ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರೇ ಪುಣ್ಯವಂತರು ಜೊತೆಗೆ ಭಾಗ್ಯವಂತರು!

By ಅಂಕಣಕಾರ : ವಿಶ್ವೇಶ್ವರ ಭಟ್
|
Google Oneindia Kannada News

ಸಿಂಗಪುರ! ಅದೂ ಒಂದು ದೇಶವಾ? ಅಯ್ಯಪ್ಪ, ಐದು ದಿನ ಕಳೆಯುವುದರೊಳಗೆ ಸಾಕೋ ಸಾಕಾಗಿ ಹೋಯಿತು. ಯಾವಾಗ ವಾಪಸ್ ಬಂದು ಬೆಂಗಳೂರು ಸೇರುತ್ತೇನೋ ಎಂದೆನಿಸತೊಡಗಿತು. ಆ ಪರಿ ಚಡಪಡಿಕೆ. ಅಲ್ಲಿಗೆ ಹೋದಾಗ ನಮ್ಮ ಊರನ್ನು ಬಿಟ್ಟಿರುವುದು ಎಷ್ಟು ಕಷ್ಟವೆಂದು ಅನಿಸಿತು.

ಬೆಂಗಳೂರಿಗರೇ ಪುಣ್ಯವಂತರು ಜೊತೆಗೆ ಭಾಗ್ಯವಂತರು!ಕಳೆದ ವಾರ ಸಿಂಗಾಪುರ್‌ದಲ್ಲಿದ್ದೆ. ಅಲ್ಲಿನ ಸರಕಾರದ ಆಹ್ವಾನದ ಮೇರೆಗೆ ಐದು ದಿನ ಆ ದೇಶದಲ್ಲಿ ಸುತ್ತಾಡುವ ಅವಕಾಶ ಸಿಕ್ಕಿತ್ತು. ಸಿಂಗಾಪುರ್ ಅಂದ್ರೆ ಒಂದೇ ದಿನದಲ್ಲಿ ನೋಡಬಹುದಾದಷ್ಟು ಚಿಕ್ಕದಾಗಿರುವ ಒಂದು ದೊಡ್ಡ ನಗರ. ಆ ನಗರವನ್ನೇ ದೇಶ ಎಂದು ಕರೆಯಬಹುದು. ಯಾಕೆಂದರೆ ಸಿಂಗಾಪುರ್‌ದಲ್ಲಿ ಸಿಂಗಾಪುರ್ ಎಂಬ ರಾಜಧಾನಿ ಹಾಗೂ ಸಿಂಗಾಪುರ್ ಎಂಬ ನಗರವನ್ನು ಬಿಟ್ಟರೆ, ಬೇರೆ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿಗಳೇನೂ ಇಲ್ಲ. ಉದ್ದ ನಲವತ್ತೈದು ಕಿಮಿ. ಅಗಲ ಇಪ್ಪತ್ತೈದು ಕಿಮಿ ಕ್ರಮಿಸಿದರೆ ಇಡೀ ದೇಶವೇ ಮುಗಿದುಹೋಯಿತು. ಸಿಂಗಾಪುರ್ ಅತಿ ದೊಡ್ಡ ದ್ವೀಪವಾಗಿ ಅತಿ ಪುಟ್ಟ ದೇಶ ಎಂದು ಕರೆಸಿಕೊಳ್ಳುವ ಒಂದು ಬೃಹತ್ ಊರು!

ವಿಸ್ತೀರ್ಣದಲ್ಲಿ ಹೆಚ್ಚು ಕಮ್ಮಿ ಬೆಂಗಳೂರಿನಷ್ಟೇ, ಆದರೆ ಜನಸಂಖ್ಯೆಯಲ್ಲಿ ಬೆಂಗಳೂರಿಗಿಂತ ಕಡಿಮೆಯಿರುವ ಅತ್ಯಂತ ಆಧುನಿಕ ಡೈನಮಿಕ್ ಎಂದು ಕರೆಸಿಕೊಳ್ಳುವ ದೇಶ ಸಿಂಗಾಪುರ್. ಇದೇ ದೇಶವನ್ನು ನೋಡಿಯೇ ಅಲ್ಲವೇ ನಮ್ಮ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬೆಂಗಳೂರನ್ನು ಸಿಂಗಾಪುರ್ ಮಾಡುತ್ತೇನೆ ಎಂದು ಹೇಳಿದ್ದು. ಐದು ವರ್ಷದ ಕೊನೆಯಲ್ಲಿ ಅವರಿಗೆ ಇನ್ನು ಇಪ್ಪತ್ತೈದು ವರ್ಷವಾದರೂ ಬೆಂಗಳೂರನ್ನು ಸಿಂಗಾಪುರ್‌ದಂತೆ ಮಾಡಲು ಸಾಧ್ಯವಿಲ್ಲವೆಂದು ಅನಿಸಿದ್ದು ವಾಸ್ತವ. ಆದರೆ ಇನ್ನೊಂದು ಸಂಗತಿ ಸಾಧ್ಯವಿದೆ. ನಮ್ಮ ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ, ಧರ್ಮಸಿಂಗ್ ಮುಂತಾದವರಿಗೆ ಸಿಂಗಾಪುರ್‌ವನ್ನು ಕೊಡಿ, ಕೇವಲ ಒಂದು ವರ್ಷದೊಳಗೆ ಅದನ್ನು ಬೆಂಗಳೂರಿನ ಹಾಗೆ ಮಾಡದಿದ್ದರೆ ಕೇಳಿ. ಅದಿರಲಿ. ಸುಮ್ಮನೆ ವಿಷಯಾಂತರ ಮಾಡುವುದು ಬೇಡ.

ಸಿಂಗಾಪುರ್ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುವ economyಎಂದು ಕರೆಸಿಕೊಳ್ಳುತ್ತಿದೆ. ಸುಮಾರು ನಲವತ್ತೈದು ಲಕ್ಷ ಜನಸಂಖ್ಯೆಯಿರುವ ಆ ದೇಶದಲ್ಲಿ, ಈ ವರ್ಷದ ಮೊದಲಾರ್ಧದಲ್ಲಿ ಒಂದೂ ಕಾಲು ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿದೆ. ನಿರುದ್ಯೋಗ ಸಮಸ್ಯೆ (ಶೇ. 2.4) ಇಲ್ಲವೆನ್ನುವಷ್ಟು ಎಲ್ಲರಿಗೂ ಕೆಲಸ ಸಿಗುತ್ತಿದೆ. ಸಿಂಗಾಪುರ್‌ದಲ್ಲಿ ಏಳು ಸಾವಿರ ಬಹುರಾಷ್ಟ್ರೀಯ ಕಂಪನಿಗಳು ಬಂದು ಝಂಡಾ ಊರಿವೆ. ಹಣ ಮಾಡುವ ಪುಟ್ಟ ಐಡಿಯಾ ನಿಮ್ಮಲ್ಲಿದ್ದರೆ, ಅದನ್ನು ಕಾರ್ಯರೂಪಕ್ಕೆ ತರಲು ಅಲ್ಲಿ ಅವಕಾಶವಿದೆ. ಜಗತ್ತಿನ ಪ್ರತಿಯೊಬ್ಬ ಉದ್ಯಮಪತಿಯ ಕನಸೇನೆಂದರೆ, ಸಿಂಗಾಪುರ್‌ದಲ್ಲಿ ತನ್ನ 'ಅಂಗಡಿ" ತೆರೆಯಬೇಕು, ಅಲ್ಲಿ ವ್ಯಾಪಾರ ಮಾಡಬೇಕು.

ಇಷ್ಟೆಲ್ಲ 'ಅದ್ಬುತ"ವೆನಿಸುವ ಸಿಂಗಾಪುರ್‌ದಲ್ಲಿ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಯಾವಾಗ ಅಲ್ಲಿಂದ ಹೊರಟು ಬರುತ್ತೇನೋ ಎಂದೆನಿಸತೊಡಗಿತ್ತು. ಅವೆಲ್ಲಕ್ಕಿಂತ ಮುಖ್ಯವಾಗಿ ಅನಿಸಿದ್ದೇನೆಂದರೆ ಅದೂ ಒಂದು ದೇಶವಾ?

ವಿಚಿತ್ರವೇನೆಂದರೆ ಸಿಂಗಾಪುರ್ ಅದೆಷ್ಟೇ ಮುಂದುವರಿದಿರಬಹುದು, ಆ ದೇಶದಲ್ಲಿ ರಾಜಕಾರಣಿಗಳೇ ಇಲ್ಲ. ಎಲ್ಲರೂ ಸಿಇಒ ರೀತಿ ಕೆಲಸ ಮಾಡುತ್ತಾರೆ. ಒಬ್ಬರೂ ಆಶ್ವಾಸನೆ ನೀಡುವುದಿಲ್ಲ. ಆಶ್ವಾಸನೆ ನೀಡುವುದರೊಳಗೇ ಕೆಲಸ ಮಾಡಿ ಮುಗಿಸಿರುತ್ತಾರೆ. ಬುದ್ಧಿಯೇ ಇಲ್ಲದವರು. ಅವರಿಗೆ ರಾಜಕೀಯ ಮಾಡೋದೇ ಗೊತ್ತಿಲ್ಲ. ಹೇಳಿದಂತೆ ನಡೆದುಕೊಳ್ಳವುದೇ ದೊಡ್ಡ ಧರ್ಮ ಎಂದು ಭಾವಿಸಿದ್ದಾರೆ. ಇದ್ದ ಐದು ದಿನ ಪತ್ರಿಕೆಗಳನ್ನೆಲ್ಲ ತಿರುವಿ ಹಾಕಿದರೂ ಒಬ್ಬನೇ ಒಬ್ಬ ರಾಜಕಾರಣಿ ಮತ್ತೊಬ್ಬನನ್ನು ಟೀಕಿಸಿದ, ನಿಂದಿಸಿದ, ಆರೋಪಿಸಿದ ವರದಿಗಳು ಕಣ್ಣಿಗೆ ಬೀಳಲಿಲ್ಲ. ಒಬ್ಬನೇ ಮಂತ್ರಿ ಹಗರಣದಲ್ಲಿ ಸಿಲುಕಿದ ಪ್ರಸಂಗವಿಲ್ಲ. ಯಾವ ಮಂತ್ರಿಯೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತಾಡಲಿಲ್ಲ. ಇನ್ನು ಪಕ್ಷ ಬಿಡುವುದು, ಸೇರುವುದು, ಮುರಿಯುವುದು, ಇಲ್ಲೇ ಇರುವೆನೆನ್ನುವುದು, ಇರಲಾಗದೇ ಹೊರಹೋಗುತ್ತೇನೆನ್ನುವುದು.... ಏನನ್ನೂ ಕೇಳಬೇಡಿ. ಅವರು ಯಾವ ಸೀಮೆ ರಾಜಕಾರಣ ಮಾಡುತ್ತಾರೋ? ಅದೂ ಒಂದು ರಾಜಕಾರಣವಾ?

ಅಲ್ಲಿನ ಪತ್ರಿಕೆ ಓದೋದೇ ಬೋರು. ಯಾವ ರಾಜಕಾರಣಿಯ ಫೋಟೊ ಸಹ ಕಾಣಿಸಿಕೊಳ್ಳುವುದಿಲ್ಲ. ಪ್ರಚಾರ ಹೇಗೆ ಪಡೆಯಬೇಕು, ಸದಾ ಸುದ್ದಿಯಲ್ಲಿ ಹೇಗೆ ಇರಬೇಕು ಎಂಬುದೂ ಗೊತ್ತಿಲ್ಲ. ಮಾತೆತ್ತಿದರೆ ಅಲ್ಲಿನ ರಾಜಕಾರಣಿಗಳು ಈ ವರ್ಷ ಜಿಡಿಪಿ ಎಷ್ಟು ಪರ್ಸೆಂಟ್ ಹೆಚ್ಚಾಗುತ್ತದೆ, ದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಗಳೇನು ಎಂದು ಮಾತಾಡುತ್ತಾರೆ. ನಮ್ಮ ರಾಜಕಾರಣಿಗಳೂ ಕಮ್ಮಿಯೇನಲ್ಲ. ಅವರೂ ಮಾತಾಡುತ್ತಾರೆ. ಆದರೆ ಸಿಂಗಾಪುರ್‌ದ ರಾಜಕಾರಣಿಗಳು ಅದೆಂಥ 'ಮೂರ್ಖ"ರೆಂದರೆ, ಹೇಳಿದಂತೆ ಮಾಡಿ ತೋರಿಸಿಬಿಡುತ್ತಾರೆ. ರಾಜಕಾರಣವೆಂದರೆ ಏನೆಂಬುದೇ ಗೊತ್ತಿಲ್ಲ.

ರೈತರ ಬಗ್ಗೆ ಏನೂ ಮಾಡದಿದ್ದರೂ, ಎಲ್ಲ ರೈತರನ್ನು ಕಷ್ಟದಲ್ಲಿ ನೂಕಿ, ಆಗಾಗ ಅವರ ಕತ್ತನ್ನು ಕುಣಿಕೆಗೆ ಹಾಕಿಯೂ ನಮ್ಮ ರಾಜಕಾರಣಿಗಳು ರೈತರ ನೇತಾರ, ಮಣ್ಣಿನ ಮಗ ಎಂದು ಕರೆಸಿಕೊಳ್ಳುತ್ತಾರೆ. ಅಲ್ಲಿ ಇಂಥ ಒಬ್ಬ ರಾಜಕಾರಣಿಯೂ ಸಿಗುವುದಿಲ್ಲ. ನಮ್ಮ ದೇವೇಗೌಡ, ಕುಮಾರಸ್ವಾಮಿಯವರಿಂದ ಅವರು ಏನೆಲ್ಲ ಕಲಿತುಕೊಳ್ಳಬಹುದು? ಒಂದೂ ಗ್ರಾಮ ಉದ್ಧಾರ ಮಾಡದೇ ಕೇವಲ ಗ್ರಾಮದಲ್ಲಿ ಮಲಗಿ ಎದ್ದು ಬಂದು ರಾಜ್ಯ ಉದ್ಧಾರವಾಯಿತು ಎಂದು ನಂಬಿಸುವಂಥ ಕಲೆಗಾರಿಕೆ ಸಹ ಸಿಂಗಾಪುರ್‌ದ ರಾಜಕಾರಣಿಗಳಿಗೆ ಇಲ್ಲವಲ್ಲ. ಏನೆನ್ನಬೇಕೋ ತಿಳಿಯುವುದಿಲ್ಲ.

ಸಿಂಗಾಪುರ್‌ದ ರಾಜಕಾರಣಿಗಳಿಗೆ ಜಾತಿಯ ಪ್ರಾಮುಖ್ಯ, ಅದು ತರಬಹುದಾದ ಮತ, ವೋಟ್‌ಬ್ಯಾಂಕ್, ಪಾಲಿಟಿಕ್ಸ್ ಯಾವುದರ ಬಗ್ಗೆ ಸಹ ಪ್ರಾಥಮಿಕ ಜ್ಞಾನ ಕೂಡ ಇಲ್ಲ. ಹೀಗಾಗಿ ಅಲ್ಲಿ ಮೀಸಲಾತಿ, ಒಳಮೀಸಲಾತಿ ಇಲ್ಲ. ಅಲ್ಪಸಂಖ್ಯಾತರ ಓಲೈಕೆಯೂ ಗೊತ್ತಿಲ್ಲ. ಒಂದು ಜಾತಿಯನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟೋದು ಹೇಗೆ, ಜಾತಿ ದಂಗೆಯೆಬ್ಬಿಸುವುದು ಹೇಗೆ, ಅನಂತರ ಅದನ್ನೇ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತಿಸುವುದು ಹೇಗೆಂಬುದು ಸಹ ಗೊತ್ತಿಲ್ಲ. ಎಂಥ ವಿಚಿತ್ರ ನೋಡಿ ಸಿಂಗಾಪುರ್‌ದ ಜನಸಂಖ್ಯೆಯ ಶೇ. 75ರಷ್ಟು ಮಂದಿ ಚೀನಿಯರಿದ್ದಾರೆ. ಶೇ. 13ರಷ್ಟು ಮಲೇಷಿಯನ್‌ರಿದ್ದಾರೆ. ಶೇ. 9ರಷ್ಟು ಭಾರತೀಯರು (ಹೆಚ್ಚಿನವರು ತಮಿಳರು) ಇದ್ದಾರೆ. ಉಳಿದವರು ಮುಸ್ಲಿಮರು.

ಹೀಗಿದ್ದರೂ ಈಗ ಸಿಂಗಾಪುರ್‌ದ ಅಧ್ಯಕ್ಷ ಭಾರತೀಯ. ಶೇ.೭೫ರಷ್ಟು ಜನಸಂಖ್ಯೆ ಹೊಂದಿರುವ ಚೀನಾ ಮೂಲದವನು ಪ್ರಧಾನಿ. ಭಾರತೀಯರಿಗಿಂತ ಮಲೇಷಿಯನ್‌ರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರಿಗೆ ದೇಶದ ಉನ್ನತ ಪದವಿಯಾದ ಅಧ್ಯಕ್ಷ-ಪ್ರಧಾನಿ ಪಟ್ಟ ಪಡೆಯುವುದು ಸಾಧ್ಯವಾಗಿಲ್ಲ. ಕೇಳಿದರೆ ಸಿಂಗಾಪುರ್‌ದಲ್ಲಿ ಜಾತಿಯೇ ಇಲ್ಲ, ನಮ್ಮಲ್ಲಿ racial ಅಥವಾ class ಭೇದಭಾವ ಇಲ್ಲ ಅಂತಾರೆ. ಯೋಗ್ಯ ಹಾಗೂ ಸಮರ್ಥನಾದವನು ಯಾರೇ ಇರಲಿ, ಯಾವ ದೇಶ, ಭಾಷೆ, ಜಾತಿಯವನೇ ಇರಲಿ ಅಲ್ಲಿ ಪ್ರಧಾನಿ, ಅಧ್ಯಕ್ಷ ಆಗಬಹುದಂತೆ. ಕಲ್ಪನೆ ಮಾಡಿಕೊಳ್ಳಿ ಸಿಂಗಾಪುರ್‌ದ ರಾಜಕಾರಣಿಗಳು ಅದೆಷ್ಟು ಹಿಂದಿರಬಹುದೆಂದು. ಕರ್ನಾಟಕದ ರಾಜಕಾರಣಿಗಳಿಗಿರುವಂತೆ ಗುಲಗುಂಜಿಯಷ್ಟಾದರೂ ಕಾಮನ್‌ಸೆನ್ಸ್ ಇದ್ದಿದ್ದರೆ ಅದರ ಕತೆಯೇ ಬೇರೆಯಿತ್ತು.

ಐದು ದಿನ ಆ ದೇಶವನ್ನು ಎರಡು-ಮೂರು ಸಲ ಸುತ್ತು ಹಾಕಿರಬಹುದು. ದೇಶಕ್ಕೆ ದೇಶವೇ ಶುಭ್ರ, ಸ್ವಚ್ಛ. ವಾಕರಿಕೆ ಬರಿಸುವಂಥ cleanliness! ರಸ್ತೆಯ ಪಕ್ಕದಲ್ಲಿ ಹೊಲಸೇ ಇಲ್ಲ. ಬರೀ ಹೂದೋಟಗಳು. ನಗರವನ್ನು ಇಟ್ಟುಕೊಳ್ಳುವ ರೀತೀನಾ ಇದು? ಇಡೀ ದೇಶದಲ್ಲಿ ಒಂದೇ ಒಂದು ಪೋಸ್ಟರ್, ಗೋಡೆಬರಹ, ಹೋರ್ಡಿಂಗ್, ಕಟೌಟ್, ಬ್ಯಾನರ್, ಬಂಟಿಂಗ್, ಫ್ಲೆಕ್ಸ್ ಸಹ ಕಾಣುವುದಿಲ್ಲ. ಹುಟ್ಟುಹಬ್ಬ, ಪ್ರಸ್ತಕ್ಕೆಲ್ಲ ರಸ್ತೆಪಕ್ಕ ಹೋರ್ಡಿಂಗ್ ಹಾಕಿಕೊಂಡು ಶುಭಾಶಯ ಹೇಳುವ ನಾವೆಲ್ಲಿ, ಸಿಂಗಾಪುರ್ ಎಲ್ಲಿ?

ರೂಲ್ಸು ಇರಬೇಕು, ಇರಬೇಕೆಂದು ಆ ಪರಿ ಕಟ್ಟುನಿಟ್ಟಾಗಿ ಪಾಲಿಸುವುದೇ? ನಮ್ಮಲ್ಲೂ ರೂಲುಗಳಿವೆ. ಆದರೆ ನಾವು ಅವನ್ನೆಲ್ಲ ಪಾಲಿಸುತ್ತೇವಾ? ಪಾಲಿಸುವುದೇನಿದ್ದರೂ ಉಲ್ಲಂಘನೆಯಲ್ಲೇ. ಎಲ್ಲೆಡೆ ಹಸಿರು, 'ಮೀತಿಮೀರಿದ" ಸ್ವಚ್ಛತೆ, ಅಚ್ಚುಕಟ್ಟುತನ, ಸುವ್ಯವಸ್ಥಿತತೆ, ಕರಾರುವಾಕ್ಕುತನ. ಯಾರಿಗೆ ಕಿರಿಕಿರಿಯಾಗುವುದಿಲ್ಲ ಹೇಳಿ? ಇಂಥ ವಾತಾವರಣದಲ್ಲಿ ಐದು ದಿನ ಕಳೆಯುವುದೆಂದರೆ ಬಸವಳಿದು ಹೋಗಬೇಕು. ನಿತ್ಯ ದೂಳು, ವಾಹನದ ಹೊಗೆ, ಅಬ್ಬರ, ಕಿರುಚಾಟ, ಟ್ರಾಫಿಕ್ ಜಾಮ್, ಅಪಘಾತ, ರೋಗರುಜಿನಗಳ ಮಧ್ಯೆ ಬದುಕುವುದನ್ನು ರೂಢಿಸಿಕೊಂಡಿರುವ ನಾವು, ಏಕಾಏಕಿ ಅದಿಲ್ಲದ ತಾಣದಲ್ಲಿ ಜೀವಿಸುವುದಾದರೂ ಹೇಗೆ?

'ಸಿಂಗಾಪುರ್‌ದಲ್ಲಿ ಕ್ರೈಂ ರೇಟ್ ಸೊನ್ನೆ ಅನ್ನುವಷ್ಟು ಸೊನ್ನೆ " ಎಂದ ನನ್ನ ಜತೆಗಿದ್ದ ಅಲ್ಲಿನ ಸರಕಾರದ ಪ್ರತಿನಿಧಿ. ಹೀಗಾಗಿ ಅಲ್ಲಿನ ಪತ್ರಿಕೆಗಳಲ್ಲಿ ಅಪರಾಧ ಸುದ್ದಿ ಪುಟವೇ ಇಲ್ಲ. ಹೀಗಾಗಿ ಅಲ್ಲಿನ ಟಿವಿಗಳಲ್ಲಿ ಕ್ರೈಂ ಡೈರಿ, ಕ್ರೈಂ ಸ್ಟೋರಿ, ವಾರೆಂಟ್ ರೀತಿಯ ಕಾರ್ಯಕ್ರಮಗಳೇ ಇಲ್ಲ. ಹೆಣಗಳನ್ನು ನೋಡದೇ, ರಕ್ತಪಾತ ವೀಕ್ಷಿಸದೇ ಅಲ್ಲಿನ ಜನ ಹೇಗೆ ಮಲಗುತ್ತಾರೋ? ವಿದ್ಯುತ್ ತಂತಿ ಮೈಮೇಲೆ ಬಿದ್ದು ಸಾಯುವುದು, ಚರಂಡಿಯಲ್ಲಿ ಕಾಲ್ಜಾರಿ ಬಿದ್ದು ಸಾಯುವುದು, ಕಾರು ಪಾದಚಾರಿ ಮೇಲೆ ಹರಿಯುವುದು, ಕೊಳವೆಬಾವಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವುದು, ಕಟ್ಟಡ ಕುಸಿದು ಸಮಾಧಿಯಾಗುವುದು ಹೀಗೆ ಯಾವ ಘಟನೆಯೂ ಸಂಭವಿಸುವುದಿಲ್ಲ. ವಾಹನಗಳ ಡಿಕ್ಕಿ, ಪಲ್ಟಿ, ಸೇತುವೆಯಿಂದ ಬೀಳುವುದು, ಬ್ರೇಕ್‌ಫೇಲ್ ಮುಂತಾದ ಕಿರುಕುಳ ಅಪಘಾತಗಳೂ ಸಂಭವಿಸುವುದಿಲ್ಲ. ಮೋಸ, ವಂಚನೆ, ದಗಾ, ಕರ್ಮಕಾಂಡ, ಹಗರಣ, ಅಕ್ರಮ, ಅಕೃತ್ಯಗಳಿಲ್ಲ. ಸಿಂಗಾಪುರ್‌ದಲ್ಲಿ ಬದುಕು ಎಂಥಾ ಬೋರು ನೋಡಿ. 'ಭ್ರಷ್ಟಾಚಾರ ಅಂದ್ರೆ ಬಹುಪಾಲು ಮಂದಿಗೆ ಗೊತ್ತಿಲ್ಲ. ಯಾಕೆಂದರೆ ಯಾರೂ ಲಂಚ ಕೊಡುವುದಿಲ್ಲ, ಸ್ವೀಕರಿಸುವುದಿಲ್ಲ. ಆದರೂ ಇದೆ ಎಂಬುವಷ್ಟರ ಮಟ್ಟಿಗೆ ತುಸು ಇರಬಹುದು" ಎಂದಿತು ಸರಕಾರಿ ಪ್ರತಿನಿಧಿ.

ಹಾಗಾದರೆ ಸರಕಾರಿ ಅಧಿಕಾರಿಗಳು, ಸಿಬ್ಬಂದಿ, ಮಂತ್ರಿಗಳು ಹೇಗೆ ಕೆಲಸ ಮಾಡ್ತಾರೆ? ಹೇಗೆ ಬದುಕುತ್ತಾರೆ? ನಿಮ್ಮಲ್ಲಿ ಫೈಲ್‌ಗಳಿಗೆ ಓಡಾಡಲು, ಹಾರಾಡಲು, ಶಕ್ತಿ ಹೇಗೆ ಬರುತ್ತದೆ? ಬೇರೆಯವರಿಗೆ ಲಾಭ ಮಾಡಿಕೊಡುವುದೇ ಸರಕಾರದ ಕೆಲಸವಾ? ಇಂತಿಷ್ಟು ಅಂತ ಪರ್ಸೆಂಟೇಜ್ ಇಟ್ಟುಕೊಳ್ಳದಿದ್ದರೆ ಹೇಗೆ? ಎಂದು ಕೇಳಿದೆ. ಆತನಿಗೆ ಸ್ವಲ್ಪವೂ ಅರ್ಥವಾಗಲಿಲ್ಲ. ಮಕ-ಮಕ ನೋಡಿದ. ನಮ್ಮಲ್ಲಿ ಇದೊಂದು ಉದ್ಯಮವಾಗಿದೆ ಎಂದು ಹೇಳಬೇಕು ಅಂದುಕೊಂಡೆ. ಅವನಿಗೆ ಅರ್ಥವಾಗೋದಾದರೂ ಹೇಗೆ? ನಯಾಗಾರ ಜಲಪಾತವನ್ನು ಚೊಂಬಿನಲ್ಲಿ ತೋರಿಸಿದಂತಾದೀತೆಂದು ಸುಮ್ಮನಾದೆ.

ಸಿಂಗಾಪುರ್‌ವನ್ನು Fine City ಅಂತ ಕರೆಯುತ್ತಾರೆ. ನೋಡಲು ಸುಂದರವಾಗಿದೆ ಎಂಬ ಕಾರಣಕ್ಕೆ ಅಲ್ಲ. ಅಲ್ಲಿ ಪ್ರತಿ ಕಾನೂನು, ನಿಯಮ ಉಲ್ಲಂಘನೆಗೂ ಫೈನ್ (ದಂಡ) ಹಾಕುತ್ತಾರೆ. ಫೈನ್ ಕಟ್ಟದೇ ಸಾರ್ವಜನಿಕ ಸ್ಥಳಗಳಲ್ಲಿ ಮಲ, ಮೂತ್ರ ವಿಸರ್ಜನೆ, ಉಗುಳುವುದು ಸಾಧ್ಯವೇ ಇಲ್ಲ. ನಮ್ಮ ದೇಶದಲ್ಲಿ ಇದಾವುದರ ಗೊಡವೆಯೇ ಇಲ್ಲ. ಎಲ್ಲೆಂದರಲ್ಲಿ ವಿಸರ್ಜಿಸಬಹುದಾದ ಅವಕಾಶ. ಯಾರಿಗಿದೆ ಈ ಸ್ವಾತಂತ್ರ್ಯ? (ನಮ್ಮ ರಾಜ್ಯದ ಮಹಾಜನತೆಗೆ ಈಗ ವಿಧಾನಸಭೆ ವಿಸರ್ಜನೆಯನ್ನೂ ನೋಡುವ ಅವಕಾಶ ಬಿಡಿ.)

ಬೆಂಗಳೂರಿಗಿಂತ ಹೆಚ್ಚು ವಾಹನಗಳಿದ್ದರೂ ಅಪಘಾತಗಳಿಲ್ಲದ, ಹೊಗೆ ಇಲ್ಲದ , ರೋಡ್ ಹಂಪ್ ಇಲ್ಲದ, ಟ್ರಾಫಿಕ್ ಜಾಮ್ ಇಲ್ಲದ, ಹಾರ್ನ್ ಶಬ್ದಗಳಿಲ್ಲದ, ಬರೀ ಶುದ್ಧ ಗಾಳಿ, ನೀರು ಕುಡಿದುಕೊಂಡು ಗಗನಚುಂಬಿ ಕಟ್ಟಡಗಳ ನಡುವೆಯೂ ದಟ್ಟ ಕಾನನ, ಹಸಿರುಗಳನ್ನು ಹೊದ್ದುಕೊಂಡಿರುವ ಶುಭ್ರ ವಾತಾವರಣದಲ್ಲಿ ಬರೀ ಅಭಿವೃದ್ಧಿ ಮಂತ್ರ ಪಠಣವನ್ನಷ್ಟೇ ಕೇಳಿಸಿಕೊಂಡು, ಬಡತನ, ರೋಗರುಜಿನ, ಅನಕ್ಷರತೆ ಇಲ್ಲದ ನಾಡಿನಲ್ಲಿ ಜನ ಹೇಗೆ ಬದುಕುತ್ತಾರೋ ಏನೋ?
ಐದು ದಿನ ಕಳೆಯುವ ಹೊತ್ತಿಗೆ ಸುಸ್ತಾಗಿ ಹೋದೆ. ಮನಸ್ಸು ಬೆಂಗಳೂರಿನ ಕಡೆ ನೆಗೆಯುವ ವಿಮಾನದಲ್ಲಿ ಮುಖ ಮಾಡಿ ಕುಳಿತಿತ್ತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಗೇಜ್‌ಗಾಗಿ ಒಂದು ತಾಸು ಕಾದು, ಪಾರ್ಕಿಂಗ್‌ನಲ್ಲಿಟ್ಟ ವಾಹನ ಹೊರತೆಗೆಯಲು ಕಾಲು ಗಂಟೆ ಹೋರಾಡಿ, ಎರಡು ತಾಸು ಟ್ರಾಫಿಕ್ ಜಾಮ್ ಎಂಬ ಚಕ್ರವ್ಯೂಹ ಭೇದಿಸಿ ಮನೆ ತಲುಪಿದಾಗಲೇ ಸಮಾಧಾನವಾಯಿತು. ಬೆಂಗಳೂರನ್ನು ಸಿಂಗಾಪುರ್ ಮಾಡದಿದ್ದುದೇ ಎಷ್ಟೋ ಒಳ್ಳೆಯದಾಯ್ತಪ್ಪ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X