟ್ಟಿದೆ. ಏನೇ ಘಟನೆಯಾಗಲಿ ಸೋಕಾಲ್ಡ್ ವಿಷಯ ಪರಿಣತರನ್ನು ಟಿವಿ ಸ್ಟುಡಿಯೋಕ್ಕೆ ಕರೆಸಿ ಗಂಟೆಗಟ್ಟಲೆ ಹರಟುತ್ತಾ ಕುಳಿತುಬಿಡುತ್ತಾರೆ. ಪತ್ರಿಕೆಗಳಲ್ಲಿ ಇನ್ನೊಂದು ರೀತಿ. ಪತ್ರಿಕೆಗಳಿಗೆ ಅಭಿಪ್ರಾಯ ಕೊಡುವವರ ಒಂದು ಸಿದ್ಧ ಪಟಾಲಮ್ಮಿದೆ. ವರದಿಗಾರರೂ ಅವರನ್ನೇ ಸಂಪರ್ಕಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಯಾರ್‍ಯಾರೋ ತಮ್ಮಷ್ಟಕ್ಕೇ ಹೀರೊಗಳಾಗಿಬಿಡುತ್ತಾರೆ. ಎಷ್ಟು ಯಡವಟ್ಟು, ಪ್ರಚೋದನಕಾರಿ, ಅಪಕ್ವ ಹೇಳಿಕೆ ಕೊಟ್ಟಷ್ಟೂ ಪ್ರಚಾರ ಸಿಗುತ್ತದೆ. ಪತ್ರಕರ್ತರು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಇಂಥವರನ್ನು ಚಿಂತಕ, ಪ್ರಗತಿಪರ ಚಿಂತಕ, ವಿಚಾರವಾದಿ, ಬುದ್ಧಿಜೀವಿ ಎಂದೆಲ್ಲ ಸಂಬೋಧಿಸುತ್ತಾರೆ. ಕನ್ನಡದಲ್ಲಿ ಹೀಗೆ ಚಿಂತಕರಾದವರ, ವಿಚಾರವಾದಿಗಳಾದವರ, ಬುದ್ಧಿಜೀವಿಗಳೆಂದು ಕರೆಸಿಕೊಂಡವರ ದೊಡ್ಡ ದಂಡೇ ಇದೆ. ಇವರಲ್ಲಿ ಕೆಲವರು ವಿಚಾರ ಸಾಹಿತ್ಯವನ್ನೂ ಬರೆಯಲಿಲ್ಲ, ಸಾಹಿತ್ಯದ ವಿಚಾರವಾಗಿಯೂ ಬರೆಯಲಿಲ್ಲ. ಆದರೂ ವಿಚಾರವಾದಿಗಳಾದರು. ಇವರ ಹೆಸರು ಬಂದರೆ ಸಾಕು, ವಿಚಾರವಾದಿ ಎಂಬ ಸ್ಪೇರ್‌ಪಾರ್ಟ'ನ್ನು ಹೆಸರಿಗಿಂತ ಮೊದಲು ಸೇರಿಸಿಬಿಡುತ್ತಾರೆ. ಈ ರೀತಿಯಾಗಿಯೇ ವಿಚಾರವಾದಿಯಾದವರಲ್ಲಿ ಜಿ.ಕೆ. ಗೋವಿಂದರಾವ್, ಚಂಪಾ ಅಗ್ರಗಣ್ಯರು. (ಹಾಗೆ ನೋಡಿದರೆ ಇವರಿಗೆ ವಿಚಾರವಾದಿಗಿಂತ ಪ್ರಚಾರವಾದಿ ಎಂಬ ಬಿರುದು ಇನ್ನೂ ಚೆನ್ನಾಗಿ ಒಪ್ಪುತ್ತದೆ.) ಚಿಂತಕ, ಪ್ರಗತಿಪರ, ವಿಚಾರವಾದಿ ಪದಗಳಿಗೆ ಕಿಮ್ಮತ್ತೇ ಇಲ್ಲ. ಅಂಥ ಸ್ಪೇರ್‌ಪಾರ್ಟ್' ಬಳಸಿದರೆ ಅವರನ್ನೂ ಗುಮಾನಿಯಿಂದ ನೋಡಬೇಕಾದ ಸ್ಥಿತಿ ಬಂದಿದೆ. ಹಾಗೆಂದು ಜಿ.ಕೆ. ಗೋವಿಂದರಾವ್ ಅವರಾಗಲಿ, ಚಂಪಾ ಅವರಾಗಲಿ ತಮ್ಮನ್ನು ಹಾಗೆ ಕರೆಯಿರಿ ಎಂದು ಪತ್ರಿಕೆಯವರನ್ನು ಒತ್ತಾಯಿಸಲಿಲ್ಲ. ಪತ್ರಕರ್ತರೇ ಸ್ವಯಂಪ್ರೇರಿತರಾಗಿ ತುಸು ಧಾರಾಳತನದಿಂದ ಸ್ಪೇರ್‌ಪಾರ್ಟ್ಸ್' ಅನ್ನು ದಯಪಾಲಿಸಿದ್ದಾರೆ. ಇನ್ನೂ ವಿಚಿತ್ರವೆಂದರೆ ಈ ಬಿಡಿ ಭಾಗಗಳೆಂಬ ಬಿರುದನ್ನು ಪತ್ರಕರ್ತರು ಯಾರಿಗೆ ಬೇಕಾದರೂ ಕೊಡುತ್ತಾರೆ. ಆದ್ದರಿಂದ ವಿಚಾರವಾದಿ ಪಂಗಡಕ್ಕೆ ಸೇರುವ ಜಿಕೆಜಿ'ಗಳು ಬೀಗಲೂ ಸಹ ಆಗುವುದಿಲ್ಲ. ಯಾರಾದರೂ ಪತ್ರಕರ್ತನೊಬ್ಬ ಒಂದು ದಿನ ವಿಚಾರವಾದಿ ಪ್ರಮೋದ್ ಮುತಾಲಿಕ್ ಎಂದು ಬರೆದುಬಿಟ್ಟರೆ ಆ ಜಿಡ್ಡು ಅವರಿಗೂ ಅಂಟಿಕೊಂಡುಬಿಡುತ್ತದೆ. ನಾಳೆಯಿಂದ ವಿಚಾರವಾದಿ ಎಂಬ ಪದ ಮುತಾಲಿಕ್ ಪಕ್ಕದಲ್ಲಿ ಬೆಚ್ಚಗೆ ಕುಳಿತುಕೊಳ್ಳುತ್ತದೆ.

ಪರಿಸರ ಪ್ರಕರಣಕ್ಕೆ ಸಂಬಂಧಿಸಿದ ಒಂದೆರಡು ತೀರ್ಪು ಕೊಟ್ಟರೆಂದು ನ್ಯಾಯಮೂರ್ತಿ ಸಾಲ್ಡಾನ ಏಕಾಏಕಿ ಪರಿಸರಸ್ನೇಹಿ ನ್ಯಾಯಮೂರ್ತಿ'ಗಳಾಗುತ್ತಾರೆ. ದೇವೇಗೌಡರಾಗಲಿ, ಅವರ ಮಕ್ಕಳಾಗಲಿ ರೈತಾಪಿ ಕೆಲಸ ಮಾಡಿದ್ದನ್ನು ಯಾರು ನೋಡಿದ್ದಾರೋ ಗೊತ್ತಿಲ್ಲ. ಅವರೆಲ್ಲ ಹಠಾತ್ತನೆ ಮಣ್ಮಿನ ಮಕ್ಕಳಾಗಿ ಬಿಡುತ್ತಾರೆ. ಬೆಂಗಳೂರಿನಲ್ಲಿ ಸಣ್ಣಪುಟ್ಟ entertainment event ಗಳನ್ನು ಮಾಡಿಕೊಂಡು, ನೈಟ್‌ಪಾರ್ಟಿಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಸಾದ ಬಿಡ್ಡಪ್ಪ ಫ್ಯಾಷನ್‌ಗುರು' ಆಗಿ ಬಿಡುತ್ತಾನೆ. ಮನೋವಿರಾಜ್ ಖೋಸ್ಲಾನಂಥವರು ಸೋಷಿಯಲ್ ಅಡ್ವೋಕೇಟ್ ಗಳಾಗುತ್ತಾರೆ, ನಮ್ಮ ಚಿತ್ರನಟರಿಗೆ ಬಿಟ್ಟಿಯಾಗಿ ರೆಬಲ್‌ಸ್ಟಾರ್, ಗೋಲ್ಡನ್ ಸ್ಟಾರ್, ಪವರ್‌ಸ್ಟಾರ್, ಹ್ಯಾಟ್ರಿಕ್ ಹೀರೋ ಎಂದೆಲ್ಲ ಯಾರು ನಾಮಕರಣ ಮಾಡಿದರೋ?

ಪ್ರಚಾರವೆಂಬುದು ಎಂಥ ವಿಷವೆಂದರೆ ಅದು ವಿಚಾರವನ್ನೂ ಆಪೋಶನ ತೆಗೆದುಕೊಂಡು ಬಿಡುತ್ತದೆ. ಪಬ್ಲಿಕ್ ಓಪಿನಿಯನ್' ಎಂಬ ಕೃತಿ ಬರೆದ ಖ್ಯಾತ ಪತ್ರಕರ್ತ ವಾಲ್ಟರ್ ಲಿಪ್‌ಮನ್ ಹೇಳುತ್ತಾನೆ- ಮಾಧ್ಯಮಗಳಿಗೆ ಎಂಥವರನ್ನು ಬೇಕಾದರೂ ನಂಬಿಸುವ ಶಕ್ತಿಯಿದೆ. ಅದರಲ್ಲೂ ಟಿವಿ ಮಾಧ್ಯಮಕ್ಕೆ ಕತ್ತೆಯನ್ನು ಕುದುರೆ ಎಂದು ನಂಬಿಸುವ ಚಮತ್ಕಾರಿಕ ಸಾಮರ್ಥ್ಯವಿದೆ. ಒಂದೇ ವಿಷಯವನ್ನು ಅನೇಕ ಸಲ ಹೇಳಿದರೆ ಜನ ಕ್ರಮೇಣ ನಂಬುತ್ತಾ ಹೋಗುತ್ತಾರೆ. ಸಾರ್ವಜನಿಕ ಅಭಿಪ್ರಾಯವೆಂಬುದು ನೆಲೆಗೊಂಡ ಬಳಿಕ ಅದನ್ನು ಯಾರೂ ಅಲ್ಲಾಡಿಸಲಾರರು. "ಇಂದಿಗೂ ಭಾರತ ಅಂದ್ರೆ ಹಾವಾಡಿಗರ, ಮಾಟಮಾಂತ್ರಿಕರ ದೇಶ ಎಂಬ ಅನಿಸಿಕೆ ಪಾಶ್ಚಾತ್ಯರಲ್ಲಿ ನೆಲೆಸಿರುವುದನ್ನು ನೆನಪಿಸಿಕೊಳ್ಳಿ. ನಮ್ಮ ದೇಶ ವಿಜ್ಞಾನ- ತಂತ್ರಜ್ಞಾನದಲ್ಲಿ ಎಷ್ಟೇ ಬಲಾಢ್ಯವಾಗಿದ್ದರೂ ಭಾರತದ ನಕಾಶೆ ಮೂಡುತ್ತಿದ್ದಂತೆ ಪಾಶ್ಚಾತ್ಯರಿಗೆ ಮನಸ್ಸಿನ ಹಿತ್ತಲ ಮನೆಯಿಂದ ಪುಂಗಿಯನಾದ ಅಲೆ ಅಲೆಯಾಗಿ ತೇಲಿಬಂದಂತೆ ಭಾಸವಾಗುತ್ತದೆ. ಹಣವೇ ಇಲ್ಲದ ಸರಕಾರಿ ಸ್ವಾಮ್ಯದ ನಿಗಮ- ಮಂಡಳಿಗಳನ್ನು ಗಂಜಿಕೇಂದ್ರಗಳೆಂದು 'ವಿಜಯ ಕರ್ನಾಟಕ' ಕರೆದಾಗ ಮೊದಲಿಗೆ ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಈಗ ಗಂಜಿಕೇಂದ್ರ ಅಂದ್ರೆ ಎಲ್ಲರಿಗೂ ಗೊತ್ತಾಗುತ್ತದೆ. ಯಾಕೆಂದರೆ ಪತ್ರಿಕೆಗಳಲ್ಲಿ ಈ ಪದವನ್ನು ಹತ್ತಾರು ಸಲ ಬಳಸಿದ್ದರಿಂದ ಓದುಗರಿಗೆ ಗೊತ್ತಾಗಿದೆ. ಲಂಕೇಶ್ ಆರೆಸ್ಸಿಸ್‌ನವರಿಗೆ ಚೆಡ್ಡಿಗಳು ಎಂದು ಬಳಸಿದ್ದು ಇಂಥದೇ ಇನ್ನೊಂದು ನಿದರ್ಶನ. ಪತ್ರಿಕೆಗೆ ಅಥವಾ ಮಾಧ್ಯಮಗಳಿಗೆ ಅದೆಂಥ ವಿಚಿತ್ರ ಶಕ್ತಿಯಿದೆಯೆಂದರೆ ಬುಶ್‌ಗೆ ಬೂಟು ಎಸೆದ ಪತ್ರಕರ್ತ ಪ್ರಭುತ್ವ ವಿರೋ ಮನೋಭಾವಕ್ಕೆ ಆರಾಧ್ಯ ದೈವನಾಗುತ್ತಾನೆ. ಮುತಾಲಿಕ್ ಸಂಸ್ಕೃತಿಯ ವಕ್ತಾರನಾಗುತ್ತಾನೆ. ಉಮೇಶ ರೆಡ್ಡಿಯಂಥ ವಿಕೃತಕಾಮಿ ಸಹ ಮನೆಯಲ್ಲಿ ಅಮ್ಮಂದಿರ ಬಾಯಲ್ಲಿ ಮಗಳೇ, ಹೇಳಿದ ಮಾತನ್ನು ಕೇಳದಿದ್ದರೆ ಉಮೇಶ ರೆಡ್ಡಿ ಕರೆಯುತ್ತೇನೆ" ಎಂಬಂತೆ ಹುಸಿ ಬಾಂಬ್ ಆಗುತ್ತಾನೆ. ಈಗಿನ ಹಾಗೆ ಆತನಿಗೆ ಪ್ರಚಾರ ಸಿಕ್ಕಿದ್ದಿದ್ದರೆ ಉಮೇಶ್ ರೆಡ್ಡಿ ಪ್ಯಾಂಟಿ ಜಾಹೀರಾತಿಗೆ ಆತ ಮಾಡೆಲ್ ಆಗುತ್ತಿದ್ದನೇನೋ!? ನಾವು ಪತ್ರಿಕೆಯವರು ಇಷ್ಟೆಲ್ಲಾ ಬರೆದರೂ ನೀವು ಒಪ್ಪಿಕೊಳ್ಳುತ್ತೀರಲ್ಲಾ ನಿಮ್ಮ ಸಹನೆ ದೊಡ್ಡದು. ಅದಕ್ಕೊಂದು ಶಂಭೋ!

(ಸ್ನೇಹ ಸೇತು: ವಿಜಯಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+