ಬಿಜೆಪಿ ಕಾರ್ಯಕಾರಣಿ ಸಭೆ: ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ?
ನವದೆಹಲಿ, ನವೆಂಬರ್ 08: ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾನುವಾರ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ನವದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಸಿದ್ದು, ಈ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಈ ಸಭೆಯಲ್ಲಿ ಮುಖ್ಯವಾಗಿ "ಸೇವೆಯೇ ಸಂಘಟನೆ" ಎಂಬ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ. "ಬಿಜೆಪಿ ಕಾರ್ಯಕರ್ತರು ಸಾಮಾನ್ಯ ಜನರು ಮತ್ತು ಪಕ್ಷದ ನಡುವೆ ನಂಬಿಕೆಯ ಸೇತುವೆಯಾಗಬೇಕು," ಎಂದು ಹೇಳಿದ ಪ್ರಧಾನಿ ಮೋದಿ ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಭರವಸೆಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ.
ಈ ಸಭೆಗೆ 342 ಮಂದಿ ಹಾಜರು ಆಗಿದ್ದರು. ಕೇಂದ್ರ ಸಚಿವ ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ, ಅನುರಾಗ್ ಠಾಕೂರ್, ಅಶ್ವಿನಿ ವೈಷ್ಣವ್ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಬಿಜೆಪಿಯ ಪ್ರಮುಖ ಹಿರಿಯ ನಾಯಕರುಗಳಾದ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ವರ್ಚುವಲ್ ಆಗಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಉದ್ಘಾಟನೆ ಮಾಡಿದ್ದಾರೆ.
'ಬಿಜೆಪಿ ಕುಟುಂಬದ ಸುತ್ತ ಸುತ್ತುವ ಪಕ್ಷವಲ್ಲ': ಕಾಂಗ್ರೆಸ್ಗೆ ಮೋದಿ ಟಾಂಗ್
ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ 2020 ರ ಮಾರ್ಚ್ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿಯು ವರ್ಚುವಲ್ ಅಲ್ಲದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ನಡೆಸಿದೆ. ಮುಂದಿನ ವರ್ಷ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ, ಆ ಬಳಿಕ 2024 ರಲ್ಲಿ ಲೋಕ ಸಭೆ ಚುನಾವಣೆಯು ನಡೆಯಲಿರುವ ನಡುವೆ ಬಿಜೆಪಿಯು ನಡೆಸಿರುವ ಈ ಕಾರ್ಯಕಾರಣಿ ಸಭೆಯು ಮಹತ್ವವನ್ನು ಪಡೆದಿದೆ. ಇನ್ನು ಈ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಕೀಯ ನಿರ್ಣಯವನ್ನು ಮಂಡನೆ ಮಾಡಿದ್ದಾರೆ. ಈ ನಿರ್ಣಯಕ್ಕೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅನುಮೋದನೆ ನೀಡಿದ್ದಾರೆ. ಈ ನಿರ್ಣಯವು ಪ್ರಮುಖ 18 ವಿಷಯಗಳನ್ನು ಒಳಗೊಂಡಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಡನೆ ಮಾಡಿದ ನಿರ್ಣಯವು ಸಭೆಯಲ್ಲಿ ಅಂಗೀಕಾರಗೊಂಡಿದೆ ಎಂದು ಹೇಳಿದ್ದಾರೆ. ಈ ಸಭಯಲ್ಲಿ ಪ್ರಮುಖವಾಗಿ ಯಾವ ವಿಚಾರ ಚರ್ಚೆ ನಡೆದಿದೆ ಎಂದು ತಿಳಿಯಲು ಮುಂದೆ ಓದಿ.

ರೈತರ ಪ್ರತಿಭಟನೆಯ ಬಗ್ಗೆ ಪ್ರಮುಖ ಚರ್ಚೆ
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಕಳೆದ ಹಲವಾರು ತಿಂಗಳುಗಳಿಂದ ರೈತರು ದೆಹಲಿಯ ಗಡಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಹಾಗೆಯೇ ಹಲವಾರು ರಾಜ್ಯಗಳಲ್ಲಿಯೂ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡಬೇಕು ಎಂಬುವುದು ರೈತರ ಆಗ್ರಹವಾಗಿದೆ. ಈ ರೈತರ ಪ್ರತಿಭಟನೆಯು ಮುಂದಿನ ವರ್ಷ ಪಂಚ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಅಧಿಕವಾಗಿರುವ ಹಿನ್ನೆಲೆಯಿಂದಾಗಿ ಬಿಜೆಪಿಯು ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ರೈತರ ಪ್ರತಿಭಟನೆ ಬಗ್ಗೆ ಚರ್ಚೆ ನಡೆಸಿದೆ. ರೈತರ ಮನವೊಲಿಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ 1.53 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಕನಿಷ್ಟ ಬೆಂಬಲ ಬೆಲೆಯೂ ಕೂಡಾ 1.5 ಪಟ್ಟು ಹೆಚ್ಚಳ ಮಾಡಲಾಗಿದೆ. ಕಿಸಾನ್ ಡೆಬಿಟ್ ಕಾರ್ಡ್‌ಗಳನ್ನು ಹಂಚಲಾಗಿದೆ ಎಂಬ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಇನ್ನು ಈ ಸಭೆಯು ನಡೆದ ಬಳಿಕ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, "ನಾವು ಈ ಕೃಷಿ ಕಾಯ್ದೆ ವಿಚಾರದಲ್ಲಿ ಮಾತುಕತೆಗೆ ಸಿದ್ಧವಾಗಿದ್ದೇವೆ. ಈ ಕೃಷಿ ಕಾಯ್ದೆಯಲ್ಲಿ ನೀವು ಯಾವ ವಿಚಾರವನ್ನು ವಿರೋಧ ಮಾಡುತ್ತೀರಿ ಎಂದು ಹೇಳಿ. ಈ ಕಾಯ್ದೆಯಲ್ಲಿ ಯಾವ ತೊಂದರೆ ಇದೆ, ರೈತರು ವಿರೋಧ ಮಾಡುವುದು ಏಕೆ ಎಂಬ ಬಗ್ಗೆ ನಮಗೆ ಸರಿಯಾಗಿ ಮಾಹಿತಿಯೇ ನೀಡಿಲ್ಲ. ಈ ಕಥೆಯು ಈಗ ಅಪೂರ್ಣವಾಗಿದೆ. ನಾವು ಈಗಲೂ ರೈತರ ಮಾತನ್ನು ಕೇಳಲು ಸಿದ್ಧವಾಗಿದ್ದೇವೆ," ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ತಂತ್ರಗಾರಿಕೆ
ಈ ಬಿಜೆಪಿ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಬೂತ್ ಮಟ್ಟದಲ್ಲಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಹಾಗೆಯೇ ಇತ್ತೀಚೆಗೆ ನಡೆದ ಕೇರಳ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣೆಯ ಬಗ್ಗೆಯೂ ಅವಲೋಕನ ಮಾಡಲಾಗಿದೆ. ಕೇರಳ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಹಾಗೆಯೇ ಇತ್ತೀಚೆಗೆ ನಡೆದ ಉಪಚುನಾವಣೆಯ ಬಗ್ಗೆಯೂ ಚರ್ಚೆ ನಡೆದಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಪಂಜಾಬ್‌ನಲ್ಲಿ ಹೆಚ್ಚಾಗಿ ಇರುವ ಸಿಖ್ ಸಮುದಾಯದ ಜನರಿಗೆ ಕೇಂದ್ರ ಸರ್ಕಾರ ಮಾಡಿರುವ ಕಾರ್ಯಗಳನ್ನು ಉಲ್ಲೇಖ ಮಾಡಿದ್ದಾರೆ. 1984 ರ ದಂಗೆಗಳ ಆರೋಪಿಗಳ ವಿರುದ್ಧ ತ್ವರಿತ ಕ್ರಮ, ಗುರುದ್ವಾರಗಳಿಗೆ ವಿದೇಶಿ ಅನುದಾನವನ್ನು ಒದಗಿಸುವುದು ಸೇರಿದಂತೆ ಸಮುದಾಯಕ್ಕಾಗಿ ಮೋದಿ ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳನ್ನು ಪಟ್ಟಿ ಮಾಡಿದ್ದಾರೆ. ಸಿಖ್ಖರ ಸಮುದಾಯ ಭೋಜನಾಲಯವಾದ ಲಂಗರ್ ಅನ್ನು ಸರಕು ಮತ್ತು ಸೇವಾ ತೆರಿಗೆಯ ವ್ಯಾಪ್ತಿಯ ಹೊರಗೆ ಇರಿಸಲಾಗಿರುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಹಾಗೆಯೇ ಮುಂದಿನ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಎಲ್ಲಾ ಚುನಾವಣೆಯಲ್ಲಿಯೂ ಬಿಜೆಪಿ ಸ್ಪರ್ಧಿಸಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇನ್ನು ಮುಂದಿನ ಚುನಾವಣೆಯಲ್ಲಿ ಪ್ರಸ್ತುತ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆದಿದೆ.
'ಪ್ರಧಾನಿ ಭಾರತದ ಘನತೆ ಹೆಚ್ಚಿಸುವ ಕಾರ್ಯ ಮಾಡುವಾಗ, ವಿಪಕ್ಷ ದೇಶಕ್ಕೆ ಕಳಂಕ ತರುತ್ತಿದೆ'

ಕೋವಿಡ್, ಕೊರೊನಾ ಲಸಿಕೆಯ ಬಗ್ಗೆ ಚರ್ಚೆ
ಇನ್ನು ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಸರ್ಕಾರವು ಕೈಗೊಂಡ ಕ್ರಮಗಳ ಬಗ್ಗೆಯೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಭಾರತದ ಕೊರೊನಾ ಲಸಿಕೆ ಅಭಿಯಾನವನ್ನು ವಿಶ್ವದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಹೊಗಳಲಾಗುತ್ತಿದೆ. ಆದರೆ ಭಾರತದ ವಿರೋಧ ಪಕ್ಷಗಳು ಮಾತ್ರ ಕೊರೊನಾ ಲಸಿಕೆ ವಿಚಾರದಲ್ಲಿ ಪ್ರಶ್ನೆ ಎತ್ತುತ್ತಿದೆ ಎಂದು ಬಿಜೆಪಿಯ ರಾಜಕೀಯ ನಿರ್ಣಯದಲ್ಲಿ ಪ್ರಸ್ತಾಪ ಮಾಡಲಾಗಿದೆ. ನೂರು ಕೋಟಿಗೂ ಅಧಿಗೆ ದೇಶದಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗಿರುವ ಹಿನ್ನೆಲೆ ಸರ್ಕಾರವನ್ನು ಬಿಜೆಪಿ ಶ್ಲಾಘಿಸಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಎಂಟು ತಿಂಗಳುಗಳ ಕಾಲ ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಉಚಿತ ಆಹಾರ ಒದಗಿಸಿದೆ ಎಂದು ಪ್ರಸ್ತಾಪ ಮಾಡಲಾಗಿದೆ. ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲೇ ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತಾರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ಬಳಿಕ ನವೆಂಬರ್, ಡಿಸೆಂಬರ್‌ನಲ್ಲಿ ಹಿಮಾಚಲ ಪ್ರದೇಶ, ಗುಜರಾತ್‌ನಲ್ಲಿ ಚುನಾವಣೆ ನಡೆಯಲಿದೆ. ಈ ಬಗ್ಗೆ ಚರ್ಚೆ ನಡೆಸಲಾಗಿದೆ.

ಹವಾಮಾನ ಬದಲಾವಣೆಯಿಂದ ಉಂಟಾದ ಪರಿಣಾಮ
ಇನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ದೇಶದಲ್ಲಿನ ಹವಾಮಾನ ಬದಲಾವಣೆ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ COP26 ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಜಾಗತಿಕ ತಾಪಮಾನ ಏರಿಕೆ ಆಗುವುದನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ತಡೆಯುವ ನಿಟ್ಟಿನಲ್ಲಿ ನೆಟ್ ಜೀರೋ ಗುರಿಯನ್ನು ಭಾರತ ದೇಶವು 2070 ರಲ್ಲಿ ತಲುಪಲಿದೆ," ಎಂದು ಘೋಷಣೆ ಮಾಡಿದ್ದಾರೆ. ಹಾಗೆಯೇ 2030 ರ ವೇಳೆಗೆ ಭಾರತವು ಅಗತ್ಯವಿರುವ ವಿದ್ಯುತ್‌ನಲ್ಲಿ ಶೇಕಡ 50 ರಷ್ಟನ್ನು ನವೀಕರಣ ಮಾಡಲು ಸಾಧ್ಯವಾಗುವ ಮೂಲದಿಂದ ಉತ್ಪಾದನೆ ಮಾಡಲಿದೆ. 2030 ರ ವೇಳೆಗೆ ದೇಶದಲ್ಲಿ 450-500 ಗಿಗಾವ್ಯಾಟ್‌ನಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆ ಮಾಡಲಾಗುವುದು. 2030 ರ ವೇಳೆಗೆ ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೇಕಡ 45 ರಷ್ಟು ಕಡಿಮೆ ಮಾಡಲಾಗುವುದು. 2030 ರ ವೇಳೆಗೆ ದೇಶದಲ್ಲಿ ರೇಲ್ವೆಯ ಇಂಗಾಲದ ಹೊರಸೂಸುವಿಕೆಯನ್ನು ಶೇಕಡ ನೂರರಷ್ಟು ಕಡಿಮೆ ಮಾಡಲಾಗುವುದು. 2030 ರ ವೇಳೆಗೆ ದೇಶದಲ್ಲಿ ವಾರ್ಷಿಕ ಇಂಗಾಲ ಹೊರಸೂಸುವಿಕೆಯನ್ನು ನೂರು ಕೋಟಿ ಟನ್‌ನಷ್ಟು ಕಡಿಮೆ ಮಾಡಲಾಗುವುದು ಎಂದು ಪ್ರಧಾನಿ ಮಖದಿ ಘೋಷಣೆಗಳನ್ನು ಮಾಡಿದ್ದಾರೆ. ಈ ಬಗ್ಗೆಯೂ ಬಿಜೆಪಿ ಸಭೆಯಲ್ಲಿ ಚರ್ಚೆ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಯೋಜನೆಗಳು
ಇನ್ನು ಈ ಸಂದರ್ಭದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರನ್ನು ರದ್ಧು ಮಾಡಿದ ಬಳಿಕ ಸದ್ಯ ಜಮ್ಮು ಕಾಶ್ಮೀರದಲ್ಲಿ ಪ್ರಗತಿಯಲ್ಲಿ ಇರುವ ಯೋಜನೆಗಳ ಬಗ್ಗೆ ಚರ್ಚೆ ನಡೆದಿದೆ. ಬ್ಲಾಕ್ ಅಭಿವೃದ್ಧಿ ಮಂಡಳಿಗಳು ಮತ್ತು ಜಿಲ್ಲಾ ಅಭಿವೃದ್ಧಿ ಮಂಡಳಿಗಳ ಚುನಾವಣೆಗಳ ಬಗ್ಗೆಯೂ ಚರ್ಚೆ ನಡೆದಿದೆ. ಜನರು ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಯಾಗಲು ಮುಂದಾಗುತ್ತಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. "ಜನವರಿ 2021 ರಂದು ಜಮ್ಮು ಮತ್ತು ಕಾಶ್ಮೀರಕ್ಕಾಗಿ ಪ್ರಾರಂಭಿಸಲಾದ ರೂ 28,400 ಕೋಟಿ ಮೌಲ್ಯದ ಉದ್ಯಮ ಉತ್ತೇಜನಾ ಯೋಜನೆಯು ಪ್ರಮುಖ ವಿಚಾರವಾಗಿದೆ. 56,201 ಕೋಟಿ ಮೌಲ್ಯದ 54 ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ. ಇಂದು ಜನೌಷಧಿ ಯೋಜನೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಔಷಧಗಳು ಲಭ್ಯವಾಗುತ್ತಿವೆ. ಅಲ್ಲದೆ, 75,000 ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, "2004 ಮತ್ತು 2014 ರ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ 2,081 ಜನರು ಸಾವನ್ನಪ್ಪಿದ್ದರೆ, 2014 ರಿಂದ ಸೆಪ್ಟೆಂಬರ್ 2021 ರವರೆಗೆ ಕೇವಲ 239 ನಾಗರಿಕರು ಮಾತ್ರ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಶಾಂತಿ ನೆಲೆಸಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ," ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ ಬಳಿಕದ ಹಿಂಸಾಚಾರ
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯ ಬಳಿಕದ ಹಿಂಸಾಚಾರದ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಸೋಲಿಸುವಲ್ಲಿ ವಿಫಲವಾಗಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಹಲವಾರು ಬಿಜೆಪಿ ನಾಯಕರುಗಳು ತೃಣಮೂಲ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಗೆ ತಲೆ ನೋವು ಆರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕಕ ನಡೆದ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯು ಈಗ ಮಮತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಈ ಹಿಂಸಾಚಾರದ ಬಗ್ಗೆಯೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರ ನಡೆದ ಹಿಂಸಾಚಾರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಖಂಡಿಸಿರುವ ನಿರ್ಮಲಾ ಸೀತಾರಾಮನ್, "ಹಿಂಸಾಚಾರದಲ್ಲಿ ಹಾನಿಗೆ ಒಳಗಾದ ಬಿಜೆಪಿ ಕಾರ್ಯಕರ್ತರ ಎಲ್ಲಾ ಕಾನೂನು ಪ್ರಕ್ರಿಯೆಯಲ್ಲಿ ಪಕ್ಷವು ಜೊತೆಯಾಗಿ, ಸಹಾಯವಾಗಿ ನಿಲ್ಲಲಿದೆ. ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರಿಗೆ ಪಕ್ಷವು ಬೆಂಬಲವಾಗಿ ಇರುತ್ತದೆ," ಎಂದು ಭರವಸೆ ನೀಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)