Dream Astrology: ಈ ಕನಸು ಬೀಳೋದು ಲಕ್ಷ್ಮೀ ಒಲಿಯುವ ಸಂಕೇತ! ಸ್ವಪ್ನ ಶಾಸ್ತ್ರದ ರಹಸ್ಯ ಇಲ್ಲಿದೆ
Dream Astrology: ಕನಸುಗಳು ಎಲ್ಲರಿಗೂ ಬೀಳುತ್ತವೆ.ಕೆಲವೊಂದು ಕನಸುಗಳಿಗೆ ಅರ್ಥವೇ ಇರುವುದಿಲ್ಲ ಎಂದು ಅನೇಕ ಬಾರಿ ಅನ್ನಿಸುವುದೂ ಇದೆ. ಆದರೆ ಕನಸುಗಳು ನಮ್ಮ ಜೀವನದಲ್ಲಿ ಘಟಿಸುವ ಕೆಲವೊಂದು ಘಟನೆಗಳ ಬಗ್ಗೆ ಮೊದಲೇ ಎಚ್ಚರಿಸುತ್ತದೆ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ. ಈ ಸ್ವಪ್ನ ಶಾಸ್ತ್ರದ ಪ್ರಕಾರ ಕೆಲವೊಂದು ಕನಸುಗಳು ಶುಭವಾಗಿರುತ್ತದೆ, ಇನ್ನು ಕೆಲವು ಅಶುಭ ಎನ್ನಲಾಗಿದೆ. ಕೆಲವು ಕನಸುಗಳು ನಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಆಗಮನವನ್ನು ಸೂಚಿಸುತ್ತವೆಯಂತೆ. ಈ ಕನಸುಗಳ ಅರ್ಥ ಮತ್ತು ಅವು ನಿಮ್ಮ ಜೀವನದಲ್ಲಿ ಹೇಗೆ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎನ್ನುವುದನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಿ ಹೇಳಲಾಗಿದೆ.
ಸ್ವಪ್ನ ಶಾಸ್ತ್ರ ಎಂದರೆ ಅದು ಕನಸುಗಳ ಅರ್ಥವನ್ನು ವಿವರಿಸುವ ಪ್ರಾಚೀನ ವಿಜ್ಞಾನ. ಇದರ ಪ್ರಕಾರ, ನಾವು ಕನಸಿನಲ್ಲಿ ನೋಡುವ ಪ್ರತಿಯೊಂದಕ್ಕೂ ನಿರ್ದಿಷ್ಟ ಅರ್ಥವಿದೆ. ಕೆಲವೊಮ್ಮೆ ಈ ಕನಸುಗಳು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಸೂಚಿಸುತ್ತವೆ. ಆದರೆ ಕೆಲವೊಮ್ಮೆ ಎದುರಾಗಬಹುದಾದ ದೊಡ್ಡ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯನ್ನೂ ನೀಡುತ್ತವೆ. ಕೆಲವು ವಿಶೇಷ ಕನಸುಗಳು ಬಂದರೆ, ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎನ್ನುವುದನ್ನು ಸೂಚಿಸುತ್ತವೆಯಂತೆ.

ಅಶೋಕ ಮರ
ನೀವು ನಿಮ್ಮ ಕನಸಿನಲ್ಲಿ ಅಶೋಕ ಮರವನ್ನು ಕಂಡರೆ, ಸ್ವಪನ ಶಾಸ್ತ್ರದ ಪ್ರಕಾರ ಅದು ಅತ್ಯಂತ ಶುಭ ಎಂದು ಹೇಳಲಾಗುತ್ತದೆ. ಈ ಮರ ಯಾರ ಕನಸಿನಲ್ಲಿ ಬರುತ್ತದೆಯೋ ಅವರ ಸಂಪತ್ತು, ಸಂತೋಷ, ಶಾಂತಿ, ಸಮೃದ್ಧಿ ಹೆಚ್ಚಾಗುತ್ತದೆಯಂತೆ. ಲಕ್ಷ್ಮೀ ದೇವಿಯು ಶೀಘ್ರದಲ್ಲೇ ನಿಮ್ಮ ಮನೆಗೆ ಆಗಮಿಸುತ್ತಾಳೆ ಎನ್ನುವುದನ್ನು ಇದು ಸೂಚಿಸುತ್ತದೆ.
Dream Astrology:ಲಕ್ಷ್ಮೀ ದೇವಿ ಮತ್ತು ಶಿವಲಿಂಗ
ಲಕ್ಷ್ಮೀ ದೇವಿಯನ್ನು ಸಂಪತ್ತಿನ ದೇವತೆ ಎಂದೂ ಕರೆಯುತ್ತಾರೆ. ಸ್ವಪ್ನ ಶಾಸ್ತ್ರದ ಪ್ರಕಾರ, ಲಕ್ಷ್ಮೀ ದೇವತೆ ಮತ್ತು ಶಿವಲಿಂಗವನ್ನು ಒಟ್ಟಿಗೆ ಕನಸಿನಲ್ಲಿ ಕಂಡರೆ, ಇದಕ್ಕಿಂತ ಶುಭವಾದದ್ದು ಇನ್ನೊಂದಿಲ್ಲ. ಕನಸಿನಲ್ಲಿ ಇಬ್ಬರನ್ನೂ ಜೊತೆಯಾಗಿ ನೋಡಿದರೆ ಬಹಳ ಬೇಗ ಸಿರಿವಂತರಾಗುವ ಯೋಗವಿದೆ ಎನ್ನುವುದನ್ನು ತೋರಿಸುತ್ತದೆ. ಶೀಘ್ರದಲ್ಲೇ ಆರ್ಥಿಕ ಲಾಭ ಹೆಚ್ಚಾಗುವ ಸುಳಿವು ನೀಡುತ್ತದೆ. ಕನಸಿನಲ್ಲಿ ಲಕ್ಷ್ಮೀದೇವಿ ಕಾಣಿಸಿಕೊಂಡರೆ ಆರ್ಥಿಕ ಸಮಸ್ಯೆಗಳು ಕೊನೆಯಾಗುತ್ತದೆ ಎಂದರ್ಥ. ಎಲ್ಲಾ ಕಷ್ಟ ನಷ್ಟಗಳಿಗೆ ವಿರಾಮ ಬೀಳುವ ಕಾಲ ಹತ್ತಿರವಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.
ದೇವತೆ ಅಥವಾ ದೇವಾಲಯ
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ಅಥವಾ ದೇವಾಲಯವನ್ನು ನೋಡಿದರೆ ಅದು ಕೂಡಾ ಶುಭ ಸಂಕೇತವೇ. ನಿಮ್ಮ ಕನಸಿನಲ್ಲಿ ದೇವರು ದೇವಸ್ಥಾನ ಕಾಣಿಸಿದರೆ ಎಲ್ಲಾ ರೀತಿಯ ದುಃಖಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ ಎಂದರ್ಥ. ಆದಷ್ಟು ಬೇಗ ಆರ್ಥಿಕ ಲಾಭ ಸಿಗುತ್ತದೆ ಎನ್ನುವ ಸೂಚನೆ ಇದು. ಮನಸ್ಸಿನ ಎಲ್ಲಾ ಆಸೆಗಳು ಕೂಡಾ ಈಡೇರುವ ಕಾಲ ಹತ್ತಿರವಿದೆ ಎನ್ನುವುದನ್ನು ಇದು ಹೇಳುತ್ತದೆಯಂತೆ.
ಅದೃಷ್ಟ ಬದಲಾಗುವ ಕನಸು
ಇನ್ನು ಕೆಲವೊಂದು ಪ್ರಾಣಿಗಳು ಕನಸಿನಲ್ಲಿ ಕಂಡರೂ ಶುಭ ಎಂದು ಹೇಳಲಾಗುತ್ತದೆ. ಬಿಳಿ ಹಾವಿನ ಕನಸು ಕಾಣುವುದು ಶುಭವಂತೆ.ನಿಜ ಜೀವನದಲ್ಲಿ ಹಾವು ಎದುರಿಗೆ ಬಂದಾಗ ಹೆದರಿಕೆ ಆದರೂ ಅದೃಷ್ಟವಂತರಿಗೆ ಮಾತ್ರ ಬಿಳಿ ಹಾವಿನ ಕನಸು ಬೀಳುತ್ತದೆಯಂತೆ. ನಿಮ್ಮ ಕನಸಿನಲ್ಲಿ ಬಿಳಿ ಹಾವು ಕಂಡರೆ, ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದೆ ಎಂದರ್ಥ.
ಬಿಳಿ ಸಿಂಹ
ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಬಿಳಿ ಸಿಂಹವನ್ನು ನೋಡುವುದು ಕೂಡಾ ಶುಭವೇ. ನಮ್ಮ ಅದೃಷ್ಟ ತುಂಬಾ ಚೆನ್ನಾಗಿ ಇದ್ದಾಗ ಮಾತ್ರ ಬಿಳಿ ಸಿಂಹಗಳು ಕನಸಿನಲ್ಲಿ ಬರುತ್ತವೆಯಂತೆ. ಇದು ವೃತ್ತಿಜೀವನದಲ್ಲಿನ ಗಮನಾರ್ಹ ಪ್ರಗತಿಯನ್ನು ತೋರಿಸುತ್ತದೆ. ಹಾಗೆಯೇ ಕನಸಿನಲ್ಲಿ ಬಿಳಿ ನವಿಲನ್ನು ನೋಡುವುದು ಸಹ ಶುಭವಂತೆ. ಈ ಕನಸು ಬಂದರೆ ಆದಷ್ಟು ಬೇಗ ನೀವು ಭಾರೀ ದೊಡ್ಡ ಸಾಧನೆ ಮಾಡುತ್ತೀರಿ ಎಂದರ್ಥ. ಜೊತೆಗೆ ಕನಸಿನಲ್ಲಿ ಬಿಳಿ ಆನೆಯನ್ನು ನೋಡಿದರೆ, ನಿಮ್ಮ ಅದೃಷ್ಟ ಬದಲಾಗಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಕನಸು ಸಂಪತ್ತಿನ ಆಗಮನವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಅಂತಹ ಅನೇಕ ಅದೃಷ್ಟ ಕನಸುಗಳನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರವಾಗಿ ವಿವರಿಸಲಾಗಿದೆ. ಕನಸಿನಲ್ಲಿ ಕಾಣುವ ಪ್ರತಿಯೊಂದು ವಿಷಯಕ್ಕೂ ಖಂಡಿತವಾಗಿಯೂ ಕೆಲವು ಅರ್ಥವಿದೆ.


Click it and Unblock the Notifications
