ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ಯೋಜನೆಯಲ್ಲೂ ಭ್ರಷ್ಟಾಚಾರದ ನೀರಾವರಿ, ಕಮಿಷನ್‌ ಹೊಳೆ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಕಿತ್ತೂರು ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ ದಾಟಿದ ಬಳಿಕ ಉಗಾರ ಖುರ್ದ್‌ ತನಕ ನೀರನ್ನು ಸೀಳಿಕೊಂಡು ಹೋಗುತ್ತಿದೆಯೇನೋ ಎಂದೆನಿಸುತ್ತಿತ್ತು. ಒಂದೇ ಸಮನೆ ಸುರಿವ ಮಳೆ, ಇಕ್ಕೆಲಗಳಲ್ಲಿ ನಿಂತ ಕಂಠಮಟ್ಟ ನೀರು, ಎಲ್ಲೆಡೆ ಕಂಗೊಳಿಸುವ ಹಸಿರು ರಾಚು. ಅಲ್ಲಲ್ಲಿ ಗದ್ದೆಗಳಲ್ಲಿ ಕೆಲಸ ಮಾಡುವ ಆಳುಕಾಳುಗಳು, ಮಾರು ಮಾರಿಗೆ ಅಮಲೇರಿದಂತೆ ಹರಿಯುವ ನೀರು, ಝರಿಗಳಾದ ಕಾಲುವೆ ಮೀರು... ಇಡೀ ಪರಿಸರ ಅತಿಯಾದ ಮಳೆಗಾಲಕ್ಕೆ ತೆರೆದುಕೊಂಡ ದೀರ್ಘ ಮುನ್ನುಡಿಯಂತಿತ್ತು. ಕೊಯ್ನಾ ಅಣೆಕಟ್ಟಿನಲ್ಲಿ ನೀರು ಬಿಟ್ಟರೆ ಅಥಣಿಯಲ್ಲೆಲ್ಲಾ ಚಳಿಜ್ವರ. ಅಥಣಿ, ರಾಯಭಾಗದಲ್ಲಿ ಮಳೆಯಾಗಬೇಕೆಂದಿಲ್ಲ. ಕೊಯ್ನಾ ನೀರು ಬಂದರೆ ನೂರಾರು ಗ್ರಾಮಗಳು ಹಣತೆಯಂತೆ ತೇಲತೊಡಗುತ್ತವೆ.

ಮೊನ್ನೆ ರಾತ್ರಿ ಅಥಣಿಯಿಂದ ಬೆಳಗಾವಿಗೆ ಬರುವಾಗ ನೋಡನೋಡುತ್ತಿದ್ದಂತೆ ನೀರು ಟಾರುರೋಡು ಹತ್ತಿ ಮತ್ತೊಂದು ಮಗ್ಗುಲನ್ನು ದಾಟಿ ಹರಿಯುತ್ತಿದ್ದಂತೆ ರಸ್ತೆಯ ಮತ್ತೊಂದು ಮಗ್ಗುಲಿನಲ್ಲಿ ಮಲಗಿದ್ದ ಮನೆಗಳಲ್ಲಿ ಧಾವಂತ ಟಿಸಿಲೊಡೆಯುತ್ತಿತ್ತು. ಅಥಣಿಯ ಸಪ್ತಸಾಗರ, ತೀರ್ಥ, ಮಂಗಾವತಿ, ಜುಗುಳ ಗ್ರಾಮಗಳ ಜನರ ಗೋಳು ಹೇಳತೀರದು. ಸುಮಾರು 20-25 ಗ್ರಾಮಗಳು ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿವೆ. ದೋಣಿ ಬಳಸಿ ಹೋಗಬೇಕಾದ ಪರಿಸ್ಥಿತಿ. ಬದುಕು ಕಂಡುಕೊಂಡ ಮನೆಯಾಳಗೆ ನೀರು ಬಂದು ಕುಳಿತಿದೆ. ಯಾವುದೇ ಕ್ಷಣದಲ್ಲಿ ಮನೆಯ ನೆತ್ತಿಯ ಕೋಳು ಕುಸಿದು ಹೋಗಬಹುದೆಂಬ ಭಯ!

ನೆಗಸು (ಪ್ರವಾಹ) ಸೃಷ್ಟಿಸುವ ಭಯ ಅಂತಿಥದ್ದಲ್ಲ. ಸದಾ ತೂಗುಗತ್ತಿ ನೇತಾಡುತ್ತಿರುವಂತೆ ಭಾಸವಾಗುವ ಈ ಬೆದರಿಕೆ ಎಂಥವನ ಗುಂಡಿಗೆಯಲ್ಲೂ ನಡುಕ ಹುಟ್ಟಿಸಬಲ್ಲುದು. ಯಾವ ಕ್ಷಣದಲ್ಲೂ ಪ್ರವಾಹ ಕಳ್ಳಹೆಜ್ಜೆ ಹಾಕಿ ಒಳಗೆ ನಡೆದು ಬಂದುಬಿಡಬಹುದು. ಜೀವನವಿಡೀ ಕಟ್ಟಿದ ಮನೆ ಕಣ್ಣ ಮುಂದೆಯೇ ನೆಲಕಚ್ಚುವುದಿದೆಯಲ್ಲ, ಅದು ಜೀವ ಹಿಂಡುವ ಯಾತನೆ. ಅಥಣಿ, ರಾಯಭಾಗ, ಗೋಕಾಕ, ದೇವಲ ಗಾಣಗಾಪುರ, ಚಿಕ್ಕೋಡಿ ಮುಂತಾದೆಡೆ ನೂರಾರು ಗ್ರಾಮಗಳ ಜನರ ಕಣ್ಣೀರ ಕತೆ ಮತ್ತೊಂದು ಕೋಡಿಯಾಗಿ ಹರಿದೀತು.

ಬೆಂಗಳೂರಲ್ಲಿ ಕುಳಿತವರಿಗೆ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಆಸೀನರಾಗಿರುವವರಿಗೆ ನೀರಲ್ಲಿ ಮುಳುಗಿದ ಗ್ರಾಮಸ್ಥರ ಆರ್ತನಾದ ಕೇಳುವುದಿಲ್ಲ. ಗಂಜಿ ಕೇಂದ್ರದಲ್ಲಿ ದಿನ ದೂಡುವುದರ ಗುಲಗಂಜಿ ಕಷ್ಟದ ಅನುಭವವೂ ಆಗುವುದಿಲ್ಲ. ಹಿಂದಿನ ವರ್ಷದ ಪ್ರವಾಹದಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಇನ್ನೂ ತನಕ ಸಿಕ್ಕಿಲ್ಲ. ಮಳೆ ನೀರು ಪ್ರವಾಹವಾಗಿ ದುಪಳಿಯೆಬ್ಬಿಸಿ ಹೋದ ಬಳಿಕ ರೈತರ ಸಂಕಷ್ಟಗಳನ್ನು ಕೇಳುವವರ್ಯಾರು? ಪ್ರತಿ ಅನಾವೃಷ್ಟಿಯಂತೆ ಅತಿವೃಷ್ಟಿಯೂ ಹಣ ಕೊಳ್ಳೆ ಹೊಡೆಯುವ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಶ್ರಾವಣಮಾಸ!

ಬೆಳಗಾವಿ ಜಿಲ್ಲೆಯ ಯಾವುದೇ ಪ್ರದೇಶಕ್ಕೆ ಹೋದರೂ, ನೀರು, ನೀರು ಹಾಗೂ ನೀರು. ಮನಸ್ಸೆಲ್ಲ ಜಲಮಯ. ಕಣ್ಣ ಗುಡ್ಡೆಗಳೆರಡು ನೀರಲ್ಲಿ ತೇಲುತ್ತಿರುವ ಅನುಭವ. ಬೆಂಗಳೂರಿಗೆ ವಾಪಸು ಬಂದ ನಂತರವೂ ಮನಸ್ಸು ಜಲಾವೃತ. ಸುಮ್ಮನೆ ಕುಳಿತು ಕರ್ನಾಟಕದ ನೀರಾವರಿ ಯೋಜನೆಗಳ ವಿವರಣೆಗಳನ್ನೆಲ್ಲ ಕಟ್ಟೆ ಹಾಕಿಕೊಂಡು, ಅದರೊಳಗೆ ಗಮನವನ್ನೆಲ್ಲ ತೇಲಿಸಿಕೊಂಡು ಹಾಯಿದೋಣಿಯಲ್ಲಿ ಹೊರಟರೆ, ಕರ್ಮಕಾಂಡಗಳ ತೆರೆಗಳು ಹೊಡೆಯುತ್ತಿದ್ದವು.

ನೆಲ, ಜಲದ ಪ್ರಶ್ನೆ ಬಂದಾಗ ನಮ್ಮ ರಾಜಕಾರಣಿಗಳು ಹೇಗೆ ವರ್ತಿಸುತ್ತಾರೆಂಬುದು ನಮಗೆ ಗೊತ್ತಿದೆ. ‘ನಮ್ಮ ಪಾಲಿನ ಒಂದು ಹನಿಯನ್ನೂ ಬಿಟ್ಟುಕೊಡುವುದಿಲ್ಲ’ ಎನ್ನುವುದು ಸವಕಲು, ಪಾಚಿಗಟ್ಟಿದ ಮಾತು. ಆದರೆ ನಮ್ಮ ಪಾಲಿನ ನೀರನ್ನು ಎಷ್ಟು ಬಳಸಿಕೊಂಡಿದ್ದೇವೆ ಎಂಬ ಪ್ರಶ್ನೆ ತೇಲಿಬಿಟ್ಟರೆ ನಮ್ಮ ಬಂಡವಾಳವೇನೆಂಬುದು ಗೊತ್ತಾಗುತ್ತದೆ. ನೀರಾವರಿ ಪ್ರಶ್ನೆ ಎದುರಾದಾಗ ಎರಡು ಸಂಗತಿಗಳು ಮುಖ್ಯವಾಗುತ್ತವೆ. ನೀರಿನ ಹಕ್ಕನ್ನು ಪ್ರತಿಪಾದಿಸಿ ನಮ್ಮ ಪಾಲಿನ ನ್ಯಾಯಸಮ್ಮತ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವುದು ಹಾಗೂ ಅಣೆಕಟ್ಟು, ಕಾಲುವೆಗಳನ್ನು ನಿರ್ಮಿಸಿ ರೈತರ ಹೊಲಗಳಿಗೆ ನೀರನ್ನು ತಲುಪಿಸುವುದು. ಆದರೆ ಕಳೆದ ಐದು ದಶಕಗಳ ನಮ್ಮ ನೀರಾವರಿ ಯೋಜನೆಗಳನ್ನು ಗಮನಿಸಿದರೆ ಕಣ್ಣಿಗೆ ಹೊಡೆಯುವುದು ಭ್ರಷ್ಟಾಚಾರ. ಜಡತ್ವ, ಕಿಲುಬು ಹಿಡಿದ ವ್ಯವಸ್ಥೆ, ಹೊಲಸು ರಾಜಕೀಯ ಹಾಗೂ ಆಯಾ ಕಾಲದಲ್ಲಿ ಅಧಿಕಾರದಲ್ಲಿದ್ದವರ ಹೊಣೆಗೇಡಿತನ.

ಯಾರ್ಯಾರು ನಮ್ಮ ರಾಜ್ಯದ ನೀರಾವರಿ ಮಂತ್ರಿಗಳು ಆಗಿದ್ದಾರೆ ನೋಡಿ. ಟಿ.ಮರಿಯಪ್ಪ, ಎಚ್‌.ಎಂ.ಚನ್ನಬಸಪ್ಪ, ವೀರೇಂದ್ರ ಪಾಟೀಲ, ನಂಜೇಗೌಡ, ದೇವೇಗೌಡ, ಮಲ್ಲಾರಿಗೌಡ ಪಾಟೀಲ, ಕೆ.ಎನ್‌.ನಾಗೇಗೌಡ, ಎಸ್‌.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಎಚ್‌.ಕೆ.ಪಾಟೀಲ ಹಾಗೂ ಈಗ ಕೆ.ಎಸ್‌.ಈಶ್ವರಪ್ಪ. ಎಲ್ಲರೂ ಘಟಾನುಘಟಿಗಳೇ. ಈ ಪೈಕಿ ಒಬ್ಬರು ಪ್ರಧಾನಿಯಾದವರು. ಮೂವರು ಮುಖ್ಯಮಂತ್ರಿಗಳಾದವರು. ಅನುಭವಿ ಮತ್ತು ರಾಜಕೀಯವಾಗಿ ಬಲಿಷ್ಠರಾದವರೇ ಈ ಖಾತೆಗೆ ಮಂತ್ರಿಯಾಗೋದು ನಮ್ಮ ರಾಜ್ಯದ ಪರಂಪರೆ. ಆದರೆ ನೀರಾವರಿ ಯೋಜನೆಗಳಿಗೆ ಮಾತ್ರ ಸದಾ ಬ್ರಹ್ಮಕಪಾಲ. ಪ್ರತಿ ಯೋಜನೆಯಲ್ಲೂ ಭ್ರಷ್ಟಾಚಾರದ ನೀರಾವರಿ. ಕಮಿಷನ್‌ ಹೊಳೆ. ಮಂತ್ರಿ-ಎಂಜಿನಿಯರ್‌-ಕಂಟ್ರಾಕ್ಟರ್‌ ನಡುವೆ ಅಪವಿತ್ರ ಮೈತ್ರಿ.

1959ರಲ್ಲಿ ಕಬಿನಿ ನೀರಾವರಿ ಯೋಜನೆಯನ್ನೇ ಗಮನಿಸಿ. ಈ ಯೋಜನೆ ಕೈಗೆತ್ತಿಕೊಂಡು ನಲವತ್ತೇಳು ವರ್ಷಗಳಾದವು. ಇದನ್ನು ಆರಂಭಿಸುವಾಗ 3.20 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿತ್ತು. ಈಗಾಗಲೇ ಈ ಯೋಜನೆಗೆ ಸುಮಾರು 478ಕೋಟಿ ರೂ. ಸುರಿಯಲಾಗಿದೆ. ಇನ್ನೂ 25 ಕೋಟಿ ರೂ. ಬೇಕಾಗಬಹುದೆಂದು ಅಂದಾಜು ಮಾಡಲಾಗಿದೆ. ಪ್ರತಿ ವರ್ಷ ನೀರಾವರಿ ಇಲಾಖೆ ಕಡತದಲ್ಲಿ ‘ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಷರಾ ಬರೆಯಲಾಗುತ್ತಿದೆಯೇ ಹೊರತು, ಯೋಜನೆ ಮಾತ್ರ ಪೂರ್ಣವಾಗುತ್ತಿಲ್ಲ. ಇಂಥ ಸಣ್ಣ ಯೋಜನೆಯನ್ನೇ ಮುಗಿಸಲು ಆಗುತ್ತಿಲ್ಲವೆಂದರೆ ಇಡೀ ಇಲಾಖೆಯಲ್ಲಿ ಅದೆಂಥ ಭ್ರಷ್ಟಾಚಾರ, ಜಿಡ್ಡುಗಟ್ಟಿದ ವ್ಯವಸ್ಥೆ ಆವರಿಸಿಕೊಂಡಿರಬಹುದು ಊಹಿಸಿ.

ಮಲಪ್ರಭಾ ನೀರಾವರಿ ಯೋಜನೆಯದೂ ಇದೇ ಕತೆ. ಇದು ಆರಂಭವಾಗಿದ್ದು 1960ರಲ್ಲಿ. ಆಗ ಈ ಯೋಜನೆಗೆ 162ಕೋಟಿ ರೂ. ವೆಚ್ಚವಾಗಬಹುದೆಂದು ಲೆಕ್ಕ ಹಾಕಲಾಗಿತ್ತು. ಈಗಾಗಲೇ ಇದಕ್ಕೆ 825 ಕೋಟಿ ರೂ. ಸುರಿಯಲಾಗಿದೆ. ಯೋಜನೆ ಪೂರ್ತಿಯಾಗುವ ಹೊತ್ತಿಗೆ ಇನ್ನೂ 110 ಕೋಟಿ ರೂ. ಬೇಕಾಗಬಹುದೆಂದು ಹೇಳುತ್ತಿದ್ದಾರೆ. ಕಡತದಲ್ಲಿ ‘ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂಬ ಷರಾ ಕಾಣುತ್ತಿದೆ, ಕಳೆದ 46ವರ್ಷಗಳಿಂದ. ನವಲಗುಂದ, ನರಗುಂದಕ್ಕೆ ನೀರು ಕಲ್ಪಿಸುವ ಮಲಪ್ರಭಾ ಎಡದಂಡೆ, ಬಲದಂಡೆ ಯೋಜನೆ ಕಾಮಗಾರಿ ಅದ್ಯಾವಾಗ ಮುಗಿಯುವುದೋ ಆ ದೇವನೇ ಬಲ್ಲ. ಆದರೆ ನೀರಾವರಿ ಇಲಾಖೆ ನೀರು ಕೊಡದಿದ್ದರೂ ಟ್ಯಾಕ್ಸ್‌ ಕೊಡಿ ಎಂದು ರೈತರನ್ನು ಬೆದರಿಸುವುದನ್ನು ನಿಲ್ಲಿಸುವುದಿಲ್ಲ.

ಕಾವೇರಿ ನದಿಗೆ ಹೊಂದಿಕೊಂಡಂತೆ ಕೈಗೆತ್ತಿಕೊಂಡಿರುವ ದೇವರಾಜ ಅರಸು(ವರುಣಾನಾಲೆ)ನಾಲೆ, ಉಡುತೊರೆಹಳ್ಳ, ಮಂಚನ ಬೆಲೆ, ಚಿಕ್ಲಿಹೊಳೆ, ವಾಟೆಹೊಳೆ, ಕಬಿನಿ, ಅರ್ಕಾವತಿ, ಇಗ್ಗಲೂರು, ಹುಚ್ಚನಕೊಪ್ಪಲು ಏತನೀರಾವರಿ, ಕಾಮಸಮುದ್ರ ಮೊದಲ ಹಾಗೂ ಎರಡನೆ ಬಂ. ನಂಜಾಪುರ ಏತನೀರಾವರಿ-ಈ ಯೋಜನೆಗಳ ಪೈಕಿ ಒಂದೇ ಒಂದು ಸಹ ಸಂಪೂರ್ಣ ಪೂರ್ಣಗೊಂಡಿಲ್ಲ.

ನಂಜಾಪುರ ಹಾಗೂ ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆಗಳನ್ನು ಬಿಟ್ಟರೆ ಉಳಿದೆಲ್ಲವುಗಳೂ ಸುಮಾರು 3-35 ವರ್ಷಗಳ ಹಿಂದೆ ಆರಂಭವಾದವುಗಳು. ಇವೆರಡು ಮಾತ್ರ ತೊಂಬತ್ತರ ದಶಕದಲ್ಲಿ ಕೈಗೆತ್ತಿಕೊಂಡಿತ್ತು. ಈ ಯೋಜನೆಗಳೆಲ್ಲ ಆರಂಭವಾದಾಗ ಎಷ್ಟು ಹಣ ಬೇಕಾಗಬಹುದೆಂದು ಅಂದಾಜು ಮಾಡಲಾಗಿತ್ತೋ, ಅದರ ಹತ್ತುಹದಿನೈದು ಪಟ್ಟು ದುಡ್ಡಿ ಸುರಿದಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ಅಂದ್ರೆ ಏನರ್ಥ? ಉಡುತೊರೆಹಳ್ಳ ಯೋಜನೆಯನ್ನೇ ತೆಗೆದುಕೊಳ್ಳಿ. ಏಳೂವರೆ ಕೋಟಿ ರೂ. ಬೇಕಾಗಬಹುದೆಂದು 1978ರಲ್ಲಿ ಅಂದಾಜು ಮಾಡಲಾಗಿತ್ತು. ಇಲ್ಲಿಯತನಕ 176 ಕೋಟಿ ರೂ.ಖರ್ಚು ಮಾಡಲಾಗಿದೆ. ಯೋಜನೆ ಮುಗಿಸಲು ಇನ್ನೂ 30ಕೋಟಿ ರೂ. ಬೇಕಂತೆ. ಏಳು ಕೋಟಿ ರೂ. ಎಲ್ಲಿ? 210 ಕೋಟಿ ರೂ. ಎಲ್ಲಿ? ಸುಮಾರು 30ಪಟ್ಟು ಜಾಸ್ತಿ ಹಣ ಸುರಿದರೂ ಕಾಮಗಾರಿ ಮಾತ್ರ ಪೂರ್ತಿಯಾಗಿಲ್ಲ.

ಕರ್ನಾಟಕ ನೀರಾವರಿ ನಿಗಮದಡಿಯಲ್ಲಿನ ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಗಂಡೋರಿನಾಲಾ, ಮುಲ್ಲಾಮಾರಿ ಕೆಳದಂಡೆ, ಇಟಕಿ-ಸಾಸಲ್‌ವಾಡ ಏತ ನೀರಾವರಿ, ಬಸಾಪುರ ಏತ ನೀರಾವರಿ ಹಾಗೂ ಬೆಣ್ಣೆತೊರಾ ಯೋಜನೆಗಳ ಪೈಕಿ ಪೂರ್ಣವಾಗಿರುವುದು ಕೊನೆಯದು ಮಾತ್ರ. ಹಿಂದಿನ ತಿಂಗಳು 17ರಂದು ಬೆಣ್ಣೆತೊರಾ ಉದ್ಘಾಟನೆಗೊಂಡಿತು. ಅದು ಪೂರ್ಣವಾಗಲು 33 ವರ್ಷಗಳು ಬೇಕಾದವು! ಈ ಯೋಜನೆಗೆ 82 ಕೋಟಿ ರೂ. ಎಂದು ಆರಂಭದಲ್ಲಿ ಲೆಕ್ಕ ಹಾಕಿದ್ದರು. ಪೂರ್ತಿಯಾದಾಗ 315 ಕೋಟಿ ರೂ. ಕೈಬಿಟ್ಟಿತ್ತು.

ಕೃಷ್ಣಾ ಭಾಗ್ಯ ಜಲ ನಿಗಮದ ಯೋಜನೆಗಳ ಕತೆಯೂ ಇದೇ. ಜೇವರ್ಗಿ ಶಾಖಾ ಕಾಲುವೆ, ನಾರಾಯಣಪುರ ಬಲದಂಡೆ ಕಾಲುವೆ, ಆಲಮಟ್ಟಿ ಬಲದಂಡೆ, ಎಡದಂಡೆ ಕಾಲುವೆ, ಮುಳವಾಡ ಏತ ನೀರಾವರಿ ಅದ್ಯಾವಾಗ ಮುಗಿಯುತ್ತೋ ಯಾರಿಗೂ ಗೊತ್ತಿಲ್ಲ. ತುಂಗಾ ಮೇಲ್ದಂಡೆ ಯೋಜನೆಯ ಅಂಜನಾಪುರ, ಅಂಬ್ಲಿಗೊಳ, ಮುನಿರಾಬಾದ್‌ ನೀರಾವರಿ ಕೇಂದ್ರ ವಲಯದಡಿಯಲ್ಲಿನ ಹಿರೇಹಳ್ಳಿ, ಮಸ್ಕಿನಾಲಾ, ಕೋಳೂರು ಏತ, ರಾರಾವಿ, ಹಗರಿ ಕೆಳದಂಡೆ, ಕಾತರ್ಕಿ, ಟಿ.ಎಸ್‌.ಕಡ್ಲೂರು, ಬಾಯಲ್‌ ಮರ್ಚಡ್‌, ಕಾರಂಜಾ ಮುಂತಾದ ಯೋಜನೆಗಳು ಮುಗಿಯುವುದೆಂದು ಯಾರು ಹೇಳಲಾರರು. ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ(ಯುಕೆಪಿ) ಕಡತ ಬೇರೆ ಅಲ್ಲ, ಭ್ರಷ್ಟಾಚಾರದ ಕೂಪ ಬೇರೆ ಅಲ್ಲ.

ಈ ಯೋಜನೆಯಲ್ಲಿ ಕೆಲಸ ಮಾಡಿದ ಎಂಜಿನಿಯರ್‌ಗಳೆಲ್ಲ ಏಳೇಳು ಜನ್ಮಕ್ಕೆ ಉದ್ಧಾರವಾಗಿ ಹೋದರೆಂಬ ಮಾತು, ಜನಸಾಮಾನ್ಯರಲ್ಲಿ ಅಲ್ಲ, ನೀರಾವರಿ ಇಲಾಖೆಯಲ್ಲಿಯೇ ಚಾಲ್ತಿಯಲ್ಲಿದೆ. ಯುಕೆಪಿಗೆ ವರ್ಗ ಮಾಡಿಸಿಕೊಳ್ಳಲು ಎಂಜಿನಿಯರ್‌ಗಳು ಭಾರಿ ಪ್ರಭಾವ ಬೀರಿ ಹಣ ನೀಡುತ್ತಿದ್ದುದು ಜನಜನಿತ. ನೀರಾವರಿ ಇಲಾಖೆಯ ಯೋಜನೆಗಳಲ್ಲಿ ನಡೆದಷ್ಟು ಕರ್ಮಕಾಂಡಗಳು ಬೇರೆಲ್ಲೂ ಆಗಿರಲಿಕ್ಕಿಲ್ಲ. ಕೆಲವೇ ಭ್ರಷ್ಟ ಎಂಜಿನಿಯರ್‌ಗಳು ಸಸ್ಟೆಂಡ್‌ ಆಗಿರಬಹುದು. ಆದರೆ ಯಾರದ್ದೂ ಕೆಲಸ ಹೋಗಿಲ್ಲ. ಶಿಕ್ಷೆಯಾಗಿಲ್ಲ.

ರಾಜ್ಯದಲ್ಲಿ ಈಗಾಗಲೇ 42 ನೀರಾವರಿ ಯೋಜನೆಗಳು ಮುಗಿದಿವೆ. 52 ಜಾರಿಯಲ್ಲಿವೆ. 22 ಹೊಸ ಯೋಜನೆಗಳನ್ನು ಆರಂಭಿಸಲಾಗಿದೆ. ಕಳೆದ 55 ವರ್ಷಗಳಲ್ಲಿ ನೀರಾವರಿಗಾಗಿ 24.272 ಕೋಟಿ ರೂ. ವ್ಯಯಿಸಲಾಗಿದೆ. ಈಗ ಅಪೂರ್ಣವಾಗಿರುವ ಸುಮಾರು 39ಯೋಜನೆಗಳನ್ನು ಪೂರ್ಣಗೊಳಿಸಲು ಏನಿಲ್ಲವೆಂದರೂ ಎರಡು ಸಾವಿರ ಕೋಟಿ ರೂ.ಗಳಾದರೂ ಬೇಕು. ಇದು ನೀರಾವರಿಯೋ, ಹಣ ನೀರಾವರಿಯೋ, ಹಣ ಏತ ಯೋಜನೆಯೋ ಗೊತ್ತಿಲ್ಲ. ಯಾವ ನೀರಾವರಿ ಯೋಜನೆಯೂ ಕಳಪೆ ಕಾಮಗಾರಿಯಿಂದ ಹೊರತಾಗಿಲ್ಲ. ಕಾಲುವೆ ಬಿರುಕು ಬಿಡುವುದು, ಒಡೆದು ಹೋಗುವುದು, ಡ್ಯಾಮಿನ ಗೇಟು ಕಿಟ್ಟುಹೋಗುವುದು ಸಾಮಾನ್ಯ.

ಅದೆಷ್ಟೇ ವರ್ಷಗಳಿಂದ ಸಾವಿರ ಸಾವಿರ ಕೋಟಿ ರೂ. ಕೊಳ್ಳೆಯಾದರೂ ಯಾರು ಚಕಾರವೆತ್ತುತ್ತಿಲ್ಲ. ಇದು ನೀರಿನಲ್ಲಿ ನಡೆಯುತ್ತಿರುವ ನಿತ್ಯ ಹೋಮ. ನೀರು ಹರಿಯುವಷ್ಟು ದಿನ ಹಣವೂ ಹರಿಯುತ್ತಿರುತ್ತದೆ ಬಿಡಿ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X