ವಾಲ್ಮೀಕಿ ನಿಗಮದಲ್ಲಿ 187 ಕೋಟಿ ನುಂಗಿದ್ದು ಹಸ್ತಕ್ಷೇಪ ಅಲ್ಲವೇ?: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ 187 ಕೋಟಿ ನುಂಗಿದ್ದು ಹಸ್ತಕ್ಷೇಪ ಅಲ್ಲವೇ? ನಿಮ್ಮ ಸಚಿವರಾಗಿದ್ದ ನಾಗೇಂದ್ರರ ಮೇಲೆ ಯಾರು ಟಾರ್ಗೆಟ್ ಮಾಡಿದ್ದರು ಎಂದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು. ನೇರಾನೇರ ಮಾತನಾಡುವ ರಾಜಣ್ಣರನ್ನು ಮಂತ್ರಿಗಿರಿಯಿಂದ ಇಳಿಸಿ ಓಡಿಸಿದ್ದಾರೆ. ಅಪೆಕ್ಸ್ ಬ್ಯಾಂಕಿಗೆ ಅವರು ಅಧ್ಯಕ್ಷರಾಗಬೇಕಿತ್ತು. ಸುರ್ಜೇವಾಲಾರಿಗೆ ಹೇಳಿಸಿ ನಿನ್ನೆ ಚುನಾವಣೆ ನಡೆಯದಂತೆ ಮಾಡಿದ್ದಾರೆ ಎಂದು ಟೀಕಿಸಿದರು. ಇದು ಕಾಂಗ್ರೆಸ್ಸಿನ ಟಾರ್ಗೆಟ್ ಎಂದು ದೂರಿದರು.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವ ಡಾ.ಪರಮೇಶ್ವರ್ ಅವರಿಗೆ ಯಾವುದೇ ವಿಚಾರ ಗೊತ್ತೇ ಇರುವುದಿಲ್ಲವೇ? ಕೇಳಿ ತಿಳಿಸುವೆ ಎನ್ನುತ್ತಾರೆ. 2 ವರ್ಷದಿಂದ ಪೊಲೀಸರಲ್ಲಿ ವರ್ಗಾವಣೆ ನಿಂತು ಹೋಗಿದೆ. ಆದರೆ, ಪಟ್ಟಿ ಸಿದ್ಧವಾಗಿದೆ. ಇವರ ಒಂದು ಹೆಸರೂ ಇಲ್ಲವೆಂಬುದು ನನ್ನ ಗಮನಕ್ಕೆ ಬಂದಿದೆ. ಅಲ್ಲಿ ಬೇರೆಯವರ ಹಸ್ತಕ್ಷೇಪ ಇರುವುದರಿಂದ ಅವರೂ ಏನೂ ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿದರು. ದಲಿತರ ಧ್ವನಿ ಅಡಗಿಸುವಲ್ಲಿ ಕಾಂಗ್ರೆಸ್ ಸಫಲವಾಗಿದೆ ಎಂದು ವಿಶ್ಲೇಷಿಸಿದರು. ಸರಕಾರದ ಖಜಾನೆ ಖಾಲಿ ಆಗಿದೆ. ಗುತ್ತಿಗೆ ಆಧಾರದವರನ್ನು ಹೊರಹಾಕಿದ್ದಾರೆ. ಶಿಕ್ಷಕರು, ಉಪನ್ಯಾಸಕರದೂ ಇದೇ ಪರಿಸ್ಥಿತಿ ಎಂದು ಟೀಕಿಸಿದರು.

ಮತಬ್ಯಾಂಕ್ ಓಲೈಕೆಯಲ್ಲಿ ಕಾಂಗ್ರೆಸ್‍ನವರು ನಿಪುಣರು ಎಂದು ಆಕ್ಷೇಪಿಸಿದರು. ಬೆಂಗಳೂರಿನಲ್ಲಿ ಬಾಂಗ್ಲಾದೇಶೀಯರು, ರೋಹಿಂಗ್ಯಾಗಳು ತುಂಬಿಕೊಂಡಿದ್ದಾರೆ ಎಂದು ದೂರಿದರು. ಮೈಸೂರಿನಲ್ಲಿ ಡ್ರಗ್ಸ್ ಹಿಡಿದಿದ್ದು ಫಿನಾಯಿಲ್ ಫ್ಯಾಕ್ಟರಿ ಎಂದು ಡಾ.ಪರಮೇಶ್ವರ್ ಅವರು ಹೇಳಿದ್ದಾರೆ. ಸೂರತ್‍ನ ನಾರ್ಕೊಟಿಕ್ಸ್ ಬ್ಯುರೋದವರು ಮಾದಕವಸ್ತು ಎಂದಿದ್ದಾರೆ. ಫಿನಾಯಿಲ್ ಇದ್ದುದು ಎಂಬುದು ಓಪಿಯಂ ಆದುದು ಹೇಗೆ ಎಂದು ಕೇಳಿದರು.
ವಿಬಿ ಜಿ ರಾಮ್ ಜಿಯಲ್ಲಿ ರಾಮನ ಉದ್ಭವವನ್ನು ಕಾಂಗ್ರೆಸ್ಸಿಗೆ ಸಹಿಸಲು ಸಾಧ್ಯವಾಗಿಲ್ಲ. ಹಿಂದುತ್ವ, ರಾಮನ ವಿರೋಧ ಕಾಂಗ್ರೆಸ್ಸಿಗೆ ಸಹಜವಾದುದು. ಇದನ್ನು ವಿರೋಧಿಸಲೇಬೇಕೆಂದೇ ವಿಶೇಷ ಅಧಿವೇಶನ ಕರೆದಿದ್ದಾರೆ. ಸದ್ಯಕ್ಕೆ ಸದನ ಕರೆಯುವ ಅವಶ್ಯಕತೆ ಇರಲಿಲ್ಲ ಎಂದ ಅವರು, ನರೇಗಾ ಯೋಜನೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಕಾಯ್ದೆಯನ್ನಾಗಿ ಮಾಡಿ ಕೇಂದ್ರ ಸರಕಾರ ಜಾರಿಗೊಳಿಸಿದ 'ವಿಬಿ ಜಿ ರಾಮ್ ಜಿ' ಅಡಿಯಲ್ಲಿ 100 ದಿನಗಳ ಬದಲು 125 ದಿನ ಕೆಲಸ ನೀಡಲಾಗುತ್ತಿದೆ. ಜನರೇ ಕೆಲಸ ಮಾಡಬೇಕು. ಬಯೋಮೆಟ್ರಿಕ್‍ನಲ್ಲಿ ಹೆಸರು ಬಂದು ಅವರಿಗೆ 370 ರೂ. ಕೂಲಿಯನ್ನು ನೇರವಾಗಿ ಖಾತೆಗೇ ನೀಡುವ ಯೋಜನೆ ಇದಾಗಿದೆ. ಯಂತ್ರಗಳಿಂದ ಕೆಲಸ ಮಾಡಬಾರದು, ಜನರೇ ಕೆಲಸ ಮಾಡಿ, ಗ್ರಾಮೀಣ ಜನರ ಬದುಕು ಕಟ್ಟಿಕೊಡುವ ಯೋಜನೆ ಇದೆಂದು ವಿಶ್ಲೇಷಿಸಿದರು.
ಇದರ ಮೂಲಕ ಆಸ್ತಿ ನಿರ್ಮಾಣದ ಉದ್ದೇಶ ಇದೆ. ಆದರೆ, ಕಾಂಗ್ರೆಸ್ಸಿಗೆ ಅದು ಬೇಕಾಗಿರಲಿಲ್ಲ. 'ವಿಬಿ ಜಿ ರಾಮ್ ಜಿ' ಎಂದರೆ ರಾಮನ ಹೆಸರನ್ನು ಇದಕ್ಕೆ ಇಟ್ಟಿದ್ದಾರೆಂದು ಕಾಂಗ್ರೆಸ್ಸಿನವರು ಅಂದುಕೊಂಡಿದ್ದಾರೆ. ನರೇಗಾಗೆ ಮೊದಲು ನೆಹರೂ ಅವರ ಹೆಸರು ಇಡಲಾಗಿತ್ತು. ರೋಜ್‍ಗಾರ್ ಯೋಜನೆ ಎಂದಷ್ಟೇ ಕರೆಯಲಾಗಿತ್ತು. ಇವೆಲ್ಲ ಬಿಟ್ಟು ಕೊನೆಯಲ್ಲಿ ಮಹಾತ್ಮ ಗಾಂಧಿ ಎಂದು ಹೆಸರು ಜೋಡಿಸಿದ್ದರು ಎಂದು ವಿವರಿಸಿದರು.
ಜಂಟಿ ಸದನವನ್ನುದ್ದೇಶಿಸಿ ಮಾನ್ಯ ರಾಜ್ಯಪಾಲರು ಭಾಷಣ ಮಾಡುವುದು ನಡೆಯುತ್ತದೆ. ಸಂವಿಧಾನದ ಮುಖ್ಯಸ್ಥರು, ಗೌರವಾನ್ವಿತ ರಾಷ್ಟ್ರಪತಿಗಳ ಪ್ರತಿನಿಧಿಯಾದ ಮಾನ್ಯ ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತ ಅಥವಾ ತೀರ್ಮಾನವನ್ನು ವಿರೋಧಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ತಿಳಿಸಿದರು. ಮಾನ್ಯ ರಾಜ್ಯಪಾಲರು ಭಾಷಣ ಮಾಡಿ ತೆರಳುವಾಗ ಕೆಲವರು ಧಿಕ್ಕಾರ ಕೂಗಿದ್ದಾರೆ. ಅವರ ಮೇಲೆ ಹಲ್ಲೆ ಮಾಡಲು ಹೋಗಿದ್ದನ್ನು ವಿರೋಧಿಸಿದ್ದೇವೆ ಎಂದು ತಿಳಿಸಿದರು. ಇದೆಲ್ಲಕ್ಕೂ ಬಿ.ಕೆ.ಹರಿಪ್ರಸಾದ್ ಕಾರಣರು ಎಂದು ಟೀಕಿಸಿದರು.
ಹೆಣ್ಮಕ್ಕಳ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಚಡ್ಡಿಗಳೆಂದು ಮಾತನಾಡಿದ್ದಾರೆ. ಪೋಕ್ಸೋದವರು ಎಂದು ಮಾತನಾಡಿದ್ದಾರೆ. ರಾಜ್ಯಪಾಲರಿಗೆ ಕೈ ತೋರಿಸಿದ್ದೀರಲ್ಲ ಎಂದು ಕೇಳಿದರೆ, ಇನ್ನೇನು ಕಾಲು ತೋರಿಸಬೇಕಿತ್ತೇ ಎಂದು ಉದ್ಧಟತನದ ಮಾತನಾಡಿದ್ದಾಗಿ ದೂರಿದರು. ಪ್ರಶ್ನಿಸಿದ ನನ್ನನ್ನೂ ಕೆಟ್ಟ ಪದದಿಂದ ನಿಂದಿಸಿದ್ದಾರೆ. ಇವರ ಉದ್ಧಟತನ, ಗರ್ವ, ಅಹಂಕಾರ ಮೇರೆ ಮೀರಿದೆ ಎಂದು ವಾಗ್ದಾಳಿ ನಡೆಸಿದರು. ನಾನು ಹಿಮಾಲಯ ಪರ್ವತದವರೆಗೆ ಹೋಗಿದ್ದಾಗಿ ಅವರು ತಿಳಿದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.












Click it and Unblock the Notifications