Monsoon Rain 2026; ಮುಂಗಾರು ಮಳೆ ಆರಂಭಕ್ಕೆ ಅನುಕೂಲಕರ ವಾತಾವರಣ: ಕರ್ನಾಟಕಕ್ಕೆ 5 ದಿನ ಮಳೆ ಎಚ್ಚರಿಕೆ
ಬೆಂಗಳೂರು: ರಾಜ್ಯಾದ್ಯಂತ ಒಣಹವೆ, ಉಷ್ಣ ಅಲೆಯ (Heat Wave) ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಕೆಲವು ಜಿಲ್ಲೆಗಳ ಅಲ್ಲಲ್ಲಿ ಮಬ್ಬು ವಾತಾವರಣ, ತುಂತುರು ಮಳೆ ಆಗುತ್ತಿರುವುದು ಬಿಟ್ಟರೆ ಹೆಚ್ಚಿನ ಬದಲಾವಣೆಗಳಿಲ್ಲ. ವಿಶೇಷತೆ ಎಂದರೆ ಈ ವರ್ಷದ ಮುಂಗಾರು ಮಳೆ (Monsoon Rain 2026) ಆರಂಭಕ್ಕೆ ಸಮುದ್ರ ಮೆಲ್ಮೈನಲ್ಲಿ ಉತ್ತಮ ಹಾಗೂ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವಾರದ ಅಂತ್ಯದ ವೇಳೆಗೆ ದಕ್ಷಿಣ ಬಂಗಾಳಕೊಲ್ಲಿ, ಅಂಡಮಾನ್ ಸಮುದ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರಗಿರಲಿವೆ. ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇಲ್ಲಿನ ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟಕ್ಕಿಂತ 4.5 ಕಿ.ಮೀ ವರೆಗೆ ವಿಸ್ತರಿಸಿದೆ. ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ಸ್ಪಷ್ಟವಾಗಲಿದೆ.

ಕಡಿಮೆ ಒತ್ತಡದ ಪ್ರದೇಶದ ಮಧ್ಯದಿಂದ ಉತ್ತರ ತಮಿಳುನಾಡು, ರಾಯಲಸೀಮಾ, ಉತ್ತರ ಒಳನಾಡಿನ ಕರ್ನಾಟಕದಾದ್ಯಂತ ಮರಾಠವಾಡಕ್ಕೆ ಸರಾಸರಿ ಸಮುದ್ರ ಮಟ್ಟಕ್ಕಿಂತ 0.9 ಕಿ.ಮೀ ಎತ್ತರದಲ್ಲಿ ಚಲಿಸುತ್ತದೆ. ಕರ್ನಾಟಕದ ದಕ್ಷಿಣ ಒಳನಾಡಿನ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 5.8 ಕಿ.ಮೀ ಎತ್ತರದಲ್ಲಿ ವಾಯು ಚಂಡಮಾರುತದ ಪರಿಚಲನೆ ಉಂಟಾಗಿದೆ. ಇದೆಲ್ಲ ವೈಪರೀತ್ಯಗಳು ಮುಂಗಾರು ಮಳೆ ಆರಂಭಕ್ಕೆ ಪೂರಕವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆ ಮಳೆ ಎಚ್ಚರಿಕೆ
ಉಡುಪಿ ಮತ್ತು ಉತ್ತರ ಕನ್ನಡ ರಾಜ್ಯದಲ್ಲಿ ಮುಂದಿನ ಎರಡು ದಿನ ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಮೇ 16, 17ರಂದು ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ಆಗಲಿದೆ. ಉಳಿದಂತೆ ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಗರಿಷ್ಠ ತಾಪಮಾನ ಏರಿಕೆ ಆಗುತ್ತಿದೆ, ಈ ಭಾಗದ ಜನರು ಬಿಸಿಲಿನ ತಾಪಕ್ಕೆ ಬೇಯುವಂತಾಗಿದೆ. ಈ ಭಾಗದಲ್ಲಿ ಮರಗಿಡಗಳು ಕಡಿಮೆ ಹಿನ್ನೆಲೆಯಲ್ಲಿ ಬಿಸಿ ಗಾಳಿಗೆ ಜನರು ಮನೆಯಲ್ಲಿಯೂ ಇರದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ತಾಪಮಾನದಲ್ಲಿ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 5 ದಿನಗಳ ಪೈಕಿ ಮೇ 14ರವರೆಗೆ ವಾತಾವರಣ ಸಾಮಾನ್ಯವಾಗಿರಲಿದೆ. ನಂತರ ಮೂರು ದಿನ ಮೇ 17ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ವಿಜಯನಗರ, ತುಮಕೂರು ಭಾಗಗಳ ಕೆಲವೆಡೆ ಹಗುರದಿಂದ ಸಾಮಾನ್ಯ ಮಳೆ ಆಗುವ ಸಂಭವವಿದೆ.
ಬೆಂಗಳೂರು ಹವಾಮಾನ ವರದಿ
ಇಂದು ಬುಧವಾರ ನಗರದಲ್ಲಿ ಹೆಚ್ಚಿನ ತಾಪಮಾನ ಕಂಡು ಬರಲಿದೆ. ನಂತರ ಎರಡು ದಿನ ಮೇ 15 ಮತ್ತು 16 ರಂದು ಎರಡು ದಿನ ನಗರದಲ್ಲಿ ಹಗುರದಿಂದ ಸಾಮಾನ್ಯವಾಗಿ ಮಳೆ ಆಗುವ ಲಕ್ಷಣಗಳು ಇವೆ. ಈ ವೇಳೆ ನಗರದ ತಾಪಮಾನ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ನಗರದಲ್ಲೂ ಬಿಸಿ ತಾಪ ಹೆಚ್ಚಾಗಿದ್ದು, ನಾಗರಿಕರು ಪರದಾಡುವಂತಾಗಿದೆ.














Click it and Unblock the Notifications