'2020ಕ್ಕೆ ಮಹಾ ಪ್ರಳಯ: ಭೂಮಿ ಮೇಲಿನ ಕೋಟ್ಯಂತರ ಜೀವಿ ನಾಶ'
Recommended Video

"2020ಕ್ಕೆ ಮಹಾ ಪ್ರಳಯ ಸಂಭವಿಸುತ್ತದೆ. ಆಗ ಈ ಭೂಮಿ ಮೇಲಿನ ಮೂರನೇ ಒಂದು ಭಾಗದಷ್ಟು ಜೀವ ಸಂತತಿಯೇ ಅಳಿದು ಹೋಗಲಿದೆ" ಎಂದು ಭವಿಷ್ಯ ನುಡಿದಿದ್ದಾರೆ ಕರ್ನಾಟಕ ರಾಜ್ಯ ಜ್ಯೋತಿಷಿಗಳು ಹಾಗೂ ಜ್ಯೋತಿಷ್ಯ ಒಕ್ಕೂಟದ ಇನ್ ಸ್ಟಿಟ್ಯೂಟ್ ನ ಉಪಾಧ್ಯಕ್ಷ ಪ್ರೊ.ಎಚ್.ಚಂದ್ರಶೇಖರ್.
ಭೂಕಂಪ, ಸುನಾಮಿ ಸೇರಿದಂತೆ ನೈಸರ್ಗಿಕ ವಿಕೋಪ ಸಂಭವಿಸುವ ಬಗ್ಗೆ ಎಚ್ಚರಿಕೆ ಹೇಳಿದ್ದಾರೆ. ಅಗ್ನಿ ತತ್ವ ರಾಶಿಯಲ್ಲಿ ಶನಿಯು, ಜಲ ತತ್ವ ರಾಶಿಯಲ್ಲಿ ಗುರು ಇರುವಾಗ ಅವುಗಳ ಮೇಲೆ ಕುಜನ ದೃಷ್ಟಿ ಬೀರುವುದರಿಂದ ಈ ರೀತಿಯ ಪ್ರಳಯ ಸಂಭವಿಸುತ್ತದೆ ಎಂಬುದು ಅವರು ನೀಡುವ ಸಮರ್ಥನೆ.

ಗ್ರಹಗಳ ಚಲನೆಯಿಂದಾಗಿ ಆಗುವ ಬದಲಾವಣೆಗೆ ತಕ್ಕಂತೆ ಫಲ ಇರುತ್ತದೆ ಎಂಬುದು ಅವರು ನೀಡುವ ಪುಷ್ಟಿ. ಇನ್ನು ರಾಜ್ಯದಲ್ಲಿ ನಕಲಿ ಜ್ಯೋತಿಷಿಗಳ ಹಾವಳಿ ಹೆಚ್ಚಾಗುತ್ತಿದೆ. ಅಂಥವರಿಂದ ಜನರಿಗೆ ಸಿಕ್ಕಾಪಟ್ಟೆ ತೊಂದರೆಯಾಗಿದೆ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಜ್ಯೋತಿಷ್ಯ ಸುಳ್ಳು ಎನ್ನುವವರು ನಮ್ಮ ಬಳಿ, ಹುಟ್ಟಿದ ದಿನಾಂಕ, ಸಮಯ, ಸ್ಥಳವನ್ನು ತಿಳಿಸಿ. ನಿಖರವಾದ ಭವಿಷ್ಯ ಹೇಳದಿದ್ದರೆ ಕೇಳಿ ಎಂದು ಸವಾಲು ಹಾಕಿದ್ದಾರೆ. ಇನ್ನು ಟಿವಿಗಳಲ್ಲಿ ಜ್ಯೋತಿಷಿಗಳನ್ನು ಕರೆಸುವಾಗ ಕರ್ನಾಟಕ ಸಂಸ್ಕೃತ ಕಾಲೇಜಿನಿಂದ ಜ್ಯೋತಿಷ್ಯ ಪ್ರಮಾಣ ಪತ್ರವನ್ನು ಪಡೆದವರನ್ನೇ ಕರೆಸಬೇಕು ಎಂದು ಒತ್ತಾಯಿಸಲಾಗಿದೆ.
ಇನ್ನು ಇದೇ ತಿಂಗಳ 22ರಿಂದ 25ರವರೆಗೆ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಅಂತರರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ ಸಮ್ಮೇಳನ ನಡೆಯಲಿದ್ದು, ಏಕಾದಶ ಚತುಶ್ಶಾಸ್ತ್ರ ಸಮ್ಮೇಳನ ಎಂದು ಹೆಸರಿಡಲಾಗಿದೆ. ಅದರಲ್ಲಿ ನೇಪಾಳ, ಮಲೇಷ್ಯಾ, ಸಿಂಗಾಪೂರ್, ಬ್ಯಾಂಕಾಕ್, ಶ್ರೀಲಂಕಾ ಸೇರಿದಂತೆ ದೇಶ-ವಿದೇಶಗಳ ಎಂಟು ನೂರಕ್ಕೂ ಹೆಚ್ಚು ಜ್ಯೋತಿಷಿಗಳು ಪಾಲ್ಗೊಳ್ಳಲಿದ್ದಾರೆ. ಬೇಲಿಮಠದ ಶಿವರುದ್ರ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ತಿಳಿಸಲಾಗಿದೆ.












Click it and Unblock the Notifications