ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಲಿಂಟನ್ ಪುಸ್ತಕವನ್ನು ದೇವೇಗೌಡ ಓದಿದರೆ ಒಳ್ಳೆಯದು!

By Staff
|
Google Oneindia Kannada News

ನಮ್ಮ ದೇಶದಲ್ಲಿ ಒಬ್ಬನೇ ಒಬ್ಬ ನಾಯಕ, ರಾಜಕಾರಣಿ ಕ್ಲಿಂಟನ್ ರೀತಿ ಯೋಚಿಸಿದ್ದರೆ, ಈ ರಾಷ್ಟ್ರ ಹೀಗಿರುತ್ತಿರಲಿಲ್ಲ. ನಮ್ಮ ದೇವೇಗೌಡರಿಗೆ ಈ ಪುಸ್ತಕ ಓದಲು ಪುರುಸೊತ್ತು ಸಿಕ್ಕಿದ್ದರೆ ಎಷ್ಟು ಒಳ್ಳೆಯದಿತ್ತು, ರಾಜ್ಯಕ್ಕೆಷ್ಟು ಉಪಕಾರವಾಗುತ್ತಿತ್ತು.

  • ವಿಶ್ವೇಶ್ವರಭಟ್

Courtesy : www.jswamy.com ನಮ್ಮ ರಾಜಕೀಯ ಜೀವನ ಕೆಟ್ಟು ಕಿಲುಸಾರೆದ್ದು ಹೋಗಿದೆ!

ಯಾರೂ ಯಾರನ್ನೂ ನಂಬದಂಥ ಭಯಂಕರ ಅಸಹ್ಯ ವಾತಾವರಣ ಎಲ್ಲೆಡೆ ಆವರಿಸಿದೆ. ರಾಜಕಾರಣಿಗಳ ಬಗ್ಗೆ ಎಲ್ಲಿಲ್ಲದ ಜಿಗುಪ್ಸೆ, ಅಸಹನೆ. ಯಾವ ನಾಯಕ ಸಹ ನಮ್ಮಲ್ಲಿ ಒಂದಿನಿತೂ ಆಶಾಭಾವನೆ ಮೂಡಿಸುತ್ತಿಲ್ಲ. ಎಲ್ಲರೂ ಮಹಾಧೂರ್ತರಂತೆ, ಹೊಂಚು ಹಾಕಿ ಕುಳಿತ ಸಂಚುಗಾರರಂತೆ ಗೋಚರಿಸುತ್ತಿದ್ದಾರೆ. ನಮ್ಮ ಮುಂದಿರುವ ಎಲ್ಲ ನಾಯಕರ ಮುಖ, ನಡೆ, ಮಾತು, ಹಾವಭಾವಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾ ಹೋಗಿ, ಯಾರಲ್ಲೂ ನಮ್ಮ ಭರವಸೆ, ನಂಬಿಕೆಗಳನ್ನು ಗಂಟು ಕಟ್ಟಿ ಠೇವು ಇಡಬಹುದೆನ್ನುವ ವಿಶ್ವಾಸ ಕಾಣುತ್ತಿಲ್ಲ. ಪಕ್ಕಾ ಸಮಯಸಾಧಕರು.

ಅರ್ಥವಾಗುವುದಿಲ್ಲ, ಯಾಕೆ ನಮ್ಮ ರಾಜಕಾರಣಿಗಳು ಹೀಗೆ? ಪದೇ ಪದೆ ತಮ್ಮ ಮಟ್ಟವನ್ನು ಕೆಳಕ್ಕೆಳೆದುಕೊಳ್ಳುತ್ತಾರೆ? ಜನಸಾಮಾನ್ಯನ ಕಣ್ಣಲ್ಲಿ ಸಣ್ಣವರಾಗುತ್ತಾರೆ? ಸಾರ್ವಜನಿಕ ಜೀವನದಲ್ಲಿ ಸ್ಥಾಪಿತ ಮೌಲ್ಯಗಳನ್ನು ಗಾಳಿಗೆಸೆಯುತ್ತಾರೆ? ರಾಜಕೀಯ ಅಂದ್ರೆ ಬೇರೆಯವರಿಗೆ ಮೋಸ ಮಾಡುವುದು ಅಂತ ಭಾವಿಸುತ್ತಾರೆ? ರಾಜಕೀಯದ ಮುಂದೆ ಅಭಿವೃದ್ಧಿಯನ್ನು ಕಡೆಗಣಿಸುತ್ತಾರೆ? ರಾಜಕೀಯವನ್ನೇಕೆ ತಮ್ಮ (ಕುಲ)ಕಸುಬಾಗಿ ಮಾಡಿಕೊಳ್ಳುತ್ತಾರೆ? ನಾಯಕರಾಗಿ ಮೇಲ್ಪಂಕ್ತಿಯನ್ನೇಕೆ ಹಾಕಿಕೊಡುವುದಿಲ್ಲ?

ದಯವಿಟ್ಟು ಹೇಳಿ, ಕರ್ನಾಟಕದ ಯಾವ ರಾಜಕಾರಣಿ ನಮ್ಮ ಯುವ ಪೀಳಿಗೆಗೆ ಆದರ್ಶವಾಗಿದ್ದಾರೆ? ನಾಯಕನಲ್ಲಿರುವ ಈ ಗುಣ ಅನುಕರಣೀಯ ಎಂದು ಹೇಳುವಂಥ ನಾಯಕರಾದರೂ ಯಾರಿದ್ದಾರೆ, ಅವರ ಗುಣವಾದರೂ ಯಾವುದಿದೆ? ಇವರಂತೆ ಆಗಬೇಡ, ಅವರಂತೆ ಆಗಬೇಡ ಎಂದು ಹೇಳಲು ಅನೇಕರು ಉದಾಹರಣೆಯಾಗಿ ಸಿಗುತ್ತಾರೆ. ದುರಂತವೆಂದರೆ ಇವರನ್ನು ನಮ್ಮ ನಾಯಕರಲ್ಲ ಎಂದು ಹೇಳಲು ಆಗದಂಥ ಸ್ಥಿತಿ, ಹಾಗಂತ ಒಪ್ಪಿಕೊಳ್ಳಲು ಸಹ. ರಾಜಕಾರಣಿಗಳನ್ನು ಎಷ್ಟೇ ಟೀಕಿಸಿ, ಅವಮಾನ ಮಾಡಿ, ಮರ್ಯಾದೆ ಕಳೆಯಿರಿ, ಮುಖಕ್ಕೆ ಹೊಡೆದಂತೆ ಬಿಸಿ ಮುಟ್ಟಿಸಿ, ಅವರಿಗೆ ಏನೂ ಆಗುವುದಿಲ್ಲ. ಪೂರ್ತಿ ಮಾನ, ಮರ್ಯಾದೆ, ನಾಚಿಕೆ ಬಿಟ್ಟು ಗುಂಡುಕಲ್ಲಿನಂತೆ ನಿಂತವನಿಗೆ ಏನು ಮಾಡಿ, ಏನು ಹೇಳಿ, ಏನೂ ಆಗುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ನಂಬಿಕೆ, ವಿಶ್ವಾಸ ಎಷ್ಟು ಮುಖ್ಯವೆಂಬುದನ್ನು ನಾವೆಲ್ಲ ಅರಿಯಬೇಕು, ಯಾಕೆಂದರೆ ಅದೇ ಹೊರಟುಹೋದರೆ ಯಾವುದಕ್ಕೂ ಕಿಮ್ಮತ್ತಿಲ್ಲ.

ಇಂಥ ಕ್ಷುದ್ರ ರಾಜಕೀಯ ಸನ್ನಿವೇಶದಲ್ಲಿ, ಉತ್ಸಾಹವೆಲ್ಲ ಉಡುಗಿ ಹೋಗಿ ಉರಿಮನಸು ಊದಿಕೊಂಡು ಕುಳಿತ ಆ ಸಮಯದಲ್ಲಿ ಸಿಕ್ಕಿದ್ದು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಇತ್ತೀಚೆಗೆ ಬರೆದ ಪುಸ್ತಕ; 'Giving: How each of us can change the world'. ಪುಸ್ತಕ ಓದಿ ಮುಗಿಸುತ್ತಿದ್ದಾಗ ಕ್ಲಿಂಟನ್ ಬಗ್ಗೆ ಅತೀವ ಹೆಮ್ಮೆ, ಅಭಿಮಾನ ಮೂಡಿತು. ನಮ್ಮ ದೇಶದಲ್ಲಿ ಒಬ್ಬನೇ ಒಬ್ಬ ನಾಯಕ, ರಾಜಕಾರಣಿ ಕ್ಲಿಂಟನ್ ರೀತಿ ಯೋಚಿಸಿದ್ದರೆ, ಈ ರಾಷ್ಟ್ರ ಹೀಗಿರುತ್ತಿರಲಿಲ್ಲ. ನಮ್ಮ ದೇವೇಗೌಡರಿಗೆ ಈ ಪುಸ್ತಕ ಓದಲು ಪುರುಸೊತ್ತು ಸಿಕ್ಕಿದ್ದರೆ ಎಷ್ಟು ಒಳ್ಳೆಯದಿತ್ತು, ರಾಜ್ಯಕ್ಕೆಷ್ಟು ಉಪಕಾರವಾಗುತ್ತಿತ್ತು.

ನಿಮಗೆ ಗೊತ್ತು, ಬಿಲ್ ಕ್ಲಿಂಟನ್ ಎರಡು ಅವಧಿಗೆ (1993-2001) ಅಮೆರಿಕದ ಅಧ್ಯಕ್ಷನಾಗಿದ್ದವ. ರೂಸ್‌ವೆಲ್ಟ್ ಹಾಗೂ ಕೆನಡಿ ನಂತರ ಅಧ್ಯಕ್ಷಪಟ್ಟಕ್ಕೇರಿದ ಅತಿ ಕಿರಿಯ. ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುವಂಥ ಶಾಂತಿಪ್ರೇರಕ ಆಡಳಿತ ಕೊಟ್ಟು ಒಳ್ಳೆಯ ಅಧ್ಯಕ್ಷನೆನಿಸಿಕೊಂಡ ಕ್ಲಿಂಟನ್, ಕೊನೆಗೆ ಲೈಂಗಿಕ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ವಿವಾದಕ್ಕೊಳಗಾಗಿದ್ದು ವಿಪರ್ಯಾಸ. ಅಧ್ಯಕ್ಷ ಸ್ಥಾನದಿಂದ ಇಳಿದ ಬಳಿಕ ಕ್ಲಿಂಟನ್ ಒಣ ರಾಜಕೀಯ ಮಾಡಿಕೊಂಡು ಕಾಲಕಳೆಯಲಿಲ್ಲ. ರಾಜಕಾರಣವನ್ನು ಮೀರಿದ ಬದುಕಿದೆ, ಅಧಿಕಾರದ ಹೊರತಾಗಿಯೂ ಉತ್ತಮ ಕೆಲಸ ಮಾಡಲು ಸಾಕಷ್ಟು ಮಾರ್ಗಗಳಿವೆ, ತಾನು ಮಾಡುವ ಕಾರ್ಯಗಳಿಂದ ಸುತ್ತಲಿನ ಸಮಾಜವನ್ನು ಸುಧಾರಿಸಬಹುದು ಎಂದು ಯೋಚಿಸಿದ ಕ್ಲಿಂಟನ್, ತನ್ನ ಹೆಸರಿನಲ್ಲಿ (ಕ್ಲಿಂಟನ್ ಫೌಂಡೇಶನ್) ಒಂದು ಪ್ರತಿಷ್ಠಾನ ಸ್ಥಾಪಿಸಿದ.

ಅಧ್ಯಕ್ಷ ಪದವಿ ಮುಗಿಸಿ ಅಧಿಕಾರದಿಂದ ಕೆಳಗಿಳಿದಾಗ ತನ್ನ ಮನಸ್ಸಿನಲ್ಲಿ ಸುಳಿದ ವಿಚಾರವನ್ನು ಕ್ಲಿಂಟನ್ ಹೀಗೆ ತೆರೆದಿಟ್ಟಿದ್ದಾನೆ- “ಶ್ವೇತಭವನದಿಂದ ಹೊರಬಿದ್ದಾಗ, ನಾವು ಬದುಕುವ ಪರಿಸರವನ್ನು ಉತ್ತಮಪಡಿಸುವುದಕ್ಕಾಗಿ ನನ್ನ ಸಮಯ, ಹಣ, ಕೌಶಲ, ಪರಿಣತಿಯನ್ನು ಮೀಸಲಿಡಲು ನಿರ್ಧರಿಸಿದೆ. ಕ್ಲಿಷ್ಟ ಸಮಸ್ಯೆ ನಿವಾರಣೆಗೆ, ರೋಗರುಜಿನಗಳಿಂದ ಬಳಲುತ್ತಿರುವವರಿಗೆ ಆಸರೆಯಾಗಲು, ಯುವಕರ ಕನಸನ್ನು ನಿಜವಾಗಿಸಲು ಕೈಲಾದಮಟ್ಟಿಗೆ ಸಹಕರಿಸಲು ತೀರ್ಮಾನಿಸಿದೆ. ಇದು ನನ್ನ ಜವಾಬ್ದಾರಿಯೆಂದು ನನಗನಿಸಿತು. ಯಾಕೆಂದರೆ ರಾಜಕಾರಣ ನನ್ನ ಅನೇಕ ವರ್ಷಗಳನ್ನು ತಿಂದುಹಾಕಿತ್ತು. ನನ್ನ ಹೆಂಡತಿ, ಮಗಳೊಂದಿಗೆ ನಾನು ಹಾಯಾಗಿರಬಹುದಿತ್ತು. ದೇಶ ಸುತ್ತಿಕೊಂಡು, ಔತಣಕೂಟಗಳಲ್ಲಿ ರಾತ್ರಿಗಳನ್ನು ಕಳೆಯುತ್ತಾ ನೆಮ್ಮದಿಯಾಗಿರಬಹುದಿತ್ತು. ಸುತ್ತಲಿನ ಪರಿಸರ ದುಃಖತಪ್ತವಾಗಿರುವಾಗ ನಾನೊಬ್ಬನೇ ನೆಮ್ಮದಿಯಿಂದ ಇರುವುದು ಹೇಗೆ?

ಹೀಗಾಗಿ ನನ್ನ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಡಲು ನಿರ್ಧರಿಸಿದೆ. ಅಶಕ್ತರ, ರೋಗಪೀಡಿತರ, ನಿಂದಿತರ ಬದುಕಿಗೆ ಹುಲ್ಲುಕಡ್ಡಿ ಆಗಲು ಬಯಸಿದೆ. ಈ ಜಗತ್ತು ನಿಂತಿರುವುದೇ ಕೊಡುವುದರಿಂದ. ನಾವು ಬೇರೆಯವರಿಗೆ ಕೊಡದೇ ಏನನ್ನೂ ಗಳಿಸಲು ಸಾಧ್ಯವಿಲ್ಲ. ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದರು- "Everyone can be great because everyone can serve. ಬಿಲ್‌ಗೇಟ್ಸ್‌ನಿಂದ ಹಿಡಿದು ಕ್ಯಾಲಿಫೋರ್ನಿಯಾ ಬೀಚನ್ನು ಸ್ವಚ್ಛಗೊಳಿಸಲು ಮುಂದಾದ ಆರು ವರ್ಷದ ಬಾಲಕಿ ಮೆಕೆಂಜಿ ಸ್ಟೇನರ್ ತನಕ ಈ ವಿಶ್ವದ ಸ್ವಾಸ್ಥ್ಯ ಕಾಪಾಡಲು ಹೆಣಗಿದವರೇ. ಪ್ರತಿಯೊಬ್ಬರೂ ಕೊಟ್ಟರೆ, ಈ ಪ್ರಪಂಚ ಬದಲಾಗದಿರುವುದೇ?"

ನ್ಯೂಯಾರ್ಕಿನ ದಂಪತಿಗಳು ಆಫ್ರಿಕಾಕ್ಕೆ ಮದುವೆಗೆಂದು ಹೋಗಿದ್ದರು. ಜಿಂಬಾಬ್ವೆಯಲ್ಲಿ ಅವರು ಕೆಲ ಶಾಲೆಗಳಿಗೆ ಭೇಟಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಅವರಿಗೆ ಶಾಲೆಗಳಲ್ಲಿ ಕಪ್ಪು ಹಲಗೆ, ಬಳಪ, ಪುಸ್ತಕಗಳು ಸಹ ಇಲ್ಲದಿರುವುದು ಕಂಡುಬಂದಿತು. ಅವರು ತಕ್ಷಣ ಸಂಘವೊಂದನ್ನು ಸ್ಥಾಪಿಸಿ ಪುಸ್ತಕಗಳಿಗಾಗಿ ಹಣ ಸಂಗ್ರಹಿಸಿದರು. ಮೂವತ್ತೈದು ಶಾಲೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ಯೋಜನೆ ಸಿದ್ಧಪಡಿಸಿ ಕಾರ್ಯಪ್ರವೃತ್ತರಾದರು. ಕೇವಲ ಮೂರು ವರ್ಷಗಳಲ್ಲಿ ಶಾಲೆಯಲ್ಲಿನ ವಿದ್ಯಾರ್ಥಿಗಳ ತೇರ್ಗಡೆ ಫಲಿತಾಂಶ ಶೇ. 5ರಿಂದ ಶೇ. 60ಕ್ಕೇರಿತು. ದಂಪತಿಗಳ ಆ ನಿರ್ಧಾರ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನೇ ಬದಲಿಸಿತು.

ಉಗಾಂಡದ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು ಅಲ್ಲಿನ ಹೆಂಗಸೊಬ್ಬಳಿಗೆ ಹನ್ನೆರಡು ಕುರಿಗಳನ್ನು ನೀಡಿದರು. ಆಕೆ ಕುರಿ ಹಾಲನ್ನು ಮಾರಾಟ ಮಾಡಿ ತನ್ನ ಮಕ್ಕಳನ್ನು ಶಾಲೆಗೆ ಕಳಿಸಲಾರಂಭಿಸಿದಳು. ಶಾಲೆ ಫೀಸು ಕಟ್ಟಲಾಗದ್ದರಿಂದ ಆಕೆಯ ಮಕ್ಕಳು ಮನೆಯಲ್ಲೇ ಉಳಿಯುವಂತಾಗಿತ್ತು. ಪ್ರತಿದಿನ ಹಾಲನ್ನು ಮಾರಿ, ಸಾಕಷ್ಟು ಸಂಪಾದಿಸಿ ತನ್ನೆಲ್ಲ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಳು. ಸ್ವಯಂಸೇವಾ ಸಂಸ್ಥೆಯ ಕರಾರಿನಂತೆ ಒಂದು ಕುರಿ ಹೆಣ್ಣು ಕುರಿಗೆ ಜನ್ಮ ನೀಡಿದಾಗ ಅದನ್ನು ಮತ್ತೊಂದು ಕುಟುಂಬಕ್ಕೆ ಉಚಿತವಾಗಿ ನೀಡಬೇಕು. ಇದರಿಂದ ಬೇರೆ ಕುಟುಂಬವೂ ಇದರ ಲಾಭ ಪಡೆಯಬೇಕು. ಮೂರು ವರ್ಷಗಳಲ್ಲಿ ಇಡೀ ಗ್ರಾಮದ ಚಿತ್ರಣವೇ ಬದಲಾಯಿತು. ಹನ್ನೆರಡು ಕುರಿಗಳಿಂದ ಇಡೀ ಊರಿನ ಜನರೆಲ್ಲ ವಿದ್ಯಾವಂತರಾದರು!

ಈ ಪುಸ್ತಕದಲ್ಲಿ ಕ್ಲಿಂಟನ್, ಓಸಿಯೋಲಾ ಮೆಕ್‌ಕಾರ್ಟಿ ಎಂಬ ಹೆಣ್ಣುಮಗಳ ಕತೆಯೊಂದನ್ನು ಹೇಳುತ್ತಾರೆ. ಓಸಿಯೋಲಾ ಮಿಸ್ಸಿಸಿಪ್ಪಿಯ ಪುಟ್ಟ ಊರಿನವಳು. ಅವಳ ಮುಖ್ಯ ಉದ್ಯೋಗ ಬಟ್ಟೆ ಒಗೆಯುವುದು ಹಾಗೂ ಇಸ್ತ್ರಿ ಮಾಡುವುದು. ಎಪ್ಪತ್ತೈದು ವರ್ಷಗಳ ಕಾಲ ಇದೇ ಕೆಲಸ ಮಾಡಿ ಜೀವನ ಸಾಗಿಸಿದವಳು. ಸಾಕಷ್ಟು ಹಣವನ್ನು ಉಳಿಸಿಟ್ಟರೂ, ಆಕೆ ಸ್ವಂತಕ್ಕೆ ಕಾರನ್ನು ಸಹ ಖರೀದಿಸಲಿಲ್ಲ. ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಿದ್ದಳು. ಮನಸ್ಸು ಮಾಡಿದ್ದರೆ ಆಕೆ ಮನೆ ಖರೀದಿಸಬಹುದಿತ್ತು. ಆದರೆ ಚಿಕ್ಕಪ್ಪನ ಮನೆಯಲ್ಲೇ ಉಳಿದಳು. ತಳ್ಳುಗಾಡಿಯಿಂದ ಎಲ್ಲೆಡೆ ಬಟ್ಟೆ ಸಂಗ್ರಹಿಸಿ, ಇಸ್ತ್ರಿ ಮಾಡಿ ತಲುಪಿಸುತ್ತಿದ್ದಳು. ಜೀವಿತದ ಕೊನೆಕಾಲದಲ್ಲಿ ಆಕೆ ಟ್ರಸ್ಟ್‌ವೊಂದನ್ನು ಸ್ಥಾಪಿಸಿ, ಮರಣಪತ್ರ ಬರೆದಿಟ್ಟಿದ್ದಳು - “ನಾನು ಇಲ್ಲಿಯವರೆಗೆ ದುಡಿದು ಉಳಿಸಿದ ಹಣದ ಪೈಕಿ ಒಂದೂವರೆ ಲಕ್ಷ ಡಾಲರ್ ಹಣವನ್ನು ಬಡ, ಅರ್ಹ ವಿದ್ಯಾರ್ಥಿಗ ಸ್ಕಾಲರ್ಶಿಪ್ ಗಾಗಿ ಸದರ್ನ್ ಮಿಸಿಸಿಪ್ಪಿ ವಿಶ್ವವಿದ್ಾಯನಿಲಯಕ್ಕೆ ದಾನವಾಗಿ ಕೊಡುತ್ತೇನೆ".

ಒಬ್ಬ ಸಾಮಾನ್ಯ ಹೆಂಗಸು, ಬಟ್ಟೆ ತೊಳೆದು ಜೀವನ ಸಾಗಿಸಿದ ಹೆಂಗಸು, ಮನೆ ಮನೆ ತಿರುಗಿ ಬಟ್ಟೆಗೆ ಇಸ್ತ್ರಿ ಮಾಡಿ ಹಣ ಸಂಗ್ರಹಿಸಿದ ಹೆಣ್ಣುಮಗಳು ಜೀವನವಿಡೀ ಕಷ್ಟಪಟ್ಟು ಬೆವರು ಸುರಿಸಿ ದುಡಿದಿದ್ದನ್ನೆಲ್ಲ ಗುಲಗಂಜಿಯಷ್ಟೂ ಅನುಭವಿಸದೇ ಎಲ್ಲವನ್ನೂ ಎತ್ತಿಕೊಟ್ಟಿದ್ದಳು! ಬಡ ವಿದ್ಯಾರ್ಥಿಗಳಿಗೆ ಅನುಕೂಲವಾದರೆ ತಾನು ದುಡಿದದ್ದು ಸಾರ್ಥಕ ಎಂದು ಭಾವಿಸಿದ್ದ ಓಸಿಯೋಲಾಗೆ ಅದೇ ವಿಶ್ವವಿದ್ಯಾಲಯ ಗೌರವ ಡಿಗ್ರಿ ನೀಡಿ ಸನ್ಮಾನಿಸಿತು. ದೋಬಿ ಹೆಂಗಸೊಬ್ಬಳು ಇಂಥ ಗೌರವಕ್ಕೆ ಪಾತ್ರವಾಗಿದ್ದು ಜಗತ್ತಿನಲ್ಲೇ ಮೊದಲು. ಅಧ್ಯಕ್ಷ ಬಿಲ್ ಕ್ಲಿಂಟನ್ ಅವಳಿಗೆ ಎರಡನೆ ಅತ್ಯುಚ್ಛ ನಾಗರಿಕ ಪ್ರಶಸ್ತಿ-ಪ್ರೆಸಿಡೆನ್ಷಿಯಲ್ ಸಿಟಿಜನ್ಸ್ ಮೆಡಲ್- ನೀಡಿ ಗೌರವಿಸಿದ. ಹಾರ್ವರ್ಡ್ ವಿಶ್ವವಿದ್ಯಾಲಯ ಅವಳಿಗೆ ಗೌರವ ಡಾಕ್ಟರೇಟ್ ನೀಡಿತು. ವಿಶ್ವಸಂಸ್ಥೆಯೂ ಆಕೆಯನ್ನು ಸನ್ನಾನಿಸಿತು. ಓಸಿಯೋಲಾಳ ಒಂದು ನಿರ್ಧಾರ ಇಡೀ ವಿಶ್ವದ ಜನರ ಮೈನವಿರೇಳಿಸಿತು.

ಇಂದು ಕ್ಲಿಂಟನ್ ತಮ್ಮ ಪ್ರತಿಷ್ಠಾನದ ಮೂಲಕ ಏಡ್ಸ್ ಕುರಿತು ಜಗತ್ತಿನಾದ್ಯಂತ ಜಾಗತಿ ಮೂಡಿಸುತ್ತಿದ್ದಾರೆ. ಏಡ್ಸ್‌ರೋಗಿಗಳಿಗೆ ನೆರವಾಗುತ್ತಿದ್ದಾರೆ. ಏಡ್ಸ್ ತಡೆ ಔಷಧ ತಯಾರಿಕೆಯಲ್ಲಿ ತೊಡಗಿರುವ ವಿಜ್ಞಾನಿಗಳನ್ನು ಮುಖಾಮುಖಿ ಮಾಡಿಸುತ್ತಿದ್ದಾರೆ. ಜಗತ್ತನ್ನು ಕಾಡುವ ಪ್ರಮುಖ ಸಮಸ್ಯೆ ನಿವಾರಣೆಗೆ ಕ್ಲಿಂಟನ್ ಗ್ಲೋಬಲ್ ಇನಿಶಿಯೇಟಿವ್ ಎಂಬ ಸಂಸ್ಥೆ ಹುಟ್ಟುಹಾಕಿ ಜಾಗತಿಕ ನಾಯಕರನ್ನು ಒಂದೆಡೆ ಸೇರಿಸುತ್ತಿದ್ದಾರೆ. ಜಾಗತಿಕ ತಾಪಮಾನ ಏರಿಕೆ ಕುರಿತು ಅರಿವು ಮೂಡಿಸಲು ಕ್ಲಿಂಟನ್ ಕ್ಲೈಮೇಟ್ ಇನಿಶಿಯೇಟಿವ್ ಸ್ಥಾಪಿಸಿದ್ದಾರೆ. ಈ ಎಲ್ಲ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕ್ಲಿಂಟನ್, ವಿಶ್ವವ್ಯಾಪಿ ಸಂಚರಿಸುತ್ತಾ ಸಮಾಜಮುಖಿ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಅಮೆರಿಕದ ಮತ್ತೊಬ್ಬ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಅಧಿಕಾರದಿಂದ ಕೆಳಗಿಳಿದ ಬಳಿಕ 27 ಪುಸ್ತಕಗಳನ್ನು ಬರೆದಿದ್ದಾರೆ. ವಿಶ್ವಶಾಂತಿ ಪ್ರಯತ್ನಕ್ಕಾಗಿ ನೊಬೆಲ್ ಶಾಂತಿ ಪುರಸ್ಕಾರಕ್ಕೂ ಪಾತ್ರರಾದ ಅವರು, ಕಾರ್ಟರ್ ಸೆಂಟರ್ ಮೂಲಕ ಇತಿಯೋಪಿಯಾದಲ್ಲಿ ಮೂರು ಲಕ್ಷ ನಲವತ್ತು ಸಾವಿರ ಕಕ್ಕಸುಗಳನ್ನು ಕಟ್ಟಿಸಿದ್ದಾರೆ.

ಸಮಾಜ ಸುಧಾರಿಸಲು ರಾಜಕಾರಣಕ್ಕಿಂತ ಮಿಗಿಲಾದ ಜೀವನವಿದೆಯೆಂಬುದು "ನಮ್ಮ" ರಾಜಕಾರಣಿಗಳಿಗೆ ಅರಿವಾಗುವುದು ಯಾವಾಗ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X