ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಡು ಬಿಟ್ಟರೂ ಕನ್ನಡದ ಗುನುಗು ಬಿಡದ ಹಕ್ಕಿಗಳು!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಇಲ್ಲಿ ಭಟ್ಟರು ಯಾರು? ಅವರು ಬಂದಿದ್ದಾರಾ?

ಈ ಮಾತು ಇಂದಿಗೂ ದೇವಸ್ಥಾನದ ಗಂಟೆಯಂತೆ ನನ್ನ ಕಿವಿಯಾಳಗೆ ಮೊಳಗುತ್ತಿರುತ್ತದೆ. ಅಂದು ಈ ಎರಡು ಮಾತು ಕೇಳಿ ನಾನು ಅದೆಷ್ಟು ಪುಳಕಗೊಂಡಿದ್ದೆನೆಂದರೆ, ಎರಡು ವರ್ಷಗಳ ನಂತರವೂ ಈ ಮಾತು ನನ್ನಲ್ಲಿ ಜಮೆಯಾಗಿರುವ ಪುಳಕವನ್ನು ನೂರ್ಮಡಿಗೊಳಿಸುತ್ತದೆ. ಅದರಲ್ಲೂ ವಿದೇಶದ ಮಣ್ಣನ್ನು ತುಳಿದಾಗ ಈ ಮಾತು ನನಗೆ ಪದೇ ಪದೆ ನೆನಪಾಗುತ್ತದೆ. ಯಾರಾದರೂ ಹಿಂದಿನಿಂದ ಕೂಗಿ ಕರೆಯುತ್ತಿರಬಹುದೇ ಎಂದು ಅನಿಸುತ್ತದೆ. ಅಂದು ಆಕೆ ನನ್ನನ್ನು ಕೂಗಿ ಕರೆದಾಗ, ಅದರಲ್ಲೂ ಅಪ್ಪಟ ಕನ್ನಡದಲ್ಲಿ ಭಟ್ರು ಬಂದಿದ್ದಾರಾ? ಎಂದು ಕೂಗಿದಾಗ ನಾನು ಮೊದಲ ಬಾರಿಗೆ ನನ್ನ ಕಿವಿಗಳನ್ನು ಸಂದೇಹದಿಂದ ನೋಡಿದ್ದೆ. ಕನ್ನಡ ಹಾಗೂ ನನ್ನ ಮಾತೃಭಾಷೆ ಅದೆಷ್ಟು ಇಂಪಾಗಿದೆಯೆಂದು ಅನಿಸಿದ್ದು ಆಗಲೇ.

ಒಂದು ವರ್ಷದ ಹಿಂದೆ ರಾಷ್ಟ್ರಪತಿ ಡಾ.ಅಬ್ದುಲ್‌ ಕಲಾಂ ಅವರೊಂದಿಗೆ ಹದಿನಾಲ್ಕು ದಿನಗಳ ಕಾಲ ರಷ್ಯಾ, ಸ್ವಿಜರ್‌ಲ್ಯಾಂಡ್‌, ಯುಕ್ರೇನ್‌ ಹಾಗೂ ಐಸ್‌ಲ್ಯಾಂಡ್‌ ದೇಶಗಳ ಪ್ರವಾಸದಲ್ಲಿದ್ದ ಸಂದರ್ಭ. ಭಾರತದ ರಾಷ್ಟ್ರಪತಿಯಾಬ್ಬರ ವಿಮಾನ ಪ್ರಪ್ರಥಮ ಬಾರಿಗೆ ಐಸ್‌ಲ್ಯಾಂಡಿನ ರಾಜಧಾನಿ ರಿಕ್ಯಾವಿಕ್‌ನಲ್ಲಿ ಇಳಿದಿತ್ತು. ಭಾರತೀಯ ನಿಯೋಗ ಹೋಟೆಲ್‌ನಲ್ಲಿ ತಂಗಿತ್ತು. ರಾತ್ರಿ ರಾಷ್ಟ್ರಪತಿ ಗೌರವಾರ್ಥ ಔತಣಕೂಟ ಏರ್ಪಾಡಾಗಿತ್ತು. ಅದಕ್ಕೂ ಮೊದಲು ಹೋಟೆಲ್‌ನ ಬಾಲ್ಕನಿಯಲ್ಲಿ ನಾವು ಹದಿನೆಂಟಿಪ್ಪತ್ತು ಪತ್ರಕರ್ತರು ಸೇರಿ ಹರಟೆ ಹೊಡೆಯುತ್ತಿದ್ದೆವು. ನಲವತ್ತಕ್ಕೆ ಇನ್ನೂ ಕಾಲಿಡದ ಹೆಣ್ಣುಮಗಳೊಬ್ಬಳು ನಮ್ಮ ಗುಂಪಿನೆಡೆಗೆ ತದೇಕಚಿತ್ತದಿಂದ ಏನನ್ನೋ ಹುಡುಕುತ್ತಿರುವುದು ಒಂದು ಮೂಲೆಯಲ್ಲಿ ಕುಳಿತ ನನಗೆ ಸ್ಪಷ್ಟವಾಗಿ ಕಾಣುತ್ತಿತ್ತು. ತುದಿಗಾಲ ಮೇಲೆ ನಿಂತು ಕತ್ತು ಎತ್ತರಿಸಿ ಕಣ್ಣುಗಳನ್ನು ನೆಲಕ್ಕೆ ಹಚ್ಚಿ ಏನನ್ನೋ ಹುಡುಕುತ್ತಿರುವ ದೃಶ್ಯ ಕ್ಷಣ ಕ್ಷಣಕ್ಕೂ ಹತ್ತಿರ ಹತ್ತಿರ ಬರುವಂತೆ, ಆ ಮಾತು...

ಇಲ್ಲಿ ಭಟ್ಟರು ಯಾರು? ಭಟ್ರು ಬಂದಿದ್ದಾರಾ?

ಕರ್ನಾಟಕದಿಂದ ಹತ್ತಾರು ಸಾವಿರ ಕಿ.ಮೀ. ದೂರದಲ್ಲಿರುವ, ವಿಶ್ವಭೂಪಟದಲ್ಲಿ ಇದ್ದೂ ಕಾಣದಂತಿರುವ, ಉತ್ತರ ಧ್ರುವಕ್ಕೆ ಹತ್ತಿರದಲ್ಲಿ ತನ್ನ ಪಾಡಿಗೆ ತಾನು ಶಾಂತವಾಗಿ ಮಲಗಿರುವ, ಭೂಲೋಕದ ಯಾವ ಮೂಲೆಯಲ್ಲಿದ್ದೇವೆಂಬುದು ಸಹ ಗೊತ್ತಾಗದಂತಿರುವ, ಇಂಥದ್ದೊಂದು ದೇಶವಿದೆಯೆಂದು ಬಹುಪಾಲು ಜನರಿಗೆ ಗೊತ್ತೇ ಇಲ್ಲದ, ಭಾಷೆ, ಜನ ಯಾರೂ, ಯಾವುದೂ ಪರಿಚಿತವಲ್ಲದ ಐಸ್‌ಲ್ಯಾಂಡ್‌ ಎಂಬ ವಿಚಿತ್ರ ದೇಶದಲ್ಲಿ ಅಕ್ಷರಶಃ ತೆವಳುತ್ತಿರುವೆ ಆ ಕ್ಷಣದಲ್ಲಿ ಆ ಎರಡು ಮಾತುಗಳು ನನ್ನಲ್ಲಿ ಅಪರಿಚಿತ ರೋಮಾಂಚನ ಮೂಡಿಸಿದ್ದವು.

ಭಟ್ರೇ! ನಾನು ಚಂದ್ರಿಕಾ... ಚಂದ್ರಿಕಾ ಗುನ್ನರ್‌ಸನ್‌. ನಾನು ಕರ್ನಾಟಕದವಳು. ಅಪ್ಪಟ ಕನ್ನಡತಿ. ಸಕಲೇಶಪುರದವಳು. ಐಸ್‌ಲ್ಯಾಂಡಿನವನನ್ನು ಮದುವೆಯಾಗಿ, ಇಲ್ಲಿಯೇ ನೆಲೆಸಿದ್ದೇನೆ. ರಾಷ್ಟ್ರಪತಿಗಳ ಜೊತೆಗೆ ಬರುವವರ ಹೆಸರಲ್ಲಿ ಕನ್ನಡಿಗರು ಯಾರಾದರೂ ಇದ್ದಿರಬಹುದಾ ಎಂದು ಹುಡುಕುತ್ತಿದ್ದೆ ಒಂದು ತಿಂಗಳಿನಿಂದ. ನೀವು ಕರ್ನಾಟಕದವರು, ಕನ್ನಡದವರೇ ಇರಬೇಕು ಎನಿಸಿತ್ತು. ನೀವು ಕನ್ನಡದವರೇ ಆಗಿರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೆ. ಈಗ ನನಗೆ ಅದೆಷ್ಟು ಸಂತಸವಾಗ್ತಿದೆ ಗೊತ್ತಾ? ಒಂದು ವೇಳೆ ನೀವು ಕನ್ನಡಿಗರಾಗಿರದಿದ್ದರೆ, ನನಗೆ ಅದೆಷ್ಟು ಸಂಕಟ, ದುಃಖ ಆಗ್ತಿತ್ತು ಗೊತ್ತಾ? ಈ ದೇಶಕ್ಕೆ ಬಂದು ಇಷ್ಟು ವರ್ಷಗಳ ನಂತರ ಕನ್ನಡದವರೊಬ್ಬರ ಜತೆ ಮಾತಾಡುವ ಮಹದಾನಂದ ನನ್ನದಾಗುತ್ತಿದೆ ಎಂದು ಚಂದ್ರಿಕಾ ತಮ್ಮ ಅಸ್ಖಲಿತ, ಅಪ್ಪಟ ಕನ್ನಡದಲ್ಲಿ, ಮರೆತು ಹೋದ ಭಾಷೆ ತಟ್ಟನೆ ನೆನಪಾದಂತೆ ಪಟಪಟನೆ ಮಾತಾಡುತ್ತಿದ್ದಳು.

ಅವಳಲ್ಲಿದ್ದ, ಆದರೆ ಅನೇಕ ವರ್ಷಗಳಿಂದ ಕಳೆದುಹೋದ ಕನ್ನಡ ಅವಳಿಗೆ ಸಿಕ್ಕಿತ್ತು. ಪ್ರಯಾಸವಿಲ್ಲದೇ ಅವಳಿಗೆ ಪದಗಳು ಸಿಗುತ್ತಿದ್ದವು. ಅವಳಲ್ಲಿದ್ದ ಕನ್ನಡ ಬೆಚ್ಚಗೆ ಹಾಯಾಗಿ ಮಲಗಿತ್ತು. ಅಂದು ಅವಳ ಪುಳಕವನ್ನು ನೆನಪಿಸಿಕೊಂಡರೆ, ಮಾತೃಭಾಷೆಗಿರುವ ಅತ್ಯದ್ಭುತ ಶಕ್ತಿಯ ಮಹಿಮೆ ಸಾವಿರಾರು ಮುಖಗಳಲ್ಲಿ ತೆರೆದುಕೊಳ್ಳುವ ಅನುಪಮ ಅನುಭವವಾಗುತ್ತದೆ.

ಚಂದ್ರಿಕಾ ತನ್ನ ಮಕ್ಕಳಿಗೆ, ಗಂಡನಿಗೆ ಕನ್ನಡವನ್ನು ಕಲಿಸಿದ್ದಳು. ಆಕೆಯ ಗಂಡ ಗುನ್ನರ್‌ಸನ್‌ ತನಗೆ ಕನ್ನಡ ಗೊತ್ತೆಂಬುದನ್ನು ಸಾಬೀತುಪಡಿಸಿಯೇ ಸಿದ್ಧ ಎಂದು, ಬೆಲ್ಲುಲ್ಲಿ, ಈರುಲ್ಲಿ, ಶುಂತಿ, ತೊಮೆತೊ, ಕೊತ್ತುಂಬ್ರಿ, ಆಲೂಗದ್ದೆ, ಹಾಗಲಕಾೖ, ಬದ್ನೆಕಾೖ, ತೆಂಗಿಂಕಾೖ ಎಂದು ಎಲ್ಲ ತರಕಾರಿಗಳ ಹೆಸರುಗಳನ್ನು ಒಪ್ಪಿಸುತ್ತಿದ್ದ.

ಪ್ರೀತಿಯಿಂದ ಬರಸೆಳೆದು ಕನ್ನಡಕ್ಕೊಂದು ಮುತ್ತುಕೊಡಬೇಕೆನಿಸಿತ್ತು ಆ ಕ್ಷಣದಲ್ಲಿ.

ದೇಶ, ಭಾಷೆ, ಜನ, ಸಂಸ್ಕೃತಿ ಯಾವ್ಯವೂ ಗೊತ್ತಿಲ್ಲದ ನೆಲದಲ್ಲಿ ನಿಂತಾಗ ಮಾತೃಭಾಷೆ, ಅದರಲ್ಲೂ ಕನ್ನಡ ಹುಟ್ಟಿಸುವ ರೋಮಾಂಚನವಿದೆಯಲ್ಲಾ ಅದನ್ನು ಹೇಳಲು ಸಾಧ್ಯವೇ ಇಲ್ಲ ಅನುಭವಿಸುವುದೊಂದೇ ದಾರಿ.

ಅಮೆರಿಕದ ಬಾಲ್ಟಿಮೋರ್‌ನಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗಳದಲ್ಲಿ ನಿಂತಾಗ ಚಂದ್ರಿಕಾ, ಐಸ್‌ಲ್ಯಾಂಡಿನಲ್ಲಿ ಕೇಳಿದ ಗಂಟೆಯ ಮೊರೆತ, ಕೈಹಿಡಿದು ಜಗ್ಗಿದ ನನ್ನೊಳಗಿನ ನಾನು, ಅಂದ್ರೆ ನನ್ನ ಕನ್ನಡ, ವಿದೇಶಿ ಮಣ್ಣಿನಲ್ಲಿ ನಿಂತಾಗ ಕೇಳಿಸುವ ಕನ್ನಡದ ಇಂಪು... ಅದ್ಯಾಕೋ ನೆನಪಿನ ಮೆರವಣಿಗೆಯಲ್ಲಿ ಹೊರಟು ನನ್ನ ಮುಂದೆ ಬಂದು ನಿಂತಂತೆನಿಸಿತು. ಮೈತುಂಬಾ ಇಂಗ್ಲಿಷನ್ನು ಹೊದ್ದು ಮಲಗಿದ ಇಂಗ್ಲಿಷ್‌ ದಂಪತಿಗಳಿಗೆ ಹುಟ್ಟಿದ ದೇಶದಂತಿರುವ ಅಮೆರಿಕದಂಥ ದೇಶದಲ್ಲಿ ಕನ್ನಡ ಕೇಳುವುದು, ಕನ್ನಡದ ಹೆಸರಲ್ಲಿ ವಿಶ್ವ ಸಮ್ಮೇಳನ ಮಾಡುವುದು, ಜಗತ್ತಿನ ಅದರಲ್ಲೂ ವಿಶೇಷವಾಗಿ ಅಮೆರಿಕನ್ನಡಿಗರೆಲ್ಲ ಸೇರಿ ಮೂರು ದಿನ ಬಾಯ್ತುಂಬಾ ಕನ್ನಡದಲ್ಲೇ ಮಾತಾಡುವುದು, ನಗುವುದು, ಊಟ ಮಾಡುವುದು, ಆಲೋಚಿಸುವುದು, ಮೈಮರೆಯುವುದು ಅನನ್ಯ, ಅಪೂರ್ವ. ಕನ್ನಡದ ಹೆಸರಲ್ಲಿ, ಕನ್ನಡದ ನೆಪದಲ್ಲಿ, ಕನ್ನಡದ ವರಾತಕ್ಕೆ ಅಮೆರಿಕದಲ್ಲಿ ಹರಿದು ಹಂಚಿಹೋಗಿರುವ ಸಾವಿರಾರು ಕನ್ನಡಿಗರು ಒಂದಾಗುತ್ತಿದ್ದಾರೆ. ಇದಕ್ಕಿಂತ ಆನಂದ, ಸಂಭ್ರಮ ಇನ್ನೊಂದುಂಟಾ?

ಅಮೆರಿಕಕ್ಕೆ ಕನ್ನಡಿಗನೊಬ್ಬ ಪುಸ್ತಕ ಹಿಡಿದುಕೊಂಡು ಉನ್ನತ ವಿದ್ಯಾಭ್ಯಾಸಕ್ಕೆಂದು ಹೊರಟು ನಿಂತರೆ, ಸರ್ಟಿಫಿಕೇಟನ್ನು ಎದೆಗವುಚಿಕೊಂಡು ಉದ್ಯೋಗವನ್ನರಸಿ ಹೊರಟರೆ ಅವರು ನಮ್ಮ ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತ, ಪರಿಚಿತ ಎಂದಷ್ಟೇ ಅನಿಸುವುದಿಲ್ಲ. ನಿಜವಾದ ಅರ್ಥದಲ್ಲಿ ಅವರು ನಮ್ಮ ಭಾಷೆ, ನೆಲ, ಸಂಸ್ಕೃತಿಯ ಅನಧಿಕೃತ ರಾಯಭಾರಿಗಳು. ಕನ್ನಡದ ಬೀಜ, ಕುಡಿಸಸಿಯನ್ನು ತಂದು ವಿದೇಶಿ ನೆಲದಲ್ಲಿ ಬಿತ್ತಿ, ಹುಗಿದು, ನೀರೆರೆದು ಪೋಷಿಸುತ್ತಾ ತಮ್ಮ ಸುತ್ತ ಕನ್ನಡದ ಮನೆ, ಪರಿಸರ ಕಟ್ಟಿಕೊಳ್ಳುವ ಕನ್ನಡ ಪರಿಸರ ಪ್ರೇಮಿಗಳು!

ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮನೆಯ ಮದುವೆಯಂತೆ, ತಾವೇ ವಧು-ವರರೆಂಬಂತೆ ಸಡಗರದಿಂದ ಪಾಲ್ಗೊಂಡಿರುವ ಪ್ರತಿ ಕನ್ನಡಿಗನ ಮನಸ್ಸಿನಲ್ಲಿ ಇದೇ ತಳಿರು ತೋರಣಿ ಕಮಾನು ಕಟ್ಟಿ ನಿಂತಿದೆ. ಕನ್ನಡದ ಜಾತ್ರೆಯಲ್ಲಿ ಕನ್ನಡದ ತೇರಿನ ಹಗ್ಗಕ್ಕೆ ಸಹಸ್ರ ಕೈಗಳು ಜತೆಯಾಗಿವೆ. ಇಂಥದೊಂದು ಹಬ್ಬ ನಮ್ಮ ಬೀದಿ, ನಮ್ಮ ಛಾಳಾ, ವಠಾರ, ಊರಲ್ಲಿ ನಡೆದಾಗ ಸಂಭ್ರಮಿಸುವ ನಾವು, ಅಮೆರಿಕದಂಥ ವಿದೇಶಿ ನೆಲದಲ್ಲಿ ನಡೆಯುವಾಗ ಅದೆಷ್ಟು ಉಲ್ಲಾಸದಿಂದ, ಹೆಮ್ಮೆಯಿಂದ ಬೀಗಬಹುದು? ಅಂಥ ಒಂದು ಸಂತಸದ ಝಲಕ್‌ ಸಮಸ್ತ ಕನ್ನಡಿಗರದು!

ಅರವತ್ತರ ದಶಕದಲ್ಲಿ ಅಮೆರಿಕಕ್ಕೆ ವಿದ್ಯಾಭ್ಯಾಸ, ಕೆಲಸ ಅರಸಿ ಆಗಮಿಸಿದ ಕನ್ನಡಿಗರು ಮಾಡಿದ ದೊಡ್ಡ ಕೆಲಸವೆಂದರೆ ಕನ್ನಡದ ಬೇರುಗಳನ್ನು ತಮ್ಮೊಂದಿಗೆ ತಂದು ಇಲ್ಲಿ ಪ್ರೀತಿಯಿಂದ ನೆಟ್ಟು ಪೋಷಿಸಿದ್ದು. ಆ ಬೇರು ಈ ನಾಲ್ಕೂವರೆ ದಶಕಗಳಲ್ಲಿ ಮರವಾಗಿ, ಹೆಮ್ಮರವಾಗಿ ಚಾಚಿ ನಿಂತಿದೆ. ಅಸಂಖ್ಯ ಕನ್ನಡಿಗರು ಗೂಡುಕಟ್ಟಿಕೊಳ್ಳುವಂತಾಗಿದೆ. ಅಮೆರಿಕದ ಯಾವುದೇ ಊರಿಗೆ ಹೋದರೂ, ಅಲ್ಲಿ ಒಂದಷ್ಟು ಕನ್ನಡಿಗರು ಸಿಗುತ್ತಾರೆ. ಕನ್ನಡ ಕೇಳಿಸುತ್ತದೆ. ಕನ್ನಡವೆಂಬ ಬಂಧ ಅವರನ್ನೆಲ್ಲ ಹಿಡಿದಿಟ್ಟಿದೆ. ಅಲ್ಲೆಲ್ಲ ಕನ್ನಡ ಸಂಘಗಳು ತಲೆಯೆತ್ತಿ ನಿಂತಿವೆ.

ಇಂದು ಏನಿಲ್ಲವೆಂದರೂ ಸುಮಾರು ಮೂವತ್ತೆೈದು ಕನ್ನಡ ಸಂಘಗಳು ಅಮೆರಿಕದಲ್ಲಿ ಕ್ರಿಯಾಶೀಲವಾಗಿ ಕನ್ನಡ ಕೆಲಸದಲ್ಲಿ ನಿರತವಾಗಿವೆ. ಅಕ್ಕ ಸಹಯೋಗದೊಂದಿಗೆ ವಾಷಿಂಗ್ಟನ್‌ನಲ್ಲಿರುವ ಕಾವೇರಿ ಕನ್ನಡ ಸಂಘ ಈ ವಿಶ್ವ ಸಮ್ಮೇಳನ ಸಂಘಟಿಸುವಷ್ಟು ಗಟ್ಟಿಮುಟ್ಟಾಗಿ ಬೆಳೆದಿದೆ. ಕನ್ನಡಕ್ಕಾಗಿ ಸಮಯ, ಹಣ, ಮನಸ್ಸನ್ನು ಎತ್ತಿಡುವವರ ಪಡೆ ಬೆಳೆಯುತ್ತಿದೆ. ಕನ್ನಡದಲ್ಲಿ ಲೇಖನ ಕೃಷಿ ಮಾಡುವವರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚುತ್ತಿದೆ. ತಮ್ಮ ಬಿಡುವಿರದ ಕೆಲಸ, ಕಾರ್ಪಣ್ಯಗಳ ನಡುವೆಯೂ ಕನ್ನಡ ಪತ್ರಿಕೆಗಳಿಗೆ ಬರೆಯುವವರು ಹೆಚ್ಚಾಗಿದ್ದಾರೆ. ಕತೆ, ಕಾದಂಬರಿ, ಲೇಖನ, ಕವಿತೆ, ಲಲಿತ ಪ್ರಬಂಧ, ವಿಮರ್ಶೆ, ಪ್ರವಾಸ ಸಾಹಿತ್ಯ, ತಂತ್ರಜ್ಞಾನ ಮುಂತಾದ ವಿಭಾಗಗಳಲ್ಲಿ ಹೊಸ ವಸ್ತುವನ್ನೊಳಗೊಂಡ ತೀರಾ ತಾಜಾವೆನಿಸುವ ನವೀನ ದೃಷ್ಟಿಕೋನದ ಬರಹಗಳು ಹೊರಬರುತ್ತಿರುವುದನ್ನು ಮೆಚ್ಚಲೇಬೇಕು. ಕಂಪ್ಯೂಟರ್‌, ಇ-ಮೇಲ್‌, ಬರಹ ತಂತ್ರಾಂಶ ಮುಂತಾದವುಗಳ ಫಲವಾಗಿ ಕನ್ನಡ ಅಮೆರಿಕದಲ್ಲಿ ಹುಲುಸಾಗುತ್ತಿದೆ, ಹತ್ತಿರವಾಗುತ್ತಿದೆ.

ಈ ಎಲ್ಲ ಸಂತಸಗಳ ನಡುವೆಯೂ ಎಲ್ಲೋ ಒಂದೆಡೆ ಆತಂಕದ ಸುರ್‌ಸುರ್‌ ಬತ್ತಿ ಸಹ ಹೊತ್ತಿ ಉರಿಯುತ್ತಿದೆ. ಕನ್ನಡದ ಭವಿಷ್ಯವೇನು, ಮುಂದಿನ ಪೀಳಿಗೆಗೆ ಕನ್ನಡ ಸುರಕ್ಷಿತವಾಗಿ ಹಸ್ತಾಂತರವಾದೀತಾ, ಅವರ ನಾಲಗೆ ಮೇಲೆ ಕನ್ನಡ ಕುಳಿತೀತಾ, ಕನ್ನಡವನ್ನು ಉಳಿಸಿ ಬೆಳೆಸುವ ಪರಿ ಎಂತು, ನಡುಮನೆಗೆ ಮಾತ್ರ ಸೀಮಿತವಾಗಿರುವ ಕನ್ನಡ ಅಲ್ಲಿಂದಲೂ ಎದ್ದು ಹೋದರೆ... ಮುಂತಾದ ಅನೇಕ ಪ್ರಶ್ನೆಗಳೊಂದಿಗೆ ಅಮೆರಿಕ ಕನ್ನಡಿಗ ಕುಳಿತಿದ್ದಾನೆ.

ಹಾಗೆ ನೋಡಿದರೆ ಇದು ಅವನದೊಂದೇ ದುಗುಡ ದುಮ್ಮಟ್ಟಿಯಲ್ಲ. ಇದು ಬೆಂಗಳೂರಿನಲ್ಲಿ ಕುಳಿತ ಕನ್ನಡಿಗನ ಆತಂಕವೂ ಹೌದು. ಅಮೆರಿಕನ್ನಡಿಗನಿಗೆ ಇದು ಭಾವನಾತ್ಮಕ ಒತ್ತಾಸೆಯಾದರೆ, ಕರ್ನಾಟಕದಲ್ಲಿರುವ ಕನ್ನಡಿಗನಿಗೆ ಇದು ಅಸ್ತಿತ್ವದ, ಸ್ವಾಭಿಮಾನದ ಪ್ರಶ್ನೆ. ಬಾಲ್ಟಿಮೋರ್‌ ಸಮ್ಮೇಳನದ ಅಂಗಳದಲ್ಲೊಂದೇ ಅಲ್ಲ ಶಿವಮೊಗ್ಗ, ಬೆಳಗಾವಿಯಲ್ಲಿ ನಡೆಯಲಿರುವ ಕನ್ನಡ ಸಮ್ಮೇಳನಗಳ ಜಗುಲಿಯಲ್ಲಿ ಆವರಿಸಿಕೊಂಡಿರುವ ಪ್ರಶ್ನೆಯೂ ಇದೇ. ಪ್ರತಿ ಕನ್ನಡಿಗ ತನಗೆ ಕೇಳಿಕೊಳ್ಳಬೇಕಾದ ಪ್ರಶ್ನೆಯೂ ಹೌದು.

ಈಗ ಅಮೆರಿಕನ್ನಡಿಗರು ಏನಂತಾರೆ ಕೇಳೋಣ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X