Suryansh Shedge: ಯಾರು ಈ ಹೊಸ ರನ್ ಮೆಷಿನ್ ಸೂರ್ಯಾಂಶ್ ಶೆಡ್ಗೆ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ

Suryansh Shedge: ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 3) ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರ 23 ವರ್ಷದ ಅನ್‌ಕ್ಯಾಪ್ಡ್ ಬ್ಯಾಟರ್ ಸೂರ್ಯಾಂಶ್ ಶೆಡ್ಗೆ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿ ಅರ್ಧಶತಕ ಸಿಡಿಸಿ ಮಿಂಚಿದರು. ಇದೀಗ ಈ ಯುವ ಆಟಗಾರ ಯಾರು ಎನ್ನುವ ಪ್ರಶ್ನೆ ಎದ್ದಿದೆ. ಹಾಗಾದ್ರೆ ಇವರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೇ ಮೊದಲು ಬ್ಯಾಟ್‌ ಬೀಸಿದ ಪಂಜಾಬ್ ಕಿಂಗ್ಸ್‌ ನಿಗದಿತ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 163 ರನ್‌ಗಳನ್ನು ಕಲೆಹಾಕಿತು. ಪಂಜಾಬ್ ಕಿಂಗ್ಸ್ ಕೇವಲ 36 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಶೇಡ್ಗೆ ಮೈದಾನಕ್ಕಿಳಿದು ರನ್‌ ವೇಗವನ್ನು ಹೆಚ್ಚಿಸಿ ತಂಡಕ್ಕೆ ಆಸರೆಯಾದರು.

IPL 2026 Who is Suryansh Shedge Punjab Kings Youngster Smashes Explosive Fifty vs Gujarat Titans

ಜಿಟಿ ಬೌಲರ್‌ಗಳ ಬೆವರಳಿಸಿದ ಶೆಡ್ಗೆ

ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲೂ ಎದೆಗುಂದದೆ ಬ್ಯಾಟ್ ಬೀಸಿದ ಸೂರ್ಯಾಂಶ್ ಶೆಡ್ಗೆ ಅವರು ಕೇವಲ 24 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಪಂಬಾಬ್‌ ತಂಡಕ್ಕೆ ಆಸರೆಯಾದರು. ಗುಜರಾತ್ ಟೈಟಾನ್ಸ್ ಸ್ಪಿನ್ನರ್ ಮಾನವ್ ಸುತಾರ್ ಬೌಲಿಂಗ್‌ನಲ್ಲಿ ಚಿಂದಿ ಉಡಾಯಿಸಿದ ಶೆಡ್ಗೆ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸೇರಿದಂತೆ ಒಟ್ಟು 26 ರನ್ ಚಚ್ಚಿದರು.

ಅರ್ಧಶತಕ ಸಿಡಿಸಿ ಮಿಂಚಿದ ಯುವ ಆಟಗಾರ

ಅಂತಿಮವಾಗಿ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ 57 ರನ್ ಗಳಿಸಿದ ಸೂರ್ಯಾಶ್ ಶೇಡ್ಗೆ ಪಂಜಾಬ್ ಕಿಂಗ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ತಮ್ಮ ತಂಡ ಸಂಕಷ್ಟದಲ್ಲಿದ್ದ ವೇಳೆ ಸಿಡಿದು ನಿಂತ ಈ ಯುವ ಆಟಗಾರನ ಆಕ್ರಮಣಕಾರಿ ಆಟ ಇಡೀ ಪಂದ್ಯದ ಮೆರುಗನ್ನು ಹೆಚ್ಚಿಸಿತು. ಜೊತೆಗೆ ಅದ್ಭುತ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಇದೀಗ ಈ ಸೂರ್ಯಾಶ್ ಶೆಡ್ಗೆ ಯಾರು ಎನ್ನುವ ಪ್ರಶ್ನೆಗಳು ಎದ್ದಿವೆ.

ಯಾರು ಈ ಸೂರ್ಯಾಂಶ್ ಶೆಡ್ಗೆ?

ಸೂರ್ಯಾಂಶ್ ಶೇಡ್ಗೆ ಜನವರಿ 29, 2003 ರಂದು ಮುಂಬೈನಲ್ಲಿ ಜನಿಸಿದರು. ಇವರು ಆಲ್‌ರೌಂಡರ್ ಆಗಿದ್ದು, ತಂಡಕ್ಕೆ ಅಗತ್ಯವಿದ್ದಾಗ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂಡಿದ್ದಾರೆ. ಸೂರ್ಯಾಂಶ್‌ಗೆ ವಿರಾಟ್ ಕೊಹ್ಲಿ ಅಚ್ಚುಮೆಚ್ಚಿನ ಆರಾಧ್ಯ ದೈವರಾಗಿದ್ದಾರೆ. ಜೊತೆಗೆ ಈಗಿನ ಕಾಲಘಟ್ಟದ ಶ್ರೇಷ್ಠ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಬೆನ್ ಸ್ಟೋಕ್ಸ್ ಅವರನ್ನೂ ಅವರು ಮಾದರಿಯಾಗಿ ಸ್ವೀಕರಿಸಿದ್ದಾರೆ. ಈ ಯುವ ಪ್ರತಿಭೆ ಈಗ ಐಪಿಎಲ್‌ನಲ್ಲಿ ಮಿಂಚುವ ಮೂಲಕ ಗಮನ ಸೆಳೆದಿದ್ದಾರೆ.

ಮಗನ ಕ್ರಿಕೆಟ್‌ ಕನಸು ನನಸು ಮಾಡಿದ ತಾಯಿ

ವರದಿಗಳ ಪ್ರಕಾರ ಸೂರ್ಯಾಂಶ್ ಶೆಡ್ಗೆ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಅವರ ತಾಯಿ. ಒಂಬತ್ತು ವರ್ಷ ವಯಸ್ಸಿನಲ್ಲಿದ್ದಾಗಲೇ ಶೇಡ್ಗೆಯನ್ನು ಅವರ ತಾಯಿಯೇ ಮೊದಲ ಬಾರಿ ಕ್ರಿಕೆಟ್ ಅಕಾಡೆಮಿಗೆ ಕರೆದುಕೊಂಡು ಹೋಗಿದ್ದರು. ಅಲ್ಲದೆ ಮಗನ ಕ್ರಿಕೆಟ್ ವೃತ್ತಿಜೀವನಕ್ಕೆ ಬೆಂಬಲ ನೀಡಲು ಮತ್ತು ಆತನ ಭವಿಷ್ಯವನ್ನು ರೂಪಿಸಲು ತಮ್ಮ ಕೆಲಸವನ್ನೇ ತ್ಯಜಿಸಿದ್ದರು.

ಮುಂಬೈನ ಭಾರಿ ಪೈಪೋಟಿಯ ಕ್ರಿಕೆಟ್ ವಲಯದಲ್ಲಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಸೂರ್ಯಾಂಶ್ ಶೆಡ್ಗೆ ಅವರು ಗೈಲ್ಸ್ ಶೀಲ್ಡ್ 14 ವರ್ಷದೊಳಗಿನವರ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೇವಲ 137 ಎಸೆತಗಳಲ್ಲಿ ಅಜೇಯ 326 ರನ್ ಚಚ್ಚಿದ್ದರು. ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅವರು ಕ್ರಿಕೆಟ್ ಜಗತ್ತಿನ ಗಮನ ಸೆಳೆದರು.

ಅಭಿಷೇಕ್ ನಾಯರ್ ಅವರಿಂದ ಮಾರ್ಗದರ್ಶನ

ಸೂರ್ಯಾಂಶ್ ಶೆಡ್ಗೆ ಅಂಡರ್ 19 ಮಟ್ಟದಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದರು. ಆದರೆ ದುರದೃಷ್ಟವಶಾತ್ ಅವರಿಗೆ ಭಾರತದ ಪರ U19 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ. ಅವರ ಬೆಳವಣಿಗೆಯ ದಿನಗಳಲ್ಲಿ ಅವರಿಗೆ ಪ್ರಸ್ತುತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ತರಬೇತುದಾರರಾಗಿರುವ ಅಭಿಷೇಕ್ ನಾಯರ್ ಅವರು ಮಾರ್ಗದರ್ಶನ ನೀಡಿದ್ದಾರೆ. ಅಭಿಷೇಕ್ ನಾಯರ್ ಅವರು ಈ ಹಿಂದೆ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಅವರಂತಹ ದಿಗ್ಗಜ ಆಟಗಾರರಿಗೂ ತರಬೇತಿ ನೀಡಿದ್ದಾರೆ.

ಅವರು ಐಪಿಎಲ್ 2023ರ ಸಮಯದಲ್ಲಿ ಗಾಯಗೊಂಡಿದ್ದ ಜಯದೇವ್ ಉನಾದ್ಕಟ್ ಅವರ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೂರ್ಯಾಂಶ್ ಶೆಡ್ಗೆ ಆಯ್ಕೆಯಾಗಿದ್ದರು. ಆದರೆ ಆ ಸೀಸನ್‌ನಲ್ಲಿ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ಬಳಿಕ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅವರನ್ನು 30 ಲಕ್ಷ ರೂಪಾಯಿಗೆ ಖರೀದಿಸಿತು.

ಮುಂಬೈ ತಂಡವು 2024-25ರ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಈ ಅದ್ಭುತ ಪ್ರದರ್ಶನದ ನಂತರ ಪಂಜಾಬ್ ಕಿಂಗ್ಸ್ ಅವರನ್ನು ಅಷ್ಟು ಕಡಿಮೆ ಬೆಲೆಗೆ ಖರೀದಿಸಿದ್ದು ಅತ್ಯಂತ ಲಾಭದಾಯಕ. ಇದೀಗ ಶೆಡ್ಗೆ ಆ ಮೊತ್ತಕ್ಕಿಂತ ಹೆಚ್ಚಿನ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ. ಐಪಿಎಲ್ 2025ರಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ ಐದು ಪಂದ್ಯಗಳನ್ನು ಆಡಿದ್ದರು. ಆದರೆ ಆ ಸಮಯದಲ್ಲಿ ಅವರಿಗೆ ಹೆಚ್ಚು ಸಮಯ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಇದೀಗ ಅವಕಾಶ ಒದಗಿಬಂದಿದ್ದು, ಅದನ್ನು ಅವರು ಅಷ್ಟೇ ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಗುಜರಾತ್ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಅವರು ಸಿಡಿಸಿದ ಭರ್ಜರಿ ಅರ್ಧಶತಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+