ಅಂಪೈರ್ ತಪ್ಪು ತೀರ್ಮಾನದಿಂದ ರಜತ್ ಪಾಟಿದಾರ್ ಔಟ್: ನ್ಯಾಯದ ಪರ ನಿಂತ ಟೀಂ ಇಂಡಿಯಾ ಮಾಜಿ ಕ್ರಿಕೆಟರ್
RCB IPL 2026: ಅಹಮದಾಬಾದ್‌ನಲ್ಲಿ ಗುರುವಾರ (ಏಪ್ರಿಲ್ 30) ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಜೇಸನ್ ಹೋಲ್ಡರ್ ಅವರು ಹಿಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರ ಕ್ಯಾಚ್ ಇದೀಗ ಭಾರಿ ಚರ್ಚೆಗೆ ಕಾಣವಾಗಿದೆ. ಈ ನಡುವೆ ಇದೀಗ ಟೀಂ ಇಂಡಿಯಾ ಮಾಜಿ ಮೊಹಮ್ಮದ್ ಕೈಫ್ ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು, ಜೇಸನ್ ಹೋಲ್ಡರ್ ಹಿಡಿದ ವಿವಾದಾತ್ಮಕ ಕ್ಯಾಚ್‌ನಿಂದಾಗಿ ರಜತ್ ಪಾಟಿದಾರ್ ಔಟ್ ಆಗಿದ್ದು ಅವರ ದುರಾದೃಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಆರ್‌ಸಿಬಿ ಮತ್ತು ಜಿಟಿ ನಡುವಿನ ಪಂದ್ಯದ ವೇಳೆ ಸಂಭವಿಸಿದ ಈ ಘಟನೆಯ ಬಗ್ಗೆ ಕೈಫ್ ಮಾತನಾಡುತ್ತಾ ಆರ್‌ಸಿಬಿ ಪರವಾಗಿಯೇ ಬ್ಯಾಟ್ ಬೀಸಿದ್ದಾರೆ.

ಆರ್‌ಸಿಬಿ ಪರ ನಿಂತ ಮೊಹಮ್ಮದ್ ಕೈಫ್
ಜೇಸನ್ ಹೋಲ್ಡರ್ ಅವರು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಆ ಕೆಳಮಟ್ಟದ ಕ್ಯಾಚ್ ಹಿಡಿಯುವಾಗ ಅವರ ಗಮನ ಸ್ವಲ್ಪ ಬೇರೆಡೆಗೆ ಸೆಳೆದಿತ್ತು. ಈ ಕಾರಣದಿಂದಾಗಿ ಕ್ಯಾಚ್ ಪೂರ್ಣಗೊಳಿಸುವಾಗ ಚೆಂಡು ನೆಲಕ್ಕೆ ತಗುಲಿತ್ತು ಎಂದು ಹೇಳಿದ್ದಾರೆ. ಈ ಮೂಲಕ ಕ್ಯಾಚ್ ಹಿಡಿಯುವ ವೇಳೆ ಚೆಂಡು ನೆಲಕ್ಕೆ ತಗುಲಿದೆ ಎಂಬ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮತ್ತು ವಿರಾಟ್ ಕೊಹ್ಲಿ ಅವರ ವಾದವನ್ನು ಕೈಫ್ ಬೆಂಬಲಿಸಿದ್ದಾರೆ.
ಈ ನಿರ್ಧಾರದ ವೇಳೆ ವಿರಾಟ್ ಕೊಹ್ಲಿ ಅವರು ನಾಲ್ಕನೇ ಅಂಪೈರ್ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದನ್ನು ಕೈಫ್ ಸಮರ್ಥಿಸಿಕೊಂಡಿದ್ದಾರೆ. ಅನಿಲ್ ಚೌಧರಿ ಅವರಂತೆಯೇ ಮೊಹಮ್ಮದ್ ಕೈಫ್ ಕೂಡ ರಜತ್ ಪಾಟಿದಾರ್ ಅವರಿಗೆ ನೀಡಲಾದ ಔಟ್ ತೀರ್ಪು ಸರಿಯಲ್ಲ ಎಂಬ ಧಾಟಿಯಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.
ಮೊಹಮ್ಮದ್ ಕೈಫ್ ಹೇಳಿದ್ದೇನು?
"ಜೇಸನ್ ಹೋಲ್ಡರ್ ಕ್ಯಾಚ್ ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಕಗಿಸೊ ರಬಾಡ ಕೂಡ ಅವರತ್ತಲೇ ಓಡಿ ಬರುತ್ತಿದ್ದರು. ಒಬ್ಬ ಫೀಲ್ಡರ್ ತನ್ನ ಕಣ್ಣುಗಳನ್ನು ಚೆಂಡಿನ ಮೇಲಿಟ್ಟು, ಯಾರಾದರೂ ತಮಗೆ ಬಂದು ಡಿಕ್ಕಿ ಹೊಡೆಯಬಹುದು ಎಂದು ಭಾವಿಸಿದಾಗ ಅಂತಹ ಕ್ಯಾಚ್‌ಗಳನ್ನು ಹಿಡಿಯುವುದು ಯಾವಾಗಲೂ ಕಷ್ಟಕರವಾಗಿರುತ್ತದೆ. ಇದರ ಪರಿಣಾಮವಾಗಿ ಆಟಗಾರನ ನೂರಕ್ಕೆ ನೂರರಷ್ಟು ಗಮನ ಚೆಂಡಿನ ಮೇಲೆ ಇರುವುದಿಲ್ಲ. ಇದೇ ಕಾರಣಕ್ಕೆ ಹೋಲ್ಡರ್ ಮೊದಲು ಚೆಂಡನ್ನು ಹಿಡಿದಾಗ ಅದು ನೆಲಕ್ಕೆ ತಗುಲಿತ್ತು ಎಂದು ನನಗನ್ನಿಸಿತು," ಎಂದು ಹೇಳಿದರು.
"ಜೇಸನ್ ಹೋಲ್ಡರ್ ಅವರು ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಅವರು ಸಂಪೂರ್ಣವಾಗಿ ಕೆಳಗಡೆ ಬಿದ್ದು ಮೇಲೆ ಏಳುತ್ತಾರೆ. ಆದರೆ ಅವರು ಆರಂಭದಲ್ಲಿ ಕ್ಯಾಚ್ ಪೂರ್ಣಗೊಳಿಸಿದ ಕ್ಷಣದಲ್ಲಿ ಚೆಂಡು ಖಂಡಿತವಾಗಿಯೂ ನೆಲಕ್ಕೆ ತಗುಲಿತ್ತು. ಹೀಗಾಗಿ ಬ್ಯಾಟರ್ ರಜತ್ ಪಾಟಿದಾರ್ ಔಟ್ ಆಗುವ ಸಾಧ್ಯತೆ ಇರಲಿಲ್ಲ ಎಂದು ನಾನು ಭಾವಿಸಿದ್ದೆ," ಎಂದು ಹೇಳಿದರು.
ಆರ್‌ಸಿಬಿ ಪರ ಮಿಂಚಿದ ಕನ್ನಡಿಗ ದೇವ್
ಗುಜರಾತ್ ಟೈಟಾನ್ಸ್ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ ಆರ್‌ಸಿಬಿ ತಂಡವನ್ನು 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಕಟ್ಟಿಹಾಕಿದರು. ಜಿಟಿ ಪರ ಅರ್ಷದ್ ಖಾನ್ ಮೂರು ವಿಕೆಟ್ ಪಡೆದು ಮಿಂಚಿದರೆ, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್ ಪಡೆದರು. ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ (40) ಮತ್ತು ವಿರಾಟ್ ಕೊಹ್ಲಿ (28) ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ.
156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 15.5 ಓವರ್‌ಗಳಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿತು. ನಾಯಕ ಶುಭ್‌ಮನ್ ಗಿಲ್ ಕೇವಲ 18 ಎಸೆತಗಳಲ್ಲಿ 43 ರನ್ ಸಿಡಿಸಿ ಸ್ಫೋಟಕ ಆರಂಭ ನೀಡಿದರು. ಮತ್ತೊಂದೆಡೆ ಜೋಸ್ ಬಟ್ಲರ್ 19 ಎಸೆತಗಳಲ್ಲಿ 39 ರನ್ ರನ್‌ಗಳ ಕೊಡುಗೆ ನೀಡಿದರು. ಕೊನೆಯದಾಗಿ ರಾಹುಲ್ ತೇವಾಟಿಯ ಅವರು 27 ರನ್ ಸಿಡಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಇದೆಲ್ಲದರ ನಡುವೆ ಇದೀಗ ಜೋರಾಗಿ ಚರ್ಚೆಯಾಗುತ್ತಿರುವುದು ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್.












Click it and Unblock the Notifications