ಟ್ರಾಕ್ಟರ್ ಕಳ್ಳನೊಬ್ಬ ಆರ್‌ಟಿಓ ಅಧಿಕಾರಿಗಳನ್ನೇ ಬೆತ್ತಲು ಮಾಡಿದ !
ಬೆಂಗಳೂರು, ಡಿಸೆಂಬರ್ 29: ಲಂಚ ಕೊಟ್ಟರೆ, ಕದ್ದ ಹಳೇ ಟ್ರಾಕ್ಟರ್ ಗಳನ್ನೇ ಹೊಸ ಟ್ರಾಕ್ಟರ್ ಎಂದು ನೋಂದಣಿ ಮಾಡಿಸಿ ಆರ್‌ಟಿಓ ಅಧಿಕಾರಿಗಳು ಅಸಲಿ ದಾಖಲೆಗಳನ್ನು ಕೊಡುತ್ತಾರೆ ! ಕದ್ದ ಟ್ರಾಕ್ಟರ್ ಗಳನ್ನು ಹೊಸದಾಗಿ ನೋಂದಣಿ ಮಾಡಿಸುವ ಮೂಲಕ ಟ್ರಾಕ್ಟರ್ ಕಳ್ಳನೊಬ್ಬ ಎರಡು ಆರ್‌ಟಿಓ ಕಚೇರಿ ಅಧಿಕಾರಿಗಳ ಅಸಲಿತನವನ್ನು ಬೆತ್ತಲುಗೊಳಿಸಿದ್ದಾನೆ. ವಿಪರ್ಯಾಸವೆಂದರೆ ಒಂದೂವರೆ ಕೋಟಿ ಮೌಲ್ಯದ ಟ್ರಾಕ್ಟರ್ ಗಳನ್ನು ಕದ್ದಿದ್ದ ಕಳ್ಳ ಮತ್ತು ಆತನ ಸಹಚರರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಈ ಭಯಾನಕ ಸಂಗತಿ ಹೊರ ಬಿದ್ದಿದೆ.

ಟ್ರಾಕ್ಟರ್ ಕಳ್ಳ ಜಾಲ ಬಯಲು:
ಸುಂಕದಕಟ್ಟೆಯಲ್ಲಿ ಟ್ರಾಕ್ಟರ್ ಕಳ್ಳತನವಾಗಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ಇತ್ತೀಚೆಗೆ ಬೋರೇಗೌಡ ಎಂಬ ಆರೋಪಿಯನ್ನು ಬಂಧಿಸಿ ಹನ್ನೆರಡು ಟ್ರಾಕ್ಟರ್, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದರು. ಈತ ಕಳ್ಳನಿಂದ ಕದ್ದ ಟ್ರಾಕ್ಟರ್ ಗಳನ್ನು ಖರೀದಿಸಿ ಅವನ್ನು ರೈತರಿಗೆ ಬಾಡಿಗೆಗೆ ನೀಡುತ್ತಿದ್ದ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಇದರ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ಪ್ರಶಾಂತ್ ಮತ್ತು ತಂಡ ಟ್ರಾಕ್ಟರ್ ಕದಿಯುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿ 1.46 ಕೋಟಿ ರೂಪಾಯಿ ಮೌಲ್ಯದ 26 ಟ್ರಾಕ್ಟರ್, ಐದು ಮಾರುತಿ ಓಮಿನಿ ಹಾಗೂ ಎಂಟು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಆನಂದ ಅಲಿಯಾಸ್ ಉಮೇಶ್. ಈತನ ಸಹಚರರ ಯಾಕೂಬ್ ಖಾನ್, ಲಿಂಗಪ್ಪ ಮತ್ತು ಲೋಕೇಶ ಕೆ. ಮತ್ತು ಲೋಕೇಶ ವಿ. ಬಂಧಿತರು. ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘಿಸಿದ್ದಾರೆ.

ಮಹಾ ಖದೀಮ:
ಮಂಡ್ಯ ಮೂಲದ ಆನಂದ್ ಅಲಿಯಾಸ್ ಉಮೇಶ್ ಮೂಲತಃ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಈ ಮೂಲಕ ಅಪರಾಧ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ. ಬಳಿಕ ಐದು ವರ್ಷ ಕಳ್ಳತನದಿಂದ ದೂರವಿದ್ದ. ಮತ್ತೆ ಕಳ್ಳತನಕ್ಕೆ ಎಂಟ್ರಿ ಕೊಟ್ಟಿದ್ದ. ಆದರೆ ಈ ಬಾರಿ ಟಾರ್ಗೆಟ್ ಮಾಡಿದ್ದು ಮಾತ್ರ ಟ್ರಾಕ್ಟರ್. ಓಮಿನಿಯಲ್ಲಿ ತನ್ನ ಸಹಚರರ ಜತೆ ಬರುತ್ತಿದ್ದ ಅನಂದ್ ನ ಗ್ಯಾಂಗ್ ರಸ್ತೆ ಬದಿ ನಿಲ್ಲಿಸುವ ಟ್ರಾಕ್ಟರ್ ಗಳನ್ನು ಟಾರ್ಗೆಟ್ ಮಾಡುತ್ತಿತ್ತು. ಸಹಚರಾರಾದ ಲಿಂಗಪ್ಪ ಮತ್ತು ಯಾಕೂಬ್ ನಿಂದ ಟ್ರಾಕ್ಟರ್ ತಳ್ಳಿಸುತ್ತಿದ್ದ. ನೂರು ಮೀಟರ್ ದೂರ ಹೋದ ನಂತರ ಇಂಜಿನ್ ಸ್ಟ್ರಾಟ್ ಮಾಡಿ ಟ್ರಾಕ್ಟರ್ ಕದ್ದು ಪರಾರಿಯಾಗುತ್ತಿದ್ದರು. ಕದ್ದ ಟ್ರಾಕ್ಟರ್ ಗಳನ್ನು ಮಂಡ್ಯದ ಬೋರೇಗೌಡನಿಗೆ ನೀಡುತ್ತಿದ್ದರು. ಇಲ್ಲವೇ ಸಹಚರ ಲೋಕೇಶನ ಸಹಾಯದಿಂದ ಇಂಜಿನ್ ನಂಬರ್ ಮತ್ತು ವಾಹನ ನಂಬರ್ ಬದಲಿಸಿ ಆರ್‌ಟಿಓ ಅಧಿಕಾರಿಗಳ ಬಳಿ ಹೊಸ ವಾಹನ ಎಂದು ನಮೂದಿಸುತ್ತಿದ್ದರು. ಆರ್‌ಟಿಓ ಅಧಿಕಾರಿಗಳು ವಾಹನ ನೋಡದೇ ಕದ್ದ ವಾಹನವನ್ನು ಹೊಸ ವಾಹನ ಎಂದು ನೋಂದಣಿ ಮಾಡಿಸಿಕೊಡುತ್ತಿದ್ದರು. ಇದೇ ಕದ್ದ ವಾಹನಗಳಿಗೆ ವಿಮೆ ಕಂಪನಿಗಳು ಹೊಸ ವಿಮೆ ನೀಡಿವೆ. ಹೀಗೆ ದಾಖಲೆ ಮಾಡಿಸಿ ಹೊಸದಾಗಿ ನೋಂದಣಿ ಮಾಡಿಸಿದ ವಾಹನಗಳನ್ನು ರೈತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರು ಮೊಬೈಲ್ ಕಳ್ಳ :
ಟ್ರಾಕ್ಟರ್ ಕಳ್ಳ ಗ್ಯಾಂಗ್ ನ ಮುಖ್ಯಸ್ಥ ಆನಂದ ಅಲಿಯಾಸ್ ಉಮೇಶ. ಈತ ಒಟ್ಟಾರೆ ಆರು ಮೊಬೈಲ್ ಇಟ್ಟುಕೊಂಡಿದ್ದ. ಸ್ವಂತ ಊರಿನವರ ಜತೆ ಮಾತನಾಡಲಿಕ್ಕೆ ಒಂದು ಪೋನ್, ಸಹಚರರ ಜತೆ ಸಂಪರ್ಕಕ್ಕೆ ಒಂದು ಪೋನ್, ಪರಿಚಿತರ ಜತೆ ಮಾತನಾಡಲಿಕ್ಕೆ ಮತ್ತೊಂದು ಪೋನ್ ಹೀಗೆ ಆರು ಪೋನ್ ಇಟ್ಟುಕೊಂಡಿದ್ದ. ಹೀಗಾಗಿ ಈತನ ಜಾಡು ಹಿಡಿದು ಪತ್ತೆ ಮಾಡಲು ಒಂದೂವರೆ ತಿಂಗಳು ಸಮಯ ತೆಗೆದುಕೊಂಡಿದ್ದಾರೆ ಪೊಲೀಸರು. ಈತನ ಬಂಧನ ಬಳಿಕ ಲಿಂಗಪ್ಪ, ಯಾಕೂಬ್ ಖಾನ್ ಮತ್ತು ಲೋಕೇಶ ಎಲ್ಲರೂ ಸಿಕ್ಕಿಬಿದ್ದಿದ್ದಾರೆ.

ಕದ್ದ ವಾಹನ ನೋಂದಣಿ:
ಬೆಂಗಳೂರಿನಲ್ಲಿ ಕದ್ದ ಟ್ರಾಕ್ಟರ್ ಗಳಿಗೆ ಎಲೆಕ್ಟ್ರಾನಿಕ್ ಸಿಟಿ ಮತ್ತು ಮಂಡ್ಯ ಸಾರಿಗೆ ಅಧಿಕಾರಿಗಳು ಹೊಸದಾಗಿ ನೋಂದಣಿ ಮಾಡಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕದ್ದ ಟ್ರಾಕ್ಟರ್ ಗಳ ನಂಬರ್ ಹಾಗೂ ಇಂಜಿನ್ ನಂಬರ್ ಬದಲಿಸಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆ ದಾಖಲೆಗಳ ಪೂರ್ವ ಪರ ಪರಿಶೀಲಿಸದೇ ಟ್ರಾಕ್ಟರ್ ಗಳನ್ನು ನೋಡದೇ ನೋಂದಣಿ ಮಾಡಿಸಿ ಇದೀಗ ಪೊಲೀಸರ ತನಿಖೆ ಎದುರಿಸುವಂತಾಗಿದೆ. ವಾಹನ ಹೊಸದಾಗಿ ನೋಂದಣಿ ಮಾಡಿಸಬೇಕಾದರೆ ಅದನ್ನು ಸಾರಿಗೆ ಅಧಿಕಾರಿಗಳ ಮುಂದೆ ಹಾಜರು ಪಡಿಸಬೇಕು. ಇಂಜಿನ್ ನಂಬರ್ ಪರಿಶೀಲಿಸಿ, ಅದರ ಮೇಲೆ ಬಿಳಿ ಹಾಳೆ ಇಟ್ಟು, ಪೆನ್ಸಿಲ್ ನಿಂದ ಬರೆದು ನಂಬರ್ ಪಡೆದುಕೊಳ್ಳುತ್ತಾರೆ. ಈ ಮೂಲಕ ಇಂಜಿನ್ ನಂಬರ್ ಪರಿಶೀಲಿಸಿದ ಬಳಿಕವೇ ನೋಂದಣಿ ಪ್ರಕ್ರಿಯೆ ಮಾಡುತ್ತಾರೆ. ಆದರೆ, ಲೋಕೇಶ ಎಂಬ ಬ್ರೋಕರ್ ಮಾತುಕೇಳಿ ಕದ್ದ ಟ್ರಾಕ್ಟರ್ ಗಳನ್ನು ಹೊಸದಾಗಿ ನೋಂದಣಿ ಮಾಡಿಸಿ ದಾಖಲೆ ನೀಡಿದ್ದಾರೆ. ಅವನ್ನು ಉಮೇಶ ಮತ್ತು ಪಟಾಲಂ ತಂಡ ರೈತರಿಗೆ ಹೊಸ ಟ್ರಾಕ್ಟರ್ ಎಂದು ನಂಬಿಸಿ ಮಾರಾಟ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರ್‌ಟಿಓ ಗಳಿಗೆ ನೋಟಿಸ್ :
ಕದ್ದ ಟ್ರಾಕ್ಟರ್ ಗಳ ಪೈಕಿ ಏಳು ಟ್ರಾಕ್ಟರ್ ಗಳ ನಂಬರ್ ಬದಲಿಸಿ ಹೊಸದಾಗಿ ನೋಂದಣಿ ಮಾಡಿಸಿದ್ದು, ಮಂಡ್ಯ ಹಾಗೂ ಎಲೆಕ್ಟ್ರಾನಿಕ ಸಿಟಿ ಸಾರಿಗೆ ಅಧಿಕಾರಿಗಳು ದಾಖಲೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ದಾಖಲೆ ನೀಡಲು ಆರ್‌ಟಿಓ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೇವೆ. ಅವರನ್ನು ವಿಚಾರಣೆ ನಡೆಸುವುದಾಗಿ ಪ್ರಕರಣದ ತನಿಖಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಡಿಸಿಪಿ ಸಂಜೀವ ಎಂ ಪಾಟೀಲ್ ಮಾರ್ಗದರ್ಶನದಲ್ಲಿ ಪೊಲೀಸರು ಈ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications