ಇದು ಬೇರೇನೂ ಅಲ್ಲ, ರಾಜಕಾರಣದ ಸಲಿಂಗಕಾಮ!
ಈ ರಾಜಕಾರಣವೇ ಹಾಗೋ, ಈ ರಾಜಕಾರಣಿಗಳೇ ಹೀಗೋ ಗೊತ್ತಿಲ್ಲ. ಕಳೆದ ಕೆಲ ದಿನಗಳ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅಸಹ್ಯ, ಹೇಸಿಗೆ ಹಾಗೂ ವಾಕರಿಕೆ ಬರುತ್ತಿದೆ. ಮಾನ, ಮರ್ಯಾದೆಯನ್ನು ಎಡಗೈ ಕಿರುಬೆರಳಲ್ಲೂ ಹಿಡಿದುಕೊಂಡಿಲ್ಲ ನಮ್ಮ ರಾಜಕಾರಣಿಗಳು. ನೀತಿಗೆಟ್ಟವರಂತೆ, ಬೌದ್ಧಿಕ ದಿವಾಳಿಕೋರರಂತೆ, ಸಮಯಸಾಧಕರಂತೆ, ಲಜ್ಜೆಗೆಟ್ಟವರಂತೆ, ಎಲ್ಲವನ್ನೂ ಬಿಟ್ಟವರಂತೆ ವರ್ತಿಸುತ್ತಿದ್ದಾರೆ. ನಮ್ಮ ರಾಜ್ಯದ ರಾಜಕಾರಣ ಈ ಪರಿ ಕೊಚ್ಚೆಗೆ ಬಿದ್ದಿರಲಿಲ್ಲ. ಮಾನ, ಮರ್ಯಾದೆಯೆಂದರೆ ನಮ್ಮ ರಾಜಕಾರಣಿಗಳಿಗೆ ಚೇಳು ಕಂಡಂತೆ. ಬಹುತೇಕ ಎಲ್ಲ ಧುರೀಣರೂ ತಮ್ಮ ಪಕ್ಷದ ಕಚೇರಿಯನ್ನು ಅಂಗಡಿಯಾಗಿಯೋ, ಮಂಡಿಯಾಗಿಯೋ ಪರಿವರ್ತಿಸಿ ಟಿಕೆಟ್ಗಳನ್ನು ಮಾರಾಟಕ್ಕೆ ಇಟ್ಟುಬಿಟ್ಟಿದ್ದಾರೆ. ಕೆಲವು ಕಡೆ ಟಿಕೆಟ್ಗಳು ಹರಾಜಿನಲ್ಲಿ ಮಾರಾಟವಾಗುವಂತೆ ಕಚ್ಚಾಡಿ ಖಾಲಿಯಾಗಿವೆ. ಚುನಾವಣೆಯಲ್ಲಿ ಸೋತರೂ ಪರವಾಗಿಲ್ಲ, ಗೆದ್ದುಬಂದ ನಂತರ ಮಾಡುವವರಿಗಿಂತ ಹೆಚ್ಚು ಹಣವನ್ನು ಈಗಾಗಲೇ ಮಾಡಿಬಿಟ್ಟಿದ್ದಾರೆ. ಈಗಲೇ ಈ ಪರಿ ತಿಂದವರು, ಗೆದ್ದು ಬಂದ ಅನಂತರ ಯಾವ ರೀತಿ ಮೇಯಲು ಕುಳಿತುಕೊಳ್ಳಬಹುದು? ಉಹುಂ... ಊಹಿಸಲೂ ಸಾಧ್ಯವಿಲ್ಲ.
ನಮ್ಮ ನಾಯಕರೆನಿಸಿಕೊಂಡವರು ಅದೆಂಥ ಮಾನಗೇಡಿಗಳೆಂದರೆ, ಇಷ್ಟು ವರ್ಷ ತಮ್ಮನ್ನು ಹಳಿಯುತ್ತಿದ್ದವರನ್ನು, ವಾಚಾಮಗೋಚರ ಬೈಯುತ್ತಿದ್ದವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಪಕ್ಷಗಳ ಕಚೇರಿಯೊಳಗೂ ಚರಂಡಿ ನೀರು ನುಗ್ಗಿದೆ! ಇಂಥ ಪಕ್ಷ, ಇಂಥ ನಾಯಕರು ಅದೆಂಥ ಸ್ವಚ್ಛ, ದಕ್ಷ ಸರಕಾರ ಕೊಡಬಹುದು? ಹೇಗಾದರೂ ಮಾಡಿ ಟಿಕೆಟ್ ಗಿಟ್ಟಿಸಬೇಕು, ಅದಕ್ಕೆ ಎಷ್ಟೇ ಹಣವಾದರೂ, ಡೋಂಟ್ ಕೇರ್, ಪಡೆಯಲೇಬೇಕು, ಅದರ ಮೂರು-ನಾಲ್ಕು ಪಟ್ಟು ಚುನಾವಣೆಯಲ್ಲಿ ಹಣ ಚೆಲ್ಲಬೇಕು, ಅಂತೂ ಇಂತೂ ಆರಿಸಿಬರಬೇಕು, ಅನಂತರ ಖರ್ಚು ಮಾಡಿದ ಹಣದ ಹತ್ತೋ-ಇಪ್ಪತ್ತೋ ಪಟ್ಟು ಹಣ ಸಂಪಾದಿಸಬೇಕು, ಜತೆಗೆ ಅಧಿಕಾರ ಚಲಾಯಿಸುತ್ತಾ ಅನುಭವಿಸಬೇಕು. ದುಡ್ಡು ಬಿಸಾಕಿ ದುಡ್ಡನ್ನು ಬಾಚಿಕೊಳ್ಳಬೇಕು. ಹೀಗಿರುವಾಗ ಪಕ್ಷ ಯಾವುದಾದರೇನು? ಸಿದ್ಧಾಂತ ಏನಿದ್ದರೇನು? ಹಣ ಮಾತಾಡಿದರೆ ಎಲ್ಲವೂ, ಎಲ್ಲರೂ ಸುಮ್ಮನಾಗುತ್ತವೆ, ಸುಮ್ಮನಾಗುತ್ತಾರೆ. ಇವರೇ ನಮ್ಮ ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ. ಕಾನೂನು ಮಾಡುತ್ತಾರೆ. ಐದು ವರ್ಷ ತಿಂದು ತೇಗಿ, ಹೇಗಿದ್ದರೂ ತಮ್ಮ ಪಕ್ಷ ಪುನಃ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ, ಅಧಿಕಾರಕ್ಕೆ ಬರುವ ಪಕ್ಷ ಸೇರುತ್ತಾರೆ. ಪೇಮೆಂಟ್ ಎಂಬ ಪೆಪ್ಪರ್ಮೆಂಟ್' ಕೊಟ್ಟರೆ ಯಾರು ತಾನೆ ಜೊಲ್ಲು ಸುರಿಸುವುದಿಲ್ಲ? ಬೇರೆ ಪಕ್ಷದಿಂದ ಆರಿಸಿ ಬಂದು ಪುನಃ ಮಂತ್ರಿಯಾಗಿ ಮೆರೆಯುತ್ತಾರೆ.
ಈಗ ಆಗುತ್ತಿರುವುದೂ ಅದೇ. ಈ ಚುನಾವಣೆಯನ್ನು ನೋಡಿದರೆ ದೇವರಾಣೆಗೂ ದೇವರಿಲ್ಲ ಎಂದು ಸಾಬೀತುಪಡಿಸುವುದು ಸುಲಭ. ಆ ಪರಿಯ ನೀಚಾತಿನೀಚ ರಾಜಕಾರಣವನ್ನು ನಾವು ನೋಡುತ್ತಿದ್ದೇವೆ, ಮೂಕಪ್ರೇಕ್ಷಕರಾಗಿ. ಯಡಿಯೂರಪ್ಪ ಬಿಜೆಪಿ ಬಿಟ್ಟರೆ (ಈ ಮೊದಲು ಬಿಡಲು ಹೊರಟಿದ್ದರು), ಸಿದ್ದರಾಮಯ್ಯ ಬಿಜೆಪಿ ಸೇರಿದರೆ, ಮೆರಾಜುದ್ದೀನ್ ಕಾಂಗ್ರೆಸ್ ಜತೆ ಕೈಜೋಡಿಸಿದರೆ, ಬಿಜೆಪಿ-ದೇವೇಗೌಡ ಒಂದಾದರೆ, ಎಸ್ಸೆಂ ಕೃಷ್ಣ-ಅನಂತಕುಮಾರ್ ಒಳ ಒಪ್ಪಂದ ಮಾಡಿಕೊಂಡರೆ (ಮಾಡಿಕೊಂಡಿಲ್ಲ ಅಂತೀರಾ?) ಅಚ್ಚರಿಯೇನಿಲ್ಲ.
ಈ ದೇಶ ಎಲ್ಲ ರೀತಿಯ ರಾಜಕಾರಣ ಹಾಗೂ ಎಲ್ಲ ವಿಧದ ರಾಜಕಾರಣಿಗಳನ್ನು ಕಂಡಿದೆ. ಇಲ್ಲಿ ತನಕ ಆಗದಿರುವುದೆಂದರೆ ಬಿಜೆಪಿ ಹಾಗೂ ಕಾಂಗ್ರೆಸ್ ಕೈಜೋಡಿಸದಿರುವುದು. ಅಂಥ ಕಾಲವೂ ಬರಬಹುದು. ಪ್ರಾಯಶಃ ಈಗ ನಡೆಯುತ್ತಿರುವುದು ಅದರ ಮುನ್ನುಡಿಯೂ ಆಗಿರಬಹುದು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ರಾಜಕಾರಣಿಗಳು ತಮ್ಮ ಹೀನ ನಡತೆಗೆ ಸಮರ್ಥನೆ ಕೊಡುತ್ತಾರಲ್ಲ, ಬಿಜೆಪಿ-ಕಾಂಗ್ರೆಸ್ ಒಂದಾದಾಗಲೂ ಹಾಗೇ ಹೇಳಬಹುದು. ಬಿಜೆಪಿ ಕಾಂಗ್ರೆಸ್ಗಿಂತ ಯಾವ ವಿಧದಲ್ಲೂ ಭಿನ್ನವಾಗಿ ಉಳಿದಿಲ್ಲ. ಕೆಲವು ವಿಷಯಗಳಲ್ಲಿ ಕಾಂಗ್ರೆಸ್ಸಿಗರೂ ಅಚ್ಚರಿಪಡುವ ರೀತಿಯಲ್ಲಿ ಬಿಜೆಪಿಗಳು ಹಿಮ್ಮೆಟ್ಟಿಸಿಬಿಟ್ಟಿದ್ದಾರೆ. ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ಗಿಂತ ಅಧಿಕ ರೇಟಿಗೆ ಬಿಕರಿಯಾಗಿರುವುದು ಬಿಜೆಪಿ ಟಿಕೆಟ್ಗಳೇ. ಬಿಜೆಪಿಗಳು ಇಲ್ಲಿತನಕ ಶುದ್ಧವಾಗಿದ್ದರು. ಸತ್ಯಹರಿಶ್ಚಂದ್ರನ ಪೋಸು ಕೊಡುತ್ತಿದ್ದರು.
ಆದರೆ ಯಾವಾಗ ಅಧಿಕಾರ ಅನುಭವಿಸಿದರೋ ಅಲ್ಲಿಗೆ ಅವರೂ ಜಾತಿ ಕೆಡಿಸಿಕೊಂಡುಬಿಟ್ಟರು. ಕಾಂಗ್ರೆಸ್ನವರಿಗೂ ವಿಸ್ಮಯ ಹುಟ್ಟಿಸುವ ರೀತಿಯಲ್ಲಿ ಬಿಜೆಪಿಗಳು ಬದಲಾಗಿಬಿಟ್ಟರು. ಯಾಕೆಂದರೆ ಕಾಂಗ್ರೆಸ್ಸಿಗರು ಕೆಡಲು, ಕೆಡುತ್ತಾ ಕೆಡುತ್ತಾ ಸುಧಾರಿಸಲು, ಸುಧಾರಿಸುತ್ತಾ ಕೆಡಲು ಹಾಗೂ ಕೊನೆಗೆ ಕೆಟ್ಟು ಕಿಲುಸಾರೆದ್ದು ಹೋಗಲು ಅರವತ್ತು ವರ್ಷಗಳು ಬೇಕಾದವು. ಈ ಬಿಜೆಪಿಯವರ ತಾಕತ್ತು ನೋಡಿ. ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಬರೋಬ್ಬರಿ ಇಪ್ಪತ್ತು ತಿಂಗಳಲ್ಲಿ ರಿಪೇರಿಯಾಗದಷ್ಟು ಕೆಟ್ಟುಹೋಗಿದ್ದಾರೆ. ಇಲ್ಲದಿದ್ದರೆ ಅವರು ತಮ್ಮ ಪಕ್ಷದ ಮೌಲ್ಯ, ತತ್ತ್ವಗಳನ್ನು ಈಗಿಟ್ಟಂತೆ ಹರಾಜಿಗಿಡುತ್ತಿರಲಿಲ್ಲ.
ಯಾವ ರೀತಿಯಿಂದ ಇಂದು ಬಿಜೆಪಿ ಕಾಂಗ್ರೆಸ್ಗಿಂತ ಭಿನ್ನವಾಗಿದೆ? ಕಾಂಗ್ರೆಸ್ಗಿಂತ ಬಿಜೆಪಿ ಹೇಗೆ ಉತ್ತಮ? ಯಾವ ದಿಕ್ಕಿನಿಂದ ನೋಡಿದರೂ ಬಿಜೆಪಿ ಕಾಂಗ್ರೆಸ್ ಥರವೇ ಕಾಣುವುದಿಲ್ಲವೇ? ನಮ್ಮದು party with a difference ಎಂದು ಬಿಜೆಪಿಗಳು ಹೇಗೆ ಹೇಳಿಕೊಳ್ಳುತ್ತಾರೆ? ಅಂದು ಬಿಜೆಪಿ ಕೆಸರಿನಲ್ಲಿದ್ದ ಕಮಲವಾಗಿತ್ತು. ಇಂದು ಕಮಲದೊಳಗೇ ಕೆಸರು ತುಂಬಿಕೊಂಡಿಲ್ಲವೇ? ಶಾಮಪ್ರಸಾದ್ ಮುಖರ್ಜಿ, ಪಂಡಿತ ದೀನ್ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥರಾವ್ ಜೋಶಿಯಂಥ ಮಹಾನ್ ನಾಯಕರು ಇಂಥ ಬಿಜೆಪಿ ಕಟ್ಟಬೇಕೆಂದು ಕನಸು ಕಂಡಿದ್ದರಾ? ಇಲ್ಲ ಅಂತಾದರೆ ಬಿಜೆಪಿಯ ಈ ನಾಯಕರು ತಮ್ಮ ಪಕ್ಷದ ಮಹನೀಯರಿಗೆ ದೋಖಾ ಬಗೆದಂತೆ ಆಗಲಿಲ್ಲವಾ? ಒಮ್ಮೆ ಅಧಿಕಾರಕ್ಕೆ ಬಂದರೆ ಗುರುತು ಪರಿಚಯ ಸಿಗದಂತೆ ಕೆಟ್ಟು ಹೋಗೋದಾ?
ಮತದಾರನ ಮುಂದೆ ಆಯ್ಕೆಯೇ ಇಲ್ಲದಂತಾಗಿದೆ. ಯಾರನ್ನ ಅಂತ ಆರಿಸೋದು? ಕಡಿಮೆ ದುಷ್ಟನಿಗೆ (lesser evil) ಕೊಡುವ ಮತವೂ ದುಷ್ಟತನಕ್ಕೆ ನೀಡುವ ಮತವೇ ಹೊರತು ಅದು ಒಳ್ಳೆಯದಾಗುವುದಕ್ಕೆ ಹೇಗೆ ಸಾಧ್ಯ? ದುಡ್ಡು ಕೊಟ್ಟು ಟಿಕೆಟ್ ಖರೀದಿಸಿದವನಿಗೆ ನೀಡುವ ಮತ ಭ್ರಷ್ಟಾಚಾರಕ್ಕೆ ಕೊಡುವ ಮತವೇ ಅಲ್ಲವೇ? ಅಲ್ಲದೇ ಅವನಿಗೆ ಭ್ರಷ್ಟ ಕಾರ್ಯ ಮುಂದುವರಿಸಲು ಪರವಾನಗಿ ಕೊಡುವ ಮತವಾಗುವುದಿಲ್ಲವೇ? ಹಾಗಂತ ವೋಟು ಹಾಕದೇ ಇರುವಂತಿಲ್ಲ. ಇನ್ನು ಒಬ್ಬ ಒಳ್ಳೆಯ ಅಭ್ಯರ್ಥಿಯೂ ಇಲ್ಲವೇ ಇಲ್ಲ ಅಂತಲ್ಲ, ಇದ್ದಾರೆ. ಆದರೆ ಅಂಥವರನ್ನು ನೋಡಿದರೆ ನೀರೇ ಇಲ್ಲದೆಡೆ ಕಟ್ಟಿದ ಅಣೆಕಟ್ಟಿನಂತೆ ಕಾಣುತ್ತಾರೆ. ಏನು ಪ್ರಯೋಜನ? ನಮ್ಮ ನಾಯಕರು ಹೇಗೆ ಜನರನ್ನೆಲ್ಲ ಅಸಹಾಯಕರನ್ನಾಗಿ ಮಾಡಿದ್ದಾರೆ? ಅದಕ್ಕೇ ಕೇಳಿದ್ದು- ಈ ರಾಜಕಾರಣವೇ ಹಾಗೋ ಅಥವಾ ಈ ರಾಜಕಾರಣಿಗಳೇ ಹೀಗೋ?
ಅಡಾಲ್ಫ್ ಹಿಟ್ಲರ್ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾನೆ- ಈ ಜಗತ್ತಿನ ಸಕಲ ಜೀವಾತ್ಮಗಳನ್ನೂ ನಾಶಮಾಡುವ ಶಕ್ತಿಯಿದ್ದರೆ ಅದು ರಾಜಕಾರಣಿಗಳಿಗೆ. ಶತ್ರುಗಳನ್ನು ನಿರ್ಮಿಸಿಕೊಳ್ಳದೇ ನೀವು ಮಹಾನ್ ರಾಜಕಾರಣಿಯಾಗುವುದು ಸಾಧ್ಯವಿಲ್ಲ. ಒಂದು ವೇಳೆ ಶತ್ರುಗಳೇ ಇಲ್ಲದಿದ್ದರೆ ತಕ್ಷಣಕ್ಕೆ ಸೃಷ್ಟಿಸಿಕೊಳ್ಳಿ. ದೇಶ ಅಪಾಯದಲ್ಲಿದೆಯೆಂಬ ಭ್ರಮೆ ಮೂಡಿಸಿ. ಯಾಕೆಂದರೆ ಜನ ಜೀವಭಯದಲ್ಲಿದ್ದರೆ ಏನು ಹೇಳಿದರೂ ಮಾಡಲು ಸಿದ್ಧರಾಗುತ್ತಾರೆ. ಗುಲಾಮತನ ಒಪ್ಪಿಕೊಳ್ಳುತ್ತಾರೆ. ಆಗ ಅವರು ರಾಜಕಾರಣಿಗಳನ್ನು ತಮ್ಮ ನಾಯಕರೆಂದು ಸ್ವೀಕರಿಸುತ್ತಾರೆ, ಅವರನ್ನು ಅನುಸರಿಸುತ್ತಾರೆ". ಹಿಟ್ಲರ್ ಹುಚ್ಚನಿದ್ದಿರಬಹುದು, ಸರ್ವಾಧಿಕಾರಿಯಿದ್ದಿರಬಹುದು. ಆದರೆ ಆತನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ- "The greatest leaders of humanity are born in times of war and elections." ಅಂದರೆ ಚುನಾವಣೆ ಅಥವಾ ಯುದ್ಧವಿಲ್ಲದೇ ನೀವು ಮಹಾನ್ ನಾಯಕರಾಗುವುದು ಸಾಧ್ಯವೇ ಇಲ್ಲ. ಯುದ್ಧದಲ್ಲಿ ನಾಯಕರಾಗಬೇಕೆಂದರೆ ಸಾವಿರಾರು ಜನರನ್ನು ಕೊಲ್ಲಬೇಕು. ಚುನಾವಣೆಯಲ್ಲಿ ನಾಯಕರಾಗಲು ಮೋಸ, ವಂಚನೆ, ಹಾಕಾಪತಿ, ಭ್ರಷ್ಟಾಚಾರವೆಸಗಬೇಕು. ಶಾಂತಿ ಕಾಲದಲ್ಲಿ ಯಾವ ನಾಯಕನೂ ಹುಟ್ಟುವುದಿಲ್ಲ. (ಡಾ. ಮನಮೋಹನ್ಸಿಂಗ್ ಥರದವರಿರುತ್ತಾರೆ ಅಷ್ಟೇ).
ರಾಜಕಾರಣಿಗಳ ಮನಸ್ಸು ಸದಾ restless ಆಗಿ ಕೆಲಸ ಮಾಡುತ್ತಿರುತ್ತದೆ. ಇಲ್ಲಿ ಇದನ್ನು ದೇವೇಗೌಡರ ಮನಸ್ಸು ಎಂದು ಓದಿಕೊಂಡರೆ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ. ಅಧಿಕಾರವೆಂಬುದು ಬೇರೆ ಯಾರಿಗೂ ಕೊಡುವುದಕ್ಕೆ, ಬಿಟ್ಟುಕೊಡುವುದಕ್ಕೆ ಇರುವುದಲ್ಲ. ಅದನ್ನು ತಾನೊಬ್ಬನೇ ಅನುಭವಿಸಬೇಕು ಇಲ್ಲವೇ ತನ್ನ ಮಕ್ಕಳು ಅನುಭವಿಸಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಅದನ್ನು ಕೊಡಲೇಬಾರದು. ಅದಕ್ಕಾಗಿ ದೇವೇಗೌಡರು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡಲಿಲ್ಲ. ಕೊಟ್ಟ ಮಾತು, ವಚನಭ್ರಷ್ಟತೆ, ಮಿತ್ರದ್ರೋಹ, ರಾಜಧರ್ಮ... ಈ ಯಾವ ಸಂಗತಿಗಳೂ ಅವರನ್ನು ಬಾಧಿಸಲಿಲ್ಲ. ಜನ ತನ್ನನ್ನು ಏನೆಂದು ಬೇಕಾದರೂ ಕರೆಯಲಿ ಅದಕ್ಕೆ ಗೌಡರು ಕ್ಯಾರೇ ಎನ್ನಲಿಲ್ಲ.
ಗೌಡರದು ಔರಂಗಜೇಬ್ ನೀತಿ. ಔರಂಗಜೇಬ್ ಗೌಡರಿಗಿಂತ ಒಂದು ಹಿಡಿ ಜಾಸ್ತಿ. ಆತ ಅಪ್ಪ ಸಾಯುವುದಕ್ಕೂ ಕಾಯಲಿಲ್ಲ. ಷಹಜಹಾನ್ ಸಾಯುವುದಕ್ಕೆ ಮೊದಲೇ, ಗಟ್ಟಿಮುಟ್ಟಾಗಿದ್ದಾಗಲೇ ಅವನನ್ನು ಸಿಂಹಾಸನದಿಂದ ಇಳಿಸಿದ ಔರಂಗಜೇಬ್, ತಾನೇ ಅಲ್ಲಿ ಕುಳಿತ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಔರಂಗಜೇಬ್ ಷಹಜಹಾನ್ನನ್ನು ಬಂಧಿಸಿ ಸೆರೆಮನೆಗೆ ನೂಕಿದ. ಅಧಿಕಾರದ ರಾಜಕಾರಣ ಅವನಿಂದ ಹಾಗೆ ಮಾಡಿಸಿತ್ತು. ಸೆರೆಮನೆಯಲ್ಲಿ ಷಹಜಹಾನ್ ಕ್ರಿಯಾಶೀಲನಾಗಿರಲು ಬಯಸಿದ. ಆದರೆ ಔರಂಗಜೇಬ್ ಅಲ್ಲೂ ಅವನ ಕೈಕಾಲು ಕಟ್ಟಿ ಹಾಕಿದ್ದ. ಈ ಯಾತನೆ ತಾಳಲಾರದೇ ಷಹಜಹಾನ್ ಮಗನಿಗೆ ಸಂದೇಶ ಕಳಿಸಿದ- ಜೈಲಿನಲ್ಲಿ ನನ್ನ ಬಳಿ ಮೂವತ್ತು ಮಕ್ಕಳನ್ನು ಕಳಿಸು. ನಾನು ಅವರಿಗೆಲ್ಲ ಪವಿತ್ರ ಕುರಾನ್ ಓದಿ ಹೇಳುತ್ತೇನೆ. ಕುರಾನ್ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತೇನೆ."
ತಂದೆಯ ಮಾತು ಕೇಳಿ, ಔರಂಗಜೇಬ್ ಯೋಚಿಸಿದ್ದೇ ಬೇರೆ. ಆತ ತನ್ನ ಮಂತ್ರಿಗಳನ್ನು ಕರೆದು ಹೇಳಿದ- ಆ ಮುದಿಯ ಇದ್ದಾನಲ್ಲ, ಅವನಿಗೆ ಅಧಿಕಾರ ಅಂದ್ರೆ ಅದೆಂಥ ಆಸೆ? ಈಗ ಅವನಿಗೆ ತಾನು ಮಹಾರಾಜ ಅಲ್ಲ ಎಂಬುದು ಗೊತ್ತು. ಆದರೂ ಕುರಾನ್ ಓದಿ ಹೇಳುವ ನೆಪದಲ್ಲಿ ಆ ಮೂವತ್ತು ಮಕ್ಕಳ ಮೇಲೆ ತನ್ನ ಹಿಡಿತ ಸಾಧಿಸಲು ಯೋಚಿಸುತ್ತಿದ್ದಾನೆ. ಅಂದರೆ ಆ ಮೂವತ್ತೂ ಜನ ಅವನ ಅಧೀನಕ್ಕೊಳಗಾದಂತಾಗುತ್ತದೆ. ಸಾಧ್ಯವೇ ಇಲ್ಲ, ಆ ಮುದಿಗೂಬೆ ಹಾಗೇ ಬಿದ್ದಿರಲಿ." ಅಬ್ಬಾ! ಅದೆಂಥ ದೂ(ದು)ರಾಲೋಚನೆ? ಜೈಲಿನಲ್ಲಿದ್ದಾಗ ಷಹಜಹಾನ್ ಕೂಗಿ ಕರೆದರೂ ಯಾರೊಬ್ಬರೂ ಬರುತ್ತಿರಲಿಲ್ಲ. ಔರಂಗಜೇಬ್ ಅಷ್ಟರಮಟ್ಟಿಗೆ ತಂದೆಯ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡಿದ್ದ. ಚುನಾವಣೆಗೆ ಸಿದ್ಧವಾಗಿ ನಿಂತ ಎಲ್ಲ ನಾಯಕರ ಮನಸ್ಸು ಹೆಚ್ಚೂಕಮ್ಮಿ ಇದೇ ರೀತಿ ಯೋಚಿಸುತ್ತಿರುತ್ತದೆ. ಅದಕ್ಕಾಗಿ ಅಸಹ್ಯವಾಗಿ ಹೊಡೆದಾಡುತ್ತಾರೆ. ಇನ್ನಿಲ್ಲದ ಕುತಂತ್ರ ಮಾಡುತ್ತಾರೆ. ಶತ್ರುವಿನ ಜತೆ ಹೋರಾಡುತ್ತಾ ಅವನ ಬಗಲಿಗಿದ್ದವನ ಜತೆಯೇ ಸ್ನೇಹ ಕುದುರಿಸಿರುತ್ತಾರೆ. ಪಕ್ಕದಲ್ಲಿದ್ದವನನ್ನೇ ತಳ್ಳಿ ಅವನ ದೇಹವನ್ನೇ ಸಂಕ(ಸೇತುವೆ)ವಾಗಿಸಿ ನಡೆದು ಹೋಗುತ್ತಾರೆ. ಏನೇ ಆಗಲಿ, ಅಧಿಕಾರ ತನ್ನ ಕೈತಪ್ಪಿ ಹೋಗಬಾರದೆನ್ನುವ ಯೋಚನೆ ಅವರನ್ನು ನಿದ್ದೆಗೂ ಬಿಡುವುದಿಲ್ಲ.
ಕರ್ನಾಟಕದಲ್ಲಿ ಯಾಕೆ ಎಂದೂ ಇಲ್ಲದ, ಹೇಸಿಗೆ ಹುಟ್ಟಿಸುವಂಥ ಚುನಾವಣಾ ವಿದ್ಯಮಾನಗಳು ಘಟಿಸುತ್ತಿವೆಯೆಂದರೆ ಮೂರೂ ಪಕ್ಷಗಳೂ ಅಧಿಕಾರದ ರುಚಿ, ಮಜಾ ಅನುಭವಿಸಿವೆ. ಇಲ್ಲಿ ತನಕ ಅಧಿಕಾರದ ತಾಟಿನ ಬಳಿ ಎಂಜಲು ಸುರಿಸುತ್ತಿದ್ದ ಬಿಜೆಪಿಯೂ ಉಂಡು ಢರ್' ಎಂದು ತೇಗಿ ಮೇಲೆದ್ದಿದೆ. ಅಧಿಕಾರ ಅಂದ್ರೆ ಏನೂಂತ ಗೊತ್ತಾಗಿದೆ. ಹೀಗಾಗಿ ಬೇರೆಯವರಿಗೆ ಅಧಿಕಾರ ಹೋಗುವುದನ್ನು ಸಹಿಸುವುದಾದರೂ ಹೇಗೆ? ಔರಂಗಜೇಬ್' ಸುಮ್ಮನಿರಬೇಕಲ್ಲ? ಎಲ್ಲ ಪಕ್ಷಗಳಲ್ಲೂ ಎಂದೂ ಇರದ ಟಿಕೆಟ್ ಮಾರಾಟ, ಬಂಡಾಯ, ಗುದ್ದಾಟಗಳಿಗೆ ಇವೇ ಕಾರಣ. ಅಧಿಕಾರದ ಪ್ರಶ್ನೆ ಬಂದರೆ ತಾವು ಎಂಥ ರಾಜಿಗೂ ಸಿದ್ಧ ಎಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರ ನಡೆ ನುಡಿ ಗಮನಿಸಿದರೆ ಅರ್ಥವಾದೀತು. ಹೀಗಾಗಿ ಯಾರೇ ಬರಲಿ ಉದಯರಂಗ ಬಸ್ಸಿನಲ್ಲಿ ತುಂಬಿಸಿಕೊಳ್ಳುವಂತೆ ತುಂಬಿಸಿಕೊಳ್ಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ರಾಜಕಾರಣದ ಸಲಿಂಗಕಾಮ! ಇಲ್ಲಿ ಯಾರೇ ಬಂದರೂ ಸಂಬಂಧ ಕುದುರುತ್ತದೆ. ಯಾರು ಯಾರನ್ನಾದರೂ ತಬ್ಬಿಕೊಳ್ಳಬಹುದು, ಬಿಡಬಹುದು, ಪುನಃ ಬಂದು ಅಪ್ಪಿಕೊಳ್ಳಬಹುದು. ಒಲೆಹೊತ್ತಿ ಉರಿದರೆ ಆರಿಸಬಹುದು. ಆದರೆ ನೆಲವೇ ಹೊತ್ತಿ ಉರಿದರೆ ಏನು ಮಾಡೋಣ ಹೇಳಿ?
(ಸ್ನೇಹಸೇತು : ವಿಜಯ ಕರ್ನಾಟಕ)


Click it and Unblock the Notifications
